ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ರಾಮಚರಿತ ಮಾನಸ: ಹನುಮಂತ- ವಿಭೀಷಣರ ಹೃದಯಸ್ಪರ್ಶಿ ಭೇಟಿ

ಬ್ರಾಹ್ಮಿ ಮುಹೂರ್ತದ ಆ ಸಮಯದಲ್ಲಿ, ವಿಭೀಷಣನು ಎಚ್ಚರಗೊಂಡು ಭಕ್ತಿ ಪರವಶನಾಗಿ ‘ರಾಮ.. ರಾಮ’ ಎಂದು ನಾಮಸ್ಮರಣೆ ಮಾಡುತ್ತಿದ್ದನು. ಆ ಧ್ವನಿಯಲ್ಲಿ ಆರ್ತತೆ ಇತ್ತು, ರಾಮನ ಮೇಲಿನ ಅಚಲವಾದ ಶ್ರದ್ಧೆಯಿತ್ತು. ಇದನ್ನು ಕೇಳಿದ ಹನುಮಂತನ ಹೃದಯ ಹಗುರವಾಯಿತು. ಒಬ್ಬ ಭಕ್ತನಿಗೆ ಇನ್ನೊಬ್ಬ ಭಕ್ತನ ಭೇಟಿಯಾದಾಗ ಸಿಗುವ ಆನಂದಕ್ಕೆ ಬೆಲೆ ಕಟ್ಟಲಾಗದು.

ಒಂದೊಳ್ಳೆ ಮಾತು

ಲಂಕೆಯ ಭವ್ಯತೆ ಮತ್ತು ಅಲ್ಲಿನ ರಾಕ್ಷಸೀ ಅಟ್ಟಹಾಸವನ್ನು ನೋಡುತ್ತಾ ಸಾಗುತ್ತಿದ್ದ ಹನುಮಂತ ನಿಗೆ ಅಚ್ಚರಿಯೊಂದು ಕಾದಿತ್ತು. ರಕ್ತಪಿಪಾಸುಗಳ ನಾಡಿನಲ್ಲಿ, ಹಠಾತ್ತನೆ ಸಾತ್ವಿಕ ಪರಿಮಳವೊಂದು ಹನುಮಂತನನ್ನು ಸೆಳೆಯಿತು. ಅಲ್ಲಿ ಒಂದು ಸುಂದರವಾದ ಭವನವಿತ್ತು. ಆ ಭವನದ ಗೋಡೆಗಳ ಮೇಲೆ ಭಗವಾನ್ ಶ್ರೀರಾಮನ ಆಯುಧಗಳಾದ ಧನುಸ್ಸು ಮತ್ತು ಬಾಣಗಳ ಚಿತ್ರಗಳನ್ನು ಬಿಡಿಸ ಲಾಗಿತ್ತು.

ಮನೆಯ ಅಂಗಳದಲ್ಲಿ ಹಚ್ಚಹಸಿರಾದ ತುಳಸಿ ವನವಿದ್ದು, ಅದು ಪರಮಾತ್ಮನ ಸಾನ್ನಿಧ್ಯವನ್ನು ಸಾರುತ್ತಿತ್ತು. ಹನುಮಂತನು ಕ್ಷಣಕಾಲ ಸ್ತಬ್ಧನಾದನು. ರಾವಣನ ಈ ಪಾಪದ ನಗರಿಯೊಳಗೆ ಒಬ್ಬ ವಿಷ್ಣುಭಕ್ತ ಎಲ್ಲಿಂದ ಬಂದ? ರಾಕ್ಷಸರ ಸೀಮೆಯಲ್ಲಿ ಸಜ್ಜನರ ವಾಸವೇ? ಎಂದು ಆತ ಕೌತುಕದಿಂದ ಯೋಚಿಸುತ್ತಿದ್ದಾಗ, ಆ ಮನೆಯೊಳಗಿಂದ ಮಧುರವಾದ ಧ್ವನಿಯೊಂದು ಕೇಳಿಸಿತು.

ಬ್ರಾಹ್ಮಿ ಮುಹೂರ್ತದ ಆ ಸಮಯದಲ್ಲಿ, ವಿಭೀಷಣನು ಎಚ್ಚರಗೊಂಡು ಭಕ್ತಿ ಪರವಶನಾಗಿ ‘ರಾಮ.. ರಾಮ’ ಎಂದು ನಾಮಸ್ಮರಣೆ ಮಾಡುತ್ತಿದ್ದನು. ಆ ಧ್ವನಿಯಲ್ಲಿ ಆರ್ತತೆ ಇತ್ತು, ರಾಮನ ಮೇಲಿನ ಅಚಲವಾದ ಶ್ರದ್ಧೆಯಿತ್ತು. ಇದನ್ನು ಕೇಳಿದ ಹನುಮಂತನ ಹೃದಯ ಹಗುರವಾಯಿತು. ಒಬ್ಬ ಭಕ್ತನಿಗೆ ಇನ್ನೊಬ್ಬ ಭಕ್ತನ ಭೇಟಿಯಾದಾಗ ಸಿಗುವ ಆನಂದಕ್ಕೆ ಬೆಲೆ ಕಟ್ಟಲಾಗದು.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಹನುಮಂತ - ಲಂಕಿಣಿಯ ಪ್ರಸಂಗ

ಹನುಮಂತನು ತಕ್ಷಣವೇ ಒಬ್ಬ ಶಾಂತ ಸ್ವಭಾವದ ಬ್ರಾಹ್ಮಣನ ವೇಷ ಧರಿಸಿ ವಿಭೀಷಣನ ಮುಂದೆ ಕಾಣಿಸಿಕೊಂಡನು. ವಿಭೀಷಣನು ತನ್ನ ಮನೆಯ ಮುಂದೆ ಒಬ್ಬ ತೇಜಸ್ವಿ ಬ್ರಾಹ್ಮಣನನ್ನು ಕಂಡು ಆಶ್ಚರ್ಯಚಕಿತನಾದನು. ಅವನ ಮುಖದ್ದೇ ಪ್ರಭೆ ಮತ್ತು ಕಣ್ಣುಗಳಲ್ಲಿನ ದೈವಿಕತೆ ವಿಭೀಷಣನಿಗೆ, ‘ಎದುರಿಗಿರುವವರು ಸಾಮಾನ್ಯರಲ್ಲ’ ಎಂದು ಮನದಟ್ಟು ಮಾಡಿತು.

ವಿನಯದಿಂದ ನಮಸ್ಕರಿಸಿದ ವಿಭೀಷಣನು, “ಸ್ವಾಮಿ, ನೀವು ಯಾರು? ಈ ರಾಕ್ಷಸರ ನಾಡಿನಲ್ಲಿ ನಿಮ್ಮಂಥ ಮಹಾಪುರುಷರ ದರ್ಶನ ನನಗೆ ದೊರೆಯಿತು ಎಂದರೆ ನಾನೇ ಧನ್ಯ. ನೀವು ಸಾಕ್ಷಾತ್ ಭಗವಂತನ ರೂಪವೇ ಅಥವಾ ಹರಿಯ ಪರಮ ಭಕ್ತರೇ?" ಎಂದು ಕಣ್ಣಾಲಿಗಳನ್ನು ತೇವವಾಗಿಸಿ ಕೊಂಡು ಕೇಳಿದನು.

ಆಗ ಹನುಮಂತನು ತನ್ನ ಕಪಟ ವೇಷವನ್ನು ಕಳಚಿ, ನಿಜವಾದ ವಾನರ ರೂಪವನ್ನು ಪ್ರಕಟಿಸಿ, “ಹೇ ವಿಭೀಷಣನೇ, ನಾನು ಭಕ್ತವತ್ಸಲನಾದ ಶ್ರೀರಾಮಚಂದ್ರನ ದೂತ, ವಾಯುಪುತ್ರ ಹನುಮಂತ" ಎಂದು ಪರಿಚಯಿಸಿಕೊಂಡನು. ವಿಭೀಷಣನ ಜೀವನದ ಸುದೀರ್ಘ ಕಾಯುವಿಕೆಗೆ ಇಂದು ಅರ್ಥ ಸಿಕ್ಕಿತ್ತು. ಆ ಭಾವನಾತ್ಮಕ ಕ್ಷಣದಲ್ಲಿ ವಿಭೀಷಣನು ಈ ಚೌಪದಿಯನ್ನು ಹೇಳುತ್ತಾನೆ:

ಅಬ ಮೋಹಿ ಭಾ ಭರೋಸ ಹನುಮಂತಾ |

ಬಿನು ಹರಿ ಕೃಪಾ ಮಿಲಹಿಂ ನಹೀಂ ಸಂತಾ ||

ಭಾವಾರ್ಥ: ಹೇ ಹನುಮಂತನೇ, ಈಗ ನನಗೆ ಪೂರ್ಣ ಭರವಸೆ ಬಂದಿದೆ. ಭಗವಂತನ ಅಪಾರವಾದ ಕೃಪೆಯಿಲ್ಲದೆ ನಿನ್ನಂಥ ಸಜ್ಜನರ ಮತ್ತು ಸಂತಪುರುಷರ ಭೇಟಿ ಸಾಧ್ಯವೇ ಇಲ್ಲ. ನಿನ್ನ ಆಗಮನ ದಿಂದ ನನ್ನ ಮನೆಯಷ್ಟೇ ಅಲ್ಲ, ನನ್ನ ಅಂತರಂಗವೂ ಪಾವನವಾಯಿತು. ತನ್ನ ಕಷ್ಟಗಳನ್ನು ತೋಡಿಕೊಳ್ಳುತ್ತಾ ವಿಭೀಷಣನು ಹೇಳುತ್ತಾನೆ, “ಹನುಮಂತಾ, ಕ್ರೂರವಾದ ಹಲ್ಲುಗಳ ಮಧ್ಯೆ ಮೃದುವಾದ ನಾಲಿಗೆಯೊಂದು ಹೇಗೆ ಅತಂತ್ರವಾಗಿ ಇರುತ್ತದೆಯೋ, ಹಾಗೆಯೇ ನಾನು ಈ ಅಧರ್ಮಿ ರಾಕ್ಷಸರ ನಡುವೆ ಜೀವಿಸುತ್ತಿದ್ದೇನೆ.

ಪ್ರತಿ ಕ್ಷಣವೂ ನನ್ನ ಧರ್ಮವನ್ನು ಕಾಪಾಡಿ ಕೊಳ್ಳುವುದು ನನಗೆ ಹೋರಾಟವಾಗಿತ್ತು. ನನಗೆ ಎಂದಾದರೂ ಆ ರಾಮಪ್ರಭುವಿನ ಕೃಪೆ ಸಿಗಬಹುದೇ ಎಂದು ಹಲುಬುತ್ತಿದ್ದೆ. ಆದರೆ ಇಂದು ನಿನ್ನನ್ನು ನೋಡಿದ ಮೇಲೆ ನನಗೆ ಸಮಾಧಾನವಾಯಿತು. ದೇವರು ತನ್ನ ಭಕ್ತರನ್ನು ಕೈಬಿಡುವು ದಿಲ್ಲ ಎಂಬುದಕ್ಕೆ ನೀನೇ ಸಾಕ್ಷಿ".

ಹನುಮಂತನು ಅವನನ್ನು ಆಲಿಂಗಿಸಿಕೊಂಡು ಸಾಂತ್ವನ ಹೇಳುತ್ತಾನೆ- “ವಿಭೀಷಣನೇ, ದೈವದ ಹಾದಿಯಲ್ಲಿ ನಡೆಯುವವನಿಗೆ ಜಗತ್ತೇ ವಿರೋಧಿಯಾದರೂ ಭಗವಂತ ಅವನ ಜತೆಗಿರುತ್ತಾನೆ. ನೀನು ದುಷ್ಟರ ನಡುವೆ ಇದ್ದರೂ ನಿನ್ನ ಅಂತರಂಗದಲ್ಲಿ ರಾಮನನ್ನು ಪ್ರತಿಷ್ಠಾಪಿಸಿದ್ದೀಯಲ್ಲ, ಅದೇ ನಿನಗೆ ಶ್ರೀರಕ್ಷೆ" ಎಂದು ಧೈರ್ಯ ತುಂಬುತ್ತಾನೆ.

ಒಳ್ಳೆಯವರ ಸ್ನೇಹಕ್ಕೆ ಇರುವ ಶಕ್ತಿಯೇ ಅಂಥದ್ದು. ಅದು ನಮ್ಮ ಹತಾಶೆಯನ್ನು ದೂರ ಮಾಡಿ, ಬದುಕಿನ ಮೇಲೆ ಹೊಸ ಭರವಸೆಯನ್ನು ಮೂಡಿಸುತ್ತದೆ. ನಮ್ಮ ಭಕ್ತಿ, ನಂಬಿಕೆ, ವಿಚಾರಗಳು ಪ್ರಾಮಾಣಿಕವಾಗಿದ್ದರೆ ಇಡೀ ಪ್ರಪಂಚವೇ ಎದುರಾದರೂ ನಮ್ಮನ್ನು ಭಗವಂತ ಕಾಪಾಡುತ್ತಾನೆ. ಇಂಥ ಸಮರ್ಪಣಾ ಭಾವ ನಮ್ಮಲ್ಲಿರಬೇಕು

ರೂಪಾ ಗುರುರಾಜ್

View all posts by this author