ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ಜ್ಞಾನೇಶ್‌ ಕುಮಾರ್‌ ಪದಚ್ಯುತಿ ಅಷ್ಟು ಸುಲಭಸಾಧ್ಯವಲ್ಲ

ಹಾಲಿ ಮೂರು ಚುನಾವಣಾ ಆಯುಕ್ತರ ನಡುವೆ ‘ಆಂತರಿಕ ಭಿನ್ನಾಭಿಪ್ರಾಯ’ ಇದೆ ಎಂದು ಪತ್ರಿಕೆಯೊಂದರಲ್ಲಿ ಊಹಾಪೋಹದ ವರದಿಯಾದ ನಂತರ, ಆಗಲೇ ಹೊತ್ತಿಉರಿಯುತ್ತಿದ್ದ ಎಸ್‌ಐಆರ್ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (ಸಿಜೆಪಿ ಅವರನ್ನು ಗ್ಯಾನೂ ಬ್ರೋ ಅಂತ ಸಂಬೋಧಿಸುತ್ತೆ) ಆಡಳಿತ ಪಕ್ಷದ ಪಕ್ಷಪಾತಿಯಾಗಿದ್ದಾರೆ, ಹಾಗಾಗಿ ಅವರು ರಾಜೀನಾಮೆ ಕೊಡುವಲ್ಲಿಯವರೆಗೆ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ವಿರೋಧಪಕ್ಷಗಳು ಅದರಲ್ಲೂ ಕಾಂಗ್ರೆಸ್ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದೆ.

ವಿದ್ಯಮಾನ

ನಮ್ಮ ದೇಶದಲ್ಲಿ ಎಲ್ಲವೂ ಚುನಾವಣಾ ಕೇಂದ್ರಿತವಾಗಿಯೇ ನಡೆಯುತ್ತವೆ. ಚುನಾವಣೆಗಳಿಂದ ಚುನಾವಣೆಗಳಿಗಾಗಿಯೇ ನಮ್ಮ ದೇಶವಿದೆಯೇನೋ ಅನಿಸುವಷ್ಟು. ಆ ದೃಷ್ಟಿಯಿಂದ ನೋಡು ವಾಗ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕಿರುವಷ್ಟು ಜವಾಬ್ದಾರಿ, ಮಹತಿ ಭಾರತ ದಲ್ಲಿ ಇನ್ನಾವ ಸಂಸ್ಥೆಗೂ ಇಲ್ಲ ಎನ್ನಬಹುದು.

ಹಾಗಾಗಿ ಮುಖ್ಯ ಚುನಾವಣಾ ಆಯುಕ್ತರ ಸ್ಥಾನ ಎನ್ನುವುದು ಅತ್ಯಂತ ನಿಷ್ಪಕ್ಷಪಾತವಾಗಿ ಹಾಗೂ ಸ್ವತಂತ್ರವಾಗಿ ಕೆಲಸ ನಿರ್ವಹಿಸಬೇಕಾದ, ಧೃಢ ಹೃದಯದವರು ಮಾತ್ರ ನಿರ್ವಹಿಸಬಹುದಾದ ಹುದ್ದೆಯಾಗಿದೆ. ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಂದ ಒಂದು ಕಾರಣಕ್ಕೆ ಚುನಾವಣಾ ಆಯುಕ್ತರುಗಳು ವಿವಾದದ ಬೆಂಕಿಯಲ್ಲಿ ಬೇಯುತ್ತಲೇ ಬಂದಿದ್ದಾರೆ.

ಹಾಲಿ ಮೂರು ಚುನಾವಣಾ ಆಯುಕ್ತರ ನಡುವೆ ‘ಆಂತರಿಕ ಭಿನ್ನಾಭಿಪ್ರಾಯ’ ಇದೆ ಎಂದು ಪತ್ರಿಕೆಯೊಂದರಲ್ಲಿ ಊಹಾಪೋಹದ ವರದಿಯಾದ ನಂತರ, ಆಗಲೇ ಹೊತ್ತಿಉರಿಯುತ್ತಿದ್ದ ಎಸ್‌ಐಆರ್ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (ಸಿಜೆಪಿ ಅವರನ್ನು ಗ್ಯಾನೂ ಬ್ರೋ ಅಂತ ಸಂಬೋಧಿಸುತ್ತೆ) ಆಡಳಿತ ಪಕ್ಷದ ಪಕ್ಷಪಾತಿಯಾಗಿದ್ದಾರೆ, ಹಾಗಾಗಿ ಅವರು ರಾಜೀನಾಮೆ ಕೊಡುವಲ್ಲಿಯವರೆಗೆ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ವಿರೋಧಪಕ್ಷಗಳು ಅದರಲ್ಲೂ ಕಾಂಗ್ರೆಸ್ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದೆ.

ಇದನ್ನೂ ಓದಿ: Vinayaka M Bhat Column: ಹಾಡನ್ನು ಕತ್ತರಿಸಿದ್ದರಿಂದ ಭಾರತಕ್ಕೆ ಭಾವೈಕ್ಯತೆ ಸಾಧ್ಯವಾಯ್ತಾ ?

ದೇಶದಲ್ಲಿ ಎಸ್‌ಐಆರ್ ಏನೂ ಮೊದಲಬಾರಿಗೆ ನಡೆಯುತ್ತಿರುವುದಲ್ಲ, ಈಗಾಗಲೇ ಹತ್ತಾರು ಬಾರಿ ಆಗಿದೆ. ಆದರೂ ಈಗ ವಿವಾದ ಯಾಕೆಂದರೆ, ಮುಂದಿನ ವರ್ಷ ಉತ್ತರಪ್ರದೇಶದ ನಿರ್ಣಾಯಕ ಚುನಾವಣೆಯಿದೆ. ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಚುನಾವಣೆಯ ಸೋಲಿಗೆ ಎಷ್ಟು ದಿನ ಅಂತ ಮತಯಂತ್ರವನ್ನು ದೂಷಿಸುವುದು? ಚುನಾವಣಾ ಆಯೋಗವನ್ನೇ ಈ ಬಾರಿ ಗುರಿ ಮಾಡೋಣವೆಂದು ವಿರೋಧಪಕ್ಷಗಳು ನಿರ್ಧಾರ ಮಾಡಿದಂತಿದೆ. ನಾನು ಕೆಳಗೆ ನೀಡುತ್ತಿರುವ ಕೆಲವು ವಾಸ್ತವ ಸಂಗತಿಗಳನ್ನು ನೋಡಿದರೆ, ಈಗ ಭಗವದ್ಗೀತೆಯ ಪಾಠ ಮಾಡುತ್ತಿರುವುದು ‘ಭೂತ’ ಎನ್ನುವುದು ನಿಮಗೂ ಅರ್ಥವಾಗುತ್ತೆ.

2009ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎನ್. ಗೋಪಾಲಸ್ವಾಮಿಯವರು, ಸಹ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರನ್ನು ಪದಚ್ಯುತಗೊಳಿಸುವಂತೆ ಶಿಫಾರಸು ಮಾಡಿ ರಾಷ್ಟ್ರಪತಿಗಳಿಗೆ 24 ಪುಟಗಳ ಪತ್ರ ಬರೆದಿದ್ದರು. ಅದರಲ್ಲಿ ಚಾವ್ಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ನೆರವಾದ 14 ಘಟನೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಅದು ಕೇವಲ ಪತ್ರಿಕಾ ವರದಿಯಾಗಿರಲಿಲ್ಲ, ಮುಖ್ಯಚುನಾವಣಾ ಆಯುಕ್ತರೇ ಸಾಧಾರವಾಗಿ ಮಾಡಿದ್ದ ಆರೋಪವಾಗಿತ್ತು. ಏನಾಯ್ತು ಆವಾಗ? ಗೋಪಾಲಸ್ವಾಮಿಯವರ ನಿವೃತ್ತಿಯ ನಂತರ ಕಳಂಕಿತ ಚಾವ್ಲಾ ಅವರನ್ನೇ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಬಡ್ತಿ ನೀಡಲಾಯಿತು.

jnanesh K

ಇವರು ರಾಜೀವ್ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗ ಅವರ ಕಚೇರಿಯಲ್ಲಿ ಕೆಲಸ ಮಾಡಿದ ಅಧಿಕಾರಿಯಾಗಿದ್ದರು ಹಾಗೂ ಆಗ ಕಾಂಗ್ರೆಸ್ ಸರಕಾರವಿತ್ತು ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ರಾಜೀವ್ ಗಾಂಧಿಯವರು ಶ್ರೀಪೆರಂಬದೂರಿನಲ್ಲಿ ಹತ್ಯೆ ಯಾಗುವಾಗ ಸುಮಾರು 200 ಕ್ಷೇತ್ರದಲ್ಲಿ ಚುನಾವಣೆಗಳು ಮುಗಿದುಹೋಗಿತ್ತು. ರಾಜೀವ್ ಗಾಂಧಿಯವರು ಸ್ಪರ್ಧಿಸಿದ್ದ ಕ್ಷೇತ್ರದ ಚುನಾವಣೆಯನ್ನು ಮುಂದೂಡುವುದರಲ್ಲಿ ನ್ಯಾಯವಿದೆ. ಆದರೆ 21 ದಿನಗಳ ಕಾಲ ಬಾಕಿ ಇರುವ ಎಲ್ಲ ಕ್ಷೇತ್ರಗಳ ಚುನಾವಣೆಯನ್ನು ಅಂದಿನ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್ ಶೇಷನ್ ಅಕಾರಣವಾಗಿ ಮುಂದೂ ಡಿದ್ದರು.

ಅನುಕಂಪದ ಅಲೆಯ ಆಧಾರದ ಮೇಲೆ ಕಾಂಗ್ರೆಸ್ ಜಯಗಳಿಸಿ ಪಿ.ವಿ ನರಸಿಂಹ ರಾವ್ ಪ್ರಧಾನ ಮಂತ್ರಿಯಾದರು. ಇದಕ್ಕೇನು ಹೇಳುವುದು? ಅನುಕಂಪದ ಅಲೆ ಹರಡುವಷ್ಟು ಸಮಯವನ್ನು ಟಿ.ಎನ್ ಶೇಷನ್ ಅವರು ಕಾಂಗ್ರೆಸ್ಸಿಗೆ ನೀಡಿದ್ದರು. ಕಾರಣ ಅವರನ್ನು ಕಾಂಗ್ರೆಸ್ಸಿಗರು ನೇಮಕ ಮಾಡಿದ್ದರು ಎನ್ನಬಹುದೇ? ನಿವೃತ್ತರಾದ ನಂತರ ಅವರು ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ಟಿನಲ್ಲಿ ಸ್ಪರ್ಧಿಸಿದ್ದರು ಎನ್ನುವುದು ಜನರಿಗಿನ್ನೂ ನೆನಪಿದೆ.

ಹೀಗೆ ಕಾಂಗ್ರೆಸ್ ಕಾಲದಲ್ಲಿ ಚುನಾವಣಾ ಆಯುಕ್ತರಾಗಿದ್ದ ಎಮ್. ಎಸ್ ಗಿಲ್ ಹಾಗೂ ವಿ.ಎಸ್ ರಮಾದೇವಿ ಮುಂತಾದವರು ಮಂತ್ರಿ, ರಾಜ್ಯಪಾಲರಾಗಿ ನೇಮಕಗೊಂಡಿರುವ ಉದಾಹರಣೆಗಳು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಇನ್ನೂ ಮಜವಾದ ಒಂದು ಸಂಗತಿಯನ್ನು ಹೇಳುತ್ತೇನೆ ಕೇಳಿ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ನಮ್ಮ ದೇಶದ ಉಚ್ಛ ನ್ಯಾಯಾಲಯದ ಹತ್ತನೇ ಮುಖ್ಯ ನ್ಯಾಯಾಧೀಶರಾಗಿ ನೆಹರೂ ಮನೆತನದ ಸಂಬಂಧಿಯಾಗಿದ್ದರು ಎನ್ನಲಾಗುವ ಕೈಲಾಶನಾಥ್ ವಾಂಚುಕ್ ಎನ್ನುವವರು ನೇಮಕಗೊಂಡಿದ್ದರು.

ವಿಚಿತ್ರವೆಂದರೆ ಇವರು ಯಾವುದೇ ಕಾನೂನಿನ ಪದವಿಯನ್ನೇ ಪಡೆದವರಾಗಿರದೇ ಸಿಜೆಐ ಆದ ಏಕೈಕ ವ್ಯಕ್ತಿಯಾಗಿದ್ದರು. ಯಾವ ಪಕ್ಷದ ಅಧಿಕಾರಾವಧಿಯಲ್ಲಿ ಈ ಎಲ್ಲ ಸತ್ಕಾರ್ಯಗಳು ನಡೆದಿತ್ತೋ, ಈಗ ಅದೇ ಪಕ್ಷದ ಜನ ಜ್ಞಾನೇಶ್ ಕುಮಾರರ ರಾಜೀನಾಮೆ ಕೇಳುತ್ತಿದ್ದಾರೆ. ಪ್ರಜಾ ಪ್ರಭುತ್ವದ ಉಳಿವಿಗೆ ಹೋರಾಡುತ್ತಿದ್ದಾರೆ.

Public memory is short ಎನ್ನುವುದು ನಿಜ, ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಜನರಿಗೆ ಅವನ್ನೆಲ್ಲ ಹುಡುಕಿ ತೆಗೆಯಲು ಬಹಳ ಸಮಯ ಬೇಕಾಗುವುದಿಲ್ಲ. ಭಾರತವನ್ನು ನೂರು ಹೋಳು ಮಾಡಬೇಕು, ‘ಚಿಕನ್ ನೆಕ್’ ಕತ್ತರಿಸಬೇಕು ಹಾಗೂ ವಿಧಾನ ಸೌಧದ ಮೆಟ್ಟಿಲಮೇಲೆ ನಿಂತು ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುವವರೆಲ್ಲ ದೇಶಪ್ರೇಮಿಗಳು, ವ್ಯವಸ್ಥೆಯನ್ನು ಸ್ವಚ್ಚ ಮಾಡುತ್ತಿರುವ ಜ್ಞಾನೇಶ್ ಕುಮಾರ್, ಅಜಿತ ಧೋವಲ್ ಥರದವರು ದೇಶದ್ರೋಹಿಗಳು, ಹೇಗಿದೆ ಮಜ!

ಉಮರ್ ಖಾಲೀದ್, ಶೆರ್ಜಿಲ್ ಇಮಾಮ್ ಇವರೆಲ್ಲ ರಾಷ್ಟ್ರದ್ರೋಹಿಗಳಾ ಅಥವಾ ಅಲ್ವಾ ಅನ್ನೋದನ್ನ ನ್ಯಾಯಾಲಯ ತೀರ್ಮಾನಿಸಬೇಕಂತೆ. ಆದರೆ ಕಾನೂನಿನನ್ವಯ ದೇಶದ ಪ್ರಜಾಪ್ರಭತ್ವದ ರಕ್ಷಕನಾಗಿ ಕೆಲಸ ಮಾಡುತ್ತಿರುವ ಜ್ಞಾನೇಶ ಕುಮಾರ ರಾಷ್ಟ್ರದ್ರೋಹಿ ಎಂದು ಇವರು ರಸ್ತೆಯ ಮೇಲೆ ನಿಂತು ತೀರ್ಮಾನ ಮಾಡುತ್ತಾರಂತೆ.

ಎಷ್ಟು ಹಾಸ್ಯಾಸ್ಪದವಲ್ಲವೇ ಇದು? ಹಾಲಿ ಚುನಾವಣಾ ಆಯುಕ್ತರನ್ನು ಜೈಲಿಗೆ ಕಳುಹಿಸಬೇಕು ಎನ್ನುವವರಿಗೆ ನಾನು ಕೇಳುವ ಪ್ರಶ್ನೆ, ನಮ್ಮ ದೇಶದ ನಾಗರಿಕರೇ ಆಗಿರದಿzಗ ಸೋನಿಯಾ ಗಾಂಧಿಯವರ ಹೆಸರನ್ನ ಮತದಾರ ಪಟ್ಟಿಗೆ ಸೇರಿಸಿದ್ದರಲ್ಲ, ಆ ಚುನಾವಣಾ ಆಯುಕ್ತರಿಗೆ ಯಾವ ಪ್ರಶಸ್ತಿ ಕೊಡೋಣ? ನಾವೆಲ್ಲ ನೋಡಿರುವಂತೆ ಪಶ್ಚಿಮ ಬಂಗಾಳದಲ್ಲಿ ಹಿಂಸೆಯಿಲ್ಲದೇ ಚುನಾವಣೆಗಳು ನಡೆದಿದ್ದಿಲ್ಲ, ಆದರೆ ಈ ಬಾರಿ ಅಲ್ಲಿ ಅತ್ಯಂತ ಶಾಂತವಾಗಿ ಚುನಾವಣೆ ನಡೆದಿದೆ.

ಬಿಹಾರದಲ್ಲಿ ಬಹಳ ಕಾಲದ ನಂತರ ಚುನಾವಣೆಗಳು ವ್ಯವಸ್ಥಿತವಾಗಿ ನಡೆದವು. ಒಂದು ಕಾಲದಲ್ಲಿ, ಸತ್ತುಹೋಗಿರುವವರು, ಅಕ್ರಮವಾಗಿ ಗಡಿದಾಟಿ ಬಂದವರು ಮುಂತಾದವರು ನಮ್ಮಲ್ಲಿ ಮತ ಚಲಾಯಿಸುವ ಸೌಲಭ್ಯವಿತ್ತು. ಎಸ್‌ಐಆರ್ ಬಂದ ಮೇಲೆ ಅದು ಸಾಧ್ಯವಿಲ್ಲದಂತಾಯ್ತು. ಎಸ್‌ಐಆರ್ ನಂಥ ಅತ್ಯಂತ ಕಠಿಣ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಹಾಗಾಗಿ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ಕೊಡಬೇಕು ಎಂದು ವಿರೋಧಪಕ್ಷಗಳು ಕೇಳುವುದಾ? ಸುಮಾರು 13 ಕೋಟಿ ಜನರ ಹೆಸರು ತಪ್ಪಾಗಿ ಮತದಾರರ ಪಟ್ಟಿಯಲ್ಲಿ ಸೇರಿಕೊಂಡುಬಿಟ್ಟರೆ, ಅಥವಾ ಉಳಿದುಕೊಂಡುಬಿಟ್ಟರೆ ಚುನಾವಣಾ ಆಯೋಗ ಸುಮ್ಮನೇ ಕೂರಬೇಕಾ? ಎನ್ನುವುದು ಪ್ರಶ್ನೆ.

ಇನ್ನೂ ಒಂದು ಬಹಳ ಮಜವಾದ ಮಾತಿದೆ, ಮತದಾರರ ಪಟ್ಟಿಯಿಂದ ಹುಡುಕಿ ಹುಡುಕಿ ಅಲ್ಪಸಂಖ್ಯಾತರ, ಹಿಂದುಳಿದವರ ಹೆಸರುಗಳನ್ನು ಮಾತ್ರ ಕೈಬಿಡಲಾಗಿದೆಯಂತೆ. ಈಗ, 13 ಕೋಟಿ ಜನರನ್ನು ಕೈಬಿಟ್ಟಿರುವುದಕ್ಕೆ ಆಯೋಗ ಆಧಾರ ಒದಗಿಸಿದರೆ, ಈ ಹೆಸರುಗಳನ್ನು ಮೊದಲು ಯಾವಾಗೋ ತಪ್ಪಾಗಿ ಸೇರಿಸಲಾಗಿತ್ತು ಎಂದಾಗುವುದಿಲ್ಲವೇ? ಹೌದು ಅಂತಾದರೆ ಅಂಥವರ ಹೆಸರನ್ನು ತಪ್ಪಾಗಿ ಸೇರಿಸಿದ್ದು ಯಾರ ಅಧಿಕಾರದ ಅವಧಿಯಲ್ಲಿ ಎನ್ನವುದು ಬೇಕಲ್ಲ.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳಲ್ಲಿ ಎಸ್‌ಐಆರ್ ಆಗಿರದಿದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ ಎನ್ನುವುದು ನಿಜವಾದರೆ, ಒಂದು ಸರಕಾರವನ್ನು ಬದಲಿಸುವಷ್ಟು ನಕಲಿ ಮತದಾರರು ಆ ರಾಜ್ಯಗಳ ಮತದಾರರ ಪಟ್ಟಿಯಲ್ಲಿದ್ದರು ಅಂತಾಗುವುದಿಲ್ಲವೇ? ವಾಸ್ತವಿಕವಾಗಿ ಯಾವ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಮತದಾರರೂ ಈ ಮಾತು ಹೇಳುತ್ತಿಲ್ಲ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರ ಪಟ್ಟಿಯಿಂದ ನನ್ನ ಹೆಸರನ್ನು ತೆಗೆಯಲಾಗಿದೆ, ಸೇರಿಸಿಕೊಳ್ಳಲು ಚುನಾವಣಾ ಆಯೋಗ ಒಪ್ಪುತ್ತಿಲ್ಲ ಎನ್ನುವ ಯಾವುದಾದರೂ ಒಂದು ದೂರು ಇಲ್ಲಿಯವರೆಗೆ ದಾಖಲಾಗಿದೆಯಾ? ಇಲ್ಲವೇ ಇಲ್ಲ. ಚುನಾವಣಾ ಆಯೋಗದ ದಾಖಲೆಯ ಪ್ರಕಾರ, ತೆಗೆಯಲ್ಪಟ್ಟ 13 ಕೋಟಿ ಮತದಾರರಲ್ಲಿ ಸುಮಾರು ಮೂರು ಕೋಟಿ ಜನ ಮರಣಿಸಿದ್ದಾರೆ.

2 ಕೋಟಿ untraceable, 6 ಕೋಟಿಗೂ ಹೆಚ್ಚು ಜನ ಸ್ಥಳಾಂತರಗೊಂಡಿದ್ದಾರೆ. ಮರಣ ಹೊಂದಿದವ ರನ್ನು ಬಿಟ್ಟು ಉಳಿದವರಿಗೆ ಹೊಸತಾಗಿ ಅರ್ಜಿ ಸಲ್ಲಿಸುವ ಅವಕಾಶ ಈಗಲೂ ಇದೆ, ಅಂತಾದ ಮೇಲೆ ಸುಮ್ಮನೇ ಅಳುವುದೇಕೆ? ಈ ಪ್ರಕ್ರಿಯೆಯಿಂದ ಸುಮಾರು 15 ಪ್ರತಿಶತ ಮತದಾರರ ಸಂಖ್ಯೆ ವಿವಿಧ ಕಾರಣಗಳಿಂದ ಕಡಿಮೆ ಆಗಿದೆ ಎನ್ನುವುದು ದಾಖಲೆಯಾಗಿದೆ. ದೇಶಾದ್ಯಂತ ಆದ ಮತದಾನದ ಪ್ರಮಾಣವೇ 65% ಇರುವಾಗ, 35% ಜನ ಮತದಾನವನ್ನೇ ಮಾಡದಿರುವಾಗ ಈ 15 ಪ್ರತಿಶತ ಮತದಾರರು ಚುನಾವಣೆಗಳ ಮೇಲೆ ಯಾವ ಪರಿಣಾಮ ಬೀರುತ್ತಾರೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ.

ಮತದಾನ ಮಾಡದಿರುವ 35% ಮತದಾರರಲ್ಲಿ ಈ 15% ಯಾಕಿರಬಾರದು? ಸುಮ್ಮನೇ ಅಳುವುದಕ್ಕಿಂತ ಈ ಸಂಗತಿಗಳನ್ನು ವಿಶ್ಲೇಷಣೆ ಮಾಡುವುದೊಳಿತು. ಇವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗಲೇ ಕೆಲವು ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳು ಬಂದಿವೆ. ಜ್ಞಾನೇಶ್ ಕುಮಾರ ಬರುವ ಮೊದಲೇ ಕಾಂಗ್ರೆಸ್ ಸುಮಾರು 90 ಚುನಾವಣೆಗಳಲ್ಲಿ ಸೋತಿದೆ. ಇದಕ್ಕೆಲ್ಲ ಯಾರನ್ನು ಹೊಣೆಯಾಗಿಸುವುದು? ಇತ್ತೀಚೆಗೆ ಕೇರಳದಲ್ಲಿ ಯುಡಿಎಫ್ ಜೊತೆಗೆ ಅಧಿಕಾರ ಹಿಡಿದ ಕಾಂಗ್ರೆಸ್ಸಿನ ಮಂತ್ರಿಗಳು ರಾಜ್ಯದಲ್ಲಿ ಎಸ್‌ಐಆರ್ ಸರಿಯಾಗಿ ಜಾರಿಗೆ ಬಂದಿದ್ದರಿಂದ ನಾವು ಗೆಲ್ಲಲು ಸಾಧ್ಯವಾಯ್ತು, ಅದಲ್ಲದಿದ್ದರೆ ಎಡಪಕ್ಷಗಳು ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಿ ಗೆಲ್ಲುತ್ತಿದ್ದರು ಎಂದು ಸಾರ್ವಜನಿಕವಾಗಿ ಹೇಳುತ್ತಾರೆ.

ಇದು ಯಾವ ರೀತಿಯ ದ್ವಂದ್ವ ನಿಲುವು? ಇನ್ನೂ ಒಂದು ವಿಷಯ, ಮತಯಂತ್ರ ಹಾಗೂ ಮತದಾರರ ಪಟ್ಟಿ ಬಿಜೆಪಿಯವರ ಕೈಯ್ಯಲ್ಲಿದ್ದಿದ್ದರೆ ಅಥವಾ eನೇಂದ್ರಕುಮಾರ್ ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರೆ, ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಕೇವಲ ಒಂದೂವರೆ ಲಕ್ಷ ಅಲ್ಪ ಅಂತರದಿಂದ ಗೆಲ್ಲುತ್ತಿರಲಿಲ್ಲ.

ಅಯೋಧ್ಯೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸೋಲುತ್ತಿರಲಿಲ್ಲ. 2024ರ ಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯ ಸರಳ ಬಹುಮತ ಬರಬೇಕಾಗಿತ್ತು ಹಾಗೂ ಕಾಂಗ್ರೆಸ್ಸಿಗೆ 100 ಸ್ಥಾನ ಸಿಗಬಾರದಿತ್ತು ಹಾಗೂ 2019ರಲ್ಲಿ 303 ಸ್ಥಾನ ಗೆದ್ದಿದ್ದ ಬಿಜೆಪಿ 2024ರಲ್ಲಿ 240ಕ್ಕೆ ಕುಸಿಯಬಾರದಿತ್ತು ಅಲ್ವಾ? ಮೋದಿ ಸರಕಾರಕ್ಕೆ ಆಡಳಿತ ವಿರೋಧಿ ಅಲೆ ಯಾಕೆ ತಟ್ಟುತ್ತಿಲ್ಲ ಎನ್ನುವುದು ನಿಜಕ್ಕೂ ಆಲೋಚಿಸಬೇಕಾದ ಸಂಗತಿಯೇ ಆಗಿದೆ.

ಕೇಂದ್ರದಲ್ಲಿ ಸತತವಾಗಿ ಮೂರು ಬಾರಿ ಸ್ಪಷ್ಟ ಬಹುಮತದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆಯೆಂದರೆ ಅದು ಸಣ್ಣ ವಿಷಯವಲ್ಲ. ಉತ್ತರ ಪ್ರದೇಶದಂಥಾ ದೊಡ್ಡ ರಾಜ್ಯದಲ್ಲಿ ಸತತವಾಗಿ ಅಧಿಕಾರಕ್ಕೆ ಬರುವುದು ಸುಲಭದ ಮಾತಲ್ಲ. ಬಿಹಾರದಲ್ಲಿ ಈ ರೀತಿಯ ಗೆಲುವನ್ನು ನಿರೀಕ್ಷೆ ಮಾಡುವುದೂ ಕಷ್ಟವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಅನಾದಿಯಿಂದ ಎಡಪಕ್ಷಗಳ ಸ್ವರ್ಗವಾಗಿದ್ದ ಪಶ್ಚಿಮ ಬಂಗಾಲವನ್ನು ಈ ಮಟ್ಟದಲ್ಲಿ ಸೂರೆಹೊಡೆಯುವುದು ಅಂದರೆ ಊಹಿಸುವುದೂ ಕಷ್ಟದ ಮಾತೇ ಸರಿ.

ಆದರೆ ಇವೆಲ್ಲವೂ ಚುನಾವಣಾ ಅಕ್ರಮಗಳಿಂದಲೇ ಆಗಿದೆ ಎನ್ನುವುದಾದರೆ, ಇದೇ ರಾಜ್ಯಗಳಲ್ಲಿ ಹಿಂದೆ ಕಾಂಗ್ರೆಸ್ ಸತತವಾಗಿ ಎಷ್ಟು ವರ್ಷ ಅಧಿಕಾರ ಮಾಡಿತ್ತು ಎನ್ನುವುದನ್ನು ನೆನಪಿಸಿಕೊಳ್ಳ ಬೇಕು. ಇದರರ್ಥ ಏನು? ಆಗೆಲ್ಲ ಆಡಳಿತ ವಿರೋಧಿ ಅಲೆ ಇದ್ದರೂ ಕಾಂಗ್ರೆಸ್ ಚುನಾವಣೆಗಳನ್ನು ಹೈಜಾಕ್ ಮಾಡಿ ಗೆದ್ದಿತ್ತು ಅಂತ ಅರ್ಥವಾ? ಸುಮ್ಮನೇ ಕಾಮೆಡಿ ಮಾಡಿಕೊಂಡು ಓಡಾಡುವುದಲ್ಲ, ವಿರೋಧಪಕ್ಷದ ನಾಯಕನಾದವನು ಜವಾಬ್ದಾರಿಯಿಂದ ಮಾತನಾಡಬೇಕಲ್ಲವೇ? ತುರ್ತು ಪರಿಸ್ಥಿತಿಯ ಕ್ರೂರ ಪ್ರದರ್ಶನದ ನಂತರ ಜನತಾ ಪಕ್ಷ ಅಧಿಕಾರಕ್ಕೆ ಬಂತು.

ಇಂದಿರಾ ವಿರುದ್ಧ ಇಡೀ ದೇಶವೇ ಸಿಡಿದು ನಿಂತಿತ್ತು. ಯಾವುದೇ ಕಾರಣಕ್ಕೆ ಆಕೆ ಮತ್ತೆ ಗೆದ್ದು ಬರುವ ಸಾಧ್ಯತೆಯೇ ಇರಲಿಲ್ಲ. ಚುನಾವಣಾ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಚುನಾಯಿತ ಸರಕಾರ ಗಳನ್ನು ಕೆಡಹುವುದು ಮುಂತಾದ ಗಂಭೀರ ಆರೋಪಗಳು ಇಂದಿರಾ ಮೇಲೆ ಇತ್ತು. ಆದರೆ ಮತ್ತೆ ಆಕೆ ಅಭೂತಪೂರ್ವವಾಗಿ ಗೆದ್ದು ಬಂದಳು. ಅದರರ್ಥ ಆಕೆ ಚುನಾವಣಾ ಅಕ್ರಮಗಳನ್ನೆಸಗಿ ಗೆದ್ದುಬಂದಿದ್ದಳು ಎನ್ನಬಹುದೇ ಹಾಗಾದರೆ? ಇಲ್ಲಿ ಪ್ರಶ್ನೆ ಇರುವುದು ರಾಷ್ಟ್ರೀಯ ನಾಯಕರ ವಿಶ್ವಾಸಾರ್ಹತೆ. ಆಗೆಲ್ಲ ಚುನಾವಣೆಗಳನ್ನು ಗೆಲ್ಲಲು ಕೇವಲ ಇಂದಿರಾ ಹೆಸರು ಸಾಕಾಗುತ್ತಿತ್ತು.

ಇಂದಿರಾ ಕೈಗೆ ಅಧಿಕಾರ ಕೊಟ್ಟರೆ ದೇಶ ಸುರಕ್ಷಿತ ಎನ್ನುವ ಭಾವನೆಯಿತ್ತು. ದೂರದರ್ಶನ ಸಾಮಾಜಿಕ ಜಾಲತಾಣಗಳು ಇಲ್ಲದ ಸಮಯವಾದರೂ ಆಕೆಯ ಒಂದು ಭಾಷಣಕ್ಕೆ ದೇಶಕ್ಕೆ ದೇಶವೇ ಮರುಳಾಗಿ ಬಿಡುತ್ತಿತ್ತು. ಅದೇ ರೀತಿ ಈಗ ನರೇಂದ್ರ ಮೋದಿ ಜನರ ವಿಶ್ವಾಸ ಗಳಿಸಿದ್ದಾರೆ, ಅವರ ಜನಪ್ರಿಯತೆ ಹಾಗಿದೆ. ಹಾಗಾಗಿ ಅವರು ಸತತವಾಗಿ ಗೆಲ್ಲುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಒಬ್ಬ ಮಹಾನುಭಾವ ಹೇಳ್ತಾನೆ, ಚುನಾವಣಾ ಆಯುಕ್ತರನ್ನು ಕರೆಂಟ್ ಕಂಬಕ್ಕೆ ನೇತು ಹಾಕಿ ಸಾಯಿಸಬೇಕು ಅಂತ. ಇನ್ನೊಬ್ಬ ಹೇಳ್ತಾನೆ, ಒಂದು ಕೊಲೆಗೆ ಮಾಫಿ ಇದ್ದಿದ್ದರೆ ನಾನು ಜ್ಞಾನೇಶ್ ಕುಮಾರ್‌ನನ್ನು ಗುಂಡಿಕ್ಕಿ ಸಾಯಿಸುತ್ತಿದ್ದೆ ಎಂದು. ಸಿಜೆಪಿ ‘ಗ್ಯಾನೂ ಬ್ರೋ’ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡುತ್ತೆ. ಮೂರ್ಖತನದ ಪರಮವಧಿಯಲ್ಲವೇ ಇದು? ಈ ಢೋಂಗಿ ಹೋರಾಟಗಳಿಂದ ಚುನಾವಣಾ ಆಯುಕ್ತರ ಕೂದಲನ್ನೂ ಕೊಂಕಿಸಲಾಗುವುದಿಲ್ಲ.

ಎಸ್‌ಐಆರ್ ಪ್ರಕ್ರಿಯೆಯನ್ನಂತೂ ನಿಲ್ಲಿಸಲು ಸಾಧ್ಯವೇ ಇಲ್ಲ. ಮಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಪಡೆಯುವುದು ಅಂದರೆ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದಷ್ಟು ಸುಲಭವಲ್ಲ ಎನ್ನುವುದು ಈ ಆಂದೋಲನ ಜೀವಿಗಳಿಗೆ ತಿಳಿದ ಹಾಗಿಲ್ಲ. ಎಸ್‌ಐಆರ್‌ನಂಥಾ ನಿರ್ಣಾಯಕ ಕೆಲಸವಾಗುವಾಗ ಇಂಥಾ ಪುಂಡಾಟಗಳು, ಬೀದಿರಂಪಗಳು ನಡೆಯುತ್ತಿವೆ ಅಂದರೆ, ಜ್ಞಾನೇಶ್ ಕುಮಾರ್ ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂತಲೇ ಅರ್ಥ. ಆದರೆ, ಒಂದು ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಹೀಗೆ ಹಾದಿಬೀದಿಯಲ್ಲಿ ಹೋಗುವವರು ಪ್ರಶ್ನಿಸಿ ದಾಂಧಲೆ ಮಾಡುತ್ತಿದ್ದರೂ ಅವರ ವಿರುದ್ಧ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳದೇ ಸುಮ್ಮನಿದ್ದರೆ ಅಥವಾ ಒತ್ತಡಕ್ಕೆ ಮಣಿದು ರಾಜೀನಾಮೆ ಕೊಡಲು ಮುಂದಾದರೆ ಆಗ ಜ್ಞಾನೇಶ್ ಕುಮಾರ್ ತಪ್ಪುಗಾರರಾಗುತ್ತಾರೆ. ಹಾಗಾಗಲಿಕ್ಕಿಲ್ಲ ಎನ್ನುವ ವಿಶ್ವಾಸ ನನ್ನದು.

ವಿನಾಯಕ ವೆಂ ಭಟ್ಟ

View all posts by this author