ಶಶಾಂಕಣ
ಇದೊಂದು ವಿಷಯವನ್ನು ನಾನು ಹೇಳಿದರೆ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ; ಅದೇನೆಂದರೆ, ಪದವಿ ತರಗತಿಯ ಮೂರು ವರ್ಷಗಳಲ್ಲಿ ನಾನು ಪಠ್ಯಪುಸ್ತಕ ಓದಿದ್ದಕ್ಕಿಂತ ಪಠ್ಯೇತರ ಪುಸ್ತಕಗಳನ್ನು ಓದಿದ್ದೇ ಹೆಚ್ಚು. ಅದಕ್ಕೆ ಪುರಾವೆ ಬೇಕಿದ್ದರೂ ಕೊಡಬಲ್ಲೆ- ನನ್ನ ಪದವಿ ತರಗತಿಯ ಅಂಕಪಟ್ಟಿಯನ್ನು ನೋಡಿದರೆ, ಈತ ಇದೇನು ಇಷ್ಟು ಕಡಿಮೆ ಅಂಕ ಗಳಿಸಿದ್ದಾನೆ ಎಂದು ನಿಮಗೇ ಅಚ್ಚರಿಯಾಗಬಹುದು.
ಇಲ್ಲಿ ನೀವು ಒಂದು ಪ್ರಶ್ನೆ ಕೇಳಬಹುದು- ‘ಪದವಿ ಕಾಲೇಜಿಗೆ ಹೋಗಿದ್ದ ಮುಖ್ಯ ಉದ್ದೇಶವೇ ಪದವಿ ಪಡೆಯುವುದು, ಅದರಲ್ಲಿ ಹೆಚ್ಚಿನ ಅಂಕ ಪಡೆಯುವುದು; ಹಾಗಿದ್ದಾಗ, ಅದಕ್ಕಾಗಿ ಪಠ್ಯ ಪುಸ್ತಕಗಳನ್ನು ಓದುವುದು ಬಿಟ್ಟು, ಇತರೆ ಪುಸ್ತಕಗಳನ್ನು ಅದೇಕೆ ಅಷ್ಟೊಂದು ಸಂಖ್ಯೆಯಲ್ಲಿ ಓದಿರುವಿರಿ? ಅಸಲು, ಬೇರೆ ಬೇರೆ ಪುಸ್ತಕಗಳು ಅಷ್ಟೊಂದು ಪ್ರಮಾಣದಲ್ಲಿ ನಿಮಗೆ ಸಿಕ್ಕಿದ್ದಾದರೂ ಎಲ್ಲಿ?’ ಎಂದು.
ಇದನ್ನು ವಿವರಿಸುತ್ತಾ ಹೋದರೆ, ಅದೇ ದೊಡ್ಡ ಕಥೆಯಾದೀತು ಮತ್ತು ಈ ಬರಹದ ವ್ಯಾಪ್ತಿಯಲ್ಲಿ ನಾನೇನು ಹೇಳಲು ಹೊರಟಿದ್ದೇನೋ, ಆ ವಿಷಯವನ್ನೇ ಮಸುಕು ಮಾಡೀತು. ಆದ್ದರಿಂದ, ಸಂಕ್ಷಿಪ್ತವಾಗಿ ನಾನು ಪದವಿ ತರಗತಿ ಓದಿದ ವಿಧಾನ ತಿಳಿಸುವೆ. 12ನೇ ತರಗತಿ ತನಕ (ಪಿಯುಸಿ) ನಮ್ಮ ಹಳ್ಳಿಯ ಮನೆಯಲ್ಲಿದ್ದುಕೊಂಡು, ನಮ್ಮ ಅಮ್ಮಮ್ಮನ ಹದ್ದಿನ ಕಣ್ಣಿನ ಶಿಸ್ತಿನಲ್ಲಿ ಶಾಲೆಗೆ ಹೋಗಿದ್ದ ನನಗೆ, ಒಮ್ಮೆಗೆ ಅಗತ್ಯಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ದೊರಕಿದ್ದು, ಪದವಿ ತರಗತಿಗಳಿಗೆ ಸೇರಿಕೊಂಡಾಗ.
ಇದನ್ನೂ ಓದಿ: Shashidhara Halady Column: ತೆರೆಮರೆಗೆ ಸರಿಯುತಿದೆ ಪೇಪರ್ ಓದುವ ಹವ್ಯಾಸ !
ನಮ್ಮ ಮನೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದ ತಾಲೂಕು ಕೇಂದ್ರದಲ್ಲಿದ್ದ ಕಾಲೇಜಿಗೆ ಪದವಿ ತರಗತಿಗೆ ನಾನು ಸೇರ್ಪಡೆಗೊಂಡಾಗ, ಪ್ರತಿದಿನ ಮನೆಯಿಂದಲೇ ಕಾಲೇಜಿಗೆ ಹೋಗಿ ಬರುವಷ್ಟು ಸೂಕ್ತ ಸಮಯಾವಕಾಶ ಒದಗಿಸುವ ಬಸ್ ಸೌಕರ್ಯ ಇರಲಿಲ್ಲ. ಆದ್ದರಿಂದ, ಕಾಲೇಜಿಗೆ ಒಂದು ಕಿ.ಮೀ. ದೂರ ದಲ್ಲಿ ಇತರ ಇಬ್ಬರು ಸಹಪಾಠಿಗಳ ಜೊತೆ ರೂಮ್ ಮಾಡಬೇಕಾಯಿತು. ಆ ರೂಮಿನಲ್ಲಿ ನಮ್ಮದೇ ಆಡಳಿತ, ನಮ್ಮದೇ ಅಡುಗೆ, ನಮ್ಮದೇ ಪಾರುಪತ್ಯ- ಅಂತಹ ಸ್ವಾತಂತ್ರ್ಯದ ಸುಖವನ್ನು ಜೀವನದಲ್ಲಿ ಅದೇ ಮೊದಲ ಬಾರಿ ಅನುಭವಿಸುತ್ತಿರುವ ರೋಚಕತೆಯಲ್ಲಿ, ಪಠ್ಯಪುಸ್ತಕಗಳ ಆಸಕ್ತಿ ಕಡಿಮೆಯಾಗಿ ಹೋಯಿತು. ಕಥೆ, ಕಾದಂಬರಿ ಮತ್ತು ಇತರ ಪುಸ್ತಕಗಳ ಕುರಿತು ವಿಪರೀತ ಕುತೂಹಲ ಬೆಳೆಯಿತು. ನಿಜ ಹೇಳಬೇಕೆಂದರೆ ವಾರಕ್ಕೆ ಎರಡು ಅಥವಾ ಮೂರು ಕಾದಂಬರಿಗಳನ್ನು ಆಗ ಓದಿ ಬಿಸಾಕುತ್ತಿದ್ದೆ!
ಕೆಲವು ಬಾರಿ ದಿನಕ್ಕೊಂದು ಕಾದಂಬರಿಯನ್ನೂ ಓದಿದ್ದೂ ಉಂಟು; ಅವುಗಳಲ್ಲಿ ಹೆಚ್ಚಿನವು ಪಲ್ಪ್ ಫಿಕ್ಷನ್! ನಡುನಡುವೆ ಕಾರಂತರು, ಕುವೆಂಪು ಮೊದಲಾದವರ ಕಾದಂಬರಿ, ಗಿರಿಯವರ ಗತಿಸ್ಥಿತಿ ಯಂತಹ ಹೊಸ ಪುಸ್ತಕಗಳು, ಇಂಗ್ಲಿಷ್ ಮತ್ತು ಕನ್ನಡದ ಕೆಲವು ಪ್ರವಾಸಕಥನಗಳನ್ನು ಓದಿದ್ದೆ. ಅಷ್ಟೊಂದು ಪ್ರಮಾಣದ ಪುಸ್ತಕಗಳನ್ನು ನನಗೆ ಒದಗಿಸುತ್ತಿದ್ದವರು ಯಾರು ಎಂಬ ಪ್ರಶ್ನೆಗೆ ಉತ್ತರವೆಂದರೆ, ತಾಲೂಕು ಕೇಂದ್ರವಾದ ಕುಂದಾಪುರದ ಮುಖ್ಯ ಬೀದಿಯಲ್ಲಿದ್ದ ಉಚಿತ ಗ್ರಂಥಾಲಯ! ಆ ಗ್ರಂಥಾಲಯವು ನಮ್ಮ ಸರಕಾರದ ಸುಪರ್ದಿನಲ್ಲಿದ್ದರೂ, ಕಟ್ಟಡದ ಗೋಡೆಯ ಮೇಲೆ ಬಹಳ ದಪ್ಪ ಅಕ್ಷರಗಳಲ್ಲಿ ‘ಎಡ್ವರ್ಡ್ ಮೆಮೋರಿಯಲ್ ಲೈಬ್ರರಿ’ ಎಂದು ಬರೆಯಲಾಗಿತ್ತು.
ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಪುರಾತನ ವಾಚನಾಲಯ ಅದು; ಆಗಿನ ಫಲಕ ಹಾಗೇ ಇತ್ತು; ಜತೆಗೆ, ನಮ್ಮ ಸರಕಾರದ ಗ್ರಂಥಾಲಯ ಇಲಾಖೆಯ ಫಲಕಗಳೂ ಇದ್ದವು. ಅಲ್ಲಿ ನಾನಾ ವಿಧದ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳಿದ್ದವು, ಹಲವು ಹಳೆಯ ಪುಸ್ತಕಗಳೂ ಇದ್ದವು. ಅವುಗಳನ್ನು ಎರವಲು ಪಡೆದು, ಓದುವುದೇ ನನ್ನ ಪ್ರಮುಖ ಹವ್ಯಾಸವಾಯಿತು.
ಒಂದು ಸಾರ್ವಜನಿಕ ವಾಚನಾಲಯವು ಹೇಗೆ ಯುಜನತೆಯಲ್ಲಿ ಓದುವ ಅಭಿರುಚಿಯನ್ನು ಬೆಳೆಸಬಲ್ಲದು ಎಂಬುದಕ್ಕೂ ಇದನ್ನು ಉದಾಹರಣೆಯಾಗಿ ಗಮನಿಸಬಹುದು. ಹಲವು ಕನ್ನಡ ಮತ್ತು ಇಂಗ್ಲಿಷ್ ಕಾದಂಬರಿಗಳನ್ನು ಓದಿದ ನಂತರ, ಒಂದು ದಿನ ಅಲ್ಲಿನ ಹಳೆಯ ಪುಸ್ತಕಗಳ ಸಾಲಿನ ಮೇಲೆ ಕಣ್ಣು ಹಾಯಿಸುವಾಗ ‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಕಣ್ಣಿಗೆ ಬಿತ್ತು.
ಹಳೆಯದಾಗಿದ್ದರೂ ಆಕರ್ಷಕ ಮುದ್ರಣ, ಬಣ್ಣದಲ್ಲಿ ಹಕ್ಕಿಯ ಚಿತ್ರಗಳನ್ನು ಹೊಂದಿದ್ದ ಅದನ್ನು ತಕ್ಷಣ ಕೈಗೆತ್ತಿಕೊಂಡೆ. ಪುಟ ತಿರುಗುತ್ತಾ ಹೋದಂತೆ, ನನ್ನ ಮುಂದೆ ಹೊಸ ಪ್ರಪಂಚವನ್ನು ತೆರೆದುಕೊಂಡಿತು. ಅದೇ ಪಕ್ಷಿ ಪ್ರಪಂಚ; ಆ ಅದ್ಭುತ ಪ್ರಪಂಚದ ಕೀಲಿಕೈಯನ್ನು ತೆರೆದುಕೊಟ್ಟ ವರು ಸಲೀಂ ಆಲಿ.
ನಮ್ಮ ಹಳ್ಳಿಯಲ್ಲಿ ನಾನಾ ಪ್ರಭೇದದ ಪಕ್ಷಿಗಳಿವೆ; ನಮ್ಮ ಮನೆಯ ಸುತ್ತಲೂ ಮರಗಿಡಗಳು, ಪೊದೆ, ಕಾಡು, ಹಕ್ಕಲು, ತೋಡು, ತೊರೆ, ನೀರು ನಿಲ್ಲುವ ಗುಮ್ಮಿ, ಅಲ್ಲಲ್ಲಿ ಹುಲ್ಲು ಬೆಳೆಯುವ ಬಯಲು ಎಲ್ಲವೂ ಇತ್ತಲ್ಲ; ಅಂತಹ ವೈವಿಧ್ಯಮಯ ಪರಿಸರದಲ್ಲಿ ಸದಾ ಹಾರಾಡುತ್ತಿದ್ದ ಹಕ್ಕಿಗಳ ಹಾರಾಟ, ಹಾಡು, ವರ್ತನೆಗಳನ್ನು ನಾನು ಗಮನಿಸಿದ್ದರೂ, ಪ್ರತಿ ಪ್ರಭೇದದ ಹೆಸರು ಗೊತ್ತಿರಲಿಲ್ಲ; ನಮ್ಮ ಹಳ್ಳಿಯ ಜನರನ್ನು ಕೇಳಿದರೆ, ಕೆಲವೇ ಕೆಲವು ಹಕ್ಕಿಗಳ ಹೆಸರುಗಳನ್ನು ಮಾತ್ರ ಕೇಳಬಹುದಿತ್ತು; ಜನರಿಗೆ ಲಾಭವಿರುವ ಹಕ್ಕಿಗಳಿಗೆ ಅವರು ಸ್ಪಷ್ಟ ಹೆಸರಿಟ್ಟಿದ್ದರು; ಬೇರೆ ಹಕ್ಕಿಗಳಿಗೆ ಬಿಡುಬೀಸಾದ ಹೆಸರುಗಳು.
ಅದರಲ್ಲೂ ಅಸ್ಪಷ್ಟತೆ; ಉದಾಹರಣೆಗೆ ‘ಪಿಕಳಾರ’ ಎಂದರೆ, ಬುಲ್ ಬುಲ್ ಹಕ್ಕಿಯ ಜೊತೆ ಮೇಲ್ನೋಟಕ್ಕೆ ಅದೇ ರೀತಿ ಕಾಣಿಸುವ ಇತರ ಹಕ್ಕಿಗಳನ್ನೂ ಸೇರಿಸಿದ್ದರು! ಕೊಕ್ಕರೆ ಅಥವಾ ಕೊಕ್ಕಾನಕ್ಕಿ ಎಂದು ನಮ್ಮ ಹಳ್ಳಿಯವರು ಹೆಸರಿಸಿದರೆ, ಎಲ್ಲಾ ಪ್ರಭೇದದ ಕೊಕ್ಕರೆಗಳು ಅದರಲ್ಲಿ ಸೇರಿದಂತೆ. ಕುಪ್ಪಳ, ಮಳೆ ಕೋಂಗಿಲ, ಚಪ್ಪು ಕೋಂಗಿಲ, ಗುಮ್ಮ, ಚಿಟ್‌ಗುಮ್ಮ, ಹಪ್ಪು (ಹದ್ದು), ವಾಂಟ್ರಕ್ಕಿ, ಗುಬ್ಬಚ್ಚಿ, ಗೆರೆ ಹಕ್ಕಿ.. ಈ ರೀತಿಯ ಕೆಲವು ಹೆಸರುಗಳನ್ನು ಬಿಟ್ಟರೆ, ನಮ್ಮ ಹಳ್ಳಿಯಲ್ಲಿದ್ದ ಎಲ್ಲಾ ಹಕ್ಕಿಗಳನ್ನು ಜನಪದರು ಹೆಸರಿಸಿಲ್ಲ.
ಅಲ್ಲಿ ಬಣ್ಣ ಬಣ್ಣದ ರೆಕ್ಕೆ ಇಟ್ಟುಕೊಂಡು ಹಾರುತ್ತಿರುವ ಹಕ್ಕಿ ಯಾವುದು? ಇದರ ಬಗ್ಗೆ, ನಮ್ಮ ಊರಿನ ದೇವ ನಾಯಕನನ್ನು ಕೇಳಿದರೆ, ‘ಎಲ್ಲಾ ಹಕ್ಕಿಗಳಿಗೆ ಹೆಸರಿಡಲು ಆಗುತ್ತಾ? ಇಲ್ಲ. ಎಲ್ಲಾ ಹಕ್ಕಿಗಳ ಹೆಸರು ಕಟ್ಟಿಕೊಂಡು ಏನಾಗಬೇಕು? ತಿನ್ನುವ ಜಾತಿಯ ಹಕ್ಕಿಗೆ ಹೆಸರಿಟ್ಟರೆ ಒಂದು ಅರ್ಥ. ಅದು ಕಾಣಿ, ಗೆರೆ ಹಕ್ಕಿ- ಮಳೆಗಾಲದಲ್ಲಿ ಅದನ್ನು ಹಿಡಿದು ತಿನ್ನಬಹುದು’ ಎಂದು ಉತ್ತರಿಸುತ್ತಿದ್ದ.
ವಾಚನಾಲಯದಲ್ಲಿ ಕಂಡ, ಸಲೀಂ ಆಲಿಯವರು ರಚಿಸಿದ ‘ದ ಬುಕ್ ಆ- ಇಂಡಿಯನ್ ಬರ್ಡ್ಸ್’ ನಲ್ಲಿ, ನೂರಾರು ಹಕ್ಕಿಗಳ ಫೋಟೋ ಮತ್ತು ಪ್ರತಿ ಪ್ರಭೇದದ ಹಕ್ಕಿಯ ಅರ್ಧ ಪುಟದ ವಿವರಣೆ ಇದ್ದುದನ್ನು ಕಂಡು ನನಗಂತೂ ಬಹಳ ಸಂತೋಷವಾಯಿತು. ನಮ್ಮ ಮನೆಯ ಸುತ್ತಮುತ್ತಲೂ ಇರುವ ಹಲವು ಹಕ್ಕಿಗಳ ಚಿತ್ರಗಳನ್ನು ಆ ಪುಸ್ತಕದಲ್ಲಿ ಕಂಡಾಗ ಇನ್ನಷ್ಟು ಖುಷಿ.
ಪ್ರತಿ ಶನಿವಾರ ನಮ್ಮ ಹಳ್ಳಿಗೆ ವಾಪಸ್ ಆಗಿ ಸೋಮವಾರ ಮತ್ತೆ ಕಾಲೇಜಿಗೆ ಹೋಗುತ್ತಿದ್ದೆ. ಆ ಪುಸ್ತಕವನ್ನು ಹಲವು ಬಾರಿ ಎರವಲು ಪಡೆದು, ಮನೆಯ ಸುತ್ತಲೂ ಇದ್ದ ಒಂದೊಂದೇ ಹಕ್ಕಿಗಳನ್ನು ಗುರುತಿಸುತ್ತಾ ಹೋದೆ. ನಮ್ಮ ದೇಶದ ಹಕ್ಕಿಗಳ ಸಮಗ್ರ ವಿವರಗಳನ್ನು ಜನಸಾಮಾನ್ಯ ರಿಗೆ ನೀಡುವ ಆ ಉತ್ತಮ ಪುಸ್ತಕವನ್ನು ಬರೆಯುವ ಮೂಲಕ, ಪಕ್ಷಿ ಪಿತಾಮಹ ಸಲೀಂ ಅಲಿಯವರು ಮಹದುಪಕಾರವನ್ನು ಮಾಡಿದ್ದಾರೆ. ಹಕ್ಕಿಯೊಂದರ ಕುರಿತು ಆ ಪುಸ್ತಕದಲ್ಲಿ ಅವರು ನೀಡಿರುವ ಅರ್ಧ ಪುಟದ ವಿವರಣೆ ಸಹ ಬಹಳ ಆಪ್ತ, ನಿಖರ, ಕರಾರುವಕ್ಕು ಮತ್ತು ನನ್ನಂತಹ ಹವ್ಯಾಸಿಗಳ ಆಸಕ್ತಿಯನ್ನು ಹಿಡಿದಿಟ್ಟು ಕೊಳ್ಳುವಷ್ಟು ಸ್ಪಷ್ಟ.
‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಓದಿ ನಮ್ಮ ಹಳ್ಳಿಯ 50ಕ್ಕೂ ಹೆಚ್ಚು ಹಕ್ಕಿಗಳನ್ನು ಗುರುತಿಸಿದೆ, ಮಾತ್ರವಲ್ಲ, ಅವುಗಳ ಇಂಗ್ಲಿಷ್ ಹೆಸರು ಬಾಯಿಗೆ ಬರುವಷ್ಟು ಪರಿಣಿತನಾದೆ. ಆದರೆ ಇಲ್ಲಿ ಒಂದು ತೊಡಕಿತ್ತು: ಸರಕಾರಿ ಗ್ರಂಥಾಲಯವು ಒಬ್ಬರಿಗೆ ಎರಡು ಪುಸ್ತಕಗಳನ್ನು 15 ದಿನಗಳ ಅವಧಿಗೆ ಮಾತ್ರ ಎರವಲು ಕೊಡುತ್ತಿತ್ತು.
ಇನ್ನೂ ಓದಬೇಕೆನಿಸಿದರೆ, ಆ ಪುಸ್ತಕಕ್ಕೆ ಬೇರೆಯವರ ಬೇಡಿಕೆ ಇಲ್ಲದೇ ಇದ್ದರೆ, ನಾವೇ ಪುನಃ 15 ದಿನ ನವೀಕರಿಸಲು ಅಭ್ಯಂತರವಿರಲಿಲ್ಲ; ನಾನು ಹಲವು ಬಾರಿ 15 ದಿನಗಳ ಅವಽಗೆ ನವೀಕರಿಸಿಕೊಂಡು, ಹಲವು ತಿಂಗಳುಗಳ ಕಾಲ ಆ ಪುಸ್ತಕವನ್ನು ನನ್ನಲ್ಲಿಟ್ಟುಕೊಂಡು, ನಮ್ಮ ಹಳ್ಳಿಯ ಸರಹದ್ದಿನ ಪಕ್ಷಿಗಳನ್ನು ಗುರುತಿಸುತ್ತಾ ಹೋದೆ. ಜೊತೆಯಲ್ಲಿ, ನಾನು ಕಂಡ ಹಕ್ಕಿಗಳ ಕುರಿತು ಟಿಪ್ಪಣಿ ಬರೆಯತೊಡಗಿದೆ; ಸುಮಾರು 200 ಪುಟದ ಒಂದು ಪುಸ್ತಕ ಅಂತಹ ಟಿಪ್ಪಣಿಗಳಿಂದ ತುಂಬಿ ಹೋಯಿತು, ಎಂದರೆ ಅದಾವ ಪರಿಯ ಪಕ್ಷಿ ಹುಚ್ಚು ನನ್ನನ್ನು ಆವರಿಸಿತ್ತು ಎಂದು ನೀವೇ ಊಹಿಸಿ! ಈ ನಡುವೆ, ಸಲೀಂ ಅಲಿ ಅವರ ಪುಸ್ತಕದ ಕೊನೆಯ ಪುಟಕ್ಕೆ ಗ್ರಂಥಾಲಯದವರು ಅಂಟಿಸಿದ್ದ, ಎರವಲು ಪಡೆದವರ ವಿವರ ದಾಖಲಿಸುವ ಹಾಳೆಯು, ನನ್ನ ಸದಸ್ಯತ್ವ ಸಂಖ್ಯೆಯಾದ 325ರಿಂದ ತುಂಬಿ ಹೋಯಿತು!
ಇರಲಿ; ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ ಎನ್ನುತ್ತಾರೆ ತಿಳಿದವರು. ನನ್ನ ಪದವಿ ಅವಧಿ ಮುಗಿದು, ಒಂದು ವರ್ಷದ ನಿರುದ್ಯೋಗ ಪರ್ವ ಕಳೆದ ನಂತರ, ವೃತ್ತಿ ನಿಮಿತ್ತ ಬೇರೆ ಊರಿಗೆ ವಲಸೆ ಹೋಗಬೇಕಾಗಿದ್ದುದರಿಂದ, ನಮ್ಮ ಹಳ್ಳಿಯನ್ನು ತೊರೆಯುವ ದಿನ ಬಂತು. ಆಗ ನನಗೆ, ಆ ಅಪರೂಪದ ಹಕ್ಕಿಗಳ ಪುಸ್ತಕವನ್ನು ನನ್ನಲ್ಲೇ ಇಟ್ಟುಕೊಳ್ಳುವ ಆಸೆ; ಆಗ ಒಂದು ಕುಚೋದ್ಯದ ಯೋಚನೆ ಬಂತು- ಆ ಪುಸ್ತಕವನ್ನು ಗ್ರಂಥಾಲಯದಿಂದ ಎಗರಿಸಿ ಬಿಡಲೇ ಎಂದು! ಅಂದರೆ, ಎರವಲು ಪಡೆದು ನನ್ನ ಬಳಿಯೇ ಇಟ್ಟುಕೊಂಡುಬಿಡುವುದು ಮತ್ತು ನನ್ನ ವಲಸೆಯ ಜತೆಯಲ್ಲೇ ಅದನ್ನೂ ಕೊಂಡೊಯ್ಯುವುದು!
ಸರಕಾರದ ಗ್ರಂಥಾಲಯ ತಾನೆ, ವಾಪಸು ಕೊಡದಿದ್ದರೆ ಆಯಿತು ಎಂಬ ಖತರ್‌ನಾತ್ ಯೋಚನೆ ಅದು; ಆದರೆ ಅಂದು ಒಂದು ವಿವೇಕ ತಡೆಯಿತು; ನನ್ನಂತಹ ಇತರರು ಸಹ ಆ ಅಪರೂಪದ ಪುಸ್ತಕವನ್ನು ಓದಿ, ಪಕ್ಷಿ ಪ್ರೀತಿ ಬೆಳೆಸಿಕೊಳ್ಳಲಿ, ಪರಿಸರ ಪರಿಸರ ಪ್ರೇಮಕ್ಕೆ ಒಳಗಾಗಲಿ ಎಂಬ ಕಳಕಳಿಯಿಂದ, ಸಲೀಂ ಅಲಿ ಅವರ ಪುಸ್ತಕವನ್ನು ಗ್ರಂಥಾಲಯಕ್ಕೆ ವಾಪಸು ಮಾಡಿ, ವೃತ್ತಿ ನಿಮಿತ್ತ ಊರು ತೊರೆದು ಬಂದೆ.
ಅದೊಂದು ವಿವೇಕ ಆ ದಿನ ನನ್ನನ್ನ ಕಾಪಾಡಿತು, ಅದೇ ರೀತಿ ಆ ಹಳೆಯ, ವರ್ಣಮಯ ಹಕ್ಕಿ ಪುಸ್ತಕವನ್ನೂ ಕಾಪಾಡಿತು. ಆ ಪುಸ್ತಕವನ್ನು ಗ್ರಂಥಾಲಯಕ್ಕೆ ವಾಪಸು ನೀಡಿದ ನಂತರ, ಅದೆಷ್ಟೋ ಓದುಗರಿಗೆ ಮತ್ತಷ್ಟು ಹಕ್ಕಿಗಳ ಪರಿಚಯವಾಗಿಲ್ಲವೇ, ಅದೇ ಲಾಭ! ಆದರೆ ಆ ಪಕ್ಷಿ ಪುಸ್ತಕ ನನಗೆ ಬೇಕು ಎಂಬ ತುಡಿತ ಇದ್ದೇ ಇತ್ತು. ಉದ್ಯೋಗಕ್ಕೆ ಸೇರಿದ ನಂತರ, ಒಂದೆರಡು ವರ್ಷಗಳಲ್ಲಿ, ದೂರದ ಹಿಮಾಲಯಕ್ಕೆ ಹದಿನೈದು ದಿನಗಳ ಚಾರಣಕ್ಕೆ ಹೊರಟೆ; ಕರೆದುಕೊಂಡು ಹೋದವರು ಯುತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದವರು.
ಸುಮಾರು ಎರಡು ವಾರಗಳ ಆ ಚಾರಣದ ಸಮಯದಲ್ಲಿ, ಹಿಮಾಚಲ ಪ್ರದೇಶದ ಖೌಲಿ ಪಾಸ್‌ನ್ನು ದಾಟುವ ನಮ್ಮ ಸಾಹಸದ ಕಾಲದಲ್ಲಿ, ಹಿಮಾಲಯದ ಹಕ್ಕಿಗಳನ್ನು ಸಹ ಗುರುತಿಸಲು ಪ್ರಯತ್ನಿಸಿದೆ; ಸಲೀಂ ಆಲಿಯವರ ‘ಬುಕ್ ಆಫ್ ಇಂಡಿಯನ್ ಬರ್ಡ್ಸ್’ನ್ನು ಜತೆಯಲ್ಲಿ ತಂದಿದ್ದರೆ, ಇಲ್ಲೂ ಉಪಯೋಗವಾಗುತ್ತಿತ್ತು ಎಂಬ ಕೊರತೆ ಕಾಡಿತು.
ನನ್ನ ಆ ಹಳಹಳಿಕೆಯು ದೇವರಿಗೆ ಕೇಳಿಸಿತು ಎನಿಸುತ್ತದೆ, ಚಾರಣ ಮುಗಿಸಿ, ವಾಪಸಾಗುವ ಸಮಯದಲ್ಲಿ ದೆಹಲಿಯಲ್ಲಿ ಎರಡು ದಿನ ಇದ್ದೆವು; ಅಲ್ಲಿನ ಹಲವು ಸ್ಥಳಗಳನ್ನು ನೋಡುವ ಮಧ್ಯದಲ್ಲೇ, ನಾನು ಬಿಡುವು ಮಾಡಿಕೊಂಡು ಒಂದು ದೊಡ್ಡ ಪುಸ್ತಕದ ಅಂಗಡಿಗೆ ಹೋಗಿದ್ದೆ. ಆ ಪ್ರವಾಸ ಸಂಭ್ರಮದ ನಡುವೆಯೇ, ದೆಹಲಿಯ ಪುಸ್ತಕದ ಅಂಗಡಿಯಲ್ಲಿ ಆ ಪುಸ್ತಕ ಕಣ್ಣಿಗೆ ಬಿದ್ದ ತಕ್ಷಣ ಖರೀದಿಸಿದೆ! ಆಗ ಅದರ ಬೆಲೆ ರು.60. ಅದನ್ನು ಜೋಪಾನವಾಗಿ ಇರಿಸಿಕೊಂಡೆ.
ನಾನಾಗ ವೃತ್ತಿ ನಿರ್ವಹಿಸುತ್ತಿದ್ದುದು ಬಯಲುಸೀಮೆಯ ಕಣಕಟ್ಟೆ ಎಂಬ ಒಂದು ಹಳ್ಳಿಯಲ್ಲಿ. ಬಯಲು ಸೀಮೆಯ ಪ್ರದೇಶದಲ್ಲಿ ಹಕ್ಕಿಗಳನ್ನು ಗುರುತಿಸುವುದು ಸುಲಭ, ಏಕೆಂದರೆ, ಮರಗಳ ಹೆಚ್ಚಿನ ದಟ್ಟಣೆ ಇಲ್ಲದೇ ಇರುವುದರಿಂದ, ಕಣ್ಣಿಗೆ ಬಿದ್ದ ಹಕ್ಕಿಯನ್ನು ಬಹಳ ಸಮಯದ ತನಕ ನೋಡುತ್ತಾ, ಕಣ್ಣಿಂದಲೇ ಹಿಂಬಾಲಿಸಬಹುದು, ಅವುಗಳ ಚರ್ಯೆಯನ್ನು, ಚಲನವಲನಗಳನ್ನು ಗಮನಿಸಬಹುದು.
ಅದೇ ಮಲೆನಾಡಿನಲ್ಲೋ, ಕೊಡಚಾದ್ರಿಯ ತಪ್ಪಲಿನ ಕಾಡಿನಲ್ಲೋ ಇರುವ ಹಕ್ಕಿಗಳು ತಕ್ಷಣ ಮರಗಿಡಗಳ ಮರೆಗೆ ಸರಿಯುವುದರಿಂದ, ಅಲ್ಲಿ ಹೆಚ್ಚು ಹಕ್ಕಿಗಳಿದ್ದರೂ ನೋಡುವುದು ಅಷ್ಟು ಸುಲಭವಲ್ಲ. ಇರಲಿ; ಅದು ಬೇರೆ ವಿಷಯ. ಎಲ್ಲೇ ಹಕ್ಕಿಗಳನ್ನು ಕಂಡರೂ, ಮನಸ್ಸಿನಲ್ಲೇ ಅವುಗಳ ವಿವರಗಳನ್ನು ಗುರುತುಮಾಡಿಕೊಂಡು, ಮನೆಗೆ ಬಂದ ನಂತರ, ಸಲೀಂ ಆಲಿಯವರ ಪುಸ್ತಕದ ಸಹಾಯದಿಂದ ಅವುಗಳ ಪ್ರಭೇದವನ್ನು ಪತ್ತೆ ಹಚ್ಚುತ್ತಿದ್ದೆ. ನಂತರದ ವರ್ಷಗಳಲ್ಲಿ ಇನ್ನಷ್ಟು ಹಕ್ಕಿ ಪುಸ್ತಕಗಳನ್ನು ಖರೀದಿಸಿದೆ.
ಇಂಗ್ಲಿಷ್‌ನಲ್ಲಿ ಅಂತಹ ಹಲವು ಪುಸ್ತಕಗಳಿದ್ದವು. ಅದೇನೇ ಇದ್ದರೂ, ಆರಂಭಿಕ ಪಕ್ಷಿವೀ ಕ್ಷಕರಿಗೆ ‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ನೀಡುವ ಒಳನೋಟ, ಪಕ್ಷಿಗಳ ಕುರಿತಾದ ವಿವರಗಳು ಸೂಕ್ತ, ಅಪೂರ್ವ, ಆಪ್ತ ಮತ್ತು ಸುಲಭಗ್ರಾಹ್ಯ. ಅಂದು ದೆಹಲಿಯಲ್ಲಿ ಖರೀದಿಸಿದ ‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಇಂದೂ ನನ್ನ ಬಳಿ ಇದೆ; ಅಂದು ನಮ್ಮ ಮನೆಗೆ ಬಂದ ಸಲೀಂ ಅಲಿ ಇಂದಿಗೂ ನನ್ನ ಜೊತೆ ಇದ್ದಾರೆ!