ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Leena Joshi Column: ಹುಚ್ಚರ ಮದುವೆಯಲ್ಲಿ ಉಂಡ ಜಾಣ ರಷ್ಯಾ

ರಷ್ಯಾ, ಜಗತ್ತಿನ ಅತಿದೊಡ್ಡ ತೈಲ ಮತ್ತು ಅನಿಲ ರಫ್ತು ದೇಶಗಳಲ್ಲಿ ಒಂದು, ಇಂಧನದ ಮೇಲೆ ಅವಲಂಬಿತವಾಗಿರುವ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ. 1991ನೇ ವರ್ಷವು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು ನೀಡಿದ ವರ್ಷಗಳಲ್ಲಿ ಒಂದಾಗಿದೆ. ಈ ವರ್ಷದಲ್ಲಿ ‘ಸೋವಿಯತ್ ಒಕ್ಕೂಟದ ವಿಘಟನೆ’ ಸಂಭವಿಸಿತು. ಇದರಿಂದ ರಷ್ಯಾ ಹಾಗೂ ಅದರೊಂದಿಗೆ ಸೇರಿದ ಹಲವಾರು ರಾಷ್ಟ್ರಗಳು ಭಾರಿ ಆರ್ಥಿಕ ಮತ್ತು ರಾಜಕೀಯ ಸಂಕಷ್ಟಗಳನ್ನು ಎದುರಿಸಬೇಕಾಯಿತು.

ಯುದ್ಧಕಾಂಡ

ಲೀನಾ ಜೋಶಿ

ನಮ್ಮಂದು ಗಾದೆಯಿದೆ- ‘ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ’ ಅಂತ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವನ್ನು ನೋಡಿದರೆ, ಈ ಮಾತು ಅತ್ಯಂತ ಸೂಕ್ತವಾಗಿದೆ. ಯುದ್ಧದ ಕಣದಲ್ಲಿಲ್ಲದಿದ್ದರೂ, ಅದರ ನೆರಳಿನಲ್ಲಿ ಲಾಭ ಪಡೆಯುತ್ತಿರುವ ದೇಶಗಳಲ್ಲಿ ‘ರಷ್ಯಾ’ ಪ್ರಮುಖವಾಗಿದೆ. ಈ ಸಂಘರ್ಷವು ಕೇವಲ ಮಧ್ಯಪ್ರಾಚ್ಯದ ಯುದ್ಧ ವಲ್ಲ; ಇದು ಜಾಗತಿಕ ಶಕ್ತಿಗಳ ನಡುವೆ ನಡೆಯುತ್ತಿರುವ ಭೂ-ರಾಜಕೀಯ (Geopolitical) ಚದುರಂಗ.

ಮಧ್ಯಪ್ರಾಚ್ಯ ಎಂದರೆ ಕೇವಲ ಮರಳುಭೂಮಿ ಅಲ್ಲ; ಅದು ಜಗತ್ತಿನ ಇಂಧನದ ಜೀವನಾಡಿ. ಇಲ್ಲಿ ಉಂಟಾಗುವ ಯಾವುದೇ ಉದ್ವಿಗ್ನತೆಗೆ, ಜಗತ್ತಿನ ಆರ್ಥಿಕತೆಯನ್ನು ಕದಲಿಸುವ ಶಕ್ತಿಯಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಉದ್ಭವಿಸಿದ ಸಂಘರ್ಷವು ತೈಲ ಸರಬರಾಜಿನ ಭದ್ರತೆಗೆ ಅಪಾಯ ತಂದಿದೆ, ಸಮುದ್ರ ಮಾರ್ಗಗಳ ಸುರಕ್ಷತೆ ಅಪಾಯದಲ್ಲಿದೆ, ಜಾಗತಿಕ ಮಾರುಕಟ್ಟೆಗಳಲ್ಲಿ ಅದು ಆತಂಕವನ್ನು ಹೆಚ್ಚಿಸಿದೆ.

ತೈಲ ಬೆಲೆ ಗಗನಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ. ಈ ಆತಂಕದ ಪರಿಸ್ಥಿತಿಯಲ್ಲಿ, ಯುದ್ಧದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸದ ರಷ್ಯಾಗೆ ಖಜಾನೆ ತುಂಬುವ ಹೊಸ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ.

ರಷ್ಯಾ, ಜಗತ್ತಿನ ಅತಿದೊಡ್ಡ ತೈಲ ಮತ್ತು ಅನಿಲ ರಫ್ತು ದೇಶಗಳಲ್ಲಿ ಒಂದು, ಇಂಧನದ ಮೇಲೆ ಅವಲಂಬಿತವಾಗಿರುವ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ. 1991ನೇ ವರ್ಷವು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು ನೀಡಿದ ವರ್ಷಗಳಲ್ಲಿ ಒಂದಾಗಿದೆ.

ಈ ವರ್ಷದಲ್ಲಿ ‘ಸೋವಿಯತ್ ಒಕ್ಕೂಟದ ವಿಘಟನೆ’ ಸಂಭವಿಸಿತು. ಇದರಿಂದ ರಷ್ಯಾ ಹಾಗೂ ಅದರೊಂದಿಗೆ ಸೇರಿದ ಹಲವಾರು ರಾಷ್ಟ್ರಗಳು ಭಾರಿ ಆರ್ಥಿಕ ಮತ್ತು ರಾಜಕೀಯ ಸಂಕಷ್ಟಗಳನ್ನು ಎದುರಿಸಬೇಕಾಯಿತು. ವಿಶೇಷವಾಗಿ ಆಹಾರ ಕೊರತೆ ಮತ್ತು ಸಾಲ ಡೀಫಾಲ್ಟ್ (debt default) ಸಮಸ್ಯೆಗಳು ರಷ್ಯಾದ ಜನಜೀವನವನ್ನು ತೀವ್ರವಾಗಿ ಬಾಧಿಸಿದವು.

ಇದನ್ನೂ ಓದಿ: Leena Joshi Column: ಒಪ್ಪಂದ ಮಾಡಿಕೊಂಡಿದ್ದಕ್ಕೆ ಹತ್ಯೆಯಾದ ಈಜಿಪ್ಟ್‌ ಅಧ್ಯಕ್ಷ

ಸೋವಿಯತ್ ಕುಸಿತ: ಸಮಸ್ಯೆಗಳ ಆರಂಭ

1991ರ ಮೊದಲು ರಷ್ಯಾ ಸ್ವತಂತ್ರ ರಾಷ್ಟ್ರ ವಾಗಿರಲಿಲ್ಲ. ಅದು ದೊಡ್ಡ ರಾಷ್ಟ್ರಗಳನ್ನು ಒಳಗೊಂಡಿದ್ದ ‘ಸೋವಿಯತ್ ಒಕ್ಕೂಟ’ದ ಭಾಗವಾಗಿತ್ತು. ಸೋವಿಯತ್ ವ್ಯವಸ್ಥೆ ಸಂಪೂರ್ಣವಾಗಿ ಸರಕಾರದ ನಿಯಂತ್ರಣದಲ್ಲಿದ್ದ ಆರ್ಥಿಕ ವ್ಯವಸ್ಥೆಯಾಗಿತ್ತು. ಕೃಷಿ, ಕೈಗಾರಿಕೆ, ಆಹಾರ ವಿತರಣೆ ಎಲ್ಲವೂ ಸರಕಾರದ ಯೋಜನೆಗಳ ಮೇಲೆ ಅವಲಂಬಿತ ವಾಗಿತ್ತು.

1980ರ ದಶಕದ ಅಂತ್ಯದ ವೇಳೆಗೆ ಈ ವ್ಯವಸ್ಥೆ ದುರ್ಬಲವಾಗತೊಡಗಿತು. ಉತ್ಪಾದನೆ ಕಡಿಮೆಯಾಯಿತು, ಸರಕುಗಳ ಕೊರತೆ ಹೆಚ್ಚಾಯಿತು ಮತ್ತು ಸರಕಾರದ ಆರ್ಥಿಕ ಶಕ್ತಿ ಕುಸಿಯಿತು. 1991ರ ವೇಳೆಗೆ ಆಹಾರ ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತ ಗೊಂಡಿತು.

1990-1991ರ ಅವಧಿಯಲ್ಲಿ ರಷ್ಯಾದ ನಗರಗಳಲ್ಲಿ ಆಹಾರ ಕೊರತೆ ಭಾರಿ ಮಟ್ಟಕ್ಕೆ ಏರಿತು. ಜನರು ಬ್ರೆಡ್, ಹಾಲು, ಮಾಂಸ ಮತ್ತು ಸಕ್ಕರೆ ಮುಂತಾದ ಮೂಲಭೂತ ಆಹಾರ ವಸ್ತು ಗಳನ್ನು ಪಡೆಯಲು ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲಬೇಕಾಗುತ್ತಿತ್ತು. ಈ ಸಮಯದಲ್ಲಿ ಆಹಾರ ಕೊರತೆ ಕೇವಲ ಆರ್ಥಿಕ ಸಮಸ್ಯೆಯಾಗಿರಲಿಲ್ಲ, ಅದು ರಾಜಕೀಯ ಅಸ್ಥಿರತೆಗೂ ಕಾರಣವಾಯಿತು.

ಸಾಲ ಡೀಫಾಲ್ಟ್ ಸಮಸ್ಯೆ‌

1991ರಲ್ಲಿ ಸೋವಿಯತ್ ಒಕ್ಕೂಟ ಕುಸಿದ ನಂತರ ರಷ್ಯಾ ದೊಡ್ಡ ಪ್ರಮಾಣದ ಸಾಲವನ್ನು ಹೊತ್ತಿತ್ತು. ಸೋವಿಯತ್ ಒಕ್ಕೂಟದ ಕಾಲದಲ್ಲಿ ವಿದೇಶಿ ಬ್ಯಾಂಕುಗಳು ಮತ್ತು ದೇಶ ಗಳಿಂದ ದೊಡ್ಡ ಪ್ರಮಾಣದ ಸಾಲ ತೆಗೆದುಕೊಳ್ಳಲಾಗಿತ್ತು. ಆದರೆ ಆರ್ಥಿಕ ಕುಸಿತದಿಂದ ಈ ಸಾಲವನ್ನು ತೀರಿಸುವ ಸಾಮರ್ಥ್ಯ ಕಡಿಮೆಯಾಯಿತು.

ಇದರಿಂದ, ಸರಕಾರದ ಆದಾಯ ಕಡಿಮೆಯಾಯಿತು, ಕರೆನ್ಸಿ ಮೌಲ್ಯ ಕುಸಿತ ಕಂಡಿತು, ಹಣದುಬ್ಬರ (inflation) ಭಾರಿ ಮಟ್ಟಕ್ಕೆ ಏರಿತು. ಒಂದು ಕಾಲದಲ್ಲಿ, ಜಗತ್ತಿನ ಎರಡನೇ ಅತಿ ದೊಡ್ಡ ಶಕ್ತಿಯಾಗಿದ್ದ ರಷ್ಯಾ, ಆರ್ಥಿಕವಾಗಿ ದುರ್ಬಲ ರಾಷ್ಟ್ರವಾಗಿ ಅಧೋಗತಿ ಗಿಳಿದಿತ್ತು. ಈ ಸಂಕಷ್ಟದ ಸಮಯದಲ್ಲಿ ರಷ್ಯಾದ ಅಧ್ಯಕ್ಷರಾಗಿದ್ದವರು ಬೋರಿಸ್ ಯೆಲ್ಸಿನ್.

ಅವರ ಸರಕಾರವು ಹಳೆಯ ಸೋವಿಯತ್ ಆರ್ಥಿಕ ವ್ಯವಸ್ಥೆಯನ್ನು ಬದಲಿಸಿ, ಹೊಸ ಮಾರುಕಟ್ಟೆ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿತು. ಈ ಬದಲಾವಣೆಯನ್ನು ‘ಶಾಕ್ ಥೆರಪಿ’ (Shock Therapy) ಎನ್ನುತ್ತಾರೆ.

Screenshot_2 ಋ

ಶಾಕ್ ಥೆರಪಿ ಎಂದರೇನು?

ಇದು ಆರ್ಥಿಕ ವ್ಯವಸ್ಥೆಯನ್ನು ತ್ವರಿತವಾಗಿ ಬದಲಿಸುವ ವಿಧಾನ. ಬೆಲೆ ನಿಯಂತ್ರಣ ಗಳನ್ನು ತೆಗೆದುಹಾಕುವುದು ಮತ್ತು ಸರಕಾರಿ ಉದ್ಯಮಗಳನ್ನು ಖಾಸಗೀಕರಣ ಮಾಡು ವುದು ಇದರಲ್ಲಿ ಸೇರಿರುತ್ತದೆ.

1990ರ ದಶಕದ ಕೊನೆಯ ಭಾಗದಲ್ಲಿ ಮತ್ತು 2000ರ ದಶಕದ ಆರಂಭದಲ್ಲಿ ರಷ್ಯಾ ನಿಧಾನವಾಗಿ ಪುನರುತ್ಥಾನ ಕಂಡಿತು. ಇದಕ್ಕೆ ಮುಖ್ಯ ಕಾರಣ ‘ಎನರ್ಜಿ ಪವರ್’ (ತೈಲ ಮತ್ತು ಅನಿಲ) ಪಥವನ್ನು ಆಯ್ಕೆ ಮಾಡಿಕೊಂಡಿದ್ದು. ತೈಲ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಏರಿದ ಕಾರಣ ರಷ್ಯಾದ ಆದಾಯ ಹೆಚ್ಚಾಯಿತು.

1991ರಲ್ಲಿ ರಷ್ಯಾ ಎದುರಿಸಿದ ಆಹಾರ ಕೊರತೆ ಮತ್ತು ಸಾಲ ಡೀಫಾಲ್ಟ್ ಸಮಸ್ಯೆಗಳು ಜಗತ್ತಿನ ಇತಿಹಾಸದಲ್ಲಿನ ಅತ್ಯಂತ ಗಂಭೀರ ಆರ್ಥಿಕ ಸಂಕಷ್ಟಗಳಲ್ಲಿ ಒಂದಾಗಿವೆ. ಸೋವಿಯತ್ ಒಕ್ಕೂಟದ ಕುಸಿತ, ದುರ್ಬಲ ಆರ್ಥಿಕ ವ್ಯವಸ್ಥೆ ಮತ್ತು ರಾಜಕೀಯ ಬದಲಾವಣೆಗಳು ಈ ಸಮಸ್ಯೆಗಳನ್ನು ಉಂಟು‌ ಮಾಡಿದವು. ಆದರೆ ಹೊಸ ಆರ್ಥಿಕ ನೀತಿಗಳು, ಅಂತಾರಾಷ್ಟ್ರೀಯ ಸಹಾಯ ಮತ್ತು ನೈಸರ್ಗಿಕ ಸಂಪತ್ತಿನ ಉಪಯೋಗದ ಮೂಲಕ ರಷ್ಯಾ ನಿಧಾನವಾಗಿ ಈ ಸಂಕಷ್ಟದಿಂದ ಹೊರಬಂದಿತು.

ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ, ತೈಲ ಬೆಲೆ ಏರಿಕೆ, ಸರಬರಾಜು ವ್ಯತ್ಯಯ, ಮಾರುಕಟ್ಟೆ ಅನಿಶ್ಚಿತತೆ ಇವೆಲ್ಲವೂ ರಷ್ಯಾಕ್ಕೆ ಆರ್ಥಿಕ ಶಕ್ತಿ ನೀಡುತ್ತಿವೆ. ತೈಲದ ಬೆಲೆ ಏರಿಕೆಯಿಂದ ರಷ್ಯಾದ ಖಜಾನೆಗೆ ನೇರ ಲಾಭ.

ಈಗ ಜಗತ್ತಿನ ಗಮನ ಮಧ್ಯಪ್ರಾಚ್ಯದತ್ತ ನೆಟ್ಟಿದೆ. ಉಕ್ರೇನ್ ಮೇಲಿನ ‘ಫೋಕಸ್’ ಕಡಿಮೆ ಆಗಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಬಳಿಕ, ಅಮೆರಿಕ ತನ್ನ ಗಮನವನ್ನು ಎರಡು ಕಡೆ ಹಂಚಿಕೊಳ್ಳಬೇಕಾಗಿದೆ, ಯುರೋಪ್ ದೇಶಗಳ ಗಮನ ವಿಭಜನೆಯಾಗಿದೆ. ಉಕ್ರೇನ್ ಯುದ್ಧಕ್ಕೆ ಸಿಗುತ್ತಿದ್ದ ಜಾಗತಿಕ ಗಮನ ಕುಗ್ಗುತ್ತಿದೆ. ಇದು ರಷ್ಯಾಗೆ ಯುದ್ಧದ ಮಧ್ಯೆ ವಿಶ್ರಾಂತಿ ನೀಡುತ್ತಿದೆ. ಎದುರಾಳಿಯನ್ನು ಸೋಲಿಸುವುದಕ್ಕಿಂತ, ಅವನ ಗಮನವನ್ನು ಬೇರೆಡೆಗೆ ತಿರುಗಿಸುವುದು ಹೆಚ್ಚು ಪರಿಣಾಮಕಾರಿ ತಂತ್ರ.

ಮಧ್ಯಪ್ರಾಚ್ಯದ ಸಂಘರ್ಷ ದೀರ್ಘಕಾಲ ಮುಂದುವರಿದರೆ, ಅಮೆರಿಕ ತನ್ನ ಶಸ್ತ್ರಾಸ್ತ್ರ ಸಂಗ್ರಹಗಳನ್ನು ಹೆಚ್ಚು ಬಳಸಬೇಕಾಗುತ್ತದೆ, ಯುರೋಪ್ ದೇಶಗಳು ತಮ್ಮ ಸಂಪನ್ಮೂಲ ಗಳನ್ನು ಹಂಚಿಕೊಳ್ಳಬೇಕಾಗುತ್ತದೆ, ಉಕ್ರೇನ್‌ಗೆ ನೀಡುವ ಬೆಂಬಲದ ಪ್ರಮಾಣ ಕುಗ್ಗಬಹುದು. ಈ ಪರಿಸ್ಥಿತಿಯಿಂದ ರಷ್ಯಾಗೆ ಪರೋಕ್ಷ ಲಾಭ.

ಯುದ್ಧದಲ್ಲಿ ಕೆಲವೊಮ್ಮೆ ಎದುರಾಳಿಯನ್ನು ದುರ್ಬಲಗೊಳಿಸುವುದು ನೇರ ದಾಳಿ ಯಿಂದಲ್ಲ, ಅವರ ಸಂಪನ್ಮೂಲಗಳನ್ನು ಹೀರಿಕೊಳ್ಳುವ ಮೂಲಕ.ಯುದ್ಧ ಹೀಗೇ ಮುಂದುವರಿದರೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಕೊರತೆ ಉಂಟಾಗಬಹುದು, ರಾಷ್ಟ್ರ ಗಳು ಪರ್ಯಾಯ ಸರಬರಾಜು ದಾರರನ್ನು ಹುಡುಕುತ್ತವೆ, ಇದು ರಷ್ಯಾ ತನ್ನ ತೈಲವನ್ನು ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸಲು ಸುವರ್ಣಾವಕಾಶ.

ಇದು ಕೇವಲ ತಾತ್ಕಾಲಿಕ ಲಾಭವಲ್ಲ, ಜತೆಗೆ ಭವಿಷ್ಯದ ಮಾರುಕಟ್ಟೆಯ ಮೇಲಿನ ಹಿಡಿತ. ರಷ್ಯಾ ಒಂದು ಬುದ್ಧಿವಂತ ರಾಜಕೀಯದಾಟ ಆಡುತ್ತಿದೆ. ಒಂದು ಕಡೆ ಯುದ್ಧದಿಂದ ಆರ್ಥಿಕ ಲಾಭ ಪಡೆಯುತ್ತಿದೆ, ಮತ್ತೊಂದು ಕಡೆ ತನ್ನನ್ನು ‘ಶಾಂತಿದೂತ’ನಂತೆ ತೋರಿಸಿ ಕೊಳ್ಳುತ್ತಿದೆ.

ಇದು ಜಾಗತಿಕ ವೇದಿಕೆಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ತಂತ್ರ. ರಾಜಕೀಯ ದಲ್ಲಿ ‘ಶಾಂತಿ’ ಎಂಬ ಪದವೇ ಕೆಲವೊಮ್ಮೆ ದೊಡ್ಡ ಶಸಾಸವಾಗುತ್ತದೆ.ಇದು ‘21ನೇ ಶತಮಾನದ ಯುದ್ಧ’. ಈ ಯುದ್ಧದಲ್ಲಿ ಗೆಲ್ಲುವವರು ಹೆಚ್ಚು ಬಲಿಷ್ಠರಾಗಿರುವವರಲ್ಲ, ಹೆಚ್ಚು ಬುದ್ಧಿವಂತರಾಗಿರುವವರು. ಯುದ್ಧದ ಕಣದಲ್ಲಿಲ್ಲದವರೇ ಕೆಲವೊಮ್ಮೆ ದೊಡ್ಡ ವಿಜಯಿಗಳು.

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆ ನೋಡಿದರೆ, ಕೆಲವರು ಯುದ್ಧ ಮಾಡುತ್ತಿದ್ದಾರೆ, ಇನ್ನು ಕೆಲವರು ಯುದ್ಧವನ್ನು ಎದುರಿಸುತ್ತಿದ್ದಾರೆ, ಮತ್ತೆ ಕೆಲವರು ಯುದ್ಧದಿಂದ ಲಾಭ ಪಡೆಯುತ್ತಿದ್ದಾರೆ.

ಭಾರತಕ್ಕೆ ಹೇಗೆ ಲಾಭವಾಯಿತು?

2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಅಮೆರಿಕ ಮತ್ತು ಯುರೋಪ್ ದೇಶಗಳು ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದವು. ರಷ್ಯಾದಿಂದ ತೈಲ ಖರೀದಿಸುವುದನ್ನು ಯುರೋಪ್ ದೇಶಗಳು ಕಡಿಮೆ ಮಾಡಿದ ಕಾರಣ, ರಷ್ಯಾ ತನ್ನ ತೈಲವನ್ನು ಕಡಿಮೆ ದರದಲ್ಲಿ ಇತರ ದೇಶಗಳಿಗೆ ಮಾರಾಟ ಮಾಡಲು ಪ್ರಾರಂಭಿಸಿತು. ಇದೇ ಸಂದರ್ಭದಲ್ಲಿ ಭಾರತ ಮತ್ತು ಚೀನಾ, ಕಡಿಮೆ ದರದ ತೈಲವನ್ನು ಖರೀದಿಸಲು ಮುಂದಾ ದವು. ಈ ಬದಲಾವಣೆ ಜಾಗತಿಕ ತೈಲ ವ್ಯಾಪಾರದ ದಿಕ್ಕನ್ನೇ ಬದಲಿಸಿತು.

ಕಡಿಮೆ ದರದ ರಷ್ಯಾ ತೈಲ

ಉಕ್ರೇನ್ ಯುದ್ಧಕ್ಕೂ ಮುನ್ನ ಭಾರತವು ಮಧ್ಯಪ್ರಾಚ್ಯ ದೇಶಗಳಿಂದ ತೈಲವನ್ನು ಖರೀದಿಸುತ್ತಿತ್ತು. ಆದರೆ ಯುದ್ಧದ ನಂತರ ರಷ್ಯಾ ತೈಲವನ್ನು ಕಡಿಮೆ ದರದಲ್ಲಿ ನೀಡಲು ಪ್ರಾರಂಭಿಸಿತು. ರಷ್ಯಾದ ತೈಲವು ಪ್ರತಿ ಬ್ಯಾರೆಲ್‌ಗೆ (1 ಬ್ಯಾರೆಲ್ = 159 ಲೀಟರ್‌ಗಳು) ಸುಮಾರು 15-20 ಡಾಲರ್ ಕಡಿಮೆ ದರದಲ್ಲಿ ಲಭ್ಯವಾಗುತ್ತಿತ್ತು. ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿಸುವ ಮೂಲಕ ಪ್ರತಿ ವರ್ಷ ಭಾರತಕ್ಕಾದ ಲಾಭ ಸುಮಾರು 20000 ಕೋಟಿ ರು.

ಸಂಸ್ಕರಿಸಿದ ತೈಲ ಮಾರಾಟ

ಯುರೋಪ್ ದೇಶಗಳು ರಷ್ಯಾದ ಕಚ್ಚಾ ತೈಲವನ್ನು ನೇರವಾಗಿ ಖರೀದಿಸಲು ನಿರ್ಬಂಧ ವಿಧಿಸಿದವು. ಆದರೆ ಸಂಸ್ಕರಿಸಿದ (refined) ತೈಲವನ್ನು ಖರೀದಿಸಲು ಅವಕಾಶ ಇತ್ತು.

ಭಾರತದ ರಿಫೈನರಿ ಕಂಪನಿಗಳು ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ಪೆಟ್ರೋಲ್ ಮತ್ತು ಡೀಸೆಲ್ ಆಗಿ ಸಂಸ್ಕರಿಸಿ ಯುರೋಪ್ ಗೆ ಮಾರಾಟ ಮಾಡಿದ್ದವು. ಯುರೋಪ್ ಮತ್ತು ರಷ್ಯಾದ ನಡುವೆ ನಿರ್ಬಂಧ ಏರ್ಪಟ್ಟಿದ್ದರೂ ಭಾರತ ಅದರಿಂದ ಲಾಭ ಪಡೆದುಕೊಂಡಿತು.

ರಷ್ಯಾ ತೈಲ ಲಭ್ಯವಾದ ನಂತರ ಭಾರತದ ಡೀಸೆಲ್ ಮತ್ತು ಪೆಟ್ರೋಲ್ ರಫ್ತುಗಳು ಬಹಳ ಪ್ರಮಾಣದಲ್ಲಿ ಹೆಚ್ಚಿದವು, ವಿಶೇಷವಾಗಿ ಯುರೋಪ್ ದೇಶಗಳಿಗೆ. ಇದು ಭಾರತದ ಉದ್ಯಮಗಳಿಗೆ ಹೆಚ್ಚುವರಿ ಆದಾಯ ನೀಡಿತು ಮತ್ತು ಉದ್ಯೋಗಾವಕಾಶಗಳನ್ನೂ ಹೆಚ್ಚಿಸಿತು. ರಷ್ಯಾ ತೈಲ ಖರೀದಿ ಮತ್ತು ಸಂಸ್ಕರಣೆಯಿಂದ ಖಾಸಗಿ ಕಂಪನಿಗಳು ಹೆಚ್ಚು ಲಾಭ ಪಡೆದವು. ಉಕ್ರೇನ್ ಯುದ್ಧದ ನಂತರ ಭಾರತವು ರಷ್ಯಾದ ಪ್ರಮುಖ ತೈಲ ಖರೀದಿದಾರನಾಯಿತು. ಭಾರತವು ಉಕ್ರೇನ್ ಯುದ್ಧದಲ್ಲಿ ತಟಸ್ಥ ನಿಲುವನ್ನು ತೆಗೆದು ಕೊಂಡಿತು.

ಅಮೆರಿಕ ಮತ್ತು ಯುರೋಪ್ ದೇಶಗಳೊಂದಿಗೆ ಸ್ನೇಹ ಉಳಿಸಿಕೊಂಡು, ಅದೇ ಸಮಯ ದಲ್ಲಿ ರಷ್ಯಾದೊಂದಿಗೆ ವ್ಯಾಪಾರವನ್ನು ಮುಂದುವರಿಸಿತು. ಈ ಸಮತೋಲನ ನೀತಿಯು ಭಾರತಕ್ಕೆ ಆರ್ಥಿಕ ಲಾಭವನ್ನು ತಂದುಕೊಟ್ಟಿತು.ಯುದ್ಧದಲ್ಲಿ ಭಾರತ ನೇರವಾಗಿ ಭಾಗವಹಿಸದಿದ್ದರೂ, ಜಾಗತಿಕ ಮಾರುಕಟ್ಟೆಯ ಬದಲಾವಣೆಗಳಿಂದ ಭಾರತಕ್ಕೆ ಕೆಲವು ಲಾಭಗಳಾದವು.

ಇದು ಭಾರತ ತೆಗೆದುಕೊಂಡ ‘ವ್ಯೂಹಾತ್ಮಕ ನಿರ್ಧಾರ’ಗಳ ಫಲ. ಉಕ್ರೇನ್ ಯುದ್ಧವು ಜಗತ್ತಿಗೆ ದೊಡ್ಡ ಸಂಕಷ್ಟವನ್ನು ಉಂಟುಮಾಡಿದ್ದರೂ, ಕೆಲವು ದೇಶಗಳಿಗೆ ಹೊಸ ಅವಕಾಶಗಳನ್ನು ತಂದಿತು. ಭಾರತದ ಆರ್ಥಿಕ ತಂತ್ರ, ರಾಜಕೀಯ ಸಮತೋಲನ ಮತ್ತು ಜಾಗತಿಕ ವ್ಯಾಪಾರದ ಜಾಣ್ಮೆ ಇದಕ್ಕೆ ಕಾರಣ. ಯುದ್ಧಗಳು ನಡೆಯುತ್ತಲೇ ಇರುತ್ತವೆ. ಆದರೆ ಇತಿಹಾಸ ನೆನಪಿಡುವುದು ಯುದ್ಧದಲ್ಲಿ ಹೋರಾಡಿದವರನ್ನು ಮಾತ್ರವಲ್ಲ, ಯುದ್ಧದ ನೆರಳಿನಲ್ಲಿ ಗೆದ್ದವರನ್ನೂ...

(ಲೇಖಕಿ ಹವ್ಯಾಸಿ ಬರಹಗಾರ್ತಿ)