ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

R T Vittalmurthy Column: ಆಪರೇಷನ್‌ ಟ್ವೆಂಟಿಗೆ ಸಿದ್ದು ರೆಡಿ

ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರ ಪರವಾಗಿಯೇ ನಿಂತವರು ಮತ್ತು ಈಗಲೂ ಸಿದ್ದರಾಮಯ್ಯ ಅವರ ನಾಯಕತ್ವದ ಮೇಲೆ ಹೆಚ್ಚು ವಿಶ್ವಾಸವಿಟ್ಟವರು. ಇಷ್ಟಾ ದರೂ ಈ ಬಾರಿ ದಿಲ್ಲಿಗೆ ಬರುತ್ತಿರುವ ಸಿದ್ದರಾಮಯ್ಯ ಅವರ ಬಳಿ ಕೆ.ಸಿ.ವೇಣುಗೋಪಾಲ್ ಅವರು ಮಹತ್ವದ ವಿಷಯವೊಂದನ್ನು ಪ್ರಸ್ತಾಪಿಸಲಿದ್ದಾರೆ.

ಮೂರ್ತಿಪೂಜೆ

ಕಳೆದ ಬುಧವಾರ ವಿಧಾನಸಭೆಯ ಮೊಗಸಾಲೆಯಲ್ಲಿ ಕುಳಿತಿದ್ದ ಡಿಸಿಎಂ ಡಿಕೆಶಿ ಕ್ಯಾಂಪಿನ ಹಿರಿಯ ನಾಯಕರೊಬ್ಬರು ತಮ್ಮ ಆಪ್ತರ ಬಳಿ ಮೆಲ್ಲಗೆ ಮಾತನಾಡುತ್ತಿದ್ದರು. ಅವರ ಪ್ರಕಾರ, ‘ಏಪ್ರಿಲ್ ಮೊದಲ ವಾರ ದಿಲ್ಲಿಯಲ್ಲಿ ನಿರ್ಣಾಯಕ ಸಭೆ ನಡೆಯಲಿದೆ’. ಅರ್ಥಾತ್, ಬಜೆಟ್ ಅಧಿವೇಶನದ ನಂತರ ದಿಲ್ಲಿಗೆ ಧಾವಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಹತ್ವದ ವಿಷಯವೊಂದನ್ನು ಪ್ರಸ್ತಾಪಿಸಲಿದ್ದಾರೆ.

ಅಂದ ಹಾಗೆ, ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರ ಪರವಾಗಿಯೇ ನಿಂತವರು ಮತ್ತು ಈಗಲೂ ಸಿದ್ದರಾಮಯ್ಯ ಅವರ ನಾಯಕತ್ವದ ಮೇಲೆ ಹೆಚ್ಚು ವಿಶ್ವಾಸ ವಿಟ್ಟವರು. ಇಷ್ಟಾದರೂ ಈ ಬಾರಿ ದಿಲ್ಲಿಗೆ ಬರುತ್ತಿರುವ ಸಿದ್ದರಾಮಯ್ಯ ಅವರ ಬಳಿ ಕೆ.ಸಿ.ವೇಣುಗೋಪಾಲ್ ಅವರು ಮಹತ್ವದ ವಿಷಯವೊಂದನ್ನು ಪ್ರಸ್ತಾಪಿಸಲಿದ್ದಾರೆ.

ಹೀಗೆ ಸಿದ್ದರಾಮಯ್ಯ ಅವರ ಬಳಿ ವಿಷಯವನ್ನು ಪ್ರಸ್ತಾಪಿಸಿದ ನಂತರ, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಜತೆ ಸಭೆ ನಡೆಯಲಿದೆ. ಅಂದ ಹಾಗೆ, ರಾಹುಲ್ ಗಾಂಧಿ ಅವರ ಜತೆಗಿನ ಸಭೆಗಿಂತ ಮುಂಚೆ ಸಿದ್ದರಾಮಯ್ಯ ಅವರ ಬಳಿ ಕೆ.ಸಿ.ವೇಣುಗೋಪಾಲ್ ಅವರು 3:2 ಸೂತ್ರವನ್ನು ಪ್ರಸ್ತಾಪಿಸಲಿದ್ದಾರೆ.

ಅದರ ಪ್ರಕಾರ, ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಭರ್ತಿಯಾದ ನಂತರ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆಯನ್ನು ಬಿಟ್ಟು ಕೊಡಬೇಕು. ಹೀಗೆ ಅಧಿಕಾರ ಬಿಟ್ಟು ಕೊಡಬೇಕು ಎಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರಿಗೆ ನೀಡುತ್ತಿರುವ ಪ್ರಾಮಿನೆನ್ಸು ಕಡಿಮೆಯಾಗುತ್ತದೆ ಎಂದಲ್ಲ.

ಬದಲಿಗೆ ಡಿಕೆಶಿ ನೇತೃತ್ವದ ಸರಕಾರದ ರೂಪುರೇಷೆ ಹೇಗಿರಬೇಕು ಎಂಬ ವಿಷಯದಲ್ಲಿ ಅವರ ಮಾತಿಗೆ ಹೆಚ್ಚು ಪ್ರಾಮಿನೆನ್ಸು ಸಿಗಲಿದೆ. ಇದೇ ರೀತಿ ಮುಂದಿನ ವಿಧಾನಸಭಾ ಚುನಾವಣೆಯ ವಿಷಯದಲ್ಲೂ ಅವರಿಗೆ ಹೆಚ್ಚು ಪ್ರಾಮಿನೆನ್ಸು ದೊರೆಯಲಿದೆ. ಅಷ್ಟೇ ಅಲ್ಲ, 2028ರಲ್ಲೂ ಸಿದ್ದರಾಮಯ್ಯ ಅವರೇ ಮರಳಿ ಸಿಎಂ ಕ್ಯಾಂಡಿಡೇಟ್ ಅಂತ ಸ್ಪಷ್ಟ ಭರವಸೆ ನೀಡಲಾಗುತ್ತದೆ.

ಇದನ್ನೂ ಓದಿ: R‌ T Vittalmurthy Column: ಬಿಜೆಪಿಯಲ್ಲಿ ಮತ್ತೆ ಪ್ರೆಸಿಡೆಂಟ್‌ ವಾರ್

ಹೀಗೆ ಅಧಿಕಾರ ಹಂಚಿಕೆಗೆ ಹೊಸ ಸೂತ್ರವನ್ನು ಮಂಡಿಸುತ್ತಿರುವ ಕೆ.ಸಿ.ವೇಣುಗೋಪಾಲ್ ಅವರು ಭವಿಷ್ಯಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನು ಕ್ಲಿಯರ್ ಮಾಡಲಿದ್ದಾರೆ. ಅದರ ಪ್ರಕಾರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಗ್ಗೂಡಿ ಕಾರ್ಯನಿರ್ವಹಿಸಿ, ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕು. ನಂತರ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗಲಿ, ನಂತರದ ಎರಡೂ ವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂಬುದು ವೇಣುಗೋಪಾಲ್ ಸ್ಪಷ್ಟಪಡಿಸ ಲಿರುವ ಮೆಸೇಜು.

ಹೀಗೆ ಸಿದ್ದರಾಮಯ್ಯ ಅವರ ಮುಂದೆ ಇಂಥ ಪ್ರಸ್ತಾಪವನ್ನಿಟ್ಟು ಮನ ಒಲಿಸಲಿರುವ ಕೆ.ಸಿ.ವೇಣುಗೋಪಾಲ್ ಅವರು, ನಂತರ ರಾಹುಲ್ ಗಾಂಧಿ ಅವರ ಗಮನಕ್ಕೆ ಈ ವಿಷಯ ತರಲಿದ್ದಾರೆ. ಅವರು ಈ ಸೂತ್ರಕ್ಕೆ ಅಂತಿಮ ಮುದ್ರೆ ಒತ್ತಿದ ನಂತರ ಅದನ್ನು ಘೋಷಿಸ ಲಾಗುತ್ತದೆ. ಅಲ್ಲಿಗೆ ಹಲವು ಕಾಲದಿಂದ ನನೆಗುದಿಗೆ ಬಿದ್ದಿರುವ ಅಧಿಕಾರ ಹಂಚಿಕೆಯ ಮಾತು ಇತ್ಯರ್ಥವಾಗಲಿದೆ.

ಹೀಗೆ ಡಿಕೆಶಿ ಕ್ಯಾಂಪಿನ ಆ ಹಿರಿಯ ನಾಯಕರು ಈ ವಿಷಯವನ್ನು ಪಿಸುಗುಟ್ಟುತ್ತಿದ್ದರೆ ಅವರ ಪಕ್ಕ ಕುಳಿತಿದ್ದ ಶಾಸಕರೊಬ್ಬರು, “ಈ ಸೂತ್ರ ಕೇಳಲೇನೋ ಚೆನ್ನಾಗಿದೆ. ಆದರೆ ಮುಂದಿನ ಚುನಾವಣೆಯಲ್ಲಿ ನಾವು ಗೆದ್ದು ಮರಳಿ ಅಧಿಕಾರ ಹಿಡಿಯಲು ಸಾಧ್ಯವಾ? ಈಗಾಗಲೇ ನಮ್ಮ ಪಕ್ಷದ ಗೊಂದಲದಿಂದಾಗಿ ಮೇಲೆದ್ದು ನಿಂತಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಬಗ್ಗು ಬಡಿಯಲು ಸಾಧ್ಯವಾ?" ಅಂತ ಪ್ರಶ್ನಿಸಿದರು.

ಅವರ ಪ್ರಶ್ನೆಗೆ ಮರಳಿ ಉತ್ತರಿಸಿದ ಡಿಕೆಶಿ ಕ್ಯಾಂಪಿನ ಆ ಹಿರಿಯ ನಾಯಕರು, “ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಾವು ಚುನಾವಣೆಗೆ ಹೋದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಶಕ್ತಿ ಕಡಿಮೆಯಾಗುತ್ತದೆ. ಮೊದಲನೆಯದಾಗಿ ಈ ಇಬ್ಬರು ನಾಯಕರು ಕಾಂಗ್ರೆಸ್ ಸೈನ್ಯದ ಮುಂಚೂಣಿಯಲ್ಲಿ ನಿಂತರೆ ಈ ಜೋಡಿಯನ್ನು ಸರಿಗಟ್ಟುವ ನಾಯಕರು ಮೈತ್ರಿಕೂಟದಲ್ಲಿ ಯಾರಿದ್ದಾರೆ? ಇದೇ ರೀತಿ ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳೇನಿವೆ? ಅದರ ಫಲಾನುಭವಿಗಳು ಯಾವ ಕಾರಣಕ್ಕೂ ಪರ್ಯಾಯ ಶಕ್ತಿಯ ಜತೆ ನಿಲ್ಲಲು ಸಾಧ್ಯವಿಲ್ಲ.

ನೆನಪಿಡಿ, ಇವತ್ತಿನ ಜಾಗತಿಕ ವಿದ್ಯಮಾನಗಳೇನಿವೆ, ಅವು ಬಡ-ಮಧ್ಯಮ ವರ್ಗದ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲಿವೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳೇನಿವೆ, ಅದರ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಲಿದೆ. ಇಂಥ ಸಂದರ್ಭದಲ್ಲಿ ಸಿದ್ದರಾಮಯ್ಯ 2028ಕ್ಕೂ ಸಿಎಂ ಕ್ಯಾಂಡಿಡೇಟ್ ಎಂದರೆ ಅಹಿಂದ ವರ್ಗಗಳ ಸಾಲಿಡ್ಡು ಬೆಂಬಲ ನಮ್ಮ ಪರವಾಗಿರುತ್ತದೆ.

ಅದೇ ರೀತಿ ಈ ಅವಧಿಯಲ್ಲಿ ಎರಡು ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆದರೆ, ಮುಂದಿನ ಚುನಾವಣೆಯ ನಂತರವೂ ಅವರಿಗೆ ಸಿಎಂ ಪಟ್ಟ ಸಿಗುತ್ತದೆ ಎಂಬ ಮೆಸೇಜು ಒಕ್ಕಲಿಗ ಮತಬ್ಯಾಂಕಿಗೆ ಹೋಗುತ್ತದೆ. ಹೀಗಾಗಿ 2028ರ ವಿಧಾನಸಭೆ ಚುನಾವಣೆಗೆ ಹೋಗುವ ಕಾಂಗ್ರೆಸ್ ಸೈನ್ಯ ಡೆಡ್ಲಿಯಾಗಿರುತ್ತದೆ ನೋ ಡೌಟ್" ಅಂತ ವಿವರಿಸಿದರು.

ಆಪರೇಷನ್ ಟ್ವೆಂಟಿಗೆ ರೆಡಿ?

ಹೀಗೆ ಅಧಿಕಾರ ಹಂಚಿಕೆಯ ಹೊಸ ಸೂತ್ರ ಜಾರಿಯಾಗುತ್ತದೆ ಎಂಬ ಮಾತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಲ್ಲಿ ಹರಿದಾಡುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಅವರ ಪಾಳಯ ಇದನ್ನು ಬಿಲ್‌ಕುಲ್ ಒಪ್ಪುವುದಿಲ್ಲ. ಅದರ ಪ್ರಕಾರ, “ಕಾನ್ಷಿರಾಂ ಅವರ ನಂತರ ದೇಶದ ಶೋಷಿತ ವರ್ಗಗಳು ಕಂಡ ಅತ್ಯಂತ ದೊಡ್ಡ ನಾಯಕ ಸಿದ್ದರಾಮಯ್ಯ ಅಂತ ರಾಹುಲ್ ಗಾಂಧಿಯವರು ಹೋದಲ್ಲಿ ಬಂದಲ್ಲಿ ಭಾಷಣ ಮಾಡಿದ್ದಾರೆ.

ಹೀಗಿರುವಾಗ ಅಂಥ ದೊಡ್ಡ ನಾಯಕ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಅವರು ಸುತರಾಂ ಒಪ್ಪುವುದಿಲ್ಲ. ಇದು ಎಲ್ಲರಿಗಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಹೀಗಾಗಿಯೇ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನ ಮಾತುಗಳೇನೇ ಇರಲಿ, ಅದರ ಬಗ್ಗೆ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರು ಅಂತಿಟ್ಟು ಕೊಳ್ಳಿ. ಅಗ ಡಿಕೆಶಿ ಸಿಎಂ ಆಗಿ ಸಿದ್ದರಾಮಯ್ಯ ಖಾಲಿ ಕೈಯಲ್ಲಿ ಕೂರುತ್ತಾರಾ? ಹೋಗಲಿ ಎಂದರೆ ಅವರಿಗೆ ಕೊಡಲು ಬೇರೆ ಜಾಗ ಎಲ್ಲಿದೆ? ರಾಜ್ಯಸಭೆಗೆ ಕಳಿಸಿ ಅವರನ್ನು ಸುಮ್ಮ ನಿರಿಸಲು ಸಾಧ್ಯವೇ? ಎಷ್ಟೇ ಆದರೂ ಈ ನೆಲದ ಟಾಪ್ ಲೀಡರು ಅವರು. ಹೀಗಾಗಿ ಅವರನ್ನು ಖಾಲಿ ಕೂರಿಸುವುದು ಎಂಬುದೇ ಡೇಂಜರು.

ಇದು ರಾಹುಲ್ ಗಾಂಧಿಯವರಿಗೂ ಗೊತ್ತು. ಹೀಗಾಗಿ ಅವರು ರಿಸ್ಕು ತೆಗೆದುಕೊಳ್ಳುವುದಿಲ್ಲ. ಇದೆಲ್ಲವನ್ನು ಬಲ್ಲ ಕಾರಣಕ್ಕಾಗಿಯೇ ಈ ಬಾರಿ ದಿಲ್ಲಿ ಯಾತ್ರೆ ನಡೆಸಲಿರುವ ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ ಅನುಮತಿ ಕೊಡಿ ಎನ್ನುತ್ತಾರೆ. ಇದೇ ರೀತಿ ರಾಹುಲ್ ಗಾಂಧಿಯವರೂ ಅನುಮತಿ ಕೊಡುತ್ತಾರೆ.

ಅಂದ ಹಾಗೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಇರುವುದರಿಂದ ಮೇ ಮೊದಲ ವಾರದವರೆಗೆ ಸಂಪುಟ ಪುನಾರಚನೆ ಆಗುವುದಿಲ್ಲ. ಬದಲಿಗೆ ಮೇ 20ರ ಹೊತ್ತಿಗೆ ಸರಕಾರಕ್ಕೆ ಮೂರು ವರ್ಷ ಭರ್ತಿಯಾಗುತ್ತದಲ್ಲ? ಆ ಸಂದರ್ಭದಲ್ಲಿ ಸಚಿವ ಸಂಪುಟ ಪುನಾರಚನೆ ಆಗುತ್ತದೆ. ಈಗಿರುವ ಮಾಹಿತಿಯ ಪ್ರಕಾರ, ರಾಜ್ಯ ಸಚಿವ ಸಂಪುಟದಲ್ಲಿರುವ ಇಪ್ಪತ್ತು ಮಂದಿಯನ್ನು ಕೈ ಬಿಟ್ಟು,ಸರಕಾರಕ್ಕೆ ಮೇಜರ್ ಸರ್ಜರಿ ಮಾಡುವುದು ಸಿದ್ದರಾಮಯ್ಯರ ಲೆಕ್ಕಾಚಾರ. ಇದನ್ನು ಬಿಟ್ಟು ಅವರೇ ಕೆಳಗಿಳಿಯುತ್ತಾರೆ ಎಂಬುದು ಸುಳ್ಳು".

ಜಮೀರಣ್ಣಾ ಕಿ ಪಾಲಿಟಿಕ್ಸ್

ಈ ಮಧ್ಯೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಮುಸ್ಲಿಮ‌ ರಿಗೇ ಕೊಡಬೇಕು ಅಂತ ಪಟ್ಟು ಹಿಡಿದಿದ್ದ ವಸತಿ ಸಚಿವ ಜಮೀರ್ ಅಹ್ಮದ್ ‘ಕ್ಲಿಕ್’ ಆಗಿದ್ದಾರೆ. ಇದರರ್ಥ, ಅವರು ಹೇಳಿದವರಿಗೆ ಟಿಕೆಟ್ ಸಿಕ್ಕಿತು ಅಂತಲ್ಲ. ಆದರೆ ಶಾಮನೂರು ಸಾಮ್ರಾಜ್ಯದಲ್ಲಿ ಮುಸ್ಲಿಮರು ನುಗ್ಗಲಿ ಅಂತ ಅವರು ಹಾಕಿದ ಪಟ್ಟು ಬೇರೆ ರೀತಿ ವರ್ಕ್ ಔಟ್ ಆಗಿದೆ.

ಮೂಲಗಳ ಪ್ರಕಾರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಸಮರ್ಥ್ ಅವರಿಗೆ ಟಿಕೆಟ್ ಕೊಡಬೇಕು ಅಂತ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಇಟ್ಟ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಒಪ್ಪಿಗೆ ನೀಡಿ ಹಲವು ವಾರಗಳೇ ಕಳೆದಿದ್ದವು. ಕೆಲ ದಿನಗಳ ಹಿಂದೆ ತಮ್ಮನ್ನು ಭೇಟಿ ಮಾಡಿದ ಮಲ್ಲಿಕಾರ್ಜುನ್ ಅವರು, “ಸರ್, ನಮ್ಮ ತಂದೆ ಯವರ ನಿಧನದ ನಂತರ ನನಗೆ ಕೆಲಸದ ಒತ್ತಡ ಹೆಚ್ಚಿದೆ. ಹೀಗಾಗಿ ಮಂತ್ರಿಗಿರಿ ನಿಭಾಯಿಸು ವುದು ನನಗೆ ಕಷ್ಟವಾಗುತ್ತಿದೆ. ಅದ್ದರಿಂದ ನನ್ನ ರಾಜೀನಾಮೆ ತೆಗೆದುಕೊಳ್ಳಿ" ಅಂತ ಹೇಳಿದಾಗಲೇ ಸಿದ್ದರಾಮಯ್ಯ ಅವರಿಗೆ ವಿಷಯ ಕ್ಲಿಯರ್ ಅಗಿತ್ತು.

ಅರ್ಥಾತ್, ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅನ್ನು ತಮ್ಮ ಪುತ್ರನಿಗೆ ನೀಡಬೇಕು ಮತ್ತು ಕ್ಷೇತ್ರದ ಟಿಕೆಟ್ ಅನ್ನು ಮುಸ್ಲಿಮರಿಗೆ ನೀಡಬೇಕು ಅಂತ ಪಟ್ಟು ಹಿಡಿದಿದ್ದ ಎಮ್ಮೆಲ್ಸಿ ಅಬ್ದುಲ್ ಜಬ್ಬಾರ್ ಅವರನ್ನು ದೂರವಿಡಬೇಕು ಎಂಬುದು ಮಲ್ಲಿಕಾರ್ಜುನ್ ಅವರ ಪರೋಕ್ಷ ಬೇಡಿಕೆ ಯಾಗಿತ್ತು.

ಯಾವಾಗ ಇದು ಅರ್ಥವಾಯಿತೋ ಅಗ ಸಿದ್ದರಾಮಯ್ಯ ಅವರು, “ಅಯ್ಯೋ, ರಾಜೀನಾಮೆ ಎಲ್ಲ ಬೇಡ ಬಿಡಿ ಮಲ್ಲಿಕಾರ್ಜುನ್" ಅಂತ ಹೇಳಿ ಕಳಿಸಿದ್ದರು. ಯಾವಾಗ ಈ ಬೆಳವಣಿಗೆ ನಡೆಯಿತೋ, ಅವತ್ತೇ ಒಂದು ವಿಷಯ ಕ್ಲಿಯರ್ ಅಗಿತ್ತು. ಅದೆಂದರೆ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಅವರಿಗೆ ಪಕ್ಷದ ಟಿಕೆಟ್ ಕೊಡುವ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ಸಹಮತ ಇದೆ ಎಂಬುದು.

ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ಶಾಸಕರು ತೀರಿಕೊಂಡು ಉಪಚುನಾವಣೆ ನಡೆದಾಗಲೆಲ್ಲ ಆಯಾ ಶಾಸಕರ ಕುಟುಂಬದವರಿಗೇ ಟಿಕೆಟ್ ನೀಡುವುದು ಕಾಂಗ್ರೆಸ್‌ನ ಸಂಪ್ರದಾಯ. ಹೀಗಾಗಿ ಈ ಬಾರಿಯೂ ಶಾಮನೂರು ಕುಟುಂಬಕ್ಕೆ ಟಿಕೆಟ್ ಸಿಗುವುದು ನಿಶ್ಚಿತವಾಗಿತ್ತು. ಆದರೆ ಈ ಹಂತದಲ್ಲಿ ಫೀಲ್ಡಿಗಿಳಿದ ವಸತಿ ಸಚಿವ ಜಮೀರ್ ಅಹ್ಮದ್ ಅವರು ‘ರಪ ರಪ’ ಅಂತ ಸಿಕ್ಸರ್ ಬಾರಿಸತೊಡಗಿದ್ದಲ್ಲದೆ, “ಈ ಕ್ಷೇತ್ರದಲ್ಲಿ ಎಂಬತ್ಮೂರು ಸಾವಿರ ಮುಸ್ಲಿಮ ರಿದ್ದಾರೆ. ಅವರಿಂದಾಗಿಯೇ ಇಲ್ಲಿ ಕಾಂಗ್ರೆಸ್ ಗೆಲ್ಲುತ್ತಾ ಬಂದಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪನವರೇ ಪ್ರಾಮಿಸ್ಸು ಮಾಡಿದ್ದರು. ‘ಈ ಸಲ ನನಗೆ ಟಿಕೆಟ್, ಮುಂದಿನ ಸಲ ಮುಸ್ಲಿಮರಿಗೇ ಟಿಕೆಟ್’ ಎಂದಿದ್ದರು. ಹೀಗಾಗಿ ಈ ಸಲ ನಮ್ಮವರಿಗೇ ಟಿಕೆಟ್ ಸಿಗ್ಬೇಕು. ಇಲ್ಲ ಅಂದ್ರೆ ನಂಗೊತ್ತಿಲ್ಲ ಅಷ್ಟೇ" ಅಂತ ರಂಪ ಎಬ್ಬಿಸಿದರು.

ಯಾವಾಗ ಅವರು ರಂಪ ಎಬ್ಬಿಸಿದರೋ, ಆಗ ಕೇಸು ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ವರ್ಗಾವಣೆಯಾಯಿತು. ಹೀಗೆ ಕೇಸು ತಮ್ಮ ಬಳಿ ಬಂದಾಗ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, “ರೀ, ಜಮೀರ್ ಹೋಗ್ಲಿ ಬಿಡ್ರೀ. ಈ ಸಲ ಪಕ್ಷದ ಟಿಕೆಟ್ಟನ್ನು ಶಾಮನೂರು ಫ್ಯಾಮಿಲಿಯವರಿಗೇ ಕೊಡೋಣ. ಬೇಕಿದ್ರೆ ನಿಮ್ಮದೇನಾದ್ರೂ ಕಂಡೀಷನ್ ಇದ್ರೆ ಹೇಳಿ.

ಒಟ್ಟಿನಲ್ಲಿ ಸಮರ್ಥ್ ಅವರಿಗೆ ಟಿಕೆಟ್ ಕೊಡಬೇಕು ಮತ್ತು ಕ್ಷೇತ್ರದ ಮುಸ್ಲಿಂ ಮತದಾರ ರನ್ನು ವಿಶ್ವಾಸಕ್ಕೆ ಪಡೆದು ಸಮರ್ಥ್ ಅವರು ಗೆಲ್ಲಲು ನೀವು ಸಹಕಾರ ನೀಡಬೇಕು" ಅಂತ ಸುಪಾರಿ ಕೊಟ್ಟರು. ಯಾವಾಗ ಅವರು ಈ ಮಾತು ಹೇಳಿದರೋ, ಅಗ ತಮ್ಮ ಕಾಯಿನ್ ಉರುಳಿಸಿದ ಜಮೀರ್ ಅಹ್ಮದ್, “ಅಗ್ಲಿ ಸರ್, ಎಷ್ಟೇ ಅದರೂ ನಾನು ಪಕ್ಷದ ಶಿಸ್ತಿನ ಸಿಪಾಯಿ.

ಹೀಗಾಗಿ ಇವತ್ತು ನೀವು ಹೇಳಿದ್ದು ನನಗಿಷ್ಟವಿಲ್ಲವಾದರೂ ಸುಮ್ಮನೆ ಒಪ್ಪುತ್ತೇನೆ. ಹಾಗಂತ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮುಸ್ಲಿಮರಿಗೆ ಅನ್ಯಾಯವಾಗಬಾರದು. ಹೀಗಾಗಿ ಜೂನ್‌ನಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮುಸ್ಲಿಮರಿಗೆ ಒಂದು ಸೀಟು ಕೊಡಬೇಕು. ಅದೇ ರೀತಿ ವಿಧಾನಪರಿಷತ್ತಿನ ಹಲವು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮುಸ್ಲಿಮರಿಗೆ 2 ಸೀಟು ಕೊಡಬೇಕು" ಎಂದರು.

ಹೀಗೆ ಜಮೀರ್ ಅಹ್ಮದ್ ಹಾಕಿದ ಕರಾರನ್ನು ಸುರ್ಜೇವಾಲಾ ಒಪ್ಪಿದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಮರ್ಥ್ ಪಾಲಾಯಿತು. ಆದರೆ ಟಿಕೆಟ್ ಅವರ ಪಾಲಾದರೂ ಅದಕ್ಕಿಂತ ದೊಡ್ಡ ಬೇಡಿಕೆ ಇಟ್ಟು ಗಿಟ್ಟಿಸಿಕೊಂಡ ಜಮೀರ್ ರಾಜಕಾರಣದಲ್ಲಿ ತಾವು ‘ಪಂಟರ್’ ಅಗಿರುವುದನ್ನು ಸಾಬೀತುಪಡಿಸಿದರು.

ಅಂದ ಹಾಗೆ, ದಾವಣಗೆರೆಯ ಕಣದಲ್ಲಿ ನಾಳೆ ಮುಸ್ಲಿಮರು ಸಮರ್ಥ್ ಅವರಿಗೆ ಬೆಂಬಲ ಕೊಡುತ್ತಾರೋ ಅಥವಾ ಆ ಮತಗಳು ವಿಭಜನೆಯಾಗುತ್ತವೋ? ಅದು ಮುಂದಿನ ವಿಷಯ. ಆದರೆ ಸಮಯ ಬಂದಾಗ ಎದುರಿಗಿದ್ದವರ ಮೂಗು ಹಿಡಿದರೆ ಬಾಯಿ ಬಿಚ್ಚಿಕೊಳ್ಳುತ್ತದೆ ಎಂಬುದನ್ನರಿತವರು ರಾಜಕಾರಣದ ಪಟ್ಟುಗಳನ್ನು ಅರಿತಿದ್ದಾರೆ ಎಂದೇ ಅರ್ಥ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author