ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಗೀತಾ ಪಠಣದಲ್ಲಿ ಬರುವ ಸಂಜಯ ಉವಾಚ

ಧೃತರಾಷ್ಟ್ರನ ಅರಮನೆಯಲ್ಲಿ ವಿದುರನಂತೆಯೇ ಸಂಜಯನಿಗೂ ವಿಶಿಷ್ಟ ಸ್ಥಾನ. ಅಂತಃಪುರದೊಳಗೆ ಯಾರ ಅನುಮತಿಯೂ ಇಲ್ಲದೆ ಪ್ರವೇಶಿಸುವ ಹಕ್ಕು ಇವರಿಬ್ಬರಿಗಷ್ಟೇ. ಧೃತರಾಷ್ಟ್ರನ ಪುತ್ರ ವ್ಯಾಮೋಹದ ಎದುರು ನಿಂತು, ಯಾವುದೇ ಭಯವಿಲ್ಲದೆ ‘ಇದು ಧರ್ಮವಲ್ಲ’ ಎಂದು ನೇರವಾಗಿ ಹೇಳಬಲ್ಲ ಧೈರ್ಯ ಸಂಜಯನಿಗೆ ಇತ್ತು.

Roopa Gururaj Column: ಗೀತಾ ಪಠಣದಲ್ಲಿ ಬರುವ ಸಂಜಯ ಉವಾಚ

-

ಒಂದೊಳ್ಳೆ ಮಾತು

ಮಹಾಭಾರತವನ್ನು ಓದುವಾಗ ‘ಸಂಜಯ ಉವಾಚ’ ಎಂಬ ಪದಗಳು ಎದುರಾಗುತ್ತವೆ. ಸಾಮಾನ್ಯ ವಾಗಿ ನಾವು ಆ ಪದಗಳನ್ನು ದಾಟಿ ಮುಂದಿನ ಶ್ಲೋಕಕ್ಕೆ ಹೋಗುತ್ತೇವೆ. ಆದರೆ ಆ ಎರಡು ಪದಗಳ ಹಿಂದೆ ನಿಂತಿರುವ ವ್ಯಕ್ತಿತ್ವ- ಸಂಜಯ- ಮಹಾಭಾರತದ ಅತ್ಯಂತ ಮಹತ್ವದ ಪಾತ್ರ. ಮೌನದ ಮಹಾಜ್ಞಾನಿ ಇವನು.ಸಂಜಯನು ಸೂತ ವಂಶದಲ್ಲಿ ಹುಟ್ಟಿದವನು.

ಅವನ ತಂದೆ ಗವಲ್ಗಣ, ಕುರುವಂಶದ ರಾಜ ವಿಚಿತ್ರವೀರ್ಯನ ಆಪ್ತಮಂತ್ರಿ ಮತ್ತು ಸಾರಥಿ. ಅದೇ ಸಂಸ್ಕಾರ ಸಂಜಯನ ರಕ್ತದಲ್ಲಿತ್ತು. ಅಂಧನಾಗಿದ್ದ ಧೃತರಾಷ್ಟ್ರನಿಗೆ ಕಣ್ಣಾಗಿ, ಸಾರಥಿಯಾಗಿ, ಮಿತ್ರ ನಾಗಿ, ಕೊನೆಯವರೆಗೂ ಜತೆಯಾಗಿ ನಿಂತವನು ಸಂಜಯ. ವಯಸ್ಸಿನಲ್ಲಿ ಕಿರಿಯನಾದರೂ ಜ್ಞಾನ ದಲ್ಲಿ, ವಿವೇಕದಲ್ಲಿ, ಧರ್ಮನಿಷ್ಠೆ ಯಲ್ಲಿ ವಿದುರನಿಗಿಂತ ಕಡಿಮೆಯಿರಲಿಲ್ಲ.

ಧೃತರಾಷ್ಟ್ರನ ಅರಮನೆಯಲ್ಲಿ ವಿದುರನಂತೆಯೇ ಸಂಜಯನಿಗೂ ವಿಶಿಷ್ಟ ಸ್ಥಾನ. ಅಂತಃಪುರ ದೊಳಗೆ ಯಾರ ಅನುಮತಿಯೂ ಇಲ್ಲದೆ ಪ್ರವೇಶಿಸುವ ಹಕ್ಕು ಇವರಿಬ್ಬರಿಗಷ್ಟೇ. ಧೃತರಾಷ್ಟ್ರನ ಪುತ್ರವ್ಯಾಮೋಹದ ಎದುರು ನಿಂತು, ಯಾವುದೇ ಭಯವಿಲ್ಲದೆ ‘ಇದು ಧರ್ಮವಲ್ಲ’ ಎಂದು ನೇರ ವಾಗಿ ಹೇಳಬಲ್ಲ ಧೈರ್ಯ ಸಂಜಯನಿಗೆ ಇತ್ತು.

ಇದನ್ನೂ ಓದಿ: Roopa Gururaj Column: ವೈಕುಂಠ ಏಕಾದಶಿಯ ಮಹತ್ವ

ಹಿರಿಯನಿಗೆ ಬುದ್ಧಿವಾದ ಹೇಳಿದನೆಂದು ಧೃತರಾಷ್ಟ್ರನು ಎಂದೂ ಕೋಪಗೊಂಡಿದ್ದಿಲ್ಲ; ಏಕೆಂದರೆ ಅವನು ಸಂಜಯನ ನಿಷ್ಠೆಯನ್ನು ಅರಿತಿದ್ದ. ಪಾಂಡವರ ವನವಾಸ, ಜೂಜು, ಶಕುನಿಯ ಕುತಂತ್ರ, ದುರ್ಯೋಧನನ ಅಹಂಕಾರ- ಈ ಎಲ್ಲ ಸಂದರ್ಭಗಳಲ್ಲೂ ಸಂಜಯನು ವಿದುರನೊಂದಿಗೆ ಸೇರಿ ನ್ಯಾಯ-ನೀತಿ-ಧರ್ಮದ ಮಾತು ಹೇಳುತ್ತಿದ್ದ.

ಈತ ದುರ್ಯೋಧನನಿಗೆ ಅದೆಷ್ಟೋ ಬಾರಿ ವಿವೇಕ ಬೋಧಿಸಿದವನು; ಆದರೆ ಕಾಲಚಕ್ರವನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ಕುರುಕ್ಷೇತ್ರ ಯುದ್ಧದ ಆರಂಭಕ್ಕೂ ಮುನ್ನ ವೇದವ್ಯಾಸ ರು ಧೃತರಾಷ್ಟ್ರನಿಗೆ ದಿವ್ಯದೃಷ್ಟಿಯನ್ನು ಕರುಣಿಸುವೆನೆಂದಾಗ, ‘ಇಷ್ಟು ವರ್ಷ ಕಣ್ಣು ಇಲ್ಲದೆ ಬದುಕಿದ್ದೆ, ಈಗ ಯುದ್ಧದ ರಕ್ತಪಾತ ನೋಡಲು ಮನಸ್ಸಿಲ್ಲ’ ಎಂದು ಧೃತರಾಷ್ಟ್ರನು ನಿರಾಕರಿಸಿ ದನು.

ಆಗ ವೇದವ್ಯಾಸರು ಆ ದಿವ್ಯದೃಷ್ಟಿಯನ್ನು ಸಂಜಯನಿಗೆ ನೀಡಿದರು. ಆ ಕ್ಷಣದಿಂದ ಸಂಜಯನು ಇತಿಹಾಸಕ್ಕೆ ಸಾಕ್ಷಿಯಾದ. ಯುದ್ಧಭೂಮಿಯಲ್ಲಿ 18 ಅಕ್ಷೋಹಿಣಿ ಸೈನ್ಯ, ಅತಿರಥ-ಮಹಾರಥರು, ಶಂಖಧ್ವನಿ, ರಕ್ತಸಿಕ್ತ ಭೂಮಿ, ಗಾಯಾಳುಗಳ ಅಳಲು, ಆನೆ-ಕುದುರೆಗಳ ಗರ್ಜನೆ- ಎಲ್ಲವನ್ನೂ ಕಣ್ಣಾರೆ ಕಂಡು, ಸಮಚಿತ್ತದಿಂದ ಧೃತರಾಷ್ಟ್ರನಿಗೆ ವಿವರಿಸಿದವನು ಸಂಜಯ. ನೋವು, ದುಃಖ, ಹತಾಶೆ, ಕೆಲವೆಡೆ ಅತೃಪ್ತಿ- ಈ ಎಲ್ಲ ಭಾವನೆಗಳನ್ನು ಅನುಭವಿಸುತ್ತಲೇ ಹೇಳಿದವನು.

ಆದರೆ ಧೃತರಾಷ್ಟ್ರ ಕೇವಲ ಕೇಳಿಸಿಕೊಂಡ, ಕಾಣಲಿಲ್ಲ. ಅದೇ ಯುದ್ಧಭೂಮಿಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿ ‘ವಿಶ್ವರೂಪ ದರ್ಶನ’ ಕೊಟ್ಟಾಗ, ಆ ದಿವ್ಯರೂಪವನ್ನು ಕಂಡ ಮಹಾಭಾಗ್ಯಶಾಲಿ ಸಂಜಯ. ಋಷಿಮುನಿಗಳಿಗೂ ದುರ್ಲಭವಾದ ದರ್ಶನ ಅವನ ಪಾಲಿಗೆ ಒದಗಿ ಬಂದಿತ್ತು.

ಅದಕ್ಕಾಗಿಯೇ ಗೀತೆಯಲ್ಲಿ ‘ಭಗವಾನುವಾಚ’ ನಂತರ ‘ಸಂಜಯ ಉವಾಚ’ ಬರುತ್ತದೆ- ಕಂಡವನು ಸಂಜಯ, ಹೇಳಿದವನು ಸಂಜಯ. ಯುದ್ಧದ ಮಧ್ಯೆ ಧೃತರಾಷ್ಟ್ರನಿಗೆ ‘ಇದು ನಿಮ್ಮ ಕಾರಣದಿಂದ ಸಂಭವಿಸಿದೆ’ ಎಂದು ಸೂಕ್ಷ್ಮವಾಗಿ ಬುದ್ಧಿ ಹೇಳುವ ಧೈರ್ಯವೂ ಸಂಜಯನಿಗಿತ್ತು. ಆದರೆ ಪುತ್ರ ವ್ಯಾಮೋಹ ಧೃತರಾಷ್ಟ್ರನನ್ನು ಬಿಡಲಿಲ್ಲ.

ಯುದ್ಧ ಅಂತ್ಯವಾಗಿ ಯುಧಿಷ್ಠಿರ ರಾಜನಾದ ನಂತರ, ವಿದುರನ ಉಪದೇಶದಂತೆ ಧೃತರಾಷ್ಟ್ರ, ಗಾಂಧಾರಿ ಮತ್ತು ಕುಂತಿ ವಾನಪ್ರಸ್ಥಕ್ಕೆ ಹೊರಟರು. ಸಂಜಯನೂ ಇವರ ಜತೆಯಾದ. ಕಾಡ್ಗಿಚ್ಚು ಬಂದಾಗ ಧೃತರಾಷ್ಟ್ರ-ಗಾಂಧಾರಿ- ಕುಂತಿ ದೇಹತ್ಯಾಗಕ್ಕೆ ಮುಂದಾದರು, ಸಂಜಯನನ್ನು ಬಲವಂತ ವಾಗಿ ಅಲ್ಲಿಂದ ಹಿಂದಿರುಗಿಸಿದರು. ಆಗ ಸಂಜಯನು ಹಿಮಾಲಯಕ್ಕೆ ತೆರಳಿ ದೀರ್ಘ ತಪಸ್ಸು ಮಾಡಿ ಮುಕ್ತಿಯನ್ನು ಪಡೆದನು.

ಮಹಾಭಾರತದಲ್ಲಿ ಅವನ ಹೆಸರು ಅಷ್ಟಾಗಿ ಕಾಣುವುದಿಲ್ಲ, ಆದರೆ ಧರ್ಮದ ಕಣ್ಣಾಗಿ, ಸತ್ಯದ ಧ್ವನಿಯಾಗಿ, ಇತಿಹಾಸವನ್ನು ನಿಷ್ಪಕ್ಷಪಾತವಾಗಿ ಕಂಡು ಹೇಳಿದ ಮಹಾಮಹಿಮ ಈ ಸಂಜಯ. ಅದಕ್ಕೇ ಇಂದಿಗೂ ನಾವು ‘ಗೀತ ಪಠಣ’ ಮಾಡುವಾಗ ‘ಸಂಜಯ ಉವಾಚ’ ಎಂದು ಅವನ ಹೆಸರನ್ನೂ ಭಕ್ತಿಯಿಂದ ಓದುತ್ತೇವೆ.

ನಾವು ಎಂಥದೇ ಜನರ ಮಧ್ಯೆ ಇರಲಿ, ಪರಿಸ್ಥಿತಿಯಲ್ಲಿ ಇರಲಿ, ನಮ್ಮ ಧರ್ಮವನ್ನು ಪಾಲನೆ ಮಾಡಲು ಮತ್ತು ಪ್ರಾಮಾಣಿಕತೆಯಿಂದ ಬದುಕಲು ಮನಸ್ಸು ಮಾಡಿದರೆ ಯಾವುದು ಕೂಡ ಅಸಾಧ್ಯವಲ್ಲ ಎನ್ನುವುದಕ್ಕೆ ಸಂಜಯನ ಬದುಕು ನಮಗೆ ದೊಡ್ಡ ಪ್ರೇರಣೆ. ಭಾರತೀಯ ಸನಾತನ ಧರ್ಮದ ಧರ್ಮ ಗ್ರಂಥಗಳ ಎಲ್ಲಾ ಕಥೆಗಳು, ಅಲ್ಲಿನ ಪಾತ್ರಗಳು ನಮಗೆ ಇಂಥ ನೂರಾರು ವ್ಯಕ್ತಿತ್ವ ಗಳ ಪರಿಚಯ ಮಾಡಿಕೊಡುತ್ತಾ ಜೀವನದ ಪಾಠವನ್ನು ಸೂಕ್ಷ್ಮವಾಗಿ ನೀಡುತ್ತಾ ಹೋಗುತ್ತವೆ.