ದುಡ್ಡು- ಕಾಸು
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ರುಪಾಯಿ ಮೌಲ್ಯ ಕುಸಿಯುತ್ತಿರುವುದು ಕೇವಲ ಇಂದಿನ ವಿದ್ಯಮಾನವಲ್ಲ. ವಿತ್ತ ಜಗತ್ತಿನಲ್ಲಿ ಇದು ಮಾಮೂಲು. ಅಮೆರಿಕನ್ ಡಾಲರ್ ಎದುರು ರುಪಾಯಿ ಮೌಲ್ಯಗಳನ್ನು ಕಳೆದು ಕೊಂಡಿದೆ ಯಾದರೂ ಇದು ಇಷ್ಟು ಬೇಗ 90ರ ಗಡಿ ದಾಟುವುದೆಂದು ಯಾರೂ ಊಹಿಸಿರಲಿಲ್ಲ.
ಕಳೆದ ಹತ್ತು ವಹಿವಾಟು ದಿನಗಳಲ್ಲಿ ರುಪಾಯಿ ಮೌಲ್ಯವು ಡಾಲರ್ ಎದುರು 90 ರು.ನಿಂದ 91 ರು.ಗೆ ಇಳಿದಿದೆ. ಕಳೆದ ಒಂದು ವಾರದಲ್ಲಿ ಶೇ. 10ರಷ್ಟು ಕುಸಿದಿದೆ. ಇದೀಗ ಚೇತರಿಸಿಕೊಂಡು 90.38 ರು. ಆಗಿದೆ. ಆದರೆ ಚಂಚಲತೆ ಇದೆ. ರುಪಾಯಿ ಮೌಲ್ಯದ ಎಗ್ಗಿಲ್ಲದ ಕುಸಿತಕ್ಕೆ ಪ್ರಮುಖ ಕಾರಣ ಗಳೆಂದರೆ: 1) ಭಾರತದ ವಿದೇಶ ವ್ಯವಹಾರದಲ್ಲಿ ಹೆಚ್ಚುತ್ತಿರುವ ಕೊರತೆ 2) ದೇಶಕ್ಕೆ ಬರುವ ಬಂಡವಾಳದ ಕುಸಿತ 3) ವಿದೇಶಿಯರು ಹೂಡಿದ್ದ ಬಂಡವಾಳದ ಹಿಂಪಡೆತ 4) ಡಾಲರ್ ರೂಪ ದಲ್ಲಿ ಹೆಚ್ಚುತ್ತಿರುವ ಹೊರ ಹರಿವು ಈ ಹಣಕಾಸು ವರ್ಷದಲ್ಲಿ ರುಪಾಯಿ ಮೌಲ್ಯದ ಮೇಲೆ ವ್ಯಾಪಾರ ಕೊರತೆ, ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು ಪ್ರಭಾವ ಬೀರಿವೆ.
ದೇಶದ ಜಿಡಿಪಿ ಬೆಳವಣಿಗೆ ಭರ್ಜರಿಯಾಗಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ. ಜಿಎಸ್‌ಟಿ ಸಂಗ್ರಹ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತದ ಆಂತರಿಕ ಉತ್ಪನ್ನ ಬೆಳವಣಿಗೆಯ ಯಶೋಗಾಥೆ ಮುಂದುವರಿದಿದೆ. ರುಪಾಯಿ ಕುಸಿತವನ್ನು ಆರ್ಥಿಕ ದೃಷ್ಟಿಯಿಂದ ನೋಡಿದರಷ್ಟೇ, ಡಾಲರ್ ಎದುರು ರುಪಾಯಿ ಕುಸಿತದ ಅಸಲಿ ಕಾರಣ ಗಳನ್ನು ಕಂಡು ಕೊಳ್ಳಲು ಸಾಧ್ಯ. ಆದರೆ ರುಪಾಯಿ ಮೌಲ್ಯ ಕುಸಿಯುತ್ತಿರುವುದು ಆತಂಕದ ಸಂಗತಿಯಾಗಿದೆ. ನೋಡನೋಡುತ್ತಲೇ ರುಪಾಯಿ ಮೌಲ್ಯ ಕುಸಿದು 91ರ ಗಡಿ ದಾಟಿ ಚಂಚಲತೆ ಯನ್ನು ಪ್ರದರ್ಶಿಸುತ್ತಿದೆ.
ಅಧಿಕೃತ ದತ್ತಾಂಶಗಳ ಪ್ರಕಾರ, ಡಾಲರ್ ಎದುರು ರುಪಾಯಿ 2015ರಲ್ಲಿ ಶೇ.4.5ರಷ್ಟು, 2016ರಲ್ಲಿ ಶೇ. 2.6ರಷ್ಟು ಕುಸಿದಿದ್ದರೆ 2017ರಲ್ಲಿ ಶೇ. 6.4ರಷ್ಟು ಏರಿಕೆ ಕಂಡಿತ್ತು. ತದನಂತರ ರುಪಾಯಿ ಮೌಲ್ಯ ದಲ್ಲಿ ನಿರಂತರ ಕುಸಿತ ಕಂಡುಬಂದಿದೆ. 2018ರಲ್ಲಿ ಶೇ. 8.5, 2019ರಲ್ಲಿ ಶೇ.2.3, 2020ರಲ್ಲಿ ಶೇ. 2.3, 2021ರಲ್ಲಿ ಶೇ. 2.7, 2021ರಲ್ಲಿ ಶೇ. 1.7, 2022ರಲ್ಲಿ ಶೇ. 10.3, 2023ರಲ್ಲಿ ಶೇ. 0.6 ಮತ್ತು 2024ರಲ್ಲಿ ಶೇ. 2.8ರಷ್ಟು ಕುಸಿತವಾಗಿದೆ.
ಇದನ್ನೂ ಓದಿ: Cherkady Sachhidanand Shetty Column: ವಾರಸುದಾರರಿಲ್ಲದ ಹಣದ ನಿರ್ವಹಣೆ ಹೇಗೆ ಗೊತ್ತೇ ?
ರುಪಾಯಿ ಅಪಮೌಲ್ಯದ ಹಿಂದೆ ಅಮೆರಿಕದ ಟ್ರಂಪ್ ಸರಕಾರದ ಆರ್ಥಿಕ ನೀತಿಗಳು, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸುತ್ತಿರುವ ರಾಜಕೀಯ ವಿದ್ಯಮಾನಗಳು ಮತ್ತು ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ ನಿರ್ಣಾಯಕ ಹಂತ ತಲುಪದಿರುವುದು ಕಾರಣವೆಂದು ವಿಶ್ಲೇಷಿಸಲಾಗಿದೆ.
ಟ್ರಂಪ್ ಸುಂಕ ಸಮರದಿಂದ ಭಾರತದ ಸರಕುಗಳು ಅಮೆರಿಕ ಗ್ರಾಹಕರಿಗೆ ದುಬಾರಿಯಾಗಲಿವೆ. ಇದರಿಂದಾಗಿ ಬೇಡಿಕೆ ಕುಸಿದು ರ-ದಾರರ ಡಾಲರ್ ವರಮಾನ ಕಡಿಮೆಯಾಗುತ್ತಿದೆ. 2025ರ ಸೆಪ್ಟೆಂ ಬರ್ʼಗೆ ಹೋಲಿಸಿದರೆ ಅಮೆರಿಕಕ್ಕೆ ಭಾರತದ ರಫ್ತು ಕಡಿಮೆಯಾಗಿದೆ.
ಕೆಲವರ ದೃಷ್ಟಿಯಲ್ಲಿ ಅಮೆರಿಕದೊಂದಿಗೆ ಒಪ್ಪದ ಸಾಧ್ಯವಾಗದೆ ಇರುವುದು ರುಪಾಯಿ ಮೌಲ್ಯದ ಕುಸಿತಕ್ಕೆ ಕಾರಣ. ಬಹುತೇಕ ದೇಶಗಳು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಭಾರತಕ್ಕೆ ಮಾತ್ರ ಇದು ಸಾಧ್ಯವಾಗಿಲ್ಲ. ಭಾರತದ ಹಿತಾಸಕ್ತಿಯನ್ನು ಬದಿಗೊತ್ತಿ ಒಪ್ಪಂದ ಮಾಡಿಕೊಳ್ಳು ವುದೂ ಒಳ್ಳೆಯದಲ್ಲ.
ವ್ಯಾಪಾರ ಕೊರತೆಯ ಅಂತರದಲ್ಲಿನ ಹೆಚ್ಚಳ ಮತ್ತು ಅಮೆರಿಕದೊಂದಿಗೆ ಭಾರತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳಿಂದ ಭಾರತೀಯ ರುಪಾಯಿ ಮೌಲ್ಯ ಇಳಿಕೆಯಾಗಿದೆ. ಭಾರತದಿಂದ ಬಂದ ಹೊಸ ಪ್ರಸ್ತಾವನೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿಲ್ಲವೆಂಬ ಹಿನ್ನಲೆಯಲ್ಲಿ ಡಾಲರ್ ಖರೀದಿ ಮುಂದುವರಿದಿದ್ದು ರುಪಾಯಿ ದಾಖಲೆ ಕುಸಿತಕ್ಕೆ ಕಾರಣ.
ಹೊಸ ಒಪ್ಪಂದ ಅಂತಿಮಗೊಳ್ಳುವವರೆಗೆ ಅನಿಶ್ಚಿತ ಸ್ಥಿತಿ ಮುಂದುವರಿಯಬಹುದು. ಆರ್‌ಬಿಐ ಕೂಡಾ ಮಧ್ಯೆ ಪ್ರವೇಶ ಮಾಡುತ್ತಿಲ್ಲ. ವಿದೇಶಿ ಹೂಡಿಕೆಯ ಹೊರಹರಿವು ಹೆಚ್ಚುತ್ತಿದೆ. ಹೀಗಾಗಿ ರುಪಾಯಿ ಇನ್ನಷ್ಟು ಕುಸಿದಿದೆ. ಆರ್‌ಬಿಐ ಇನ್ನು ಮುಂದೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅಥವಾ ಭಾರತ-ಅಮೆರಿಕ ನಡುವಣ ಒಪ್ಪಂದ ಅಂತಿಮಗೊಳ್ಳದಿದ್ದರೆ ರುಪಾಯಿ ಮೌಲ್ಯ ಇನ್ನಷ್ಟು ಕುಸಿಯಬಹುದು. ಭಾರತವು ವಿಶ್ವದಲ್ಲಿಯೇ ತ್ವರಿತ ಗತಿಯ ಬೆಳವಣಿಗೆ ಕಾಣುತ್ತಿರುವ ಪ್ರಮುಖ ದೇಶ ಎಂದು ಐಎಂಎ- ಮತ್ತು ವಿಶ್ವ ಬ್ಯಾಂಕ್ ಹೇಳಿವೆ.
ರುಪಾಯಿ ಮೌಲ್ಯದ ಕುಸಿತವು ರಫ್ತು ವಲಯದ ಸ್ವರ್ಧಾತ್ಮಕತೆಯನ್ನು ಹೆಚ್ಚು ಮಾಡುವ ಸಾಧ್ಯತೆ ಯಿದೆ. ಇದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಪೂರಕ ಪರಿಣಾಮವನ್ನುಂಟು ಮಾಡುತ್ತದೆ. ರುಪಾಯಿ ಬೆಲೆ ಕುಸಿದಾಗ ನಮ್ಮ ರಫ್ತುಗಳು ಅಗ್ಗವಾಗಿ ಅವುಗಳಿಗೆ ಉತ್ತೇಜನ ಸಿಗಲಿದೆ. ಆಮದು ದುಬಾರಿಯಾಗಿ ಅವುಗಳಲ್ಲಿ ಕಡಿತವಾಗಲಿದೆ.
ರುಪಾಯಿ ಮೌಲ್ಯ ಕುಸಿತವು ರಫ್ತಿಗೆ ಅನುಕೂಲವಾಗುತ್ತದೆ. ಅನಿವಾಸಿ ಭಾರತೀಯರು ಇಲ್ಲಿಗೆ ಕಳುಹಿಸುವ ಡಾಲರಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಇಲ್ಲಿ ನಾವು ರುಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ ಮೌಲ್ಯ ಹೆಚ್ಚುತ್ತಿದೆ ಎನ್ನಬಹುದು. ರುಪಾಯಿ ತನ್ನ ಸ್ವಾಭಾವಿಕ ಮಟ್ಟವನ್ನು ಕಂಡು ಕೊಳ್ಳುತ್ತಿದೆ. ಈ ತರ್ಕವನ್ನು ತಳ್ಳಿ ಹಾಕುವಂತಿಲ್ಲ. ರುಪಾಯಿ ಕುಸಿತ ಮಿಶ್ರ ಪರಿಣಾಮವನ್ನು ಹೊಂದಿದೆ.
ರಫ್ತುದಾರರಿಗೆ ಮತ್ತು ಅನಿವಾಸಿ ಭಾರತೀಯರಿಗೆ ಇದು ಲಾಭದಾಯಕ. ವಿದೇಶದಿಂದ ಭಾರತಕ್ಕೆ ಬರುವ ಹಣ ಹೆಚ್ಚಾಗಬಹುದು. ಆದರೆ ಆಮದುದಾರರಿಗೆ ಮತ್ತು ಜನಸಾಮಾನ್ಯರಿಗೆ ಇದು ಹೊರೆ ಯಾಗುತ್ತದೆ. ರುಪಾಯಿ ಬೇಡಿಕೆ ಹೆಚ್ಚಿದರೆ ರುಪಾಯಿಯ ಬೆಲೆಯೂ ಹೆಚ್ಚುತ್ತದೆ.
ಬೇಡಿಕೆ ಇಳಿದರೆ ಮೌಲ್ಯ ಕುಸಿಯುತ್ತದೆ. ಹಿಂದೆ ರುಪಾಯಿ ಮೌಲ್ಯ ಕುಸಿಯುತ್ತಿದ್ದಾಗ ಡಾಲರ್ ಮೌಲ್ಯ ಜಾಗತಿಕವಾಗಿ ಹೆಚ್ಚುತ್ತಿತ್ತು. ಆದರೆ ಈಗ ಯೂರೋ, ಪೌಂಡ್ ಕರೆನ್ಸಿಗಳ ಎದುರು ಡಾಲರ್ ಕುಸಿಯುತ್ತಿದೆ. ಅಲ್ಲದೆ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳ ಕರೆನ್ಸಿಯ ಮೌಲ್ಯ ಹೆಚ್ಚುತ್ತಿದೆ. ಆದರೆ ಭಾರತದ ರುಪಾಯಿ ಮಾತ್ರ ಕುಸಿಯುತ್ತಿದೆ. ಇದು ಆತಂಕಕ್ಕೀಡು ಮಾಡಿದೆ.
ರುಪಾಯಿ ಮೌಲ್ಯವನ್ನು ಮಾರುಕಟ್ಟೆ ತೀರ್ಮಾನಿಸುತ್ತದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ಆರ್‌ಬಿಐ ಕಾಲಕಾಲಕ್ಕೆ ನಿಗಾ ಇಡುತ್ತದೆ. ಅನಿಶ್ಚಿತತೆಯಾಗಿದ್ದರೆ ಮಧ್ಯೆ ಪ್ರವೇಶಿಸುತ್ತದೆ. ಡಾಲರ್-ರುಪಾಯಿ ವಿನಿಮಯ ದರದ ಮೇಲೆ ಪರಿಣಾಮ ಉಂಟು ಮಾಡುವ ಸಂಗತಿಗಳ ಮೇಲೆ ನಿಗಾ ಇಡುತ್ತದೆ.
ಷೇರು ಮಾರುಕಟ್ಟೆಯ ಅನಿಶ್ಚಿತತೆಗಳಿಂದ 2025ರಲ್ಲಿ ಬಂಡವಾಳ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಈ ತನಕ 1.55 ಲಕ್ಷ ಕೋಟಿ ರುಪಾಯಿಯಷ್ಟು ಹಣ ಹಿಂಪಡೆದಿದ್ದಾರೆ. ಅರ್ಥ ವ್ಯವಸ್ಥೆ ಕುರಿತಾಗಿ ಹುಟ್ಟುವ ಅನಿಶ್ಚಿತತೆಗಳಿಂದ ವಿದೇಶಿ ಸಂಸ್ಥೆಗಳು ತಮ್ಮ ಹೂಡಿಕೆಯನ್ನು ಹಿಂಪಡೆಯಲು ಮುಂದಾಗುತ್ತವೆ. ಇದೇ ಸಂದರ್ಭದಲ್ಲಿ ವಿಶ್ವ ವಾಣಿಜ್ಯ ದೃಷ್ಠಿಕೋನವೂ ದುರ್ಬಲ ವಾಗಿ ಗೋಚರಿಸುತ್ತದೆ.
ಇಂಧನವನ್ನು ಭಾರತ ಬಹುತೇಕ ಆಮದು ಮಾಡಿಕೊಳ್ಳುತ್ತಿರುವುದರಿಂದ ಪೆಟ್ರೋಲ್, ಡೀಸೆಲ್ ದುಬಾರಿಯಾಗುತ್ತವೆ. ಇದರಿಂದ ತರಕಾರಿ, ಹಾಲು, ಗೊಬ್ಬರ, ಕೃಷಿ ಉತ್ಪನ್ನಗಳು, ನಿತ್ಯೋಪಯೋಗಿ ವಸ್ತುಗಳು ಇತ್ಯಾದಿ ಸರಕುಗಳ ಬೆಲೆಯೇರಿಕೆಯಾಗುತ್ತದೆ. ಆಮದು ದುಬಾರಿಯಾದಾಗ ಆಮದು ಮಾಡಿಕೊಂಡ ಕಚ್ಚಾವಸ್ತುಗಳ ಬೆಲೆ ಹೆಚ್ಚುತ್ತದೆ. ಇದರ ಪರಿಣಾಮ ಸಿದ್ಧಪಡಿಸಿದ ಸರಕುಗಳ ಬೆಲೆಯ ಮೇಲೆ ಆಗುತ್ತದೆ. ಆಮದು ಮಾಡಿದ ಕಚ್ಚಾವಸ್ತುಗಳ ಬೆಲೆ ಹೆಚ್ಚಾದಾಗ ಉತ್ಪಾದನೆ ವೆಚ್ಚ ಏರಿಕೆಯಾಗುತ್ತದೆ.
ಗ್ರಾಹಕರ ಆದಾಯ ಸ್ಥಗಿತಗೊಂಡಾಗ ಉದ್ದಿಮೆಗಳ ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಬೇಡಿಕೆ ಕುಂಠಿತವಾಗಿ ಉತ್ಪಾದನೆಯಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಇದೇ ಸಂದರ್ಭದಲ್ಲಿ ಅನಿಶ್ಚಿತತೆ ಯಿಂದ ಬಂಡವಾಳದ ಒಳಹರಿವು ಕ್ಷೀಣಿಸುತ್ತದೆ. ರುಪಾಯಿ ಕುಸಿಯಲು ಅಮೆರಿಕವನ್ನು ಸೇಫ್ ಮಾರುಕಟ್ಟೆಯೆಂದು ಪರಿಗಣಿಸಿದ್ದು ಮಾತ್ರವಲ್ಲ.
ಭಾರತಕ್ಕೆ ಶೇ.85ರಷ್ಟು ಕಚ್ಚಾ ತೈಲ ಹೊರಗಿನಿಂದ ಬರುತ್ತದೆ. ಕಚ್ಚಾ ತೈಲ ದರ ಏರಿದಾಗ ಕಂಪನಿ ಗಳಿಗೆ ಖರೀದಿಗೆ ಹೆಚ್ಚು ಡಾಲರ್ ಬೇಕಾಗುತ್ತದೆ. ಆಗ ಸಹಜವಾಗಿ ರುಪಾಯಿ ದುರ್ಬಲವಾಗುತ್ತದೆ. ಯುರೋಪ್-ಚೀನಾ ಬೇಡಿಕೆ ನಿಧಾನಗತಿಯಲ್ಲಿದೆ.
ಟೆಕ್ಸ್‌ಟೈಲ್, ಫಾರ್ಮಾ, ಎಂಜಿನಿಯರಿಂಗ್ ಕ್ಷೇತ್ರಗಳು ಒತ್ತಡದಲ್ಲಿವೆ. ರಫ್ತು ಕಡಿಮೆಯಾಗಿ ಆಮದು ಹೆಚ್ಚಾದಾಗ ‘ಟ್ರೇಡ್ ಡೆಫಿಸಿಟ್’ ಹೆಚ್ಚುತ್ತದೆ. ಆಗ ರುಪಾಯಿ ಮೇಲೆ ಒತ್ತಡ ಹೆಚ್ಚುತ್ತದೆ. ವಿದೇಶಿ ಹೂಡಿಕೆಯ ಹೊರ ಹರಿವು ಹೆಚ್ಚಾಗಿದೆ.
‘ಎಪಿಐ’ಗಳನ್ನು ಅಮೆರಿಕದ ಬಡ್ಡಿದರಗಳು ಸೆಳೆದಿವೆ. ಅವರು ಷೇರು ಮಾರುಕಟ್ಟೆಯಿಂದ ಹೂಡಿಕೆ ಯನ್ನು ತೆಗೆಯುವಾಗ ರುಪಾಯಿ ಒತ್ತಡಕ್ಕೆ ಸಿಲುಕುತ್ತದೆ. ಈ ಸಂದರ್ಭದಲ್ಲಿ ಆರ್‌ಬಿಐ ತನ್ನ ಸಂಗ್ರಹದಲ್ಲಿರುವ ಡಾಲರ್ ಅನ್ನು ಬಳಸಿ ರುಪಾಯಿ ಕುಸಿತವನ್ನು ತಪ್ಪಿಸಬಹುದು. ಆದರೆ ಆರ್‌ಬಿಐ ಇತ್ತೀಚೆಗೆ ಬಡ್ಡಿದರವನ್ನು ಶೇ. 5.25ಕ್ಕೆ ಇಳಿಸುವ ಮೂಲಕ ತಾನು ಬೆಳವಣಿಗೆಗೆ ಆದ್ಯತೆ ನೀಡುತ್ತೇನೆ ಎಂದು ಸ್ವಷ್ಟವಾಗಿ ಹೇಳಿದೆ.
ರುಪಾಯಿ ಮೌಲ್ಯ ಕುಸಿತವು ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆ ತರುವ ಹಂತಕ್ಕೆ ಬರುವವರೆಗೂ ತಾನು ಮಧ್ಯೆ ಪ್ರವೇಶಿಸುವುದಿಲ್ಲ ಎಂಬುದು ಅದರ ನಿಲುವು. ಇದು ಗೌರವಾನ್ವಿತ ನೀತಿಯೇ ಆದರೂ ಇದರ ಅರ್ಥ ರುಪಾಯಿ ಇಳಿಮುಖವಾಗುವುದನ್ನು ನಾವು ಒಪ್ಪಿಕೊಂಡಿದ್ದೇವೆ ಎಂದೇ ಆಗಿದೆ. ಇದೇ ಸಂದರ್ಭದಲ್ಲಿ ಡಾಲರ್ ಮಾರಿ ರುಪಾಯಿ ಕುಸಿತ ತಡೆಯುವುದು ತಾತ್ಕಾಲಿಕ ಪರಿಹಾರವಷ್ಟೇ; ಅನವಶ್ಯಕ ಆಮದುಗಳಿಗೆ ಕಡಿವಾಣ ಹಾಕುವುದು, ರಫ್ತು ಮಾರುಕಟ್ಟೆಯನ್ನು ವೈವಿಧ್ಯಮಯ ಗೊಳಿಸುವುದು ಮತ್ತು ದೇಶೀಯ ಬೇಡಿಕೆಯನ್ನು ಹೆಚ್ಚಿಸುವುದು ದೀರ್ಘಕಾಲೀನ ಪರಿಹಾರ ಗಳಾಗಿವೆ.
ಭಾರತವು ರಫ್ತು ಮಾಡುತ್ತಿದೆ, ಆದರೆ ರುಪಾಯಿಯನ್ನು ಸ್ವಾಭಾವಿಕವಾಗಿ ಬಲಪಡಿಸುವಷ್ಟು ಉನ್ನತ ಮೌಲ್ಯದ ಸರಕುಗಳನ್ನು ನಾವು ಉತ್ಪಾದಿಸುತ್ತಿಲ್ಲ. ತೈಲ ಮತ್ತು ಇಲೆಕ್ಟ್ರಾನಿಕ್ಸ್ ಮೇಲಿನ ಅವಲಂಬನೆಯು ವರ್ಷದಿಂದ ವರ್ಷಕ್ಕೆ ರುಪಾಯಿಯ ಮೇಲೆ ಒತ್ತಡ ಹೇರುತ್ತಲೇ ಇದೆ.
(ಲೇಖಕರು ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರು)