ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sudhakar Hosalli Column: ನಿರ್ಬಂಧ ಸಂಘಕ್ಕೋ, ಸಮಾಜಕ್ಕೋ ?

ಪ್ರತಿ ಬಾರಿ ಆರೆಸ್ಸೆಸ್‌ನ ನಿರ್ಬಂಧದ ಬಗ್ಗೆ ದನಿಯೆದ್ದಾಗೆಲ್ಲಾ, ಸಮಾಜವೇ ಆರೆಸ್ಸೆಸ್‌ನ ಸಾಮಾಜಿಕ ಕಾರ್ಯಗಳನ್ನು ವಿವರವಾಗಿ, ದಾಖಲೆ ಸಮೇತ ಚರ್ಚಿಸಿ ಆರೆಸ್ಸೆಸ್ ಸಂಘಟನೆಯನ್ನು ಗೆಲ್ಲಿಸುತ್ತಾ ಬಂದಿದೆ, ಆ ಮೂಲಕ ಸಮಾಜವೂ ಗೆಲ್ಲುತ್ತಿದೆ. ಆರೆಸ್ಸೆಸ್ ಕುರಿತು, ಅದರ ಸಾಮಾಜಿಕ ಬದ್ಧತೆಯ ಬಗೆಗೆ ಸಮರ್ಥನೆಗೆ ಇಳಿಯುವವರಿಗೆ ಗೆಲುವು ಮೊದಲೇ ಖಾತ್ರಿಯಾಗಿರುತ್ತದೆ ಎಂಬುದೇ ವಿಶೇಷ ಮತ್ತು ವಾಸ್ತವ.

ತಿರುಗೇಟು

ಡಾ.ಸುಧಾಕರ ಹೊಸಳ್ಳಿ

ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರೆಸ್ಸೆಸ್) ನಿರ್ಬಂಧಿಸುವ, ಅದರ ಅಂಗಸಂಸ್ಥೆಗಳನ್ನು ನಿಷೇಧಿಸುವ ಚರ್ಚೆ ಆಗಾಗ ಆಗುತ್ತಲೇ ಇರುತ್ತದೆ. ಈ ಹಿಂದೆ ಕೇವಲ ಚರ್ಚೆಗೆ ಸೀಮಿತವಾಗಿದ್ದ ಆರೆಸ್ಸೆಸ್‌ನ ನಿರ್ಬಂಧ ಮತ್ತು ನಿಷೇಧದ ವಿಷಯವು ಈಗ ಅಕ್ಷರ ರೂಪವನ್ನು ಪಡೆದುಕೊಂಡಿದೆ.

ಜತೆಗೆ, ಈ ನಿಟ್ಟಿನ ಪ್ರಯತ್ನವು ‘ಗಂಭೀರ’ ಎನ್ನುವಷ್ಟರ ಮಟ್ಟಿಗೆ ಮುಂದುವರಿದಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರವು ಈ ನಿಟ್ಟಿನಲ್ಲಿನ ವಿಸ್ತೃತ ಚರ್ಚೆಗೆ ಮತ್ತೊಮ್ಮೆ ಅವಕಾಶ ಮಾಡಿ ಕೊಟ್ಟಿದೆ, ಅವಲೋಕನಕ್ಕೂ ಅನುವು ಮಾಡಿಕೊಟ್ಟಿದೆ. ಈ ಬಾರಿ ಕಾನೂನಿನ ಕಣ್ಣಿನಿಂದಲೂ ಸಂವಿಧಾನದ ಕಲಂಗಳ ಮಂಥನಕ್ಕೂ ಆರೆಸ್ಸೆಸ್ ನಿಷೇಧದ ಯೋಜನೆ ಸರಕಾಗಿದೆ.

ಪ್ರತಿ ಬಾರಿ ಆರೆಸ್ಸೆಸ್‌ನ ನಿರ್ಬಂಧದ ಬಗ್ಗೆ ದನಿಯೆದ್ದಾಗೆಲ್ಲಾ, ಸಮಾಜವೇ ಆರೆಸ್ಸೆಸ್‌ನ ಸಾಮಾಜಿಕ ಕಾರ್ಯಗಳನ್ನು ವಿವರವಾಗಿ, ದಾಖಲೆ ಸಮೇತ ಚರ್ಚಿಸಿ ಆರೆಸ್ಸೆಸ್ ಸಂಘಟನೆಯನ್ನು ಗೆಲ್ಲಿಸುತ್ತಾ ಬಂದಿದೆ, ಆ ಮೂಲಕ ಸಮಾಜವೂ ಗೆಲ್ಲುತ್ತಿದೆ. ಆರೆಸ್ಸೆಸ್ ಕುರಿತು, ಅದರ ಸಾಮಾಜಿಕ ಬದ್ಧತೆಯ ಬಗೆಗೆ ಸಮರ್ಥನೆಗೆ ಇಳಿಯುವವರಿಗೆ ಗೆಲುವು ಮೊದಲೇ ಖಾತ್ರಿಯಾಗಿರುತ್ತದೆ ಎಂಬುದೇ ವಿಶೇಷ ಮತ್ತು ವಾಸ್ತವ. ಆರೆಸ್ಸೆಸ್ ಅನ್ನು ನಿರ್ಬಂಧಿಸಲು ಅಥವಾ ನಿಷೇಧಿಸಲು ಮುಂದಾದವರಿಗೆ ಸೋಲಿನ ರುಚಿ ತಟ್ಟುತ್ತಲೇ ಇದೆ.

1946ರ ಡಿಸೆಂಬರ್ 17ರಂದು ಸಂವಿಧಾನ ರಚನಾ ಸಭೆಯಲ್ಲಿ ತಮಗೆ ಮೊದಲು ಮಾತಾಡಲು ಅವಕಾಶ ಸಿಕ್ಕಾಗ ಅಂಬೇಡ್ಕರರು ಹೇಳಿದ ಈ ಮಾತು ಈಗಲೂ ಪ್ರಸ್ತುತವೆನಿಸುತ್ತದೆ: “ಈ ಸಭೆಗೆ ಹೆಚ್ಚಿನ ಅಧಿಕಾರವಿದೆ ಎನ್ನುವುದಾದರೆ, ಅದನ್ನು ವಿವೇಚನಾಯುತವಾಗಿ ಬಳಕೆ ಮಾಡಿ ಗುರಿ ಸಾಧಿಸೋಣ.

ವಿವೇಕರಹಿತವಾದ ನಡವಳಿಕೆಯು ಅವಸಾನವನ್ನು ತಂದೊಡ್ಡುತ್ತದೆ". ಇದನ್ನು ಅವಲೋಕಿಸಿ ದಾಗ, ಅಂಬೇಡ್ಕರರಂತೆ ಆಲೋಚಿಸುವುದು ಅದೆಷ್ಟು ಉಪಯುಕ್ತ ಎನಿಸದಿರದು. ‘ದೇವರಿಗಿಲ್ಲ ಜಾತಿಯ ಭೇದ, ಭಕುತರಿಗಂತೂ ಇಲ್ಲ. ಜಾತಿಭೇದದ ಸುಳಿಯೊಳು ಸಿಲುಕಿ ಮರುಗದಿರೋ ಮನುಜ’ ಎಂದಿದ್ದಾರೆ ಕಬೀರರು. ಭಾರತದಲ್ಲಿ ಭದ್ರವಾಗಿ ಬೇರೂರಿದ್ದ ಜಾತಿ ಸಂಕೋಲೆಯನ್ನು ತನ್ನ ಪ್ರತಿ ಕಾರ್ಯಚಟುವಟಿಕೆಯಲ್ಲೂ, ವರ್ಗಗಳಲ್ಲೂ, ಪಥಸಂಚಲನ ಗಳಲ್ಲೂ ಸ್ವಯಂ ಸೇವಕರು ಮೀರಿ ನಿಲ್ಲುವಂತೆ ಪ್ರೇರೇಪಿಸುವ ಸಂಘಟನೆಯೊಂದನ್ನು ಹಿಂದೂ ಸಮಾಜ ಮೀರಿ ನಿಲ್ಲಲು ಸಾಧ್ಯ ಎಂದು ಯೋಚಿಸುವುದಾದರೂ ಹೇಗೆ? ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಗುಪ್ತ ಕಾರ್ಯಸೂಚಿ ಗಳಿಲ್ಲದೆ, ಎಲ್ಲರಿಗೂ ಮುಕ್ತವಾಗಿ ಅವಕಾಶ ಕಲ್ಪಿಸುವ ಆರೆಸ್ಸೆಸ್ ಅನ್ನು ನಿರ್ಬಂಧಿಸುವ ಅಗತ್ಯ ವಾದರೂ ಏನು? ಗುಪ್ತ ಕಾರ್ಯಸೂಚಿಯುಳ್ಳ ಸಂಘಟನೆಯೊಂದು ಈ ರೀತಿ ಸಾರ್ವಜನಿಕ ವಾಗಿ ತನ್ನನ್ನು ತೆರೆದುಕೊಳ್ಳಲು ಸಾಧ್ಯವಿದೆಯೇ? ಈ ನೆಲದ ಮೂಲಧರ್ಮವಾದ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದು, ತನ್ನ ದೇಶದ ಬಗ್ಗೆ ಯುವಕರಲ್ಲಿ ಅನನ್ಯ ರಾಷ್ಟ್ರಪ್ರೇಮ ವನ್ನು ಸೃಜಿಸುವುದು ಅಪರಾಧ ಹೇಗಾಗುತ್ತದೆ? ಯುವಜನರು ವ್ಯಸನಮುಕ್ತರಾಗುವಂತೆ ಮಾಡುವುದು ಅಪರಾಧವೇ? ಅವರು ಭಾರತವನ್ನು ಹೆಚ್ಚು ಪ್ರೀತಿಸುವಂತೆ ಮಾಡುವುದು ಅಪಾಯವೇ? ತನಗೆ 100 ವರ್ಷ ತುಂಬಿದ ಅಂಗವಾಗಿ ಸಂಘವು ದು ಅಂಶಗಳ ಯೋಜನೆಯನ್ನು ಸಮಾಜದ ಮುಂದಿಟ್ಟಿದೆ.

ಅದರಲ್ಲೂ ನಾಗರಿಕ ಶಿಷ್ಟಾಚಾರ ಎಂಬ ತತ್ವದ ಮೂಲಕ ಸಮಾಜವೂ, ಪ್ರತಿ ಸ್ವಯಂಸೇವಕನೂ ಸಂವಿಧಾನದ ಆಶಯಗಳನ್ನು, ಮೂಲಭೂತ ಕರ್ತವ್ಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ಸಂಕಲ್ಪ ತೊಟ್ಟ ಸಂಘಟನೆಯನ್ನು ನಿಯಮಗಳ ಮೂಲಕ ಬಂಧಿಸುವ ನಡೆ ಸ್ವೀಕೃತವೇ? ಸಂವಿಧಾನವನ್ನು ಸಾವಿನ ಅಂಚಿಗೆ ದೂಡಿ, ಸ್ವಯಂ ಸೇವಕರಿಗೆ ನರಕದರ್ಶನ ಮಾಡಿಸಿದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೇ ಸಂಘಕಾರ್ಯ ನಿಂತಿಲ್ಲ.

‘ಭೂಗತ ಭುಗಿಲು’ ಸ್ಪೂರ್ತಿಯ ಉದಾಹರಣೆಯಾಗಿ ಯುವಸ್ವಯಂಸೇವಕರಿಗೆ ಇಂದೂ ಪ್ರೇರಣೆ ಯಾಗಿದೆ. 1949ರ ನವೆಂಬರ್ 25ರಂದು, ಸಂವಿಧಾನ ಕುರಿತಾಗಿ ಅಂಬೇಡ್ಕರರು ಆಡಿದ ಮಾತಿನಲ್ಲಿ ಅದೆಷ್ಟು ದೂರದೃಷ್ಟಿಯಿತ್ತು ಎಂಬುದನ್ನು ಆರೆಸ್ಸೆಸ್ ನಿರ್ಬಂಧ ಎಂಬ ವಾಮ ಯೋಜನೆಯೂ ತಿಳಿಯಪಡಿಸುತ್ತದೆ.

‘ಸೆಕ್ಯುಲರಿಸಂ’ ಎಂಬ ಪರಿಭಾಷೆಯ ಸೇರ್ಪಡೆಗೆ ಅವರು ವಿರೋಧ ವ್ಯಕ್ತಪಡಿಸುತ್ತ, “ಜನರು ಯಾವ ಸಂರಚನೆಯಲ್ಲಿ ಬದುಕಬೇಕೆಂದು ಸಂವಿಧಾನವೇ ನಿರ್ಧಾರ ಮಾಡಿದರೆ, ಆಗ ಸಂವಿಧಾನವು ತನ್ನೊಂದಿಗೆ ಪ್ರಜಾಪ್ರಭುತ್ವವನ್ನೂ ನಾಶಮಾಡುತ್ತದೆ" ಎಂದಿದ್ದರು. ಈ ಎಚ್ಚರಿಕೆಯು ಈಗ ದಿಟವಾಗುವಂತೆ ಕಾಣುತ್ತಿದೆ.

ನಿಷೇಧದ ಕಾನೂನು ಸಾಧ್ಯತೆಗಳು: 1966ರ ನವೆಂಬರ್ 30ರಂದು, ಅಂದಿನ ಕೇಂದ್ರ ಸರಕಾರವು ತನ್ನ ಅಧಿಕೃತ ಜ್ಞಾಪನ ಆದೇಶದಲ್ಲಿ, ಸರಕಾರಿ ನೌಕರರು/ಅಧಿಕಾರಿಗಳು ಆರೆಸ್ಸೆಸ್‌ನ ಚಟುವಟಿಕೆ ಯಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಿತ್ತು. 2024ರ ಜುಲೈ ೯ರ ಅಧಿಕೃತ ಜ್ಞಾಪನ ಆದೇಶದಲ್ಲಿ ಇಂದಿನ ಕೇಂದ್ರ ಸರಕಾರವು ಸದರಿ ಆದೇಶವನ್ನು ರದ್ದುಪಡಿಸಿ, ಸರಕಾರಿ ನೌಕರರು ಆರೆಸ್ಸೆಸ್‌ನ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಸಾಂವಿಧಾನಿಕವಾಗಿ, ಕಾನೂನಿನ ಅನ್ವಯ ಅಪರಾಧವಲ್ಲ ಎಂದು ತಿಳಿಸಿದೆ.

ಹಾಗಾದರೆ 1966ರಿಂದ ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಜಗತ್ತಿನ ಅತಿ ದೊಡ್ಡ ಸಾಮಾಜಿಕ ಸಂಘಟನೆಯಾದ ಆರೆಸ್ಸೆಸ್‌ ನಲ್ಲಿಅನೇಕ ಹುದ್ದೆಗಳನ್ನು (ಉದಾಹರಣೆಗೆ, ಪ್ರಾಂತ ಕ್ಷೇತ್ರೀಯ ಮತ್ತು ಅಖಿಲ ಭಾರತ ಮಟ್ಟದ ಹುದ್ದೆಗಳನ್ನು) ಅಲಂಕರಿಸಿದವರೂ ಸರಕಾರಿ ವ್ಯವಸ್ಥೆಯಲ್ಲಿ ಉನ್ನತ ಶ್ರೇಣಿಯನ್ನು ಹೊಂದಿದ್ದರು ಎಂಬುದು ಸಾಂಖ್ಯಿಕ ಸತ್ಯ.

ಅಂದು ನಿರ್ಬಂಧ ಹೇರಿದಮೇಲೂ-ನಿರ್ಬಂಧ ರದ್ದಾಗುವವರೆಗೂ, ನೌಕರಶಾಹಿಗಳು ಈ ಸಂಘಟನೆ ಯ ಜತೆಗೆ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿದ್ದಾರೆ ಎಂದಾದ ಮೇಲೆ, ಹೊಸ ನಿಷೇಧ ಎಷ್ಟು ಔಚಿತ್ಯಪೂರ್ಣ? ದೇಶವು ಯುದ್ಧಕ್ಕೆ ಒಡ್ಡಿಕೊಂಡಿದ್ದಾಗ ಮಾತ್ರವಲ್ಲದೆ, ನೈಸರ್ಗಿಕ ವಿಕೋಪ, ಕೋವಿಡ್‌ನಂಥ ವೈದ್ಯಕೀಯ ತುರ್ತು ಮುಂತಾದ ವಿವಿಧ ಸಂದರ್ಭಗಳಲ್ಲೂ ಆರೆಸ್ಸೆಸ್ ಸಮಾಜದ ಜತೆಗೆ ನಿಂತು ಸಾರ್ವಜನಿಕವಾಗಿ ಶ್ಲಾಘಿಸಲ್ಪಟ್ಟಿದೆ.

ವ್ಯಕ್ತಿತ್ವ ನಿರ್ಮಾಣದಲ್ಲಿ ಸದಾ ತೊಡಗಿಸಿಕೊಂಡಿರುವ, ರಾಷ್ಟ್ರಪ್ರೇಮದ ವೃದ್ಧಿ ಮತ್ತು ರಾಷ್ಟ್ರದ ಪರಮಾಧಿಕಾರದ ಸ್ಥಿರತೆಗೆ ಪಣತೊಟ್ಟಿರುವ ಈ ಸಂಘಟನೆಯನ್ನು ನಿರ್ಬಂಧಕ್ಕೆ ಒಳಪಡಿಸುವುದು ಯೋಗ್ಯ ಕಾರ್ಯವೇ? ""Providing for social welfare and reform or the throwing open of hindu religious institutions of a public character to all classes and section of Hindus'' ಎನ್ನುತ್ತದೆ ಸಂವಿಧಾನದ 25 ಬಿ ವಿಧಿ. ಈಗಾಗಲೇ ಇರುವ ಹಿಂದೂ ಧರ್ಮದ ಆಚರಣೆಗಳು ಸೇರಿದಂತೆ, ಹಿಂದೂ ಕಲ್ಯಾಣ ಚಟುವಟಿಕೆಗಳನ್ನು ನಿರ್ಬಂಽಸುವಂತೆ ಯಾವುದೇ ಕಾನೂನು ಮಾಡಬಾರದೆಂದು ನಿಯಮ ಮಾಡಲಾಗಿದೆ.

ಮುಂದುವರಿದು, 1995ರ ಯಶ್ವಂತರಾವ್ ಪತ್ರಿಕರ್ ಪ್ರಕರಣದಲ್ಲಿ Hindutva is a way of life ಎಂಬ ತೀರ್ಪು ನೀಡಿರುವುದರಿಂದ, ಕಾನೂನಿನ ಮೂಲಕ ಆರೆಸ್ಸೆಸ್ ನಿಷೇಧ ಸಾಧ್ಯವಿಲ್ಲ. ಸಂವಿಧಾನದ 28ನೇ ವಿಧಿಯನ್ವಯ ‘ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಚಟುವಟಿಕೆ ನಿರ್ಬಂಧ’ ಎಂಬುದರ ಅಡಿಯಲ್ಲಿ ಆರೆಸ್ಸೆಸ್‌ನ ಚಟುವಟಿಕೆ ಬರುವುದಿಲ್ಲ.

ಸಂವಿಧಾನ ಗೆಲ್ಲಿಸ ಹೊರಟಿರುವ ಸಂಘದ ಸೋಲನ್ನು ಬಯಸುವುದು ನಗೆಪಾಟಲು. ಆರೆಸ್ಸೆಸ್‌ನ ನೋಂದಣಿಗೆ, ತೆರಿಗೆ ಕಟ್ಟುವುದಕ್ಕೆ ನ್ಯಾಯಾಲಯವೇ ರಿಯಾಯಿತಿ ಕೊಟ್ಟಾಗಿದೆ. ಸಮಾಜವೇ ಆಲಿಂಗಿಸಿಕೊಳ್ಳುವ ಸಂಘವನ್ನು ಬಂಧಿಸಲು ಹೇಗೆ ಸಾಧ್ಯ? ಅಂದು ಸಂವಿಧಾನ ರಚನೆಯ ಸಂದರ್ಭದಲ್ಲಿ, ಭಾವಿ ಸಂವಿಧಾನವು ಹೇಗಿರಬೇಕು ಎಂಬ ಗಣರಾಜ್ಯ ನಿರ್ಣಯವನ್ನು ಮಂಡಿಸಲು ಅಂಬೇಡ್ಕರರಿಗೆ ಅವಕಾಶ ವಂಚಿಸಿದ್ದ ನೆಹರುರವರು, ತಾವು ಮಂಡಿಸಿದ ಗಣರಾಜ್ಯ ನಿರ್ಣಯಕ್ಕೆ ಡಾ.ಜಯಕರ್, ಅಂಬೇಡ್ಕರ್ ಸೇರಿದಂತೆ ಸೂಚಿತವಾದ 40 ತಿದ್ದುಪಡಿಗಳಲ್ಲಿ ಅಂಬೇಡ್ಕರರನ್ನು ಹೊರತುಪಡಿಸಿ 39 ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯುವಂತೆ ಮಾಡಿ, ಪ್ರಜಾಪ್ರಭುತ್ವದ ಆಶಯ ವನ್ನು ಸುಟ್ಟು, 1947ರ ಜನವರಿ ೨೨ರಂದು ತಮ್ಮಿಚ್ಛೆಯಂತೆ ಸಂವಿಧಾನದ ಗಡಿ ನಿರ್ಧಾರವಾಗು ವಂತೆ ಮಾಡಿದರು.

ಆರೆಸ್ಸೆಸ್ ನಿರ್ಬಂಧದ ಯೋಜನೆಯ ಹೊತ್ತಿನಲ್ಲಿ ನೆಹರು ಮತ್ತೆ ನೆನಪಾಗುತ್ತಿದ್ದಾರೆ, ಅದೂ ಮತ್ತೊಮ್ಮೆ ಪ್ರಜಾಪ್ರಭುತ್ವವು ಸೋಲುವ ಆತಂಕದೊಟ್ಟಿಗೆ.

(ಲೇಖಕರು ಸಂವಿಧಾನತಜ್ಞರು)