ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ವೇತನ ಪರಿಷ್ಕರಣೆ, ಶಿವರಾತ್ರಿಯ ಮನೆಗೆ ಏಕಾದಶಿ ಬಂದಂತೆ !

ಬೆಂಗಳೂರಿನಂತಹ ನಗರದಲ್ಲಿ ಕನಿಷ್ಠವೇತನ ಶೇ.60ಕ್ಕಿಂತಲೂ ಹೆಚ್ಚಿಗೆ ಏರಿಕೆಯಾಗಿದೆ ಮತ್ತು ಈ ಏರಿಕೆ ರಾಜ್ಯದ ಕೈಗಾರಿಕಾ ಬೆಳವಣಿಗೆಯ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ, ಇದರ ಕುರಿತು ಕರ್ನಾಟಕದ ಜನರಿಗೆ ಖಬರೇ ಇಲ್ಲ. ಮುಖ್ಯಮಂತ್ರಿ ಸ್ಥಾನ ದಿಂದ ಸಿದ್ದರಾಮಯ್ಯ ಕೆಳಗಿಳಿದರು ಎಂದು ಒಂದು ವಲಯ ಬೇಸರ ದಲ್ಲಿದ್ದರೆ, ಇನ್ನೊಂದು ವಲಯ ಡಿ.ಕೆ. ಶಿವಕುಮಾರ್‌ರವರು ಅಂತೂ ಮುಖ್ಯಮಂತ್ರಿಯಾದರು ಎಂದು ಸಂಭ್ರಮಿಸುವುದರಲ್ಲಿ ಬ್ಯೂಸಿ ಯಾಗಿದ್ದಾರೆ.

ವಿದ್ಯಮಾನ

ಕಳೆದೊಂದು ತಿಂಗಳಿನಿಂದ ಪೆಟ್ರೋಲ್ ಡೀಸಲ್ ಬೆಲೆ ಮೂರು ಬಾರಿ ಏರಿದೆ, ಡಾಲರ್ ಎದುರು ರುಪಾಯಿ ಗಣನೀಯವಾಗಿ ಕುಸಿದಿದೆ. ಬೆಳ್ಳಿ ಬಂಗಾರದ ಬೆಲೆಯನ್ನಂತೂ ಕೇಳುವ ಹಾಗೇ ಇಲ್ಲ, ಅವು ಸಾರ್ವಕಾಲಿಕ ಏರಿಕೆಯನ್ನು ಕಂಡಿದೆ. ಹಣ್ಣು ತರಕಾರಿಗಳ ಬೆಲೆಗಳೂ ತಾನೇನೂ ಕಡಿಮೆಯಿಲ್ಲ ಎನ್ನುವ ಮಟ್ಟಕ್ಕೆ ಏರಿಕೆ ಕಂಡಿದೆ ಜನಸಾಮಾನ್ಯರ ನಿತ್ಯ ಜೀವನಕ್ಕೆ ಮಾರಕವಾಗ ಬಹುದಾದ ಅನೇಕ ಸಂಗತಿಗಳು ದೇಶದಲ್ಲಿ ನಡೆಯುತ್ತಿವೆ.

ವಿಚಿತ್ರ ಎಂದರೆ, ಈ ಎಲ್ಲ ಸಂಗತಿಗಳ ಕುರಿತು ದೇಶದ ಜನರ ಪ್ರತಿಕ್ರಿಯೆ ಮಾತ್ರ ಇಲ್ಲವೇ ಇಲ್ಲ ಅಥವಾ ಪ್ರತಿಕ್ರಿಯೆ ಬಹಳ ತಣ್ಣಗಿದೆ ಎಂದು ಹೇಳಬಹುದು. ಕಾರಣ ಸರಳ, ದೇಶದ ಜನ ಐಪಿಎಲ್ ವೀಕ್ಷಣೆಯಲ್ಲಿ ನಿರತರಾಗಿದ್ದರು. ರಾಜ್ಯದ ಜನ ಮುಖ್ಯಮಂತ್ರಿಯ ಬದಲಾವಣೆಯ ಪ್ರಹಸನವನ್ನು ನೋಡುವುದರಲ್ಲಿ ಬ್ಯೂಸಿಯಾಗಿದ್ದರು ಅಂತ ಕಾಣುತ್ತದೆ. ಅದು ಹಾಗೇ, ’Provide them food and entertainment, they will never protest’ ಅಂತ ಯಾರೋ ಮಹಾನುಭಾವ ಅತ್ಯಂತ ಸರಿಯಾ ಗಿಯೇ ಹೇಳಿದ್ದಾನೆ. Entertainment ಅಂದರೆ ಅದು ಸಿನೆಮಾ ಇರಬಹುದು, ಕ್ರಿಕೆಟ್ ನಂತಹ ಕ್ರೀಡೆಯಿರಬಹುದು ಅಥವಾ ರಾಜಕಾರಣದ ಪ್ರಹಸನಗಳಿರಬಹುದು, ಜನಕ್ಕೆ ಮನರಂಜನೆ ಬೇಕು ಅಷ್ಟೇ!

Food ನ್ನಂತೂ ಗ್ಯಾರಂಟಿಗಳು, ಭಾಗ್ಯಗಳು ಸುಲಭವಾಗಿ ಒದಗಿಸುತ್ತಲೇ ಇದೆ. ಇನ್ನೇನು ಬೇಕು ನಮಗೆ ಹೇಳಿ?ಕರ್ನಾಟಕದಲ್ಲೂ ಸದ್ಯದಲ್ಲಿ ಇಂಥಾ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಸಿದ್ದರಾಮಯ್ಯನವರು ಅಧಿಕಾರ ತ್ಯಾಗ ಮಾಡುವ ಸ್ವಲ್ಪ ಮುಂಚೆ ರಾಜ್ಯದಲ್ಲಿ ಕನಿಷ್ಠ ವೇತನ ವನ್ನು ನ್ಯಾಯಾಲಯದ ಆದೇಶವನ್ನೂ ಕಡೆಗಣಿಸಿ ಸಾರ್ವಕಾಲಿಕ ಮಟ್ಟಕ್ಕೆ ಏರಿಕೆ ಮಾಡಿ ಹೋಗಿದ್ದಾರೆ.

ಬೆಂಗಳೂರಿನಂತಹ ನಗರದಲ್ಲಿ ಕನಿಷ್ಠವೇತನ ಶೇ.60ಕ್ಕಿಂತಲೂ ಹೆಚ್ಚಿಗೆ ಏರಿಕೆಯಾಗಿದೆ ಮತ್ತು ಈ ಏರಿಕೆ ರಾಜ್ಯದ ಕೈಗಾರಿಕಾ ಬೆಳವಣಿಗೆಯ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ, ಇದರ ಕುರಿತು ಕರ್ನಾಟಕದ ಜನರಿಗೆ ಖಬರೇ ಇಲ್ಲ. ಮುಖ್ಯ ಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದರು ಎಂದು ಒಂದು ವಲಯ ಬೇಸರ ದಲ್ಲಿದ್ದರೆ, ಇನ್ನೊಂದು ವಲಯ ಡಿ.ಕೆ. ಶಿವಕುಮಾರ್‌ರವರು ಅಂತೂ ಮುಖ್ಯಮಂತ್ರಿಯಾದರು ಎಂದು ಸಂಭ್ರಮಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ. ಈ ಅಧಿಸೂಚನೆಯಿಂದ ಬಾಧಿತರಾಗು ವವರು ಹಾಗೂ ಅನುಕೂಲ ಪಡೆದುಕೊಳ್ಳುವವರು ಇಬ್ಬರೂ ತಣ್ಣಗಿದ್ದಂತೆ ಕಾಣುತ್ತಿದೆ.

ಇದನ್ನೂ ಓದಿ: Vinayaka M Bhat Column: ಬಿರು ಬೇಸಿಗೆಯನ್ನೂ ಸಹನೀಯವಾಗಿಸುವ ಅಮರಫಲ

ಮೇ 22ನೇ ತಾರೀಖಿನಂದು ಕನಿಷ್ಠ ವೇತನದಲ್ಲಿ ಸರಿ ಸುಮಾರು ಶೇ.60ಕ್ಕೆ ಏರಿಕೆ ಮಾಡಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆ ಅಧಿಸೂಚನೆಯೊಂದನ್ನು ಹೊರಡಿಸಿತು. ಹೀಗೆ ಹೇಳಿದರೆ ಎಲ್ಲರಿ ಗೂ ಅರ್ಥವಾಗಲಿಕ್ಕಿಲ್ಲ, ಸ್ವಲ್ಪ ಬಿಡಿಸಿ ಹೇಳೋಣ. ಕನಿಷ್ಠವೇತನ ಕಾಯಿದೆಯ ಪ್ರಕಾರ ಯಾವುದೇ ಕೆಲಸಕ್ಕೆ ಕನಿಷ್ಠ ಇಂತಿಷ್ಟು ಅಂತ ವೇತನವನ್ನು ಕೋಡಲೇಬೇಕಾಗುತ್ತೆ. ಆ ಕನಿಷ್ಠ ವೇತನದ ದರವು ಬೇರೆ ಬೇರೆ ಕೆಲಸಗಳಿಗೆ ಹಾಗೂ ನೈಪುಣ್ಯತೆಯ ಸ್ಥರದ ಆಧಾರದ ಮೇಲೆ ಬೇರೆ ಬೇರೆಯಾಗಿ ರುತ್ತವೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ಕನಿಷ್ಠವೇತನ ಅಲ್ಲಿನ ಶ್ರಮಿಕರ ಲಭ್ಯತೆಯ ಆಧಾರದಲ್ಲಿ ಹೆಚ್ಚು ಕಡಿಮೆ ಇರುತ್ತದೆ.

ಸಾಮಾನ್ಯವಾಗಿ ಮೆಟ್ರೋ ಸಿಟಿಗಳಲ್ಲಿ ಅದರಲ್ಲೂ ದೆಹಲಿಯಲ್ಲಿ ಕನಿಷ್ಠವೇತನದ ದರವು ಯಾವಾ ಗಲೂ ಹೆಚ್ಚಿರುತ್ತದೆ. ಕಾರಣ ಅಲ್ಲಿ ಶ್ರಮಿಕರ ಲಭ್ಯತೆ ಕಡಿಮೆ, ವಲಸೆ ಕಾರ್ಮಿಕರ ಮೇಲೆಯೇ ದೆಹಲಿಯ ಉದ್ದಿಮೆಗಳು ನಡೆಯಬೇಕು ಎನ್ನುವುದು ಒಂದು ಕಾರಣವಾದರೆ, ಅಲ್ಲಿನ ದುಬಾರೀ ಜೀವನ ನಿರ್ವಹಣೆ ಇನ್ನೊಂದು ಕಾರಣ.

ಕರ್ನಾಟಕದಲ್ಲಿ ಕಾರ್ಮಿಕರ ತಿಂಗಳ ಕನಿಷ್ಠವೇತನ ಈಗ ಇಪ್ಪತ್ತು ಸಾವಿರವಿದ್ದರೆ, ಇನ್ನುಮೇಲೆ ಅದು 32 ಸಾವಿರದಷ್ಟಾಗಲಿದೆ. ಈಗ ಕರ್ನಾಟಕದ ಕನಿಷ್ಠವೇತನ ದೇಶದಲ್ಲಿಯೇ ಅತಿ ಹೆಚ್ಚಾದಂತಾ ಗಿದೆ. ಕಾರ್ಮಿಕರು, ಉದ್ದಿಮೆ ದಾರರು ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡಿರುವ ಕನಿಷ್ಠವೇತನ ಸಲಹಾ ಮಂಡಳಿಯ ಸಲಹೆಯ ಆಧಾರದಲ್ಲಿ ಕನಿಷ್ಠವೇತನವನ್ನು ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ ಹಾಗೂ ವಾರ್ಷಿಕವಾಗಿ ಜೀವನ ವೆಚ್ಚದ ಸೂಚ್ಯಂಕ ದ (Cost of living index) ಆಧಾರದಲ್ಲಿ ತುಟ್ಟಿಭತ್ಯೆಯನ್ನು ಏರಿಸಲಾಗುತ್ತದೆ.

ಹೊಸ ಕೈಗಾರಿಕೆಗಳನ್ನು ಆಕರ್ಷಿಸುವಲ್ಲಿ ಕರ್ನಾಟಕವು ನಿರಂತರವಾಗಿ ಮುಂಚೂಣಿಯಲ್ಲಿದೆ. ಸಾಫ್ಟ್‌ʼವೇರ್, ಆರೋಗ್ಯ ಮತ್ತು ಭಾರತದ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಬೆಂಗಳೂರು ಭಾರತದ ಕಿರೀಟ ರತ್ನವಾಗಿದೆ. ಆರೋಗ್ಯಕರ ಕೈಗಾರಿಕಾ ಸಂಬಂಧಗಳ ವಾತಾವರಣವನ್ನು ಕಾಪಾಡಿಕೊಳ್ಳು ವುದು, ಹೂಡಿಕೆದಾರ ಸ್ನೇಹಿ ವಾತಾವರಣ ಹಾಗೂ ಕೈಗಾರಿಕಾ ವಿವಾದಗಳನ್ನು ತ್ವರಿತವಾಗಿ ಪರಿಹರಿಸುವುದು ಮುಂತಾದ ಹಲವಾರು ಮಾನದಂಡಗಳಲ್ಲಿ ಕರ್ನಾಟಕವು ದೇಶದಲ್ಲಿ ಮುಂಚೂಣಿಯಲ್ಲಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ 81 ಅನುಸೂಚಿತ ಉದ್ಯೋಗಗಳಲ್ಲಿ ಕನಿಷ್ಠ ವೇತನವನ್ನು ತೀವ್ರವಾಗಿ ಪರಿಷ್ಕರಿಸಿರುವ (ಮೇ 22,2026) ಅಂತಿಮ ಅಧಿಸೂಚನೆಯಿಂದಾಗಿ ಈ ಎಲ್ಲ ಸಾಧನೆಗಳಿಗೆ ತೀವ್ರ ಧಕ್ಕೆಯುಂಟಾಗಬಹುದು ಎನ್ನುವುದು ಹಲವರ ಅಂಬೋಣ. ಮೇ ೨೨ರ ಅಂತಿಮ ಅಧಿಸೂಚನೆಗೆ ಕಾರಣವಾದ ಘಟನೆಗಳ ಸಂಕ್ಷಿಪ್ತ ಹಿನ್ನೆಲೆ:

ಕರ್ನಾಟಕ ಸರಕಾರವು ಕನಿಷ್ಠ ವೇತನ ಕಾಯ್ದೆಯಡಿ ಏಪ್ರಲ್ 4, 2025ರಂದು 81 ಅನುಸೂಚಿತ ಉದ್ಯೋಗಗಳಲ್ಲಿ ಏಕರೂಪದ ಕನಿಷ್ಠ ವೇತನವನ್ನು ನಿಗದಿಪಡಿಸಲು ಸಾಮಾನ್ಯ ಅಧಿಸೂಚನೆ ಯನ್ನು ಹೊರಡಿಸಲು ಪ್ರಸ್ತಾಪಿಸಿತ್ತು. ಸರಕಾರದ ಈ ಪ್ರಸ್ತಾಪವನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಲಾಯಿತು. ಆಗ ಹೈಕೋರ್ಟ್ ಈ ಕೆಳಗಿನ ಆದೇಶವನ್ನು ಹೊರಡಿಸಿತ್ತು.

೨

ಕನಿಷ್ಠ ವೇತನ ಕಾಯ್ದೆ 1948ರ ಉದ್ದೇಶಕ್ಕೆ ವಿರುದ್ಧವಾಗಿ, ಉದ್ಯಮಗಳ ಅನಿಸಿಕೆಗಳನ್ನು ಲೆಕ್ಕಿಸದೆ ಏಕರೂಪದ ವೇತನವನ್ನು ನಿಗದಿಪಡಿಸಲು ಸರಕಾರ ಪ್ರಸ್ತಾಪಿಸುತ್ತಿದೆ. ಸದರಿ ಪ್ರಸ್ತಾವನೆಗೆ, ಅರ್ಜಿ ದಾರರು ಈಗಾಗಲೇ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ ಮತ್ತು ಪ್ರತಿವಾದಿಗಳ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಲು ಸರಕಾರವು ಇನ್ನೂ ಸಭೆ ಕರೆದಿಲ್ಲ ಎಂದು ತನ್ನ ಅನಿಸಿಕೆಗಳನ್ನು ಹೇಳಿತ್ತು. ಆಗ, ಸಂಬಂಧಪಟ್ಟ ಉದ್ಯಮದ ಪ್ರತಿನಿಧಿಗಳ ಜತೆ ಸಭೆ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸದ ಹೊರತು ಯಾವುದೇ ಮುಂದಿನ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಸರಕಾರಿ ವಕೀಲರು ನ್ಯಾಯಾಲಯದ ಮುಂದೆ ಹೇಳಿಕೆಯನ್ನೂ ನೀಡಿದ್ದರು.

ಈ ಸಂದರ್ಭಗಳಲ್ಲಿ ಸರಕಾರ ಹೊಸ ಅಧಿಸೂಚನೆಯನ್ನು ಹೊರಡಿಸಿ ಜಾರಿಗೆ ತರಲು ಪ್ರಯತ್ನಿಸಿ ದರೆ, ಸೂಕ್ತ ಪರಿಹಾರವನ್ನು ಪಡೆಯಲು ಅರ್ಜಿದಾರರು ಈ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಘನ ನ್ಯಾಯಾಲಯ ತೀರ್ಪು ನೀಡಿತ್ತು. ಹೈಕೋರ್ಟ್ʼನ ಸ್ಪಷ್ಟ ನಿರ್ದೇಶನದ ಹೊರತಾಗಿಯೂ, ಸರಕಾರವು ನ್ಯಾಯಾಲಯದ ಅನುಮತಿಯನ್ನು ಪಡೆಯದೆ ಮೇ 22, 2026ರಂದು ಅಂತಿಮ ಅಧಿಸೂಚನೆಯನ್ನು ಹೊರಡಿಸಿತು. ಸರಕಾರದ ಈ ಕ್ರಮವು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲಾಗುತ್ತಿದೆ.

ಏತನ್ಮಧ್ಯೆ, ಕೇಂದ್ರ ಸರಕಾರವು ನವೆಂಬರ್ 21, 2025ರಂದು ವೇತನ ಸಂಹಿತೆಯನ್ನು ಅಧಿಸೂಚಿ ಸಿತು, ಇದರಿಂದಾಗಿ ಕನಿಷ್ಠ ವೇತನ ಕಾಯ್ದೆ 1948 ರದ್ದಾದಂತಾಯಿತು. ವೇತನ ಸಂಹಿತೆಯು ಅನುಸೂಚಿತ ಉದ್ಯೋಗಗಳ ಪರಿಕಲ್ಪನೆಯನ್ನು ರದ್ದುಗೊಳಿಸಿರುವುದರಿಂದ, ರದ್ದುಪಡಿಸಿದ ಕನಿಷ್ಠ ವೇತನ ಕಾಯ್ದೆಯಡಿ ಸರಕಾರವು ಹೊರಡಿಸಿದ ಅಧಿಸೂಚನೆಯು ನಿಷ್ಪ್ರಯೋಜಕ ವಾಗುತ್ತದೆ.

ಇದಲ್ಲದೆ, ವೇತನ ಸಂಹಿತೆಯ ಅಡಿಯಲ್ಲಿ, ಕೇಂದ್ರ ಸರಕಾರವು ಮೂಲ ವೇತನವನ್ನು (National floor wage) ನಿಗದಿ ಪಡಿಸಿದ ನಂತರವೇ ರಾಜ್ಯ ಸರಕಾರ ಕನಿಷ್ಠ ವೇತನವನ್ನು ಪರಿಷ್ಕರಿಸ ಬಹುದಾಗಿದೆ. ಹಾಗಾಗಿ, ಮೇ 22, 2026ರ ಕರ್ನಾಟಕ ಸರಕಾರದ ಅಂತಿಮ ಅಧಿಸೂಚನೆ ಯು ಕಾನೂನು ದೌರ್ಬಲ್ಯಗಳಿಂದ ಕೂಡಿದೆ ಎನ್ನಲಡ್ಡಿಯಿಲ್ಲ.

ಈ ಅಧಿಸೂಚನೆಯಲ್ಲಿನ ದರಗಳು ಅತ್ಯಂತ ಹೆಚ್ಚಾಗಿವೆ ಮತ್ತು ಒಟ್ಟಾರೆಯಾಗಿ ವ್ಯವಹಾರಕ್ಕೆ ಮತ್ತು ಉದ್ಯೋಗದಾತರಿಗೆ ದೊಡ್ಡ ಹೊಡೆತವನ್ನು ನೀಡುತ್ತದೆ, ಇತರ ವೆಚ್ಚಗಳ ಹೆಚ್ಚಳದಿಂದಾಗಿ ಈಗಾ ಗಲೇ ಉದ್ಯೋಗದಾತರು ಪರಿತಪಿಸುತ್ತಿರುವಾಗ, ಇಂತಹ ತೀವ್ರ ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಾಗಿದೆ, ಶಿವರಾತ್ರಿಯ ಮನೆಗೆ ಏಕಾದಶಿ ಬಂದಂತಾಗಿದೆ ಎನ್ನುವುದು ಉದ್ದಿಮೆಗಳ ದೂರು.

ಈಗಾಗಲೇ ರಾಜ್ಯದಲ್ಲಿ ಹೆಚ್ಚಿನ ಕನಿಷ್ಠ ವೇತನವಿರುವಾಗ ಮತ್ತೆ ಶೇ.60ರಷ್ಟು ಹೆಚ್ಚಿಸುವ ಸರಕಾರದ ಪ್ರಸ್ತಾಪವು ಸಣ್ಣ ಕೈಗಾರಿಕೆಗಳು, ಸಣ್ಣ ಉದ್ಯಮಗಳು, ಅಂಗಡಿಯವರ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಇದಲ್ಲದೆ, ಕನಿಷ್ಠ ವೇತನವು ರಾಜ್ಯದಾದ್ಯಂತ ಅನ್ವಯವಾಗುವುದರಿಂದ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಉದ್ಯಮಗಳು, ಸಣ್ಣ ಕೈಗಾರಿಕೆಗಳು ಮತ್ತು ಸಣ್ಣ ಅಂಗಡಿಯವರ ಮೇಲೆ ಕೆಟ್ಟ ಪರಿಣಾಮ ಬೀರುವುದರ ಮೂಲಕ ಕರ್ನಾಟಕದ ಒಟ್ಟಾರೆ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರಲಿವೆ ಎನ್ನುವುದು ತಜ್ಞರ ಅಭಿಪ್ರಾಯ.

ಕನಿಷ್ಠ ವೇತನದಲ್ಲಿನ ಈ ಹೆಚ್ಚಳವು ಸುಮಾರು ಶೇ.90ರಷ್ಟು ಉದ್ಯೋಗವನ್ನು ಒದಗಿಸುವ ಸಣ್ಣ ಕೈಗಾರಿಕೆಗಳು ಸೇರಿದಂತೆ ಎಲ್ಲ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕನಿಷ್ಠ ವೇತನ ಹೆಚ್ಚಳವನ್ನು ಪ್ರಸ್ತಾಪಿಸಿದಂತೆ ಜಾರಿಗೆ ತಂದರೆ, ಸಣ್ಣ ಉದ್ಯಮಗಳು ವಿಶೇಷವಾಗಿ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿರುವವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ವೇತನ ಹೆಚ್ಚಳದ ಸ್ಪಷ್ಟ ಪರಿಣಾಮವು ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಬಳಕೆದಾರರು ಖಂಡಿತವಾಗಿಯೂ ತಮ್ಮ ಅವಶ್ಯಕತೆಗಳನ್ನು ಇತರ ರಾಜ್ಯಗಳಿಂದ ಪಡೆಯು ವಂತಾಗುತ್ತದೆ. ಆಗ ಕರ್ನಾಟಕದಲ್ಲಿ ಬಿಡಿಭಾಗಗಳನ್ನು ತಯಾರಿಸುವ ಉದ್ದಿಮೆಗಳ ಸಂಖ್ಯೆ ಕುಸಿಯುತ್ತದೆ ಮತ್ತು ಅಂತಹ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಉದ್ಯೋಗ ವನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ತಜ್ಞರುಗಳು ಸರಕಾರವನ್ನು ಎಚ್ಚರಿಸುತ್ತಿದ್ದಾರೆ.

ಮಹಾರಾಷ್ಟ್ರ ಸೇರಿದಂತೆ ಎಲ್ಲ ನೆರೆಯ ರಾಜ್ಯಗಳು ಕನಿಷ್ಠ ವೇತನದ ದರವನ್ನು ಕಡಿಮೆ ಹೊಂದಿವೆ. ಕರ್ನಾಟಕದಲ್ಲಿ ಕನಿಷ್ಠ ವೇತನದ ದರಗಳು ಈಗಾಗಲೇ ದಕ್ಷಿಣದ ರಾಜ್ಯಗಳಲ್ಲಿ ಅತ್ಯಧಿ ಕವಾಗಿವೆ ಮತ್ತು ನವದೆಹಲಿಯ ನಂತರ ದೇಶದಲ್ಲಿ ಎರಡನೇ ಸ್ಥಾನದಲ್ಲಿವೆ, ಕನಿಷ್ಠ ವೇತನವನ್ನು ಮತ್ತಷ್ಟು ಹೆಚ್ಚಿಸಿದರೆ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಿಂಜರಿಯು ವಂತಾಗುತ್ತದೆ, ಇದರಿಂದಾಗಿ ನೌಕರರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಾರೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಮೇಲಿನ ಎಲ್ಲ ಕಾರಣಗಳಿಗಾಗಿ, ಸರಕಾರವು ಮೇ 22, 2026ರ ಅಂತಿಮ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕೈಗಾರಿಕೆಗಳು ಮತ್ತು ಅವುಗಳ ಸಂಘಗಳೊಂದಿಗೆ ತಕ್ಷಣವೇ ಸಮಾಲೋಚಿಸಬೇಕು ಮತ್ತು ನಂತರ ಕೇಂದ್ರ ಸರಕಾರವು ವೇತನ ಸಂಹಿತೆಯ ಅಡಿಯಲ್ಲಿ ಮೂಲ ವೇತನವನ್ನು ನಿಗದಿಪಡಿಸಿದ ನಂತರವೇ ಹೊಸ ಕರಡು ಅಧಿಸೂಚನೆಯನ್ನು ಹೊರಡಿಸಬೇಕು ಎನ್ನುವುದು ಕರ್ನಾಟಕದ ಔದ್ಯೋಗಿಕವಲಯದ ಕೋರಿಕೆಯಾಗಿದೆ. ಈ ಕುರಿತು ಅನೇಕ ಸಂಘ ಸಂಸ್ಥೆಗಳು ಈಗಾಗಲೇ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿಯಾಗಿದೆ.

ಚುನಾವಣೆಗಳು ಹಾಗೂ ಇತರ ರಾಜಕೀಯ ಕಾರಣಗಳಿಗಾಗಿ ಸರಕಾರಗಳು ಈ ರೀತಿಯ ಕಾರ್ಮಿಕರ ಪರವಾದ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ನಾವು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇವೆ. 2008ರಲ್ಲಿ ಉಪಚುನಾವಣೆಯ ಸಂದರ್ಭದಲ್ಲಿ ಏಕಾಏಕಿ ಕಾರ್ಮಿಕರ ನಿವೃತ್ತಿಯ ವಯಸ್ಸನ್ನು 58 ರಿಂದ 60ಕ್ಕೆ ಏರಿಸಿ ಸಿದ್ದರಾಮಯ್ಯ ಸರಕಾರ ವ್ಯಾಪಕ ಟೀಕೆಗೊಳ ಗಾಗಿತ್ತು.

ಸರಕಾರವೇನೋ ನಿವೃತ್ತಿ ವಯಸ್ಸನ್ನು ಏಕಾಏಕಿ 60ಕ್ಕೇರಿಸಿ ಅದರ ರಾಜಕೀಯ ಲಾಭವನ್ನೂ ಪಡೆಯಿತು, ಅದರೆ ಕೈಗಾರಿಕಾ ಸಂಸ್ಥೆಗಳು ಹಾಗೂ ಕಾರ್ಮಿಕರು ಇನ್ನೂ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ. ಇದರಿಂದಾಗಿ ಔದ್ಯಮಿಕ ಶಾಂತಿಗೂ ಧಕ್ಕೆ ಬರುವಂತಾಗಿತ್ತು. ಉದ್ಯಮಸ್ನೇಹಿ ವಾತಾವರಣದ ಕೊರತೆಯಿಂದಾಗಿ ಈಗಾಗಲೇ ಹೊಸ ಉದ್ದಿಮೆಗಳು ರಾಜ್ಯದಲ್ಲಿ ಹೂಡಿಕೆಮಾಡಲು ಹಿಂದೇಟು ಹಾಕುತ್ತಿವೆ. ಉದ್ಯೋಗ ಸೃಷ್ಟಿಸಬಹುದಾಗಿದ್ದ ಅನೇಕ ಉದ್ದಿಮೆಗಳು ನೆರೆ ರಾಜ್ಯಗಳ ಪಾಲಾಗುತ್ತಿವೆ.ಮುಂಬರುವ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ

ಚುನಾವಣೆಯನ್ನು ಗುರಿಯಾಗಿರಿಸಿ ಈಗ ಮತ್ತೆ ಕಾಂಗ್ರೆಸ್ ಸರಕಾರ ಅತಾರ್ಕಿಕವಾಗಿ ಕನಿಷ್ಠ ವೇತನವನ್ನು ಹೆಚ್ಚಿಸುವುದರ ಮೂಲಕ ಕರ್ನಾಟಕದಲ್ಲಿ ಉದ್ದಿಮೆಗಳ ಬೆಳವಣಿಗೆಗಳ ಮೇಲೆ ಮಾರಣಾಂತಿಕ ಪೆಟ್ಟುಕೊಟ್ಟಿದೆ. ಹೆಚ್ಚಿದ ವೆಚ್ಚವನ್ನು ಸರಿದೂಗಿಸುವ ದೃಷ್ಟಿಯಿಂದ ಉದ್ದಿಮೆಗಳು ಕಾರ್ಮಿಕರ ಸಂಖ್ಯೆಯಲ್ಲಿ ಕಡಿತಗೊಳಿಸುವ ಕ್ರಮಕ್ಕೆ ಮುಂದಾದರೂ ಅಚ್ಚರಿಯಿಲ್ಲ. ಆಗ ನಿರುದ್ಯೋಗ ಎನ್ನುವುದು ರಾಜ್ಯದಲ್ಲಿ ಇನ್ನೂ ಹೆಚ್ಚಾಗಲಿದೆ ಎನ್ನುವ ಪ್ರಜ್ಞೆ ಸರಕಾರಕ್ಕಿರ ಬೇಕಾಗಿತ್ತೇನೋ!

ಕಾರ್ಮಿಕರ ಜೀವನ ನಿರ್ವಹಣೆಯ ದೃಷ್ಟಿಯಿಂದ ನೋಡುವಾಗ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಆಗಬೇಕಿರುವುದು ಸರಿಯೇ ಆಗಿದೆ. ಆದರೆ, ಇಂಥಹ ಅತಾರ್ಕಿಕ ಮತ್ತು ಅವೈಜ್ಞಾನಿಕ ಪರಿಷ್ಕರಣೆ ಯಿಂದ ಉದ್ಯೋಗದಾತರ, ಉದ್ಯೋಗಿಗಳ ಹಾಗೂ ಸರಕಾರದ ನಡುವೆ ಸಂಘರ್ಷಕ್ಕೆ ಕಾರಣ ವಾಗುತ್ತದೆ ಎನ್ನುವುದನ್ನೂ ಮರೆಯುವಹಾಗಿಲ್ಲ. ಒಂದು ಕಡೆ ರಸ್ತೆ ಸಾರಿಗೆ ಸಂಸ್ಥೆಗೆ ಪರಿಷ್ಕೃತ ವೇತನದ ಪಾವತಿಯಲ್ಲಿ ಸರಕಾರ ಚೌಕಾಸಿ ಮಾಡುತ್ತಿರುವಾಗ, ಉದ್ದಿಮೆಗಳು ಮಾತ್ರ ಸರಕಾರ ಹೇಳುವ ಹೆಚ್ಚಿನ ವೇತನವನ್ನು ಪಾವತಿ ಮಾಡಬೇಕು ಎನ್ನುವುದು ಒಂದು ರೀತಿಯಲ್ಲಿ ಸರಕಾರದ ಸರ್ವಾಧಿಕಾರಿ ಧೋರಣೆಯಾಗದೇ?

ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ, ಕಾರ್ಮಿಕ ಸಚಿವರೂ ಹೊಸಬರೊಬ್ಬರು ಬರಬಹುದು ಎನ್ನುವ ನಿರೀಕ್ಷೆಯಿದೆ, ನ್ಯಾಯಾಲಯದ ತೀರ್ಪನ್ನೂ ಗಾಳಿಗೆ ತೂರಿ, ಸಿದ್ದರಾಮಯ್ಯ ಸರಕಾರ ಅವಸರವಸರದಲ್ಲಿ ಹೊರಡಿಸಿದ ಕನಿಷ್ಠವೇತನದ ಅವೈಜ್ಞಾನಿಕ ಅಧಿಸೂಚನೆಯನ್ನು ಕರ್ನಾಟಕ ರಾಜ್ಯದ ಔದ್ಯಮಿಕ ವಲಯದ ಹಾಗೂ ಕಾರ್ಮಿಕರ ಒಟ್ಟಾರೆ ಹಿತವನ್ನು ಗಮನದಲ್ಲಿರಿಸಿ ಪುನರ್‌ ಪರಿಶೀಲಿಸಬಹುದು ಎಂದು ನಿರೀಕ್ಷಿಸೋಣ.

ವಿನಾಯಕ ವೆಂ ಭಟ್ಟ

View all posts by this author