ಸಂಪಾದಕರ ಸದ್ಯಶೋಧನೆ
ಒಂದು ಪತ್ರಿಕೆಯ ನಿಜವಾದ ಶಕ್ತಿ ಅಡಗಿರುವುದು ಅದರ ಮುದ್ರಣದ ಗುಣಮಟ್ಟದ ಅಥವಾ ಜಾಹೀರಾತು ಗಳ ಆದಾಯದ ಅಲ್ಲ, ಬದಲಾಗಿ ಓದುಗರ ಮನಸ್ಸಿನಲ್ಲಿ ಅದು ಗಳಿಸಿರುವ ‘ವಿಶ್ವಾಸಾರ್ಹತೆ’ (Credibility)ಯಲ್ಲಿ. ಅಮೆರಿಕದ ಪ್ರತಿಷ್ಠಿತ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯನ್ನು ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಸುದ್ದಿ ಸಂಸ್ಥೆಯನ್ನಾಗಿ ಕಟ್ಟಿ ಬೆಳೆಸಿದ ಮಹಾನ್ ಸಂಪಾದಕ ಎ.ಎಂ. ರೋಸೆಂಥಾಲ್, ಈ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಒಂದು ಅತ್ಯಂತ ಸರಳವಾದರೂ ಕ್ರಾಂತಿಕಾರಕವಾದ ಅಸವನ್ನು ಬಳಸಿದರು- ಅದೇ ಪತ್ರಿಕೆಯಲ್ಲಿ ಪ್ರತಿದಿನ ಪ್ರಕಟವಾಗುವ ಶಿಸ್ತುಬದ್ಧ ‘ಕರೆಕ್ಷನ್ಸ್’ (ತಿದ್ದುಪಡಿ) ಅಂಕಣ.
ತಪ್ಪುಗಳನ್ನು ಮುಚ್ಚಿ ಹಾಕುವುದರಿಂದ ಪತ್ರಿಕೆಯ ಘನತೆ ಹೆಚ್ಚುವುದಿಲ್ಲ, ಬದಲಾಗಿ ಆ ತಪ್ಪು ಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಂಡು ಸರಿಪಡಿಸಿದಾಗಲೇ ಓದುಗರ ನಂಬಿಕೆ ಗಟ್ಟಿಯಾಗುತ್ತದೆ ಎಂಬುದು ರೋಸೆಂಥಾಲ್ ಅವರ ದೃಢವಾದ ನಂಬಿಕೆಯಾಗಿತ್ತು. 1970ರ ದಶಕಕ್ಕೂ ಮುನ್ನ ಜಗತ್ತಿನ ಬಹುತೇಕ ಪತ್ರಿಕೆಗಳಲ್ಲಿ ತಪ್ಪುಗಳನ್ನು ಒಪ್ಪಿಕೊಳ್ಳುವ ಸಂಸ್ಕೃತಿ ಅಷ್ಟಾಗಿ ಬೆಳೆದಿರಲಿಲ್ಲ.
ಒಂದೊಮ್ಮೆ ವರದಿಯಲ್ಲಿ ದೊಡ್ಡ ಪ್ರಮಾದವಾದರೆ, ಯಾರಿಗೂ ಕಾಣದಂತೆ ಪತ್ರಿಕೆಯ ಒಳಪುಟದ ಯಾವುದೋ ಮೂಲೆಯಲ್ಲಿ ಚಿಕ್ಕ ಅಕ್ಷರಗಳಲ್ಲಿ ವಿಷಾದ ವ್ಯಕ್ತಪಡಿಸಿ ಕೈತೊಳೆದು ಕೊಳ್ಳಲಾಗುತ್ತಿತ್ತು. ಇನ್ನು ಸಣ್ಣಪುಟ್ಟ ಹೆಸರಿನ ದೋಷಗಳು ಅಥವಾ ಅಂಕಿ-ಅಂಶಗಳ ತಪ್ಪುಗಳನ್ನು ಪತ್ರಿಕೆಗಳು ಗಂಭೀರವಾಗಿ ಪರಿಗಣಿಸುತ್ತಲೇ ಇರಲಿಲ್ಲ.
ಇದನ್ನೂ ಓದಿ: Vishweshwar Bhat Column: ರೀಡರ್ಸ್ ಎಡಿಟರ್ ತಪ್ಪು ಮಾಡಿದರೆ...
‘ಪತ್ರಿಕೆ ಎಂದಿಗೂ ತಪ್ಪು ಮಾಡುವುದಿಲ್ಲ’ ಎಂಬ ಅಹಂಕಾರದ ಮುಖವಾಡವನ್ನು ಸುದ್ದಿಮನೆಗಳು ಧರಿಸಿದ್ದವು. ಆದರೆ, ‘ನ್ಯೂಯಾರ್ಕ್ ಟೈಮ್ಸ್’ನ ಸಂಪಾದಕೀಯ ಚುಕ್ಕಾಣಿ ಹಿಡಿದ ರೋಸೆಂಥಾಲ್ ಅವರಿಗೆ ಈ ಧೋರಣೆ ಒಪ್ಪಿಗೆಯಾಗಲಿಲ್ಲ. ಪತ್ರಿಕೆಯು ಇತಿಹಾಸದ ದಾಖಲೆಯಾಗಿ ಉಳಿಯಬೇಕಾದರೆ ಅದರಲ್ಲಿರುವ ಪ್ರತಿಯೊಂದು ಅಕ್ಷರವೂ ಸತ್ಯವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು.
1972ರಲ್ಲಿ ರೋಸೆಂಥಾಲ್ ಅವರು ‘ನ್ಯೂಯಾರ್ಕ್ ಟೈಮ್ಸ್’ನ ಎರಡನೇ ಪುಟದಲ್ಲಿ ‘ಕರೆಕ್ಷನ್ಸ್’ ಎಂಬ ಪ್ರತ್ಯೇಕ ಮತ್ತು ಶಾಶ್ವತ ಅಂಕಣವನ್ನು ಆರಂಭಿಸುವ ಐತಿಹಾಸಿಕ ನಿರ್ಧಾರ ತೆಗೆದು ಕೊಂಡರು. ಪತ್ರಿಕೆಯ ಮುಖಪುಟದಷ್ಟೇ ಮಹತ್ವವನ್ನು ಈ ಎರಡನೇ ಪುಟದ ತಿದ್ದುಪಡಿ ಕಾಲಂಗೆ ನೀಡಲಾಯಿತು. ಇದರ ಹಿಂದಿದ್ದ ನಿಯಮ ಅತ್ಯಂತ ಸ್ಪಷ್ಟವಾಗಿತ್ತು- ಪತ್ರಿಕೆಯ ಯಾವುದೇ ಪುಟದಲ್ಲಿ, ಯಾವುದೇ ವಿಭಾಗದಲ್ಲಿ ಸಣ್ಣದೊಂದು ವಾಸ್ತವಾಂಶದ ತಪ್ಪು ನಡೆದರೂ, ಮರು ದಿನವೇ ಈ ನಿಗದಿತ ಜಾಗದಲ್ಲಿ ಅದನ್ನು ಸ್ಪಷ್ಟವಾಗಿ ತಿದ್ದುಪಡಿ ಮಾಡಲೇಬೇಕು.
ಓದುಗರು ತಿದ್ದುಪಡಿಗಳನ್ನು ಹುಡುಕಿಕೊಂಡು ಇಡೀ ಪತ್ರಿಕೆಯನ್ನು ತಡಕಾಡುವ ಬದಲು, ಪ್ರತಿದಿನ ಒಂದೇ ನಿರ್ದಿಷ್ಟ ಸ್ಥಳದಲ್ಲಿ ಪತ್ರಿಕೆಯ ಪ್ರಾಮಾಣಿಕತೆಯನ್ನು ಕಾಣುವಂತಾಗಬೇಕು ಎಂಬುದು ರೋಸೆಂಥಾಲ್ ದೂರದೃಷ್ಟಿಯಾಗಿತ್ತು. ಆರಂಭದಲ್ಲಿ ಸುದ್ದಿಮನೆಯ ಅನೇಕ ಹಿರಿಯ ಪತ್ರಕರ್ತರು ಮತ್ತು ಸಂಪಾದಕರು ರೋಸೆಂಥಾಲ್ ಈ ನಿರ್ಧಾರವನ್ನು ವಿರೋಧಿಸಿದ್ದರು.
‘ನಮ್ಮ ತಪ್ಪುಗಳನ್ನು ನಾವೇ ಪ್ರತಿದಿನ ಡಂಗುರ ಸಾರಿ ಹೇಳಿಕೊಂಡರೆ, ಜನರು ನಮ್ಮ ಪತ್ರಿಕೆ ಯನ್ನು ಅಸಮರ್ಥ ಎಂದು ಭಾವಿಸುವುದಿಲ್ಲವೇ? ನಮ್ಮ ಘನತೆಗೆ ಧಕ್ಕೆಯಾಗುವುದಿಲ್ಲವೇ?’ ಎಂಬುದು ಅವರ ಆತಂಕವಾಗಿತ್ತು. ಆದರೆ ರೋಸೆಂಥಾಲ್ ಅವರ ವಾದವೇ ಬೇರೆಯಾಗಿತ್ತು. ‘ಒಂದು ಸುಳ್ಳು ಅಥವಾ ತಪ್ಪು ಮಾಹಿತಿಯು ಪತ್ರಿಕೆಯ ಆರ್ಕೈವ್ನಲ್ಲಿ (ದಾಖಲೆಗಳಲ್ಲಿ) ಶಾಶ್ವತವಾಗಿ ಉಳಿದುಬಿಟ್ಟರೆ, ಮುಂದಿನ ತಲೆಮಾರಿನ ಸಂಶೋಧಕರು ಮತ್ತು ಓದುಗರು ಅದನ್ನೇ ಸತ್ಯವೆಂದು ನಂಬುತ್ತಾರೆ.
ನಮ್ಮ ಅಹಂಕಾರಕ್ಕಿಂತ ಸತ್ಯದ ನಿಖರತೆ ದೊಡ್ಡದು’ ಎಂದು ಅವರು ತಮ್ಮ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದರು. ರೋಸೆಂಥಾಲ್ ರೂಪಿಸಿದ ಈ ಕರೆಕ್ಷನ್ ಅಂಕಣದ ಕಾರ್ಯವೈಖರಿಯು ಅತ್ಯಂತ ಶಿಸ್ತುಬದ್ಧವಾಗಿತ್ತು. ತಿದ್ದುಪಡಿ ಬರೆಯುವಾಗ ಯಾವುದೇ ರೀತಿಯ ಸಬೂಬುಗಳನ್ನು ಹೇಳುವಂತಿರಲಿಲ್ಲ.
‘ಮುದ್ರಣ ದೋಷದಿಂದಾಗಿ’ ಅಥವಾ ‘ವರದಿಗಾರರ ಕಣ್ತಪ್ಪಿನಿಂದ’ ಎಂಬ ನೆಪಗಳನ್ನು ನೀಡದೇ, ನಿನ್ನೆಯ ಸಂಚಿಕೆಯಲ್ಲಿ ಏನು ತಪ್ಪಾಗಿತ್ತು ಮತ್ತು ವಾಸ್ತವವಾಗಿ ಸರಿ ಉತ್ತರವೇನು ಎಂಬುದನ್ನು ನೇರವಾಗಿ, ವಸ್ತುನಿಷ್ಠವಾಗಿ ಬರೆಯಬೇಕಿತ್ತು. ತಪ್ಪು ಯಾರಿಂದಲೇ ಆಗಿರಲಿ- ಅದು ಹೊಸದಾಗಿ ಸೇರಿದ ಕಿರಿಯ ವರದಿಗಾರನಾಗಿರಲಿ ಅಥವಾ ಪತ್ರಿಕೆಯ ಅತ್ಯಂತ ಹಿರಿಯ ಅಂಕಣಕಾರನಾಗಿರಲಿ- ಕರೆಕ್ಷನ್ ಅಂಕಣದ ಮುಂದೆ ಎಲ್ಲರೂ ಸಮಾನರಾಗಿದ್ದರು. ಈ ನಿಷ್ಪಕ್ಷಪಾತ ಧೋರಣೆಯು ಸುದ್ದಿಮನೆಯಲ್ಲಿ ಹೊಣೆಗಾರಿಕೆಯ ಸಂಸ್ಕೃತಿಯನ್ನು ಬೆಳೆಸಿತು