Vishweshwar Bhat Column: ಸುರಕ್ಷತೆ ಮತ್ತು ಆರಾಮ ವಿಮಾನ ಪ್ರಯಾಣದ ಓನಾಮ
ಇದು ಸಾಮಾನ್ಯ. ಮಲೇಶಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ ಒಂದು ವರ್ಷದವರೆಗೂ ಆ ವಿಮಾನ ವನ್ನು ಹತ್ತಲು ಜನ ಭಯಪಡುತ್ತಿದ್ದರು. ನಾನು ಮಲೇಶಿಯಾದ ಕೌಲಲಂಪುರದಿಂದ ಲಂಕಾ ವಿಗೆ ಹೋಗುವಾಗ, ಮಲೇಶಿಯನ್ ಏರ್‌ಲೈನ್ಸ್ ವಿಮಾನ ಹತ್ತಬೇಕೆಂಬ ಕಾರಣದಿಂದ ಸ್ನೇಹಿತರೊಬ್ಬರು ನನ್ನೊಂದಿಗೆ ಬರಲಿಲ್ಲ.


ನೂರೆಂಟು ವಿಶ್ವ
vbhat@me.com
ಅದೇನೋ ಭೀತಿ, ಸಣ್ಣ ಅಳುಕು. ವಿಮಾನ ನಿಲ್ದಾಣದ ಹಾದಿಯಲ್ಲಿ ಸಾಗುವಾಗ ನೂರೆಂಟು ಸಂದೇಹ. ಅಹಮದಾಬಾದಿನಲ್ಲಿ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾದ ಬಳಿಕ, ಜನರಲ್ಲಿ ವಿಮಾನ ಪ್ರಯಾಣದ ಬಗ್ಗೆ ಏಕಾಏಕಿ ಆತಂಕ ಶುರುವಾಗಿ ಬಿಟ್ಟಿದೆ. ಅನೇಕರು ವಿಮಾನ ಹತ್ತಲು ಹೆದರುತ್ತಿದ್ದಾರೆ. ಇನ್ನು ಕೆಲವರು ಏರ್ ಇಂಡಿಯಾ ಹತ್ತಲು ಭಯಪಡುತ್ತಿದ್ದಾರೆ.
ಅಂಥವರು ತಿಂಗಳ ಮೊದಲೇ ಮಾಡಿದ ಬುಕಿಂಗ್ ನ್ನು ರದ್ದುಪಡಿಸುತ್ತಿದ್ದಾರೆ. ಒಂದು ವಿಮಾನ ಬಿದ್ದ ಮಾತ್ರಕ್ಕೆ ಅಂಥ ನಿರ್ಧಾರ ತೆಗೆದುಕೊಳ್ಳಬೇಕಿಲ್ಲ ಎಂದರೂ ಕೇಳುತ್ತಿಲ್ಲ. ಇನ್ನು ಕೆಲವರು ಬೋಯಿಂಗ್ ಡ್ರೀಮ್ ಲೈನರ್ ವಿಮಾನವನ್ನು ಕಂಡರೆ ‘ಹಾರಾಡುವ ಶವಪೆಟ್ಟಿಗೆ’ ಕಂಡವರಂತೆ ಭಯಭೀತರಾಗುತ್ತಿದ್ದಾರೆ.
ಅಂತೂ ವಿಮಾನ ಪ್ರಯಾಣದ ಬಗ್ಗೆ ಎಡೆ ಮಡುಗಟ್ಟಿದ, ಅವ್ಯಕ್ತ ಆತಂಕ. ಇದು ಸಾಮಾನ್ಯ. ಮಲೇಶಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ ಒಂದು ವರ್ಷದವರೆಗೂ ಆ ವಿಮಾನ ವನ್ನು ಹತ್ತಲು ಜನ ಭಯಪಡುತ್ತಿದ್ದರು. ನಾನು ಮಲೇಶಿಯಾದ ಕೌಲಲಂಪುರದಿಂದ ಲಂಕಾವಿಗೆ ಹೋಗುವಾಗ, ಮಲೇಶಿಯನ್ ಏರ್‌ಲೈನ್ಸ್ ವಿಮಾನ ಹತ್ತಬೇಕೆಂಬ ಕಾರಣದಿಂದ ಸ್ನೇಹಿತರೊಬ್ಬರು ನನ್ನೊಂದಿಗೆ ಬರಲಿಲ್ಲ.
ಇದನ್ನೂ ಓದಿ: Vishweshwar Bhat Column: ದುಬೈ ಎಂಬ ವೈಶಿಷ್ಟ್ಯಗಳ ಮೂಟೆ
ಇಂದಿಗೂ ಅವರು ಆ ಏರ್‌ಲೈನ್ಸ್ ಅಂದ್ರೆ ಭಯ ಬೀಳುತ್ತಾರೆ. ಮೊನ್ನೆ ಏರ್ ಇಂಡಿಯಾ ವಿಮಾನ ಬಿದ್ದ ನಂತರ ಆ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವೇರಲು ಬಹಳ ಜನ ಹೆದರುತ್ತಿದ್ದಾರೆ. ಶೇ.ಅರವತ್ತರಷ್ಟು ಬುಕಿಂಗ್ಸ್ ರದ್ದಾಗಿವೆಯಂತೆ. ಈ ಮಧ್ಯೆ ಒಂದಾದ ನಂತರ ಒಂದರಂತೆ ಹತ್ತಕ್ಕೂ ಹೆಚ್ಚು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬಂದು ಮತ್ತಷ್ಟು ಗಾಬರಿ ಹುಟ್ಟುವಂತಾಗಿದೆ.
ಬಸ್ಸು ಕಂದಕಕ್ಕೆ ಬಿದ್ದರೆ, ಯಾರೂ ಬಸ್ ಹತ್ತದೇ ಇರುವುದಿಲ್ಲ. ರೈಲು ದುರಂತವಾದರೆ, ರೈಲಿನಲ್ಲಿ ಹೋಗಲು ಭಯಪಡುವುದಿಲ್ಲ. ಹಾಗೆ ಕಾರು ಅಪಘಾತ ಸುದ್ದಿ ಓದಿದವರು ಆರಾಮಾಗಿ ಕಾರು ಓಡಿಸಿಕೊಂಡು ಹೋಗುತ್ತಾರೆ. ಆದರೆ ಈ ಮಾತು ವಿಮಾನ ದುರಂತಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಯಾವ ವಿಮಾನಯಾನ ಸಂಸ್ಥೆಯೂ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ ಅಥವಾ ರಾಜಿ ಮಾಡಿಕೊಳ್ಳುವುದಿಲ್ಲ.
ಸುರಕ್ಷತೆ ವಿಷಯದಲ್ಲಿ ಕಡೆಗಣನೆ ಮಾಡಿದರೆ ಅದಕ್ಕೆ ಎಂಥ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಯಾವ ಏರ್‌ಲೈನ್ಸ್ ಗೂ ಉಪದೇಶ ಹೇಳಬೇಕಿಲ್ಲ. ಅದಕ್ಕಿಂತ ಹೆಚ್ಚಾಗಿ, ಸುರಕ್ಷತೆ ವಿಷಯದಲ್ಲಿ ಪಾಲಿಸಬೇಕಾದ ನಿಯಮಗಳ ಮೇಲ್ವಿಚಾರಣೆ ಮಾಡಲು ಸಾಕಷ್ಟು ಸಂಸ್ಥೆಗಳಿವೆ, ಹತ್ತಾರು ಕಣ್ಗಾವಲುಗಳಿವೆ. ಅವು ಕಾಲಕಾಲಕ್ಕೆ ಏರ್‌ಲೈನ್ಸ್ ಸಂಸ್ಥೆಗಳನ್ನು ಎಚ್ಚರಿಸುತ್ತಲೇ ಇರುತ್ತವೆ.
ವಿಮಾನ ತಯಾರಿಕಾ ಸಂಸ್ಥೆಗಳೂ ಸುರಕ್ಷತೆ ನಿರ್ವಹಣೆ ವಿಷಯದಲ್ಲಿ ಒಂದು ಕಣ್ಣಿಟ್ಟಿರುತ್ತವೆ. ಒಂದು ಸಣ್ಣ ಲೋಪ ಕಂಡು ಬಂದರೂ ಅದು ಅಂತಾರಾಷ್ಟ್ರೀಯ ಸುದ್ದಿಯಾಗುತ್ತದೆ ಎಂಬುದು ಏರ್‌ಲೈನ್ಸ್ ಸಂಸ್ಥೆಗಳಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಅಂಥ ಸಣ್ಣ-ಪುಟ್ಟ ಘಟನೆಗಳಾದಾಗ ಜನರ ಪ್ರತಿಕ್ರಿಯೆ ಉಗ್ರವಾಗಿರುತ್ತವೆ. ಇದರಿಂದ ಸ್ವಾಭಾವಿಕವಾಗಿ ಪ್ರಯಾಣಿಕರು ಗಾಬರಿಯಿಂದ ಕಲ್ಲವಿಲರಾಗುತ್ತಾರೆ.
ಹೀಗಾಗಿ ಎಲ್ಲ ಏರ್ ಲೈನ್ಸ ಗಳೂ ಸುರಕ್ಷತೆ, ನಿರ್ವಹಣೆ, ಭದ್ರತೆ ವಿಷಯದಲ್ಲಿ ನಿರ್ದಿಷ್ಟ ಮಾನ ದಂಡಗಳಿಗೆ ಬದ್ಧವಾಗಿರುತ್ತವೆ. ಈ ವಿಷಯದಲ್ಲಿ ಯಾರೂ ಉಪೇಕ್ಷೆ ಮಾಡುವುದಿಲ್ಲ. ಎಲ್ಲ ಸಲ ಅಪಘಾತಕ್ಕೆ ನಾವೊಂದೇ ಕಾರಣರಾಗಿರುವುದಿಲ್ಲ. ಬೇರೆಯವರ ಅಜಾಗರೂಕತೆಯೂ ದುರಂತಕ್ಕೆ ಕಾರಣವಾಗಬಹುದು. ಮೂವತ್ತು ವರ್ಷಗಳ ಸೇವೆಯಲ್ಲಿ ಒಂದೂ ಅಪಘಾತ ಮಾಡದಿರುವುದಕ್ಕೆ ಪ್ರಶಸ್ತಿ ಪಡೆದ ಚಾಲಕ, ಆ ದಿನ ಮನೆಗೆ ಮರಳುವಾಗ ಅಪಘಾತ ಮಾಡಬಹುದು. ಇಲ್ಲಿ ಅನುಭವ ವೊಂದೇ ಲೆಕ್ಕಕ್ಕೆ ಬರುವುದಿಲ್ಲ.
ಇಷ್ಟಾಗಿಯೂ ಹೇಳುತ್ತೇನೆ, ವಿಮಾನಯಾನದಷ್ಟು ಸುರಕ್ಷಿತವಾದುದು ಯಾವುದೂ ಇಲ್ಲ. ಒಂದು ವಿಮಾನ ಬಿದ್ದ ಮಾತ್ರಕ್ಕೆ ನಮ್ಮ ಅಭಿಪ್ರಾಯವನ್ನೇ ಬದಲಿಸಿಕೊಳ್ಳಬೇಕಿಲ್ಲ. ಈ ಮಾತಿಗೆ ಪುಷ್ಟಿ ನೀಡಬೇಕೆಂದರೆ ನಿಮಗೆ ಒಂದಿಷ್ಟು ವಿಷಯ, ಮಾಹಿತಿ ನೀಡಬೇಕು.
2023ನೇ ವರ್ಷವು ವಿಮಾನ ಪ್ರಯಾಣದಲ್ಲಿ ದಾಖಲೆ ಮಾಡಿದ ವರ್ಷ. ಆ ವರ್ಷ ಅತಿ ಹೆಚ್ಚು ಜನ ವಿಮಾನ ಪಯಣ ಮಾಡಿದರು. ಅದೊಂದೇ ವರ್ಷ ಜಗತ್ತಿನೆಡೆ 37 ದಶಲಕ್ಷ ವಿಮಾನಗಳು ಟೇಕಾ- ಮತ್ತು ಲ್ಯಾಂಡ್ ಆದವು. ಗಮನಾರ್ಹ ಸಂಗತಿ ಅಂದ್ರೆ ಇದು ಅತ್ಯಂತ ಸುರಕ್ಷಿತ ವರ್ಷವೂ ಆಗಿತ್ತು. ನೇಪಾಳದಲ್ಲಿ ಕೇವಲ ಒಂದು ಪ್ರೊಪೆಲ್ಲರ್ ಜೆಟ್ ಅಪಘಾತಕ್ಕೀಡಾಗಿ 72 ಜನರು ಸಾವನ್ನಪ್ಪಿದ್ದನ್ನು ಹೊರತುಪಡಿಸಿದರೆ, ಆ ವರ್ಷ ಯಾವುದೇ ಮಾರಕ ಅಪಘಾತಗಳು ಸಂಭವಿಸಲಿಲ್ಲ.
ಇದನ್ನು ಗಮನಿಸಿದರೆ, ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಕರು ಸಾಯುವ ಸಾಧ್ಯತೆ ಸರಿಸುಮಾರು 13.7 ದಶಲಕ್ಷಕ್ಕೆ ಒಂದು! ಇದು ಹೆಚ್ಚು-ಕಮ್ಮಿ ನಗಣ್ಯ ಅಂತಾನೇ ಹೇಳಬೇಕು. ರಸ್ತೆ ಅಪಘಾತಕ್ಕೆ ಹೋಲಿಸಿದರೂ, ಇದು ನಗಣ್ಯವೇ. ರಸ್ತೆಗಳಲ್ಲಿ ಪ್ರತಿ ಐದು ಸಾವಿರ ಪ್ರಯಾಣದಲ್ಲಿ ಒಂದು ಅಪಘಾತವಾಗುತ್ತದೆ. ಅಂದರೆ ಪ್ರತಿದಿನದಂತೆ 1,03,239 ವರ್ಷ ವಿಮಾನದಲ್ಲಿ ಪ್ರಯಾಣಿಸಿದರೆ ಒಂದು ಅಪಘಾತವಾಗಬಹುದು.
ಆದರೆ ರಸ್ತೆಗಳಲ್ಲಿ ಸೀಟ್ ಬೆಲ್ಟ್ ಕಟ್ಟಿಕೊಳ್ಳದೇ, ರಸ್ತೆ ನಿಯಮ ಪಾಲಿಸದೇ, ಬೇರೆಯವರನ್ನು ಸಾಯಿ ಸಲು ಲೈಸೆನ್ಸ್ ಪಡೆದವರಂತೆ ಹುಚ್ಚರಂತೆ ವಾಹನ ಓಡಿಸುವವರನ್ನು ನಿತ್ಯವೂ ನೋಡ ಬಹುದು. ಇಂದು ವಾಣಿಜ್ಯ ವಿಮಾನ ಪ್ರಯಾಣವು ನಿರ್ವಿವಾದವಾಗಿ ಸುರಕ್ಷಿತವಾಗಿದೆ. ಐವತ್ತೈದು ವರ್ಷಗಳ ಹಿಂದಕ್ಕೆ ಹೋಗಿ ವಿಮಾನ ಪ್ರಯಾಣವನ್ನು ನೋಡೋಣ.
1970ರಲ್ಲಿ ಬೋಯಿಂಗ್ 747 ತನ್ನ ಸೇವೆಯನ್ನು ಪ್ರಾರಂಭಿಸಿತು. ಅದು ವೈಡ್‌ಬಾಡಿ ಪ್ರಯಾಣದ ಇನ್ನೂ ಹೆಚ್ಚು ಐಷಾರಾಮಿ ಯುಗಕ್ಕೆ ನಾಂದಿ ಹಾಡಿತು. ಕೇವಲ 9.5 ದಶಲಕ್ಷ ವಿಮಾನಗಳಲ್ಲಿ, 78 ಮಾರಕ ಅಪಘಾತಗಳು ಸಂಭವಿಸಿದವು. ಆ ವರ್ಷ 1475 ಪ್ರಯಾಣಿಕರು ಸತ್ತರು. ಅಂದರೆ ಪ್ರತಿ 122000 ಪ್ರಯಾಣದಲ್ಲಿ ಒಂದು ಸಾವು ಸಂಭವಿಸಿತ್ತು. ಇದು ಇಂದಿನ ರಸ್ತೆ ಚಾಲನೆಗಿಂತ ಎಷ್ಟೋ ಪಾಲು ಉತ್ತಮವಾಗಿದೆ. ಆ ವರ್ಷ 78 ಅಪಹರಣ (ಹೈಜಾಕ್)ಗಳು ಮತ್ತು ಆ ಘಟನೆಗಳಿಂದ ಏಳು ಸಾವುಗಳು ಸಂಭವಿಸಿದ್ದವು. ಆ ದಿನಗಳಲ್ಲಿ ವಿಮಾನ ಅಪಹರಣಗಳು ಸಾಮಾನ್ಯವಾಗಿದ್ದವು.
ಇಂದು ವಿಮಾನಯಾನ ತಂತ್ರಜ್ಞಾನ ಊಹೆಗೂ ಮೀರಿದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸಿದೆ. ಸುರಕ್ಷತೆ ಮತ್ತು ಭದ್ರತೆ ಜತೆಗೆ ಆರಾಮ (Comfort)ಕ್ಕೆ ಹೆಚ್ಚಿನ ಮಹತ್ವ ನೀಡಲಾಗು ತ್ತಿದೆ. ಒಂದು ದಿನದಲ್ಲಿ ಜಗತ್ತಿನ ಯಾವ ದೇಶವನ್ನಾದರೂ ತಲುಪುವುದು ಸಾಧ್ಯವಾಗಿದೆ. ವಿಮಾನ ಪ್ರಯಾಣಿಕರಿಗೆ ಸಮಯ ಅಂದ್ರೆ ಆಸ್ತಿ. ಆಧುನಿಕ ಜೆಟ್‌ಗಳು ಜಗತ್ತಿನಾದ್ಯಂತ ಹೆಚ್ಚು ಪರಿಣಾಮ ಕಾರಿಯಾಗಿ ಸಂಚರಿಸುತ್ತಿವೆ. ಇಂದು ವಿಶ್ವದ ಅತಿ ದೀರ್ಘ ತಡೆರಹಿತ ಹಾರಾಟವೆಂದರೆ ಸಿಂಗಾಪುರ ದಿಂದ ನ್ಯೂಯಾರ್ಕ್‌ಗೆ (JFK) ವಿಶೇಷವಾಗಿ ವಿನ್ಯಾಸಗೊಳಿಸಲಾದ ಮತ್ತು ಶಾಂತ ವಾದ ಏರ್ ಬಸ್ A350-900ULR ನಲ್ಲಿ 9537 ಮೈಲುಗಳಷ್ಟು ದೂರದ ಬೆರಗುಗೊಳಿಸುವ ಹಾರಾಟ. 1977ರಲ್ಲಿ ಸಿಂಗಾಪುರ್ ಏರ್‌ಲೈನ್ಸ್ ಮೊದಲು ಅಮೆರಿಕಕ್ಕೆ ಹಾರಲು ಆರಂಭಿಸಿದಾಗ, ಸ್ಯಾನ್ ಫ್ರಾನ್ಸಿಸ್ಕೋ ತಲುಪುವ ಮೊದಲು ಮತ್ತು ನ್ಯೂಯಾರ್ಕ್ ನಗರಕ್ಕೆ ಹಾಂಗ್‌ಕಾಂಗ್, ಗುವಾಮ್ ಮತ್ತು ಹೊನೊಲುಲು ಮೂಲಕ ಹಾರಬೇಕಾಗಿತ್ತು.
ಕೆಲವು ವಿಮಾನಗಳಲ್ಲಿನ ಬಿಜಿನೆಸ್ ಮತ್ತು ಫಸ್ಟ್ ಕ್ಲಾಸ್, ಮೂವತ್ತೆಂಟು ಸಾವಿರ ಅಡಿ ಎತ್ತರದಲ್ಲಿ ಪಂಚತಾರಾ ಹೋಟೆಲಿಗಿಂತ ಉತ್ತಮ ಸೌಲಭ್ಯ ಮತ್ತು ಆಹ್ಲಾದಕರ ವ್ಯವಸ್ಥೆಯನ್ನು ನೀಡುವು ದನ್ನು ಊಹಿಸಲೂ ಸಾಧ್ಯವಿಲ್ಲ. ನಿಮ್ಮ ಆಫೀಸಿನಲ್ಲಿ, ಮನೆಯಲ್ಲಿ ಇರುವುದಕ್ಕಿಂತ comfort ಆಗಿ ವಿಮಾನದಲ್ಲಿ ಇರಬಹುದು. ಈಗಿನ ವಿಮಾನಗಳಲ್ಲಿ ವೈ-ಫೈ ಸೌಲಭ್ಯ ವಿರುವುದರಿಂದ, ನೀವು ವಿಮಾನದಲ್ಲಿರಲಿ, ಆಫೀಸಿನಲ್ಲಿರಲಿ, ಹೆಚ್ಚು ವ್ಯತ್ಯಾಸವಿಲ್ಲ. ಆಫೀಸಿನಲ್ಲಿ ಮಾಡುವ ಎಲ್ಲ ಕೆಲಸ ಗಳನ್ನು, ವಿಮಾನದಲ್ಲೂ ಮಾಡಬಹುದು. ಮೊನ್ನೆ ನಾನು ಫಿಲಿಫೈನ್ಸ್‌ನ ರಾಜಧಾನಿ ಮನಿಲಾ ದಿಂದ ಸಿಂಗಾಪುರ ಮಾರ್ಗವಾಗಿ ಬೆಂಗಳೂರಿಗೆ ಬರುವಾಗ, ಭಾನುವಾರದ ನನ್ನ ಎರಡು ಅಂಕಣ (ಪತ್ರಿಕೆಯಲ್ಲಿ ಇಡೀ ಪುಟಕ್ಕಾಗುವಷ್ಟು)ಗಳನ್ನು ವಿಮಾನದಲ್ಲಿಯೇ ಬರೆದು, ಬೆಂಗಳೂರಿ ನಲ್ಲಿ ಲ್ಯಾಂಡ್ ಆಗುವ ಮುನ್ನವೇ, ಡೆಡ್ ಲೈನ್ ಒಳಗೆ ಆಫೀಸಿಗೆ ಕಳಿಸಿದ್ದೆ.
ಇಂದು ವಿಮಾನಗಳು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿವೆ ಮಾತ್ರವಲ್ಲದೆ, ಅವು ‘ಹಳೆಯ ದಿನಗಳಿಗಿಂತ’ ಉತ್ತಮ ಪ್ರಯಾಣ ಅನುಭವ ಗಳನ್ನು ಒದಗಿಸುತ್ತವೆ. ಇಂದಿನ ವಿಮಾನ ಗಳು ಹೆಚ್ಚು ನಿಶ್ಯಬ್ದವಾಗಿವೆ (ಇದು ಸ್ವತಃ ಆರೋಗ್ಯಕರವಾಗಿದೆ. ಏಕೆಂದರೆ ಹೆಚ್ಚಿನ ಅಧ್ಯಯನಗಳು ಅತಿಯಾದ ಶಬ್ದವನ್ನು ಆರೋಗ್ಯಕ್ಕೆ ಅಪಾಯಕಾರಿ ಅಂಶವೆಂದು ಸೂಚಿಸುತ್ತವೆ).
ಹೆಚ್ಚಿನ ಅಂತರಖಂಡ ಜೆಟ್ ಗಳು ಈಗ ಹಾಸಿಗೆಗಳನ್ನು ಹೊಂದಿವೆ. ಕೆಲವು ವಿಮಾನಗಳು 19 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಹಾರಿದರೂ, ನಿರಾತಂಕವಾಗಿ, ಆರಾಮವಾಗಿ ಪಯಣದ ಸುಖವನ್ನು ಅನುಭವಿಸಬಹುದು.
ಆಧುನಿಕ ಬಿಜಿನೆಸ್ ಮತ್ತು ಪ್ರಥಮ ದರ್ಜೆಯ ಸೂಟ್ ಗಳಲ್ಲಿರುವ ರೆಕ್ಲೈನರ್ ಗಳು ಈಗ ಗರಿಷ್ಠ ವಿಶ್ರಾಂತಿ ಸುಖವನ್ನು ನೀಡಬಲ್ಲವು. ಪ್ರಥಮ ದರ್ಜೆ ಪ್ರಯಾಣಿಕರು ಗೌಪ್ಯ ಕೋಣೆ, ವೇಗದ ವೈ-ಫೈ ಮತ್ತು ಲೆಕ್ಕವಿಲ್ಲದಷ್ಟು ಗಂಟೆಗಳ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಫಸ್ಟ್ ಕ್ಲಾಸ್ ಪ್ರಯಾಣಿಕರಾದರೆ, ಇಪ್ಪತ್ತು ನಿಮಿಷಗಳ ಕಾಲ ವಿಮಾನದಲ್ಲಿಯೇ ಸ್ನಾನ (ಶರ್ವ)ವನ್ನೂ ಮಾಡ ಬಹುದು.
ಕೆಲವು ಆಧುನಿಕ ಜೆಟ್‌ಗಳು ಆನ-ಬೋರ್ಡ್ ಬಾರ್‌ಗಳನ್ನು ಸಹ ಹೊಂದಿವೆ. ಇಂದಿನ ಎಕಾನಮಿ ಕ್ಲಾಸ್ ಅನುಭವವು ಕಡಿಮೆ ಆಕರ್ಷಕವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಆದರೆ 1970 ರ ಎಕಾನಮಿ ಕ್ಲಾಸ್ ಅನ್ನು ಇಂದಿನ ಬೆಲೆಗೆ ಹೋಲಿಸಲಾಗುವುದಿಲ್ಲ. ಏಕೆಂದರೆ ಅಂದಿನ ಎಕಾನಮಿ ಕ್ಲಾಸ್ ಬೆಲೆಯು ಇಂದಿನ ಮೊದಲ ದರ್ಜೆಯಷ್ಟಿತ್ತು. ಪ್ರಸ್ತುತ ಪ್ರಯಾಣದ ಆಯ್ಕೆಗಳಲ್ಲಿ ಬೆಲೆ ನಿಗದಿಯೂ ಒಂದು ಪ್ರಮುಖ ಅಂಶ. ಆ ದಿನಗಳಲ್ಲಿ ಸರಾಸರಿಯಾಗಿ, ರೌಂಡ್ -ಟ್ರಿಪ್ ದೇಶೀಯ ವಿಮಾನಯಾನಕ್ಕೆ ಸರಾಸರಿ ವಾರ್ಷಿಕ ಸಂಬಳದ ಶೇ.ಐದರಷ್ಟು ವೆಚ್ಚವಾಗುತ್ತಿತ್ತು.
ಆದರೆ ಈಗ ಅದು ಶೇ.ಒಂದರ ಅರ್ಧದಷ್ಟು. ಇಂದು ಶೇ. 90ರಷ್ಟು ಅಮೆರಿಕನ್ನರು ವಿಮಾನ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. 1971ರಲ್ಲಿ, ಅದು ಕೇವಲ ಶೇ. 49 ರಷ್ಟು ಆಗಿತ್ತು. ನಗದು ರೂಪದಲ್ಲಿ ಪಾವತಿಸುವಾಗ ವಿಮಾನ್ ಟಿಕೆಟ್ ಕಾಯ್ದಿರಿಸುವುದು ಹೆಚ್ಚು ಕೈಗೆಟುಕುತ್ತದೆ. ಹಣದುಬ್ಬರಕ್ಕೆ ಸರಿ ಹೊಂದಿಸಿದಾಗ, 2024ರಲ್ಲಿ ಅಮೆರಿಕದ ದೇಶೀಯ ವಿಮಾನ ಪ್ರಯಾಣದ ವೆಚ್ಚವು 2000ದಿಂದ ಶೇ.28.3 ರಷ್ಟು ಕಡಿಮೆಯಾಗಿದೆ. 2010 ರಿಂದ ಇಂದಿನವರೆಗಿನ ದಿನವನ್ನು ವಿಮಾನ ಪ್ರಯಾಣದ ‘ಪ್ಲಾಟಿನಂ ಯುಗ’ ಎಂದು ಹೇಳಬಹುದು.
ಕ್ರೆಡಿಟ್ ಕಾರ್ಡ್‌ಗಳ ಪ್ರಸರಣವು ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿಗಳಲ್ಲಿ ಒಂದನ್ನಾಗಿ ಮಾಡಿದ್ದರಿಂದ ವಿಮಾನಯಾನ ಉದ್ಯಮಕ್ಕೆ ನಿರ್ಣಾಯಕ ಆದಾಯದ ಮೂಲವನ್ನಾಗಿ ಮಾಡಿದ ಅಭೂತಪೂರ್ವ ಕಾಲ ಎಂದು ಹೇಳಬಹುದು.
ಈ ಯುಗವು ವ್ಯವಸ್ಥೆಯನ್ನು ಹೇಗೆ ಗರಿಷ್ಠಗೊಳಿಸಬೇಕೆಂದು ತಿಳಿದಿರುವವರಿಗೆ ಹೊಸ ಪೀಳಿಗೆಯ ವಿಜೇತರನ್ನು ಸೃಷ್ಟಿಸಿತು. ಬುದ್ಧಿವಂತ ಗ್ರಾಹಕರು ತಮ್ಮ ಉತ್ತಮ ಕ್ರೆಡಿಟ್ ಅನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಜಗತ್ತಿನೆಡೆ ಪ್ರಯಾಣಿಸಬಹುದು ಎಂಬುದನ್ನು ಕಂಡುಕೊಂಡರು. ಉದ್ಯಮ ಶೀಲ ಕಾಲೇಜು ವಿದ್ಯಾರ್ಥಿಗಳು ಆರ್ಥಿಕತೆಯ ಕೊನೆಯ ಸಾಲಿನಲ್ಲಿರುವ ತಮ್ಮ ಸಹಪಾಠಿಗಳಿಗಿಂತ ಕಡಿಮೆ ಹಣದಲ್ಲಿ ವಿದೇಶದಲ್ಲಿ ಅಧ್ಯಯನ ಮಾಡಲು ಪ್ರಥಮ ದರ್ಜೆಯಲ್ಲಿ ಪಯಣಿಸುವ ಚಮತ್ಕಾರಗಳನ್ನು ಕಂಡುಕೊಂಡರು.
ಪಾಯಿಂಟ್‌ಗಳ ಆರ್ಥಿಕತೆಯು ಅದನ್ನು ಇನ್ನಷ್ಟು ಸಮಾನಗೊಳಿಸಿತು. ಮೈಲುಗಳು ಮತ್ತು ಪಾಯಿಂಟ್‌ಗಳನ್ನು ಪಡೆದುಕೊಳ್ಳುವ ಅವಕಾಶಗಳು ಹೆಚ್ಚಾದವು. ಇದರಿಂದ ವಿಮಾನ ದರಗಳು ಗಣನೀಯ ಕುಸಿದವು. ಪ್ರಯಾಣದ ಸುವರ್ಣ ಯುಗದಲ್ಲಿ, ಶ್ರೀಮಂತರು ಮಾತ್ರ ಪಯಣಿಸ ಬಹುದಾದ ಸಮಯದಲ್ಲಿ ಅದಕ್ಕಿಂತ ಭಿನ್ನವಾಗಿ, ಪ್ಲಾಟಿನಂ ಯುಗದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನರನ್ನು ಒಳಗೊಂಡಿತು.
ವಿದೇಶಗಳಿಗೆ ವಿಮಾನದಲ್ಲಿ ಪಯಣಿಸುವುದು ಈ ಜನ್ಮದಲ್ಲಿ ಸಾಧ್ಯವಿಲ್ಲವೇನೋ ಎಂದು ಭಾವಿಸಿದವರ ಕನಸುಗಳು ಅವರು ನಿರೀಕ್ಷಿಸಿದ್ದಕ್ಕಿಂತ ಮುಂಚೆಯೇ ಈ ಜನ್ಮದಲ್ಲಿಯೇ ನನಸಾದವು. ಮುಂದಿನ ಐದು ವರ್ಷಗಳಲ್ಲಿ ವಿಮಾನಯಾನ, ಕಳೆದ ಮೂವತ್ತು ವರ್ಷಗಳಲ್ಲಿ ಕಾಣದ ಸುಧಾರಣೆಗಳನ್ನು ಕಾಣಲಿದೆ.
ಒಂದು ಅಪಘಾತದಿಂದ ನಾವು ದೃತಿಗೆಡಬಾರದು. ಅಪಘಾತದಿಂದ ಹೆಚ್ಚು ಘಾಸಿಯಾಗುವವರು ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾ ಕಂಪನಿಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಷ್ಟಕ್ಕೂ ವಿಮಾನ ಅಪಘಾತಗಳ ಬಗ್ಗೆ ಯೋಚಿಸಿ ದಾಗಲೆಲ್ಲ ಅದ್ಯಾವನೋ ಹೇಳಿದ ಒಂದು ಮಾತು ಮತ್ತೆ ಮತ್ತೆ ನೆನಪಾಗುತ್ತದೆ - If black boxes survive air crashes why don't they make the whole plane out of that stuff?