ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghava Sharma Nidle Column: ರಷ್ಯನ್‌ ಇಂಕ್‌, ವೋಟ್‌ ಚೋರಿ, ಓವೈಸಿ ರಾಜಕೀಯ ಪ್ರಾಬಲ್ಯ

ಕಳೆದ ಸಲ ಗೆದ್ದಿದ್ದ ಎಐಎಂಐಎಂನ ಐವರು ಶಾಸಕರಲ್ಲಿ, ೪ ಮಂದಿ ನಂತರ ಆರ್‌ಜೆಡಿ ಜತೆ ಸೇರಿಕೊಂಡಿದ್ದರಿಂದ, ಒಬ್ಬ ಶಾಸಕ ಮಾತ್ರ ಪಕ್ಷದಲ್ಲಿ ಉಳಿದಿದ್ದರು. 2020ರಲ್ಲಿ ಎನ್‌ಡಿಎ ೧೨, ಮಹಾಘಟಬಂಧನ ೭ ಸೀಟುಗಳನ್ನು ಇಲ್ಲಿ ಗೆದ್ದಿದ್ದವು. ಈ ಸಲ ಎನ್‌ಡಿಎ ನಿರ್ವಹಣೆಯಲ್ಲಿ ಸುಧಾರಣೆ ಕಂಡಿದ್ದರೆ, ‘ಇಂಡಿಯ’ ಒಕ್ಕೂಟ ಮತ್ತಷ್ಟು ಕುಸಿತ ಕಂಡಿದೆ.

ಜನಪಥ

ರಾಘವ ಶರ್ಮ ನಿಡ್ಲೆ

ಒಂದು ಕಾಲಕ್ಕೆ ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳನ್ನು ಅಪಾರವಾಗಿ ನಂಬುತ್ತಿದ್ದ ಮುಸ್ಲಿಂ ಮತವರ್ಗ ಬಿಹಾರದಲ್ಲಿ ಈ ಬಾರಿ ಬೇರೆಡೆಗೆ ವಾಲಿದೆ. ತಮ್ಮ ಆಶಯ-ಆಕಾಂಕ್ಷೆಗಳಿಗೆ ಸ್ಪಂದಿಸುವವರು ಬೇಕೇ ವಿನಾ, ಕೇವಲ ರಾಜಕೀಯಕ್ಕಾಗಿ ಬಳಸಿ ಬಿಸಾಕುವ ಮಂದಿ ಬೇಕಾಗಿಲ್ಲ ಎಂಬ ಕಟುಸಂದೇಶವನ್ನು ಬಿಹಾರದ ಮತದಾರರು ನೀಡಿರುವುದನ್ನು ಇಲ್ಲಿ ಗಮನಿಸಬಹುದು.

ಇದು 1970-80ರ ದಶಕದ ಕಥೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು, ಚುನಾವಣೆಗಳಲ್ಲಿ ರಷ್ಯನ್ ಇಂಕ್ ಹೊಂದಿದ ಮತಪತ್ರಗಳನ್ನು ಬಳಸಿ, ಜನರ ಮತಗಳವು ಮಾಡುತ್ತಿದೆ. ಈ ಮೂಲಕ ಚುನಾವಣೆಗಳನ್ನು ಅಕ್ರಮವಾಗಿ ಗೆಲ್ಲುತ್ತಿದೆ ಎಂಬ ಥಿಯರಿಯೊದು ಜೋರಾಗಿ ಸದ್ದುಮಾಡಿತ್ತು.

ಚುನಾವಣೆಗೆ ಬಳಕೆಯಾದ ಮತಪತ್ರಗಳು ರಾಸಾಯನಿಕವಾಗಿ ಸಂಸ್ಕರಿಸಿದ ವಾಗಿದ್ದವು. ಅದರಲ್ಲಿ, ಅದೃಶ್ಯವಾಗುವ ಶಾಯಿಯಿಂದ ಮುದ್ರೆ ಹಾಕಿಸಲಾಗುತ್ತಿತ್ತು. ಜನರು ಮತ ಹಾಕಿದ 72 ಗಂಟೆ ಗಳ ನಂತರ ಮತದಾರರ ನಿಜವಾದ ಮುದ್ರೆ ಕಾಣಿಸುತ್ತಿರಲಿಲ್ಲ ಮತ್ತು ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷದ ಹಸು ಮತ್ತು ಕರುವಿನ ಚಿಹ್ನೆ ಮೇಲೆ ಶಾಯಿ ಗೋಚರಿಸುತ್ತಿತ್ತು ಎಂಬ ದೂರುಗಳು ರಾಜಕೀಯ ಕಾರಿಡಾರ್‌ಗಳಲ್ಲಿ ಭಾರಿ ಸದ್ದು ಮಾಡಿದ್ದವು.

ಆಗ ಜನಸಂಘ ಸೇರಿದಂತೆ ಬಹುಪಾಲು ಪಕ್ಷಗಳ ನಾಯಕರು ಕಾಂಗ್ರೆಸ್ ವಿರುದ್ಧ ‘ವೋಟ್‌ ಚೋರಿ’ಯ ಗಂಭೀರಾರೋಪ ಮಾಡಿದ್ದರು ಮತ್ತು ಪ್ರಕರಣ ಅಂದು ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿತ್ತು. ರಾಸಾಯನಿಕವಾಗಿ ಸಂಸ್ಕರಿಸಿದ ಈ ಮತಪತ್ರಗಳನ್ನು ರಷ್ಯಾದಲ್ಲಿ ಮುದ್ರಿಸಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂಬ ವಾದಗಳೂ ಬಲವಾಗಿ ಕೇಳಿಬಂದಿದ್ದವು. ಆದರೆ, “ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.

ಚುನಾವಣೆಗಳು ನ್ಯಾಯಯುತವಾಗಿ ನಡೆದಿವೆ" ಎಂದು ಕೇಂದ್ರ ಚುನಾವಣಾ ಆಯೋಗ ಅನೇಕ ಬಾರಿ ಸ್ಪಷ್ಟೀಕರಣವನ್ನೂ ನೀಡಿತ್ತು. ಇದಾಗಿ 40-45 ವರ್ಷಗಳ ನಂತರ ಇಂಥದ್ದೇ ಮಾದರಿಯ ಆರೋಪಗಳು ಮತ್ತೆ ಕೇಳಲಾರಂಭಿಸಿವೆ. ಈಗ ಆರೋಪ ಮಾಡುತ್ತಿರುವವರು ಮಾತ್ರ ಅಂದು ಮತಗಳವಿನ ಆರೋಪ ಹೊತ್ತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೊಮ್ಮಗ ರಾಹುಲ್ ಗಾಂಧಿ.

ಇದನ್ನೂ ಓದಿ: Raghav Sharma Nidle Column: ಯಾರೋ ಗೀಚಿದ ಹಾಳು ಹಣೆಬರಹ

ಅಂದು ಹೇಗೆ ವಿಪಕ್ಷಗಳು ಮಾಡಿದ್ದ ಆರೋಪಗಳನ್ನು ಚುನಾವಣಾ ಆಯೋಗ ಬದಿಗೆ ಸರಿಸಿತ್ತೋ, ಇಂದು ಅದೇ ರೀತಿ ಹಾಲಿ ಚುನಾವಣಾ ಆಯೋಗವೂ ರಾಹುಲ್ ಗಾಂಧಿ ಯವರ ಆರೋಪಗಳನ್ನು ಕಸದಬುಟ್ಟಿಗೆ ಎಸೆದಿದೆ. ಕಾಂಗ್ರೆಸ್ ಪಾಲಿನ ದುರಂತ ಎಂದರೆ, ಮೊನ್ನೆ ನಡೆದ ಬಿಹಾರ ಚುನಾವಣೆಯುದ್ದಕ್ಕೂ ‘ವೋಟ್‌ಚೋರಿ, ವೋಟ್ ಚೋರಿ’ ಎಂದು ಅಬ್ಬರಿಸಿ ಬೊಬ್ಬಿರಿದ ರಾಹುಲ್ ಗಾಂಧಿಯ ವರ ಆರೋಪಗಳನ್ನು ಅಲ್ಲಿನ ಮತದಾರರು ಕೂಡ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಮುಖ್ಯವಾಗಿ, ಒಂದು ಕಾಲಕ್ಕೆ ರಾಜ್ಯಾದ್ಯಂತ ಮನೆ ಮಾತಾಗಿದ್ದ ಪಕ್ಷವೀಗ ಒಂದಂಕಿ ಪಾರ್ಟಿಯಾಗುವ ಮೂಲಕ ಇದ್ದ ಅಲ್ಪ ವಿಶ್ವಾಸವನ್ನೂ ಕಳೆದುಕೊಂಡು, ಹೇಳಹೆಸರಿಲ್ಲ ದಂತೆ ಮಕಾಡೆ ಮಲಗಿದೆ. ದುರ್ಬಲ ನಾಯಕತ್ವ ಹಾಗೂ ದಿಕ್ಕು-ದೆಸೆಗಳಿಲ್ಲದ ಪ್ರಚಾರ ಭಿಯಾನಗಳಿಂದಾಗಿ ಕಾಂಗ್ರೆಸ್ ಭವಿಷ್ಯಕ್ಕೆ ಕತ್ತಲಾವರಿಸಿ ಬಿಟ್ಟಿದೆ.

ಒಂದು ಕಾಲಕ್ಕೆ ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳನ್ನು ಅಪಾರವಾಗಿ ನಂಬುತ್ತಿದ್ದ ಮುಸ್ಲಿಂ ಮತವರ್ಗ ಕೂಡ ಬಿಹಾರದಲ್ಲಿ ಈ ಬಾರಿ ಬೇರೆಡೆಗೆ ವಾಲಿದೆ. ತಮ್ಮ ಆಶಯ- ಆಕಾಂಕ್ಷೆ ಗಳಿಗೆ ಸ್ಪಂದಿಸುವವರು ಬೇಕೇ ವಿನಾ, ಕೇವಲ ರಾಜಕೀಯಕ್ಕಾಗಿ ಬಳಸಿ ಬಿಸಾಕುವ ಮಂದಿ ಬೇಕಾಗಿಲ್ಲ ಎಂಬ ಕಟುಸಂದೇಶವನ್ನು ಬಿಹಾರದ ಮತದಾರರು ನೀಡಿರುವುದನ್ನು ಇಲ್ಲಿ ಗಮನಿಸಬಹುದು.

asaduddin ok

ಬಿಹಾರದ ಸೀಮಾಂಚಲ್ ಪ್ರದೇಶದ ೨೪ ಸ್ಥಾನಗಳಲ್ಲಿ ಬಹುಪಾಲನ್ನು ಎನ್‌ಡಿಎ ಗೆದ್ದು ಕೊಂಡಿದೆ. ಅಧಿಕ ಮುಸ್ಲಿಂ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಸಂಸದ ಅಸಾದು ದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಮತ್ತು ಮಹಾಘಟ ಬಂಧನ್ ಪಕ್ಷಗಳ ಮಧ್ಯೆ ಮತಗಳು ವಿಭಜನೆಯಾಗಿವೆ.

ಅಂದರೆ, ಮುಸ್ಲಿಮರ ಪ್ರಭಾವ ಹಾಗೂ ಮತಗಳು ಅಧಿಕವಾಗಿರುವ ಕ್ಷೇತ್ರಗಳಲ್ಲಿ ಕೂಡ ಕಾಂಗ್ರೆಸ್ ಒಳಗೊಂಡ ಮಹಾಘಟಬಂಧನಕ್ಕೆ ಮುಸ್ಲಿಂ ಮತಗಳನ್ನು ಆಕರ್ಷಿಸಲು ಸಾಧ್ಯ ವಾಗಲಿಲ್ಲ ಹಾಗೂ ಪೂರ್ನಿಯಾ, ಅರಾರಿಯಾ, ಕಟಿಹಾರ್ ಮತ್ತು ಕಿಶನ್‌ಗಂಜ್ ಎಂಬ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿರುವ ಬಿಹಾರದ, ಪಶ್ಚಿಮ ಬಂಗಾಳದೊಂದಿಗೆ ಗಡಿ ಹಂಚಿಕೊಂಡಿರುವ ಸೀಮಾಂಚಲ ಭಾಗದಲ್ಲಿ ಎಐಎಂಐಎಂ ಪ್ರಭಾವಳಿ ಹೆಚ್ಚಾಗಿ, ಆರ್‌ಜೆಡಿ-ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವುದನ್ನು ಈ ಫಲಿತಾಂಶ ಎತ್ತಿತೋರಿಸಿದೆ.

ಸೀಮಾಂಚಲದ ೨೪ ಕ್ಷೇತ್ರಗಳಲ್ಲಿ ಎನ್‌ಡಿಎ ೧೪ ಸ್ಥಾನಗಳನ್ನು ಗೆದ್ದುಕೊಂಡಿದೆ. ಅದರಲ್ಲಿ ಬಿಜೆಪಿ ೭, ಜೆಡಿಯು ೫ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ೨ ಸ್ಥಾನಗಳನ್ನು ತಮ್ಮ ದಾಗಿಸಿಕೊಂಡಿವೆ. ಉಳಿದಂತೆ, ಕಾಂಗ್ರೆಸ್ ೪, ಆರ್‌ಜೆಡಿ ೧ರಲ್ಲಿ ಮಾತ್ರ ಗೆದ್ದಿವೆ. ಎಲ್ಲಕ್ಕಿಂತ ಮುಖ್ಯವಾಗಿ, 2020ರಂತೆ ಈ ಸಲವೂ ಎಐಎಂಐಎಂ ೫ ಸ್ಥಾನಗಳಲ್ಲಿ ವಿಜಯಿಯಾಗಿದೆ.

IndiraGandhi ok

ಕಳೆದ ಸಲ ಗೆದ್ದಿದ್ದ ಎಐಎಂಐಎಂನ ಐವರು ಶಾಸಕರಲ್ಲಿ, ೪ ಮಂದಿ ನಂತರ ಆರ್‌ಜೆಡಿ ಜತೆ ಸೇರಿಕೊಂಡಿದ್ದರಿಂದ, ಒಬ್ಬ ಶಾಸಕ ಮಾತ್ರ ಪಕ್ಷದಲ್ಲಿ ಉಳಿದಿದ್ದರು. 2020ರಲ್ಲಿ ಎನ್‌ಡಿಎ ೧೨, ಮಹಾಘಟಬಂಧನ ೭ ಸೀಟುಗಳನ್ನು ಇಲ್ಲಿ ಗೆದ್ದಿದ್ದವು. ಈ ಸಲ ಎನ್‌ಡಿಎ ನಿರ್ವಹಣೆಯಲ್ಲಿ ಸುಧಾರಣೆ ಕಂಡಿದ್ದರೆ, ‘ಇಂಡಿಯ’ ಒಕ್ಕೂಟ ಮತ್ತಷ್ಟು ಕುಸಿತ ಕಂಡಿದೆ. ‘ಇಂಡಿಯ’ ಒಕ್ಕೂಟದ ಹಿನ್ನಡೆಗೆ ಕಾರಣವಾಗಿರುವ ಮುಸ್ಲಿಂ ಮತಗಳ ವಿಭಜನೆಯಲ್ಲಿನ ಲಾಭದ ಪಾಲು ಎಐಎಂಐಎಂಗೆ ಕೂಡ ಸಿಕ್ಕಿರುವುದು ಗಮನಾರ್ಹ.

ಸೀಮಾಂಚಲದ ಕಿಶನ್‌ಗಂಜ್ ಜಿಲ್ಲೆಯೊಂದರ ಶೇ.67.89ರಷ್ಟು ಮುಸ್ಲಿಮರಿದ್ದರೆ, ಕಟಿಹಾರ್‌ ನಲ್ಲಿ ಶೇ.44.47, ಅರಾರಿಯಾದಲ್ಲಿ ಶೇ.42.95 ಮತ್ತು ಪೂರ್ನಿಯಾದಲ್ಲಿ ಶೇ.38.46ರಷ್ಟು ಮುಸಲ್ಮಾನರಿದ್ದಾರೆ. ಜನ ಸಂಖ್ಯೆಯ ಹಿನ್ನೆಲೆಯಲ್ಲಿ ನೋಡುವುದಾದರೆ, ಈ ಪ್ರದೇಶವು ಮಹಾಘಟಬಂಧನದ ರಾಜಕಾರಣಕ್ಕೆ ಯೋಗ್ಯ ತಾಣವಾಗಿದೆ ಮತ್ತು ಇತಿಹಾಸದಿಂದಲೂ ಕಾಂಗ್ರೆಸ್ ಇಲ್ಲಿ ಧೃಢ ರಾಜಕೀಯ ನೆಲೆಯನ್ನು ಹೊಂದಿತ್ತು.

ಆದರೆ, ಮಹಾಘಟಬಂಧನದ ಮುಸ್ಲಿಂ-ಯಾದವ್ (ಎಂ-ವೈ) ಪ್ರಭಾವಳಿಯೂ ಇಲ್ಲಿ ಕೆಲಸ ಮಾಡಿಲ್ಲ. ಹಿಂದೂ ಮತಗಳ ಕ್ರೋಡೀಕರಣ ಹಾಗೂ ಜಾತಿ ಸಮೀಕರಣದಿಂದಾಗಿ ಸೀಮಾಂಚಲದಲ್ಲಿ ಎನ್‌ಡಿಎ ತನ್ನ ಸಾಧನೆ ಮುಂದುವರಿಸಿರುವುದರ ನಡುವೆ, ಅಸಾದು ದ್ದೀನ್ ಓವೈಸಿಯವರ ಪಕ್ಷವು ತನ್ನ ರಾಜಕೀಯ ನೆಲೆಯನ್ನು ಮರುಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದೆ.

ಓವೈಸಿ ಪಕ್ಷದ ತಂತ್ರಗಾರಿಕೆ ಹಾಗೂ ನಿರ್ವಹಣೆಯನ್ನು ನೋಡಿದಾಗ 2019ರ ಲೋಕಸಭಾ ಚುನಾವಣೆಯ ಘಟನೆಯೊಂದು ನೆನಪಾಗುತ್ತದೆ. ಅಸಾದುದ್ದೀನ್ ಓವೈಸಿ ಅವರು ಕರ್ನಾ ಟಕದ ಬಿಜೆಪಿ ಸಂಸದರೊಬ್ಬರನ್ನು ಭೇಟಿ ಮಾಡಿ, ಉಭಯ ಕುಶಲೋಪರಿ ವಿಚಾರಿಸಿದ್ದರು. ಮಾತುಕತೆ ವೇಳೆ, “ನಿಮ್ಮ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಕಡೆಗೆ ಕ್ರೋಡೀಕರಣ ಗೊಳ್ಳುವುದು ನನಗೆ ಗೊತ್ತಿದೆ. ನನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲೇ? ಸಹಾಯ ಬೇಕಿದ್ದರೆ ಹೇಳಿ" ಎಂದು ಓವೈಸಿ ನೇರವಾಗಿ ಕೇಳಿದ್ದರಂತೆ.

ಅದಕ್ಕುತ್ತರಿಸಿದ್ದ ಬಿಜೆಪಿ ಸಂಸದರು, “ಮುಸ್ಲಿಂ ಮತಗಳ ಕ್ರೋಡೀಕರಣವಾಗುವುದು ನಿಜ. ಹಾಗಂತ, ಅದು ನನ್ನನ್ನು ಸೋಲಿಸುವಷ್ಟರ ಮಟ್ಟಿಗೆ ಕೆಲಸ ಮಾಡದು. ಹಾಗಾಗಿ ಈಗ ನಿಮ್ಮ ಸಹಾಯ ಬೇಡ" ಎಂದು ನಯವಾಗಿ ಹೇಳಿದ್ದರು.

ಅಂದರೆ ಬಿಜೆಪಿಯನ್ನು ಗೆಲ್ಲಿಸುವುದೇ ಓವೈಸಿ ಅವರ ಗುರಿಯಾಗಿತ್ತೇ ಎಂಬ ಪ್ರಶ್ನೆ ಅನೇಕ ರನ್ನು ಕಾಡಬಹುದು. ಆದರೆ, ವಾಸ್ತವದಲ್ಲಿ ಓವೈಸಿ ಗುರಿ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಜತೆ ಕೈಜೋಡಿಸುವ ಮಿತ್ರಪಕ್ಷಗಳನ್ನೂ ಎದುರಿಸಿ, ಅವರೊಂದಿಗಿರುವ ಮುಸ್ಲಿಂ ಮತಗಳನ್ನು ತಮ್ಮ ಪಕ್ಷದೆಡೆ ಸೆಳೆದುಕೊಳ್ಳುವ ತಂತ್ರಗಾರಿಕೆಯನ್ನೇ ಓವೈಸಿ ಅನುಸರಿಸುತ್ತಿದ್ದಾರೆ.

“ಬಿಜೆಪಿಯವರು ಹೇಗೂ ನಿಮ್ಮ ಅಭಿವೃದ್ಧಿಯನ್ನು ಬಯಸುವುದಿಲ್ಲ. ಆದರೆ, ನೀವು ದಶಕ ಗಳ ಕಾಲ ನಂಬಿದ್ದ, ಮತ ಹಾಕಿ ಬೆಂಬಲಿಸಿದ್ದ ಕಾಂಗ್ರೆಸ್ ಪಕ್ಷ ನಿಮಗಾಗಿ ಏನು ಮಾಡಿತು? ಈಗಲೂ ಮುಸಲ್ಮಾನರ ಪರಿಸ್ಥಿತಿ ಹೀಗೆ ಯಾಕೆ? ಮುಸ್ಲಿಮರನ್ನು ತನ್ನ ಲಾಭಕ್ಕಾಗಿ ಬಳಸಿದ ಕಾಂಗ್ರೆಸ್, ಅವರ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡಿತೆ?" ಎಂದು ಪ್ರಶ್ನಿಸುತ್ತಾ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಾರೆ ಓವೈಸಿ.

ಬಿಹಾರದಲ್ಲೂ ಇಂಥದ್ದೇ ಪ್ರಶ್ನೆಗಳನ್ನು ಮುಂದಿಡುತ್ತಾ, ಕಾಂಗ್ರೆಸ್-ಆರ್‌ಜೆಡಿಯ ಸಾಂಪ್ರ ದಾಯಿಕ ಮತಗಳನ್ನು ನಿಧಾನವಾಗಿ ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತಿದ್ದಾರೆ. “ಬಿಜೆಪಿಗೂ ನನ್ನ ಪಕ್ಷಕ್ಕೂ ಯಾವುದೇ ವ್ಯತ್ಯಾಸವಿಲ್ಲ" ಎನ್ನುವ ಓವೈಸಿ, “ಬಿಜೆಪಿಯವರು ಹಿಂದೂಗಳ ರಕ್ಷಣೆ ಬಗ್ಗೆ ಮಾತನಾಡುತ್ತಾರೆ, ನಾನು ಮುಸ್ಲಿಮರ ಹಿತರಕ್ಷಣೆ ಬಗ್ಗೆ ಮಾತನಾಡುತ್ತೇನೆ. ನಾನೇನು ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಪರ ಮಾತನಾಡುವವನೇನಲ್ಲ.

ದೇಶವಿರೋಧಿ ಮನಸ್ಸುಗಳನ್ನು ಟೀಕಿಸುವ ಮತ್ತು ಭಾರತದ ಪರ ಧ್ವನಿ ಎತ್ತುವ ಅಪ್ಪಟ ರಾಷ್ಟ್ರೀಯವಾದಿ ನಾನು" ಎಂದೇ ತಮ್ಮನ್ನು ವ್ಯಾಖ್ಯಾನಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ, ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಅವರಿಗೆ ರಾಜಕೀಯ ಮೀರಿದ ಸ್ನೇಹಿತರಿದ್ದಾರೆ.

ಕೆಲ ದಿನಗಳ ಹಿಂದೆ, ಮಹಾರಾಷ್ಟ್ರದ ಜುಬಿಲಿ ಹಿಲ್ಸ್ ವಿಧಾನಸಭೆ ಕ್ಷೇತ್ರದ ಉಪಚುನಾ ವಣೆಗೆ ಅವರು ಕಾಂಗ್ರೆಸ್ ಅಭ್ಯರ್ಥಿ ನವೀನ್ ಯಾದವ್‌ರನ್ನು ಬೆಂಬಲಿಸಿದ್ದರು ಮತ್ತು ಚುನಾವಣೆ ಗೆದ್ದ ಕೂಡಲೇ ನವೀನ್ ಯಾದವ್ ಮೊದಲು ಭೇಟಿ ಮಾಡಿದ್ದು ಇದೇ ಅಸಾದುದ್ದೀನ್ ಓವೈಸಿಯವರನ್ನೇ. ‌

“ನವೀನ್ ನನ್ನ ಸ್ನೇಹಿತ. ಹೀಗಾಗಿ ನಮ್ಮ ಬೆಂಬಲ. ಹಾಗಂತ ಕಾಂಗ್ರೆಸ್ ಅನ್ನು ನಾನು ಸೈದ್ಧಾಂತಿಕವಾಗಿ ವಿರೋಧಿಸುತ್ತಲೇ ಇರುತ್ತೇನೆ" ಎನ್ನುತ್ತಾರೆ ಓವೈಸಿ. “ಬಿಹಾರದಲ್ಲಿ ‘ಇಂಡಿಯ’ ಒಕ್ಕೂಟದ ಮಿತ್ರಪಕ್ಷವಾಗಿ ನಮ್ಮನ್ನೂ ಸೇರಿಸಿಕೊಳ್ಳಿ" ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಪತ್ರ ಬರೆದಿದ್ದ ಓವೈಸಿ, ಕಾಂಗ್ರೆಸ್ ಅನ್ನು ಹೊರತುಪಡಿಸಿದ ಮೈತ್ರಿಗೆ ಮಾತ್ರ ನನ್ನ ಬೆಂಬಲ ಎಂಬ ಷರತ್ತನ್ನೂ ಹಾಕಿದ್ದರು.

ಆದರೆ, ಕಾಂಗ್ರೆಸ್ ಅನ್ನು ದೂರವಿಡಲು ಆರ್‌ಜೆಡಿ ಮನಸ್ಸು ಮಾಡಲಿಲ್ಲ. ಬಹುಶಃ ಈಗ ಆರ್ ಜೆಡಿಗೆ ತನ್ನ ತಪ್ಪಿನ ಅರಿವಾಗಿರಬಹುದು. ಓವೈಸಿ ಅವರ ಪಕ್ಷವನ್ನು ಕಾಂಗ್ರೆಸ್ ನಾಯಕರು ಬಿಜೆಪಿಯ ‘ಬಿ’ ಟೀಮ್ ಎಂದು ಆರೋಪಿಸುತ್ತಾರೆ.

ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿ, ಅಲ್ಲಿ ಮುಸ್ಲಿಮರ ಮತ ವಿಭಜನೆ ಮಾಡಿ, ಆ ಮೂಲಕ ಬಿಜೆಪಿಗೆ ನೆರವಾಗುತ್ತಾರೆ ಎನ್ನುವುದು ಓವೈಸಿ ಮೇಲಿನ ಸಾಮಾನ್ಯ ಆರೋಪ. ಭಾರತೀಯ ಮುಸ್ಲಿಂ ಸಮಾಜದ ಪ್ರಶ್ನಾತೀತ ನಾಯಕನಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಅಸಾದುದ್ದೀನ್ ಓವೈಸಿ, “ಕಾಂಗ್ರೆಸ್ ಪಕ್ಷದ ಓಲೈಕೆ ಹಾಗೂ ತುಷ್ಟೀಕರಣ ರಾಜಕಾರಣ ದಿಂದಾಗಿಯೇ ಮುಸ್ಲಿಮರು ಹಿಂದುಳಿದಿದ್ದಾರೆ" ಎಂದು ಪ್ರತಿಪಾದಿಸುತ್ತಾ, ತಾವು ಕಾಂಗ್ರೆಸ್‌ ಗೆ ಪರ್ಯಾಯ ಎಂದೇ ಬಿಂಬಿಸುತ್ತಾರೆ.

ಆ ಮೂಲಕ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಮುಸ್ಲಿಂ ಸಮಾಜದಲ್ಲಿ ಸಾಧಿಸಿರುವ ಪ್ರಭಾವ ತಗ್ಗಿಸಲು ಅವರು ಪ್ರಯತ್ನಿಸುತ್ತಿರುತ್ತಾರೆ. ಅದರ ಮುಂದುವರಿದ ಭಾಗಕ್ಕೆ ಈಗ ಬಿಹಾರವೂ ಸಾಕ್ಷಿಯಾಗಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇದರ ಲಾಭಾರ್ಥಿ ಬಿಜೆಪಿ ಕೂಡ ಹೌದು. ಕರ್ನಾಟಕ, ತೆಲಂಗಾಣ, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಹಿಮಾ ಚಲ ಪ್ರದೇಶ, ಹರಿಯಾಣ, ಉತ್ತರಾಖಂಡ, ಅಸ್ಸಾಂ ರಾಜ್ಯಗಳಲ್ಲಿ ಕಾಂಗ್ರೆಸ್ ತಕ್ಕಮಟ್ಟಿಗೆ ಅಸ್ತಿತ್ವ ಉಳಿಸಿಕೊಂಡಿರುವುದು ಬಿಟ್ಟರೆ, ಬೇರೆ ರಾಜ್ಯಗಳಲ್ಲಿ ಅತಿ ಸಣ್ಣ ರಾಜಕೀಯ ಪಕ್ಷವಾಗಿ ಕುಸಿದುಬಿಟ್ಟಿದೆ.

ಈ ರಾಜ್ಯಗಳಲ್ಲಿ ಒಂದು ಕಾಲಕ್ಕೆ ಕಾಂಗ್ರೆಸ್ ಜತೆಗಿದ್ದ ವೋಟ್‌ಬ್ಯಾಂಕ್ ಗಳನ್ನು ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳು ಕಸಿದುಕೊಳ್ಳುತ್ತಿವೆ. ಬಿಹಾರದಲ್ಲಿ ಕಾಂಗ್ರೆಸ್ ಜತೆಗಿದ್ದ ಮುಸಲ್ಮಾನರು 90ರ ದಶಕದ ನಂತರ ಆರ್‌ಜೆಡಿ ಕಡೆಗೆ ವಾಲಿ, ಈಗ ಓವೈಸಿಯವರ ಎಐಎಂಐಎಂ ಕಡೆ ನೋಡುತ್ತಿರುವುದಕ್ಕೆ 2020 ಮತ್ತು 2025ರ ವಿಧಾನಸಭೆ ಚುನಾವಣೆ ಗಳು ಸಾಕ್ಷಿಯಾಗಿವೆ.

ಈ ಹಿನ್ನೆಲೆಯಲ್ಲಿ 2026ರ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಎಐಎಂಐಎಂ ಯಾವ ನಿಲುವು ತಾಳಲಿದೆ ಮತ್ತು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳಿಗೆ ಎಷ್ಟರಮಟ್ಟಿಗೆ ಹಾನಿಮಾಡಲಿದೆ ಎನ್ನುವು ದನ್ನು ಕಾದು ನೋಡಬೇಕು.

2014ರಲ್ಲಿ ‘ಸಂಸತ್ ರತ್ನ’ ಮತ್ತು 2022ರಲ್ಲಿ ‘ಎಕ್ಸಲೆಂಟ್ ಎಂಪಿ’ ಎಂಬ ಗೌರವಕ್ಕೆ ಪಾತ್ರ ರಾಗಿದ್ದ ಅಸಾದುದ್ದೀನ್ ಓವೈಸಿ, ಸಂಸತ್ತಿನಲ್ಲಿ ಮಾತನಾಡಲು ಸಿಕ್ಕ ಅವಕಾಶಗಳನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಸಂವಿಧಾನ ಹಾಗೂ ಕಾನೂನುಗಳನ್ನು ಆಳವಾಗಿ ತಿಳಿದುಕೊಂಡಿರುವ ಓವೈಸಿ, ಲಂಡನ್‌ನ ಪ್ರತಿಷ್ಟಿತ ಲಿಂಕೋಲ್ನ್ಸ್ ಇನ್ ಶಿಕ್ಷಣ ಸಂಸ್ಥೆ ಯಿಂದ ‘ಬ್ಯಾರಿಸ್ಟರ್-ಎಟ್-ಲಾ’ ಪದವಿಯನ್ನೂ ಪಡೆದಿದ್ದಾರೆ.

ಸಂಸತ್ತಿನಲ್ಲಿ ಕಾಣಸಿಗುವ ಕೆಲವೇ ಕೆಲವು ಚಿಂತನಶೀಲ, ಬುದ್ಧಿಜೀವಿ ಸಂಸದರಲ್ಲಿ ಓವೈಸಿ ಕೂಡ ಒಬ್ಬರು ಮತ್ತು ಅಪಾರ ಜ್ಞಾನದ ಕಾರಣದಿಂದಲೇ ಹಿರಿಯ ಸಂಸದರೂ ಅವರನ್ನು ಗೌರವದಿಂದ ಕಾಣುತ್ತಾರೆ. ಆದರೆ, ಓವೈಸಿ ಸೋದರ ಅಕ್ಬರುದ್ದೀನ್ ಓವೈಸಿ ಮಾತ್ರ ಕಟ್ಟರ್ ಪಂಥೀಯ.

ಪ್ರಚೋದನಕಾರಿ ಭಾಷಣವೇ ಅವರ ಬಂಡವಾಳ. ಅಸಾದುದ್ದೀನ್ ಓವೈಸಿ ಮಿತ್ರರಾದ ರಾಜ್ಯ ಬಿಜೆಪಿಯ ಮಾಜಿ ಸಂಸದರೊಬ್ಬರು ಒಮ್ಮೆ ಅವರಲ್ಲಿ ಮಾತನಾಡುತ್ತಾ, “ಅಲ್ಲೇ ನೀವು ನೋಡಿದರೆ ಕಾನೂನು, ಸಂವಿಧಾನ ಎಂದು ಮಾತನಾಡುತ್ತೀರಿ. ಆದರೆ, ನಿಮ್ಮ ಸೋದರ ಯಾಕೆ ಹೀಗೆ?" ಎಂದು ಕೇಳಿದರಂತೆ. ಅದಕ್ಕೆ ಅಸಾದುದ್ದೀನ್ ಓವೈಸಿ, “ನೋಡಿ ಭಯ್ಯಾ, ರಾಜಕಾರಣದಲ್ಲಿ ಕೆಟ್ಟ ಪೊಲೀಸ್, ಒಳ್ಳೆಯ ಪೊಲೀಸ್ (ಬ್ಯಾಡ್ ಕಾಪ್, ಗುಡ್ ಕಾಪ್) ಎಂಬ ಎರಡೂ ಪಾತ್ರಗಳು ಮುಖ್ಯ. ಇದು ನಿಮಗೂ ಗೊತ್ತಲ್ಲವೇ" ಎಂದು ಪಾತ್ರ ವರ್ಣನೆ ಮಾಡಿದರಂತೆ!

(ಲೇಖಕರು ಹಿರಿಯ ಪತ್ರಕರ್ತರು)