ಒಂದೊಳ್ಳೆ ಮಾತು
ರಾಮನು ಕೈಕೇಯಿಯ ಭವನದಿಂದ ಹೊರಬಂದಾಗ ಅವನ ಮುಖದಲ್ಲಿ ಎಂದಿನಂತೆ ಪ್ರಸನ್ನತೆ ಇತ್ತು. ಆದರೆ ಕೈಕೇಯಿಯ ಕಣ್ಣಲ್ಲಿ ಹರಿಯುತ್ತಿದ್ದ ಕಣ್ಣೀರು ಅವಳ ಅಂತರಂಗದ ಕಲ್ಮಶವನ್ನೆಲ್ಲ ತೊಳೆದು ಹಾಕಿತ್ತು. ಅಯೋಧ್ಯೆಯ ರಾಜಬೀದಿಗಳಲ್ಲಿ ಸಂಭ್ರಮವೋ ಸಂಭ್ರಮ. ಹದಿನಾಲ್ಕು ವರ್ಷಗಳ ಕಾಲ ಕತ್ತಲೆಯಲ್ಲಿದ್ದ ನಗರಕ್ಕೆ ಚೈತನ್ಯ ಬಂದಿತ್ತು.
ರಾಮನು ಪಟ್ಟಾಭಿಷೇಕಕ್ಕೆ ಸಿದ್ಧನಾಗಬೇಕಿತ್ತು. ರಾಮನು ಸಿಂಹಾಸನವನ್ನೇರುವ ಮುನ್ನ ಭರತನ ಕೈ ಹಿಡಿದು ಕರೆದುಕೊಂಡು ಬಂದನು. ಭರತನು ಅಣ್ಣನ ಪಾದಗಳಿಗೆರಗಿ, ಅಣ್ಣಾ, ಈ ರಾಜ್ಯ ನಿನ್ನದು. ಈ ಪಾಪಿಯ ಕೈಯಿಂದ ರಾಜ್ಯದ ಅಧಿಕಾರವನ್ನು ತೆಗೆದುಕೊ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದನು.
ರಾಮನು ಅವನನ್ನು ಎತ್ತಿ ಅಪ್ಪಿ ಕೊಂಡು, ಭರತಾ, ನೀನು ರಾಜ್ಯವಾಳಿದ್ದು ಪಾಪದಿಂದಲ್ಲ, ತ್ಯಾಗದಿಂದ. ನಿನ್ನ ನಿಷ್ಕಲ್ಮಶ ಸೇವೆ ಈ ರಾಜ್ಯಕ್ಕೆ ಸಿಕ್ಕಿದೆ ಎಂದಾದರೆ ಧರ್ಮವೇ ಇಲ್ಲಿ ನೆಲೆಸಿತ್ತು ಎಂದರ್ಥ ಎಂದು ಸಮಾಧಾನ ಪಡಿಸಿದನು. ತುಳಸೀದಾಸರು ಈ ಭಾವನಾತ್ಮಕ ಐಕ್ಯತೆಯನ್ನು ಒಂದು ಸುಂದರ ಚೌಪದಿಯಲ್ಲಿ ಹೀಗೆ ವಿವರಿಸುತ್ತಾರೆ:
ರಘುಕುಲ ರೀತಿ ಸದಾ ಚಲಿ ಆಯೀ |
ಪ್ರಾಣ ಜಾಯಿ ಬರು ಬಚನು ನ ಜಾಯಿ ||
ಸೇವಕ ಸಖಾ ಸಮಾನ ಪ್ರಿಯ ಮೋರೇ |
ಅನುಜ ಭರತ ಗತಿ ಜೌ ನಹಿಂ ಹೋರೇ |
ಭಾವಾರ್ಥ: ರಘುಕುಲದ ಸಂಪ್ರದಾಯವು ಪ್ರಾಣ ಹೋದರೂ ಕೊಟ್ಟ ಮಾತನ್ನು ತಪ್ಪದಂತ ಹುದು. ರಾಮನು ತನ್ನ ಸೇವಕರನ್ನು ಮತ್ತು ಮಿತ್ರರನ್ನು ಸಮಾನವಾಗಿ ಪ್ರೀತಿಸುತ್ತಿದ್ದನು, ಅದರಲ್ಲೂ ಭರತನ ಭಕ್ತಿಯು ಅವನಿಗೆ ಅತ್ಯಂತ ಪ್ರಿಯವಾಗಿತ್ತು.
ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ತಾಯಿ ಕೈಕೇಯಿಯ ಭೇಟಿ ಕ್ಷಮೆಯ ಪರಾಕಾಷ್ಠೆ
ಪಟ್ಟಾಭಿಷೇಕದ ನಂತರ ರಾಮನು ಕೇವಲ ಅರಮನೆಯ ಒಳಗೆ ಉಳಿಯಲಿಲ್ಲ. ಪ್ರತಿ ದಿನ ಸಂಜೆ ಸರಯೂ ನದಿಯ ತೀರದಲ್ಲಿ ಒಂದು ಸಭೆ ಸೇರುತ್ತಿತ್ತು. ಅಲ್ಲಿ ಮಂತ್ರಿಗಳಿರಲಿಲ್ಲ, ಕೇವಲ ಪ್ರಜೆ ಗಳಿದ್ದರು. ರಾಮನು ಸಿಂಹಾಸನದಿಂದ ಇಳಿದು ನೆಲದ ಮೇಲೆ ಕುಳಿತು ಜನರ ಕಷ್ಟಗಳನ್ನು ಆಲಿಸುತ್ತಿದ್ದನು.
ಒಮ್ಮೆ ಒಬ್ಬ ವೃದ್ಧೆ ತನ್ನ ಮೊಮ್ಮಗನಿಗೆ ತುತ್ತು ನೀಡುತ್ತಾ ರಾಮನನ್ನು ನೋಡಿ ಕೇಳಿದಳು, ರಾಮಾ, ನೀನು ಕಾಡಿಗೆ ಹೋದಾಗ ನಮಗೆ ದಿಕ್ಕೇ ಇಲ್ಲದಂತಾಗಿತ್ತು. ಈಗ ನೀನು ಬಂದಿದ್ದೀಯೆ, ನಮಗೆ ಎಂದೂ ಹಸಿವಾಗದಂತೆ ನೋಡಿಕೊಳ್ಳುತ್ತೀಯಾ? ರಾಮನು ನಸುನಗುತ್ತಾ ಆ ಮಗುವಿನ ತಲೆಯ ಮೇಲೆ ಕೈಯಿಟ್ಟು, ತಾಯಿ, ಈ ರಾಜ್ಯದಲ್ಲಿ ಯಾರೂ ಹಸಿದು ಮಲಗಬಾರದು ಎಂಬುದು ನನ್ನ ಆಜ್ಞೆಯಲ್ಲ, ಅದು ನನ್ನ ಸಂಕಲ್ಪ. ಧಾನ್ಯದ ರಾಶಿಗಳಿಗಿಂತ ಹಂಚಿ ತಿನ್ನುವ ಗುಣ ಬೆಳೆಯಲಿ ಎಂದನು.
ರಾಮರಾಜ್ಯದಲ್ಲಿ ಪ್ರಕೃತಿಯೂ ಸಹಕಾರ ನೀಡುತ್ತಿತ್ತು. ಮರಗಳು ಯಾವಾಗಲೂ ಹಣ್ಣುಗಳಿಂದ ಬಾಗಿರುತ್ತಿದ್ದವು, ಹಸುಗಳು ಅಪಾರ ಹಾಲು ನೀಡುತ್ತಿದ್ದವು.
ತುಳಸೀದಾಸರು ವರ್ಣಿಸುವಂತೆ:
ಫೂಲಹಿಂ ಫರಹಿಂ ಸದಾ ತರು ಕಾನನ |
ರಹಿ ಏಕ ಸಂಗ ಗಜ ಪಂಚಾನನ ||
ಭಾವಾರ್ಥ: ಕಾಡಿನ ಮರಗಳು ಯಾವಾಗಲೂ ಹೂವು ಮತ್ತು ಹಣ್ಣುಗಳಿಂದ ತುಂಬಿರುತ್ತಿದ್ದವು. ಆನೆ ಮತ್ತು ಸಿಂಹದಂತಹ ಪರಸ್ಪರ ವೈರಿ ಪ್ರಾಣಿಗಳು ಕೂಡ ಸ್ನೇಹದಿಂದ ಒಟ್ಟಿಗೆ ಇರುತ್ತಿದ್ದವು. ರಾಮನ ಆಳ್ವಿಕೆಯಲ್ಲಿ ‘ದಂಡ’ ಎನ್ನುವುದು ಕೇವಲ ಸಾಧು-ಸಂತರು ಹಿಡಿಯುವ ಕೋಲಾಗಿತ್ತು ಹೊರತು ಶಿಕ್ಷಿಸುವ ಆಯುಧವಾಗಿರಲಿಲ್ಲ. ಜನರ ಮನಸ್ಸಿನಲ್ಲಿ ಭಯದ ಬದಲು ಭಕ್ತಿ ಇತ್ತು.
ಅಹಂಕಾರದ ಬದಲು ವಿನಯವಿತ್ತು. ಕೈಕೇಯಿಯ ಮೇಲಿದ್ದ ಕೋಪ ಅಯೋಧ್ಯೆಯ ಜನರಲ್ಲಿ ಮಾಯವಾಗಿತ್ತು, ಏಕೆಂದರೆ ರಾಮನು ಅವಳನ್ನು ಪೂಜಿಸುವ ಮೂಲಕ ಕ್ಷಮೆಯ ಶಕ್ತಿಯನ್ನು ತೋರಿಸಿಕೊಟ್ಟಿದ್ದನು.
ಕೊನೆಯಲ್ಲಿ, ರಾಮರಾಜ್ಯವೆಂದರೆ ಕೇವಲ ವ್ಯವಸ್ಥೆಯಲ್ಲ, ಅದು ಒಂದು ಸುಸಂಸ್ಕೃತ ಸಮಾಜದ ಪ್ರತಿಬಿಂಬ. ನಮ್ಮ ಅಂತರಂಗದಲ್ಲಿರುವ ರಾವಣ ರೂಪೀ ಅರಿಷಡ್ವರ್ಗಗಳನ್ನು ಗೆದ್ದು, ರಾಮ ರೂಪೀ ಸತ್ಯವನ್ನು ಪ್ರತಿಷ್ಠಾಪಿಸಿದಾಗ ಮಾತ್ರ ನೈಜ ಸುಖ ಶಾಂತಿ ಲಭ್ಯ.
ಸತ್ಯ, ಶೌಚ, ದಯೆ ಮತ್ತು ದಾನ ಎಂಬ ನಾಲ್ಕು ಪಾದಗಳ ಮೇಲೆ ಧರ್ಮವು ರಾಮರಾಜ್ಯದಲ್ಲಿ ಸುಸ್ಥಿರವಾಗಿತ್ತು. ಕ್ಷಮೆಯೆಂಬ ಚಂದನವನ್ನು ಮನಸ್ಸಿಗೆ ಲೇಪಿಸಿದಾಗ, ಅದರ ತಂಪು ಹೃದಯಕ್ಕೂ ನಾಟಿ ನಾವು ಬದುಕನ್ನು ಕಹಿ ಇಲ್ಲದೆ ಸವಿಯಲು ಸಂತೃಪ್ತಿಯಿಂದ ಜೀವನ ನಡೆಸಲು ಅದೇ ಅಮೃತ ಸದೃಶದಂತೆ ನೆರವಾಗುತ್ತದೆ. ಇಂತಹ ಕ್ಷಮೆಯನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿ ಕೊಳ್ಳೋಣ.