ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ರಾಮಚರಿತ ಮಾನಸ: ಅಯೋಧ್ಯೆಯ ತಪಸ್ವಿ ಭರತ

ಅಯೋಧ್ಯೆಯ ಸಮಸ್ತ ಪ್ರಜೆಗಳು, ಗುರು ವಸಿಷ್ಠರು ಮತ್ತು ತಾಯಂದಿರೊಡನೆ ಭರತನು ರಾಮನನ್ನು ಸ್ವಾಗತಿಸಲು ಓಡಿದನು. ದೂರದಲ್ಲಿ ಪುಷ್ಪಕ ವಿಮಾನವು ಧರೆಗಿಳಿಯಿತು. ವಿಮಾನದಿಂದ ಮೊದಲು ಇಳಿದ ರಾಮನನ್ನು ಕಂಡೊಡನೆ ಭರತನು ಹಸಿವಿನಿಂದಿದ್ದ ಮಗು ತಾಯಿಯನ್ನು ಕಂಡಂತೆ ಓಡಿ ಹೋಗಿ ರಾಮನ ಪಾದಗಳ ಮೇಲೆ ಬಿದ್ದನು.

ಒಂದೊಳ್ಳೆ ಮಾತು

ಹದಿನಾಲ್ಕು ವರ್ಷಗಳ ವನವಾಸದ ಅವಧಿ ಮುಗಿಯಲು ಕ್ಷಣಗಣನೆ ಆರಂಭವಾಗಿತ್ತು. ಅಯೋಧ್ಯೆಯ ಹೊರವಲಯದ ನಂದಿಗ್ರಾಮದಲ್ಲಿ ಭರತನ ಸ್ಥಿತಿ ವರ್ಣನಾತೀತವಾಗಿತ್ತು. ಧೂಳಿನಿಂದ ಕೂಡಿದ ಜಟೆ, ಕೃಶವಾದ ದೇಹ, ಕಣ್ಣುಗಳಲ್ಲಿ ನಿರಂತರವಾಗಿ ಹರಿಯುತ್ತಿದ್ದ ಅಶ್ರುಧಾರೆ-ಇದು ಅಯೋಧ್ಯೆಯನ್ನು ಆಳಬೇಕಿದ್ದ ರಾಜಕುಮಾರನ ಸ್ಥಿತಿಯಾಗಿತ್ತು.

ಪ್ರಭು ರಾಮನು ಬರದಿದ್ದರೆ ಈ ಶರೀರವನ್ನು ಅಗ್ನಿಗೆ ಅರ್ಪಿಸುತ್ತೇನೆ ಎಂದು ಭರತನು ದರ್ಭೆಯ ಹಾಸಿಗೆಯ ಮೇಲೆ ಕುಳಿತು ಅಗ್ನಿಕುಂಡವನ್ನು ಸಿದ್ಧಪಡಿಸುತ್ತಿದ್ದನು. ಅದೇ ಕ್ಷಣದಲ್ಲಿ ಹನುಮಂತನು ಬ್ರಾಹ್ಮಣನ ವೇಷದಲ್ಲಿ ಬಂದು, ರಾಮನು ಬರುತ್ತಿದ್ದಾನೆ! ಎಂಬ ಮಧುರ ವಾರ್ತೆಯನ್ನು ನೀಡಿದನು. ಆ ಮಾತು ಕೇಳಿದ ಭರತನಿಗೆ ಸಾಕ್ಷಾತ್ ಅಮೃತ ಕುಡಿದಂತಾಯಿತು.

ಅಯೋಧ್ಯೆಯ ಸಮಸ್ತ ಪ್ರಜೆಗಳು, ಗುರು ವಸಿಷ್ಠರು ಮತ್ತು ತಾಯಂದಿರೊಡನೆ ಭರತನು ರಾಮನನ್ನು ಸ್ವಾಗತಿಸಲು ಓಡಿದನು. ದೂರದಲ್ಲಿ ಪುಷ್ಪಕ ವಿಮಾನವು ಧರೆಗಿಳಿಯಿತು. ವಿಮಾನದಿಂದ ಮೊದಲು ಇಳಿದ ರಾಮನನ್ನು ಕಂಡೊಡನೆ ಭರತನು ಹಸಿವಿನಿಂದಿದ್ದ ಮಗು ತಾಯಿಯನ್ನು ಕಂಡಂತೆ ಓಡಿ ಹೋಗಿ ರಾಮನ ಪಾದಗಳ ಮೇಲೆ ಬಿದ್ದನು.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಅಧರ್ಮದ ಅಂತ್ಯ ಮತ್ತು ರಾಮನ ಕರುಣೆ

ತುಳಸೀದಾಸರು ಈ ಸಂದರ್ಭವನ್ನು ಹೀಗೆ ಚಿತ್ರಿಸುತ್ತಾರೆ:

ಬಾರ ಬಾರ ಪದ ಪಂಕಜ ಗಹಹೀಂ |

ಜೇ ರೊಕೇಂ ಅತಿ ಪ್ರೇಮ ನ ರಹಹೀಂ ||

ಪುಲಕಿ ಶರೀರ ಸಜಲ ದೃಗ ಲೋಚನ |

ಮಿಟೇ ಬಿಷಾದ ಭವ ಭಯ ಭಂಜನ ||

ಭಾವಾರ್ಥ: ಭರತನು ರಾಮನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದನು. ಅವನು ಎಷ್ಟು ಮೈಮರೆತಿದ್ದನೆಂದರೆ, ನಾನು ಭರತ ಎಂದು ಪರಿಚಯಿಸಿಕೊಳ್ಳುವ ಶಕ್ತಿಯೂ ಅವನಿಗಿರಲಿಲ್ಲ.

ರಾಮನು ಕೂಡಲೇ ಕುಳಿತು ಭರತನನ್ನು ಮೇಲೆಬ್ಬಿಸಿದನು. ಇಬ್ಬರು ಸೋದರರು ಪರಸ್ಪರ ಬಿಗಿದಪ್ಪಿಕೊಂಡರು. ಆ ದೃಶ್ಯವು ಹೇಗಿತ್ತೆಂದರೆ, ಎರಡು ಸರೋವರಗಳು ಒಂದಕ್ಕೊಂದು ಬೆರೆತಂತೆ ಇಬ್ಬರ ಕಣ್ಣೀರೂ ಒಂದಾಗಿ ಹರಿಯುತ್ತಿತ್ತು.

ರಾಮನು ಭರತನ ಮುಖವನ್ನು ಹಿಡಿದು ಅವನ ಕಣ್ಣೀರನ್ನು ಒರೆಸುತ್ತಾ, ಭ್ರಾತೃ ಭರತ, ನಿನ್ನ ಈ ತಪಸ್ಸನ್ನು ನೋಡಿ ನನ್ನ ಹೃದಯವೇ ಒಡೆಯುತ್ತಿದೆ. ಅಯೋಧ್ಯೆಯ ರಾಜ್ಯದ ಭಾರವನ್ನು ನೀನು ಹೊತ್ತ ರೀತಿ, ನಿನ್ನ ತ್ಯಾಗವನ್ನು ಜಗತ್ತು ಎಂದೂ ಮರೆಯುವುದಿಲ್ಲ ಎಂದನು.

ಭರತನು ಸದ್ದಿಲ್ಲದೆ ರಾಮನ ಪಾದರಕ್ಷೆಗಳನ್ನು (ಪಾದುಕೆಗಳನ್ನು) ತಂದು ರಾಮನ ಪಾದಗಳಿಗೆ ತೊಡಿಸಿದನು. ಪ್ರಭು, ಈ ಹದಿನಾಲ್ಕು ವರ್ಷ ನಿಮ್ಮ ಪಾದುಕೆಗಳೇ ಈ ಸಾಮ್ರಾಜ್ಯವನ್ನು ಆಳಿದವು. ಈಗ ನಿಮ್ಮ ವಸ್ತು ನಿಮ್ಮ ಪಾದಕ್ಕೆ ಸೇರಿದೆ, ನನ್ನನ್ನು ನಿಮ್ಮ ಸೇವಕನನ್ನಾಗಿ ಮಾಡಿಕೊಳ್ಳಿ, ಎಂದು ವಿನಂತಿಸಿದನು.

ನಂತರ ರಾಮನು ತನ್ನ ತಾಯಿ ಕೈಕೇಯಿಯ ಬಳಿಗೆ ಹೋದನು. ಅವಳು ತಲೆತಗ್ಗಿಸಿ ನಿಂತಿದ್ದಾಗ, ರಾಮನು ಅವಳ ಪಾದಗಳಿಗೆ ನಮಸ್ಕರಿಸಿ, ತಾಯಿ, ನಿನ್ನಿಂದಲೇ ನನಗೆ ಋಷಿ-ಮುನಿಗಳ ದರ್ಶನವಾಯಿತು ಮತ್ತು ಅಧರ್ಮದ ನಾಶವಾಯಿತು.

ನೀನು ನನಗೆ ಅನ್ಯಾಯ ಮಾಡಲಿಲ್ಲ, ಜಗತ್ತಿಗೆ ಧರ್ಮವನ್ನು ತೋರಿಸಿಕೊಟ್ಟೆ, ಎಂದು ಅವಳನ್ನು ಸಮಾಧಾನಪಡಿಸಿದನು. ರಾಮನ ಈ ಕರುಣೆಯನ್ನು ಕಂಡು ಕೈಕೇಯಿಯ ಪಶ್ಚಾತ್ತಾಪದ ಕಣ್ಣೀರು ಅವಳ ಪಾಪಗಳನ್ನು ತೊಳೆದು ಹಾಕಿತು.

ಸೀತೆ ಮತ್ತು ಲಕ್ಷ್ಮಣರು ಭರತನನ್ನು ಅಪ್ಪಿಕೊಂಡಾಗ ಅಯೋಧ್ಯೆಯ ಪ್ರತಿಯೊಬ್ಬ ನಾಗರಿಕನ ಕಣ್ಣಲ್ಲೂ ಆನಂದದ ಅಶ್ರು ಇತ್ತು. ವಿಭೀಷಣ ಮತ್ತು ಸುಗ್ರೀವರು ಈ ಸೋದರರ ಪ್ರೇಮವನ್ನು ಕಂಡು ದಂಗಾದರು. ರಾಜ್ಯಕ್ಕಾಗಿ ಯುದ್ಧ ಮಾಡುವವರನ್ನು ನೋಡಿದ್ದೇವೆ, ಆದರೆ ತಟ್ಟೆಯಲ್ಲಿ ಬಂದ ರಾಜ್ಯವನ್ನು ಸೋದರನಿಗಾಗಿ ತ್ಯಾಗ ಮಾಡುವ ಇಂತಹ ಪ್ರೇಮವನ್ನು ಎಲ್ಲಿಯೂ ಕಂಡಿಲ್ಲ, ಎಂದು ಉದ್ಗರಿಸಿದರು.

ರಾಮನು ಪ್ರತಿಯೊಬ್ಬ ಪ್ರಜೆಯನ್ನೂ ಆಪ್ತ ಭಾವದಿಂದ ಮಾತನಾಡಿಸಿದನು. ಅಲ್ಲಿ ಯಾರು ದೊಡ್ಡವರು, ಯಾರು ಸಣ್ಣವರು ಎಂಬ ಭೇದವಿರಲಿಲ್ಲ. ಅಯೋಧ್ಯೆಯ ಪ್ರತಿ ಮನೆಮನೆಗಳಲ್ಲೂ ದೈವಸಮಾನ ರಾಜನಿಗೆ ಮಂಗಳಾರತಿ ನಡೆಯಿತು. ಸತ್ಯದ ದಾರಿ ಎಷ್ಟು ಕಠಿಣವಾಗಿದ್ದರೂ, ಅದರ ಪ್ರತಿಫಲವು ಎಷ್ಟು ಮಧುರವಾಗಿರುತ್ತದೆ ಎಂಬುದಕ್ಕೆ ರಾಮ-ಭರತರ ಈ ಸಮ್ಮಿಲನವೇ ಅತಿ ದೊಡ್ಡ ಸಾಕ್ಷಿ.

ಮಕ್ಕಳಿಗೆ ಬಳ್ಳಿಯ ವಿದ್ಯೆ, ಆಸ್ತಿ ಅನುಕೂಲಗಳನ್ನು ಮಾಡಿ ಕೊಡುವುದಷ್ಟೇ ಅಲ್ಲ, ಉತ್ತಮ ಸಂಸ್ಕಾರಗಳನ್ನು ಕೊಡುವುದು ಕೂಡ ತಂದೆ ತಾಯಿಯ ಜವಾಬ್ದಾರಿ. ಒಳ್ಳೆಯ ಸಂಸ್ಕಾರ ವುಳ್ಳ ಮಕ್ಕಳು ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ಕುಟುಂಬ ಸಮಾಜ ಎಲ್ಲಕ್ಕೂ ಬೆಳಕಾಗಿ ಬದುಕುತ್ತಾರೆ.

ರೂಪಾ ಗುರುರಾಜ್

View all posts by this author