ಒಂದೊಳ್ಳೆ ಮಾತು
ಸುಮಾರು ಎಂಟು ದಶಕಗಳ ಹಿಂದೆ ಬೆಂಗಳೂರಿನ ಮಶ್ವರಂನ ಬೀದಿಗಳಲ್ಲಿ ಒಬ್ಬ ಪುಟ್ಟ ಹುಡುಗಿ ಓಡಾಡುತ್ತಿದ್ದಳು. ಆಕೆಯ ಕಣ್ಣುಗಳಲ್ಲಿ ನಕ್ಷತ್ರಗಳಿಗಿಂತಲೂ ಮಿಗಿಲಾದ ಹೊಳಪಿತ್ತು, ಕೈಗಳಲ್ಲಿ ಯಾವಾಗಲೂ ಪುಸ್ತಕಗಳಿರುತ್ತಿದ್ದವು. ಆಕೆಯೇ ರಾಜೇಶ್ವರಿ. ಆ ಕಾಲದಲ್ಲಿ ಹೆಣ್ಣುಮಕ್ಕಳು ಅಡುಗೆಮನೆಗೆ ಸೀಮಿತವಾಗಿದ್ದಾಗ, ವಿಜ್ಞಾನದ ಪ್ರಯೋಗಾಲ ಯದಲ್ಲಿ ಹೊಸ ಇತಿಹಾಸ ಬರೆಯಲು ಹೊರಟ ಅಪರೂಪದ ಜ್ಞಾನದ ಕಣಜ ರಾಜೇಶ್ವರಿ.
ರಾಜೇಶ್ವರಿಯವರ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಮೈಸೂರು ವಿಶ್ವ ವಿದ್ಯಾಲಯ ದಲ್ಲಿ ಗಣಿತ ಮತ್ತು ಭೌತಶಾಸದಲ್ಲಿ ಚಿನ್ನದ ಪದಕ ಪಡೆದರೂ, ಸಂಶೋಧನೆಯ ಹಾದಿಯಲ್ಲಿ ಅವರಿಗೆ ಅನೇಕ ಅಡೆತಡೆಗಳು ಎದುರಾದವು.
ಸಿ.ವಿ. ರಾಮನ್ ಅವರಂಥ ಮಹಾನ್ ವಿಜ್ಞಾನಿಗಳಿದ್ದ ಕಾಲದಲ್ಲಿ, ಒಬ್ಬ ಮಹಿಳೆಯಾಗಿ ವಿಜ್ಞಾನ ಕ್ಷೇತ್ರದಲ್ಲಿ ತನ್ನನ್ನು ತಾನು ಸಾಬೀತುಪಡಿಸುವುದು ಅಗ್ನಿಪರೀಕ್ಷೆಯೇ ಆಗಿತ್ತು. ಆದರೆ, ಅವರ ಛಲ ಬೆಟ್ಟದಂತಿತ್ತು. 1946ಲ್ಲಿ, ಅಂದಿನ ಬ್ರಿಟಿಷ್ ಸರಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಓದಲು ವಿದ್ಯಾರ್ಥಿವೇತನ ನೀಡುತ್ತಿತ್ತು.
ಇದನ್ನೂ ಓದಿ: Roopa Gururaj Column: ಟಾಟಾ ಸಾಮ್ರಾಜ್ಯದ ನೈತಿಕ ಅಡಿಪಾಯ ಸೂನಿ ಟಾಟಾ
ಇಂಥ ಒಂದು ಅಪರೂಪದ ಅವಕಾಶಕ್ಕೆ ರಾಜೇಶ್ವರಿ ಆಯ್ಕೆಯಾದರು. ಅಂದು ಸಮುದ್ರ ದಾಚೆಯ ಪ್ರಯಾಣ ಅಂದರೆ ಅದೂ ಹೆಣ್ಣು ಮಕ್ಕಳಿಗೆ ಅತಿ ದೊಡ್ಡ ಸಾಹಸ. ಅಂಥ ಸಮಯದಲ್ಲಿ ರಾಜೇಶ್ವರಿ ಕುಟುಂಬವನ್ನು ಬಿಟ್ಟು, ಅಪ್ಪಟ ದೇಶಪ್ರೇಮದೊಂದಿಗೆ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯಕ್ಕೆ ಹೋದರು. ಅಲ್ಲಿ ಮೈಕ್ರೋವೇವ್ ಎಂಜಿನಿಯ ರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದ ಕರ್ನಾಟಕದ ಮೊದಲ ಮಹಿಳಾ ಎಂಜಿನಿಯರ್ ಎಂಬ ಕೀರ್ತಿಗೆ ಪಾತ್ರರಾದರು.
ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮೊದಲ ಪ್ರಾಧ್ಯಾಪಕಿಯಾಗಿ ನೇಮಕಗೊಂಡರು. ತಮ್ಮ ಪತಿ ಶಿಶಿರ್ ಕುಮಾರ್ ಚಟರ್ಜಿ ಅವರೊಂದಿಗೆ ಸೇರಿ ಐಐಎಸ್‌ಸಿ.ಯಲ್ಲಿ ‘ಮೈಕ್ರೋವೇವ್ ಎಂಜಿನಿಯರಿಂಗ್ ಪ್ರಯೋಗಾ ಲಯ’ ಸ್ಥಾಪಿಸಿದರು.
ಆಗಿನ್ನೂ ಶೈಶವಾವಸ್ಥೆಯಲ್ಲಿದ್ದ ‘ಮೈಕ್ರೋವೇವ್ ಸಂವಹನಕ್ಕಾಗಿ ಆಂಟೆನಾಗಳು’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿದರು. ಅಷ್ಟೇ ಅಲ್ಲ ಹಲವಾರು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ಜತೆಗೆ ಮೈಕ್ರೋವೇವ್ ಎಂಜಿನಿಯರಿಂಗ್ ಹಾಗೂ ಆಂಟೆನಾಗಳ ಬಗ್ಗೆ ಏಳು ಪಠ್ಯಪುಸ್ತಕಗಳನ್ನೂ ಬರೆದರು.
ಇವರಿಗೆ ಬ್ರಿಟನ್‌ನ ಇನ್ಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಆಂಡ್ ರೇಡಿಯೋ ಎಂಜಿನಿ ಯರ‍್ಸ್ನಿಂದ ಪ್ರತಿಷ್ಠಿತ ‘ಮೌಂಟ್ ಬ್ಯಾಟನ್ ಪ್ರಶಸ್ತಿ’ ಮತ್ತು ‘ಜೆ.ಸಿ. ಬೋಸ್ ಸ್ಮರಣಾರ್ಥ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳು ಅರಸಿ ಬಂದವು. 1982ರಲ್ಲಿ ಐಐಎಸ್‌ಸಿ ಇಂದ ನಿವೃತ್ತರಾದ ನಂತರವೂ ಇವರು ವಿಶ್ರಮಿಸಲಿಲ್ಲ.
‘ಇಂಡಿಯನ್ ಅಸೋಸಿಯೇಷನ್ ಫಾರ್ ವುಮೆನ್ಸ್ ಸ್ಟಡೀಸ್’ ಸಂಘಟನೆಯಲ್ಲಿ ಸಕ್ರಿಯ ರಾಗಿ ತೊಡಗಿಸಿಕೊಂಡು, ಸಾಮಾಜಿಕ ನ್ಯಾಯ ಮತ್ತು ಮಹಿಳೆಯರಿಗಾಗಿ ವಿಜ್ಞಾನ ಶಿಕ್ಷಣ ವನ್ನು ಉತ್ತೇಜಿಸುವ ಕೆಲಸ ಮಾಡಿದರು. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿರು ವುದು ಬಹಳ ಮುಖ್ಯ. ಸ್ವತಂತ್ರರಾಗದಿದ್ದರೆ ಅವರಿಗೆ ಯಾವುದರಲ್ಲೂ ಧ್ವನಿ ಇರುವುದಿಲ್ಲ ಎಂದು ಪ್ರತಿಪಾದಿಸಿದವರು ರಾಜೇಶ್ವರಿ ಚಟರ್ಜಿ.
“ನಾನು ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಲಿಲ್ಲ, ಬದಲಾಗಿ ಕೈಯಲ್ಲಿ ಪುಸ್ತಕ ಹಿಡಿದು ಹುಟ್ಟಿದೆ" ಎನ್ನುತ್ತಿದ್ದ ರಾಜೇಶ್ವರಿ ಚಟರ್ಜಿ ಅವರ ಮಾತು ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ದಾರಿದೀಪ. ಸಾಧನೆಯ ಹಾದಿಯಲ್ಲಿ ಲಿಂಗಭೇದವಿಲ್ಲ, ಕೇವಲ ಪರಿಶ್ರಮ ಮತ್ತು ಕನಸುಗಳಿದ್ದರೆ ಸಾಕು ಎಂದು ಅವರು ಜಗತ್ತಿಗೇ ತೋರಿಸಿಕೊಟ್ಟರು. ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ, ಕೇವಲ ಬೌದ್ಧಿಕ ಶಕ್ತಿಯಿಂದ ಜಗತ್ತನ್ನೇ ಬೆರಗುಗೊಳಿಸಿದ ಇವರ ಜೀವನ ಮಹಿಳಾವಾದದ ಬಗ್ಗೆ ಬೇಡದ ವಿಚಾರಗಳನ್ನು ಪ್ರತಿಪಾದಿಸುವ ಅನೇಕ ಹೆಣ್ಣು ಮಕ್ಕಳಿಗೆ ಪಾಠವಾಗಬೇಕು.
ಇಂದು ನಾವು ಚಿಕ್ಕ ಚಿಕ್ಕ ಸವಾಲುಗಳಿಗೆ ಹೆದರಿ, ಕನಸುಗಳನ್ನು ಸಾಕಾರಗೊಳಿಸಲು ಪರಿಶ್ರಮ ಪಡದೆ, ನಂತರ ದೋಷಾರೋಪಣೆಯಲ್ಲಿ ತೊಡಗುತ್ತೇವೆ. ಎಲ್ಲಿಯವರೆಗೆ ಆತ್ಮಸ್ಥೈರ್ಯದಿಂದ ದಿಟ್ಟ ಹೆಜ್ಜೆ ಇಟ್ಟು ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ನಾವು ಅವಿರತ ಶ್ರಮಿಸುವುದಿಲ್ಲವೋ ಅಲ್ಲಿಯವರೆಗೆ ನಮಗೆ ಬರೀ ನೆಪಗಳು ಮಾತ್ರ ಸಿಗುತ್ತವೆ.
ನಿಜವಾದ ಸಾಧನೆಗೆ ಅಡ್ಡಿಯಾಗುವುದು ನಮ್ಮ ಹಿಂಜರಿಕೆ, ನಮ್ಮ ಮನಸ್ಸು. ಇದನ್ನು ಗೆದ್ದು ಆತ್ಮಸ್ಥೈರ್ಯದಿಂದ ಮುಂದೆ ಹೆಜ್ಜೆ ಇಟ್ಟಾಗ ನಾವು ಸಾಧಿಸಲಾಗದೆ ಇರುವುದು ಪ್ರಪಂಚದಲ್ಲಿ ಯಾವುದೂ ಇಲ್ಲ. ಇದಕ್ಕೆ ಸಾಕ್ಷಿ ರಾಜೇಶ್ವರಿ ಚಟರ್ಜಿ ಅಂಥವರ ಜೀವನ.