Surendra Pai Column: ಪ್ರಥಮ ಪ್ರಜೆ ಕಲಿಸಿದ ದೇಶಭಕ್ತಿಯ ಪಾಠ
ಭಾರತದ ಪ್ರಥಮ ಪ್ರಜೆಯ ಈ ಮಾದರಿ ನಡೆ 140 ಕೋಟಿ ಜನರಿಗೆ ದೇಶಭಕ್ತಿಯ ಕುರಿತಾದ ಬಹು ದೊಡ್ಡ ಪಾಠವನ್ನೇ ಕಲಿಸಿಬಿಟ್ಟಿತು. ಆ ದೃಶ್ಯವನ್ನು ನೋಡಿದ ಪ್ರತಿಯೊಬ್ಬರಿಗೂ ಮುಂಜಾನೆ ತಾವು ವರ್ತಿಸಿದ ರೀತಿ, ನಡೆದ ಎಲ್ಲಾ ಘಟನೆಗಳು ಒಂದೊಂದಾಗಿ ಹಾಗೇ ಕಣ್ಣ ಮುಂದೆ ಹಾದು ಹೋದವು. ಮನದಲ್ಲೇ ಛೇ, ನಾವು ತಪ್ಪು ಮಾಡಿಬಿಟ್ಟೆವು ಎಂಬ ಪಾಪ ಪ್ರಜ್ಞೆ ಕಾಡಲು ಶುರುವಾಯಿತು.


ಸಕಾಲಿಕ
ಸುರೇಂದ್ರ ಪೈ
ಈ ಬಾರಿಯ 79ನೇ ಸ್ವಾತಂತ್ರ್ಯ ದಿನಾಚರಣೆಯ ದಿನನಮ್ಮ ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮುರವರು ದೇಶದ ಜನತೆಗೆ ದೇಶದ ಭಕ್ತಿಯ ಕುರಿತಾದ ಒಂದು ಸುಂದರ ಪಾಠವನ್ನು ಕಲಿಸಿಬಿಟ್ಟರು. ಪಾಠ ಕಲಿಸಲು ಅವರೇನು ಮೇಷ್ಟ್ರ ತರಹ ಕೈಯಲ್ಲಿ ಪುಸ್ತಕ ಹಾಗೂ ಕೋಲನ್ನು ಹಿಡಿದುಕೊಳ್ಳಲಿಲ್ಲ, ಮೈಕ್ ನ ಮುಂದೆ ನಿಂತು ಗಂಟೆಗಟ್ಟಲೆ ಮಾತನಾಡುತ್ತಾ ನೀತಿ ಬೋಧನೆ ಮಾಡಲಿಲ್ಲ, ತಾನು ದೇಶಭಕ್ತಿಯ ಪಾಠ ಮಾಡುತ್ತೇನೆ ಎಂದು ಎಲ್ಲರಿಗೂ ಹೇಳಿ, ಜನರನ್ನು ಒಂದೆಡೆ ಸೇರಿಸಲಿಲ್ಲ.
ಬದಲಾಗಿ ತಮ್ಮ ಮಾದರಿ ಪ್ರೇರಣಾದಾಯಕ ನಡೆಯಿಂದ ಒಂದ ರಕ್ಷರವೂ ಮಾತನಾಡದೇ ಪಾಠ ಕಲಿಸಿಬಿಟ್ಟರು. ನಾವೆಲ್ಲಾ ಅದನ್ನು ನೋಡುತ್ತಲೇ ಪಾಠ ಕಲಿತುಬಿಟ್ಟೆವು. ಅಂದು ಅಗಸ್ಟ್ 15ರ ಮುಂಜಾನೆಯಿಂದಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು.
ಶಾಲಾ-ಕಾಲೇಜು ಸೇರಿದಂತೆ ಎಲ್ಲೆಡೆ ಮುನ್ನಾ ದಿನವೇ ಸ್ವಾತಂತ್ರ್ಯ ದಿನಾಚರಣೆಯ ತಯಾರಿ ಯನ್ನು ನಡೆಸಲಾಗಿತ್ತು. ಧ್ವಜಸ್ತಂಭ ಹಾಗೂ ಶಾಲಾವರಣವು ರಂಗೋಲಿ, ತಿಳಿರು ತೋರಣ, ಬಣ್ಣ ಬಣ್ಣದ ಬಂಟಿಂಗ್‌ಗಳಿಂದ ಅಲಂಕೃತವಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಧ್ವಜಾರೋಹಣ ಎಂದು ಮುದ್ರಿಸಲಾಗಿತ್ತು, ಅತಿಥಿಗಳಿಗೆ ಆಹ್ವಾನ ಹೋಗಿತ್ತು. ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಸಜ್ಜಾಗಿದ್ದರು.

ಎಲ್ಲರಲ್ಲೂ ಸಂಭ್ರಮ ಮನೆ ಮಾಡಿತ್ತು. ಆದರೆ ಶುಕ್ರವಾರ (ಸ್ವಾತಂತ್ರ ದಿನಾಚರಣೆಯ ದಿನ) ಬೆಳಗಿನ ಜಾವದಿಂದಲೇ ಸುರಿಯುತ್ತಿದ್ದ ಮಳೆಯು ನಮ್ಮೆಲ್ಲರ ದೇಶಭಕ್ತಿಯನ್ನು ಪರೀಕ್ಷೆ ಮಾಡಿಯೇ ಬಿಟ್ಟಿತು. ಅಯ್ಯೋ, ಇಷ್ಟು ಜೋರಾಗಿ ಮಳೆ ಬರುತ್ತಿದೆಯಲ್ಲಾ, ಈಗ ಹೇಗೆ ಕಾರ್ಯ ಕ್ರಮ ಮಾಡುವುದು? ಎಂಬ ಯೋಚನೆ ಎಲ್ಲರಲ್ಲೂ ಮನೆಮಾಡಿತ್ತು.
ಕೆಲವರು ನಿಗದಿತ ಸಮಯಕ್ಕೆ ಸರಿಯಾಗಿ ಛತ್ರಿ ಹಿಡಿದುಕೊಂಡು ಕೇವಲ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಶುಭ ಕೋರುವ ಮೂಲಕ ಕಾರ್ಯಕ್ರಮ ಮುಗಿಸಿ ಬಿಟ್ಟರು. ಇನ್ನು ಕೆಲವು ಕಡೆ ಮಳೆ ನಿಲ್ಲಬಹುದು ಕಾಯೋಣ ಎಂಬ ತೀರ್ಮಾನಕ್ಕೆ ಬಂದರು.
ಅತ್ತ ಹಲವೆಡೆ ಮಳೆಯಲ್ಲೇ ಧ್ವಜಾರೋಹಣ ಮಾಡಲು ಮುಂದಾದರೂ ಮಕ್ಕಳು ಮಳೆಯಲ್ಲಿ ನೆನೆದರೆ ‘ನಾಳೆ ಪಾಲಕರು ತಮ್ಮ ಮಕ್ಕಳಿಗೆ ಜ್ವರ, ನೆಗಡಿ ಬಂತು, ಮಳೆ ಬಂದು ರಾಡಿಯಾದ ನೆಲದಲ್ಲೇ ಕುಳ್ಳಿರಿಸಿದ್ದರಿಂದ ಮಕ್ಕಳ ಬಟ್ಟೆ ಕೊಳೆ ಆಯ್ತು’ ಎಂದೆಲ್ಲಾ ಹೇಳುತ್ತಾರೆ ಎಂಬ ಭಯ ಒಂದು ಕಡೆ ಕಾಡುತ್ತಿತ್ತು.
ಇತ್ತ ಅತಿಥಿಗಳು ಸಹ ಛತ್ರಿಯ ಸಹಾಯವಿಲ್ಲದೆ ವೇದಿಕೆ ಹತ್ತಲು ಸಿದ್ಧರಿರಲಿಲ್ಲ. ಕಾರ್ಯಕ್ರಮಕ್ಕೆ ಬಂದ ಪಾಲಕರು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಬಿದ್ದ ಮಳೆನೀರನ್ನು ಹಾಗೇ ಸುಮ್ಮನೆ ಕೈಯಿಂದ ಒರೆಸಿ ಕುರ್ಚಿ ಮೇಲೆ ಕುಳಿತುಕೊಳ್ಳಲು ಒಲ್ಲೆ ಎಂದು ಮೂಗು ಮುರಿಯುತ್ತಾ ಆಯಾಗಳ ಬಳಿ ಯಿಂದ ಬಟ್ಟೆ ತರಿಸಿ ಒರೆಸಿಕೊಂಡು ಕುಳಿತುಕೊಂಡರು, ಅವೆಲ್ಲದರ ಮಧ್ಯೆ ಧ್ವಜಾರೋಹಣ ಮಾಡಿ ಮುಗಿಸಿದರೂ ಸಹ ಅಲ್ಲಿ ದೇಶ ಭಕ್ತಿಗಿಂತ ಎಲ್ಲರ ಗಮನ ಒದ್ದೆಯಾದ ಬಟ್ಟೆ, ತಲೆ ಒರೆಸಿಕೊಳ್ಳುವಿಕೆ, ಛತ್ರಿಯ ಹುಡುಕಾಟ ಹಾಗೂ ಮಳೆಯ ಮೇಲೆಯೇ ಹೆಚ್ಚಾಗಿ ಕೇಂದ್ರೀಕೃತವಾಗಿದ್ದು ಕಂಡುಬಂತು.
ಅಬ್ಬಾ, ಕೊನೆಗೂ ಈ ಪಾಪಿ ಮಳೆಯು ನಮ್ಮ ಸ್ವಾತಂತ್ರ್ಯ ದಿನಾಚರಣೆಯನ್ನು ಹಾಳು ಮಾಡಿ ಬಿಟ್ಟಿತ್ತಲ್ಲಾ ಎಂದು ಮಳೆರಾಯನಿಗೆ ಒಂದಿಷ್ಟು ಹಿಡಿಶಾಪ ಹಾಕುತ್ತಾ ಮನೆಗೆ ಹೊರಟೆವು. ಮನೆಗೆ ಬಂದು ಒದ್ದೆಯಾದ ತಲೆಯನ್ನು ಒರೆಸಿಕೊಂಡು, ಬಿಸಿನೀರಿನ ಸ್ನಾನ ಮಾಡಿ ದೆಹಲಿಯ ಧ್ವಜಾ ರೋಹಣ ನೋಡೋಣ ಎಂದು ಟಿ.ವಿ ಮುಂದೆ ಕುಳಿತಾಗ ಭಾರತದ ಪ್ರಥಮ ಪ್ರಜೆಯು ದೊಪ್ಪ ಎಂದು ಸುರಿವ ಮಳೆಯಲ್ಲಿ ಛತ್ರಿಯ ಸಹಾಯವಿಲ್ಲದೇ, ಒಂದಿಷ್ಟು ಅಸಹನೆ, ಅಳುಕು ಇಲ್ಲದೇ ನಿಗದಿತ ಸಮಯಕ್ಕೆ ಸರಿಯಾಗಿ, ಪೂರ್ವನಿಗದಿತ ಕಾರ್ಯಕ್ರಮದ ವೇಳಾಪಟ್ಟಿಗೆ ಅನುಸಾರವಾಗಿ ದೆಹಲಿಯ ಇಂಡಿಯಾ ಗೇಟ್ ವೃತ್ತದಲ್ಲಿರುವ ‘ರಾಷ್ಟ್ರೀಯ ಯುದ್ಧ ಸ್ಮಾರಕ’ಕ್ಕೆ (ರಾಷ್ಟ್ರೀಯ ಸಮರ ಸ್ಮಾರಕ) ತೆರಳಿ ಸ್ವತಂತ್ರ ಭಾರತದ ಸಶಸ್ತ್ರ ಸಂಘರ್ಷಗಳಲ್ಲಿ ಅತ್ಯುನ್ನತ ತ್ಯಾಗ ಮಾಡಿದವರ ತ್ಯಾಗ ಬಲಿದಾನವನ್ನು ನೆನೆಯುತ್ತಾ ವೀರ ಯೋಧರಿಗೆ ಗೌರವ ಸಲ್ಲಿಸಿದರು.
ಭಾರತದ ಪ್ರಥಮ ಪ್ರಜೆಯ ಈ ಮಾದರಿ ನಡೆ 140 ಕೋಟಿ ಜನರಿಗೆ ದೇಶಭಕ್ತಿಯ ಕುರಿತಾದ ಬಹು ದೊಡ್ಡ ಪಾಠವನ್ನೇ ಕಲಿಸಿಬಿಟ್ಟಿತು. ಆ ದೃಶ್ಯವನ್ನು ನೋಡಿದ ಪ್ರತಿಯೊಬ್ಬರಿಗೂ ಮುಂಜಾನೆ ತಾವು ವರ್ತಿಸಿದ ರೀತಿ, ನಡೆದ ಎಲ್ಲಾ ಘಟನೆಗಳು ಒಂದೊಂದಾಗಿ ಹಾಗೇ ಕಣ್ಣ ಮುಂದೆ ಹಾದು ಹೋದವು. ಮನದಲ್ಲೇ ಛೇ, ನಾವು ತಪ್ಪು ಮಾಡಿಬಿಟ್ಟೆವು ಎಂಬ ಪಾಪ ಪ್ರಜ್ಞೆ ಕಾಡಲು ಶುರುವಾಯಿತು. ಒಂದಕ್ಷರವೂ ಮಾತನಾಡದೇ ದೇಶದ ಪ್ರತಿಯೊಬ್ಬ ನಾಗರಿಕರಿಗೂ ದೇಶದ ಮೊದಲ ಪ್ರಜೆ ಕೇವಲ ತನ್ನ ನಡೆಯ ಮೂಲಕ ಕಲಿಸಿದ ಪಾಠ ಮುಂದಿನ ಹಲವು ಪೀಳಿಗೆಯವ ರಿಗೂ ಮಾದರಿಯಾಗಿ ಉಳಿದುಬಿಟ್ಟಿತು.
ಅದೆಷ್ಟೋ ಜನರಿಗೆ ರಾಷ್ಟ್ರಪತಿ ಎಂದರೆ ಅದೊಂದು ಕೇವಲ ನಾಮಕಾವಸ್ಥೆ ಹುದ್ದೆ, ಆಡಳಿತ ಪಕ್ಷದವರು ಕಳುಹಿಸಿದ ಕಾಗದ ಪತ್ರಕ್ಕೆ ಸಹಿ ಹಾಕಿ ಕೊಡುವುದೇ ಅವರ ಕೆಲಸ. ಅದನ್ನು ಬಿಟ್ಟರೆ ವಿದೇಶ ಸುತ್ತುವುದು, ಕಲಾಪದ ಮೊದಲ ದಿನ ಜಂಟಿ ಅಧಿವೇಶನ ಕುರಿತು ಆಡಳಿತ ಪಕ್ಷದವರು ಬರೆದುಕೊಟ್ಟ ಭಾಷಣ ಮಾಡುವುದು, ಪ್ರಶಸ್ತಿ ವಿತರಿಸುವುದು ಅಷ್ಟೇ ಅವರ ಕೆಲಸ ಎಂಬ ತಾತ್ಸಾರ ಭಾವನೆಯಿದೆ.
ಆದರೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ತಮ್ಮ ಶ್ರೇಷ್ಠ ವ್ಯಕ್ತಿತ್ವದ ಮೂಲಕ ರಾಷ್ಟ್ರಪತಿ ಸ್ಥಾನಕ್ಕೂ, ರಾಷ್ಟ್ರಪತಿ ಭವನದ ಮೇಲೆ ಜನರು ಹೊಂದಿದ್ದ ಇಂತಹ ಕಲ್ಪಿತ ಭಾವನೆಯನ್ನು ತೊಡೆದು ಹಾಕಿ ಜನಮನ್ನಣೆಯನ್ನು ಪಡೆದಿದ್ದರು. ಇದೀಗ ದ್ರೌಪದಿ ಮುರ್ಮು ನಿಜವಾದ ದೇಶಭಕ್ತಿಗೆ ಯಾವ ಮಳೆ, ಗಾಳಿಯೂ ಯಾವ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟರು.
ಬಹುಶಃ ಇಂತಹ ಒಂದು ಸನ್ನಿವೇಶವನ್ನು ನಾವ್ಯಾರು ಊಹಿಸಿರಲಿಲ್ಲ. ನಮಗೆಲ್ಲಾ ಜೀವನದಲ್ಲಿ ಒಬ್ಬ ಆದರ್ಶ ವ್ಯಕ್ತಿಗಳು ಇದ್ದೇ ಇರುತ್ತಾರೆ. ಅವರು ರಾಜಕೀಯ ನಾಯಕರಾಗಿಬಹುದು, ಸಿನಿಮಾ ತಾರೆಯರಾಗಿರಬಹುದು, ಯಶಸ್ವಿ ಉದ್ಯಮಿಯಾಗಿರಬಹುದು, ಕ್ರೀಡಾಪಟುವಾಗಿರಬಹುದು, ಉನ್ನತ ಅಧಿಕಾರ-ಸ್ಥಾನಮಾನ ಹೊಂದಿರುವ ಸಮಾಜದ ಪ್ರತಿಷ್ಠಿತ ವ್ಯಕ್ತಿ ಹೀಗೆ ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಾರೆ.
ಹಾಗಾಗಿ ಅವರೆಲ್ಲರಿಗೂ ಗುರುತರವಾದ ಬಹುದೊಡ್ಡ ಹೊಣೆಗಾರಿಕೆ ಇದೆ, ಏಕೆಂದರೆ ಅವರ ನಡೆ ನುಡಿಗಳನ್ನು ಅವರ ಅನುಯಾಯಿಗಳು, ಅಭಿಮಾನಿಗಳು ಚಾಚು ತಪ್ಪದೇ ಪಾಲಿಸುವ ಕಾರಣ ಮನಸೋ ಇಚ್ಛೆ ವರ್ತಿಸುವಂತಿಲ್ಲ. ಹೇಗೆ ತಂದೆ-ತಾಯಿ ಹೇಳಿಕೊಟ್ಟ ಪಾಠಕ್ಕಿಂತ, ತರಗತಿಯಲ್ಲಿ ಹೇಳಿಕೊಟ್ಟ ಪಾಠವೇ ಸರಿ ಎಂದು ಮನೆಯಲ್ಲಿ ಮಕ್ಕಳು ವಾದಿಸುತ್ತಾರೋ, ನಾವು ಹಾಗೇ ನಮ್ಮ ನೆಚ್ಚಿನ ನಾಯಕರ ಜೀವನ, ಅವರ ನಡೆ-ನುಡಿಯನ್ನು ತಪ್ಪದೇ ಅನುಕರಿಸುತ್ತೇವೆ.
ಹಾಗಾಗಿ ಇಂತಹ ಆದರ್ಶ ವ್ಯಕ್ತಿಗಳು ತಮ್ಮ ಜೀವನವನ್ನು ಮತ್ತೊಬ್ಬರ ಮಾದರಿ ಬದುಕಿಗೆ ಸ್ಪೂರ್ತಿ ಆಗುವ ರೀತಿಯಲ್ಲಿ ಬದುಕಿದಾಗ ಮಾತ್ರ ಅದಕ್ಕೊಂದು ಅರ್ಥ. ಪ್ರತಿನಿತ್ಯವೂ ದೇಶಕ್ಕಾಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ನಾವು ದೇಶಕ್ಕಾಗಿ ಯಾವ ತ್ಯಾಗ ಬೇಕಾದರೂ ಮಾಡಬಲ್ಲೆ ಎಂದೆಲ್ಲಾ ಸುಲಭವಾಗಿ ಹೇಳುತ್ತಾ ತಿರುಗುತ್ತೇವೆ. ಆದರೆ ಮೊನ್ನೆಯ ಮಳೆಯು ನಮ್ಮ ದೇಶಭಕ್ತಿ ಯನ್ನು ಪರೀಕ್ಷಿಸಲು ಸಜ್ಜಾಗಿ ಬಂದಾಗ ನಾವು ದೇಶಭಕ್ತಿ ಮೆರೆಯುವಲ್ಲಿ ಸೋತು ಬಿಟ್ಟೆವಾ ಎಂದೆನಿಸಿತು.
ನಮ್ಮ ದೇಶಭಕ್ತಿಯು ಮಳೆಯ ಮುಂದೆ ಟುಸ್ ಪಟಾಕಿಯಾಗಿ ಬಿಟ್ಟಿತ್ತಲ್ಲಾ ಎಂದು ಕಾಡಿತು. ದೇಶಸೇವೆಯೇ ಈಶ ಸೇವೆ ಎಂಬ ಮಾತೊಂದಿದೆ. ಹಾಗೆಂದು ದೇಶಕ್ಕಾಗಿ ಗಡಿಯಲ್ಲಿ ನಿಂತು ಯುದ್ಧ ಮಾಡಿದರೆ ಮಾತ್ರ ನಾವು ದೇಶ ಸೇವೆ ಮಾಡಿದಂತಲ್ಲ. ಬದಲಾಗಿ ದೇಶಭಕ್ತಿಯನ್ನು ಮೆರೆಯಲು ಮೊನ್ನೆ ಸಿಕ್ಕ ಅವಕಾಶವು ಒಂದಾಗಿತ್ತು.
ನಮ್ಮ ನಮ್ಮ ಹಕ್ಕುಗಳಿಗಾಗಿ ಹೇಗೆ ಹೋರಾಟ ಮಾಡುತ್ತೇವೋ, ಅಂತೆಯೇ ನಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವುದೂ ಸಹ ದೇಶ ಸೇವೆಯೇ ಆಗಿದೆ. ದೇಶದ ಪ್ರಥಮ ಪ್ರಜೆಯ ತಮಗೆ ಸಿಕ್ಕ ಅಭೂತಪೂರ್ವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ದೇಶದ ಪ್ರಜೆಗಳಿಗೆ ಚೆಂದದ ಮಾದರಿ ಪಾಠವನ್ನು ಕಲಿಸಿದ ರೀತಿ ನಮಗೆಲ್ಲಾ ಸ್ಪೂರ್ತಿಯಾಗಬೇಕು.
ದೇಶದ ಪ್ರಥಮ ಪ್ರಜೆಯಾಗಿ ತಮಗಿದ್ದ ವಿಶೇಷ ಸೌಲಭ್ಯಗಳನ್ನು ಧಿಕ್ಕರಿಸಿ ಸಾಮಾನ್ಯ ನಾಗರಿಕರಂತೆ ದೇಶಭಕ್ತಿಯನ್ನು ಪ್ರಕಟಪಡಿಸಿದ್ದು ನಮಗೆಲ್ಲಾ ಆದರ್ಶಪ್ರಾಯವಾಗಬೇಕಿದೆ. ಬಹುಶಃ ಅಂದು ಅವರು ಕೊಡೆ ಬಳಸಿಯೋ, ರೈನ್‌ಕೋರ್ಟ್ ಧರಿಸಿಯೋ ಬಂದು ಗೌರವ ನಮನ ಸಲ್ಲಿಸಿದ್ದರೆ ಇಂತಹ ಒಂದು ಮಾದರಿ ದೇಶಭಕ್ತಿಯ ಪಾಠ ಕಲಿಯಲು ನಮಗೆಂದಿಗೂ ಸಾಧ್ಯವಾಗುತ್ತಿರಲಿಲ್ಲ.
ದೇಶ ನಮಗೆಲ್ಲಾ ಗೌರವವನ್ನು, ಗುರುತನ್ನು ನೀಡಿದೆ. ಆದರೆ ನಾವು ದೇಶಕ್ಕಾಗಿ ಏನು ನೀಡಿದ್ದೇವೆ ಎಂಬುದನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ದಿನ ಬೆಳಗಾದರೆ ಜಾತಿ, ಮತ, ಪಂಥ, ಧರ್ಮ, ಅಧಿಕಾರ ಕ್ಕಾಗಿ ಕಿತ್ತಾಡುವ ನಾವು ಇನ್ನಾದರೂ ಸಾಮರಸ್ಯದಿಂದ ನಾವೆಲ್ಲಾ ಭಾರತೀಯರು ಎಂಬ ಮನೋ ಭಾವದಿಂದ ಒಗ್ಗಟ್ಟಿನಿಂದ ಬದುಕಿ ವಿಶ್ವಕ್ಕೇ ಮಾದರಿಯಾಗಬೇಕಿದೆ.
ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿಲ್ಲ, ಅದರ ಹಿಂದೆ ಅನೇಕ ನಿಸ್ವಾರ್ಥ ಜನರ ತ್ಯಾಗ, ಬಲಿದಾನ ಕತೆಯಿದೆ, ಹೋರಾಟವಿದೆ, ಹಾಗಾಗಿ ಗಾಳಿ, ಮಳೆ, ಚಳಿ, ಬಿಸಿಲು ಯಾವುದು ಸಹ ನಮ್ಮ ದೇಶಭಕ್ತಿಯನ್ನು ಅಲುಗಾಡಿಸದಿರಲಿ.