ಒಂದೊಳ್ಳೆ ಮಾತು
ಅಲಬಾಮಾದ ಒಬ್ಬ ಕಾಲೇಜು ವಿದ್ಯಾರ್ಥಿ ತನ್ನ ಕೆಲಸದ ಮೊದಲ ದಿನ ಸರಿಯಾದ ಸಮಯಕ್ಕೆ ತಲುಪಲು ರಾತ್ರಿಯಿಡೀ 20 ಮೈಲಿ ನಡೆದು ಹೋಗಿದ್ದ. ಇದನ್ನು ತಿಳಿದ ಅವನ ಹೊಸ ಬಾಸ್ ಅವನಿಗೆ ಕಾರು ಕೊಟ್ಟು ಧನ್ಯವಾದ ಹೇಳಿದರು. ಹಿಂದಿನ ರಾತ್ರಿ ಅವನ ವಾಹನ ಕೆಟ್ಟಿದ್ದರಿಂದ, ಸಮಯಕ್ಕೆ ಸರಿಯಾಗಿ ಹೋಗಲು ಬಸ್ ಗಳು ಅಥವಾ ಗೊತ್ತಿಲ್ಲದ ಯಾರನ್ನೂ ಕೇಳುವುದು ಸರಿ ಹೋಗುವುದಿಲ್ಲ ಎಂಬುದು ಆ ವಿದ್ಯಾರ್ಥಿಗೆ ಗೊತ್ತಾಯಿತು.
ಮೊದಲ ದಿನದಂದೇ ಕಾರಣಗಳನ್ನು ಹೇಳಿ ತಡವಾಗಿ ಹೋಗುವುದು ಕೂಡ ಸರಿಹೋಗುವುದಿಲ್ಲ ಎಂದು ಮಧ್ಯರಾತ್ರಿಗೇ ಅಲಾರ್ಮ್ ಇಟ್ಟುಕೊಂಡು, ಕೆಲಸದ ಬಟ್ಟೆಗಳನ್ನು ಧರಿಸಿ, ತನ್ನ ಫೋನ್‌ನ ಬೆಳಕಿನಲ್ಲಿ ನಿಶ್ಶಬ್ದ ರಸ್ತೆಗಳಲ್ಲಿ ನಡೆಯಲು ಪ್ರಾರಂಭಿಸಿದ ಆ ಹುಡುಗ.
ಬೆಳಗಿನ ಜಾವ ಅವನನ್ನು ಕಂಡ ಪೊಲೀಸ್ ಅಧಿಕಾರಿಗಳು ಇಷ್ಟು ದೂರ ಪಟ್ಟಣದಿಂದ ಹೊರಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ಕಾರಣವನ್ನು ಕೇಳಿ ಆಶ್ಚರ್ಯಪಟ್ಟರು. ಅವನ ಕಥೆ ನಿಜ ಎಂದು ಪರಿಶೀಲಿಸಿದ ನಂತರ, ಅವರು ಅವನನ್ನು ಸ್ವಲ್ಪ ದೂರ ಕಾರಿನಲ್ಲಿ ಕರೆದೊಯ್ದರು, ಉಪಾಹಾರ ಕ್ಕೂ ಆಹ್ವಾನಿಸಿದರು.
ಇದನ್ನೂ ಓದಿ: Roopa Gururaj Column: ಅನೇಕ ಸದ್ಗುಣಗಳಿದ್ದೂ ಹತನಾದ ರಾವಣ
ನಂತರ, ಸಾಮಾನ್ಯ ನವೋದ್ಯೋಗಿಯಂತೆ ಉದ್ಯೋಗ ಸ್ಥಳಕ್ಕೆ ತಲುಪುವಂತೆ ಸುರಕ್ಷಿತ ಸ್ಥಳದಲ್ಲಿ ಅವನನ್ನು ಕರೆತಂದು ಬಿಟ್ಟರು. ಆದರೆ ಅದು ಹೇಗೋ ಅವನ ಮೇಲಧಿಕಾರಿಗೆ ಈ ವಿದ್ಯಾರ್ಥಿಯು ಮೊದಲ ದಿನ ಕಚೇರಿಗೆ ಹೇಗೆ ಕಷ್ಟಪಟ್ಟು ಬಂದ ಎಂಬುದು ಇತರರ ಮೂಲಕ ತಿಳಿಯಿತು. ಅವನು ಎಷ್ಟು ದೂರ ನಡೆದಿದ್ದಾನೆ ಮತ್ತು ಸಮಯಕ್ಕೆ ತಲುಪಲು ಎಷ್ಟು ದೃಢಸಂಕಲ್ಪದಿಂದ ನಿರ್ಧಾರ ಮಾಡಿ ನಡೆದಿದ್ದಾನೆ ಎನ್ನುವ ಕಥೆ ಕಂಪನಿಯೊಳಗೆ ವೇಗವಾಗಿ ಹರಡಿತು.
ಸಿಬ್ಬಂದಿ ಸಭೆಯಲ್ಲಿ ಅವನನ್ನು ಹೊಗಳುವುದಷ್ಟೇ ಅಲ್ಲ, ಅವನ ಈ ಪ್ರಾಮಾಣಿಕ ಪ್ರಯತ್ನಕ್ಕೆ ಶ್ಲಾಘನೆಯನ್ನು ತೋರಿಸಲು ಕಂಪನಿಯ ಕಾರೊಂದರ ಕೀಗಳನ್ನು ಅವನಿಗೆ ಹಸ್ತಾಂತರಿಸಲು ಬಾಸ್ ನಿರ್ಧರಿಸಿದರು.
ವಿದ್ಯಾರ್ಥಿಯ ಆ ನಡೆಯು ಸಮಯಪಾಲನೆಗಿರುವ ಮಹತ್ವವನ್ನು ಮಾತ್ರವಲ್ಲದೆ, ಅನೇಕರು ನಂಬಿಕೊಂಡು ಬದುಕುವ, ಆದರೆ ವಿರಳವಾಗಿ ಪ್ರಶಂಸಿಸಲ್ಪಡುವಂಥ ಶಿಸ್ತು ಮತ್ತು ಸಾತ್ವಿಕ ಹಠದ ಗುಣವನ್ನು ತೋರಿಸಿತು. ಈ ರೀತಿಯ ನಿದರ್ಶನಗಳನ್ನು ಅಪರೂಪಕ್ಕೆ ಅಲ್ಲಲ್ಲಿ ನಾವು ವೃತ್ತಪತ್ರಿಕೆ ಗಳಲ್ಲಿ ಅಥವಾ ಬೇರೆ ಮಾಧ್ಯಮಗಳಲ್ಲಿ ನೋಡುತ್ತಾ ಇರುತ್ತೇವೆ.
ಕೆಲವೊಮ್ಮೆ ಸಾಮಾನ್ಯರು ತೆಗೆದುಕೊಳ್ಳುವ ಅಸಾಮಾನ್ಯ ನಿರ್ಧಾರ ಅವರನ್ನು ಈ ರೀತಿ ಬೆಳಕಿಗೆ ತರುತ್ತದೆ. ಸಾಮಾನ್ಯವಾಗಿ ಯಾರೇ ಆದರೂ ಇಂಥ ಸಮಯದಲ್ಲಿ ಯಾರದ್ದಾದರೂ ಗಾಡಿಯನ್ನು ಒಂದು ದಿನದ ಮಟ್ಟಿಗೆ ಕೇಳಿ ತೆಗೆದುಕೊಂಡು ಸಮಯಕ್ಕೆ ತಲುಪುವ ಪ್ರಯತ್ನ ಮಾಡುತ್ತಾರೆ. ಆದರೆ ಈ ಹುಡುಗನಿಗೆ ಅವನ ಹಳ್ಳಿಯಲ್ಲಿ ಅಂಥ ಸಹಾಯ ಮಾಡುವ ಜನರು ಇದ್ದರೋ ಇಲ್ಲವೋ ಅದು ಗೊತ್ತಿಲ್ಲ.
ಅದೇನೇ ಆದರೂ ಮೊದಲ ದಿನ ಸಮಯಕ್ಕೆ ತಲುಪಬೇಕು ಎನ್ನುವ ಅವನ ನಿಲುವು ಮಾತ್ರ ಇಲ್ಲಿ ಎದ್ದು ಕಾಣುತ್ತದೆ. ಯುವ ಸಮುದಾಯದಲ್ಲಿ ಈ ರೀತಿಯ ಶಿಸ್ತು, ಕೆಲಸದ ಬಗ್ಗೆ ಗೌರವ ಮತ್ತು ಸಮಯ ಪರಿಪಾಲನೆಯ ಚಿತ್ತಸ್ಥಿತಿ ಇದ್ದಾಗ ಅವರು ಜೀವನದಲ್ಲಿ ಬಹಳ ಮುಂದೆ ಹೋಗಲು ಸಾಧ್ಯ.
ಇದಕ್ಕಿಂತ ವಿಶಿಷ್ಟವಾಗಿ ಕಾಡುವುದು ಅವನ ಈ ಪ್ರಾಮಾಣಿಕ ಪ್ರಯತ್ನವನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಕಂಪನಿಯ ಕಾರಿನ ಕೀಯನ್ನು ಅವನಿಗೆ ಹಸ್ತಾಂತರಿಸಿದ ಅವನ ಮೇಲಧಿಕಾರಿ. ಒಬ್ಬರಿಗೆ ಈ ರೀತಿಯ ಪ್ರೋತ್ಸಾಹ ಸಿಕ್ಕಾಗ ಕಂಪನಿಯಲ್ಲಿರುವ ನೂರು ಜನರು ಸಮಯ ಪರಿಪಾಲ ನೆ, ಪ್ರಾಮಾಣಿಕತೆಯಂಥ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಅದು ಪ್ರೇರಣೆಯನ್ನು ನೀಡುತ್ತದೆ.
ಕಾರಣವಿಲ್ಲದೆ ಸಬೂಬುಗಳನ್ನು ಹೇಳುತ್ತಾ ಕೆಲಸದಿಂದ ತಪ್ಪಿಸಿಕೊಳ್ಳುವ ಜನರ ಮಧ್ಯೆ, ಇಂಥ ಒಂದು ಪ್ರಾಮಾಣಿಕ ಪ್ರಯತ್ನಕ್ಕೆ ಮತ್ತು ಯೋಜನಾ ಧಾಟಿಗೆ ಜನಮನ್ನಣೆ ಸಿಕ್ಕಾಗ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ. ಆದ್ದರಿಂದಲೇ ನಮ್ಮ ಸುತ್ತಲಿರುವವರಲ್ಲಿ ಒಂದು ಒಳ್ಳೆಯ ಗುಣ ವನ್ನು ಕಂಡಾಗ ಅದು ಎಷ್ಟೇ ಚಿಕ್ಕದಾಗಿರಲಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸಮಾಜದ ಭಾಗವಾಗಿ ನಾವು ಮಾಡಬೇಕು. ಆಗ ಮಾತ್ರ ಮನುಷ್ಯರಾಗಿ ನಾವು ಬದುಕುತ್ತಿದ್ದೇವೆ ಎಂದು ಅರ್ಥ.