ತಾಳ-ಮೇಳ
ಮೋಹನ ಭಾಸ್ಕರ ಹೆಗಡೆ
ಯಕ್ಷಗಾನ ಶ್ರೀಮಂತ ಕಲೆ. ಕಲೆಗಳಲ್ಲಿಯೇ ಕಲ್ಪವೃಕ್ಷ. ಇದರ ಎಲ್ಲಾ ಅವಯವಗಳು ವಿಶಿಷ್ಟ ವಿಶೇಷ. ಅಭ್ಯಾಸವಿಲ್ಲದೆ ಯಾವ ವಿಭಾಗವೂ ಒಲಿಯುವುದಿಲ್ಲ. ಪರಿಪೂರ್ಣರಾದ ಒಬ್ಬರೂ ಸಿಗಲಾರರು. ಹಲವರು ಕೆಲವೇ ಅಂಗಗಳಲ್ಲಿ ಒಂದಿಷ್ಟು ಪ್ರವೇಶ ಪಡೆದು ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಗಳಿಸಬಹುದು, ಅಷ್ಟು ಉದಾರಿ ಈ ಕಲೆ. ಅಷ್ಟೇ ದುಬಾರಿ! ಬೌದ್ಧಿಕ ಪರಿಶ್ರಮ ಹಾಗೂ ಅಧ್ಯಯನ ಇದಕ್ಕೆ ಬೇಕೇ ಬೇಕು. ಏನೂ ಇಲ್ಲದೇ ಯಶಸ್ಸಿಲ್ಲ. ಹಾಗಾಗಿ ಇದು ಶ್ರೀಮಂತ. ಎಷ್ಟೋ ಸಂದರ್ಭ ಇದರ ಶ್ರೀಮಂತಿಕೆ ತಿಳಿಯದೇ ಇಲ್ಲಿನ ಕಲಾವಿದರೇ ಎಡವೋದೂ ಉಂಟು. ಉಳಿದವರು ಅರಿಯಲು ವಿಫಲರಾದರೆ ಆಶ್ಚರ್ಯವೇನು? ಇದರ ಆಳ, ವಿಸ್ತಾರ ಅಷ್ಟು ಗಾಢ- ಗೂಢ!
ಇದು ಬಳಕೆಯಾಗುತ್ತಿರುವುದು, ಅಂದರೆ ಪ್ರದರ್ಶನಗೊಳ್ಳುತ್ತಿರುವುದು ಬಯಲಲ್ಲಿ. ಅಂದರೆ ಜನರ ಮಧ್ಯದಲ್ಲಿ. ಅದಕ್ಕಾಗಿ ಇದರ ಮೌಲ್ಯಮಾಪನದಲ್ಲಿ ಈ ಕಲೆಗೆ ನ್ಯಾಯ ಸಿಕ್ಕಿಲ್ಲ. ಆಗಾಗ ಅನ್ಯಕ್ಷೇತ್ರ ದ ಪ್ರಬುದ್ಧರು, ಚಿಂತಕರು, ತಮ್ಮ ಆಸಕ್ತಿಯಿಂದ ಪ್ರವೇಶಿಸಿ, ಇದರ ಮಹತ್ತು ತಿಳಿದರು.
ಪ್ರಾಮಾಣಿಕವಾಗಿ ತಮ್ಮ ಕೊಡುಗೆ ಕೊಟ್ಟರು. ಲೋಕವೂ ತಿಳಿಯುವ ಹಾಗೆ ಮಾಡಿದರು. ಮಹತ್ತ್ವದ ಗ್ರಂಥ ಬರೆದರು. ಹಲವರು ಪ್ರಯೋಗವನ್ನೇ ಮಾಡಿದರು. ಸಂಶೋಧನೆ ಮಾಡಿದರು. ಯಕ್ಷಗಾನ ರಂಗಶಿಕ್ಷಣ ಕೇಂದ್ರಗಳನ್ನೇ ತೆರೆದರು. ಇನ್ನೂ ಹಲವರು ಶಿಕ್ಷಣ, ಸಂಗೀತ, ಸಾಹಿತ್ಯ ಕ್ಷೇತ್ರದವರು ಈ ಕಲೆಯ ಮಹತ್ತನ್ನು ಕಂಡು ಲೋಕಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಆಗಾಗ ಲೇಖನ ಬರೆದು, ಗೋಷ್ಠಿ, ಕಮ್ಮಟ ಏರ್ಪಡಿಸಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇನ್ನು ಈ ಕಲೆಯ ರಂಗಸ್ಥಳದಲ್ಲಿ ಕಲಾವಿದರಾಗಿಯೇ ಬಂದು, ಇದರ ಮಹತ್ತನ್ನು ಅರಿತು, ಅದರ ಮೌಲ್ಯ ವಿಸ್ತಾರಕ್ಕೆ ಪ್ರಯತ್ನಶೀಲರಾದವರು ಕೆಲವರು. ಅವರು ನಿಜವಾದ ಪ್ರಯೋಗಪಟುಗಳು. ಅವರು ಗಳು ದೂರದರ್ಶಿತ್ವದ ರಂಗ ಕಲಾ ನಾಯಕರು. ಅವರುಗಳು ರಂಗಭೂಮಿಯಲ್ಲಿದ್ದೇ ಸ್ಮರಣೀಯ ಕೊಡುಗೆ ಕೊಟ್ಟವರು.
ಇದನ್ನೂ ಓದಿ: Jithendra Kundeshwara Column: ತಾಳಮದ್ದಳೆ ಅರ್ಥಧಾರಿಗಳ ತಪ್ಪಿದ ತಾಳದ ಸುತ್ತಮುತ್ತ !
ಇದನ್ನೆ ಪೂರ್ಣವಾಗಿ ನೋಡಲು ಸಾಧ್ಯವೇ ಆಗುತ್ತಿಲ್ಲ. ಇದೆಲ್ಲಾ ಒಂದೆಡೆಯಾದರೆ, ಹಲವು ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು ಈ ಕಲೆಯ, ಇಲ್ಲಿನ ಕಲಾವಿದರ ಹಿತಕ್ಕಾಗಿ ಪ್ರಯತ್ನಶೀಲರಾದವರು. ಅವರು ಕಲೆಯ ಪಾರಂಪರಿಕ, ಸ್ಥಳೀಯ ಮೌಲ್ಯ, ರೂಢಿಗಳನ್ನು ಕಾಪಾಡಲು ಪ್ರಯತ್ನಿಸುತ್ತಲೇ ಇದ್ದಾರೆ.
ಹಲವಾರು ದೇವಾಲಯಗಳು, ಮೇಳಗಳು, ಮಠಗಳು, ವ್ಯಕ್ತಿಗಳು, ಉದ್ಯಮಿಗಳು, ಸ್ಥಳೀಯ ಸಂಘ ಗಳು, ಹೊರನಾಡ ಸಂಘಟನೆಗಳು, ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರು, ಪರಿಪೂರ್ಣ ಸೇವಾ ಭಾವದಿಂದ ಭಾಗಿಗಳಾಗಿ, ಪಾಲಕರಾಗಿ, ಪೋಷಕರಾಗಿ ಈ ಕಲೆಯನ್ನು ಪೋಷಿಸುತ್ತಾ ಬಂದಿದ್ದಾರೆ.
ಮಕ್ಕಳಲ್ಲಿ-ಮಹಿಳೆಯರಲ್ಲಿ ಆಸಕ್ತಿ ಹುಟ್ಟಿಸುವ ಪ್ರಯತ್ನಗಳೂ ನಡೆದವು. ಈ ಕೊಡುಗೆ ಕೂಡ ಗಮನಾರ್ಹ, ದಾಖಲಾರ್ಹ ಹಾಗೂ ಅಸಾಮಾನ್ಯ. ಇದೆ ಸೇರಿಯೇ ಸಮಗ್ರ ಯಕ್ಷರಂಗ. ಹೇಳಲು ಇನ್ನೆಷ್ಟೋ ಬಾಕಿ ಇದೆ. ಇದರ ಒಂದು ಅಂಗ ತಾಳಮದ್ದಳೆ. ಇದು ಸಹ ವಿಶೇಷ ವೈಭವದಿಂದ ಕೂಡಿದೆ. ಇವಳು ನೃತ್ಯ, ವೇಷಭೂಷಣ, ಅಭಿನಯ ಇಲ್ಲದೇ ಇರುವ ನಿರಾಭರಣ ಸುಂದರಿ. ವಚೋ ವಿಲಾಸದ ವೈಭವ ಇಲ್ಲಿ. ಇದು ಆಕರ್ಷಣೆ ಇರುವ ಕಲಾಪ್ರಕಾರ!
ಕಲಾವಿದರಾಗಿ ಇದರ ಪ್ರವೇಶ ಕಾಣುವಷ್ಟು ಸುಲಭವಲ್ಲ. ಮುಕ್ತ ಪ್ರವೇಶ ಇಲ್ಲಿ ಅನ್ವಯ ಆಗಲಾರದು. ನಮ್ಮಲ್ಲಿ ಬಹುತೇಕ ಸಂಗತಿಗಳು, ಹೊರನೋಟದಿಂದ ಸರಳ ಎಂದು ಕಾಣುತ್ತವೆ, ವಾಸ್ತವವಾಗಿ ಹಾಗಿರುವುದಿಲ್ಲ. ಯಾಕೆ ಈ ಮಾತು ಅಂದರೆ, ಯಾವ ಅಭ್ಯಾಸವೂ ಇಲ್ಲದೇ ಯಾರೊಬ್ಬರೂ ಇದರಲ್ಲಿ ಪ್ರವೇಶಿಸಲು ಅಸಾಧ್ಯ. ಹಾಗೊಂದು ದುಃಸಾಹಸ ಮಾಡಿದರೂ ಅವರು ಅಲ್ಲಿ ನೆಲೆ ನಿಲ್ಲರಾರರು. ಈ ಅಭಿಮತಕ್ಕೆ ಯಕ್ಷಗಾನ-ತಾಳಮದ್ದಳೆ ಬಗೆಗೆ ನನಗಿರುವ ಆಸಕ್ತಿ, ಪ್ರೀತಿ ಅಥವಾ ನನ್ನ ಮಿತವಾದ ಪ್ರವೇಶ ಅಷ್ಟೇ ಕಾರಣವಲ್ಲ. ಇದರ ಅಂತಃಸತ್ವವೇ ಕಾರಣ. ತಾಳ ಮದ್ದಳೆಯನ್ನೇ ಸ್ವಲ್ಪ ಅವಲೋಕಿಸೋಣ.
ಆಕರಗಳು: ಈ ಕಲೆಯ ಸತ್ವ ನಿಂತಿದ್ದು ಇದರ ವಸ್ತು-ವಿಷಯದ ಮೇಲೆ. ಇದರ ವಸ್ತು ಎಂಬ ವಿಷಯದ ಬಗ್ಗೆ ನೋಡಿದರೆ ಪುರಾಣಗಳೇ ಮುಖ್ಯವಾದ ಆಕರ. ಅಂದರೆ ಇಲ್ಲಿ ನೀತಿಯುಕ್ತವಾದ, ಸಾತ್ವಿಕವಾದ ಸುಸಂಸ್ಕೃತವಾದ ವಿಚಾರಗಳನ್ನು ಕಥನ ರೂಪದಲ್ಲಿ ತಿಳಿಸುವಂಥ ಕ್ರಮ ಇಲ್ಲಿಯದ್ದು. ಸಾಮಾಜಿಕವಾದ ವಿಷಯಗಳು ಈ ಕ್ಷೇತ್ರಕ್ಕೆ ಒಗ್ಗಲಿಲ್ಲ ಅಥವಾ ಆಧುನಿಕ ದೇಶಭಕ್ತಿ ವಿಚಾರಗಳು ಸಹ ಇದಕ್ಕೆ ಹೊಂದಿಕೆ ಆಗಿಲ್ಲ. ಬದಲಿಗೆ ಪೌರಾಣಿಕ ಪ್ರಸಂಗಗಳು ವಿಶೇಷವಾಗಿ ಹೊಂದಿಕೆಯಾಗಿವೆ.
ಆದುದರಿಂದ ಈ ಕಲಾಮಾಧ್ಯಮದ ಮುಖಾಂತರವೇ ಜೀವನದ ಹಲವು ಮಜಲುಗಳ ನೀತಿಯುಕ್ತ ವಾದ ವಿಚಾರಗಳ ತಿಳಿಸುವಿಕೆ ನಡೆಯುತ್ತಾ ಬಂತು. ಶತಶತಮಾನಗಳಿಂದ ನಡೆದು ಬಂತು. ಪಾತ್ರವೊಂದರ, ಪ್ರಸಂಗವೊಂದರ ಪ್ರಸ್ತುತಿಯಲ್ಲಿ ಸಮಗ್ರ ಹಿನ್ನೆಲೆಯನ್ನು ವಿವಿಧ ದೃಷ್ಟಿಕೋನ ಗಳಿಂದ ಲೋಕಮುಖವಾಗಿಸುವ ಕಾರ್ಯ ಇಲ್ಲಿ ಅರ್ಥಪೂರ್ಣವಾಗಿ ನಡೆದುಬಂತು.
ಇದಕ್ಕಾಗಿ ಉಪನಿಷತ್ತುಗಳ, ಸಮಕಾಲೀನ ಗ್ರಂಥಗಳ ಅಥವಾ ಸಾಹಿತ್ಯಗಳ ವಿಚಾರಗಳು ಸೇರಿ ಕೊಂಡವು. ಜತೆಯಲ್ಲಿ ಸ್ವಂತ ಜೀವನದ ಅನುಭವಗಳು ಸಹ ಪಾತ್ರೋಚಿತವಾಗಿ ಸೇರಿಕೊಂಡವು. ದೇಶ-ಕಾಲ-ಧರ್ಮಕ್ಕನುಗುಣವಾಗಿ ಸೂಕ್ತವಾದ ವಿಚಾರಗಳು ಸೇರಿಕೊಂಡು ವಸ್ತುನಿಷ್ಠತೆಯನ್ನು ವಿಜೃಂಭಿಸಿತು.
ಇದನ್ನೇ ಹಲವು ಸಲ ಎಲ್ಲರೂ ಸಾರಿ ಸಾರಿ ಹೇಳಿದ್ದು. ಈ ಕಲೆಯ ವಿಶೇಷ ಅಭ್ಯಾಸ ಪ್ರಸಂಗ ಪಠ್ಯದ ಕುರಿತು ಇಲ್ಲದಿದ್ದರೆ ಪಾತ್ರದ ಹಿನ್ನೆಲೆ, ಮುನ್ನೋಟ ಮತ್ತು ವರ್ತಮಾನದ ನಡೆ ಸ್ಥಾಪಿಸುವುದಕ್ಕೆ ಸಾಧ್ಯವಿಲ್ಲ. ಅಷ್ಟು ವಿಸ್ತಾರವಾದ ಅಧ್ಯಯನ ಇದಕ್ಕೆ ಬೇಕೇ ಬೇಕು. ಅದಿಲ್ಲದಿದ್ದರೆ ಸಾಧಾರಣ ವಾದ ಕಥೆ ಸಾಗಲು ಬೇಕಾದ ವಿಷಯವಷ್ಟೇ ಹೇಳಿದಂತಾಗಿ ಕುತೂಹಲವನ್ನು ಸೃಷ್ಟಿಸುವುದಿಲ್ಲ.
ಬಹಳ ಹಿಂದಿನ ಕಾಲದಲ್ಲಿ ಇಷ್ಟೇ ಸಾಕಿತ್ತು. ಅಷ್ಟೇ ಅಪೇಕ್ಷೆಯೂ ಆಗಿತ್ತು. ಆದರೆ ಕಾಲ ಬದಲಾ ದಂತೆ, ಪ್ರೇಕ್ಷಕರ ಅಭಿರುಚಿಗಳು ಬದಲಾದಂತೆ, ನಿರೀಕ್ಷೆಗಳು ಹೆಚ್ಚಾದವು. ಒಂದು ವಿಷಯಕ್ಕೆ ಹತ್ತಾರು ಆಕರ ಗ್ರಂಥಗಳ ಅಧ್ಯಯನದ ಕೊಡುಗೆ, ಉಲ್ಲೇಖ ಅಗತ್ಯವಾಯಿತು.
ಅದನ್ನು ಜನಮಾನಸ ಒಪ್ಪಿತು. ಹಾಗಾಗಿ ವಾಚಿಕಾಭಿನಯವು ತಾಳಮದ್ದಳೆಗೆ ವಿಶೇಷ ವಾದ ಅಧ್ಯಯನಶೀಲತೆಯನ್ನು ತಂದುಕೊಟ್ಟಿತು. ಕೆಲವು ಕಾಲಗಳಲ್ಲಿ ಅದು ವೈಭವ ವನ್ನು ಕಂಡರೂ ಪ್ರತಿ ಹಂತದಲ್ಲಿಯೂ ಸಾಕಷ್ಟು ವಿಮರ್ಶೆ, ಟೀಕೆ-ಟಿಪ್ಪಣಿಗಳನ್ನು ಕೂಡ ಎದುರಿಸಿತು. ಆದರೂ ಅಧ್ಯಯನ ಬೇಕು ಎಂಬ ವಿಷಯ ಗೆಲುವನ್ನೇ ಸಾಧಿಸಿತು.
ವಿಶೇಷತೆ, ಹೊಸತನ ಇಲ್ಲದ ಸಾಧಾರಣ ಕ್ರಮ ಪತನವಾಯಿತು. ಒಟ್ಟಾರೆಯಾಗಿ ತಾಳಮದ್ದಳೆ ಎಂಬುದು ವೈಷಯಿಕವಾದ ವಿಶೇಷ ಆಕರಗಳನ್ನು ಒದಗಿಸುವ ವೇದಿಕೆ ಯಾಯಿತು. ಭಾಷೆಯ ಸೊಗಸು, ಪದ, ವಾಕ್ಯಪ್ರಾವೀಣ್ಯ, ಮಾತಿನ ಏರಿಳಿತ, ಸಂವಾದ ಕೌಶಲ, ರೂಪಕ, ಕಾವ್ಯಾಲಂಕಾರ ಬಳಕೆ, ಭಾವಪೂರ್ಣತೆ, ರಸಗಳ ಸೊಗಸಾದ ಸುರಣೆ, ಇದೆಲ್ಲ ಹೇಗೆ ಅಗತ್ಯ ಎಂದು ಕಲಾವಿದರು ತೋರಿಕೊಟ್ಟರು.
ಹಲವರ ವಿಶೇಷತೆ ಇವುಗಳಲ್ಲಿ ಯಾವುದೋ ಒಂದಾಯಿತು. ಇದನ್ನು ಯಕ್ಷಗಾನ ವೀಕ್ಷಕರು, ಆಸಕ್ತರು, ಕಲಾವಿದರು ಮೊದಲಾದವರೆಲ್ಲರೂ ಗಮನಿಸಿದರು, ಗುರುತಿಸಿದರು, ಸ್ವೀಕರಿಸಿದರು, ಗೌರವಿಸಿದರು. ಇದು ಸತ್ಯ. ಇಷ್ಟಿಲ್ಲದಿದ್ದರೆ ಆ ಕಲಾವಿದ ಇಲ್ಲಿ ಉಳಿಯಲಾರ. ಅಷ್ಟು ನಿರಂತರ ಅಭ್ಯಾಸವನ್ನು, ಮನಶೀಲತೆಯನ್ನು ಈ ಕಲೆ ಬಯಸುತ್ತದೆ. ಆದುದರಿಂದ ತಾಳಮದ್ದಳೆ ಸುಲಭ ವಲ್ಲ!!
ಶೃತಿ ಜ್ಞಾನ: ಈ ಕ್ಷೇತ್ರ ಬೇರೆ ಬೇರೆ ಕ್ಷೇತ್ರದ ಪರಿಣತರನ್ನು, ವೈಚಾರಿಕ ಪಂಡಿತರನ್ನು ಹರಿದಾಸ ಪಂಥದ ಕಲಾವಿದರನ್ನು, ವಿದ್ವಾಂಸರನ್ನು, ಸಾಹಿತಿಗಳನ್ನು ತನ್ನೆಡೆಗೆ ಕೈಬೀಸಿ ಕರೆದಾಗ ಹೊಸ ಅಲೆ ಸೃಷ್ಟಿಯಾಯಿತು ಅಂದೆನಷ್ಟೇ. ಆದರೆ ಅವರೆಲ್ಲರ ಪ್ರತಿಭಾ ಪ್ರದರ್ಶನ ಇಲ್ಲಿ ಸುಲಭವಾಗಿರ ಲಿಲ್ಲ. ಅವರು ತಮ್ಮ ಪ್ರತಿಭೆಯನ್ನು ಪಾತ್ರದ ಮುಖೇನ ಪ್ರದರ್ಶಿಸುವಾಗ, ಅ ಪರಿಣಾಮದ ಕುರಿತಾದ ಲಕ್ಷ್ಯವನ್ನು, ಯಕ್ಷಗಾನದ ಶೈಲಿಯನ್ನು ಜನ ಬಯಸಿದರು. ಈ ಕಲಾಮಾಧ್ಯಮದ ಬಳಕೆಯನ್ನೇ ಜನ ಬಯಸಿದರು.
ಶುಷ್ಕತೆ ಇರುವ ವಾಗ್ಧೋರಣೆಯನ್ನು, ಅರ್ಥಧಾರಿಯನ್ನು ಈ ಕ್ಷೇತ್ರ ಒಪ್ಪಲಿಲ್ಲ. ಅಸಂಬದ್ಧ ಪ್ರಲಾಪಿಗಳನ್ನು ಸ್ವೀಕರಿಸಲಿಲ್ಲ. ಅಂದರೆ ಅವರುಗಳು ಕೆಲವೇ ಕಾಲದಲ್ಲಿ ಮರೆಯಾದರು. ಕಾರಣ ಇದಕ್ಕೆ ಇದರದೇ ಆದ ಶ್ರಾವ್ಯ ಸೌಖ್ಯತೆಯನ್ನು ಹೊಂದಿದ ಪ್ರಸ್ತುತಿ ಅತ್ಯಗತ್ಯ. ಅದು ಅರ್ಥವಾಗ ದಿದ್ದರೆ ಇಲ್ಲಿ ಅವಕಾಶ ಇಲ್ಲ ಎನ್ನುವುದನ್ನು ಈ ಕಲೆ ಎಲ್ಲರಿಗೂ ತೋರಿಕೊಟ್ಟಿತು. ಆಗ ಸ್ಪಷ್ಟವಾಗಿ ತಿಳಿದಿದ್ದು ಶ್ರುತಿ ಭಕ್ತತೆ, ಬದ್ಧತೆ!
ಇಡೀ ವಾತಾವರಣ ಒಂದು ನಿರ್ದಿಷ್ಟವಾದ ಶ್ರುತಿಯಲ್ಲಿ ಸಾಗುತ್ತಿರುವಾಗ ಮಾತ್ರ ಪರಿಣಾಮವನ್ನು ನಿರೀಕ್ಷಿಸಬಹುದು. ಅದು ಈ ಮಾಧ್ಯಮದ ಜೀವಾಳ ಶಕ್ತಿ. ಅಲ್ಲದಿದ್ದರೆ ಅದು ತಾಳಮದ್ದಳೆಯ ಅರ್ಥಗಾರಿಕೆ ಎಂದು ಆಗದೇ, ಹರಟೆಯೋ ಶಿರೋವೇದನೆಯ ವಿಚಾರವೋ ಆಗುತ್ತದೆ. ಎಷ್ಟೋ ಸಂದರ್ಭ ಅರ್ಥಧಾರಿ ತಾನು ಶ್ರುತಿಭದ್ರವಾಗಿ ಮಾತನಾಡುತ್ತಿದ್ದೇನೆ ಎಂದೇ ತಿಳಿದುಕೊಂಡಿರು ತ್ತಾನೆ. ಆದರೆ ವಾಸ್ತವದಲ್ಲಿ ಅವರಿಗೆ ಶ್ರುತಿಜ್ಞಾನವಾಗಲಿ, ರಾಗದ ಅರಿವಾಗಲಿ ಇರುವುದಿಲ್ಲ.
ರಾಗದ ವಿಷಯ ತುಂಬಾ ದೊಡ್ಡದಾದರೂ ಇರುವ ಶೃತಿಗೆ ತನ್ನ ಮಾತನ್ನು ಹೊಂದಿಸಿ ಹೇಳಬೇಕು ಎನ್ನುವ ತಿಳಿವಳಿಕೆ ಈ ಅರ್ಥಧಾರಿಗಳಿಗೆ ಇರಲೇಬೇಕು. ಇಷ್ಟು ಮಾಡದಿದ್ದವರು ಈ ಕ್ಷೇತ್ರವನ್ನು ಪ್ರವೇಶಿಸಬಾರದು. ಏಕೆಂದರೆ ಇದು ಈ ಕಲಾ ಮಾಧ್ಯಮದ ಅನಿವಾರ್ಯ ಅರ್ಹತೆಗಳಲ್ಲಿ ಒಂದು. ಹಾಗೆ ತನ್ನ ಅಗಾಧ ಅಧ್ಯಯನವನ್ನು ಅಪೂರ್ಣವಾದ ಶ್ರುತಿಬದ್ಧತೆಯಲ್ಲಿ ಪ್ರಸ್ತುತಪಡಿಸಿದಾಗ ಆ ಕಲಾವಿದನ ಪ್ರಯತ್ನ ಸಂಪೂರ್ಣ ವಿಫಲ.
ಪ್ರಯತಪೂರ್ವಕ ಶೃತಿಬದ್ಧ ಮಾತುಗಾರಿಕೆಯನ್ನು ರೂಢಿಸಿಕೊಂಡರೆ ಅವನು, ಅವನು ವಹಿಸಿದ ಪಾತ್ರ, ಜತೆಗೆ ಈ ಕಲೆಯ ಶಕ್ತಿ ಉನ್ನತ ಪರಿಣಾಮವನ್ನುಂಟು ಮಾಡುತ್ತದೆ. ಈ ರೀತಿಯ ಹಿಡಿತ ವನ್ನೇ ವ್ಯಕ್ತಿಯೊಬ್ಬನ ಮಾಧ್ಯಮದ ಮೇಲಿನ ಹಿಡಿತ ಎನ್ನುವುದು.
ಮಾಧ್ಯಮದ ಮೇಲೆ ಪ್ರಾಮಾಣಿಕ ಹಿಡಿತ ಇದ್ದರೆ, ಪರಿಣಾಮದಲ್ಲಿ ಗೆಲುವು ಖಂಡಿತಾ. ಅದು ಈ ಕಲೆಯ ಶಕ್ತಿ. ಇದನ್ನು ಅರಿಯಲು ಸುದೀರ್ಘ ಅಭ್ಯಾಸ ಬೇಕು. ಅದನ್ನು ಈ ಕಲೆ ಕಲಾವಿದನಿಂದ ಸದಾ ನಿರೀಕ್ಷಿಸುತ್ತದೆ.ಆದುದರಿಂದ ಈ ತಾಳಮದ್ದಳೆ ಸುಲಭವಲ್ಲ!!
ಔಚಿತ್ಯಪ್ರe: ಸಾಕಷ್ಟು ಅಭ್ಯಾಸ ಮಾಡಿದ ಪರಿಣತ ಕಲಾವಿದ ಶ್ರುತಿಬದ್ಧವಾಗಿ ಪಾತ್ರಚಿತ್ರಣ ಮಾಡುತ್ತಿದ್ದರೂ, ಅವರು ತಿಳಿದಿರಲೇಬೇಕಾದ ಮಹತ್ವದ ಸಂಗತಿ ಔಚಿತ್ಯಪ್ರಜ್ಞೆ. ಇದು ಕಠಿಣ ಅಭ್ಯಾಸದಿಂದ ಮೈಗೂಡಿಸಿಕೊಳ್ಳಬೇಕಾದ ವಿಚಾರ. ಪ್ರಸಂಗನಿಷ್ಠನಾಗಿ, ಪಾತ್ರ ನಿಷ್ಠನಾಗಿ, ಕಲಾ ಮಾಧ್ಯಮ ನಿಷ್ಠನಾಗಿ, ಹೊಣೆಗಾರಿಕೆಯನ್ನು ನಿರ್ವಹಿಸುವ ಕಲಾವಿದ, ತಾನು ವಹಿಸುವ ಪಾತ್ರದ ಔಚಿತ್ಯವನ್ನು ತನ್ನ ಮೇಧಾ ಕೌಶಲದಿಂದಲೇ ಕಾಪಾಡಬೇಕು. ಎಷ್ಟೇ ದೊಡ್ಡ ವಿದ್ವಾಂಸ ರಾದರೂ ಪಾತ್ರ ಯಾವ ಸ್ವಭಾವವನ್ನು ಬಯಸುತ್ತದೆಯೋ ಅದನ್ನು ಮೈಗೂಡಿಸಿಕೊಳ್ಳ ಬೇಕಾದದ್ದು ಅಗತ್ಯ.
ಎಂದೋ ಆದ ಘಟನೆಗಳನ್ನು ಇಂದು ವಾಚಿಕಾಭಿನಯದಿಂದ ತೋರುವ ಕಲಾವಿದ, ಔಚಿತ್ಯವನ್ನು ಮೀರುವ ಅಥವಾ ಭಂಗಿಸುವ ಸ್ವಾತಂತ್ರ್ಯವನ್ನು ಹೊಂದಿಲ್ಲ. ಈ ಪ್ರe ಪಾತ್ರದ ಸಾದ್ಯಂತ ಅಭಿವ್ಯಕ್ತಿ ಆಗಲೇಬೇಕು. ಇದನ್ನು ತಪ್ಪಿದರೆ ಕಲಾಶಿಲ್ಪ ಭಂಗ ವಾಗುತ್ತದೆ. ಅಲಿಖಿತವಾದರೂ ಕಲಾ ಸಂವಿಧಾನವೊಂದು ಭಂಗಗೊಳ್ಳುತ್ತದೆ. ತಾಳಮದ್ದಳೆ ವಿರೂಪಗೊಳ್ಳುತ್ತದೆ.
ಆದುದರಿಂದಲೇ ತಾಳಮದ್ದಳೆಯ ಅರ್ಥಧಾರಿಯ ಮಾತು ಅಂದರೆ ಅದು ಪ್ರವಚನವಲ್ಲ ಹರಿಕಥೆ ಅಲ್ಲ, ಭಾಷಣವಲ್ಲ, ಗಮಕ ವಾಚನವಲ್ಲ, ಶಾಲಾ ಪಾಠವಲ್ಲ. ಅದು ರಸಭಾವಗಳಿಂದ ಕೂಡಿದ ವಾಚಕ ಅಭಿನಯ. ಅದು ದೇಶ-ಕಾಲ ಬದ್ಧವಾಗಿರಬೇಕು. ಇದು ಔಚಿತ್ಯ!
ಇದನ್ನರಿತು, ತನ್ನ ಸಿದ್ಧಿಯನ್ನಾಗಿಸಿಕೊಂಡು ಜನಮಾನಸಕ್ಕೆ ತಲುಪಿಸುವ ಪ್ರಯತ್ನಶೀಲ ಕಲಾವಿದ ನ್ಯಾಯಯುತವಾಗಿ ಸ್ವೀಕರಿಸಲ್ಪಡುತ್ತಾನೆ. ಬೇಗ ತೆರೆಯಿಂದ ಮರೆಯಾಗದೆ, ಬಹುಕಾಲ ಸ್ಥಿರವಾಗು ತ್ತಾನೆ. ಈ ಪರಿಶ್ರಮ, ಪ್ರಜ್ಞೆ ಇಲ್ಲಿಯ ಅರ್ಹತೆ. ಅದನ್ನು ಈ ಕ್ಷೇತ್ರ ಬಯಸುತ್ತದೆ. ಆದುದರಿಂದ ತಾಳಮದ್ದಳೆ ಸುಲಭವಲ್ಲ!!
ಹೊಂದಾಣಿಕೆ: ಈ ರೀತಿಯ ಎಲ್ಲಾ ಗುಣಗಳು ಸೇರಿಕೊಂಡು ಒಬ್ಬ ಅರ್ಹ ಅರ್ಥಧಾರಿ ಈ ಕ್ಷೇತ್ರದಲ್ಲಿದ್ದರೆ ಅದು ಹೆಮ್ಮೆ. ಅವನು ಸಮರ್ಥ. ಈ ಮಾಧ್ಯಮದ ಸಶಕ್ತ ಸಾಧ್ಯತೆಗಳನ್ನು ಲೋಕಕ್ಕೆ ಕೊಟ್ಟ ಧನ್ಯತೆ ಅವನಿಗೂ, ಈ ಕ್ಷೇತ್ರಕ್ಕೂ ಸಲ್ಲುತ್ತದೆ. ಹೀಗಾಗುವಾಗ, ಇಲ್ಲಿ ದೇಶ-ಕಾಲ ಪೂರಕ ವಾದ ಸಾಮಾಜಿಕ ಪ್ರಜ್ಞೆಯೂ ಅನಿವಾರ್ಯ.
ಹಲವರೊಡನೆ ಕೂಡಿಕೊಂಡು ಇರಬೇಕಾದುದರಿಂದ ಹೊಂದಾಣಿಕೆ ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಎಷ್ಟೆಂದರೂ ಕಲೆ ಎನ್ನುವುದು ಆ ಕ್ಷಣದ ಸ್ಪೂರ್ತಿ. ಇದಂತೂ ಆಶುಪ್ರತಿಭಾ ಕಣ. ಪ್ರತಿಭಾವಂತ ಕಲಾವಿದರಿಂದ ಹೊಸ ಹೊಸ ಅರ್ಥ ಸಾಧ್ಯತೆಗಳು ಸ್ಪುರಿಸುತ್ತಾ ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಲೇ ಇರುತ್ತದೆ. ಆ ಕಾರಣದಿಂದಲೇ ಇಲ್ಲಿ ಸಿದ್ಧ ವಾಚಿಕ ವಿಧಾನ ಇಲ್ಲದಿರುವುದು ಇದರ ಹೆಗ್ಗಳಿಕೆಗೂ ಕಾರಣವಾಗಿದೆ. ಇದು ಹಾಗೆಯೇ ಇರಬೇಕು ಅಂತಾದರೆ ಎಲ್ಲಾ ಅರ್ಹತೆಗಳನ್ನು ಮೈಗೂಡಿಸಿಕೊಂಡರೂ, ಕಲಾವಿದನು ಹೊಂದಾಣಿಕೆ ಎನ್ನುವ ಒಂದು ಸಾಮಾಜಿಕ ಕಲಾಸಿzಂತಕ್ಕೆ ತನ್ನನ್ನು ಒಪ್ಪಿಸಿಕೊಳ್ಳಬೇಕು.
ಎಂಥ ಸಂದರ್ಭದಲ್ಲಿಯೂ ಮೂಲಸೂತ್ರಗಳನ್ನು ಬಾಧಿಸುವ ಕೃತ್ಯಗಳನ್ನು ವಾಚಿಕಾಭಿನಯದಲ್ಲಿ ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡುವುದಕ್ಕೆ ಮುಂದಾದರೆ ಅದು ದ್ರೋಹ. ಅದರಿಂದ ಕೆಲವು ಕ್ಷಣಿಕ ಹಾಗೂ ವಿಕೃತ ಆನಂದ ಉಂಟಾಗಬಹುದು. ಆದರೆ ಅವೆಲ್ಲ ಕಲಾವಿದರ ದೋಷ.
ಅವನ್ನೆಲ್ಲ ಈ ಕಲೆಯ ನಿಜವಾದ ಪ್ರೇಕ್ಷಕ ವರ್ಗ ಸ್ವೀಕರಿಸುವುದಿಲ್ಲ. ಬಲುಬೇಗ ಅಂಥವರು ಗಳನ್ನು ಮೂಲೆಗೆ ಸರಿಸುತ್ತದೆ. ಹಿಂದೆ ಎತ್ತರದ ಗೌರವದ ಸ್ಥಾನಗಳನ್ನು ಪಡೆದ ಹಲವರು, ಹೊಂದಾಣಿಕೆ ಸ್ವಭಾವ ಇಲ್ಲದ ಎಷ್ಟೋ ಸಮರ್ಥರು ಕಾರಣವಿಲ್ಲದೆ ಕಾಣೆಯಾಗಿದ್ದಾರೆ. ಈ ಪಥ್ಯ ಈ ಕಲೆಯ ಅರ್ಥಧಾರಿಗಳಿಗೆ ಬಹಳ ಮುಖ್ಯವಾದ ಅರ್ಹತೆ.
ಸರ್ವತ್ರ ಉತ್ತಮ ಅಭಿಪ್ರಾಯಗಳನ್ನು ಹೊಂದಿರುವ ಕಲಾವಿದರುಗಳಲ್ಲಿ ಈ ಹೊಂದಾಣಿಕೆಯ ಗುಣ ಕಾಣುತ್ತದೆ. ಇದೂ ಅರಿತು ಅಳವಡಿಸಿಕೊಳ್ಳಬೇಕಾದ ಗುಣ ಲಕ್ಷಣವೇ. ಆದುದರಿಂದಲೇ ತಾಳಮದ್ದಳೆ ಸುಲಭವಲ್ಲ!!
ಸಮಯಪ್ರಜ್ಞೆ: ಇಷ್ಟೆ ಪರಿಶ್ರಮಗಳನ್ನು ತನ್ನ ಸಹಜ ಸ್ವಭಾವ ಸ್ಥಿತಿಗತಿಗಳಿಗೆ ಹೊಂದಿಸಿ ಕೊಂಡಿರುವ ಕಲಾವಿದರು ತಾಳಮದ್ದಳೆ ಎನ್ನುವ ಈ ಕಲಾಪ್ರಕಾರದಲ್ಲಿ ರೂಢಿಸಿಕೊಂಡಿರ ಲೇಬೇಕಾದ ಇನ್ನೊಂದು ಆದ್ಯತೆಯ ಗುಣ ಸಮಯಪ್ರಜ್ಞೆ!
ಈ ಸಮಯ ಎನ್ನುವುದನ್ನು ನಾನು ಬೇರೆ ಬೇರೆ ಕೋನಗಳಿಂದ ನೋಡುವ ಪ್ರಯತ್ನ ಮಾಡಿದ್ದೇನೆ ಅಂದರೆ, ತನ್ನ ವಿಚಾರ ಅದರ ಕಲಾತ್ಮಕ ಸ್ವರೂಪ, ಅದು ಪರಿಣಾಮ ಉಂಟುಮಾಡಬೇಕು ಎನ್ನುವ ಪ್ರಜ್ಞೆ, ಆ ಪಾತ್ರದ ಸ್ವಭಾವ ಇವುಗಳೆಲ್ಲದರ ಜತೆ ಅಂದಿನ ಕಾಲವನ್ನು ಕಾಣಿಸುವ ಸ್ಪಷ್ಟತೆ ಅರ್ಥಧಾರಿಗೆ ಬೇಕು. ಅದು ವಾಚಕ ಅಭಿನಯ. ಇದರ ಜತೆಗೆ ವರ್ತಮಾನದ ಸ್ಥಿತಿಗಳನ್ನು ಅರಿತಿರಬೇಕು.
ಎಲ್ಲವೂ ದೇಶ-ಕಾಲ ಚೋದಿತವಾಗಿರುವಾಗ ತಾವು ಪ್ರಸ್ತುತಪಡಿಸುವ ವಿಚಾರಗಳನ್ನು ದೇಶ-ಕಾಲದ ಮರ್ಯಾದೆಯ ಒಳಗೆ ತಿಳಿಸಬೇಕು. ಈ ಪ್ರeಯ ದೃಶ್ಯ ರೂಪ- ಕಾಲಮಿತಿ. ಇದನ್ನು ಒಂದು ಸವಾಲು ಹಾಗೂ ಶಿಸ್ತು ಎಂಬ ದೃಷ್ಟಿಯಿಂದ ಸ್ವೀಕರಿಸುವಾಗ ಅದಕ್ಕೊಂದು ಸೌಂದರ್ಯ ಬರುತ್ತದೆ.
ಹಾಗಂತ ಅದು ಸ್ವಲ್ಪ ಹಿಗ್ಗಿದರೆ ಅದು ಅಪರಾಧ ಎಂಬ ಅರ್ಥವು ಸರಿಯಲ್ಲ. ಪರಕಾಯ ಪ್ರವೇಶ ಮಾಡಿರುವಾಗ ಕೆಲವೊಮ್ಮೆ ಸ್ವಲ್ಪ ವಿಸ್ತಾರ ಸಹಜವಾಗಿ ಆಗಿಬಿಡುತ್ತದೆ. ಆದರೆ ಅತಿಯಾಗಿ ಲಂಬಿಸ ಲ್ಪಟ್ಟರೆ ಅದು ಅಕ್ಷಮ್ಯ. ಅದು ಅಗೌರವ. ಇದರ ಜತೆಗೆ ಸುಂದರ ಶಿಲ್ಪಕಾಗಿ ಈ ಸವಾಲನ್ನು ಕಲಾವಿದ ತನ್ನ ಕೌಶಲದಿಂದ ಕಟ್ಟಿದರೆ ಅದು ಆಪ್ಯಾಯಮಾನ.
ವಿಸ್ತಾರದ ಧಾವಂತದಲ್ಲಿ ಕಳೆದುಹೋಗುವ ಹಲವು ಸಂಗತಿಗಳಿಗೆ ಕಡಿವಾಣ ಹಾಕಿ ಸುಂದರ ಸ್ವರೂಪವನ್ನು ನೀಡಲು ಸಮರ್ಥ ಕಲಾವಿದನಿಗೆ ಯಾವತ್ತೂ ಸಾಧ್ಯ. ಇಲ್ಲಿಯೂ ಗಮನಿಸಬೇಕಾದ ಒಂದು ಅಂಶ ಎಲ್ಲಾ ಕಾಲಗಳಲ್ಲಿಯೂ ವಿಸ್ತಾರಕ್ಕೂ ಹಾಗೂ ಮಿತಿಗೂ ಒಂದಿಷ್ಟು ಚರ್ಚೆ ವಿಮರ್ಶೆ ಬಂದಿದೆ.
ಒಂದಿಷ್ಟು ಒಮ್ಮತ ವಿರೋಧ ಸೃಷ್ಟಿಯಾಗಿದೆ. ಎಲ್ಲದರ ಸಾರವಾಗಿ ನೋಡುವುದಾದರೆ ಕಲಾವಿದ ರಾದವರು ಈ ಎಲ್ಲ ವಿಚಾರಗಳನ್ನು ತಿಳಿಯುವ ಮತ್ತು ಅದಕ್ಕೆ ಸ್ಪಂದಿಸುವ ಗುಣಾತ್ಮಕ ಪ್ರದರ್ಶನ ವನ್ನೇ ನೀಡುವಂತಾಗಬೇಕು. ಪಾತ್ರದಲ್ಲಿ ಎಷ್ಟೇ ತನ್ಮಯರಾದರೂ ಆ ಎಚ್ಚರವನ್ನು ಮರೆಯ ಬಾರದು. ಜಾಗೃತಿ ಅಗತ್ಯ. ಹೀಗಾದಾಗ ಹೊಸತನದಲ್ಲಿ ಹಿರಿತನದ ಶಿಸ್ತು ಸೊಗಸು ಕಾಣುತ್ತದೆ. ಆದುದರಿಂದ ಸಮಯಮಿತಿ ಎನ್ನುವುದು ಗುಣಾತ್ಮಕ ಪ್ರದರ್ಶನದ ಮಿತಿಯಾಗಬಾರದು ಎಂಬ ಕಾಳಜಿ ಕಲಾವಿದರಿಗೆ ಇರಬೇಕು. ಈ ಸೂಕ್ಷ್ಮ ಕಾಳಜಿ ವಹಿಸಬೇಕು ಎನ್ನುವುದನ್ನು ಅಭ್ಯಾಸದಿಂದ ರೂಢಿಸಿಕೊಳ್ಳಬೇಕಾಗುತ್ತದೆ. ಭಾವಜೀವಿಯಾದ ಕಲಾವಿದರಿಗೆ ಇದು ಸಣ್ಣ ವಿಷಯವಲ್ಲ. ಇದನ್ನೂ ಅರಿವಿನಿಂದಲೇ ತಿಳಿಯಬೇಕು.
ಆದುದರಿಂದ ತಾಳಮದ್ದಳೆ ಸುಲಭವಲ್ಲ!!
ರಂಗಪ್ರಜ್ಞೆ: ಆಗಲೇ ಒಂದು ಸಂದರ್ಭ ನಾನು ಪ್ರಸ್ತಾಪಿಸಿದಂತೆ ಈ ಕಲೆ ಹಲವರನ್ನು, ಅನ್ಯಾನ್ಯ ಕ್ಷೇತ್ರಗಳ ಆಸಕ್ತರನ್ನು ಕೈಬೀಸಿ ಕರೆದರೂ ಈ ರಂಗಪ್ರಜ್ಞೆ ಎನ್ನುವುದು ಸ್ವಲ್ಪವಾದರೂ ಇರದಿದ್ದರೆ ಹಾಗೆ ಬಂದವರು ಇಲ್ಲಿ ಯಶಸ್ವಿಯಾಗಲಾರರು. ಅವರು ಬಹುಬೇಗ ಸೋಲುತ್ತಾರೆ. ಏನು ಈ ರಂಗಪ್ರe ಅಂದರೆ, ಯಕ್ಷಗಾನಕ್ಕಾಗಿ ಸಿದ್ಧಗೊಂಡ ಪಠ್ಯವೂ ಹಲವು ಅಭಿವ್ಯಕ್ತಿಯ ಅಗತ್ಯವನ್ನು ಹೊಂದಿದೆ. ರಸ ವೈಶಿಷ್ಟ್ಯಗಳಿಂದ ಕೂಡಿದೆ.
ಇದು ತಿಳಿಯದಿದ್ದರೆ ವಾಚಿಕವು ವಾಚಿಕ ಅಭಿನಯ ಆಗುವುದಿಲ್ಲ. ಅದು ಕೇವಲ ಬಡಬಡಿಕೆ ಯಾಗುತ್ತದೆ. ಯಾವ ಆಹಾರ್ಯ ಇಲ್ಲದಿದ್ದಾಗಲೂ, ಮಾತು ಪರಿಣಾಮಕಾರಿ ಆಗಬೇಕು ಎಂದಾಗ ಅದು ಅಭಿನಯದ ಕೆಲವು ಭಾವಗಳನ್ನು ಮುಖದಲ್ಲಿ ಕೈಯಲ್ಲಿ ನಿರೀಕ್ಷಿಸುತ್ತದೆ. ನೋಟಗಳಲ್ಲಿ ನಿರೀಕ್ಷಿಸುತ್ತದೆ.
ಕೆಲವು ಸೂಕ್ಷ್ಮ ಉದ್ಗಾರಗಳಲ್ಲಿ ನಿರೀಕ್ಷಿಸುತ್ತದೆ. ಅದನ್ನು ಮಾಡದೆ ಅಥವಾ ಅಳವಡಿಸಿಕೊಳ್ಳದೆ ಸುಮ್ಮನಿದ್ದರೆ ಬೇರೆ ಕ್ಷೇತ್ರದ ಎಷ್ಟು ದೊಡ್ಡವರಾದರೂ ಈ ಕೊರತೆಯಿಂದ ಸೋಲುತ್ತಾರೆ. ಇದು ರಂಗದಲ್ಲಿ ಎಷ್ಟು ಅಗತ್ಯವೋ, ತಾಳಮದ್ದಳೆಯಲ್ಲಿಯೂ ಅಷ್ಟೇ ಅಗತ್ಯ. ವಾಚಿಕ ಅಭಿನಯ ಎಂದು ಹೇಳುವಾಗ ಅದು ಆಕಾರ ಬದ್ಧತೆಯನ್ನು ಅವಲಂಬಿಸಿದೆ ಎಂದು ಬೇರೆ ಹೇಳಬೇಕಾಗಿಲ್ಲ.
ಇದನ್ನ ರೂಢಿಸಿಕೊಳ್ಳದಿದ್ದರೆ ಮಾಡಿದ ಅಭಿನಯವು ವಿಕಾರವಾಗಿ ಕಂಡರೆ ಅಲ್ಲಿಯೂ ಸೋಲೇ ಗತಿ. ಅಂಥವರು ಬಹುಕಾಲ ಮೆರೆಯಲಾರರು. ಅವರ ವ್ಯಂಗ್ಯ ವಿಕಾರ ಅಭಿನಯಗಳು ನಗೆಪಾಟಲಿಗೀಡಾಗಿ ಅಂಥವರು ಸೋಲುತ್ತಾರೆ. ಈ ಅರಿವು ಈ ಕ್ಷೇತ್ರದ ಪ್ರವೇಶ ಬಯಸುವ ಅರ್ಥಧಾರಿಗಳಿಗೆ ಅತ್ಯಗತ್ಯ. ಆದುದರಿಂದ ತಾಳಮದ್ದಳೆ ಸುಲಭವಲ್ಲ!!
ಕೂಟಕಲೆ: ಈ ಕಲೆ ಪ್ರದರ್ಶನದಲ್ಲಿ ರಂಜನೆಯನ್ನು ನೀಡಬೇಕು, ಬೋಧನೆಯನ್ನು ನೀಡಬೇಕು ಎನ್ನುವ ಮೂಲ ಸಿದ್ಧಾಂತವನ್ನು ಒಪ್ಪಿಕೊಂಡು ಆ ಕಣ್ಣಿನಿಂದ ನೋಡುವುದಾದರೆ, ಇದು ಕುಸ್ತಿಯ ಅಖಾಡವಲ್ಲ, ಇದು ಕೂಟಕಲೆ. ಇದಕ್ಕೆ ಹಿಮ್ಮೇಳ ಹಾಗೂ ಮುಮ್ಮೇಳ ಬೇಕು. ಎರಡರ ಸಾಂಗತ್ಯ ಒಂದು ಸುಂದರ ಸೌಧವಾಗಬೇಕು.
ವ್ಯಕ್ತಿ, ಸನ್ನಿವೇಶ, ರಸಗಳು, ಭಾವಭಿವ್ಯಕ್ತಿಗಳು ಸಮ್ಮಿಲನಗೊಂಡು ರಂಜನೆಯನ್ನು ಒದಗಿಸುತ್ತ ಒಂದು ಆನಂದದ ಸ್ಥಿತಿಯತ್ತ ಕೊಂಡೊಯ್ಯಬೇಕು. ಕಲಾವಿದರ ಮನಸ್ಥಿತಿಯಂತೂ ಉತ್ತಮ ಪ್ರದರ್ಶನ ನೀಡಬೇಕು ಎಂದಾಗಿರಬೇಕು. ಇದರಲ್ಲಿ ಯಶಸ್ವಿ ಅರ್ಥಧಾರಿ ಆಗಬೇಕು ಎಂಬುದು ಅರ್ಥಧಾರಿಯ ಮೂಲಗುಣ ಆಗಿರಬೇಕು.
“ನನ್ನ ಪಾತ್ರ ಮಾತ್ರ ವಿಜೃಂಭಿಸಬೇಕು, ಎಲ್ಲ ಸಹಜ ನಡೆಯ ಕ್ರಮಗಳನ್ನ ಮೀರಿಯಾದರೂ ತನ್ನ ಪಾತ್ರವನ್ನು ವೈಭವೀಕರಿಸಬೇಕು" ಎನ್ನುವ ಧೋರಣೆಯ, ವ್ಯಕ್ತಿ ಪ್ರತಿಷ್ಠೆಯ ಸ್ವಭಾವದವರಿಗೆ ಈ ಕಲೆ ಅಲ್ಲ. ಏಕೆಂದರೆ ಇದು ಕೂಟಕಲೆ. ದುರಹಂಕಾರ, ಆಕ್ರಮಣಶೀಲತೆ, ಭ್ರಮೆಯನ್ನು ಹುಟ್ಟಿಸಿ ದಾರಿ ತಪ್ಪಿಸುವ ಕ್ರಮ, ಇದೆಲ್ಲ ಯಾರನ್ನೂ ಶ್ರೇಷ್ಠರನ್ನಾಗಿಸುವುದಿಲ್ಲ ಅಥವಾ ಅಂಥವರು ಈ ಕಲೆಗೆ ಅನಿವಾರ್ಯ ಎನಿಸುವುದಿಲ್ಲ.
ಬಹಳ ಸಂದರ್ಭ, ಇಂಥ ಭ್ರಮೆಗಳಿಂದ ಕೂಡಿದ ಎಷ್ಟೋ ಜನ ಬಲುಬೇಗ ಜನರ ಮನಸ್ಸಿನಿಂದ ದೂರವಾಗಿಬಿಡುತ್ತಾರೆ. ಅಥವಾ ಅವರನ್ನು ನೆನಪಿಸುವ ಅಭಿಮಾನಿಗಳ ಸಂಖ್ಯೆ ಕೂಡ ಮಿತವಾಗಿರುತ್ತದೆ. ಇದು ಎಂದಿಗೂ ವ್ಯಕ್ತಿ ಪ್ರತಿಷ್ಠೆಯ ಪ್ರದರ್ಶನದ ಆಖಾಡವಲ್ಲ. ಬದಲಿಗೆ ಮಹಾನ್ ತತ್ವ ಸಿದ್ಧಾಂತಗಳನ್ನು, ಮುದ ನೀಡುವ ವಿಚಾರಗಳನ್ನು ಕಲಾತ್ಮಕವಾದ ಸ್ವರೂಪದಲ್ಲಿ ನೀಡುವ ಒಂದು ಕೂಟಕಲೆ. ಇದನ್ನು ಅರಿತವ ಉಳಿದಾನು, ಅರಿಯದವ ಅಳಿದಾನು. ಈ ಎಚ್ಚರಿಕೆ ಕಲಾವಿದರಲ್ಲಿ ಸದಾ ಇರಬೇಕಾಗುತ್ತದೆ. ಅದನ್ನು ಅಭ್ಯಾಸದಿಂದಲೇ ರೂಢಿಸಿಕೊಳ್ಳಬೇಕು. ಇವೆಲ್ಲ ವನ್ನೂ ತಿಳಿಯಲು ತಾಳ್ಮೆ ಬೇಕು. ಪ್ರಾಮಾಣಿಕತನ ಬೇಕು. ಕಲಾಧೋರಣೆ ಬೇಕು. ಆದುದರಿಂದ ತಾಳಮದ್ದಳೆ ಸುಲಭವಲ್ಲ...
(ಲೇಖಕರು ಯಕ್ಷಗಾನದ ಹಿರಿಯ ಅರ್ಥಧಾರಿಗಳು)