ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ರಾಮಚರಿತ ಮಾನಸ: ವಾಲಿಯ ಮುಕ್ತಿಪಥ

ಒಬ್ಬ ರಾಕ್ಷಸ ಪ್ರವೃತ್ತಿಯ ವ್ಯಕ್ತಿ ತನ್ನ ದೃಷ್ಟಿ ಕೋನವನ್ನು ಬದಲಿಸಿಕೊಂಡು ಅಂತಿಮವಾಗಿ ಮಹಾನ್ ಭಕ್ತನಾಗಿ ಉದ್ಧಾರವಾದನು. ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದಕ್ಕಿಂತ, ಆ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು ದೊಡ್ಡತನ. ನಮ್ಮ ಅಧಿಕಾರ ಅಥವಾ ಶಕ್ತಿ ನಮಗೆ ಅಧರ್ಮ ಮಾಡುವ ಪರವಾನಗಿ ನೀಡುವುದಿಲ್ಲ. ಸತ್ಯವನ್ನು ಅರಿತು ಶರಣಾದರೆ ಭಗವಂತನ ಕೃಪೆ ನಮಗೆ ದಕ್ಕುತ್ತದೆ.

ಒಂದೊಳ್ಳೆ ಮಾತು

ಕಿಷ್ಕಿಂಧೆಯ ಕಾಡಿನಲ್ಲಿ ಅಂದು ಭಯಂಕರ ಗರ್ಜನೆ ಕೇಳಿ ಬರುತ್ತಿತ್ತು. ಅಣ್ಣ-ತಮ್ಮಂದಿರಾದ ವಾಲಿ ಮತ್ತು ಸುಗ್ರೀವರ ನಡುವೆ ರಕ್ತಸಿಕ್ತ ಯುದ್ಧ ನಡೆಯುತ್ತಿತ್ತು. ಸುಗ್ರೀವನು ರಾಮನ ಸಖ್ಯ ಬೆಳೆಸಿ ಧೈರ್ಯದಿಂದ ಯುದ್ಧಕ್ಕೆ ಬಂದಿದ್ದರೂ, ವಾಲಿಯ ಅಪ್ರತಿಮ ಶಕ್ತಿಯ ಮುಂದೆ ಸೋತು ಸುಣ್ಣ ವಾಗುತ್ತಿದ್ದನು.

ಆಗ ಮರೆಯಲ್ಲಿದ್ದ ಶ್ರೀರಾಮಚಂದ್ರನು ತನ್ನ ಧನುಸ್ಸಿನಿಂದ ಒಂದು ಬಾಣವನ್ನು ಬಿಟ್ಟನು. ಅದು ವಾಲಿಯ ಎದೆಗೆ ತಗುಲಿ, ಪರ್ವತವೊಂದು ಉರುಳಿದಂತೆ ಆ ಮಹಾಪರಾಕ್ರಮಿ ನೆಲಕ್ಕೆ ಅಪ್ಪಳಿಸಿದನು.

ಮರಣಶಯ್ಯೆಯಲ್ಲಿದ್ದ ವಾಲಿಯ ಕಣ್ಣುಗಳಲ್ಲಿ ಸಿಟ್ಟಿಗಿಂತ ಹೆಚ್ಚಾಗಿ ಆಶ್ಚರ್ಯವಿತ್ತು. ನೀಲ ಮೇಘ ಶ್ಯಾಮನಾದ ರಾಮನು ತನ್ನೆದುರಿಗೆ ಬಂದು ನಿಂತಾಗ, ವಾಲಿ ನೋವಿನಿಂದಲೇ ನಕ್ಕು, “ರಾಮ, ನೀನು ಅಯೋಧ್ಯೆಯ ರಾಜಕುಮಾರ, ಧರ್ಮದ ಅವತಾರ ಎಂದು ಕೇಳಿದ್ದೆ. ಆದರೆ ಒಬ್ಬ ಬೇಟೆಗಾರನಂತೆ ಮರೆಯಿಂದ ಬಾಣ ಬಿಟ್ಟು ನನ್ನನ್ನು ಕೊಂದೆಯಲ್ಲವೇ? ನಾನು ನಿನಗೆ ಮಾಡಿದ ಅಪರಾಧವಾದರೂ ಏನು? ಸೀತೆಯನ್ನು ಹುಡುಕಲು ನೀನು ನನ್ನ ಸಹಾಯ ಕೇಳಿದ್ದರೆ ಒಂದೇ ಕ್ಷಣ ದಲ್ಲಿ ರಾವಣನನ್ನು ಕಟ್ಟಿ ನಿನ್ನ ಮುಂದೆ ತರುತ್ತಿದ್ದೆ. ನಿನಗೆ ಸುಗ್ರೀವನ ಸ್ನೇಹವೇ ದೊಡ್ಡದಾಯಿತೇ?" ಎಂದು ಕಟುವಾಗಿ ಪ್ರಶ್ನಿಸಿದನು.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ರಾಮ ಮತ್ತು ಸುಗ್ರೀವನ ಸ್ನೇಹದ ವಾತಾವರಣ

ರಾಮನು ಕುಪಿತನಾಗಲಿಲ್ಲ. ಬದಲಿಗೆ ಒಬ್ಬ ತಂದೆಯಂತೆ ಶಾಂತವಾಗಿ ವಾಲಿಯ ಹತ್ತಿರ ಬಂದು ಕುಳಿತನು. ವಾಲಿಯ ಅಹಂಕಾರದ ಪರದೆಯನ್ನು ಸರಿಸಲು ರಾಮನು ಧರ್ಮದ ಸೂಕ್ಷ್ಮತೆಯನ್ನು ಬಿಚ್ಚಿಡತೊಡಗಿದನು. ರಾಮನು ವಾಲಿಯ ಕಣ್ಣುಗಳಲ್ಲಿ ಕಣ್ಣಿಟ್ಟು ಹೇಳಿದನು, “ವಾಲಿ, ನೀನು ಬಲಶಾಲಿಯಾಗಿರ ಬಹುದು, ಆದರೆ ನಿನ್ನ ವಿವೇಕ ಮಂಕಾಗಿದೆ. ಈ ಜಗತ್ತಿನಲ್ಲಿ ದೊಡ್ಡವನು ಯಾರೇ ಆಗಿರಲಿ, ಅವನು ಧರ್ಮಕ್ಕೆ ತಲೆಬಾಗಲೇಬೇಕು.

ಅನುಜ ಬಧೂ ಭಗಿನೀ ಸುತ ನಾರೀ | ಸುನು ಶಠ ಕನ್ಯಾ ಸಮ ಏ ಚಾರೀ ||

ಇನ್ಹಹಿ ಕುದೃಷ್ಟಿ ಬಿಲೋಕಇ ಜೇಈ | ತಾಹಿ ಬಧೇಂ ಕಛು ಪಾಪು ನ ಹೋಈ ||

ರಾಮನು ವಿವರಿಸಿದನು: “ಎಲೈ ಮೂಢನೇ ಕೇಳು, ತಮ್ಮನ ಪತ್ನಿ, ತಂಗಿ, ಮಗನ ಪತ್ನಿ ಮತ್ತು ಸ್ವಂತ ಮಗಳು- ಈ ನಾಲ್ವರೂ ಒಬ್ಬ ಪುರುಷನಿಗೆ ಸಮಾನ ಗೌರವಕ್ಕೆ ಅರ್ಹರು. ನಿನ್ನ ತಮ್ಮ ಸುಗ್ರೀವನು ಬದುಕಿದ್ದರೂ, ಅವನ ಪತ್ನಿಯಾದ ರುಮೆಯನ್ನು ನೀನು ಬಲವಂತವಾಗಿ ನಿನ್ನವಳನ್ನಾಗಿ ಮಾಡಿ ಕೊಂಡೆ. ಇದು ಮಹಾಪಾಪ.

ಇಂಥ ಅಧರ್ಮ ಎಸಗುವವನನ್ನು ದಂಡಿಸುವುದು ಕ್ಷತ್ರಿಯನಾದ ನನ್ನ ಧರ್ಮ. ಮರೆಯಿಂದ ಬಾಣ ಬಿಟ್ಟಿದ್ದು ನಿನಗೆ ಶಿಕ್ಷೆಯಾಗಿ ಅಲ್ಲ, ಬದಲಿಗೆ ನಿನ್ನ ಪಾಪದ ಫಲವಾಗಿ".

ರಾಮನ ಮಾತುಗಳು ವಾಲಿಯ ಅಹಂಕಾರದ ಕೋಟೆಯನ್ನು ಚೂರುಚೂರು ಮಾಡಿದವು. ಇಷ್ಟು ದಿನ ತಾನು ‘ಬಲಶಾಲಿ’ ಎಂದು ಅಂದುಕೊಂಡಿದ್ದ ವಾಲಿ, ತಾನು ಮಾಡಿದ್ದು ಎಷ್ಟು ದೊಡ್ಡ ತಪ್ಪು ಎಂಬುದನ್ನು ಅರಿತುಕೊಂಡನು. ರಾಮನ ದೈವಿಕ ತೇಜಸ್ಸು ಅವನಿಗೆ ಈಗ ಸಾಕ್ಷಾತ್ ಪರಮಾತ್ಮ ನಂತೆ ಕಂಡಿತು. ಅವನ ದೃಷ್ಟಿಕೋನ ಕ್ಷಣಾರ್ಧದಲ್ಲಿ ಬದಲಾಯಿತು.

“ಪ್ರಭು, ನನ್ನನ್ನು ಕ್ಷಮಿಸು. ನಿನ್ನ ಕೈ ಯಿಂದ ಮರಣ ಹೊಂದುವುದು ನನ್ನ ಭಾಗ್ಯ. ನಾನು ಅeನದ ಅಮಲಿನಲ್ಲಿ ನಿನ್ನನ್ನು ಪ್ರಶ್ನಿಸಿದೆ" ಎನ್ನುತ್ತಾ ವಾಲಿ ತನ್ನ ಮಗನಾದ ಅಂಗದನನ್ನು ರಾಮನ ಪಾದಗಳ ಹತ್ತಿರ ಕರೆದನು. “ರಾಮ, ಈ ಮಗನನ್ನು ನಿನಗೆ ಒಪ್ಪಿಸುತ್ತಿದ್ದೇನೆ. ಇವನನ್ನು ನಿನ್ನ ಸೇವಕನನ್ನಾಗಿ ಮಾಡಿಕೊ. ಸುಗ್ರೀವನಿಗೂ ನನ್ನಿಂದ ತೊಂದರೆಯಾಯಿತು, ಅವನನ್ನೂ ನೀನೇ ಕಾಪಾಡು" ಎಂದು ಬೇಡಿಕೊಂಡನು.

ರಾಮನು ವಾಲಿಗೆ ಮತ್ತೊಮ್ಮೆ ಬದುಕುವ ಅವಕಾಶ ನೀಡುವೆನೆಂದು ಹೇಳಿದರೂ, ವಾಲಿ ನಿರಾಕರಿಸಿದನು. “ಯಾವ ಪರಮಾತ್ಮನ ಹೆಸರನ್ನು ಜಪಿಸಿ ಮುನಿಗಳು ಜನ್ಮಜನ್ಮಾಂತರ ತಪಸ್ಸು ಮಾಡುತ್ತಾರೋ, ಆ ಪರಮಾತ್ಮನೇ ನನ್ನ ಕಣ್ಣೆದುರು ನಿಂತಿರುವಾಗ ನನಗೆ ಈ ಶರೀರದ ಹಂಗೇಕೆ?" ಎಂದು ಹೇಳಿ, ರಾಮನ ನಾಮವನ್ನು ಜಪಿಸುತ್ತಾ ಅತ್ಯಂತ ಶಾಂತವಾಗಿ ಪ್ರಾಣ ಬಿಟ್ಟನು.

ಒಬ್ಬ ರಾಕ್ಷಸ ಪ್ರವೃತ್ತಿಯ ವ್ಯಕ್ತಿ ತನ್ನ ದೃಷ್ಟಿ ಕೋನವನ್ನು ಬದಲಿಸಿಕೊಂಡು ಅಂತಿಮವಾಗಿ ಮಹಾನ್ ಭಕ್ತನಾಗಿ ಉದ್ಧಾರವಾದನು. ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದ ಕ್ಕಿಂತ, ಆ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು ದೊಡ್ಡತನ. ನಮ್ಮ ಅಧಿಕಾರ ಅಥವಾ ಶಕ್ತಿ ನಮಗೆ ಅಧರ್ಮ ಮಾಡುವ ಪರವಾನಗಿ ನೀಡುವುದಿಲ್ಲ. ಸತ್ಯವನ್ನು ಅರಿತು ಶರಣಾದರೆ ಭಗವಂತನ ಕೃಪೆ ನಮಗೆ ದಕ್ಕುತ್ತದೆ.

ರೂಪಾ ಗುರುರಾಜ್

View all posts by this author