ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pavan K Verma Column: ಮನುಸ್ಮೃತಿಯ ಓದು ಮತ್ತು ಅದರ ವೈರುಧ್ಯ

ಧರ್ಮಶಾಸ್ತ್ರಗಳು ಕರ್ತವ್ಯ, ಸದಾಚಾರ, ಸಾಮಾಜಿಕ ಹೊಣೆಗಾರಿಕೆ, ಧಾರ್ಮಿಕ ವಿಧಿವಿಧಾನಗಳ ಔಚಿತ್ಯ, ಕುಟುಂಬ ಸಂಬಂಧಗಳು, ರಾಜಧರ್ಮ, ಉತ್ತರಾಧಿಕಾರ ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ಒಳಗೊಂಡ ಸಂಸ್ಕೃತ ಸಾಹಿತ್ಯದ ಬೃಹತ್ ಸಂಕಲನಗಳಾಗಿವೆ. ಸಾಂಪ್ರದಾಯಿಕ ಹಿಂದೂ ನಂಬಿಕೆಯ ಪ್ರಕಾರ ಮನುಸ್ಮೃತಿಯನ್ನು ಆದಿ ಶಾಸನಕರ್ತನಾದ ಮನು ಬರೆದನೆಂದು ಹೇಳಲಾಗುತ್ತದೆ. ಆದರೆ, ಆಧುನಿಕ ಸಂಶೋಧನೆಗಳು ಇದರ ರಚನಾ ಕಾಲವನ್ನು ಪ್ರಮುಖವಾಗಿ ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ. 2ನೇ ಶತಮಾನದ ನಡುವೆ ಗುರುತಿಸುತ್ತವೆ.

ಮನುಸಂಹಿತೆ

ಪವನ್‌ ಕೆ.ವರ್ಮಾ

ಇತ್ತೀಚಿನ ದಿನಗಳಲ್ಲಿ ಮನುಸ್ಮೃತಿಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸ್ಮೃತಿಯು ಪುರುಷ ಪ್ರಧಾನ ವ್ಯವಸ್ಥೆಯನ್ನು ಅನುಮೋದಿಸಿದೆಯೇ ಮತ್ತು ಮಹಿಳೆಯರನ್ನು ಕೀಳಾಗಿ ಕಂಡಿದೆಯೇ ಎಂಬುದು ಈ ಚರ್ಚೆಯ ಮುಖ್ಯ ವಿಷಯ. ಹಿಂದೂ ಧರ್ಮಗ್ರಂಥಗಳನ್ನು ಹಾಗೂ ಹಿಂದೂ ಜೀವನದೃಷ್ಟಿಯನ್ನು ಮೌಲ್ಯಮಾಪನ ಮಾಡುವಲ್ಲಿ ಎದುರಾಗುವ ಸವಾಲೆಂದರೆ-ಸರಳೀಕೃತ ಖಂಡನೆ ಅಥವಾ ಅತಿಯಾದ ಸಮರ್ಥನೆ, ಎರಡೂ ಸೂಕ್ತವಲ್ಲ; ಏಕೆಂದರೆ ಇಲ್ಲಿ ಮಂಡಿಸಲಾಗುವ ಪ್ರತಿಯೊಂದು ವಾದಕ್ಕೂ ವಿರುದ್ಧವಾದ ಇನ್ನೊಂದು ನಿಲುವನ್ನು ಉಲ್ಲೇಖಿಸಬಹುದು.

ಭಿನ್ನಾಭಿಪ್ರಾಯಗಳನ್ನು ಪೋಷಿಸಿಕೊಂಡು ಬಂದಂತಹ ಇಷ್ಟು ಆಳವಾದ, ಸಂಕೀರ್ಣವಾದ ಮತ್ತು ಪ್ರಾಚೀನವಾದ ಚಿಂತನೆ ಹಾಗೂ ಆಚರಣೆಗಳ ಪರಂಪರೆಯಲ್ಲಿ ಇಂತಹ ಮೇಲ್ನೋಟದ ವೈರುಧ್ಯಗಳು ಅಸಹಜವೇನಲ್ಲ. ಮೊದಲನೆಯದಾಗಿ, ‘ಶ್ರುತಿ’ ಮತ್ತು ‘ಸ್ಮೃತಿ’ಗಳ ನಡುವಿನ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು.

ವೇದಗಳಂತಹ ಶ್ರುತಿಗಳು ಅಪೌರುಷೇಯ (ದೈವಿಕ ಪ್ರೇರಣೆಯಿಂದ ಕೇಳಲ್ಪಟ್ಟವು) ಗ್ರಂಥಗಳೆಂದು ನಂಬಲಾಗಿದೆ. ಸ್ಮೃತಿಗಳು ನೆನಪಿನಲ್ಲಿಟ್ಟುಕೊಂಡು ನಂತರ ಸಂಕಲಿಸಲಾದ ಗ್ರಂಥಗಳು. ಮನುಸ್ಮೃತಿಯು ಎರಡನೆಯ ವರ್ಗಕ್ಕೆ ಸೇರಿದ್ದು, ಇದು ‘ಧರ್ಮಶಾಸ್ತ್ರ’ಗಳ ನಿಯಂತ್ರಕ ಪರಂಪರೆಯ ಒಂದು ಭಾಗವಾಗಿದೆ.

ಧರ್ಮಶಾಸ್ತ್ರಗಳು ಕರ್ತವ್ಯ, ಸದಾಚಾರ, ಸಾಮಾಜಿಕ ಹೊಣೆಗಾರಿಕೆ, ಧಾರ್ಮಿಕ ವಿಧಿವಿಧಾನಗಳ ಔಚಿತ್ಯ, ಕುಟುಂಬ ಸಂಬಂಧಗಳು, ರಾಜಧರ್ಮ, ಉತ್ತರಾಧಿಕಾರ ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ಒಳಗೊಂಡ ಸಂಸ್ಕೃತ ಸಾಹಿತ್ಯದ ಬೃಹತ್ ಸಂಕಲನಗಳಾಗಿವೆ. ಸಾಂಪ್ರದಾಯಿಕ ಹಿಂದೂ ನಂಬಿಕೆಯ ಪ್ರಕಾರ ಮನುಸ್ಮೃತಿಯನ್ನು ಆದಿ ಶಾಸನಕರ್ತನಾದ ಮನು ಬರೆದನೆಂದು ಹೇಳಲಾಗುತ್ತದೆ. ಆದರೆ, ಆಧುನಿಕ ಸಂಶೋಧನೆಗಳು ಇದರ ರಚನಾ ಕಾಲವನ್ನು ಪ್ರಮುಖವಾಗಿ ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ. 2ನೇ ಶತಮಾನದ ನಡುವೆ ಗುರುತಿಸುತ್ತವೆ.

ಇದನ್ನೂ ಓದಿ: Shashidhara Halady Column: ಹಲಸಿನ ಮರದ ದಶಾವತಾರಗಳು

ಈ ಸ್ಮೃತಿಯು ಒಂದೇ ತೆರನಾದ (ಏಕರೂಪದ) ಗ್ರಂಥವಲ್ಲ ಮತ್ತು ಇದರಲ್ಲಿ ಹಲವು ಸ್ವಯಂ-ವೈರುಧ್ಯ ಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ಇದು ಈ ಕೃತಿಗೆ ಒಂದಕ್ಕಿಂತ ಹೆಚ್ಚು ಕರ್ತೃಗಳಿದ್ದ ರೆಂಬುದನ್ನು ಹಾಗೂ ಕಾಲಕ್ರಮೇಣ ಇದಕ್ಕೆ ಹಲವು ಸೇರ್ಪಡೆಗಳು ನಡೆದಿವೆ ಎಂಬುದನ್ನು ಸೂಚಿಸುತ್ತದೆ. ನಿರ್ದಿಷ್ಟವಾಗಿ ಮಹಿಳೆಯರ ಬಗೆಗಿನ ನಿಲುವುಗಳನ್ನು ಗಮನಿಸಿದಾಗ, ಮನುವನ್ನು ಕೇವಲ ‘ಮಹಿಳಾಪರ’ ಅಥವಾ ‘ಮಹಿಳಾವಿರೋಧಿ’ ಎಂಬ ಚೌಕಟ್ಟಿನಲ್ಲಿ ಬಂಧಿಸಲು ಬಯಸುವವರಿಗೆ ಇಲ್ಲಿನ ಪುರಾವೆಗಳು ಅಷ್ಟೇನೂ ಸಮಾಧಾನ ತರುವುದಿಲ್ಲ. ಇದರಲ್ಲಿ ಸ್ಪಷ್ಟವಾಗಿ ಪುರುಷಪ್ರಧಾನ ವ್ಯವಸ್ಥೆಯನ್ನು ಬಿಂಬಿಸುವ ಕೆಲವು ಶ್ಲೋಕಗಳಿವೆ.

9.3ನೇ ಶ್ಲೋಕದಲ್ಲಿ, ಮಹಿಳೆಯನ್ನು ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಪತಿ ಮತ್ತು ವೃದ್ಧಾಪ್ಯ ದಲ್ಲಿ ಪುತ್ರರು ರಕ್ಷಿಸಬೇಕು; ಆಕೆ ಸ್ವತಂತ್ರವಾಗಿರಬಾರದು ಎಂದು ಮನು ಹೇಳಿರುವುದು ಪ್ರಸಿದ್ಧ ವಾಗಿದೆ. ಆದರೆ, ಸಂಸ್ಕೃತ ಮೂಲವನ್ನು ಅರ್ಥೈಸುವಾಗ, ಇಲ್ಲಿ ‘ಸ್ವತಂತ್ರ’ ಎಂಬ ಪದದ ಅರ್ಥವು ಪುರುಷರ ಕಣ್ಗಾವಲಿ ನಲ್ಲಿ ಇರಬೇಕೆಂಬುದೋ ಅಥವಾ ಆಕೆಯ ಸ್ವಾತಂತ್ರ್ಯವನ್ನು ರಕ್ಷಿಸಲು ತಂದೆ, ಪತಿ, ಸಹೋದರರು ಇಲ್ಲವೇ ಪುತ್ರರು ಅವಳ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿರಬೇಕೆಂಬುದೋ ಎಂಬ ಬಗ್ಗೆ ಚರ್ಚೆಗಳಿವೆ. ಈ ಎರಡನೇ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.

ಏಕೆಂದರೆ, ಇದೇ ಮನುಸ್ಮೃತಿಯ 3.56ನೇ ಶ್ಲೋಕವು ಹೀಗೆ ಹೇಳುತ್ತದೆ: ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ಹರ್ಷಿಸುತ್ತಾರೆ; ಎಲ್ಲಿ ಅವರು ಗೌರವಿಸಲ್ಪಡುವು ದಿಲ್ಲವೋ, ಅಲ್ಲಿನ ಎಲ್ಲಾ ಧಾರ್ಮಿಕ ಕಾರ್ಯಗಳೂ ನಿಷಲವಾಗುತ್ತವೆ. ಈ ಮಾತನ್ನು ಒಳಗೊಂಡ ಸುತ್ತಮುತ್ತಲಿನ ಶ್ಲೋಕಗಳು ತಂದೆ, ಸಹೋದರರು, ಪತಿ ಮತ್ತು ಮನೆಯ ಇತರ ಪುರುಷರು ಮಹಿಳೆಯರನ್ನು ಗೌರವಿಸ ಬೇಕು ಹಾಗೂ ಸತ್ಕರಿಸಬೇಕು ಎಂದು ಆದೇಶಿಸುತ್ತವೆ. ಮತ್ತೊಂದು ಶ್ಲೋಕವು, ಎಲ್ಲಿ ಮಹಿಳೆಯರು ಕಷ್ಟಪಡುತ್ತಾರೋ ಆ ಕುಟುಂಬವು ನಾಶವಾಗುತ್ತದೆ; ಎಲ್ಲಿ ಅವರು ಸಂಕಷ್ಟಕ್ಕೀಡಾಗುವುದಿಲ್ಲವೋ ಆ ಕುಟುಂಬವು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳುತ್ತದೆ.

ಪತಿ-ಪತ್ನಿಯರ ಪರಸ್ಪರ ಸಂತೋಷವನ್ನು ಮನು ಕುಟುಂಬದ ಶಾಶ್ವತ ಕ್ಷೇಮಕ್ಕೆ ಬೆಸೆದಿದ್ದಾನೆ. ಹಾಗೆಯೇ, ಮನುವಿನ ವಿಚಾರಗಳನ್ನೇ ಇಡೀ ಹಿಂದೂ ನಾಗರಿಕತೆಯ ಪೂರ್ಣ ರೂಪವೆಂದು ತಪ್ಪಾಗಿ ಭಾವಿಸ ಬಾರದು; ಏಕೆಂದರೆ ಪ್ರಶ್ನಾತೀತವಾದ ಏಕೈಕ ಹಿಂದೂ ಕಾನೂನು ಸಂಹಿತೆ ಎಂಬುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಹಿಂದೂ ಬೌದ್ಧಿಕ ಪರಂಪರೆಯು ಅತ್ಯಂತ ಬಹುತ್ವದಿಂದ ಕೂಡಿದೆ. ವಿದೇಹದ ರಾಜ ಜನಕನು ಕರೆದ ವಿದ್ವಾಂಸರ ಬೃಹತ್ ಸಭೆಯಲ್ಲಿ ಗಾರ್ಗಿಯು ಅಂದಿನ ಅಗ್ರಗಣ್ಯ ಮುನಿ ಯಾಜ್ಞವಲ್ಕ್ಯ ನನ್ನು ಬಹಿರಂಗವಾಗಿ ಪ್ರಶ್ನಿಸಿದ ಘಟನೆಯನ್ನು ಬೃಹದಾರಣ್ಯಕ ಉಪನಿಷತ್ತು ವಿವರಿಸುತ್ತದೆ; ನಂತರ ಯಾಜ್ಞವಲ್ಕ್ಯನ ಪತ್ನಿ ಮೈತ್ರೇಯಿಯೂ ಆತನನ್ನು ಪ್ರಶ್ನಿಸು ತ್ತಾಳೆ.

ಮಹಾಭಾರತದಲ್ಲಿ, ತೇಜಸ್ವಿ ದ್ರೌಪದಿಯು ಧರ್ಮರಾಯನನ್ನು ಕುರಿತು-ತನ್ನನ್ನು ಪಣವಾಗಿ ಇಡಲು ನಿನಗೇನು ಹಕ್ಕಿತ್ತು ಎಂದು ನೇರವಾಗಿ ಕೇಳುತ್ತಾಳೆ. ಶತಪಥ ಬ್ರಾಹ್ಮಣವು ಹೆಂಡತಿಯು ಪತಿಯ ಅರ್ಧಭಾಗ ಎಂದು ಹೇಳುತ್ತದೆ. ಇದು ಅರ್ಧನಾರೀಶ್ವರ ಪರಿಕಲ್ಪನೆಗೆ ಅನುಗುಣವಾಗಿದೆ-ಅಲ್ಲಿ ದೈವತ್ವವನ್ನು ಅರ್ಧ ಪುರುಷ, ಅರ್ಧ ಸ್ತ್ರೀಯಾಗಿ ಕಲ್ಪಿಸಲಾಗಿದೆ. ಜೊತೆಗೆ ಶಕ್ತಿಯ ಶಕ್ತಿಶಾಲಿ ಸ್ತ್ರೀತತ್ವವೂ ಇದೆ; ಇಲ್ಲಿ ದೇವತೆಗಳು ಕೇವಲ ಸಹವರ್ತಿಗಳಾಗಿರದೆ, ಕೆಲವು ಗ್ರಂಥಗಳಲ್ಲಿ ಪರಮ ಬ್ರಹ್ಮಾಂಡ ಶಕ್ತಿಯಾಗಿ ಚಿತ್ರಿತರಾಗಿದ್ದಾರೆ.

ಮಹಿಳಾ ಕವಿಗಳು, ಸಂತರ ಮತ್ತು ಆಡಳಿತಗಾರರ ಪರಂಪರೆಯೂ ಇದೆ; ಹಾಗೆಯೇ ನೈತಿಕವಾಗಿ, ಬೌದ್ಧಿಕ ವಾಗಿ ಮತ್ತು ಆಧ್ಯಾತ್ಮಿಕವಾಗಿ ಮಹಿಳೆಯರು ಪುರುಷರಿಗಿಂತ ಶ್ರೇಷ್ಠರಾಗಿರುವ ಸಾಹಿತ್ಯಕ ನಿದರ್ಶನಗಳೂ ಇವೆ. ಮೌರ್ಯರ ಕಾಲದಲ್ಲಿ ಮಹಿಳೆಯರು ರಾಜನ ಅಂಗರಕ್ಷಕರಾಗಿರಬಹುದು, ಆಡಳಿತದಲ್ಲಿ ಸೇವೆ ಸಲ್ಲಿಸಬಹುದು, ಸಂನ್ಯಾಸ ಜೀವನವನ್ನು ಆಯ್ಕೆಮಾಡಿಕೊಳ್ಳಬಹುದು ಮತ್ತು ತಮ್ಮ ಸ್ವಂತ ಹಣವನ್ನು ಬಳಸಿಕೊಂಡು ದೇವಾಲಯಗಳು ಹಾಗೂ ಮಠಗಳಿಗೆ ದಾನ ನೀಡಬಹುದು ಎಂದು ಅರ್ಥಶಾಸ್ತ್ರವು ದಾಖಲಿಸಿದೆ.

ಇವೆಲ್ಲವೂ ನಿಜವಾಗಿದ್ದರೂ, ಭಾರತದಲ್ಲಿ ಲಿಂಗ ಅಸಮಾನತೆ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಹಳ ದೀರ್ಘಕಾಲದಿಂದ ಅಸ್ತಿತ್ವದಲ್ಲಿದೆ ಎಂಬುದು ವಾಸ್ತವ. ನನ್ನ ಪ್ರಕಾರ, ತಳವೂರಿದ ಪುರುಷ ಹಿತಾಸಕ್ತಿಗಳು ತಮ್ಮ ಏಕಪಕ್ಷೀಯ ಪ್ರಾಬಲ್ಯವನ್ನು ಸಮರ್ಥಿಸಿಕೊಳ್ಳಲು ಧರ್ಮಶಾಸ್ತ್ರಗಳು ಮತ್ತು ಇತರ ಗ್ರಂಥಗಳಿಂದ ಆಯ್ದ ಕೆಲವು ಶ್ಲೋಕಗಳನ್ನು ಬಳಸಿಕೊಂಡವು. ಇದನ್ನೇ ನಾವು ಪ್ರಶ್ನಿಸಬೇಕಾಗಿದೆ, ಕಿತ್ತೊಗೆಯಬೇಕಾಗಿದೆ ಮತ್ತು ಶಿಕ್ಷಿಸಬೇಕಾಗಿದೆ. ಈ ಗುರಿಯನ್ನು ಸಾಧಿಸಲು ಮನುಸ್ಮೃತಿಯನ್ನು ದೂಷಿಸುವುದೇ ಆದರೆ, ಮೇಲೆ ಉಲ್ಲೇಖಿಸಿದಂತೆ ಅದರಲ್ಲೂ ಮಹಿಳಾಪರವಾದ ಸ್ಪಷ್ಟ ಮಾತುಗಳಿವೆ.

ಲಿಂಗ ಶೋಷಣೆಗೆ ಮುಖ್ಯವಾಗಿ ಮನುಸ್ಮೃತಿಯೇ ಕಾರಣವೆಂದು ಹೊಣೆ ಮಾಡುವುದು ನಿಖರವೂ ಅಲ್ಲ; ಜೊತೆಗೆ ಇಂದಿನ ನೈಜ ಸವಾಲಾದ ಮಹಿಳೆಯರ ಸಬಲೀಕರಣವನ್ನು ಎದುರಿಸಲು ಇದು ತೀರಾ ಸರಳೀಕೃತ ಮಾರ್ಗವಾಗುತ್ತದೆ. ‌

(ಲೇಖಕರು ಸಾಹಿತಿ, ರಾಜತಾಂತ್ರಿಕರು ಮತ್ತು ರಾಜ್ಯಸಭಾ ಮಾಜಿ ಸದಸ್ಯರು) ಕೃಪೆ : ಹಿಂದೂಸ್ತಾನ್ ಟೈಮ್ಸ್