ಒಂದೊಳ್ಳೆ ಮಾತು
ಹನುಮಂತನು ಲಂಕೆಗೆ ಹಾರಿ ಹೋಗಿ ತಂದ ಸೀತೆಯ ಸಂದೇಶ ಮತ್ತು ಅವಳ ವಿರಹ ವೇದನೆಯ ಮಾತುಗಳು ಶ್ರೀರಾಮನ ಹೃದಯವನ್ನು ದ್ರವಿಸುವಂತೆ ಮಾಡಿದವು. ರಾಮನು ತಡಮಾಡದೆ ವಾನರ ಸೈನ್ಯದೊಂದಿಗೆ ದಕ್ಷಿಣದ ಸಮುದ್ರ ತೀರಕ್ಕೆ ಬಂದು ತಲುಪಿದನು.
ವಿಶಾಲವಾಗಿ ಹರಡಿದ್ದ ಆ ಸಮುದ್ರವು ಲಂಕೆಗೆ ಹೋಗುವ ಹಾದಿಯಲ್ಲಿ ಅಡ್ಡವಾಗಿತ್ತು. ಮೂರು ದಿನಗಳ ಕಾಲ ಶ್ರೀರಾಮನು ಸಮುದ್ರ ರಾಜನಿಗೆ ದಾರಿ ಮಾಡಿಕೊಡುವಂತೆ ಪ್ರಾರ್ಥಿಸಿದನು, ಉಪವಾಸವಿದ್ದು ವಿನಂತಿಸಿದನು. ಆದರೆ ಅಹಂಕಾರದ ಮದದಲ್ಲಿದ್ದ ಸಮುದ್ರ ರಾಜನು ರಾಮನ ಪ್ರಾರ್ಥನೆಗೆ ಓಗೊಡಲಿಲ್ಲ.
ಸಜ್ಜನರು ಮೊದಲು ಪ್ರೀತಿ ಮತ್ತು ವಿನಯದಿಂದ ಕಾರ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಆದರೆ ಅಧರ್ಮ ಮತ್ತು ಅಹಂಕಾರವು ವಿನಯಕ್ಕೆ ಬೆಲೆ ನೀಡದಿದ್ದಾಗ, ಅಲ್ಲಿ ‘ಶಕ್ತಿ’ಯ ಪ್ರದರ್ಶನ ಅನಿವಾರ್ಯವಾಗುತ್ತದೆ. ರಾಮನು ಕ್ರುದ್ಧನಾದನು.
“ಲಕ್ಷ್ಮಣ, ಬಿಲ್ಲು ತಾ. ವಿನಯವನ್ನು ಅರಿಯದ ಈ ಸಮುದ್ರವನ್ನು ನನ್ನ ಅಗ್ನಿಬಾಣದಿಂದ ಇಂಗಿಸಿಬಿಡುತ್ತೇನೆ. ಪ್ರೀತಿ ಇಲ್ಲದ ಜಾಗದಲ್ಲಿ ಭಯವಿದ್ದರಷ್ಟೇ ಗೌರವ ಸಿಗುತ್ತದೆ" ಎಂದ ಶ್ರೀರಾಮ. ರಾಮನು ಬಾಣ ಹೂಡುತ್ತಿದ್ದಂತೆಯೇ ಸಮುದ್ರದ ಅಲೆಗಳು ಭೀತಿಯಿಂದ ನಡುಗಿದವು, ಜಲಚರಗಳು ತಲ್ಲಣಿಸಿದವು. ಆಗ ಸಮುದ್ರರಾಜನು ರತ್ನಖಚಿತವಾದ ತಟ್ಟೆಯಲ್ಲಿ ಉಡುಗೊರೆಗಳನ್ನು ಹಿಡಿದು ಓಡಿಬಂದು ರಾಮನ ಪಾದಗಳಿಗೆ ಶರಣಾದನು.
ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಅಮಲ ಭಕ್ತಿಯ ಅನುಗ್ರಹ
ಆ ಕ್ಷಣದ ಗಾಂಭೀರ್ಯ ಮತ್ತು ಶರಣಾಗತಿಯ ಮಹತ್ವವನ್ನು ತುಳಸೀದಾಸರು ಈ ಅದ್ಭುತ ಚೌಪದಿಯಲ್ಲಿ ದಾಖಲಿಸಿದ್ದಾರೆ:
ಸಕಲ ಸುಮಂಗಲ ದಾಯಕ ರಘುನಾಯಕ |
ಗುನ ಗಾನ ಕರತ ನರ ತರಹಿಂ ಭವ ಸಾಯಕ ||
ಭಾವಾರ್ಥ: ಸಮಸ್ತ ಶುಭಗಳನ್ನು ನೀಡುವವನಾದ ಆ ರಘುನಾಯಕನ (ರಾಮನ) ಗುಣ ಗಾನವನ್ನು ಮಾಡುವ ಮನುಷ್ಯರು ಈ ಭವಸಾಗರವನ್ನೇ ಅತ್ಯಂತ ಸುಲಭವಾಗಿ ದಾಟಬಲ್ಲರು. ಅಂದರೆ, ಕೇವಲ ಸಮುದ್ರವನ್ನಷ್ಟೇ ಅಲ್ಲ, ಜೀವನದ ಸಂಕಷ್ಟಗಳೆಂಬ ಸಾಗರವನ್ನೂ ರಾಮನಾಮದ ಬಲದಿಂದ ದಾಟಬಹುದು.
ಸಮುದ್ರರಾಜನು ಕೈಮುಗಿದು ಬೇಡಿದನು, “ಪ್ರಭು, ನನ್ನನ್ನು ಕ್ಷಮಿಸು. ಜಡತ್ವವೇ ನನ್ನ ಸ್ವಭಾವವಾಗಿತ್ತು. ನಿನ್ನ ಸೈನ್ಯದಲ್ಲಿ ನಲ ಮತ್ತು ನೀಲ ಎಂಬ ಶಿಲ್ಪಿಗಳಿದ್ದಾರೆ. ಅವರ ಕೈಯಿಂದ ಸ್ಪರ್ಶಿಸಲ್ಪಟ್ಟ ಕಲ್ಲುಗಳು ನೀರಿನಲ್ಲಿ ತೇಲುತ್ತವೆ. ಅದರ ಮೂಲಕ ಸೇತುವೆ ಕಟ್ಟಿ ನೀನು ಲಂಕೆಯನ್ನು ಪ್ರವೇಶಿಸು" ಎಂದು ದಾರಿ ತೋರಿದನು. ರಾಮನು ಕರುಣಾ ಮಯಿ.
ತನ್ನನ್ನು ಎಷ್ಟೇ ವಿರೋಧಿಸಿದರೂ ಶರಣು ಬಂದವರನ್ನು ಕ್ಷಮಿಸುವುದು ಅವನ ಗುಣ. ಸಮುದ್ರದ ಅಹಂಕಾರ ಕರಗಿ ಅದು ರಾಮನ ಸೇವೆಗೆ ಸಿದ್ಧವಾಯಿತು. ಅಂತರಂಗದ ಸಾಗರದಲ್ಲಿ ಅಹಂಕಾರವೆಂಬ ಅಲೆಗಳು ಎದ್ದಾಗ ಅವುಗಳನ್ನು ಭಕ್ತಿಯೆಂಬ ಅಗ್ನಿಯಿಂದ ಸುಡಬೇಕು. ಆಗ ಮಾತ್ರ ಪರಮಾತ್ಮನ ಕಡೆಗೆ ಸಾಗುವ ದಾರಿ ಸುಲಭವಾಗುತ್ತದೆ.
ಹನುಮಂತನು ಹಾರಿದ ಆ ಸಮುದ್ರದ ಮೇಲೆ ಈಗ ಸೇತುವೆ ನಿರ್ಮಾಣವಾಗುವ ಸಮಯ ಬಂದಿತ್ತು. ಇಡೀ ವಾನರ ಸೈನ್ಯವು ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗುತ್ತಾ ಕಲ್ಲುಗಳ ಮೇಲೆ ರಾಮನಾಮವನ್ನು ಕೆತ್ತಲು ಶುರುಮಾಡಿದವು. ಕಲ್ಲುಗಳು ಸಹ ರಾಮನಾಮದ ತೂಕಕ್ಕೆ ನೀರಿನಲ್ಲಿ ತೇಲಿದವು!
ಇದು ಕೇವಲ ರಾಮಾಯಣದ ಕಥೆಯಲ್ಲ, ನಮ್ಮ ಮನಸ್ಸಿನೊಳಗಿನ ಅಸ್ಥಿರತೆಯನ್ನು ರಾಮನಾಮದ ಭದ್ರತೆಯಿಂದ ಹೇಗೆ ಹತೋಟಿಗೆ ತರಬಹುದು ಎಂಬುದರ ಸಾಕ್ಷಿ. ಕೆಲವೊಮ್ಮೆ ಬದುಕು ನಮಗೆ ಒಡ್ಡುವ ಸವಾಲುಗಳು ಅದೆಷ್ಟು ಅಗಾಧವಾಗಿ ಕಣ್ಣೆದುರು ಕಾಣುತ್ತವೆ ಎಂದರೆ, ಸಮುದ್ರವನ್ನು ಈಜಿ ದಾಟುವಷ್ಟು.
ಇನ್ನು ನಮಗೆ ಅಲ್ಲಿಂದ ಮುಕ್ತಿಯೇ ಇಲ್ಲ ಎಂದು ಕೈ ಚೆಲ್ಲಿಬಿಡುವ ಯೋಚನೆ ಮಾಡು ತ್ತೇವೆ. ಆದರೆ ಭಗವಂತನ ಅನುಗ್ರಹವಿದ್ದರೆ ಅಷ್ಟು ದೊಡ್ಡದಾಗಿ ಬಂದ ಕಷ್ಟ ಕೂಡ, ರಾಮನಾಮದ ಬಲದಿಂದ ತೇಲುವ ಬಂಡೆಗಳಂತೆ ನಮ್ಮನ್ನು ಕಷ್ಟದಿಂದ ತೇಲಿಸಿ ಪಾರು ಮಾಡಿಬಿಡುತ್ತದೆ. ಇದನ್ನೇ ನಾವು ಜೀವನದಲ್ಲಿ ‘ಪವಾಡಗಳು’ ಎನ್ನುವುದು.
ಇದು ಮನುಷ್ಯ ಮಾತ್ರರಿಂದ ಸಾಧ್ಯವಾಗದು. ಭಕ್ತಿ-ಸಮರ್ಪಣೆ ಎರಡೂ ಇದ್ದಾಗ ಇಂಥ ಪವಾಡಗಳು ಎಂಥವರ ಬದುಕಿನಲ್ಲೂ ನಡೆದುಬಿಡುತ್ತವೆ.