ವಚನಾಮೃತ (ಭಾಗ-2)
ರವಿ ಹಂಜ್
ಶ್ರೀ ರೇವಣಸಿದ್ಧರು ಯಾರು, ಎಷ್ಟು ಜನ ಎಂಬ ಪ್ರಶ್ನೆಯನ್ನು ಹಿಂದಿನ ಭಾಗದಲ್ಲಿ ನೋಡಿದೆವು. ಅಂದ ಹಾಗೆ ಸಿರಿವಾಳ ಶಾಸನ ಹೀಗಿದೆ: ‘ಧರ್ಮದ ಮನೆಯಾಡಿ ಪಟ್ಟಣ ಸಿರಿವೊಳಲ ಶ್ರೀಮತು/ ಸಿದ್ಧನಾತೇಶ್ವರ ದೇವರ ಅಂಗಬೋಗರಂ/ ಗಭೋಗ ಖಂಡಸ್ಸುಟಿತ ಜೀರ್ನೋದ್ಧಾರಕ್ಕಂ ಶಿವಯೋಗಿಗಳ/ ಶನಾತ್ಸಾಧನಕ್ಕಂ ಶ್ರೀಮತು ಸರ್ವ್ವ/ ದೇವದ ಯೊಳಗೆ ಶಿವಯೋಗಿ ಶಾನ್ತಿಮಯ್ಯಂಗಳ/ ಮಹಿಮೆಯೆಂತೆನೆ ಕ್ರಿತಯುಗ ತ್ರೇತೆ/ ಮೂರನೆ ಯ ದ್ವಾಪರದೊಳು ನೆಗಳ ಭೂತೋದ್ಭವರ್ಬ್ಬತಿತ/ ಬ್ರತಾನುಕಾರಿಗಳು ದಿವ್ಯ ಸಹಸ್ರಶತಾ/ ನುಮಬ್ಬ ಕಿಂಕರನು ಹರಯಿ ಬಳಿಕವಾತೆಸೆದೀವನದೆಂತೆನೆ/ ಶಾಮಯ್ಯ ತತುಕ್ಷಣದೊಳೆ ಭಕ್ತಿಯ ಪಡದನೇಂ ಕಲಿವೀರನೋ ವೀರಭದ್ರನೋ ಛಿ/ ಶ್ರೀ ಮದಣೆ ಮಾದೃಷ್ಟಗುಣಸಂ/ ಪಂನರು ತತ್ವಜ್ಞಾನ ಪ್ರಸನ್ನರುಂ ಷಡಂಗಯೋಗ ಸಂಗದರುಂ/ ಸಸಾರಭ್ಯಸಂಗ ನಿಸಂಗರು ಮಪ್ಪಶಿವಯೋ/ ಗಿ ಶಾನ್ತಿಮಯ್ಯ ದೇವಂಗಳ ಪುತ್ರ ರೇವಣ ದೇವಯ್ಯಂಗಳ/ ಪ್ರಸಿದ್ಧತಿಕಿಯೆಂತೆನೆ ಒರ್ಬ್ಬಳ ತಂಡುಳದಿಂ/ ದಮ್ಮರ್ಬ್ಬಿ ಶನರಾಯ ಕ್ವಟಕಮಂ ತಣಿಪಿದನಾ ಸರ್ಬ್ಬಜ್ಞಮೂರ್ತಿ/ ಜಗದೊಳಗೊರ್ಬ್ಬನೆ ಶಿವಸಿಧಚ/ ಕ್ರಿ ರೇವಣ ದೇವಂ ಛಿ ತೊರೆ ತುಂಬಿ ಬಂದಡರೆ/ ತಾಹರಗೋ ಲುಂತನ್ನಿಮೆನದಾಜ್ಞಾಬಲದಿಂ ತೊರೆ/ ಯಂ ದಾಂಟುವ ನಿಂತೀ ಕುರುಪಿನ ತತುಕಾರನೀ ರೇವಣದೇವಂ/ ಅಂದೊಂಮ್ಮೆ ಸಿದ್ಧನೆಂದೂಡೆ/ ನಿಂದಿಸಿದರು ಮನುಜರೆಲ್ಲ ಧರೆ ಭೂರ್ಭುಗಿಲೆನೆ ಬೆಂದುದು ಸತ್ವರ ಜಂತಮ ವಂದಿನ/ ಸಿದ್ಧಂ ಪ್ರಸಿದ್ಧ ರೇವಣದೇವಂ ಛಿ ಮುನ್ನೊಮ್ಮೆ ಸಿದ್ಧನಾಗಿಯುವನ್ನದ ತವನಿಧಿಯ ತೋರೆ ಲೋಕದೊಳಂ/ ಮತ್ತಿನ್ನೊಮ್ಮೆ ನೋರ್ಪ್ಪೆನೆಂದುಂ ತಂನಂ ತಾನರಪ್ಪನೆಗಳ ರೇವಣದೇವಂ ತಾರದ ಮಂದ್ರದ ಮಧುರದ ಸಾರಾಯದ ಸಪ್ತಸರದಿಂದ ನರೇಶ್ವರನಂ ಭೋರೆನೆ ಕೇಳಿಸುತಿಪ್ಪ ಧಾರಿಣಿ ತಳದೊಳಗೆನೆಗಳ ರೇವಣದೇವ/ ದಿಂದತ್ಯಂತ ಸಿದ್ಧರೇವಣದೇವ ಛಿ ಅನ್ತಾಭೂಲೋಕ ಸಿದ್ಧ ಪ್ರಸಿದ್ಧರಪ್ಪ ರೇವಣದೇವಯ್ಯ ಗಳ/ ಪಾದಪ್ರಕ್ಷಾಳನಂ ಮಾಡಿ ತ್ರಿಭೋಗಾಭ್ಯಂತರ ಸರ್ಬ್ಬನ ಮಶ್ಯವಾಗಿ ಧರಪೂರ್ಬ್ಬ.’
ಈ ಶಾಸನದ ಪ್ರಕಾರ, ಶಿವಯೋಗಿ ಶಾಂತಿಮಯ್ಯ ದೇವರ ಪುತ್ರ ರೇವಣಸಿದ್ಧ ದೇವರು ಎನ್ನುವುದನ್ನು ಬಿಟ್ಟರೆ ಉಳಿದಂತೆ ಈ ಮಹಾಮಹಿಮರು ಕೃತ, ತ್ರೇತ, ದ್ವಾಪರಯುಗ ಗಳಲ್ಲಿ ಯುಗಾಂತರ ಪವಾಡ ಮಾಡಿದ ಜಯಕಾರದೊಂದಿಗೆ ಕಲಿವೀರ ವೀರಭದ್ರನನ್ನು ಹೆಸರಿಸಿದ ಶಾಸನ ಇದಾಗಿದೆ.
ಎಲ್ಲಿಯೂ ಹಾಲುಮತ ಎಂದಾಗಲೀ ಅಥವಾ ಅದಕ್ಕೆ ಸಂಬಂಧಿತ ಪದಗಳಾಗಲಿ ಇಲ್ಲ. ಇರುವುದೆಲ್ಲವೂ ವೀರಶೈವದ ವೀರಭದ್ರ/ ಕಲಿವೀರ, ಷಡಂಗ ಯೋಗ (ಷಟಸ್ಥಲ?)ದ ಹೊಗಳಿಕೆಯ ಪರಿಭಾಷೆಯೇ ಆಗಿದೆ. ಅಂದರೆ ಸ್ವಯಂಭೂವ ಆಗಮದ ರೇವಣರಿಂದ ಬಿಜ್ಜಳನ ಕಾಲದ ರೇವಣರೆಲ್ಲರೂ ವೀರಶೈವ ಯತಿಗಳೇ ಆಗಿದ್ದರು ಎಂದು ಈ ಶಾಸನವು ಕೃತ ತ್ರೇತ ದ್ವಾಪರಯುಗಗಳಲ್ಲಿ ರೇವಣ ಯಾನೆ ರೇಣುಕರಿದ್ದರು ಎನ್ನುವ ವೀರಶೈವ ಪುರಾಣಕ್ಕೆ ಸಾಕ್ಷ್ಯ ನೀಡುತ್ತದೆ.
ಹಾಗಾಗಿ ಇದು ನಿಸ್ಸಂಶಯವಾಗಿ ವೀರಶೈವ ಶಾಸನ ಎಂದಾಗುತ್ತದೆ. ಹಾಗಿದ್ದರೆ ಸಿರಿವಾಳ ಶಾಸನದ ಯಾವ ಅಂಶವು ಈ ಶಾಸನದ ರೇವಣಸಿದ್ಧರು ಕುರುಬರು ಎನ್ನುತ್ತದೆ? ಸಿರಿವಾಳ ಶಾಸನವಲ್ಲದೆ ಇತರೆ ಶಾಸನಗಳ ಮೂಲದಿಂದಲೂ ಶಾಂತಿಮಯ್ಯ ದೇವರ ಪುತ್ರ ರೇವಣಸಿದ್ಧ ದೇವರು ಎಂಬ ವಾಕ್ಯವನ್ನು ಹಿಡಿದು ಈ ಶಾಂತಿಮಯ್ಯನು ಪಶುಪಾಲಕ ಕುರುಬರ ಪದ್ಮಗೊಂಡನ ಮಗ ಶಾಂತಮುತ್ತಯ್ಯ.
ಇದನ್ನೂ ಓದಿ: Ravi Hunj Column: ಭಗವದ್ಗೀತೆ ಮತ್ತು ವಚನಗಳು: ಒಂದು ತೌಲನಿಕ ಅಧ್ಯಯನ
ಹಾಗಾಗಿ ಕುರುಬರ ಪದ್ಮಗೊಂಡನ ಮೊಮ್ಮಗನೇ ಹಾಲುಮತದ ಕುಲಗುರು (?) ರೇವಣಸಿದ್ದ. ಅವರನ್ನು ರೇಣುಕಾಚಾರ್ಯ ಎಂದು ವೀರಶೈವರು ಹೈಜಾಕ್ ಮಾಡಿದ್ದಾರೆ ಎನ್ನುವ ಶ್ರೇಷ್ಠತೆಯ ವ್ಯಸನದ ಹಕ್ಕೊತ್ತಾಯವನ್ನು ಹಬ್ಬಿಸಲಾಗಿದೆ!
ಜನಪದೀಯ ಡೊಳ್ಳಿನ ಪದಗಳ ಕತೆಯಲ್ಲಿ ಮಾಸಿಗೊಂಡನ ಮಗ ಬೀರಗೊಂಡ ಎಂಬ ಪಶುಪಾಲಕನು ರೇವಣಸಿದ್ಧರ ಶಿಷ್ಯನಾಗಿ ಸಕಲ ವಿದ್ಯಾಪಾರಂಗತನಾಗಿ ಬೇಡರನ್ನು ಸೋಲಿಸಿ ಪಶುಪಾಲಕರ ರಕ್ಷಣೆಗೆ ನಿಲ್ಲುತ್ತಾನೆ. ಈತನನ್ನೇ ಬೀರೇಶ್ವರ ಎನ್ನುತ್ತಾರೆ.
ಬೀರೇಶ್ವರನಿಗೆ ವಿದ್ಯೆ ಕೊಟ್ಟ ರೇವಣಸಿದ್ಧರೇ ದೇವಲೋಕದ ರೇಣುಕ ಗಣೇಶ್ವರರು ಎನ್ನಲಾಗಿದೆ. ಹಾಗಾಗಿ ತಮ್ಮ ಬೀರೇಶ್ವರನಿಗೆ ವಿದ್ಯೆ ಕೊಟ್ಟು ತಮ್ಮ ಜನಾಂಗಕ್ಕೆ ನೆಲೆ ಯೊದಗಿಸಿದ ಕೃತಜ್ಞತೆಗಾಗಿ ರೇವಣಸಿದ್ಧರನ್ನು ತಮ್ಮ ಕುಲಗುರುಗಳು ಎಂದು ಪರಿಭಾವಿಸಿರಬಹುದು. ಈ ಬೀರಗೊಂಡ ಯಾನೆ ಬೀರೇಶ್ವರನಿಗೆ ಪದ್ಮಗೊಂಡ ಎನ್ನುವ ತಮ್ಮನಿದ್ದನು. ಈ ಪದ್ಮಗೊಂಡನ ಮಗನಾದ ಶಾಂತಮುತ್ತಯ್ಯನ ಮಗನ ಹೆಸರು ಸಹ ರೇವಣಸಿದ್ಧ!
ಆದರೆ ಮತ್ತೊಂದು ಪುರಾಣವಾದ ರಸ್ತಾಪುರ ಭೀಮಕವಿಯ ‘ಹಾಲುಮತೋತ್ತೇಜಕ ಪುರಾಣ’ದ ಎರಡನೇ ಸಂಧಿಯಲ್ಲಿ ರೇವಣಸಿದ್ದೇಶ್ವರ ಚರಿತ್ರೆಯ ಕುರಿತ ಮಾಹಿತಿ ಹೀಗಿದೆ: ಕೊಲ್ಲಿಪಾಕಿಯ ಸೋಮಲಿಂಗದಿಂದ ಉದಯಿಸಿದ ರೇವಣಸಿದ್ಧರು ಭಕ್ತರನ್ನು ಉದ್ಧರಿಸಲು ಶಾಂತಮುತ್ತಯ್ಯ ಎಂಬುವವರಿಗೆ ಲಿಂಗದೀಕ್ಷೆಯನ್ನು ಕೊಡುತ್ತಾರೆ.
ಇಲ್ಲಿ ರೇವಣಸಿದ್ಧರು ಲೀಲೆಗಳನ್ನು ತೋರುತ್ತಾ ಸರೂರು ಗ್ರಾಮಕ್ಕೆ ಬಂದು ಕುರುಬರ ಮನೆತನದಲ್ಲಿ ಜನಿಸಿದ ಶಾಂತಮುತ್ತಯ್ಯನಿಗೆ ‘ಸಿದ್ಧಿಸಲಿ ನೀನಂದ ನುಡಿಗಳು ಭೂಮಿ ಯಲ್ಲಿ’ ಎಂದು ಆಶೀರ್ವಾದ ಮಾಡಿ ಲಿಂಗದೀಕ್ಷೆಯನ್ನು ನೀಡಿ ಹಾಲುಮತಕ್ಕೆ ಅಧ್ಯಕ್ಷನನ್ನಾಗಿಸುವರು. ಇದು ಈ ಪುರಾಣದಲ್ಲಿರುವ ಅಂಶ. ಮೌಖಿಕ ಕಥಾನಕದ ಆಧಾರವಾಗಿ ಈ ಪುರಾಣವನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ. (ಎಫ್.ಟಿ. ಹಳ್ಳಿಕೇರಿ (ಸಂ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, 2008) ಅಲ್ಲಿಗೆ ಸ್ಪಷ್ಟವಾಗಿ ಕೊಲ್ಲಿಪಾಕಿಯಲ್ಲಿ ರೇಣುಕನಾಗಿ ಉದಯಿಸಿದ ರೇವಣಸಿದ್ಧರು ಬೀರೇಶ್ವರನಿಗೆ ಹರಸಿದ್ದೂ ಅಲ್ಲದೆ ಅವನ ತಮ್ಮನ ಮಗನಾದ ಶಾಂತಮುತ್ತಯ್ಯನಿಗೆ ಸಹ ದೀಕ್ಷೆ ಕೊಟ್ಟರು.
ಹಾಗಾಗಿ ‘ಹರಸಿದ ರೇವಣಸಿದ್ಧರೇ ಬೇರೆ’ ಮತ್ತು ಇವರಿಂದ ‘ಹರಸಿಕೊಂಡ ಶಾಂತ ಮುತ್ತಯ್ಯನ ಮಗ ರೇವಣಸಿದ್ಧನೇ ಬೇರೆ.’ ಶಾಂತಮುತ್ತಯ್ಯ ತನ್ನ ಗುರುವಿನ ಮೇಲಿನ ಅಭಿಮಾನದಿಂದ ತನ್ನ ಪುತ್ರನಿಗೆ ರೇವಣಸಿದ್ಧ ಎಂದು ನಾಮಕರಣ ಮಾಡಿರಬಹುದು. ಹಿರಿಯ ರೇವಣಸಿದ್ಧರು ಇವರಿಗೆ ಲಿಂಗದೀಕ್ಷೆಯನ್ನೂ ಕೊಟ್ಟಿರಬಹುದು.
ಒಟ್ಟಾರೆ ಪೌರಾಣಿಕವಾಗಿ ಮತ್ತು ಶಾಸನಗಳ ಕಾಲಾವಧಿಯಿಂದ ಇಬ್ಬರು ರೇವಣಸಿದ್ಧರು ಇದ್ದರು, ಮತ್ತವರಲ್ಲಿ ಕೊಲ್ಲಿಪಾಕಿಯಲ್ಲಿ ರೇಣುಕರಾಗಿ ಉದಯಿಸಿದ ರೇವಣಸಿದ್ಧರೇ ಬೇರೆ ಮತ್ತು ಲಿಂಗದೀಕ್ಷೆ ಪಡೆದ ಶಾಂತಮುತ್ತಯ್ಯನ ಮಗ ರೇವಣಸಿದ್ಧರೇ ಬೇರೆ ಎನ್ನುವುದು ಸಾಬೀತಾಗುತ್ತದೆ. ಇದಕ್ಕೆ ಪೂರಕವಾಗಿ ರೇವಣಸಿದ್ಧರು ಚೋಳ ರಾಜನೊಡಗೂಡಿ ತಮ್ಮ ಶಿಷ್ಯರಾದ ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳನ್ನು ವೀರಸಿಂಹಾಸನಕ್ಕೆ ಪಟ್ಟ ಕಟ್ಟಿ ನಂತರ ಚೋಳರಾಜನ ಮಗಳನ್ನು ವಿವಾಹವಾಗುತ್ತಾರೆ.
ಸುತ್ತೂರು ಮಠವು ಹತ್ತನೇ ಶತಮಾನ ಅಂದರೆ ಕ್ರಿ.ಶ 920ರಿಂದಲೂ ಇದೆಯೆಂಬ ದಾಖಲೆ ಗಳಿವೆ. ವಿಶೇಷವಾಗಿ ಇಲ್ಲಿ ವೀರಸಿಂಹಾಸನ ಎಂದರೆ ಪಂಚಪೀಠದ ಬಾಳೆಹೊನ್ನೂರು ವೀರಸಿಂ ಹಾಸನದ ಶಾಖಾ ಮಠ ಎಂದಾಗುತ್ತದೆ. ಈ ಕುರಿತು ಕೂಡ ಸುತ್ತೂರು ಮಠ ಪ್ರಕಟಿಸಿರುವ ಪುಸ್ತಕಗಳಿವೆ. ಅಲ್ಲಿಗೆ ಈ ಮುಂಚೆ ರೇವಣಸಿದ್ಧರು ಇನ್ನೂರು ವರ್ಷ ಬಾಳಿರಬಹುದು ಎನ್ನುವದು ಸುತ್ತೂರು ಮಠದ ದಾಖಲೆಗಳಿಂದ ಇನ್ನೂ ನೂರು ವರ್ಷ ಹೆಚ್ಚಾಗುತ್ತದೆ!
ಹೀಗೆ ತಾರ್ಕಿಕವಾಗಿ ಹತ್ತು ಮತ್ತು ಹನ್ನೆರಡನೇ ಶತಮಾನಗಳಲ್ಲಿರುವ ರೇವಣಸಿದ್ಧರು ಇಬ್ಬರು. ಕಾಳಾಮುಖ ವೀರಶೈವ ಮಠಗಳ ಪರಂಪರೆಯಲ್ಲಿ ಒಂದು ಪೀಠದ ಸ್ವಾಮಿಗಳು ಪರಂಪರಾಗತವಾಗಿ ಒಂದೇ ಹೆಸರನ್ನು ಮುಂದುವರಿಸಿಕೊಂಡು ಹೋಗಿರುವುದನ್ನು ಇತಿಹಾಸ ಬಲ್ಲದು.
ಶಕ್ತಿವಿಶಿಷ್ಟಾದ್ವೆ ತದಲ್ಲಿ (ಶ್ರೀಕರ ಭಾಷ್ಯ, ಎಂ.ಜಿ. ನಂಜುಂಡಾರಾಧ್ಯ) ಕೃತಿಯಲ್ಲಿ ನಾಲ್ಕು ರೇಣುಕರನ್ನು ಗುರುತಿಸಲಾಗಿದೆ. ಹಾಗಾಗಿ ಮೂರನೇ ರೇವಣಸಿದ್ಧರ ನಂತರ ಬಂದ ಶಾಂತಿ ಮಯ್ಯದೇವರ ಪುತ್ರ ರೇವಣಸಿದ್ಧದೇವರು ನಾಲ್ಕನೆಯವರು. ಕೇವಲ ತಂದೆಯ ಹೆಸರು ಶಾಂತಿಮಯ್ಯ ದೇವರು ಎಂದಿದ್ದ ಮಾತ್ರಕ್ಕೆ ಇವರೇ ಆ ಶಾಂತಮುತ್ತಯ್ಯ ಎನ್ನಲಾಗು ವುದೇ?!
ಭಕ್ತರು ಮಹಾತ್ಮರನ್ನು ತಮ್ಮ ಸಂಸ್ಕೃತಿಗೆ ಹತ್ತಿರವೆನ್ನುವಂತೆ ಹೆಸರುಗಳನ್ನು ಬದಲಿಸಿ ಬಳಸುವುದು ಅತ್ಯಂತ ಸಹಜ. ಬಸವಣ್ಣನನ್ನು ಬಸವಿದೇವ, ಡಣ್ಣಾಯಕ, ಬಸವೇಶ್ವರ, ಬಸವೇಶ, ಬಸವರಾಜ, ಬಸವಾರಾಧ್ಯ, ಬಸವಯ್ಯ ಎಂದೆಲ್ಲ ಕರೆದಿದ್ದಾರೆ.
ಇದೇ ರೀತಿ ಪಶುಪಾಲಕ ಜನಾಂಗದ ಬೀರೇಶ್ವರರ ಕಥೆಯಲ್ಲಿ ಬೀರೇಶ್ವರನ ತಂದೆಯನ್ನು ರಟ್ಟರು ಮಾಸಿರಟ್ಟನೆಂದರೆ, ರೆಡ್ಡಿಗಳು ಮಾಸಿರೆಡ್ಡಿ ಎಂದು, ಗೊಂಡರು ಮುದ್ದುಗೊಂಡ ಎಂದು ಆಯಾಯ ಉಪಪಂಗಡಗಳ ವಿಧವಿಧವಾಗಿ ಕರೆದಿದ್ದಾರೆ. ಅದೇ ರೀತಿ ರೇವಣ ಸಿದ್ಧರನ್ನು ಶುದ್ಧ ಶೈವರು ರೇವಣಾರಾಧ್ಯ ಎಂದು, ನಾಥ ಸಂಪ್ರದಾಯದವರು ರೇವಣ ನಾಥ ಎಂದು, ಕಾಳಾಮುಖ ಶಿವಾಚಾರ್ಯರು ರೇವಣಾಚಾರ್ಯ/ರೇಣುಕಾಚಾರ್ಯ ಎಂದು ಕರೆದಿದ್ದಾರೆ.
ಐತಿಹಾಸಿಕವಾಗಿ ರೇವಣಸಿದ್ಧರ ಕುರಿತಾದ ಶಾಸನಗಳಲ್ಲಿಯೇ ಅವರ ಕಾಳಾಮುಖ ಹಿನ್ನೆಲೆ ದಾಖಲಾಗಿದೆ. ಶಕ್ತಿ, ದೇವ, ದೇವರು, ದೇಶಿಕ, ಶಿವ, ಪಂಡಿತ, ರಾಶಿ, ಜೀಯ, ಆರಾಧ್ಯ, ಮುನಿ, ಯತಿ, ಜಂಗಮ, ಮಾಹೇಶ್ವರ ಎಂಬ ಹೆಸರುಗಳು ಕಾಳಾಮುಖರ ಪರಂಪರಾಗತ ಹೆಸರು ಗಳಾಗಿವೆ ಎಂದು ಶಾಸನಗಳು ಮತ್ತು ಸಂಶೋಧನೆಗಳು ತಿಳಿಸುತ್ತವೆ. ಈ ಕಾಳಾಮುಖ ಪರಂಪರೆಯ ಕಾರಣವೇ ಸಿರಿವಾಳ ಶಾಸನದಲ್ಲಿ ‘ಶಾಂತಿಮಯ್ಯ ದೇವರು’, ರೇವಣಸಿದ್ಧ ದೇವರು’ ಎಂದಿದ್ದಾರೆ.
ಅಲ್ಲದೇ ಹರಿಹರನು ‘ಅಲ್ಲಮಪ್ರಭು ದೇವರು’, ‘ಬಸವರಾಜ ದೇವರು’ ಎಂಬ ಹೆಸರಿನ ರಗಳೆಗಳನ್ನು ರಚಿಸಿದ್ದಾನೆ. ಆರಾಧ್ಯ, ಜಂಗಮ, ಮಾಹೇಶ್ವರ ಪದಗಳು ವಚನಾದ್ಯಂತ ಯಥೇಚ್ಛವಾಗಿ ಬಳಸಲ್ಪಟ್ಟಿವೆ. ಕಾಳಾಮುಖರ ಜೀಯ ಪದದ ಅರ್ಥ ಒಡೆಯ, ಸ್ವಾಮಿ ಎಂದಾಗುತ್ತದೆ. ಈ ಜೀಯ ಪದವೇ ಕಾಲಾಂತರದಲ್ಲಿ ಅಯ್ಯಾ ಎಂದಾಗಿದೆ. ಜಂಗಮರನ್ನು ಒಡೆಯರ್ ಮತ್ತು ಅಯ್ಯಾ ಎನ್ನುವುದು ಈ ಹಿನ್ನೆಲೆಯಿಂದಲೇ. ಸುತ್ತೂರಿನ ಮಠದ ಮೂರನೇ ಪೀಠಾಧಿಪತಿಗಳ ಹೆಸರಿನಲ್ಲಿ ಈಶಾನೇಶ್ವರ ಒಡೆಯರ್ ಎಂದಿದೆ.
ಬಸವ ಸ್ಥಾಪಿತ ಶೂನ್ಯಪೀಠದ ಪರಂಪರೆಯ ವಂಶಿಕ ದಾಖಲೆಯ ಗ್ರಂಥ ಎಂದೇ ಮಾನ್ಯ ವಾಗಿರುವ ನಿರಂಜನ ವಂಶ ರತ್ನಾಕರದಲ್ಲಿ ಅನೇಕ ಸ್ವಾಮಿಗಳ ಹೆಸರುಗಳು ದೂರ್ವಾ ಸದೇವ, ತ್ರಿನೇತ್ರದೇವ, ಸದಾಶಿವದೇವ, ಸೋಮಶಂಭುದೇಶಿಕ, ಸಕಲಾಗಮಾಚಾರ್ಯ, ಬಂಕನಾಥದೇವ ಎಂದಿವೆ.
ಇರಲಿ, ಮೂರನೇ ರೇವಣಸಿದ್ಧರ ಸಮಕಾಲೀನರೂ ಮತ್ತು ಪೂರ್ವಕಾಲೀನ ಶರಣರಾದ ಓಹಿಲ, ಉದ್ಭಟ, ಕೆಂಭಾವಿ ಭೋಗಯ್ಯ, ಕೊಂಡಗುಳಿ ಕೇಶಿರಾಜ, ಡೋಹರ ಕಕ್ಕಯ್ಯರನ್ನು ಜೇಡರ ದಾಸಿಮಯ್ಯ (ಕ್ರಿ.ಶ 980-ಕ್ರಿ.ಶ. 1040) ತನ್ನ ವಚನಗಳಲ್ಲಿ ಕೊಂಡಾಡಿದ್ದಾನೆ.
ಇದರಲ್ಲಿ ಓಹಿಲ ಮತ್ತು ಉದ್ಭಟರಿಬ್ಬರ ಬಗ್ಗೆಯೂ ಹರಿಹರನು ರಗಳೆಗಳನ್ನು ಬರೆದಿದ್ದಾನೆ. ರೇವಣಸಿದ್ಧರ ಕುರಿತಂತೂ ಹರಿಹರನು ಎಲ್ಲಾ ನಾಲ್ಕು ರೇವಣಸಿದ್ಧರನ್ನು ಸೇರಿಸಿ ಒಬ್ಬರನ್ನೇ ಮಾಡಿ 1400 ವರ್ಷ ಜೀವಿಸಿದ್ಧರು ಎಂದು ರಗಳೆ ಬರೆದಿದ್ದಾನೆ!
ಒಟ್ಟಾರೆ, ಈ ಜನಪದೀಯ ಮತ್ತು ಪೌರಾಣಿಕ ಕತೆಗಳಿಂದ ಗ್ರಹಿಸಬೇಕಾದ ಏಕಾಂಶವೆಂದರೆ ಪಶುಪಾಲಕರು (ಕುರುಬರು) ಸಹ ವೀರಶೈವ ಪಂಥದ ಕ್ರಾಂತಿಯ ಪ್ರಮುಖ ಭಾಗವಾಗಿ ದ್ದರು ಎಂಬುದು! ಸಂಶೋಧನ ಹಿನ್ನೆಲೆಯಲ್ಲಿ ಪಾಶುಪತದ ಆಚರಣೆಯ ಪಶುಪಾಲಕ ಹಾಲುಮತಸ್ಥರಿಗೆ ವೀರಶೈವ ಪಂಥ ಸ್ವಾಭಾವಿಕವಾಗಿ ಬೇರೆಯದೆಂದು ಎನಿಸಿರಲೇ ಇಲ್ಲ.
ಅಂದು ರೇವಣಸಿದ್ಧರಿಂದ ಲಿಂಗದೀಕ್ಷೆ ಪಡೆದು ಬೀರೇಶ್ವರನೆಂದು ಖ್ಯಾತಿ ಪಡೆದು ಮಹಾ ಮಹಿಮನಾಗಿ ಆರಾಽಸಲ್ಪಡುತ್ತಿರುವ ಬೀರಗೊಂಡನ ಪ್ರಭಾವದಿಂದಲೇ ಹಾಲು ಮತಸ್ಥರು ಅದರಲ್ಲೂ ಹತ್ತಿ ಕಂಕಣದ ಹಾಲುಮತಸ್ಥರು ಈಗಲೂ ಸಸ್ಯಹಾರಿಗಳಾಗಿದ್ದಾರೆ.
‘ಹುಟ್ಟಿನಿಂದ ಜಾತಿ’ ನೀತಿಯ ಕಾರಣ ಈ ವೀರಶೈವ ಪಶುಪಾಲಕರು ಶಾಶ್ವತವಾಗಿ ಕುರುಬ ರೆಂಬ ಜಾತಿಗೆ ಸೀಮಿತಗೊಂಡು ವೀರಶೈವದಿಂದ ಹೊರಗುಳಿದಿರಬಹುದೆಂದು ಊಹಿಸ ಬಹುದು. ಇದೇ ಹುಟ್ಟಿನಿಂದ ಜಾತಿ ನೀತಿ ತಂದ ಸ್ಥಿತ್ಯಂತರದಲ್ಲಿ ಇಷ್ಟಲಿಂಗ ಧರಿಸ ದಿದ್ದರೂ ತಮ್ಮದೇ ಜನಾಂಗದ ಕೆಲವರಿಗೆ ಜಂಗಮ (ಒಡೆಯರ್) ಪಟ್ಟ ಕಟ್ಟಿದ್ದಾರೆ. ಈ ಒಡೆಯರರು ಈಗಲೂ ಇಷ್ಟಲಿಂಗಧಾರಿಗಳು ಮತ್ತು ವೀರಶೈವರಂತೆಯೇ ಇಷ್ಟಲಿಂಗ ಪೂಜೆ, ಬಿನ್ನಹ ಮುಂತಾದ ಸಂಪ್ರದಾಯಗಳನ್ನು ಪಾಲಿಸುತ್ತಾರೆ.
ಹೀಗಿರುವಾಗ ಇಂದಿನ ಕೆಲವು ಜಾತ್ಯಾಂಧರು ಒಡೆಯರ್ ಎಂದಿರುವ ವೀರಶೈವ ಮಠಗಳೆಲ್ಲವೂ ಕುರುಬರ ಮಠಗಳು ಎನ್ನುವುದು ಹಾಸ್ಯಾಸ್ಪದವಾಗಿದೆ. ಇದು ಕೇವಲ ರೇಣುಕರಾಗಿ ಉದಯಿಸಿದರೆನ್ನುವ ರೇವಣಸಿದ್ಧರನ್ನಲ್ಲದೆ ತ್ರಿಕಾಲeನಿ ಶ್ರೀ ಮಾಳಿಂಗರಾಯ, ಮಲೆ ಮಹದೇಶ್ವರ, ಮಂಟೇಸ್ವಾಮಿ, ಮೌನೇಶ್ವರ, ಕನಕದಾಸ, ಕಾಳಿದಾಸ ಮುಂತಾದ ಮಹನೀಯರಲ್ಲದೆ ವಿಜಯನಗರ ಸಾಮ್ರಾಜ್ಯ, ಮೌರ್ಯ ಸಾಮ್ರಾಜ್ಯ ಹಾಗೂ ಪರಂಪರೆ ಗಳನ್ನೆಲ್ಲ ಕುರುಬರದೇ ಎಂದು ಹಕ್ಕೊತ್ತಾಯ ಮಂಡಿಸುವ ಪ್ರವೃತ್ತಿಯನ್ನು ಕರುಣಾಜನಕ ಸಂಕಥನಗಳ ಈ ನವ ಸಂಶೋಧಕರು ಬಿತ್ತಿ ಬೆಳೆಸಿದ್ದಾರೆ.
ಒಂದು ಕಾಲದಲ್ಲಿ ಕಾಗಿನೆಲೆಯ ಕನಕಗುರುಪೀಠವನ್ನು ಸ್ಥಾಪಿಸಿ, ಉಡುಪಿಯ ಶ್ರೀಕೃಷ್ಣ ಮಠವೂ ನಮ್ಮದೇ ಎಂದು ಹೋರಾಟ ನಡೆಸಿದ ಮನೋಭಾವವೇ ಇಂದು ರೇವಣಸಿದ್ಧರ ಹಿನ್ನೆಲೆಯಲ್ಲಿ ವೀರಶೈವರ ಮಠಗಳೂ ನಮ್ಮದೇ ಎಂಬ ವಾದಕ್ಕೆ ದಾರಿ ಮಾಡಿಕೊಡುತ್ತಿದೆ. ಇದೇ ಸಂದರ್ಭದಲ್ಲಿ ಕನಕದಾಸರ ಹೆಸರು ಕನಕನಾಯಕ. ಹಾಗಾಗಿ ಅವರು ಬೇಡ ನಾಯಕರು. ಅವರನ್ನು ಕುರುಬರು ಹೈಜಾಕ್ ಮಾಡಿದ್ದಾರೆ ಎಂದು ಹಿಂದೆ ವಾದ ವೆದ್ದಿದ್ದನ್ನು ಸಕಾರಣವಾಗಿ ನೆನಪಿಸಿಕೊಳ್ಳಬಹುದು.
ಜನಾಂಗೀಯ ಸ್ವಾಭಿಮಾನವು ಸಮಾಜದ ಸಾಂಸ್ಕೃತಿಕ ಆತ್ಮಗೌರವದ ಅಭಿವ್ಯಕ್ತಿಯಾಗಿರ ಬಹುದಾದರೂ, ಅದು ಇತಿಹಾಸದ ವಾಸ್ತವಿಕತೆಯನ್ನು ಅದರಲ್ಲೂ ಮೇಲ್ಕಾಣಿಸಿದ ಸಾಕ್ಷ್ಯಾಧಾರಿತ ವಿಶ್ಲೇಷಣೆಯಂತೆ ಯಾವುದೇ ಒಂದು ತಾರ್ಕಿಕ ಅಂಶವಿಲ್ಲದೆ ಕೇವಲ ಅಂತೆಕಂತೆಯ ಸಂತೆಯಾಧಾರದಲ್ಲಿ ಅತಿರೇಕದ ದುರಭಿಮಾನದ ರೂಪ ಪಡೆದು ಕೊಳ್ಳುತ್ತಿರುವುದು ದುರ್ದೈವ.
ಸಮಾಜದ ಯಾವುದೇ ವರ್ಗದ ಸಾಧನೆಗಳನ್ನು ಗೌರವಿಸುವುದು ಅಗತ್ಯ. ಆದರೆ ಅದಕ್ಕಾಗಿ ಇತಿಹಾಸವನ್ನು ತಿರುಚುವುದು, ಮಹನೀ ಯರನ್ನು ಒಂದು ಜಾತಿಯ ಚೌಕಟ್ಟಿನೊಳಗೆ ಸೀಮಿತಗೊಳಿಸುವುದು, ಅಥವಾ ಸಮಸ್ತ ಸಮಾಜದ ಸಾಂಸ್ಕೃತಿಕ ಸಂಪತ್ತನ್ನು ಸ್ವಂತದ್ದಾಗಿ ಘೋಷಿಸುವುದು ಆರೋಗ್ಯಕರ ಸಾಮಾಜಿಕ ಚಿಂತನೆಯಲ್ಲ.
ಇತಿಹಾಸವು ಒಬ್ಬರ ಸ್ವತ್ತಲ್ಲ; ಅದು ಸಮಸ್ತ ಸಮಾಜದ ಸಂಯುಕ್ತ ಸ್ಮೃತಿ. ಒಂದೊಮ್ಮೆ ಮಾನವನು ಬೇಟೆಯಾಡುತ್ತ ಅರಣ್ಯಕನಾಗಿದ್ದ ಕಾರಣ ಇಡೀ ಮಾನವ ಕುಲವೇ ನಮ್ಮ ಜಾತಿಯದು ಎಂದು ಹಕ್ಕೊತ್ತಾಯಿಸಿ ವಿಕಾಸವನ್ನು ನಿರ್ವಿಕಾಸಗೊಳಿಸಿದರೆ ಜಗತ್ತು ನಗದಿರುವುದೇ? ಮುಂದೆ ಮಂಗನಿಂದ ಮಾನವ ಎಂಬ ವೈಜ್ಞಾನಿಕ ಸಿದ್ಧಾಂತವನ್ನು ಹಿಡಿದು ನಾವೆಲ್ಲರೂ ಮಂಗಗಳು ಎಂದು ಕರೆದುಕೊಳ್ಳಬೇಕೆ? ಒಟ್ಟಿನಲ್ಲಿ ಇಂತಹ ಹಾಸ್ಯಾ ಸ್ಪದ ವಿಷಯವನ್ನು ಸಂಶೋಧನೆ ಎಂದು ಕರೆದು ತೋಂಟದ ಶ್ರೀಗಳು, ಫ.ಗು.ಹಳಕಟ್ಟಿ ಯವರ ನಂತರ ಸಂಶೋಧನಾ ಕ್ಷೇತ್ರದಲ್ಲಿ ಎದ್ದು ಕಾಣುವ ಹೆಸರು ನಿಮ್ಮದು ಎಂದು ಪ್ರಶಂಸನಾ ಪತ್ರ ಕೊಡುತ್ತಾರೆ ಎಂದರೆ ಬಸವನಾಡಿನ ಬೌದ್ಧಿಕ ಮಾಪನ ದಿವಾಳಿತನದಾಚೆ ಎಲ್ಲಾ ದಿಗಂತಕ್ಕೆ ಹೋಗಿದೆ ಏನೋ!