ಪ್ರಸ್ತುತ
ಡಾ.ಎಲ್ಲಪ್ಪ ಜಿ.ಕಲಾದಗಿ
ಗ್ರಂಥಾಲಯಗಳು ಜ್ಞಾನ ಮತ್ತು ಅರಿವಿನ ಕೀಲಿ ಕೈಗಳು. ಇಂದು ಇವು ತಟಸ್ಥ ಮೌನಕ್ಕೆ ಜಾರಿವೆ. ಆಧುನಿಕತೆಯ ಹೊಡೆತಕ್ಕೆ ಸಿಕ್ಕು, ಜನಜೀವನ ಒತ್ತಡ ಮತ್ತು ವೇಗವನ್ನು ಪಡೆದು ಕೊಂಡಿದೆ. ಇದರ ಮಧ್ಯದಲ್ಲಿ ನಿಂತು ನೋಡುವ, ಕುಂತು ಕೇಳುವ ವ್ಯವಧಾನ ಇಲ್ಲವಾ ಗಿವೆ. ಹಾಗಾಗಿ ಪುಸ್ತಕಗಳು ಧೂಳು ಹಿಡಿದು, ಕಪಾಟುಗಳಲ್ಲಿ ಗೋಡೆಗಳ ನಡುವೆ ಬಂಧಿಗಳಾಗಿ ಅನಾಥವಾಗಿ ಬಿಟ್ಟಿವೆ.
ಕಾಯಕಲ್ಪವಿಲ್ಲದೆ ಕೊರಗುತ್ತಿರುವ ಗ್ರಾಮೀಣ ಪ್ರದೇಶದ ಗ್ರಂಥಾಲಯಗಳಿಗೆ ಮರು ಜೀವ ತುಂಬುವ ಸಂಕಲ್ಪವನ್ನು ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹ. ಇದರಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು, ಲಕ್ಷಾನುಗಟ್ಟಲೆ ಯುವಜನತೆಗೆ ಉಪಯೋಗ ಆಗಬಹುದು. ಈಗ ಗ್ರಾಮೀಣ ಪ್ರದೇಶದಲ್ಲಿರುವ ಗ್ರಂಥಾಲಯಗಳನ್ನು ‘ಅರಿವು ಕೇಂದ್ರಗಳು’ ಎಂದು ಕರೆಯಲಾಗುತ್ತಿದೆ.
ಇದನ್ನೂ ಓದಿ: Children's Library: ಮಕ್ಕಳಿಂದ ಮಕ್ಕಳಿಗಾಗಿಯೇ ಸಜ್ಜಾದ ʼಮಕ್ಕಳ ಗ್ರಂಥಾಲಯʼ
ಈ ಉಪನಾಮೆಯು ಅರ್ಥಪೂರ್ಣವಾದದ್ದು. ವಾಸ್ತವ ಸ್ಥಿತಿ-ಗತಿ ಅರಿತು ಅವುಗಳಿಗೆ ಕಾರ್ಯಾತ್ಮಕ ಮತ್ತು ಕ್ರಿಯಾತ್ಮಕ ಶಕ್ತಿ ತುಂಬುವ ಪ್ರಯತ್ನದ ಭಾಗದಂತಿದೆ. ರಾಜ್ಯದಲ್ಲಿ ಒಟ್ಟು 5895 ಅರಿವು ಕೇಂದ್ರಗಳು ಚಾಲ್ತಿಯಲ್ಲಿವೆ. 5770 ಗ್ರಾಮೀಣ ಪ್ರದೇಶದ ಅರಿವು ಕೇಂದ್ರಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
ಪಂಚಾಯತಿ ಗ್ರಂಥಾಲಯಗಳಲ್ಲಿ 50.28 ಲಕ್ಷ ಮಕ್ಕಳ ನೋಂದಣಿ ಆಗಿರುವುದು ಒಳ್ಳೆಯ ಬೆಳವಣಿಗೆ. ಈ ಕೇಂದ್ರಗಳು ಮುಖ್ಯವಾಗಿ ಮೂರು ಆಶಯಗಳಿಗೆ ಒತ್ತು ನೀಡಿದಂತಿದೆ. ಒಂದು, ಪುಸ್ತಕ ಪ್ರೀತಿ ಹೆಚ್ಚಿಸುವುದು. ಎರಡು, ಹಳ್ಳಿಗಳಲ್ಲಿನ ವಿದ್ಯಾರ್ಥಿಗಳ, ಯುವಕರ ಭವಿಷ್ಯಕ್ಕೆ ಭದ್ರಬುನಾದಿ ಹಾಕುವುದು. ಮೂರು, ಪರೀಕ್ಷಾ ಸಿದ್ಧತೆಗೆ ಅನುಕೂಲಗೊಳಿಸು ವುದು. ಈ ನಿಟ್ಟಿನಲ್ಲಿ ಇವುಗಳ ರೂಪರೇಷೆ ಬದಲಾಯಿಸುವ ಚಿಂತನೆ ಅಡಗಿದೆ. ಜೊತೆಗೆ ಯುವಕರನ್ನು ಗ್ರಂಥಾಲಯದ ಕಡೆಗೆ ಸೆಳೆಯುವ ಹೊಸ ಪ್ರಯತ್ನವಾಗಿಯೂ ನೋಡ ಬಹುದಾಗಿದೆ.
ನಾವು ಬಾಲ್ಯದಲ್ಲಿ ಕಂಡ ‘ಅಕ್ಷರವಾಣಿ’ ಎಂಬ ಯೋಜನೆ ನೆನಪಿಗೆ ಬರುತ್ತದೆ. ಇದು ಸಾಕ್ಷರತೆಯ ಕಾರ್ಯಕ್ರಮವಾದರೂ ಗ್ರಂಥಾಲಯದ ಸ್ವರೂಪ ಇತ್ತು. ಅಂದು ಬಹು ಜನರನ್ನು, ಅದರಲ್ಲೂ ಯುವಕರನ್ನು ಆಕರ್ಷಣೀಯ ಸೆಳೆತಕ್ಕೆ ಒಳಪಡಿಸಿತ್ತು. ಆ ಕೇಂದ್ರಕ್ಕೆ ಇಬ್ಬರನ್ನು ಗೌರವಧನ ಕೊಟ್ಟು ನೇಮಿಸಲಾಗಿತ್ತು. ಅಭಿರುಚಿಗೆ ತಕ್ಕಂತೆ ರೂಪಿಸಲಾಗಿತ್ತು.
ಟಿವಿಯೂ ಇತ್ತು. ಚೆಸ್ಸು, ಕೇರಂ, ಕ್ರಿಕೆಟ್ ಇಂತಹ ಆಟದ ಸಾಮಗ್ರಿಗಳು ಇದ್ದವು. ಓದು ಮತ್ತು ಕಲಿಕೆಗೆ ಪುಸ್ತಕಗಳು ಇದ್ದವು. ಗ್ರಾಮೀಣ ಯುವ ಜನತೆಗೆ ಇವು ಹೊಸತನವನ್ನು ಕಟ್ಟಿಕೊಟ್ಟಿದ್ದವು. ಹಾಗಾಗಿ ಆಸಕ್ತಿಯ ಮೂಲಕ ಅರಿವಿನ ಕೇಂದ್ರಗಳು ಆಗಿದ್ದವು. ಆದರೆ ಇವು ದೀರ್ಘಕಾಲ ಉಳಿಯಲಿಲ್ಲ ಎಂಬ ಬೇಸರ. ಕೆಲವೇ ವರ್ಷಗಳಲ್ಲಿ ಅವು ಮುಚ್ಚಿ ಹೋದವು.
ಗೌರವಧನ ನಿಂತ ಮೇಲೆ ಅಲ್ಲಿನ ಸಾಮಗ್ರಿಗಳು ಸುಳಿವಿಲ್ಲದಂತೆ ಕಾಣೆಯಾಗಿ ಹೋದವು. ಸಾಮಾಜಿಕ ಪಲ್ಲಟ ಮತ್ತು ಅರಿವನ್ನು ಮೂಡಿಸುವ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಾರದು. ಇದು ಬಹಳ ಮುಖ್ಯವಾದ ಒತ್ತಾಸೆ. ಒಂದು ಊರಿನ ಭವಿಷ್ಯವನ್ನು ಇಲ್ಲವೇ ದೇಶದ ಭವಿಷ್ಯವನ್ನೇ ಪರಿವರ್ತಿಸುವಷ್ಟು ಸಶಕ್ತತೆ ಇರುವುದನ್ನು ಪರಿಗಣಿಸಬೇಕಿದೆ.
ಪುಸ್ತಕಗಳನ್ನು ಓದುವ ಸಂಸ್ಕೃತಿ ಕ್ಷೀಣಿಸುವ ಹೊತ್ತಿನಲ್ಲಿ ಇಂತಹ ಗಮನಾರ್ಹ ನಿರ್ಧಾರ ಗಳು, ಹೊಸತನ ನಿರ್ಮಾಣ ಮಾಡುವ ಆಲೋಚನೆ ಉತ್ತಮವಾದದ್ದು. ಪುಸ್ತಕಗಳೆಂದರೆ ಕೇವಲ ಹಾಳೆಯ ಮೇಲೆ ಮುದ್ರಣಗೊಂಡ ಬಳ್ಳಿ ಆಕಾರದ ಅಕ್ಷರಗಳಲ್ಲ. ಅವು ಅರಿವಿನ ಬೀಜಗಳು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯುವಕರಿಗೆ ಮತ್ತು ಅವರ ಭವಿಷ್ಯಕ್ಕೆ ಬೇಕಾಗುವ ವಿದ್ವತ್ತಿನ ಕಡೆಗೆ ಅವರನ್ನು ತಂದು ತೊಡಗಿಸಬೇಕಿದೆ.
ಕೋಚಿಂಗ್ ಸೆಂಟರ್‌ಗಳಿಗೆ ಹೋಗಿ ಪರೀಕ್ಷಾ ಸಿದ್ಧತೆಯನ್ನು ಮಾಡಿಕೊಳ್ಳಲಾಗದ ಬಡ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಯುವಕರಿಗೆ ಆರ್ಥಿಕ ಹೊರೆಯನ್ನು ಇವು ಕಡಿಮೆ ಮಾಡಬಲ್ಲವು. ಸ್ಪರ್ಧಾತ್ಮಕ ಯುಗ ಧರ್ಮಕ್ಕೆ ಬೇಕಾದ ಜ್ಞಾನವನ್ನು ಪಡೆದುಕೊಳ್ಳಲು, ವರ್ತಮಾನದೊಂದಿಗೆ ಸ್ಪರ್ಧಿಸಲು ಇವು ಉತ್ತಮ ವೇದಿಕೆಗಳು ಆಗಬಲ್ಲವು. ಭವಿಷ್ಯತ್ತು ರೂಪಿಸುವ ಅನುಭವ ಮಂಟಪಗಳಾಗಬೇಕಾದರೆ, ಅವುಗಳಿಗೆ ಬೇಕಾದ ಸೂಕ್ತ ಪುಸ್ತಕಗಳು, ಯೋಗ್ಯವಾದ ಸೌಲಭ್ಯಗಳನ್ನು ಕೊಟ್ಟು ಬಲಿಷ್ಠಗೊಳಿಸಬೇಕು. ಇಲ್ಲವಾದರೆ ಹತ್ತರಲ್ಲಿ ಒಂದಾಗಿ ಉಳಿಯುವಂತಾಗಬಾರದು!
ಕೇವಲ ಪುಸ್ತಕದ ಪ್ರೀತಿ, ಅರಿವು ಮತ್ತು ಪರೀಕ್ಷಾ ಸಿದ್ಧತೆಗೆ ಸೀಮಿತವಾಗದೆ, ಯುವ ಜನತೆಯ ಭವಿಷ್ಯದ ಜೊತೆಗೆ ಹಳ್ಳಿಗಳ ಪರಿವರ್ತನೆಗೂ ಮೂಲ ದ್ರವ್ಯವಾಗಬಹುದು. ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವಿವೇಚನೆಗಳು ಹೊಸ ರೂಪವನ್ನು ಪಡೆದುಕೊಳ್ಳಬಹುದು. ವೈಚಾರಿಕ ಚಿಂತನೆಗಳ ಮೂಲಕ ಹಲವು ಪಲ್ಲಟಗಳಿಗೆ ನಾಂದಿಯೂ ಆಗಬಹುದು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ದೇವಾಲಯಗಳಿಗಿಂತ ಶಾಲೆ ಮತ್ತು ಗ್ರಂಥಾಲಯಗಳು ಮುಖ್ಯ. ಇವೆರಡೂ ಅರಿವಿನ ಕೇಂದ್ರಗಳು ಎಂಬುದು ಅವರ ಮುಖ್ಯ ಧೋರಣೆ. ಇವು ಅನೇಕ ರೀತಿಯ ಬದಲಾವಣೆಗೆ ಮುನ್ನುಡಿ ಬರೆಯುತ್ತವೆ. ಅಷ್ಟೇ ಅಲ್ಲ ದೇಶದ ದಿಕ್ಸೂಚಿಯನ್ನೇ ಬದಲಿಸುತ್ತವೆ ಎಂಬುದು ಬಲವಾದ ನಂಬಿಕೆಯೂ ಆಗಿದೆ. ಎದೆಗೆ ಒತ್ತುವ ಈ ಅಕ್ಷರಗಳು ಅರಿವನ್ನು ಮೂಡಿಸಿ, ಭರವಸೆಯ ಆತ್ಮವಿಶ್ವಾಸವನ್ನು ಕಟ್ಟಬಲ್ಲವು. ಇದರಿಂದಾಗಿ ಹಳ್ಳಿಗಳು ಇನ್ನಷ್ಟು ಸದೃಢಗೊಳ್ಳುತ್ತವೆ.