ಒಂದೊಳ್ಳೆ ಮಾತು
ಶಿವ-ಪಾರ್ವತಿಯರ ಸಂವಾದ ಮುಂದುವರಿದಿತ್ತು. ಶಿವನ ಮಾತುಗಳು ಕೇವಲ ಉಪದೇಶ ವಾಗಿರಲಿಲ್ಲ, ಅವು ಜೀವನದ ಪರಮ ಸತ್ಯಗಳಾಗಿದ್ದವು. ಇದನ್ನು ವಿವರಿಸಲು ಶಿವನು ಮತ್ತೊಂದು ಸುಂದರ ಪ್ರಸಂಗವನ್ನು ನೆನಪಿಸಿಕೊಂಡನು. “ಪಾರ್ವತಿ, ಜ್ಞಾನ ಮತ್ತು ಶಕ್ತಿಯ ಅಹಂಕಾರವು ಹೇಗೆ ಅರಿವಿಲ್ಲದೆಯೇ ನಮ್ಮನ್ನು ಆವರಿಸುತ್ತದೆ ಮತ್ತು ಭಗವಂತ ಅದನ್ನು ಹೇಗೆ ನಿವಾರಿಸುತ್ತಾನೆ ಎಂಬುದಕ್ಕೆ ಹನುಮಂತ ಮತ್ತು ಭರತರ ಭೇಟಿಯೇ ಸಾಕ್ಷಿ.
ಲಂಕೆಯ ಯುದ್ಧದ ಸಮಯದಲ್ಲಿ ಲಕ್ಷ್ಮಣನು ಮೂರ್ಛೆ ಹೋದಾಗ, ಹನುಮಂತನು ಸಂಜೀವಿನಿ ಪರ್ವತವನ್ನೇ ಹೊತ್ತು ಅಯೋಧ್ಯೆಯ ಆಕಾಶಮಾರ್ಗವಾಗಿ ಹಾರುತ್ತಿದ್ದನು. ಅಯೋಧ್ಯೆಯಲ್ಲಿ ರಾಮನ ಅಗಲಿಕೆಯ ನೋವಿನಲ್ಲಿ ತಪಸ್ವಿಯಂತೆ ಬಾಳುತ್ತಿದ್ದ ಭರತನು, ಆಕಾಶದಲ್ಲಿ ಬೆಟ್ಟವನ್ನು ಹೊತ್ತು ಹೋಗುತ್ತಿದ್ದ ಬೃಹತ್ ಆಕಾರವನ್ನು ಕಂಡು, ಅದು ಯಾವುದೋ ರಾಕ್ಷಸನಿರಬಹುದೆಂದು ಭಾವಿಸಿ ದಶರಥನ ಹೆಸರಿನಲ್ಲಿ ಒಂದು ಬಾಣ ವನ್ನು ಬಿಟ್ಟನು. ಆ ಬಾಣ ತಗುಲಿದ ತಕ್ಷಣ ಹನುಮಂತನು ‘ರಾಮ... ರಾಮ...’ ಎನ್ನುತ್ತಾ ಕೆಳಗೆ ಬಿದ್ದನು.
ಇದನ್ನೂ ಓದಿ: Roopa Gururaj Column: ಶರಣಾಗತಿಯ ಶಕ್ತಿಯ ಕುರಿತು ವಿವರಿಸುವ ರಾಮಚರಿತ ಮಾನಸ
ರಾಮನಾಮ ಕೇಳಿದ ತಕ್ಷಣ ಭರತನು ಓಡಿಬಂದು ಹನುಮಂತನನ್ನು ಎತ್ತಿಕೊಂಡನು. ಹನುಮಂತನಿಗೆ ತನ್ನ ಶಕ್ತಿಯ ಬಗ್ಗೆ ತುಸು ಹೆಮ್ಮೆಯಿತ್ತು; ನಾನು ರಾಮನ ಪರಮ ಭಕ್ತ, ಬೆಟ್ಟವನ್ನೇ ಹೊತ್ತವನು ಎಂಬ ಸುಪ್ತ ಅಹಂಕಾರವಿತ್ತು. ಆದರೆ ಭರತನ ಭಕ್ತಿಯ ಮುಂದೆ ಆ ಶಕ್ತಿ ಶೂನ್ಯವಾಯಿತು.
ಭರತನು ದುಃಖಿತನಾಗಿ ಹೇಳಿದನು, ‘ಹೇ ವೀರನೇ, ನನ್ನಿಂದ ನಿನಗೆ ತೊಂದರೆಯಾಯಿತು. ನೀನು ಬೇಗ ಲಂಕೆಗೆ ತಲುಪಬೇಕಿದ್ದರೆ ನನ್ನ ಈ ಬಾಣದ ಮೇಲೆ ಕುಳಿತುಕೋ, ಇದು ನಿನ್ನನ್ನು ಕ್ಷಣಮಾತ್ರದಲ್ಲಿ ರಾಮನ ಬಳಿ ತಲುಪಿಸುತ್ತದೆ’. ಹನುಮಂತನಿಗೆ ಆಶ್ಚರ್ಯ ವಾಯಿತು!
ಬೆಟ್ಟವನ್ನು ಹೊತ್ತ ತನ್ನ ಶಕ್ತಿಗಿಂತಲೂ, ರಾಮನ ಅಗಲಿಕೆಯಲ್ಲಿ ಬೆಂದ ಭರತನ ಬಾಣದ ಶಕ್ತಿ ಅಪಾರವಾಗಿತ್ತು. ಹನುಮಂತನಿಗೆ ಆಗ ಅರಿವಾಯಿತು- ‘ಸೇವಾಭಾವದ ಜ್ಞಾನಕ್ಕಿಂತ ಶರಣಾಗತಿಯ ಪ್ರೇಮ ದೊಡ್ಡದು’ ಅಂತ. ಹನುಮಂತನು ಭರತನ ಪಾದಕ್ಕೆ ಶರಣಾದನು.
ಭರತನ ಕಣ್ಣೀರು ಹನುಮಂತನ ಶಕ್ತಿಯ ಅಹಂಕಾರವನ್ನು ತೊಳೆದು ಹಾಕಿತು". ನಂತರ ಶಿವನು ಪಾರ್ವತಿಗೆ ಹೀಗೆ ಹೇಳಿದನು, “ನೋಡು ದೇವೀ, ಹನುಮಂತನು ಸಾಕ್ಷಾತ್ ಜ್ಞಾನದ ಸ್ವರೂಪ (ಜ್ಞಾನಿನಾಮಗ್ರಗಣ್ಯಮ). ಆದರೂ ಅವನು ಭರತನ ಶರಣಾಗತಿಯನ್ನು ಕಂಡು ತಾನು ಸಣ್ಣವನಾದನು. ಅಧಿಕಾರ ಅಥವಾ ಶಕ್ತಿಯ ಮದ ತಲೆಗೇರಿದಾಗ ಅಂತರಂಗದ ರಾಮ ದೂರವಾಗುತ್ತಾನೆ. ಯಾವಾಗ ನಾವು ಶರಣಾಗುತ್ತೇವೋ ಆಗ ರಾಮ ನಮ್ಮೊಳಗೆ ನೆಲೆಸುತ್ತಾನೆ. ನಾವು ಕಲಿತ ವಿದ್ಯೆ, ಗಳಿಸಿದ ಅಧಿಕಾರ ಕೇವಲ ನೂರು ಜನರಿಗೆ ಒಳಿತನ್ನು ಮಾಡುವುದಕ್ಕೆ ಸೀಮಿತವಾಗಬಾರದು; ಅದು ನಮ್ಮನ್ನು ಮತ್ತಷ್ಟು ವಿನಯವಂತರನ್ನಾಗಿ ಮಾಡಬೇಕು. ಅಹಂಕಾರದ ಮದ ಏರಿದಾಗ ನಾವು ವಾಮಮಾರ್ಗದತ್ತ ಸರಿಯುತ್ತೇವೆ, ಆದರೆ ಶರಣಾಗತಿಯ ಭಾವವಿದ್ದಾಗ ಅಂತರಂಗದ ಸಂವಾದ ಸುಂದರವಾಗುತ್ತದೆ".
* ಶ್ರೀ ರಾಮಚರಿತಮಾನಸ ಶ್ಲೋಕ
ಈ ಸಂದರ್ಭದಲ್ಲಿ ಹನುಮಂತನು ಭರತನ
ಭಕ್ತಿಯನ್ನು ಕಂಡು ಹೇಳುವ ಮಾತು ಹೀಗಿದೆ:
ತವ ಪ್ರತಾಪ ರಾಖಿ ಉರ ಜೇಹಉಂ ನಾಥ
ತುರಂತ |
ಅಸ ಕಹಿ ಆಯಸು ಪಾಇ ಪದ ಬಂದಿ
ಚಲಯಉ ಹನುಮಂತ ||
* ಭಾವಾರ್ಥ:
ಹೇ ನಾಥ (ಭರತ), ನಿನ್ನ ಭಕ್ತಿ ಮತ್ತು ಪ್ರತಾಪವನ್ನು ನನ್ನ ಹೃದಯದಲ್ಲಿಟ್ಟುಕೊಂಡು ನಾನು ತಕ್ಷಣವೇ ಲಂಕೆಗೆ ತಲುಪುತ್ತೇನೆ. ಇಲ್ಲಿ ಹನುಮಂತನು ತನ್ನ ಶಕ್ತಿಯನ್ನು ನಂಬದೆ, ಮತ್ತೊಬ್ಬ ಭಕ್ತನ (ಭರತನ) ಪ್ರಭಾವವನ್ನು ನಂಬಿ ಹೊರಡುತ್ತಾನೆ. ಇದೇ ನಿಜವಾದ ಶರಣಾಗತಿ.
ಜೀವನದಲ್ಲಿ ಯಶಸ್ಸು ಗಳಿಸುವುದು ಎಂದರೆ ಕೇವಲ ಎತ್ತರಕ್ಕೆ ಏರುವುದಲ್ಲ, ಏರಿದಷ್ಟೂ ಬಾಗುವುದನ್ನು ಕಲಿಯುವುದು. ಗಿಡದಲ್ಲಿ ಹಣ್ಣುಗಳು ತುಂಬಿದಾಗ ಅದು ಭೂಮಿಯತ್ತ ಬಾಗುತ್ತದೆ. ಹಾಗೆಯೇ ಜ್ಞಾನ ಮತ್ತು ಶಕ್ತಿ ಹೆಚ್ಚಾದಾಗ ಮನುಷ್ಯ ವಿನಯದಿಂದ ಬಾಗಬೇಕು.
ಅಹಂಕಾರ ಪಟ್ಟರೆ ನಮಗೆ ದಕ್ಕುವುದು ಕೇವಲ ಏಕಾಂತ, ಆದರೆ ಶರಣಾದಾಗ ದಕ್ಕುವುದು ಅನಂತವಾದ ಶಾಂತಿ. ನಮ್ಮೊಳಗಿನ ಅಹಂಕಾರ ಕರಗಿದಾಗ ಮಾತ್ರ ಅಲ್ಲಿ ಸತ್ಯದ ದರ್ಶನವಾಗುತ್ತದೆ.