ಪಿಚ್ ರಿಪೋರ್ಟ್
ಮರಿಲಿಂಗಗೌಡ ಮಾಲಿ ಪಾಟೀಲ್
ವೆಂಕಟೇಶ್ ಪ್ರಸಾದರು ಗೆದ್ದ ಮಾತ್ರಕ್ಕೆ ಅವರ ಕೆಲಸ ಮುಗಿಯುವುದಿಲ್ಲ; ಏಕೆಂದರೆ, ಅವರನ್ನು ಗೆಲ್ಲಿಸಿರುವುದೇ ‘ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕು’ ಎಂಬ ನಿರೀಕ್ಷೆಯೊಂದಿಗೆ. ಈ ಹಿಂದಿದ್ದ ಆಡಳಿತ ಮಂಡಳಿಯು ಮಾಡಿರುವ ಅಕ್ರಮಗಳು, ಅನ್ಯಾಯದ ನಿರ್ಧಾರಗಳು ಇವೆಲ್ಲದರ ಒಟ್ಟು ಪರಿಣಾಮಗಳು ಕೂಡ ಪ್ರಸಾದರ ಗೆಲುವಿಗೆ ಪೂರಕವಾಗಿವೆ.
ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ‘ಕ್ರಿಕೆಟ್’. ಇದು ಕೇವಲ ಆಟವಲ್ಲ, ಬದಲಿಗೆ ಭಾವನೆ, ಸಂಸ್ಕೃತಿಗಳು ಮಿಳಿತಗೊಂಡು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಸ್ತಿತ್ವವನ್ನು ಕಂಡುಕೊಂಡಿರುವ ಒಂದು ಹಿತಾನುಭವ. ಈ ಹಿನ್ನೆಲೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಗಿರಿಯು ಅತೀವ ಹೊಣೆಗಾರಿಕೆಯಿಂದ ಕೂಡಿದ ಪ್ರಮುಖ ಸ್ಥಾನವಾಗಿದೆ.
ಇಂಥ ಹೊಣೆಯನ್ನು ಹೊತ್ತಿರುವುದು ದೇಶದ ಮಾಜಿ ಅಂತಾರಾಷ್ಟ್ರೀಯ ವೇಗದ ಬೌಲರ್, ಕಠಿಣ ಪರಿಶ್ರಮ ಮತ್ತು ಶಿಸ್ತುಪಾಲನೆಯ ಪ್ರತೀಕವಾದ ವೆಂಕಟೇಶ್ ಪ್ರಸಾದ್. ಇವರ ನೇತೃತ್ವವು ರಾಜ್ಯ ಕ್ರಿಕೆಟ್‌ಗೆ ಹೊಸ ದಿಕ್ಕು, ಹೊಸ ಶಕ್ತಿ ಮತ್ತು ಹೊಸ ದೃಷ್ಟಿಕೋನವನ್ನು ನೀಡಲಿದೆ ಎಂಬ ನಿರೀಕ್ಷೆ ಕ್ರೀಡಾಭಿಮಾನಿಗಳದು.
ವೆಂಕಟೇಶ್ ಪ್ರಸಾದರ ಗೆಲುವು ಕ್ರೀಡಾಭಿಮಾನಿಗಳಿಗೆ ಹರ್ಷೋಲ್ಲಾಸಗಳನ್ನು ಉಂಟುಮಾಡಿದೆ. ಅವರಿಗಿಂತ ಮೊದಲಿದ್ದ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದಾಗಿ ಕರ್ನಾಟಕ ಕ್ರಿಕೆಟ್ ಹಳ್ಳಹಿಡಿದು ಹೋಗಿದೆ. ಪಂದ್ಯಗಳಲ್ಲಿ ಕರ್ನಾಟಕ ತಂಡ ಗೆಲ್ಲುವುದಕ್ಕಿಂತ ಸೋಲುತ್ತಿರುವುದೇ ಹೆಚ್ಚು. ನಮ್ಮವರು ರಣಜಿ ಟ್ರೋಫಿ ಗೆದ್ದು ಯಾವುದೋ ಕಾಲವಾಗಿದೆ.
ಇದನ್ನೂ ಓದಿ: Marilinga Gowda Mali Patil Column: ಗುರುವೆಂದರೆ ಲಘುವಲ್ಲ, ಒತ್ತಡ ತಂತ್ರ ತರವಲ್ಲ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಪರಿಣಾಮವಾಗಿ ಐಪಿಎಲ್ ಪಂದ್ಯಾ ವಳಿಯಲ್ಲಿ ಆರ್‌ಸಿಬಿ ತಂಡದ ಪಂದ್ಯಗಳನ್ನು ಅಲ್ಲಿ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಬಿಸಿಸಿಐ ಹೇಳಿದ್ದು, ಇದು ಆರ್‌ಸಿಬಿ ಅಭಿಮಾನಿಗಳಿಗೆ ಆಘಾತವನ್ನೇ ಉಂಟುಮಾಡಿದೆ.
ಇವೆಲ್ಲವೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿಯನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸುತ್ತವೆ. ಹೀಗಾಗಿ ರಾಜ್ಯ ಕ್ರಿಕೆಟ್ಗೆ ಕಾಯಕಲ್ಪ ಅನಿವಾರ್ಯವಾಗಿತ್ತು. ಕ್ರೀಡಾಭಿಮಾನಿಗಳಿಗೆ ಮಾತ್ರವಲ್ಲ, ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯರಿಗೂ ಒಂದು ಬದಲಾವಣೆ ಬೇಕಿತ್ತು. ಅದು ಚುನಾ ವಣಾ ಫಲಿತಾಂಶದಲ್ಲೇ ಸ್ಪಷ್ಟವಾಗಿ ಗೋಚರಿಸಿದೆ.
ವಿರೋಧಿ ಬಣದ ಶಾಂತಕುಮಾರ್‌ರ ನಾಮಪತ್ರ ತಿರಸ್ಕೃತವಾದ ಕಾರಣ ಅವರು ಕೋರ್ಟ್ ಮೆಟ್ಟಿಲೇರಿ ಸ್ಪರ್ಧೆಗೆ ಅವಕಾಶ ಪಡೆದರೂ ಸದಸ್ಯರ ಮನವನ್ನು ಗೆಲ್ಲಲಾಗಲಿಲ್ಲ. ವೆಂಕಟೇಶ್ ಪ್ರಸಾದ್ 749 ಮತಗಳನ್ನು ಪಡೆದರೆ, ಶಾಂತ್ಕುಮಾರ್‌ರಿಗೆ ದಕ್ಕಿದ್ದು 558 ಮಾತ್ರವೇ. ವೆಂಕಟೇಶ್ ಪ್ರಸಾದ್‌ರನ್ನು ಬೆಂಬಲಿಸಿದವರಲ್ಲಿ, ಭಾರತೀಯ ಕ್ರಿಕೆಟ್‌ನ ಗೌರವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಸೇರಿದಂತೆ ಬಹಳಷ್ಟು ಆಟಗಾರರಿದ್ದಾರೆ.
ಹೀಗಾಗಿ ಹೊಸ ಆಡಳಿತ ಮಂಡಳಿಯ ಬಗ್ಗೆ ಭರವಸೆ ಹೆಚ್ಚಿದೆ. ಈ ಭರವಸೆಯನ್ನು ಉಳಿಸಿಕೊಳ್ಳುವ ವಿಷಯದಲ್ಲಿ ವೆಂಕಟೇಶ್ ಪ್ರಸಾದ್ ಕೂಡಲೇ ಕಾರ್ಯೋನ್ಮುಖರಾಗಬೇಕಿದೆ. ಅವರು ಎದುರಿಸು ತ್ತಿರುವ ಮೊದಲ ಸವಾಲೆಂದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯಗಳು ನಡೆಯುವ ವ್ಯವಸ್ಥೆ ಮಾಡುವುದು. ಇದು ನಿಜಕ್ಕೂ ಒಂದು ‘ಹರ್ಕ್ಯೂಲಿಯನ್ ಟಾಸ್ಕ್’.
ಏಕೆಂದರೆ, ಕಾಲ್ತುಳಿತದಲ್ಲಿ ಅಭಿಮಾನಿಗಳು ಜೀವ ಕಳೆದುಕೊಳ್ಳುವಂತಾದ ಕರಾಳ ಘಟನೆ ಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣವು ಬಿಸಿಸಿಐನ ‘ಬ್ಲಾಕ್ ಲಿಸ್ಟ್’ನಲ್ಲಿದೆ. ಬಿಸಿಸಿಐ, ಕೇಂದ್ರ ಸರಕಾರ ಇವೆಲ್ಲದರ ಜತೆ ಮಾತನಾಡಿ, ಐಪಿಎಲ್ ಪಂದ್ಯಗಳನ್ನು ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣ ಕ್ಕೆ ತಂದು, ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸುವ ಹೊಣೆ ವೆಂಕಟೇಶ್ ಪ್ರಸಾದ್ ಅವರ ಮೇಲಿದೆ.
ಕರ್ನಾಟಕವನ್ನು ಗೆಲುವಿನ ಹಳಿಗೆ ಮತ್ತೆ ತರುವುದು ಪ್ರಸಾದ್‌ರ ಹೆಗಲೇರಿರುವ ಇನ್ನೊಂದು ಹೊಣೆ. ವಿನಯ್ ಕುಮಾರ್ ನಾಯಕತ್ವದಲ್ಲಿ ರಾಜ್ಯ ತಂಡವು ರಣಜಿ ಟ್ರೋಫಿಯನ್ನು ಗೆದ್ದಿದ್ದಷ್ಟೇ, ಇದಾಗಿ ದಶಕವೇ ಕಳೆದಿದೆ. ಹೀಗಾಗಿ, ಮೊದಲಿಗೆ ನೈಜಪ್ರತಿಭೆಗಳನ್ನು ತಂಡಕ್ಕೆ ಆಯ್ಕೆ ಮಾಡಿ, ಅವರಲ್ಲಿ ಗೆಲುವಿನ ಹಸಿವನ್ನು ಹುಟ್ಟಿಸಿ, ಸರಿಯಾದ ತರಬೇತಿ ನೀಡಿ, ರಣತಂತ್ರಗಳನ್ನು ಹೆಣೆದು, ತಂಡಕ್ಕೆ ಗೆಲುವಿನ ಕಿರೀಟ ತೊಡಿಸುವುದು ಅಂದುಕೊಂಡಷ್ಟು ಸಣ್ಣ ಮತ್ತು ಸುಲಭದ ಕೆಲಸವಲ್ಲ. ಆದರೆ ಈ ಹೊಣೆಯ ಭಾರವನ್ನು ತಗ್ಗಿಸಲು ಪ್ರಸಾದ್ ಅವರಿಗೆ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆಯವರಂಥ ದಿಗ್ಗಜರ ನೆರವಿದೆ.
“ನಾವು ಕ್ರಿಕೆಟ್‌ನಿಂದ ದೂರಹೋಗುವುದಿಲ್ಲ, ನನಗೆ ಪದವಿ ಬೇಕಿಲ್ಲ. ವಾತಾವರಣ ಸರಿಯಿದ್ದರೆ ನಾನು ಬೆಂಬಲ ನೀಡುತ್ತೇನೆ. ಈಗ ವಾತಾವರಣ ಸರಿಯಾಗಿದೆ" ಎಂದವರು ಅನಿಲ್ ಕುಂಬ್ಳೆ; ಯುವಪೀಳಿಗೆಗೆ ಆದರ್ಶವಾಗಿರುವ ಇಂಥವರು ಮಾರ್ಗದರ್ಶನ ಮಾಡಿದರೆ ರಾಜ್ಯ ತಂಡ ಮತ್ತೊಮ್ಮೆ ಚಾಂಪಿಯನ್ ಆಗುವುದರಲ್ಲಿ ಅನುಮಾನವಿಲ್ಲ.
ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್‌ರಿಗೆ ಶುಭ ಕೋರಿರುವ ‘ಮೈಸೂರು ಎಕ್ಸ್‌ಪ್ರೆಸ್’ ಜಾವಗಲ್ ಶ್ರೀನಾಥ್ ಅವರು, “ಹಿಂದಿನ ಮ್ಯಾನೇಜ್‌ಮೆಂಟ್ ಕರ್ನಾಟಕ ಕ್ರಿಕೆಟ್ ಅನ್ನು ಹಾಳು ಮಾಡಿದೆ. ಆ ಆಡಳಿತ ಮಂಡಳಿಯಿಂದಾಗಿ ಕ್ರಿಕೆಟ್ ಆಟಗಾರರು ನಿರಾಶರಾಗಿದ್ದಾರೆ. ರಾಜ್ಯದಲ್ಲಿ ಕ್ರಿಕೆಟ್ ನಿಂತು ಹೋಗಿದೆ. ಪಂದ್ಯಾವಳಿಗಳು ಕಾಲಕ್ಕೆ ಸರಿಯಾಗಿ ನಡೆಯಬೇಕು, ಕನಿಷ್ಠ ಸಾವಿರ ಜನರಿಗೆ ಕ್ರಿಕೆಟಿಂಗ್ ಅವಕಾಶ ಕೊಡಿಸಬೇಕು. ನಾವು 6-7 ಕಡೆ ಅಕಾಡೆಮಿ ಮಾಡಿದ್ದೆವು.
ನಾವು ಮಾಡಿದ್ದ ಒಳ್ಳೆಯ ಕೆಲಸಗಳನ್ನು ಬ್ರಿಜೇಶ್ ಪಟೇಲ್ ಬಣ ನಿಲ್ಲಿಸಿತು. ಅವನ್ನೆಲ್ಲಾ ವೆಂಕಿ ಮತ್ತೊಮ್ಮೆ ಆರಂಭಿಸುತ್ತಾರೆ ಎಂಬ ನಂಬಿಕೆ ನನಗಿದೆ" ಎಂದಿದ್ದಾರೆ. ಒಂದು ಕಾಲದಲ್ಲಿ ರಾಷ್ಟ್ರೀಯ ತಂಡದಲ್ಲಿ ಕರ್ನಾಟಕದ 6 ಕ್ರಿಕೆಟಿಗರು ಸ್ಥಾನ ಪಡೆದಿದ್ದರು. ಈಗ ಟೆಸ್ಟ್, ಏಕದಿನ, ಟಿ-20ಯಂಥ ವಿವಿಧ ಮಾದರಿಗಳಿದ್ದು ಹೆಚ್ಚಿನ ಆಟಗಾರರ ಅಗತ್ಯವಿದ್ದರೂ, ರಾಷ್ಟ್ರೀಯ ತಂಡದಲ್ಲಿ ಇಬ್ಬರು ಆಟಗಾರರಿಗೆ ಸ್ಥಾನ ಸಿಗುತ್ತದೆ ಎಂಬುದೂ ಖಾತ್ರಿಯಿಲ್ಲ.
ರಾಜ್ಯ ತಂಡವನ್ನು ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ತಂಡವಾಗಿಸಬೇಕಿದೆ. ರಣಜಿ, ವಿಜಯ್ ಹಜಾರೆ, ಮುಷ್ತಾಕ್ ಅಲಿ ಟೂರ್ನಮೆಂಟ್ʼಗಳಲ್ಲಿ ರಾಜ್ಯದ ಪ್ರದರ್ಶನವನ್ನು ಉತ್ತಮ ಮಟ್ಟಕ್ಕೆ ತೆಗೆದು ಕೊಂಡು ಹೋಗಬೇಕು. ಆಗ ಆಟಗಾರರಿಗೆ ಸಹಜವಾಗಿಯೇ ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆಯುತ್ತದೆ. ಆದರೆ ಹಿಂದಿನ ಆಡಳಿತ ಮಂಡಳಿಯು ಕರ್ನಾಟಕ ಕ್ರಿಕೆಟ್‌ನ ಅಭಿವೃದ್ಧಿಗೆ ಯಾವುದೇ ಆಸಕ್ತಿ ತೋರಲಿಲ್ಲ.
ಇದರಿಂದಾಗಿ ಪ್ರತಿಭಾವಂತ ಕ್ರಿಕೆಟಿಗರು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಇಂಥ ಬೆಳವಣಿಗೆ ಗಳನ್ನು ತಡೆಗಟ್ಟಬೇಕಿದೆ. ಕ್ರಿಕೆಟ್ ನಗರಗಳಿಗೇ ಸೀಮಿತವಾಗಿಬಿಡಬಾರದು; ಹಳ್ಳಿಗಳು ಮತ್ತು ತಾಲೂಕು ಮಟ್ಟಗಳಲ್ಲಿ ಉತ್ತಮ ಕೋಚ್‌ಗಳನ್ನು ನಿಯೋಜಿಸಿ ತರಬೇತಿ ಸೌಲಭ್ಯಗಳನ್ನು ನೀಡ ಬೇಕು. ಕ್ರಿಕೆಟ್ ಸಂಸ್ಥೆಗಳಿಗೆ ಹರಿದುಬರುವ ನಿಧಿಗಳನ್ನು ಆಟಗಾರರ ರೂಪಣೆಗೆ ಬಳಸು ವಂತಾಗ ಬೇಕು.
ಪ್ರಸಾದ್ ಅವರು ‘ಅಕೌಂಟೆಬಿಲಿಟಿ’ಗೆ ಮಹತ್ವ ನೀಡುವ ವ್ಯಕ್ತಿ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಕ್ರಿಕೆಟ್‌ಗೆ ಮಹತ್ವ ಹೆಚ್ಚಾಗಿದ್ದು, ಇದನ್ನು ಮುನ್ನಡೆಸುವಲ್ಲಿ ಪ್ರಸಾದ್ ಪ್ರಮುಖ ಪಾತ್ರ ವನ್ನು ವಹಿಸಬಹುದು. ಮಹಿಳೆಯರಿಗಾಗಿ ಪ್ರತ್ಯೇಕ ಕೋಚ್‌ಗಳು, ಹೆಚ್ಚಿನ ಲೀಗ್ ಪಂದ್ಯಗಳು, ಸುರಕ್ಷಿತ ಮತ್ತು ಪ್ರೋತ್ಸಾಹಕಾರಿ ಪರಿಸರ ಒದಗಿಸುವುದರ ಮೂಲಕ ಮಹಿಳಾ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡಬಹುದು.
ಆಟಗಾರರ ಆಯ್ಕೆಯಲ್ಲಿ ಪಕ್ಷಪಾತವಿದೆ ಎಂಬ ದೂರು ಸಾಮಾನ್ಯವಾಗಿ ಕೇಳಿಬರುತ್ತಿದ್ದು, ಪ್ರಸಾದ್ ಇದನ್ನು ಶಾಶ್ವತವಾಗಿ ನಿವಾರಿಸಬಹುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಕ್ರೀಡಾ ಮೂಲ ಸೌಕರ್ಯದ ಕೊರತೆಯನ್ನು ತುಂಬಬಹುದು. ಅಧ್ಯಕ್ಷೀಯ ಅವಧಿಯಲ್ಲಿ ನಿಷ್ಪಕ್ಷಪಾತಿ ವರ್ತನೆ, ದಿಟ್ಟ ನಿರ್ಧಾರಗಳನ್ನು ತಳೆಯುವಿಕೆ, ಆಟಗಾರರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡುವಿಕೆ, ಸಂಸ್ಥೆಯ ಒಳಜಗಳಗಳನ್ನು ನಿವಾರಿಸುವಿಕೆ, ಮಾಧ್ಯಮದವರೊಂದಿಗೆ ಪಾರದರ್ಶತೆ ಕಾಯ್ದುಕೊಳ್ಳುವಿಕೆ, ಅಭಿಮಾನಿಗಳೊಂದಿಗೆ ಸ್ನೇಹಪೂರ್ಣ ಸಂವಹನ ಇಂಥ ನಡೆಗಳಿಗೆ ವೆಂಕಟೇಶ ಪ್ರಸಾದ್ ಅವರು ಮುಂದಾದರೆ, ರಾಜ್ಯ ಕ್ರಿಕೆಟ್ ಶ್ರೇಷ್ಠ ಮಟ್ಟವನ್ನು ಮುಟ್ಟುವುದರಲ್ಲಿ ಸಂದೇಹವಿಲ್ಲ.
ವೆಂಕಟೇಶ್ ಪ್ರಸಾದ್ ಅವರು ಗೆದ್ದ ಮಾತ್ರಕ್ಕೆ ಅವರ ಕೆಲಸ ಮುಗಿಯುವುದಿಲ್ಲ; ಏಕೆಂದರೆ, ಅವರನ್ನು ಗೆಲ್ಲಿಸಿರುವುದೇ ‘ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕು’ ಎಂಬ ನಿರೀಕ್ಷೆ ಯೊಂದಿಗೆ. ಪ್ರಸಾದ್ ಅವರಿಗೆ ದಕ್ಕಿರುವ ಗೆಲುವಿಗೆ, ಅವರ ಸಾಮರ್ಥ್ಯವೇ ಮುಖ್ಯ ಕಾರಣ ವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರ ಜತೆಗೆ, ಈ ಹಿಂದೆ ಇದ್ದ ಆಡಳಿತ ಮಂಡಳಿಯು ಮಾಡಿ ರುವ ಅಕ್ರಮಗಳು, ಅನ್ಯಾಯದ ನಿರ್ಧಾರಗಳು, ‘ಕೆಎಸ್‌ಸಿಎ’ಯ ಸದಸ್ಯರನ್ನು ಅಗೌರವಯುತವಾಗಿ ನಡೆಸಿಕೊಂಡಿದ್ದು ಇವೆಲ್ಲದರ ಒಟ್ಟು ಪರಿಣಾಮಗಳು ಕೂಡ ಪ್ರಸಾದ್ ಅವರ ಗೆಲುವಿಗೆ ಪೂರಕ ವಾಗಿವೆ ಎನ್ನಲಡ್ಡಿಯಿಲ್ಲ.
ಈ ಹಿಂದಿನ ಮಂಡಳಿಯವರು ಸಂಸ್ಥೆಯ ಸದಸ್ಯರಿಗೆ ಕವಡೆಕಾಸಿನ ಕಿಮ್ಮತ್ತು ನೀಡದೆ ದಬ್ಬಾಳಿಕೆ ಯಿಂದ ನಡೆಸಿಕೊಂಡಿದ್ದಾರೆ. ಪ್ರಸಾದ್ ತಮ್ಮ ಅಧಿಕಾರಾವಧಿಯಲ್ಲಿ ಅಂಥ ಸಣ್ಣ ಅಚಾತುರ್ಯ ಕ್ಕೂ ಆಸ್ಪದ ನೀಡದೆ ಸದಸ್ಯರನ್ನು ಗೌರವಯುತವಾಗಿ ಕಾಣಬೇಕಿದೆ. ಮ್ಯಾನೇಜಿಂಗ್ ಕಮಿಟಿ, ಟೂರ್ನಮೆಂಟ್ ಕಮಿಟಿ, ಆಯ್ಕೆ ಸಮಿತಿ, ತರಬೇತುದಾರರ ಸಮಿತಿ, ಸಪೋರ್ಟಿಂಗ್ ಸ್ಟಾ- ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆಯೂ ಅವರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.
‘ಹೊರ ರಾಜ್ಯದವರು ಕರ್ನಾಟಕವನ್ನು ಅಕ್ರಮವಾಗಿ ಪ್ರತಿನಿಧಿಸುತ್ತಿದ್ದಾರೆ’ ಎಂಬುದು ಕೆಎಸ್‌ಸಿಎ ವಿರುದ್ಧ ಸಾಕಷ್ಟು ಸಮಯದಿಂದ ಕೇಳಿಬರುತ್ತಿರುವ ದೊಡ್ಡ ಆರೋಪ. ಈ ಕೆಟ್ಟ ಹಣೆಪಟ್ಟಿ ಯನ್ನು ಕಳಚುವಂತಾಗಬೇಕು ಮತ್ತು ಕನ್ನಡಿಗರೇ ಕರ್ನಾಟಕ ತಂಡವನ್ನು ಪ್ರತಿನಿಧಿಸುವಂತಾಗ ಬೇಕು. ವೆಂಕಟೇಶ್ ಪ್ರಸಾದರು ಈ ನಿಟ್ಟಿನಲ್ಲಿ ಹೊಸ ನಿಯಮ ತಂದು, ಹೊಸ ಮನ್ವಂತರಕ್ಕೆ ನಾಂದಿ ಹಾಡಲಿ.
ವಿನಯ್ ಎಂಬ ಗೆಲುವಿನ ಸಾರಥಿ
ಬ್ರಿಜೇಶ್ ಬಣದ ವಿರುದ್ಧ ತಂಡವನ್ನು ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬಹುದು ಎಂಬು ದನ್ನು ರಣತಂತ್ರಗಾರ ಶ್ರೀಕೃಷ್ಣನಂತೆ ಲೆಕ್ಕ ಹಾಕಿದ್ದು ವೃತ್ತಿಯಲ್ಲಿ ಲೆಕ್ಕ ಪರಿಶೋಧಕ ರಾಗಿರುವ ವಿನಯ್ ಮೃತ್ಯುಂಜಯ ಅವರು. ಹೌದು, “ವೆಂಕಟೇಶ್ ಪ್ರಸಾದರಂಥ ಲೆಜೆಂಡರಿ ಕ್ರಿಕೆಟರ್ ಮುಂದೆ ಬಂದು ‘ಅಧ್ಯಕ್ಷನಾಗುತ್ತೇನೆ’ ಎಂದಾಗ, ಅವರನ್ನು ಅವಿರೋಧವಾಗಿ ಆಯ್ಕೆ ಮಾಡ ಬೇಕಿತ್ತು" ಎಂಬ ವಾದವನ್ನು ಮುಂದಿಟ್ಟು, ಪ್ರಸಾದ್ ಮತ್ತವರ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವರು ವಿನಯ್ ಮೃತ್ಯುಂಜಯ ಅವರು.
ಚುನಾವಣೆಯನ್ನು ಮುಂದೂಡಲು ಬ್ರಿಜೇಶ್ ಬಣ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿತು, ಯಾಕೆಂದರೆ ಅದಕ್ಕೆ ಸೋಲಿನ ಭಯವಿತ್ತು. ಜೂನ್ 4ರಂದು ಸಂಭವಿಸಿದ ಕಾಲ್ತುಳಿತದ ಪ್ರಕರಣ ದಲ್ಲಿ 11 ಮಂದಿ ಜೀವತೆತ್ತ ಬಳಿಕ, ನೈತಿಕ ಹೊಣೆ ಹೊತ್ತು ಅಂದಿನ ಆಡಳಿತ ಮಂಡಳಿ ರಾಜೀನಾಮೆ ನೀಡಿತ್ತು. ಯಾವ ನೈತಿಕತೆಯ ಮೇಲೆ ಮತ್ತೆ ಅದೇ ತಂಡದವರು ಚುನಾವಣೆಗೆ ನಿಲ್ಲುತ್ತಾರೆ ಎಂದು ಪ್ರಶ್ನಿಸಿ ಅಸ್ತ್ರ ಬಿಟ್ಟವರು ವಿನಯ್ ಮೃತ್ಯುಂಜಯ.
ವಾಸ್ತವವಾಗಿ, ಅಂದಿನ ಆಡಳಿತ ಮಂಡಳಿಯು ರಾಜೀನಾಮೆ ನೀಡಿದ ಬಳಿಕ, ಸೆಪ್ಟೆಂಬರ್ 30ರ ಒಳಗೆ ಚುನಾವಣೆ ನಡೆಯಬೇಕಿತ್ತು. ಆದರೆ ಸೋಲಿನ ಭಯದಿಂದ ಸಲ್ಲದ ನೆಪಗಳನ್ನು ಹೇಳುತ್ತಾ, ‘ಡಿಸೆಂಬರ್ ನಂತರ ನೋಡೋಣ’ ಎನ್ನುತ್ತಾ, ಚುನಾವಣೆಯನ್ನು ಮುಂದೂಡುವಲ್ಲಿ ಬ್ರಿಜೇಶ್ ಬಣ ಯಶಸ್ವಿಯಾಯಿತು. ವಿನಯ್ ಮೃತ್ಯುಂಜಯ್ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದರು; ತಮ್ಮ ನಾಮಪತ್ರ ತಿರಸ್ಕೃತವಾದರೂ ಯಾವ ಸ್ವಾರ್ಥ ಬಯಸದೆ, ಕೆಎಸ್‌ಸಿಎ ಸಂಸ್ಥೆಯ ಹಿತಕ್ಕಾಗಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಮುನ್ನಡೆಸಿ, ಪ್ರಸಾದ್ ಬಣಕ್ಕೆ ಗೆಲುವು ತಂದುಕೊಡು ವಲ್ಲಿ ಅವರು ಶ್ರಮಿಸಿದರು.
ಅಂದರೆ, ಪ್ರಸಾದ್ ಬಣಕ್ಕೆ ಗೆಲುವು ಸಿಗುವಂತಾಗುವಲ್ಲಿ ವಿನಯ್ ಮೃತ್ಯುಂಜಯರ ಪಾತ್ರ ಬಹಳ ದೊಡ್ಡದಿದೆ. ಒಂದು ರೀತಿಯಲ್ಲಿದು, ಮಹಾಭಾರತದಲ್ಲಿ ಪಾಂಡವರ ಬಳಗಕ್ಕೆ ಗೆಲುವು ಒದಗಿಸು ವಲ್ಲಿ ಶ್ರೀಕೃಷ್ಣ ವಹಿಸಿದ ‘ರೂವಾರಿ ಪಾತ್ರ’ವನ್ನು ನೆನಪಿಸುವಂತಿತ್ತು; ಪ್ರಸಾದ್‌ರ ಪಾಲಿಗೆ ತಂತ್ರಗಾರ ಚಾಣಕ್ಯನಂತೆ ಕಾರ್ಯನಿರ್ವಹಿಸಿದ್ದರ ಜತೆಗೆ, ಅವರ ಚುನಾವಣಾ ರಥಕ್ಕೆ ಕೃಷ್ಣನಂತೆ ಸಾರಥಿಯಾದವರು ವಿನಯ್ ಮೃತ್ಯುಂಜಯ ಅವರು.
ಹೀಗಾಗಿ ಗೆಲುವಿನ ನಂತರ ಅವರನ್ನು ಭುಜದ ಮೇಲೆ ಕೂರಿಸಿ ಮೆರೆಸುವ ಮೂಲಕ ಪ್ರಸಾದ್ ಬಣವು ಸಂಭ್ರಮಾಚರಣೆ ಮಾಡಿದ್ದು ಸಹಜವಾಗೇ ಇತ್ತು. ಆಟಗಾರರಾಗಿದ್ದಾಗ ವೆಂಕಟೇಶ್ ಪ್ರಸಾದ್ ಅವರು ತಾವು ತೋರಿದ್ದ ಶಿಸ್ತು ಮತ್ತು ಹೋರಾಟದ ಮನೋಭಾವವನ್ನು ಈಗಿನ ಹೊಸ ಹೊಣೆಗಾರಿಕೆಯಲ್ಲೂ ತೋರಿಸಲಿ, ವಿನಯ್ ಮೃತ್ಯುಂಜಯರ ಮಾರ್ಗದರ್ಶನದಲ್ಲಿ ಕೆಎಸ್‌ಸಿಎ ಸಂಸ್ಥೆಗೆ ಹೊಸ ದಿಕ್ಕನ್ನು ತೋರಲಿ ಎಂಬುದು ಕ್ರೀಡಾಭಿಮಾನಿಗಳ ಆಶಯ ಮತ್ತು ನಿರೀಕ್ಷೆ. ಸಮಸ್ತ ಕ್ರೀಡಾಭಿಮಾನಿಗಳ ಪರವಾಗಿ- ’ Congratulations Venki ...’!
(ಲೇಖಕರು ಸಾಮಾಜಿಕ ಹೋರಾಟಗಾರರು)