ಬುರುಡೆ ಬಿಟ್ಟವರ ನಂಬಿ ಭಕ್ತರ ನಂಬಿಕೆ ಮೇಲೆ ಸವಾರಿ
ಹದಿನೈದು ದಿನಕ್ಕೆ ಮೇಲ್ಪಟ್ಟು ಅನಾಮಿಕ ತೋರಿಸಿದ ಜಾಗಗಳಲ್ಲಿ ಗುಂಡಿಯ ನಂತರ ಗುಂಡಿ ಗಳನ್ನು ತೋಡಿ ಮಣ್ಣು ಮೇಲೆ ಬಂತೇ ವಿನಾ ಹೆಣಗಳಾಗಲೀ ಅಸ್ಥಿಪಂಜರಗಳಾಗಲೀ ದೊರೆಯ ಲಿಲ್ಲ. ಎರಡು ಗುಂಡಿಗಳಲ್ಲಿ ಸಿಕ್ಕ ಅಸ್ಥಿಪಂಜರಗಳಲ್ಲಿ ಒಂದು ಇತ್ತೀಚಿನದ್ದಾಗಿದ್ದು, ಇನ್ನೊಂದು ತೀರಾ ಹಳೆಯದ್ದು ಎನ್ನಲಾಗಿದೆ.


ಲೋಕಮತ
ಎಚ್.ಆರ್.ಶ್ರೀಪಾದ ಭಾಗಿ
kaayarga@gmail.com
ಧರ್ಮಸ್ಥಳ, ಇದು ಕೇವಲ ಒಂದು ಊರಿನ ಹೆಸರಲ್ಲ. ಕೋಟ್ಯಂತರ ಭಕ್ತರ ಪಾಲಿಗಿದು ದೇವರ ನಾಡು, ನಂಬಿಕೆಯ ಬೀಡು. ಒಂದು ಕಾಲದಲ್ಲಿ ಇದೊಂದು ಸಣ್ಣ ಹಳ್ಳಿಯಾಗಿತ್ತು ಅಷ್ಟೇ. ಆದರಿಂದು ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುವ ಶ್ರೀ ಮಂಜುನಾಥೇಶ್ವರನ ಪವಿತ್ರ ಸನ್ನಿಧಾನ. ಚಿಕ್ಕ ಹಳ್ಳಿಯೊಂದನ್ನು ಅಭಿವೃದ್ಧಿ ಪಡಿಸಿ, ವಿಶ್ವಮಾನ್ಯವಾಗಿಸಿರುವ ಪರಿ ನಿಜಕ್ಕೂ ಸವಾಲಿನ ಕೆಲಸವಾಗಿತ್ತು.
ಆದರೆ ದೈವ ಶಕ್ತಿ ಮತ್ತು ಸಂಕಲ್ಪ ಈ ಗ್ರಾಮವನ್ನು ಶ್ರೀ ಮಂಜುನಾಥನ ಸನ್ನಿಧಿಯಾಗಿ ಅಭಿವೃದ್ಧಿ ಪಡಿಸಿ ಭಕ್ತಿ ಕೇಂದ್ರವಾಗಿ ಬೆಳೆಯುವಂತೆ ಮಾಡಿತು. ಸುಮಾರು 8 ದಶಕಗಳ ಹಿಂದೆ ಜೈನ ದಂಪತಿಗಳಾದ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಳ್ಳಾಳ್ತಿಯವರ ಭಕ್ತಿ ,ಮತ್ತು ನಿಷ್ಕಲ್ಮಶ ಪ್ರಯತ್ನದಿಂದ ಕರ್ನಾಟಕದ ಪುಟ್ಟ ಊರೊಂದು ಬೆಳೆಯುತ್ತಾ, ಧರ್ಮರಕ್ಷಣೆ ಮತ್ತು ಧರ್ಮ ಪ್ರಸಾರದ ಕೇಂದ್ರವಾಗಿ, ಭಕ್ತರ ಆರಾಧ್ಯ ದೇವರ ನೆಲೆಯಾಗಿ ಜಗದಗಲ ನೆನೆಯುವಂತಹ ಪುಣ್ಯಕ್ಷೇತ್ರವಾಗಿ ಬೆಳೆದು ನಿಂತಿದೆ.
ಇಂದು ಪ್ರತಿದಿನ ಕೋಟ್ಯಂತರ ಭಕ್ತರು ಧರ್ಮಸ್ಥಳಕ್ಕೆ ಭೇಟಿನೀಡಿ ತಮ್ಮ ಆರಾಧ್ಯ ದೈವ ಶ್ರೀ ಮಂಜುನಾಥನ ದರ್ಶನ ಮಾಡಿ ಕೃತಾರ್ಥರಾಗುತ್ತಿದ್ದಾರೆ. ಇಲ್ಲಿ ಪ್ರತಿದಿನ ಕೋಟ್ಯಂತರ ರೂಪಾಯಿ ಗಳು ಸಂಗ್ರಹವಾಗುತ್ತದೆ. ಭಕ್ತರಿಗೂ ಸೂಕ್ತವಾದ ವಸತಿ ಮತ್ತು ಉಚಿತ ಭೋಜನ ದೊರೆಯುತ್ತಿದೆ. ಇಲ್ಲಿಗೆ ಆಗಮಿಸುವ ಯಾರೊಬ್ಬರೂ ಕೂಡಾ ದೇವರ ದರ್ಶನ ಅಥವಾ ಭೋಜನದಿಂದ ವಂಚಿತ ರಾಗುವ ಪ್ರಶ್ನೆಯೇ ಇಲ್ಲ.
ಇದನ್ನೂ ಓದಿ: Roopa Gururaj Column: ಬುದ್ಧನಾಗಬೇಕಾದರೆ ಏನು ಮಾಡಬೇಕು ?
ಇಂತಹ ಪುಣ್ಯಕ್ಷೇತ್ರದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಅನೂಚಾನವಾಗಿ ಬಂದ ಶ್ರೀ ವೀರೇಂದ್ರ ಹೆಗ್ಗಡೆಯವರ ಪೂರ್ವಜರು ಮತ್ತು ಪ್ರಸ್ತುತ ಅವರ ಕುಟುಂಬದವರ ಶ್ರದ್ಧಾ-ಭಕ್ತಿಪೂರ್ವಕ, ಸಮರ್ಪಣೆಯ ಮನಸ್ಸಿದೆ, ಪ್ರಯತ್ನವಿದೆ. ಕೆಲವು ಜನರ ಕಣ್ಣಿಗೆ ಕಾಣುವುದು ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಮತ್ತು ದೇವಸ್ಥಾನಕ್ಕಿರುವ ಆದಾಯ. ಇನ್ನು ಕೆಲವರ ಕಣ್ಣಿಗೆ ರಾಚುವುದು ಈ ಪುಟ್ಟ ಊರು ಹಿಂದೂ ಧರ್ಮದ ಉತ್ಥಾನಕ್ಕೆ ಕಾರಣವಾಗುತ್ತಿರುವ ರೀತಿಯ ಬಗ್ಗೆ. ಇವರಲ್ಲಿ ಒಂದು ವರ್ಗದ ಗುರಿ, ದೇವಸ್ಥಾನದ ಆಡಳಿತವನ್ನು ಹೆಗ್ಗಡೆಯವರ ಕುಟುಂಬದಿಂದ ಹೇಗೆ ಕಿತ್ತುಕೊಳ್ಳುವುದು ಎಂಬುದಾ ದರೆ, ಮತ್ತೊಂದು ವರ್ಗದ ಗುರಿ, ಯಾವುದಾದರೂ ಮಾರ್ಗದಿಂದ ಈ ಧರ್ಮಕ್ಷೇತ್ರದ ಬಗ್ಗೆ ಹಿಂದೂ ಗಳಿಗೆ ದ್ವೇಷ-ತಿರಸ್ಕಾರ ಭಾವನೆಗಳು ಮೂಡುವಂತೆ ಮಾಡಿ ಹಿಂದೂ ಧರ್ಮಕ್ಕೆ ಪೆಟ್ಟು ಕೊಡುವುದಾಗಿದೆ.
ಇಂತಹ ದುಷ್ಕೃತ್ಯಗಳಿಗೆ ಹಿಂದೂಯೇತರರು ಸತತವಾಗಿ ಮಸಲತ್ತು ನಡೆಸುತ್ತಿದ್ದಾರೆ, ಹಿಂದೂ ಹೆಸರನ್ನಿಟ್ಟುಕೊಂಡಿರುವ ಕೆಲವು ಧರ್ಮದ್ವೇಷಿಗಳು ತಮ್ಮ, ಮೈ-ಕೈ-ಬಾಯಿ ಜೋಡಿಸುತ್ತಿದ್ದಾರೆ. ಇವರಾರಿಗೂ ದೇವರ ಬಗ್ಗೆ ಅಥವಾ ಧರ್ಮದ ಬಗ್ಗೆ ಕಿಂಚಿತ್ತೂ ನಂಬಿಕೆ ಅಥವಾ ಗೌರವವಿಲ್ಲ. ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳದಂತೆ ಭಾರತದ ಇನ್ನೂ ಕೆಲವು ಶ್ರದ್ಧಾಕೇಂದ್ರಗಳ ಬಗ್ಗೆ ಅಪಪ್ರಚಾರ ಮಾಡಿ, ಜನರ ನಂಬಿಕೆ ಮತ್ತು ಭಾವನೆಗಳಿಗೆ ಪೆಟ್ಟು ಕೊಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
ಈಗ ಕೆಲವು ತಿಂಗಳಿನಿಂದ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕೆಲವು ರಾಷ್ಟ್ರ ದ್ರೋಹಿಗಳು ಮತ್ತು ಧರ್ಮದ್ರೋಹಿಗಳು ಮತ್ತೆ ಪ್ರಾರಂಭಿಸಿದ್ದಾರೆ. ಇದರ ಅಂಗವಾಗಿ ಕೆಲವು ದುಷ್ಟಶಕ್ತಿಗಳು ಅನಾಮಿಕರಿಂದ ಆರ್ಥಿಕ ನೆರವನ್ನು ಪಡೆದು, ಅನಾಮಿಕನೊಬ್ಬನನ್ನು ಸೃಷ್ಟಿಸಿ, ನಿಜವಾಗಲೂ ನಡೆದಿರುವ ಸೌಜನ್ಯ ಎಂಬ ಮುಗ್ದ ಹುಡುಗಿಯ ಹತ್ಯೆಯ ಕಾರಣವನ್ನಿಟ್ಟುಕೊಂಡು ಹೆಗ್ಗಡೆಯವರ ಕುಟುಂಬವನ್ನು ಬಲಹೀನಗೊಳಿಸಲು ಮತ್ತು ಧರ್ಮಸ್ಥಳವನ್ನು ಫಲಹೀನ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮನಸ್ಸಿಗೆ ತೋಚಿದಂತೆ ಬೊಗಳೆ ಬಿಡುತ್ತಾ, ತಮ್ಮಂತೆಯೇ ಕಾಸಿಗೆ ಕೈಚಾಚಿ ಇಂತಹ ಹೇಯ ಕೃತ್ಯಕ್ಕೂ ಸೈ ಎನ್ನುವಂತಹ ಪುಂಡರ ಪಡೆಯನ್ನು ಕಟ್ಟಿಕೊಂಡು ದೇಶದ ನೆಮ್ಮದಿಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಯಾರೋ ಒಬ್ಬ ಅಮಾಯಕನ ಮಾತನ್ನು ಕೇಳಿ ವಿಶೇಷ ತನಿಖಾ ದಳವನ್ನು ರಚಿಸಿದ ರಾಜ್ಯ ಸರಕಾರ, ಅನಾಮಿಕನ ಮತ್ತು ಸಾಮಾಜಿಕ ಜಾಲತಾಣದ ನಾಯಕಮಣಿಗಳ ಪೂರ್ವಾಪರ ತಿಳಿಯುವ ಪ್ರಯತ್ನವನ್ನಾಗಲೀ ಮಾಡದೇ, ಧರ್ಮಸ್ಥಳದ ಸುತ್ತಮುತ್ತಲಿನ ಗುಡ್ಡಗಳನ್ನು ಅಗೆಯುವ ತನಿಖಾ ತಂಡದ ಕಾರ್ಯಕ್ಕೆ ಹಸಿರು ನಿಶಾನೆ ತೋರಿಸಿತು.
ಹದಿನೈದು ದಿನಕ್ಕೆ ಮೇಲ್ಪಟ್ಟು ಅನಾಮಿಕ ತೋರಿಸಿದ ಜಾಗಗಳಲ್ಲಿ ಗುಂಡಿಯ ನಂತರ ಗುಂಡಿ ಗಳನ್ನು ತೋಡಿ ಮಣ್ಣು ಮೇಲೆ ಬಂತೇ ವಿನಾ ಹೆಣಗಳಾಗಲೀ ಅಸ್ಥಿಪಂಜರಗಳಾಗಲೀ ದೊರೆಯ ಲಿಲ್ಲ. ಎರಡು ಗುಂಡಿಗಳಲ್ಲಿ ಸಿಕ್ಕ ಅಸ್ಥಿಪಂಜರಗಳಲ್ಲಿ ಒಂದು ಇತ್ತೀಚಿನದ್ದಾಗಿದ್ದು, ಇನ್ನೊಂದು ತೀರಾ ಹಳೆಯದ್ದು ಎನ್ನಲಾಗಿದೆ. ಅನಾಮಧೇಯನ ಮಾತು, ಸಾಮಾಜಿಕ ಜಾಲತಾಣಗಳ ನಾಮ್ ಕೇವಾಸ್ತೆ ಪೋಕರಿಗಳ ಮಾತು ಕೇಳಿದ ಸರಕಾರಕ್ಕೂ ಈಗ ಸತ್ಯ ಸಂಗತಿ ಮನದಟ್ಟಾಗಿದೆ.
ವಿಶೇಷ ತನಿಖಾ ತಂಡ ಸದ್ಯಕ್ಕೆ ಬುರುಡೆ ಶೋಧ ಬಿಟ್ಟು ಬುರುಡೆಧಾರಿಯ ವಿಚಾರಣೆ ಆರಂಭಿಸಿದೆ. ಈಗಾಗಲೇ ಸಿಕ್ಕಿರುವ ಅವಶೇಷಗಳನ್ನುವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಇಲ್ಲಿ ಹಲವು ಪ್ರಶ್ನೆಗಳು ಕಾಡುತ್ತವೆ. ಒಬ್ಬ ಅನಾಮಧೇಯ ವ್ಯಕ್ತಿಯ ಮಾತನ್ನು ಕೇಳಿ ತನಿಖೆಯನ್ನು ಪ್ರಾರಂಭಿಸಿ, ಧರ್ಮಸ್ಥಳದ ನದಿ ತೀರ, ಕಾಡು-ಗುಡ್ಡಗಳಿಂದ ಹಿಡಿದು ಬಾಹುಬಲಿ ಬೆಟ್ಟದ ತನಕವೂ ಅಗೆಯಲು ಹೊರಟ ಸರಕಾರ, ಅದಕ್ಕೂ ಮುನ್ನ ಅನಾಮಧೇಯ ವ್ಯಕ್ತಿಯ ಪೂರ್ವಾಪರಗಳನ್ನೇಕೆ ಕೂಲಂಕಷವಾಗಿ ವಿಚಾರಿಸುವ ಪ್ರಯತ್ನವನ್ನು ಮಾಡಲಿಲ್ಲ. ಆ ವ್ಯಕ್ತಿ ಎಲ್ಲಿ ಯಾರೊಂದಿಗೆ ವಾಸಿಸುತ್ತಿದ್ದಾನೆ, ಪ್ರತಿ ದಿನ ತನಿಖಾ ತಂಡವನ್ನು ಬಿಟ್ಟು ಎಲ್ಲಿಗೆ ಹೋಗುತ್ತಾನೆ? ಯಾರನ್ನು ಭೇಟಿ ಮಾಡುತ್ತಾನೆ? ಯಾರಿಂದ ಮಾರ್ಗದರ್ಶನವನ್ನು ಪಡೆಯುತ್ತಿದ್ದಾನೆ ಎಂಬಿತ್ಯಾದಿ ಮಾಹಿತಿಯನ್ನು ಏಕೆ ಕಲೆ ಹಾಕಲಿಲ್ಲ ?
ಅವನು ಪ್ರತಿದಿನವೂ ಹೊಸ ಜಾಗಗಳ ಬಗ್ಗೆ ಹೇಳುತ್ತಿದ್ದು, ತಾನು ಹೂತಿದ್ದೇನೆಂದು ಹೇಳುತ್ತಿದ್ದ ಶವಗಳ ಸಂಖ್ಯೆಯನ್ನೂ ಏರಿಸುತ್ತಿದ್ದ. ಆ ವ್ಯಕ್ತಿ ಒಬ್ಬನೇ ಶವಗಳನ್ನು ಹೊತ್ತು ತಂದು ಯಾವ್ಯಾ ವುದೋ ಜಾಗಳಲ್ಲಿ ಬೇರಾರ ಗಮನಕ್ಕೂ ಬರದಂತೆ ಹತ್ತಾರು ಅಡಿಗಳಷ್ಟು ಆಳ-ಅಗಲದ ಗುಂಡಿ ಗಳನ್ನು ತೋಡಿ ಅವುಗಳನ್ನು ಅಲ್ಲಿ ಹೂತು ಹಾಕಿದ್ದಾನೆಂದರೆ, ಅದನ್ನು ಎಷ್ಟರಮಟ್ಟಿಗೆ ನಂಬ ಬಹುದು? ಧರ್ಮಸ್ಥಳವು ಪ್ರತಿದಿನ ಸಾವಿರಾರು ಮಂದಿ ಭಕ್ತಾದಿಗಳು ಮತ್ತು ಅನೇಕ ದಿಕ್ಕುದೆಸೆ ಯಿಲ್ಲದವರೂ ಕೂಡ ಬಂದುಹೋಗುವ ಪುಣ್ಯಕ್ಷೇತ್ರ.
ಇಲ್ಲಿಗೆ ಬಂದವರಲ್ಲಿ, ಎಷ್ಟೋ ಮಂದಿ ಅನಾಥರು, ವೃದ್ಧರು ಇರುವುದು ಸಾಮಾನ್ಯ. ಇವರಲ್ಲಿ ಕೆಲವರಾದರೂ ಅಸು ನೀಗುವುದರಲ್ಲಿ ಆಶ್ಚರ್ಯವಿಲ್ಲ. ಇವರ ಪೂರ್ವಾಪರ ಗೊತ್ತಿಲ್ಲದಿರುವಾಗ, ಇವರ ಸಂಬಂಧಿಗಳ ಬಗ್ಗೆ ಮಾಹಿತಿಯಿಲ್ಲದಿರುವಾಗ, ಇವರನ್ನು ಧರ್ಮಸ್ಥಳದ ಸುತ್ತಮುತ್ತಲ ಜಾಗದಲ್ಲಿ ಹೂಳುವುದು ಅನಿವಾರ್ಯವಲ್ಲವೇ? ಇದು ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವ ವಿಷಯ.
ಆದರೆ ನಮ್ಮನ್ನಾಳುವ ದೊರೆಗಳಿಗೆ ಈ ಸಾಮಾನ್ಯ ಸಂಗತಿಯೂ ಅರ್ಥವಾಗಿಲ್ಲವೇಕೆ? ತನಿಖೆಯ ಹೆಸರಿನಲ್ಲಿ ಇಲ್ಲಿಯವರೆಗೆ ಖರ್ಚು ಮಾಡಿರುವ ತೆರಿಗೆದಾರರ ಲಕ್ಷಾಂತರ ರೂಪಾಯಿ ಹಣವನ್ನು ಯಾರಿಂದ ವಸೂಲು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ವಿರುದ್ಧ ಬಡಬಡಾಯಿಸಿದ ಡೋಂಗಿ ಸಾಮಾಜಿಕ ಕಾರ್ಯಕರ್ತರ ಸುಳ್ಳು ಅಪಾದನೆಗಳಿಂದ ಕ್ಷೇತ್ರಕ್ಕೆ ಮತ್ತು ಧರ್ಮಾಧಿಕಾರಿಗಳಿಗೆ ಆಗಿರುವ ಅಪಚಾರ ನಿವಾರಣೆ ಹೇಗೆ ? ಇದೀಗ ಕೆಲವರು ಧರ್ಮಸ್ಥಳದ ಮೇಲಿನ ತಮ್ಮ ಭಕ್ತಿ ಮತ್ತು ನಂಬಿಕೆಯನ್ನು ಪುನರುಚ್ಚರಿಸಲು ಪ್ರಾರಂಭಿಸಿದ್ದಾರೆ.
ಕೆಲವರಂತೂ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆವಿಧಿಸುವುದಾಗಿಯೂ ಹೇಳಿದ್ದಾರೆ. ‘ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ’ ಎಂಬ ಮಾತಿದೆ. ಅಂತೆಯೇ ‘ಪಾಪಿಯ ಹೆಂಡತಿಯು ಎಂದಿದ್ದರೂ ಮುಂದೆ’ ಎಂಬ ಮಾತೂ ಇದೆ. ವಿಶೇಷ ತನಿಖಾ ತಂಡದ ಅಂತಿಮ ವರದಿ ಸಲ್ಲಿಸಿದ ಬಳಿಕವಾದರೂ ದೇಗುಲನಾಡಿನ ಪಾವಿತ್ರ್ಯ ಮತ್ತು ಹೆಗ್ಗಡೆಯವರ ಕುಟುಂಬದ ಗೌರವಕ್ಕೆ ಬಂದಿದ್ದ ಚ್ಯುತಿ ದೂರವಾಗುವ ನಿರೀಕ್ಷೆ ಮೂಡಿದೆ.
ಆದರೆ ಇದರೊಂದಿಗೆ ಈ ಕುಟಿಲ ಕಾರಸ್ಥಾನವನ್ನು ರಚಿಸಿ ಆಟವಾಡಿದ ದುಷ್ಕರ್ಮಿಗಳಿಗೆ ಶಿಕ್ಷೆ ಯಾಗಬೇಕಾಗಿದೆ. ಇದೂ ಆಗಿಯೇ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅಂತಿಮವಾಗಿ ಸತ್ಯವೇ ಗೆಲ್ಲಬೇಕು. ಇದು ಜನರ ಸಂಕಲ್ಪ ಮಾತ್ರವಲ್ಲ ದೈವ ಸಂಕಲ್ಪವೂ ಹೌದು.
ಲೇಖಕರು, The Institute of Cost Accountants of India- Bengaluru Chapter
ಮಾಜಿ ಅಧ್ಯಕ್ಷರು