ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lokesh Kayarga Column: ಕಸ್ತೂರಿರಂಗನ್‌ ವರದಿ ತಿರಸ್ಕಾರ ಪರಿಹಾರವಲ್ಲ

ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪಶ್ಚಿಮ ಘಟ್ಟಗಳ ರಕ್ಷಣಾ ಅಧಿಸೂಚನೆ ಯನ್ನು ಅಂತಿಮಗೊಳಿಸಲು ಕೇಂದ್ರ ಸರಕಾರಕ್ಕೆ ನಿರಂತರವಾಗಿ ಕಟ್ಟು ನಿಟ್ಟಿನ ಗಡುವು ನೀಡುತ್ತಿವೆ. ಕಾನೂನಿನ ಪ್ರಕಾರ, ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿದ ನಂತರ 60 ದಿನಗಳ ಕಾಲಾವಕಾಶ ನೀಡುತ್ತದೆ.

ಲೋಕಮತ

ಕೇಂದ್ರ ಪರಿಸರ ಸಚಿವಾಲಯವು ಡಾ.ಕೆ.ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಏಳನೇ ಕರಡು ಅDiಸೂಚನೆ ಹೊರಡಿಸುತ್ತಿದ್ದಂತೆ, ಕರ್ನಾಟಕದಲ್ಲಿ ಮತ್ತದೇ ಹಳೆಯ ಆಟ ಶುರುವಾಗಿದೆ. ವಿಧಾನಮಂಡಲದಲ್ಲಿ ಚರ್ಚೆ, ಸಚಿವ ಸಂಪುಟದ ಸಭೆಗಳು ಮತ್ತು ಅಂತಿಮವಾಗಿ ‘ಈ ವರದಿಯನ್ನು ನಾವು ಒಪ್ಪುವುದಿಲ್ಲ’ ಎಂಬ ಸರ್ವಾನುಮತದ ತಿರಸ್ಕಾರ ನಿರ್ಣಯ! ಕಳೆದ ಒಂದು ದಶಕದಲ್ಲಿ ರಾಜ್ಯವನ್ನಾಳಿದ ಎಲ್ಲ ಸರಕಾರಗಳು ಪಕ್ಷಭೇದವಿಲ್ಲದೆ ಮಾಡುತ್ತಾ ಬಂದಿರುವ ಕೆಲಸವಿದು.

ಆದರೆ, ಮೂಲಭೂತವಾಗಿ ನಾವು ಕೇಳಿಕೊಳ್ಳಬೇಕಾದ ಅತಿ ಮುಖ್ಯ ಪ್ರಶ್ನೆಯೆಂದರೆ ಕೇವಲ ವರದಿ ಯನ್ನು ಸಾರಾಸಗಟಾಗಿ ತಿರಸ್ಕರಿಸುವುದರಿಂದ ಸಮಸ್ಯೆ ಬಗೆಹರಿಯುತ್ತದೆಯೇ? ವಾಸ್ತವವಾಗಿ, ಈ ಬಗೆಯ ಸಾರಾಸಗಟು ತಿರಸ್ಕಾರವೇ ಇಂದು ಮಲೆನಾಡು ಮತ್ತು ಕರಾವಳಿಯ ರೈತರನ್ನು ಮತ್ತಷ್ಟು ಅತಂತ್ರ ಸ್ಥಿತಿಗೆ ತಳ್ಳಿದೆ. ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಳ್ಳಲಾಗದು ಎಂದು ನಮ್ಮ ಮಂತ್ರಿ ಗಳು ಬಡಬಡಿಸಿದ ಮಾತ್ರಕ್ಕೆ, ಸದನದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿ ಕಳುಹಿಸಿದ ತಕ್ಷಣ ಈ ವರದಿಯು ಅಳಿಸಿ ಹೋಗುವುದಿಲ್ಲ, ಬದಲಾಗುವುದೂ ಇಲ್ಲ.

ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪಶ್ಚಿಮ ಘಟ್ಟಗಳ ರಕ್ಷಣಾ ಅಧಿಸೂಚನೆ ಯನ್ನು ಅಂತಿಮಗೊಳಿಸಲು ಕೇಂದ್ರ ಸರಕಾರಕ್ಕೆ ನಿರಂತರವಾಗಿ ಕಟ್ಟು ನಿಟ್ಟಿನ ಗಡುವು ನೀಡುತ್ತಿವೆ. ಕಾನೂನಿನ ಪ್ರಕಾರ, ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿದ ನಂತರ 60 ದಿನಗಳ ಕಾಲಾವಕಾಶ ನೀಡುತ್ತದೆ. ಈ ಅವಧಿಯಲ್ಲಿ ರಾಜ್ಯಗಳು ವೈಜ್ಞಾನಿಕ ದತ್ತಾಂಶಗಳೊಂದಿಗೆ ಆಕ್ಷೇಪಣೆ ಸಲ್ಲಿಸದಿದ್ದರೆ, ನ್ಯಾಯಾಲಯದ ಆದೇಶದಂತೆ ಏಕಪಕ್ಷೀಯವಾಗಿ ಅಧಿಸೂಚನೆಯನ್ನು ಅಂತಿಮ ಗೊಳಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರಕಾರಕ್ಕಿದೆ.

ಇದನ್ನೂ ಓದಿ: Lokesh Kayarga Column: ಇನ್ನಷ್ಟು ವೀರಪ್ಪನ್‌ ಹುಟ್ಟಿಕೊಳ್ಳದಿರಲಿ

7ನೇ ಕರಡು ಅಧಿಸೂಚನೆಯನ್ನು 2026ರ ಜುಲೈ 27ರಂದು ಭಾರತ ಸರಕಾರದ ಅಧಿಕೃತ ಗೆಜೆಟ್‌ ನಲ್ಲಿ ಪ್ರಕಟಿಸಲಾಗಿದೆ. ಅಂದರೆ 2026ರ ಸೆಪ್ಟೆಂಬರ್ 25ರೊಳಗೆ ರಾಜ್ಯ ಸರಕಾರ ತನ್ನ ಆಕ್ಷೇಪಣೆ ಗಳನ್ನು ದಾಖಲಿಸಬೇಕಿದೆ. ಕಾನೂನಿನ ದೃಷ್ಟಿಯಿಂದ ಈ ಆಕ್ಷೇಪ ಕೇವಲ ರಾಜಕೀಯ ನಿರ್ಣಯ ವಾಗಿರದೆ, 10 ಜಿಲ್ಲೆಗಳ 1449 ಗ್ರಾಮಗಳ ವಾಸ್ತವ ಗಡಿ ಗುರುತಿಸುವಿಕೆ (GIS mapping ) ಮೂಲಕ ವೈಜ್ಞಾನಿಕ ದತ್ತಾಂಶಗಳ ಸಮೇತ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಸಲ್ಲಿಸುವುದು ಅತ್ಯಂತ ಮುಖ್ಯವಾಗಿದೆ.

ನಮ್ಮ ಸರಕಾರದ ಸರಳ ‘ತಿರಸ್ಕಾರ ನಿರ್ಣಯ’ವು ನ್ಯಾಯಾಲಯದ ಮುಂದೆ ಕಾನೂನಾತ್ಮಕ ಅಸ್ತ್ರವಾಗಲು ಸಾಧ್ಯವೇ ಇಲ್ಲ. ಪಶ್ಚಿಮ ಘಟ್ಟಗಳ ರಕ್ಷಣೆಯ ಚರ್ಚೆ ಇಂದು ನಿನ್ನೆಯದಲ್ಲ. 1986ರ ಪರಿಸರ ಸಂರಕ್ಷಣಾ ಕಾಯ್ದೆ ಬಂದ ನಂತರ ವಿಶ್ವದ ಎಂಟು ಅತ್ಯಂತ ಮಹತ್ವದ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಈ ಸೂಕ್ಷ್ಮ ಪರಿಸರವನ್ನು ಉಳಿಸಿಕೊಳ್ಳಲು ಹಲವು ಸಮಿತಿಗಳು ರಚನೆ ಯಾದವು. ಈ ನಡುವೆ ಅವೈeನಿಕ ಗಣಿಗಾರಿಕೆ, ಬೃಹತ್ ಅಣೆಕಟ್ಟುಗಳು, ಅವ್ಯಾಹತವಾಗಿ ಬೆಳೆದ ರೆಸಾರ್ಟ್‌ಗಳು ಮತ್ತು ಅರಣ್ಯ ಒತ್ತುವರಿಯ ಪರಿಣಾಮವಾಗಿ ಪ್ರತಿ ಮುಂಗಾರಿನಲ್ಲೂ ಘಟ್ಟಗಳು ಕುಸಿಯತೊಡಗಿದವು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 2010ರಲ್ಲಿ ಪ್ರೊ. ಮಾಧವ ಗಾಡ್ಗೀಳ್ ಸಮಿತಿಯನ್ನು ನೇಮಿಸಿತು. ಗಾಡ್ಗೀಳ್ ಸಮಿತಿಯು ಇಡೀ ಪಶ್ಚಿಮ ಘಟ್ಟದ ಸುಮಾರು 1.29 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಯನ್ನು (ಶೇ. 100) ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಕಟ್ಟು ನಿಟ್ಟಿನ ನಿಯಮಗಳನ್ನು ಶಿಫಾರಸು ಮಾಡಿತ್ತು. ಆ ವರದಿಯಲ್ಲಿದ್ದ ಕಠಿಣ ನಿರ್ಬಂಧಗಳಿಗೆ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾದಾಗ, ಪರಿಸರ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಇಸ್ರೋ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚನೆಯಾಯಿತು.

71_ಋ

ಕಸ್ತೂರಿ ರಂಗನ್ ಸಮಿತಿಯು ಪಶ್ಚಿಮ ಘಟ್ಟ ಪ್ರದೇಶದ ಶೇಕಡಾ 37ರಷ್ಟು ಭಾಗವನ್ನು ಮಾತ್ರ (ಅಂದಾಜು 56,825 ಚ.ಕಿ.ಮೀ) ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಿದೆ. ಇದರಲ್ಲಿ ಕರ್ನಾಟಕದ 10 ಜಿಲ್ಲೆಗಳ 1449ಕ್ಕೂ ಹೆಚ್ಚು ಗ್ರಾಮಗಳು ಹಾಗೂ 20,668 ಚದರ ಕಿಲೋಮೀಟರ್ ಪ್ರದೇಶ ಒಳಪಟ್ಟಿದೆ.

ಆತಂಕಕ್ಕೆ ಕಾರಣ

ಕಸ್ತೂರಿ ರಂಗನ್ ವರದಿಯ ಮೂಲ ಸಮಸ್ಯೆಯಿರುವುದು ಅದರ ಅಧ್ಯಯನ ವಿಧಾನದಲ್ಲಿ. ಸಮಿತಿಯು ನೆಲಮಟ್ಟದ ವಾಸ್ತವ ಸಮೀಕ್ಷೆ ನಡೆಸುವ ಬದಲು, ಉಪಗ್ರಹ ಆಧಾರಿತ ಚಿತ್ರಗಳನ್ನು ನೆಚ್ಚಿಕೊಂಡಿತು. ಪರಿಣಾಮವಾಗಿ, ಉಪಗ್ರಹ ಕಣ್ಣಿಗೆ ಹಸಿರಾಗಿ ಕಂಡ ತಲೆತಲಾಂತರ ಗಳ ಕಾಫಿ-ಅಡಿಕೆ ತೋಟಗಳು, ಹಳ್ಳಿಗಳು ಮತ್ತು ಕೃಷಿ ಭೂಮಿಯೆಲ್ಲವೂ ಕಡತದ ಮೇಲೆ ಪರಿಸರ ಸೂಕ್ಷ್ಮ ಅರಣ್ಯಗಳಾಗಿ ಬದಲಾದವು. ಈ ತಾಂತ್ರಿಕ ಪ್ರಮಾದವೇ ಇವತ್ತು ಮಲೆನಾಡಿನ ರೈತರ ಆತಂಕಕ್ಕೆ ಮುಖ್ಯ ಕಾರಣ. ಪರಿಸರ ಸೂಕ್ಷ್ಮ ವಲಯದ ನಿಯಮಾವಳಿಗಳ ಪ್ರಕಾರ, ಗ್ರಾಮಗಳಲ್ಲಿ ರಸ್ತೆ ನಿರ್ಮಾಣ, ಮಳೆಗಾಲದಲ್ಲಿ ಕುಸಿದುಬಿದ್ದ ಕಿರು ಸೇತುವೆಗಳ ಪುನರ್ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಅಥವಾ ವಿದ್ಯುತ್ ಮಾರ್ಗ ಎಳೆಯುವಂತಹ ಸಣ್ಣಪುಟ್ಟ ಕೆಲಸ ಗಳಿಗೂ ಅರಣ್ಯ ಇಲಾಖೆ ಹಾಗೂ ಕೇಂದ್ರ ಪರಿಸರ ಸಚಿವಾಲಯದ ಕಠಿಣ ಪರವಾನಗಿಗಳು ಬೇಕಾಗುತ್ತವೆ.

ಮಲೆನಾಡಿನ ಕಾಡಂಚಿನಲ್ಲಿ ಒಂದೆರಡು ಎಕರೆ ಜಾಗದಲ್ಲಿ ತಲೆತಲಾಂತರದಿಂದ ಸಾಗುವಳಿ ಮಾಡುತ್ತಿರುವ ಸಣ್ಣ ರೈತರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯುವ ಪ್ರಕ್ರಿಯೆ ಮತ್ತಷ್ಟು ಕ್ಲಿಷ್ಟಕರವಾಗುತ್ತದೆ. ಪರಿಸರ ಸೂಕ್ಷ್ಮ ವಲಯದ ಗಡಿಯಿಂದ ನಿರ್ದಿಷ್ಟ ವ್ಯಾಪ್ತಿಯವರೆಗೆ ನಿರ್ಬಂಧಗಳು ಅನ್ವಯಿಸುವುದರಿಂದ ಊರಿನ ಒಳಗಿನ ಕೃಷಿ ಆಧಾರಿತ ಕಿರು ಸಂಸ್ಕರಣಾ ಘಟಕಗಳಿಗೂ ಅಡೆತಡೆಗಳು ಬರಬಹುದು.

ಅರಣ್ಯ ಮತ್ತು ಕಂದಾಯ ಇಲಾಖೆಗಳ ವ್ಯಾಪ್ತಿ ಗೊಂದಲಗಳಿಂದಾಗಿ ಸಣ್ಣಪುಟ್ಟ ಮನೆ ದುರಸ್ತಿ ಅಥವಾ ತೋಟದ ಬೇಲಿ ಹಾಕುವಂತಹ ದೈನಂದಿನ ಚಟುವಟಿಕೆಗಳಿಗೂ ಸ್ಥಳೀಯರು ಅಧಿಕಾರಿಗಳ ಮರ್ಜಿಯನ್ನು ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಆದರೆ, ಈ ನೈಜ ಆತಂಕಗಳ ಬೆನ್ನ ರಾಜಕೀಯ ಪಕ್ಷಗಳು, ರಿಯಲ್ ಎಸ್ಟೇಟ್ ಲಾಬಿ ಮತ್ತು ಗಣಿ ಮಾಫಿಯಾ ಹರಡಿರುವ ಅಪಪ್ರಚಾರಗಳು ಮುಗ್ಧ ಜನರಲ್ಲಿ ಇನ್ನಿಲ್ಲದ ಭಯ ಹುಟ್ಟಿಸಿವೆ.

ಕಸ್ತೂರಿ ರಂಗನ್ ವರದಿಯಲ್ಲಿ ಎಲ್ಲಿಯೂ ಜನವಸತಿಗಳನ್ನು ಸ್ಥಳಾಂತರಿಸುವ ಅಥವಾ ಜನರನ್ನು ಒಕ್ಕಲೆಬ್ಬಿಸುವ ಪ್ರಸ್ತಾಪವಿಲ್ಲ. ಸಾಂಪ್ರದಾಯಿಕ ಕೃಷಿ, ತೋಟಗಾರಿಕೆ ಅಥವಾ ಪ್ಲಾಂಟೇಶನ್ ಚಟುವಟಿಕೆ ಗಳಿಗೆ ಯಾವುದೇ ನಿರ್ಬಂಧವಿಲ್ಲ. ಬೆಳೆ ಮಾರಾಟಕ್ಕೆ ಅಥವಾ ಜಮೀನು ಪರಭಾರೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ರೈತರು ಬಳಸುವ ಸಾಮಾನ್ಯ ಕೃಷಿ ಔಷಧಗಳು, ಶಿಲೀಂಧ್ರ ನಾಶಕ ಅಥವಾ ಗೊಬ್ಬರಗಳ ಬಳಕೆಯನ್ನು ವರದಿ ನಿರ್ಬಂಧಿಸುವುದಿಲ್ಲ.

20000 ಚದರ ಮೀಟರ್ (ಸುಮಾರು 2.15 ಲಕ್ಷ ಚದರ ಅಡಿ) ವರೆಗಿನ ಕಟ್ಟಡ ನಿರ್ಮಾಣಕ್ಕೆ ಯಾವುದೇ ಹೊಸ ನಿರ್ಬಂಧವಿಲ್ಲ. ಸಣ್ಣ ರೈತರ ಮನೆ ನಿರ್ಮಾಣಕ್ಕೆ ಯಾವುದೇ ಅಡ್ಡಿಯಿಲ್ಲ. ವರದಿಯ ಮೂಲ ಗುರಿ ಇರುವುದು ಕೆಂಪು ಪಟ್ಟಿಯ ಮಾಲಿನ್ಯಕಾರಕ ಕೈಗಾರಿಕೆಗಳು, ಬೃಹತ್ ಗಣಿಗಾರಿಕೆ, ಮರಳು ದಂಧೆ ಮತ್ತು ದೈತ್ಯ ಟೌನ್‌ಶಿಪ್‌ಗಳ ನಿಯಂತ್ರಣದ ಮೇಲೆ.

ಕೇರಳದ ನಡೆ ಮಾದರಿ

ಇಲ್ಲಿ ನೆರೆಯ ಕೇರಳ ರಾಜ್ಯದ ನಡೆಯನ್ನು ಕರ್ನಾಟಕ ಗಮನಿಸಬೇಕಿದೆ. ಕೇರಳವು ವರದಿಯನ್ನು ಕೇವಲ ರಾಜಕೀಯವಾಗಿ ಧಿಕ್ಕರಿಸಿ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಬದಲಿಗೆ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಮೂಲಕ ಜಂಟಿ ಸಮೀಕ್ಷೆ ನಡೆಸಿ, ಜನವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಯನ್ನು ನಕ್ಷೆಯಿಂದ ಪ್ರತ್ಯೇಕಿಸಿತು. ಭೌತಿಕ ಗಡಿಗಳನ್ನು ಸ್ಪಷ್ಟಪಡಿಸಿ ಕೇಂದ್ರಕ್ಕೆ ಹೊಸ ವೈಜ್ಞಾನಿಕ ಪ್ರಸ್ತಾವನೆ ಸಲ್ಲಿಸಿ, ಬಫರ್ ವಲಯ ವನ್ನು ಶೂನ್ಯಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾ ಯಿತು. ಕೇಂದ್ರ ಸರಕಾರದ ಆರನೇ ಅಧಿಸೂಚನೆ ಹೊರ ಬಿದ್ದ ಕೂಡಲೇ ಕೇರಳ ಸರಕಾರ ಡಾ. ವಿ.ಎಸ್. ವಿಜಯನ್ ಮತ್ತು ನಂತರ ಜಯಕುಮಾರ್ ಸಮಿತಿಗಳನ್ನು ರಚಿಸಿ, ಕಂದಾಯ, ಅರಣ್ಯ ಮತ್ತು ಸ್ಥಳೀಯ ಪಂಚಾಯತ್ ಅಧಿಕಾರಿಗಳ ಮೂಲಕ ಪ್ರತಿಯೊಂದು ಸರ್ವೆ ನಂಬರ್ ನ ಭೌತಿಕ ಪರಿಶೀಲನೆ ನಡೆಸಿತು.

ಉಪಗ್ರಹ ನಕ್ಷೆಯಲ್ಲಿದ್ದ ಕೃಷಿ ಭೂಮಿ, ಪ್ಲಾಂಟೇಶನ್‌ಗಳು ಹಾಗೂ ಹಳ್ಳಿಗಳನ್ನು ಗುರುತಿಸಿ, ಅವನ್ನು ಪರಿಸರ ಸೂಕ್ಷ್ಮ ನಕ್ಷೆಯಿಂದ ಪ್ರತ್ಯೇಕಿಸಿತು. ಕೇವಲ ನೈಜ ಅರಣ್ಯವನ್ನು ಮಾತ್ರ ಪರಿಸರ ಸೂಕ್ಷ್ಮ ವಲಯವೆಂದು ಮರುವರ್ಗೀಕರಿಸಿತು. ಅಂತಿಮವಾಗಿ ವೈಜ್ಞಾನಿಕ ದತ್ತಾಂಶಗಳೊಂದಿಗೆ ಕೇಂದ್ರದ ಮೇಲೆ ಒತ್ತಡ ಹೇರುವ ಮೂಲಕ ವಸತಿ ಮತ್ತು ಕೃಷಿ ಭೂಮಿಯ ಗಡಿಯಲ್ಲಿ ಪರಿಸರ ಸೂಕ್ಷ್ಮ ವಲಯದ ಬ-ರ್ ವ್ಯಾಪ್ತಿ ಯನ್ನು ಶೂನ್ಯ ಮೀಟರ್ ಗಿಳಿಸುವಲ್ಲಿ ಯಶಸ್ವಿಯಾಯಿತು.

ಜಂಟಿ ಸರ್ವೇ ಅಗತ್ಯ ಕರ್ನಾಟಕ ಸರಕಾರವು 2014ರಿಂದಲೂ ‘ನಾವು ವರದಿಯನ್ನು ಒಪ್ಪುವುದಿಲ್ಲ’ ಎಂಬ ಸಿದ್ಧ ನಿರ್ಣಯಗಳನ್ನು ಹೇಳುತ್ತಾ ಕಾಲಹರಣ ಮಾಡಿಕೊಂಡು ಬಂದಿದೆ. ಕೇಂದ್ರವು ೭ನೇ ಕರಡು ಹೊರಡಿಸಿರುವ ಈ ಸಂದರ್ಭದಲ್ಲಿ ಮತ್ತು ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಸೂಚಿಸುತ್ತಿರುವಾಗ, ಕೇವಲ ತಿರಸ್ಕಾರದ ಭಾಷಣಗಳು ಮತ್ತು ನಿರ್ಣಯಗಳು ರಾಜ್ಯದ ಜನರ ಹಿತ ಕಾಪಾಡಲಾರವು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ತಕ್ಷಣವೇ ರಚನಾತ್ಮಕ ಹೆಜ್ಜೆಗಳನ್ನು ಇಡಬೇಕಿದೆ.

ನಮ್ಮ ಅರಣ್ಯ ಸಚಿವರು ಮಲೆನಾಡು ಭಾಗದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಮೂಲಕ ಜಂಟಿ ಸರ್ವೆ ನಡೆಸುವ ಹೇಳಿಕೆಯನ್ನು ಆಗಾಗ ನೀಡುತ್ತಲೇ ಬಂದಿದ್ದಾರೆ. ಆದರೆ ಎಲ್ಲೂ ಇದು ಪೂರ್ತಿಯಾಗಿ ಕಾರ‍್ಯರೂಪಕ್ಕೆ ಬಂದಿಲ್ಲ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳ 1449 ಗ್ರಾಮಗಳಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ, ಜನವಸತಿ, ಕೃಷಿ ಜಮೀನು ಮತ್ತು ಸರಕಾರಿ ಗೋಮಾಳಗಳನ್ನು ಸ್ಪಷ್ಟವಾಗಿ ಗುರುತಿಸಿ ಪ್ರತ್ಯೇಕ ನಕ್ಷೆಯನ್ನು ತಕ್ಷಣವೇ ಸಿದ್ಧಪಡಿಸಬೇಕು.

ವರದಿಯನ್ನು ತಿರಸ್ಕರಿಸುವ ಬದಲು, ಕಸ್ತೂರಿ ರಂಗನ್ ವರದಿ ಸೂಚಿಸಿದ 20668 ಚ.ಕಿ.ಮೀ ಪೈಕಿ ನೈಜ ಅರಣ್ಯವಿರುವ ಇಂತಿಷ್ಟು ಭಾಗವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶವೆಂದು ಒಪ್ಪಿಕೊಳ್ಳುವ ನಿಖರ ಜಿಐಎಸ್ ನಕ್ಷೆಯೊಂದಿಗೆ ಕೇಂದ್ರಕ್ಕೆ ತಿದ್ದುಪಡಿ ಪ್ರಸ್ತಾವನೆ ಸಲ್ಲಿಸಬೇಕು.

ಉಳಿದ ಕೃಷಿ, ಜನವಸತಿ ಭಾಗಗಳನ್ನು ಕೈಬಿಡಿ ಎಂಬ ತಿದ್ದುಪಡಿ ವರದಿಯನ್ನು ಕಾಲಮಿತಿಯೊಳಗೆ ಕೇಂದ್ರಕ್ಕೆ ಸಲ್ಲಿಸಬೇಕು. ವರದಿಯಲ್ಲಿ ಉಲ್ಲೇಖಿತ 1449 ಹಳ್ಳಿಗಳ ಪೈಕಿ ಪ್ರತಿ ಗ್ರಾಮ ಪಂಚಾಯಿತಿ ಯಲ್ಲೂ ವಿಶೇಷ ಗ್ರಾಮಸಭೆಗಳನ್ನು ನಡೆಸಿ, ಜನರ ಆಕ್ಷೇಪಣೆಗಳನ್ನು ಅಧಿಕೃತ ದಾಖಲೆಯಾಗಿ ಕೇಂದ್ರ ಪರಿಸರ ಸಚಿವಾಲಯಕ್ಕೆ ಕಳುಹಿಸಬೇಕು. ಇದೇ ವೇಳೆ ಐದು ಎಕರೆ ಒಳಗಿನ ಬಡ ರೈತರ ಸಾಂಪ್ರದಾಯಿಕ ಸಾಗುವಳಿ ಬೇರೆ, ನೂರಾರು ಎಕರೆ ಅರಣ್ಯ ನುಂಗಿದ ರೆಸಾರ್ಟ್-ಭೂಮಾಫಿಯಾ ಗಳ ಒತ್ತುವರಿ ಬೇರೆ ಎಂಬ ಸ್ಪಷ್ಟ ವ್ಯಾಖ್ಯಾನವನ್ನು ಅಧಿಸೂಚನೆಯಲ್ಲಿ ಸೇರಿಸಲು ಒತ್ತಡ ತರಬೇಕು. ರಾಜಕೀಯ ಲಾಭಕ್ಕಾಗಿ ಜನರ ಮಧ್ಯೆ ಹರಡಲಾಗುತ್ತಿರುವ ವದಂತಿಗಳಿಗೆ ತೆರೆ ಎಳೆದು, ವರದಿಯ ಸತ್ಯಾಸತ್ಯತೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಜಿಡಳಿತಗಳು ಮಾಡಬೇಕು.

ಪಶ್ಚಿಮ ಘಟ್ಟಗಳ ರಕ್ಷಣೆ ಎಂಬುದು ಯಾವುದೇ ರಾಜಕೀಯ ಪಕ್ಷದ ಆಯ್ಕೆಯಲ್ಲ; ಅದು ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಇರುವ ಅನಿವಾರ್ಯ ಹೊಣೆಗಾರಿಕೆ. ನಿರಂತರವಾಗಿ ಸಂಭವಿಸು ತ್ತಿರುವ ಭೂಕುಸಿತಗಳು ಮತ್ತು ಹವಾಮಾನ ವೈಪರೀತ್ಯಗಳು ಪ್ರಕೃತಿ ನಮಗೆ ನೀಡುತ್ತಿರುವ ಎಚ್ಚರಿಕೆಯ ಗಂಟೆ. ಇದೇ ವೇಳೆ ಶತಮಾನಗಳಿಂದ ಈ ಕಾಡು ಮತ್ತು ನದಿಗಳನ್ನು ದೇವರಂತೆ ಪೂಜಿಸಿ, ತಮ್ಮ ಬದುಕಿನ ಭಾಗವಾಗಿಸಿಕೊಂಡು ಬಂದ ಮಲೆನಾಡಿನ ನಿವಾಸಿಗಳನ್ನು ಅಪರಾಧಿ ಗಳಂತೆ ನೋಡುವುದೂ ತಪ್ಪಬೇಕು.

ಭೂಮಾಫಿಯಾ, ಅಕ್ರಮ ಗಣಿಗಾರಿಕೆ ಮತ್ತು ದುರಾಸೆಯ ಬಂಡವಾಳಶಾಹಿ ಯೋಜನೆಗಳಿಂದ ಪಶ್ಚಿಮ ಘಟ್ಟ ಉಳಿಯಬೇಕು. ಆದರೆ ಬೆಟ್ಟದ ಜೀವಗಳ ಸಾಂಪ್ರದಾಯಿಕ ಬದುಕಿಗೂ ಭರವಸೆಯ ರಕ್ಷಣೆ ಸಿಗಬೇಕು. ಈ ಎರಡೂ ಹಿತಾಸಕ್ತಿಗಳನ್ನು ಬೆಸೆಯುವ ವೈಜ್ಞಾನಿಕ, ಪ್ರಾಯೋಗಿಕ ಮತ್ತು ಜನಪರ ಇಚ್ಛಾಶಕ್ತಿಯನ್ನು ಸರಕಾರ ತೋರಿದಾಗ ಮಾತ್ರ ಕಸ್ತೂರಿ ರಂಗನ್ ವರದಿಯ ಆತಂಕ ಮತ್ತು ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ.

ಲೋಕೇಶ್​ ಕಾಯರ್ಗ

View all posts by this author