ಜನತಂತ್ರ
ನಿತಿನ್ ನಾರಾಯಣ
ಎಲ್ಲಾ ರಾಜಕೀಯ ಪಕ್ಷಗಳೂ ಪ್ರಜಾಪ್ರಭುತ್ವವನ್ನು ಉಳಿಸಿ ಎನ್ನುತ್ತಲೇ ಬಂದಿವೆ. ಪ್ರಜಾಪ್ರಭುತ್ವ ಜಾರಿಗೆ ಬಂದ ಆರಂಭದಿಂದಲೂ ಈ ಕೂಗು ಎಷ್ಟು ಕ್ಲೀಷೆಯಾಗಿ ಬಳಕೆಯಾಗಿದೆಯೆಂದರೆ, ಅದನ್ನು ಕೇಳಿದವರಿಗೆ ಅದು ಗಂಭೀರ ಸಂಗತಿ ಎಂದು ಒಮ್ಮೆಯೂ ಅನಿಸಲಿಲ್ಲ! ಹುಡುಗನೊಬ್ಬ ತೋಳ ಬಂತು ಎಂದು ಪದೇಪದೆ ಕೂಗಿದ ಕತೆಯಂತೆ, ಚುನಾವಣೆಯ ಪ್ರತಿ ಸೋಲಿನ ನಂತರವೂ ಹಾಕುವ ಈ ಕೂಗು ನಿಜವಾದ ಅಪಾಯ ಬಂದಾಗ ಕೇಳಿಸಿಕೊಳ್ಳುವವರೇ ಇಲ್ಲದಂತೆ ಮಾಡಿ ಬಿಡುತ್ತದೆ. ಈಗ ಈ ಕೂಗಿಗೆ ಹೊಸ ನೆಪ ಸಿಕ್ಕಿದೆ.
ಅದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್). ಕಾಂಗ್ರೆಸ್ ಪ್ರಜಾಪ್ರಭುತ್ವ ವನ್ನು ಉಳಿಸಿ ಎಂದು ಪ್ರತಿಭಟಿಸುತ್ತಿದ್ದರೆ, ಬಿಜೆಪಿ ಇದನ್ನು ಕಾಂಗ್ರೆಸ್ನ ಪೂರ್ವಗ್ರಹಪೀಡಿತ, ರಾಜಕೀಯ ದ್ವೇಷದ ಹೋರಾಟವೆಂದು ಬಣ್ಣಿಸಿ ಲೋಕತಂತ್ರ ಬಚಾವೋ, ಅರಾಜಕತಾ ಹಟಾವೋ ಎಂದು ತಿರುಗೇಟು ನೀಡಿದೆ. ಈ ಕೋಲಾಹಲದ ನಡುವೆ ಚುನಾವಣಾ ಪ್ರಕ್ರಿಯೆಯ ಮೂಲಭೂತ ಪ್ರಶ್ನೆಗಳು ತೆರೆಮರೆಗೆ ಸರಿಯುವ ಅಪಾಯವಿದೆ.
ಅಷ್ಟಕ್ಕೂ ತುರ್ತುಪರಿಸ್ಥಿತಿಯ ಸಂದರ್ಭವನ್ನು ಬಿಟ್ಟರೆ ಪ್ರಜಾಪ್ರಭುತ್ವವನ್ನು ಉಳಿಸಬೇಕಾದ ಪ್ರಮೇಯ ದೇಶಕ್ಕೆ ಬಂದಿಲ್ಲ. ಬದಲಿಗೆ ಎಲ್ಲವನ್ನೂ ಇಲ್ಲಿ ಪ್ರಜಾಪ್ರಭುತ್ವವೇ ರಕ್ಷಿಸಿದೆ. ನೆರೆಯ ಅನೇಕ ದೇಶಗಳು ಸೈನ್ಯದ ಆಳ್ವಿಕೆ, ಕ್ಷಿಪ್ರಕ್ರಾಂತಿ, ಸರ್ವಾಧಿಕಾರಗಳನ್ನು ಕಂಡಿವೆ. ಆದರೆ ಭಾರತ ದಲ್ಲಿ ಸೈನ್ಯ ಎಂದೂ ಬ್ಯಾರಕ್ಕುಗಳ ಗಡಿ ದಾಟಿಲ್ಲ. ಇಲ್ಲಿ ಅಧಿಕಾರ ಬದಲಾವಣೆ ಯಾವಾಗಲೂ ಮತದಾನದ ಮೂಲಕವೇ ನಡೆದಿದೆ.
ಇದನ್ನೂ ಓದಿ: Shashidhara Halady Column: ಪರಿಸರ ರಕ್ಷಿಸಲು ಇಂಥ ಕೆಲಸ ಮಾಡಬೇಕಾಗಿದೆ !
ವಿದೇಶಿ ಸೈನಿಕ ಆಕ್ರಮಣಗಳು ನಡೆದರೂ ಇಲ್ಲಿನ ಪ್ರಜಾಪ್ರಭುತ್ವ ತನ್ನ ನಾಗರಿಕರ ಕೂದಲನ್ನೂ ಕೊಂಕಿಸದಂತೆ ಕಾಪಾಡಿದೆ. ಪ್ರಜಾಪ್ರಭುತ್ವದ ಕಾರಣದಿಂದಲೇ ಇಲ್ಲಿ ನಾಗರಿಕ ದಂಗೆಗಳು, ಸೈನಿಕ ಕ್ಷಿಪ್ರಕ್ರಾಂತಿಗಳು ನಡೆದಿಲ್ಲ. ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ಧಕ್ಕೆಯಾದಾಗ ನ್ಯಾಯಾಲಯ, ಮಾಧ್ಯಮ ಮತ್ತು ಮತದಾರ ಈ ಮೂವರೂ ಒಟ್ಟಿಗೆ ನಿಂತಿzರೆ. ಭಾರತದ ಪ್ರಜಾಪ್ರಭುತ್ವ ಇಷ್ಟು ಗಟ್ಟಿಯಾಗಿರುವುದಕ್ಕೆ ಅದು ಸಂಕುಚಿತವಾಗಿಲ್ಲದಿರುವುದೇ ಕಾರಣ.
ಭಾಷೆ, ಜಾತಿ, ಧರ್ಮ, ಪ್ರದೇಶಗಳ ವೈವಿಧ್ಯವಿರುವ ದೇಶ ಒಂದೇ ಸೂರಿನಡಿ ಉಳಿದಿರುವುದು ಬಂದೂಕಿನ ಬಲದಿಂದಲ್ಲ, ಬದಲಿಗೆ ಎಲ್ಲರಿಗೂ ತಮ್ಮ ದನಿ ಎತ್ತಲು ಅವಕಾಶವಿದೆ ಎಂಬ ನಂಬಿಕೆಯಿಂದ. ಸ್ವಾತಂತ್ರ್ಯಾನಂತರ ದೇಶದಲ್ಲಿ ನೂರಾರು ಕೋಮುಗಲಭೆಗಳು ನಡೆದಿವೆ. ಕೆಲವು ಸಂದರ್ಭಗಳಲ್ಲಿ ಹಿಂದು-ಮುಸಲ್ಮಾನರು ಒಗ್ಗಟ್ಟಾಗಿ ಬದುಕಲು ಸಾಧ್ಯವೇ ಇಲ್ಲವೆನ್ನುವ ವಾದಗಳು ದ್ವಿರಾಷ್ಟ್ರವಾದದ ಕಾಲದಷ್ಟೇ ತೀವ್ರವಾಗಿ ಮಂಡನೆಯಾಗಿವೆ. ಆದರೆ ದೇಶ ಒಡೆಯುವ ಮಟ್ಟಕ್ಕೆ ಯಾವ ವಾದವೂ ಮುಟ್ಟಿಲ್ಲ.
ತಜ್ಞರು-ಚಿಂತಕರು ಇಲ್ಲಿನ ವ್ಯವಸ್ಥೆಯನ್ನು ಸಾಕಷ್ಟು ವ್ಯಾಖ್ಯಾನ-ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಆಡಳಿತದಲ್ಲಿ ಸುಧಾರಣೆಯಾಗಬೇಕೆಂಬ ಕೂಗೆದ್ದಿವೆ. ಆದರೆ ಪ್ರಜಾಪ್ರಭುತ್ವದ ರೂಪುರೇಖೆಯನ್ನೇ ಬದಲಿಸಬೇಕೆಂಬ ಬೇಡಿಕೆ ಪ್ರಜೆಗಳಿಂದ ಇದುವರೆಗೂ ಬಂದಿಲ್ಲ. ಅನೇಕ ನ್ಯೂನತೆಗಳಿದ್ದರೂ ಭಾರತೀಯ ನಾಗರಿಕ ಪ್ರಜಾಪ್ರಭುತ್ವ ವಿರೋಧಿ ನಕ್ಸಲಿಸಂ ಅನ್ನು ಬೆಂಬಲಿಸಿಲ್ಲ. ಅಂದರೆ ಪ್ರಜಾಪ್ರಭುತ್ವವನ್ನು ಕೊಲ್ಲಿ ಎಂದವರನ್ನು ನಾಗರಿಕರು ಸಹಿಸಿಲ್ಲ. ಯಾರೂ ಬೋಧಿಸದಿದ್ದರೂ ಸ್ವತಃ ನಾಗರಿಕರಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕೆಂಬ ಪ್ರಜ್ಞೆ ಮೂಡಿದೆ.
ತುರ್ತುಪರಿಸ್ಥಿತಿಯ ಕರಾಳತೆಯನ್ನೇ ದೀರ್ಘಕಾಲ ಸಹಿಸಿಕೊಳ್ಳದ ಭಾರತೀಯ ಹುಟ್ಟಿನಿಂದಲೇ ಪ್ರಜಾಪ್ರಭುತ್ವದ ಆರಾಧಕ. 1977ರಲ್ಲಿ ಅದೇ ಮತದಾರ ಅಽಕಾರದ ತುತ್ತತುದಿಯಲ್ಲಿದ್ದವರನ್ನು ಮತಪೆಟ್ಟಿಗೆಯ ಮೂಲಕವೇ ಕೆಳಗಿಳಿಸಿದ್ದನ್ನು ಜಗತ್ತು ವಿಸ್ಮಯದಿಂದ ನೋಡಿತು. ಅಂಥ ನೆಲದಲ್ಲಿ ಇಂದು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಅರಾಜಕತೆಯ ದಾಟಿಯಲ್ಲಿ ಕೂಗುವವರನ್ನು ಜನ ಸಹಿಸುವರೇ ಎಂಬುದು ಸದ್ಯದ ಪ್ರಶ್ನೆ.
ವಿರೋಧ ಪಕ್ಷಗಳು ಹೇಳುವಂತೆ ಪ್ರಜಾಪ್ರಭುತ್ವವನ್ನು ಉಳಿಸಲೇಬೇಕಾದ ತುರ್ತು ನಿಜಕ್ಕೂ ಬಂದಿದ್ದರೆ, ನಾವು ನಮ್ಮ ಪ್ರಜಾಪ್ರಭುತ್ವವನ್ನು ಅತ್ಯಂತ ದುರ್ಬಲ ಎಂದು ಒಪ್ಪಿಕೊಂಡಂತೆ. ಆದರೆ ವಾಸ್ತವ ಬೇರೆಯೇ ಇದೆ. ಯಾವುದೇ ಚುನಾವಣೆಗಳು ಅಭ್ಯರ್ಥಿ- ಪ್ರಣಾಳಿಕೆಗಳಿಗಿಂತ ಮೊದಲು ಮತದಾರರ ಪಟ್ಟಿಯಿಂದ ಆರಂಭವಾಗುತ್ತವೆ. ಯಾರಿಗೆ ಮತದಾನದ ಹಕ್ಕಿದೆ, ಅವರು ಎಲ್ಲಿ ಅದನ್ನು ಚಲಾಯಿಸಬೇಕು ಎಂಬುದನ್ನು ಚುನಾವಣಾ ಆಯೋಗ ಮೊದಲು ನಿರ್ಧರಿಸುತ್ತದೆ.
ಜಾಗತಿಕ ಅಧ್ಯಯನಗಳೂ ಚುನಾವಣಾ ಪ್ರಾಮಾಣಿಕತೆಯ ಬಗ್ಗೆ ಚಿಂತಿಸುವಾಗ ಪಟ್ಟಿಯ ಶುದ್ಧತೆ ಯ ಮೇಲೆಯೇ ಹೆಚ್ಚು ಒತ್ತು ನೀಡುತ್ತವೆ. ಅರ್ಹರಿಗೆ ಮತದ ಹಕ್ಕು ತಪ್ಪಬಾರದೆಂದು ಆಯೋಗ ಗಳು ಶ್ರಮಿಸುತ್ತವೆ, ಮತ್ತು ನಾನಾ ಕಾರಣಗಳಿಂದ ಮತದಾರನಿಗೆ ಆ ಹಕ್ಕು ತಪ್ಪುವುದನ್ನು ಸಂವಿಧಾನಗಳು ಸಮಾನತೆಯ ಹರಣವೆಂದೇ ಭಾವಿಸುತ್ತವೆ.
ರಾಜಕೀಯ ವಿಶ್ಲೇಷಕ ರಾಬರ್ಟ್ ಡಾಲ್ ಅವರ ‘ಪಾಲಿಆರ್ಕಿ’ ಮಾನದಂಡಗಳು ಪ್ರತಿ ನಾಗರಿಕನ ಮತಕ್ಕೂ ಸಮಾನ ತೂಕ ಇರಬೇಕು ಎನ್ನುತ್ತವೆ. ತತ್ವಜ್ಞಾನಿ ಜಾನ್ ರಾಲ್ಸ ಅವರು, ಸಮಾನ ರಾಜಕೀಯ ಸ್ವಾತಂತ್ರ್ಯಗಳು ಕಾಗದದ ಮೇಲಷ್ಟೇ ಉಳಿಯದೆ, ಅವು ನ್ಯಾಯಯುತ ಅನುಷ್ಠಾನ ವಾಗಬೇಕು ಎಂದಿದ್ದರು. ಭಾರತದ ಸಂವಿಧಾನ ರಚನಾಕಾರರು ಈ ಸೂಕ್ಷ್ಮತೆಯನ್ನು ಸರಿಯಾಗಿ ಗ್ರಹಿಸಿದ್ದರು. ಅದಕ್ಕಾಗಿಯೇ 324 ವಿಧಿ ಮತದಾರರ ಪಟ್ಟಿಯ ತಯಾರಿ ಮತ್ತು ಚುನಾವಣೆಗಳ ಮೇಲ್ವಿಚಾರಣೆಯ ಹೊಣೆಯನ್ನು ಚುನಾವಣಾ ಆಯೋಗಕ್ಕೆ ನೀಡಿತ್ತು.
ಸಂವಿಧಾನ ರಚನಾ ಸಭೆಯ ತಮ್ಮ ಅಂತಿಮ ಭಾಷಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು, ರಾಜಕೀಯ ಜೀವನದ ತಳಹದಿ ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದೇ ಮೌಲ್ಯ ಎಂದು ಸ್ಪಷ್ಟಪಡಿಸಿದ್ದರು. ಅವರು ಜಾರ್ಜ್ ಗ್ರೋಟ್ ಎಂಬ ವಿದ್ವಾಂಸರನ್ನು ಉಲ್ಲೇಖಿಸಿ ಸಂವಿಧಾನಬದ್ಧ ನೈತಿಕತೆಯನ್ನು ನಿರಂತರ ಅಭ್ಯಾಸದ ಮೂಲಕ ಬೆಳೆಸಿಕೊಳ್ಳಬೇಕು ಎಂದಿದ್ದರು.
ಸಾವಿಧಾನಿಕ ಸಂಸ್ಥೆಗಳನ್ನು ಕೇವಲ ರಾಜಕೀಯ ಕನ್ನಡಕದಿಂದ ನೋಡಬಾರದು ಎಂಬುದೇ ಅದರ ತಿರುಳು. ಇದೇ ಆಶಯದಿಂದ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 21 ಆಯೋಗಕ್ಕೆ ಅಧಿಕಾರ ಕೊಟ್ಟಿತು. ಇದರಿಂದ 1951ರಿಂದ 2014ರ ನಡುವೆ, ವಿವಿಧ ಸರ್ಕಾರಗಳ ಅವಧಿಯಲ್ಲಿ ಎಂಟು ಬಾರಿ ಮತದಾರರ ಪರಿಷ್ಕರಣೆಗಳು ನಡೆದವು. ಕಾಂಗ್ರೆಸ್ನ ದೀರ್ಘ ಆಳ್ವಿಕೆಯ ಅವಧಿಗಳೂ ಅದರಲ್ಲಿವೆ.
ಹೀಗಾಗಿ ಇದು ಬಿಜೆಪಿ ಸರ್ಕಾರದ ಹೊಸ ಆವಿಷ್ಕಾರವೂ ಅಲ್ಲ, ರಾಜಕೀಯ ಪ್ರಯೋಗವೂ ಅಲ್ಲ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಜಾಪ್ರಭುತ್ವಕ್ಕೆ ಹೊಸತನವನ್ನು ತುಂಬುತ್ತಲೇ ಬಂದ ಕಾರಣಕ್ಕೆ ಪರಿಷ್ಕರಣೆಗಳು ಕಾಲಕಾಲಕ್ಕೆ ನಡೆದಿವೆ. ಇಂದೂ ನಡೆದಿವೆ. ಆದರೆ ಹಿಂದೆ ಪರಿಷ್ಕರಣೆ ಯನ್ನು ಚುನಾವಣಾ ನಿಖರತೆಯ ಸಾಧನವೆಂದು ಕರೆದವರೇ ಇಂದು ಅದೇ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವಕ್ಕೆ ಅಪಾಯವೆಂದು ಏಕೆ ಬಿಂಬಿಸುತ್ತಿದ್ದಾರೆ? ಇಂದಿನದ್ದೂ ಅದೇ ಪ್ರಕ್ರಿಯೆ, ಆದರೆ ಬದಲಾಗಿರುವುದು ರಾಜಕೀಯ ಸ್ಥಿತಿ ಮಾತ್ರ.
ಕಾಲ ಬದಲಾಯಿತೆಂಬ ಕಾರಣಕ್ಕೆ ಪಟ್ಟಿ ಪೂರ್ವಗ್ರಹದಿಂದ ಕೂಡಿದೆ ಎನ್ನಬಹುದೇ? ಸಾರ್ವಜನಿಕ ದಾಖಲೆಗಳನ್ನು ಶಾಶ್ವತವಾಗಿ ಸರಿಯೆಂದು ಭಾವಿಸದೆ ಕಾಲಕಾಲಕ್ಕೆ ಪರಿಶೀಲಿಸುವುದು ಸುಶಾಸನದ ಮೂಲಭೂತ ತತ್ವಗಳಂದು. ಅದರಲ್ಲೂ ನಗರೀಕರಣ, ತೀವ್ರಗೊಂಡ ಆಂತರಿಕ ವಲಸೆ ಮತ್ತು ಡಿಜಿಟಲ್ ಬದಲಾವಣೆಗಳ ಈ ಕಾಲದಲ್ಲಿ ಇದು ಆಡಳಿತದ ತುರ್ತು ಅಗತ್ಯ. ಜನರು ಹಳ್ಳಿಗಳಿಂದ ನಗರಗಳಿಗೆ, ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುತ್ತಾರೆ.
ಯುವ ನಾಗರಿಕರು ಮತದಾನಕ್ಕೆ ಅರ್ಹರಾಗುತ್ತಾರೆ. ನಾನಾ ಕಾರಣಗಳಿಂದ ವಿಳಾಸ ಬದಲಾಗು ತ್ತದೆ. ಮೃತರ ಹೆಸರು ಪಟ್ಟಿಯ ಉಳಿಯುತ್ತದೆ. ನಿಯಮಿತ ಪರಿಶೀಲನೆ ಮತ್ತು ಪರಿಷ್ಕರಣೆಗಳಿಲ್ಲ ದಿದ್ದರೆ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಮತ್ತು ಆಡಳಿತದ ಮೇಲಿನ ಸಾರ್ವಜನಿಕ ವಿಶ್ವಾಸ ಎರಡೂ ಕುಗ್ಗುತ್ತವೆ. ಮೃತ ವ್ಯಕ್ತಿಯನ್ನು ದಾಖಲೆಯಿಂದ ಗುರುತಿಸುವುದು, ಶಾಶ್ವತವಾಗಿ ಬೇರೆಡೆ ತೆರಳಿದವರನ್ನು ಪರಿಶೀಲಿಸುವುದು ಯಾರ ಹಕ್ಕನ್ನೂ ಕಸಿಯುವ ಕೃತ್ಯವಲ್ಲ.
ಪರಿಷ್ಕರಣೆಯಲ್ಲಿ ಅರ್ಹರ ಹೆಸರು ತೆಗೆದುಹಾಕುವುದು ಗಂಭೀರ ಲೋಪವೆಂಬುದು ನಿಜ. ಆದರೆ ಆ ಭಯದಿಂದ ಪರಿಷ್ಕರಣೆಯೇ ನಡೆಯದಿದ್ದರೆ? ದೋಷ ತೆಗೆಯುವುದು ಮತ್ತು ಅರ್ಹರ ಹಕ್ಕು ರಕ್ಷಿಸುವುದು ಪರಸ್ಪರ ಪೂರಕ ಗುರಿಗಳೇ ಹೊರತು ವಿರೋಧಾತ್ಮಕವಲ್ಲ. ಹಾಗಾಗಿ ಪರಿಷ್ಕರಣೆಯ ಯಶಸ್ಸನ್ನು ಎಷ್ಟು ಲಕ್ಷ ಹೆಸರು ತೆಗೆಯಲಾಯಿತು ಎಂಬುದರಿಂದ ಅಳೆಯುವ ಬದಲು, ಕಡಿತಗೊಂಡ ಪಟ್ಟಿ ಎಷ್ಟು ನಿಖರ, ಹೊರಗುಳಿದ ಅರ್ಹರಿಗೆ ಮರುಸೇರ್ಪಡೆಯ ಅವಕಾಶ ಎಷ್ಟು ಸಿಕ್ಕಿತು, ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಏನೆಂಬುದೇ ನಿಜವಾದ ಮಾನದಂಡ. ಆ ಮಾನದಂಡಕ್ಕೆ ಅಗತ್ಯವಾದ ರಕ್ಷಣೆಗಳು ವ್ಯವಸ್ಥೆಯ ಇವೆ.
ಸಂವಿಧಾನದ ಆಶಯದಂತೆ ರೂಪುಗೊಂಡ ಸಾಂವಿಧಾನಿಕ ಸಂಸ್ಥೆಯೊಂದು ಸಂವಿಧಾನದ ನಿಯಮಗಳ ಚೌಕಟ್ಟಿನೊಳಗೇ ಈ ಕೆಲಸ ಮಾಡಿದೆ. ಮನೆಮನೆ ಭೇಟಿ ನೀಡಿ ಪರಿಶೀಲಿಸುವ ಬೂತ್ ಮಟ್ಟದ ಅಧಿಕಾರಿಗಳು, ಕರಡು ಪಟ್ಟಿ ಪ್ರಕಟಣೆ, ಆಕ್ಷೇಪಣೆ-ಹಕ್ಕುಗಳಿಗೆ ಕಾಲಾವಕಾಶ, ನಂತರ ಮೇಲ್ಮನವಿಯ ಅವಕಾಶ ಎಲ್ಲವೂ ಇಲ್ಲಿವೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಬೂತ್ ಏಜೆಂಟರಿಗೂ ಪಾತ್ರವಿದೆ. ಅಂದರೆ ಪಟ್ಟಿಯಲ್ಲಿ ಲೋಪ ಕಂಡರೆ ಅದನ್ನು ಬೆರಳು ಮಾಡಿ ತೋರಿಸುವ ಹೊಣೆ ವಿರೋಧ ಪಕ್ಷಗಳ ಕಾರ್ಯಕರ್ತರದ್ದೂ ಹೌದು. ದಾಖಲೆ ಸಹಿತ ಆಕ್ಷೇಪಣೆ ಸಲ್ಲಿಸುವ ಬದಲು ಪತ್ರಿಕಾಗೋಷ್ಠಿಗಳಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಘೋಷಿಸುವುದು ರಾಜಕೀಯವೇ ಹೊರತು ಹೋರಾಟವಲ್ಲ.
ಪ್ರತಿಭಟನೆಗಿಂತ ಪ್ರಾಮಣಿಕತೆ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ. ಹೆಸರು ಬಿಟ್ಟುಹೋದ ಅರ್ಹ ಮತದಾರನ ಸಹಾಯಕ್ಕೆ ಧಾವಿಸುವುದು ಮತ್ತು ಅವನ ಹೆಸರು ಸೇರಿಸಲು ಹೋರಾಡುವುದು ನಿಜವಾದ ಪ್ರಜಾಪ್ರಭುತ್ವ ರಕ್ಷಣೆ. ಪರಿಷ್ಕರಣೆಯನ್ನು ನ್ಯಾಯಾಲಯ ಕೂಡ ಮಾನ್ಯ ಮಾಡಿದೆ. ಅಂಥಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿ ಎಂದರೆ ನ್ಯಾಯಾಲಯದ ಮಾತಿಗೆ ಕಿಮ್ಮತ್ತೇನು? ಸಂವಿಧಾನ ಉಳಿಸಿ ಎನ್ನುವವರೇ ಸಂವಿಧಾನದ ವ್ಯವಸ್ಥೆಗಳಾದ ಆಯೋಗ, ನ್ಯಾಯಾಲಯ ಮತ್ತು ಮೇಲ್ಮನವಿ ಪ್ರಕ್ರಿಯೆಯ ಮೇಲೆ ನಂಬಿಕೆ ಕಳೆದುಕೊಂಡರೆ ಅದೊಂದು ವಿರೋಧಾಭಾಸ.
ಸಂವಿಧಾನ ಮತದಾರರಿಗೆ ಮೋಸವಾಗಲು ಬಿಡುವುದಿಲ್ಲ ಎಂಬಷ್ಟಾದರೂ ವಿಶ್ವಾಸ ಎಲ್ಲರಿಗೂ ಇರಬೇಕು. ತಮ್ಮ ಪಕ್ಷ ಗೆzಗ ಚುನಾವಣಾ ಆಯೋಗ ನಿಷ್ಪಕ್ಷಪಾತಿ, ಸೋತಾಗ ಕೈಗೊಂಬೆ ಎಂಬ ನೀತಿ ಆಯಾ ಪಕ್ಷಗಳ ಮಾನಸಿಕ ದೋಷವೇ ಹೊರತು ಪ್ರಜಾಪ್ರಭುತ್ವದ ದೋಷವಲ್ಲ. ಪರಿಷ್ಕರಣೆ ಯಿಂದ ಹೊರಬಿದ್ದ ಅಂಕಿಅಂಶಗಳನ್ನು ಎಲ್ಲ ಪಕ್ಷಗಳೂ ಜವಾಬ್ದಾರಿಯಿಂದ ಅರ್ಥಮಾಡಿ ಕೊಳ್ಳಬೇಕು. ಕೇವಲ ಆರೋಪಗಳು, ಘೋಷಣೆಗಳು ಯಾರ ಪ್ರಾಮಾಣಿಕತೆಗೂ ಸಾಕ್ಷಿಯಾಗುವು ದಿಲ್ಲ.
ನಿಸ್ಸಂಶಯವಾಗಿ ಬೀದಿಗಿಳಿದು ಪ್ರತಿಭಟಿಸುವ ಹಕ್ಕು ಪ್ರಜಾಪ್ರಭುತ್ವದ ಭಾಗವೇ ಹೌದು. ಆದರೆ ಸಂಸತ್ತು, ಆಯೋಗ, ನ್ಯಾಯಾಲಯ ಎಂಬ ಮೂರೂ ಬಾಗಿಲುಗಳು ತೆರೆದಿರುವಾಗ ಅವುಗಳಲ್ಲಿ ಯಾವುದನ್ನೂ ಬಳಸದೆ ಕೇವಲ ಆರೋಪಗಳ ಅಬ್ಬರವನ್ನೇ ಹೋರಾಟ ಎಂದು ಕರೆಯುವುದೆಷ್ಟು ಸರಿ? ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಒತ್ತಾಯಿಸುವ ಪಕ್ಷಗಳು ಮತದಾರರ ಪಟ್ಟಿಯ ಗುಣಮಟ್ಟಕ್ಕೂ ಅದೇ ಬದ್ಧತೆ ತೋರಬೇಕಲ್ಲವೇ? ಚುನಾವಣೆಗಳನ್ನು ನಡೆಸುವುದರಿಂದ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳುವುದಿಲ್ಲ, ಮತದಾರರ ಪಟ್ಟಿಗಳು ನಿಖರವೂ ಪಾರದರ್ಶಕವೂ ವಿಶ್ವಾಸಾರ್ಹವೂ ಆಗಿರುವಾಗ ಅದು ಬಲಗೊಳ್ಳುತ್ತದೆ. ಅಂತಹ ಸಂಸ್ಥೆಗೆ ತನ್ನ ಸಾಂವಿಧಾನಿಕ ಕರ್ತವ್ಯಗಳ ನಿರ್ವಹಣೆಯಲ್ಲಿ ಬೆಂಬಲ ಸಿಗಬೇಕು, ಪುರಾವೆ ಇರುವಲ್ಲಿ ಪ್ರಶ್ನೆ ಕೇಳಬೇಕು. ಪುರಾವೆ ಇಲ್ಲದಲ್ಲಿ ನಾಗರಿಕರಲ್ಲಿ ತಪ್ಪು ಅಭಿಪ್ರಾಯ ಹರಡಬಾರದು. ಅದೇ ಪ್ರಜಾಪ್ರಭುತ್ವದ ನಿಜವಾದ ರಕ್ಷಣೆ.