ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ವಿಜಯೇಂದ್ರ ಬೆನ್ನಿಗೆ ಈಗ ಸಂತೋಷ್‌ ನಿಂತಿದ್ದಾರೆ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಅವರು ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿಕೊಂಡಾಗ ಅವರಿಗೆ ಬರೀ ಇಪ್ಪತ್ತೊಂಬತ್ತು ವರ್ಷ. ಹೀಗಾಗಿ ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ವಿಜಯೇಂದ್ರ ಸಮರ್ಥವಾಗಿ ಹೊರಬಲ್ಲರು" ಅಂತ ಸಂತೋಷ್ ಅವರು ಸರ್ಟಿಫಿಕೇಟು ಕೊಟ್ಟಾಗ ಸಭೆಯಲ್ಲಿದ್ದ ವಿಜಯೇಂದ್ರ ವಿರೋಧಿ ಪಡೆ ಮೌನವಾಗಿದೆ.

ಮೂರ್ತಿಪೂಜೆ

ಕಳೆದ ವಾರ ಯಲಹಂಕದ ‘ರಮಡ’ ರೆಸಾರ್ಟ್‌ನಲ್ಲಿ ಬಿಜೆಪಿಯ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಒಂದು ಫರ್ಮಾನು ಹೊರಡಿಸಿದ್ದಾರೆ. ‘ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವ ದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು’ ಎಂಬುದು ಈ ಫರ್ಮಾನು ಹೀಗೆ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಬೇಕು ಅಂತ ಅವರು ಹೇಳಿದಾಗ ಅಲ್ಲಿದ್ದ ಕೆಲ ನಾಯಕರಿಗೆ ಕಸಿವಿಸಿಯಾಗಿರುವುದೇನೋ ನಿಜ.

ಯಾಕೆಂದರೆ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಸಂತೋಷ್ ಅವರು ಒಂದು ಅಂತರ ಕಾಯ್ದುಕೊಂಡೇ ಬಂದಿದ್ದರು. ಅರ್ಥಾತ್, ಅವರಿಗೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂತಿದ್ದು ಅಷ್ಟು ಸಹನೆಯಾಗಿರಲಿಲ್ಲ.

ವಿಜಯೇಂದ್ರ ಅವರ ವಿಷಯದಲ್ಲಿ ಸಂತೋಷ್ ಅವರಿಗಿದ್ದ ಈ ಅಸಹನೆಯೇ ರಾಜ್ಯ ಬಿಜೆಪಿಯಲ್ಲಿ ರುವ ಯಡಿಯೂರಪ್ಪ ವಿರೋಧಿ ಬಣಕ್ಕೆ ಪಾಸಿಟಿವ್ ಆಗಿ ಕಂಡಿತ್ತು. ಯಾಕೆಂದರೆ, ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ತಾವು ಸಿಎಂ ಆಗಬೇಕು ಎಂಬ ಲೆಕ್ಕಾಚಾರ ಇಂಥವರಲ್ಲಿದೆ ಯಲ್ಲ? ಹೀಗಾಗಿ ಈ ನಾಯಕರ ಲೆಕ್ಕಾಚಾರಕ್ಕೆ ಸಂತೋಷ್ ಅವರ ಮನಃಸ್ಥಿತಿ ಪೂರಕವಾಗಿ ಕಂಡಿತ್ತು.

ಇದನ್ನೂ ಓದಿ: R T Vittalmurthy Column: ಅರಸು. ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

ಪರಿಣಾಮ? ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ಅವರ ತನಕ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಂದ ಹಿಡಿದು ಕೇಂದ್ರ ಸಚಿವ ವಿ.ಸೋಮಣ್ಣ ಅವರ ತನಕ ದೊಡ್ಡದೊಂದು ಪಡೆಯೇ ವಿಜಯೇಂದ್ರ ಅವರ ವಿರುದ್ಧ ತಿರುಗಿಬಿದ್ದು ಹೋರಾಟ ನಡೆಸಿತ್ತು.

ಆದರೆ ಕಳೆದ ವಾರ ಯಲಹಂಕದ ‘ರಮಡ’ ರೆಸಾರ್ಟ್ ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಸಂತೋಷ್ ಅವರು ಮಾತನಾಡಿದ ರೀತಿ ಯಡಿಯೂರಪ್ಪ ವಿರೋಧಿ ಬಣವನ್ನು ವಿಸ್ಮಯಕ್ಕೆ ದೂಡಿದೆ. ಅಷ್ಟೇ ಅಲ್ಲ, ವಿಜಯೇಂದ್ರ ವಿರುದ್ಧದ ಹೋರಾಟಕ್ಕೆ ಅದು ಹಿನ್ನಡೆಯಾಗಿಯೂ ಕಾಣಿಸಿದೆ. ಅಂದ ಹಾಗೆ, ಪಕ್ಷದ ಶಾಸಕರು, ಸಂಸದರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಸೇರಿ ದಂತೆ ಪಕ್ಷದ ಫ್ರಂಟ್ ಲೈನ್ ಪಡೆ ಹಾಜರಿದ್ದ ಈ ಸಭೆಯಲ್ಲಿ ಸಂತೋಷ್ ಸಮಾರೋಪ ಭಾಷಣ ಮಾಡಲು ಶುರುಮಾಡಿದಾಗ, ವಿಜಯೇಂದ್ರ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಬಹುದು ಅಂತ ಹಲವು ನಾಯಕರು ನಿರೀಕ್ಷಿಸಿದ್ದಾರೆ. ಆದರೆ ಭಾಷಣದ ಶುರುವಿನಿಂದಲೇ ವಿಜಯೇಂದ್ರ ಅವರ ನಾಯಕತ್ವಕ್ಕೆ ಪಾಸಿಟಿವ್ ಆಗಿ ಮಾತನಾಡಿದ ಸಂತೋಷ್ ಅವರು, “ವಿಜಯೇಂದ್ರ ಅನುಭವಿ ಅಲ್ಲ, ಕಿರಿಯರು ಅಂತ ಇವತ್ತು ಕೆಲವರು ಹೇಳುತ್ತಾರೆ. ಆದರೆ ಗಮನಿಸಬೇಕಾದ ವಿಷಯವೆಂದರೆ ಸಂಘಟನೆಯನ್ನು ಕಟ್ಟುವ ವಿಷಯದಲ್ಲಿ ವಿಜಯೇಂದ್ರ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನೆನಪಿಡಬೇಕಾದ ವಿಷಯವೆಂದರೆ, ಇವತ್ತು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯಾಗಿರುವ ಯೋಗಿ ಆದಿತ್ಯನಾಥ್ ಅವರು ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿಕೊಂಡಾಗ ಅವರಿಗೆ ಬರೀ ಇಪ್ಪತ್ತೊಂಬತ್ತು ವರ್ಷ. ಹೀಗಾಗಿ ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಯನ್ನು ವಿಜಯೇಂದ್ರ ಸಮರ್ಥವಾಗಿ ಹೊರಬಲ್ಲರು" ಅಂತ ಸಂತೋಷ್ ಅವರು ಸರ್ಟಿಫಿಕೇಟು ಕೊಟ್ಟಾಗ ಸಭೆಯಲ್ಲಿದ್ದ ವಿಜಯೇಂದ್ರ ವಿರೋಧಿ ಪಡೆ ಮೌನವಾಗಿದೆ.

ಅಲ್ಲಿಗೆ ಸ್ಪಷ್ಟವಾದ ವಿಷಯವೆಂದರೆ, ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲು ನಡೆಯುತ್ತಿರುವ ಹೋರಾಟವೇನಿದೆ, ಅದರ ಶಕ್ತಿ ಕುಸಿದಂತೆ ಭಾಸವಾಗಿ, ವಿಜಯೇಂದ್ರ ಅವರೇ ರಾಜ್ಯ ಬಿಜೆಪಿಯ ಭವಿಷ್ಯದ ನಾಯಕರಾಗಿ ಎಮರ್ಜ್ ಆಗುವುದು ನಿಶ್ಚಿತ ವಾದಂತಿದೆ.

ಅಮಿತ್ ಶಾ ಲೆಕ್ಕಾಚಾರ ಏನು?

ಅಂದ ಹಾಗೆ, ಬಿ.ಎಲ.ಸಂತೋಷ್ ಅವರು ಇದ್ದಕ್ಕಿದ್ದಂತೆ ವಿಜಯೇಂದ್ರ ಅವರ ಪರ ನಿಂತಿರುವು ದೇಕೆ? ಬಿಜೆಪಿ ಮೂಲಗಳ ಪ್ರಕಾರ, ಸಂತೋಷ್ ಅವರು ಇದ್ದಕ್ಕಿದ್ದಂತೆ ಬದಲಾಗುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ. ಇದೇ ಮೂಲಗಳ ಪ್ರಕಾರ, ಅಮಿತ್ ಶಾ ಅವರು ಕರ್ನಾಟಕದ ರಾಜಕಾರಣದಲ್ಲಿ ಉಂಟಾಗಲಿರುವ ತಲ್ಲಣದ ಮೇಲೆ ಗಮನ ನೆಟ್ಟಿದ್ದಾರೆ.

ಅವರಿಗಿರುವ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ನವೆಂಬರ್ ನಂತರ ಕ್ಷೋಭೆಗೆ ಒಳಗಾಗಲಿದೆ. ಕಾರಣ? ಅಧಿಕಾರ ಹಂಚಿಕೆಯ ಮಾತು ಚಾಲ್ತಿಯಲ್ಲಿದ್ದರೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲು ತಯಾರಾಗುವುದಿಲ್ಲ.

ಹೀಗೆ ಅವರು ಪಟ್ಟ ಬಿಟ್ಟುಕೊಡುವುದಿಲ್ಲ ಎಂದರೆ ಪಕ್ಷದ ವರಿಷ್ಠರು ಹಠ ಮಾಡುವುದಿಲ್ಲ. ಕಾರಣ? ಕರ್ನಾಟಕದಲ್ಲಿ ಅಹಿಂದ ವರ್ಗಗಳನ್ನು ಸಿದ್ದರಾಮಯ್ಯ ಯಾವ ಲೆವೆಲ್ಲಿನಲ್ಲಿ ಕನ್‌ ಸಾಲಿಡೇಟ್ ಮಾಡಿದ್ದಾರೆಂದರೆ, ಅವರ ಇಚ್ಛೆಗೆ ವಿರುದ್ಧವಾದ ತೀರ್ಮಾನ ತೆಗೆದುಕೊಂಡರೆ ಸರಕಾರ ಅಲುಗಾಡುವುದು ನಿಶ್ಚಿತ. ಹೀಗಾದಾಗ ಸಿಎಂ ಹುದ್ದೆಗೆ ಲಗ್ಗೆ ಹಾಕಿರುವ ಡಿಸಿಎಂ ಡಿಕೆಶಿ, ತಮ್ಮ ಬೆಂಬಲಿಗರೊಡನೆ ಕಾಂಗ್ರೆಸ್ ತೊರೆಯುತ್ತಾರೆ.

ಹೀಗೆ ಹೊರಬರಲಿರುವ ಡಿಕೆಶಿ ಜತೆ ಗಣನೀಯ ಸಂಖ್ಯೆಯ ಶಾಸಕರು ಬರದೇ ಇರಬಹುದು. ಆದರೆ ಅವರ ಜತೆ ಒಂದಷ್ಟು ಶಾಸಕರು ಹೊರಬಂದರೆ ಸರಕಾರವನ್ನು ಅಲುಗಾಡಿಸುವ ಕಸರತ್ತು ಆರಂಭವಾಗಲಿದೆ. ಒಂದು ಸಲ ಈ ಕಸರತ್ತು ಆರಂಭವಾದರೆ ಬಹುಬೇಗ ಅದನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಬಹುದು ಎಂಬುದು ಅಮಿತ್ ಶಾ ಲೆಕ್ಕಾಚಾರ. ಅವರ ಈ ಲೆಕ್ಕಾಚಾರದ ಅರ್ಥವೆಂದರೆ, ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ವೇದಿಕೆ ಸಿದ್ಧವಾಗಲಿದೆ ಎಂಬುದೇ ಹೊರತು ಬೇರೇನಲ್ಲ.

ಹೀಗೆ ಕರ್ನಾಟಕದ ರಾಜಕಾರಣದ ಬಗ್ಗೆ ಅಮಿತ್ ಶಾ ಹಾಕಿದ ಲೆಕ್ಕಾಚಾರವೇನಿದೆ, ಅದಕ್ಕೆ ಪೂರಕ ವಾದ ಹೆಜ್ಜೆ ಇಡಲು ಸಂತೋಷ್ ಹೊರಟಿದ್ದಾರೆ. ಯಾಕೆಂದರೆ, ಕರ್ನಾಟಕದಲ್ಲಿ ರಾಜಕೀಯ ಕ್ಷೋಭೆ ಶುರುವಾಗುವ ಕಾಲದಲ್ಲಿ ರಾಜ್ಯ ಬಿಜೆಪಿಯ ಸೈನ್ಯ ಒಗ್ಗಟ್ಟಿನ ಪ್ರತಿರೂಪವಾಗಿರಬೇಕು. ಅಮಿತ್ ಶಾ ಇದನ್ನೇ ಬಯಸುತ್ತಿದ್ದಾರೆ ಎಂಬುದು ಬಿ.ಎಲ.ಸಂತೋಷ್ ಅವರಿಗೆ ಗೊತ್ತು ಮತ್ತು ಇದು ಸಾಧ್ಯವಾಗಬೇಕು ಎಂದರೆ ವಿಜಯೇಂದ್ರ ಅವರನ್ನು ಅಲುಗಾಡಿಸುವ ಯತ್ನಗಳಿಗೆ ಬೆಂಬಲ ನೀಡಬಾರದು ಎಂಬುದೂ ಗೊತ್ತು.

ಹಾಗಂತಲೇ ಕಳೆದ ವಾರ ಯಲಹಂಕದ ‘ರಮಡ’ ರೆಸಾರ್ಟ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಅವರು ಶಾಂತಿ ಮಂತ್ರ ಜಪಿಸಿದ್ದಾರೆ. ಅಷ್ಟೇ ಅಲ್ಲ, “ಇನ್ನು ಮುಂದೆ ಪ್ರತಿ ವಾರ ಕರ್ನಾಟಕಕ್ಕೆ ಬರುತ್ತೇನೆ. ಸಂಘಟನೆಯನ್ನು ಬಲಿಷ್ಠಗೊಳಿಸುವ ಯತ್ನಕ್ಕೆ ಕೈ ಜೋಡಿಸುತ್ತೇನೆ" ಅಂತ ಹೇಳಿ ಹೋಗಿದ್ದಾರೆ.

ಅಧಿಕಾರ ಹಸ್ತಾಂತರದ ಮಾತು ಮಾರ್ಚ್‌ಗೆ?

ಹೀಗೆ ರಾಜ್ಯ ಬಿಜೆಪಿ ಪಾಳಯ ಡಿಸೆಂಬರ್ ಕ್ರಾಂತಿಗೆ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಪಾಳಯದಿಂದ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅದರ ಪ್ರಕಾರ, ಅಧಿಕಾರ ಹಸ್ತಾಂ ತರದ ಮಾತು ಡಿಸೆಂಬರ್ ಬದಲು ಮಾರ್ಚ್ ವೇಳೆಗೆ ಕೇಳಲಿದೆ. ಕಾರಣ? ಬಿಹಾರ ವಿಧಾನ ಸಭೆ ಚುನಾವಣೆ ಮುಗಿದ ತಕ್ಷಣ ಸಿಎಂ ಹುದ್ದೆ ಬಿಟ್ಟು ಕೊಡಿ ಅಂತ ಸಿದ್ದರಾಮಯ್ಯ ಅವರನ್ನು ಕೇಳಲು ರಾಹುಲ್ ಗಾಂಧಿ ಸಿದ್ದರಿಲ್ಲ.

ಆದರೆ ಬಿಹಾರ ವಿಧಾನಸಭೆ ಚುನಾವಣೆಯ ನಂತರ ನಡೆಯಬಹುದಾದ ಇನ್ನೊಂದು ಬೆಳವಣಿಗೆ ಯ ಮೇಲೆ ರಾಹುಲ್ ಗಮನವಿದೆ. ಅದೆಂದರೆ ಎಐಸಿಸಿ ಅಧ್ಯಕ್ಷ ಪಟ್ಟದ ಮೇಲೆ ತಾವು ಇಲ್ಲವೇ ಪ್ರಿಯಾಂಕಾ ಗಾಂಧಿ ಬಂದು ಕೂರುವುದು. ಅವರ ಪ್ರಕಾರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಿತ್ರಕೂಟ ಅಧಿಕಾರದ ಸನಿಹಕ್ಕೆ ಬರುವುದು ನಿಶ್ಚಿತ.

ಒಂದು ವೇಳೆ ಗೆಲುವಿನ ಸಮೀಪಕ್ಕೆ ಬಂದು ಎಡವಿದರೂ ಒಟ್ಟಾರೆಯಾಗಿ ಕಾಂಗ್ರೆಸ್ ಮಿತ್ರಕೂಟದ ಸಾಧನೆ ದೇಶದ ಗಮನ ಸೆಳೆಯುವಂತೆ ಇರಲಿದೆ. ಹಾಗಾದಾಗ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ತುಂಬಲು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಇಲ್ಲವೇ ತಾವು ಬಂದು ಕೂರುವುದು ರಾಹುಲ್ ಲೆಕ್ಕಾಚಾರ. ಅದರೆ ಈ ಲೆಕ್ಕಾಚಾರಕ್ಕಿರುವ ಒಂದು ಅಡ್ಡಿ ಎಂದರೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ.

ಇವತ್ತಿನ ಸ್ಥಿತಿಯಲ್ಲಿ ಖರ್ಗೆಯವರ ಅಧ್ಯಕ್ಷಾವಧಿ ಇನ್ನೂ ಒಂದು ವರ್ಷ ಬಾಕಿ ಇದೆ. ಹೀಗೆ ಅಧ್ಯಕ್ಷ ಅವಧಿ ಬಾಕಿ ಇರುವಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಳಗಿಳಿಸುವುದು ಕಷ್ಟ. ಕಾರಣ? ಅವರನ್ನು ದಿಢೀರನೆ ಕೆಳಗಿಳಿಸಿ ತಾವೋ, ಪ್ರಿಯಾಂಕಾ ಗಾಂಧಿಯೋ ಬಂದು ಕುಳಿತರೆ ಅದರಿಂದ ವ್ಯತಿರಿಕ್ತ ಸಂದೇಶ ರವಾನೆಯಾಗುತ್ತದೆ.

ಅರ್ಥಾತ್, ಅವಧಿಗೂ ಮುನ್ನ ಮಲ್ಲಿಕಾರ್ಜುನ ಖರ್ಗೆಯವರನ್ನು ಕೆಳಗಿಳಿಸಿದರೆ ಪಕ್ಷಕ್ಕೆ ದಲಿತ ವಿರೋಽ ಹಣೆಪಟ್ಟಿ ತಗಲುತ್ತದೆ. ಹಾಗಾಗಬಾರದು ಎಂದರೆ ಖರ್ಗೆಯವರನ್ನು ಇಳಿಸುವ ಕಾಲಕ್ಕೆ ಪರ್ಯಾಯ ಜಾಗವೊಂದನ್ನು ಅವರಿಗಾಗಿ ಸೃಷ್ಟಿಸಬೇಕು. ಸದ್ಯದ ಸ್ಥಿತಿಯಲ್ಲಿ ಖರ್ಗೆಯವರಿಗಾಗಿ ಸೃಷ್ಟಿಸಬಹುದಾದ ಏಕೈಕ ಜಾಗವೆಂದರೆ ಮುಖ್ಯಮಂತ್ರಿ ಹುದ್ದೆ. ಆದರೆ ಅದನ್ನು ಖರ್ಗೆಯವರಿಗಾಗಿ ತೋರಿಸಬೇಕು ಎಂದರೆ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಆದರೆ ಹೀಗೆ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಾಗ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕಿರುವ ಅನಿವಾರ್ಯತೆಯನ್ನು ಅವರಿಗೆ ವಿವರಿಸಬೇಕು. ಯಾಕೆಂದರೆ ಗಾಂಧಿ ಕುಟುಂಬದವರು ಪಕ್ಷದ ಸಾರಥ್ಯ ವಹಿಸದೆ ಹೋದರೆ ಮುಂದಿನ ದಿನಗಳಲ್ಲಿ ದಿಲ್ಲಿ ಗದ್ದುಗೆಯ ಮೇಲೆ ಕಣ್ಣಿಡುವುದು ಕಷ್ಟ ಅಂತ ಸ್ವತಃ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಜಾಗ ಬಿಟ್ಟುಕೊಡುವಂತೆ ಕೇಳಿಕೊಂಡರೆ ಸಿದ್ದರಾಮಯ್ಯ ತುಂಬ ವಿರೋಧ ವ್ಯಕ್ತ ಮಾಡಲಾರರು.

ಎಷ್ಟೇ ಆದರೂ ಕರ್ನಾಟಕದಲ್ಲಿ ತಮ್ಮ ದಾರಿ ಸುಗಮವಾಗಿರಲು ಖರ್ಗೆ ತ್ಯಾಗ ಮಾಡಿದ್ದಾರೆ ಮತ್ತು ಇದೇ ಕಾರಣಕ್ಕೆ ತಮ್ಮ ಮೇಲೆ ಒಂದು ಅಪವಾದ ಕುಳಿತಿದೆ. ಇದನ್ನು ತೊಡೆದು ಹಾಕಲು ಖರ್ಗೆ ಯವರಿಗಾಗಿ ತಾವು ತ್ಯಾಗ ಮಾಡಬೇಕು ಎಂಬ ಭಾವನೆ ಸಿದ್ದರಾಮಯ್ಯ ಅವರಿಗೆ ಬರಬಹುದು.

ಎಷ್ಟೇ ಆದರೂ ಕರ್ನಾಟಕದಲ್ಲಿ ಶುರುವಾಗಿರುವ ದಲಿತ ಸಿಎಂ ಕೂಗಿಗೆ ಸಿದ್ದರಾಮಯ್ಯ ಅವರ ಪರೋಕ್ಷ ಬೆಂಬಲ ಇದ್ದೇ ಇದೆ. ಇವತ್ತು ಡಿಕೆಶಿ ಅವರಿಗಾಗಿ ತ್ಯಾಗ ಮಾಡಿ ಎಂದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರು ಎದ್ದು ನಿಲ್ಲುತ್ತದೆ. ಅದರೆ ಅದನ್ನು ಮಾಡುವ ಬದಲು ಖರ್ಗೆ ಯವರಿಗಾಗಿ ತ್ಯಾಗ ಮಾಡಿ ಎಂದರೆ ಸಿದ್ದರಾಮಯ್ಯ ಅವರು ಸಹಕಾರ ನೀಡುತ್ತಾರೆ ಎಂಬುದು ರಾಹುಲ್ ಗಾಂಧಿ ಲೆಕ್ಕಾಚಾರ.

ಹೀಗಾಗಿ ಈ ಲೆಕ್ಕಾಚಾರಕ್ಕೆ ಡಿಸೆಂಬರ್ ಬದಲು ಮಾರ್ಚ್ ಸೂಟಬಲ್ಲು ಎಂಬುದು ಅವರ ಯೋಚನೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author