ಸಂಪಾದಕರ ಸದ್ಯಶೋಧನೆ
ವಿಮಾನದಲ್ಲಿ ಆಸನಗಳನ್ನು ವ್ಯವಸ್ಥೆ ಮಾಡುವುದು ಒಂದು ಸಂಕೀರ್ಣ ಪ್ರಕ್ರಿಯೆ. ಇದು ಪ್ರಯಾಣಿಕರ ಸುರಕ್ಷತೆ, ಸೌಕರ್ಯ ಮತ್ತು ವಿಮಾನಯಾನ ಸಂಸ್ಥೆಯ ಲಾಭದಾಯಕತೆಯನ್ನು ಸಮತೋಲನಗೊಳಿಸಬೇಕಾದ ಒಂದು ಪ್ರಮುಖ ವಿಷಯ. ವಿಮಾನಯಾನ ಸಂಸ್ಥೆಗಳು ವಿಮಾನದ ಗಾತ್ರ, ಅದರ ಉದ್ದೇಶ ಮತ್ತು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಆಸನಗಳನ್ನು ವಿನ್ಯಾಸ ಗೊಳಿಸುತ್ತವೆ.
ವಿಮಾನಗಳಲ್ಲಿ ಸಾಮಾನ್ಯವಾಗಿ ಆಸನಗಳನ್ನು 3 ಮುಖ್ಯ ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಇಕಾನಮಿ, ಬಿಸಿನೆಸ್ ಮತ್ತು - ಕ್ಲಾಸ್. ಕೆಲವೊಮ್ಮೆ, ಈ ವರ್ಗಗಳ ನಡುವೆ ಪ್ರೀಮಿಯಂ ಇಕಾನಮಿ ಎಂಬ ಇನ್ನೊಂದು ವರ್ಗವನ್ನೂ ಸೇರಿಸಲಾಗುತ್ತದೆ. ಇದು ವಿಮಾನದಲ್ಲಿ ಅತ್ಯಂತ ಸಾಮಾನ್ಯ ಮತ್ತು ದೊಡ್ಡ ಭಾಗವನ್ನು ಆಕ್ರಮಿಸುವ ವರ್ಗ. ಈ ವಿಭಾಗದಲ್ಲಿ ಟಿಕೆಟ್ ದರವು ಕಡಿಮೆ ಇರುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಸೇವೆಗಳು ಮತ್ತು ಸೌಲಭ್ಯಗಳು ಸೀಮಿತವಾಗಿರುತ್ತವೆ.
ಇಕಾನಮಿ ಕ್ಲಾಸ್‌ನಲ್ಲಿ ಆಸನಗಳ ನಡುವಿನ ಅಂತರ (ಒಂದು ಆಸನದ ಹಿಂಭಾಗದಿಂದ ಮುಂದಿನ ಆಸನದ ಹಿಂಭಾಗದವರೆಗಿನ ಅಂತರ) ಸಾಮಾನ್ಯವಾಗಿ 28ರಿಂದ 32 ಇಂಚುಗಳಷ್ಟು ಇರುತ್ತದೆ. ಈ ಅಂತರವು ಕಡಿಮೆ ಇರುವುದರಿಂದ, ಕಾಲುಗಳಿಗೆ ಜಾಗ ಕಡಿಮೆಯಿರುತ್ತದೆ. ಆಸನಗಳ ಅಗಲವು ಸಾಮಾನ್ಯವಾಗಿ 17 ರಿಂದ 18 ಇಂಚುಗಳಷ್ಟು ಇರುತ್ತದೆ.
ಇದನ್ನೂ ಓದಿ: Vishweshwar Bhat Column: ರನ್ ವೇ ಎಕ್ಸ್ ಕರ್ಷನ್ ಎಂದರೇನು ?
ವಿಮಾನಯಾನ ಸಂಸ್ಥೆಗಳು ಹೆಚ್ಚು ಪ್ರಯಾಣಿಕರನ್ನು ಕೂರಿಸಲು, ಆಸನಗಳನ್ನು ಆದಷ್ಟು ಚಿಕ್ಕದಾಗಿ ವಿನ್ಯಾಸಗೊಳಿಸುತ್ತವೆ. ಇಕಾನಮಿ ಕ್ಲಾಸ್‌ನಲ್ಲಿ ಆಸನಗಳನ್ನು ಸಾಲುಗಳಲ್ಲಿ ಜೋಡಿಸಲಾಗುತ್ತದೆ. ಉದಾಹರಣೆಗೆ, ‘ಏರ್‌ಬಸ್ ಎ-320’ನಂಥ ಸಣ್ಣ ವಿಮಾನಗಳಲ್ಲಿ 3-3 ವಿನ್ಯಾಸ (ಒಂದು ಕಡೆ 3, ಇನ್ನೊಂದು ಕಡೆ 3 ಆಸನಗಳು, ನಡುವೆ ಒಂದು ಕಾರಿಡಾರ್) ಇರುತ್ತದೆ.
ಬೋಯಿಂಗ್ 777’ನಂಥ ದೊಡ್ಡ ವಿಮಾನಗಳಲ್ಲಿ 3-4-3 ವಿನ್ಯಾಸ (ಒಂದು ಕಡೆ 3, ಮಧ್ಯದಲ್ಲಿ 4, ಇನ್ನೊಂದು ಕಡೆ 3) ಇರುತ್ತದೆ. ಈ ವರ್ಗದಲ್ಲಿ ಮೂಲಭೂತ ಸೌಲಭ್ಯಗಳಾದ ಸಣ್ಣ ಮನರಂಜನಾ ಪರದೆ, ಒಂದು ಊಟದ ಮೇಜು ಮತ್ತು ಸ್ವಲ್ಪ ಮಲಗುವಂತೆ ಮಾಡಬಹುದಾದ ಆಸನಗಳು ಲಭ್ಯವಿರುತ್ತವೆ. ಪ್ರೀಮಿಯಂ ಇಕಾನಮಿ ಕ್ಲಾಸ್ ಇದೆಯಲ್ಲ ಅದು ಇಕಾನಮಿ ಮತ್ತು ಬಿಸಿನೆಸ್ ಕ್ಲಾಸ್ ನಡುವಿನ ಒಂದು ವರ್ಗ. ಈ ವಿಭಾಗದಲ್ಲಿ ಪ್ರಯಾಣಿಕರು ಇಕಾನಮಿ ಕ್ಲಾಸ್‌ಗಿಂತ ಸ್ವಲ್ಪ ಹೆಚ್ಚು ದರವನ್ನು ಪಾವತಿಸಿ, ಉತ್ತಮ ಸೌಲಭ್ಯಗಳನ್ನು ಪಡೆಯಬಹುದು.
ಇದು ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕವಾಗಿ ಕೂರಲು ಅನುವು ಮಾಡಿಕೊಡುತ್ತದೆ. ಈ ವರ್ಗದ ಆಸನಗಳು ಇಕಾನಮಿ ಕ್ಲಾಸ್‌ಗಿಂತ ಹೆಚ್ಚು ಆರಾಮದಾಯಕವಾಗಿ ಹಿಮ್ಮುಖವಾಗಿ ಮಲಗುತ್ತವೆ. ಅಲ್ಲದೇ, ಉತ್ತಮ ಗುಣಮಟ್ಟದ ಆಹಾರ ಮತ್ತು ಹೆಚ್ಚುವರಿ ಲಗೇಜ್ ಸೌಲಭ್ಯಗಳು ಸಿಗುತ್ತವೆ. ಬಿಸಿನೆಸ್ ಕ್ಲಾಸ್ ಮುಖ್ಯವಾಗಿ ವ್ಯಾಪಾರ ಮತ್ತು ವೃತ್ತಿಪರ ಪ್ರಯಾಣಿಕರಿಗಾಗಿ ವಿನ್ಯಾಸ ಗೊಳಿಸಲ್ಪಟ್ಟಿದೆ.
ಈ ವರ್ಗದ ಟಿಕೆಟ್ ದರವು ಅಧಿಕವಾಗಿದ್ದು, ಅದಕ್ಕೆ ತಕ್ಕಂತೆ ಸೇವೆ ಮತ್ತು ಸೌಲಭ್ಯಗಳು ಅತ್ಯುತ್ತಮ ವಾಗಿರುತ್ತವೆ. ಬಿಸಿನೆಸ್ ಕ್ಲಾಸ್‌ನಲ್ಲಿ ಆಸನಗಳು ವಿಶಾಲವಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಲಗುವ ಹಾಸಿಗೆಗಳಾಗಿ ಪರಿವರ್ತಿಸಬಹುದು (Lie flat beds). ಕೆಲವು ಆಧುನಿಕ ವಿಮಾನಗಳಲ್ಲಿ, ಪ್ರತಿಯೊಬ್ಬ ಪ್ರಯಾಣಿಕರಿಗೂ ತಮ್ಮದೇ ಆದ ಖಾಸಗಿ ಜಾಗ (Suite) ಇರುತ್ತದೆ.
ಬಿಸಿನೆಸ್ ಕ್ಲಾಸ್ ನಲ್ಲಿ ಆಸನಗಳನ್ನು ವಿವಿಧ ಮಾದರಿಗಳಲ್ಲಿ ಜೋಡಿಸಬಹುದು. ಉದಾಹರಣೆಗೆ, 1-2-1 ಅಥವಾ 2-2-2 ಜೋಡಣೆ. ಈ ರೀತಿಯ ವಿನ್ಯಾಸವು ಪ್ರತಿಯೊಬ್ಬ ಪ್ರಯಾಣಿಕರಿಗೂ ನೇರವಾಗಿ ಕಾರಿಡಾರ್‌ಗೆ ಹೋಗಲು ಅನುಕೂಲ ಕಲ್ಪಿಸುತ್ತದೆ. ಈ ವರ್ಗದಲ್ಲಿ ಉನ್ನತ ಗುಣಮಟ್ಟದ ಊಟ ಮತ್ತು ಪಾನೀಯಗಳು, ದೊಡ್ಡ ಮನರಂಜನಾ ಪರದೆಗಳು, ವಿದ್ಯುತ್ ಪೋರ್ಟ್ ಗಳು ಮತ್ತು ವೈಫೈ ಸೌಲಭ್ಯಗಳು ಲಭ್ಯವಿರುತ್ತವೆ.
ಅಲ್ಲದೆ, ವಿಮಾನ ಹತ್ತುವ ಮೊದಲು ವಿಶ್ರಾಂತಿ ಪಡೆಯಲು ವಿಮಾನ ನಿಲ್ದಾಣದ ಲೌಂಜ್‌ಗಳ ಪ್ರವೇಶಾವಕಾಶವೂ ಇರುತ್ತದೆ. ಫಸ್ಟ್ ಕ್ಲಾಸ್ ವಿಮಾನದಲ್ಲಿ ಅತ್ಯಂತ ಐಷಾರಾಮಿ ಮತ್ತು ದುಬಾರಿ ವರ್ಗ. ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಕರಿಗೆ ಅತಿ ಹೆಚ್ಚು ಸೌಲಭ್ಯಗಳು ಮತ್ತು ವೈಯಕ್ತಿಕ ಸೇವೆ ಲಭ್ಯವಿರುತ್ತದೆ. ಫಸ್ಟ್ ಕ್ಲಾಸ್ ಆಸನಗಳು ಒಂದು ಸ್ಟುಡಿಯೋ ಅಪಾರ್ಟ್ಮೆಂಟ್‌ನಂತೆ ಇರುತ್ತವೆ.
ಇದರಲ್ಲಿ ಸಂಪೂರ್ಣವಾಗಿ ಮಲಗಲು ಹಾಸಿಗೆ, ಡೈನಿಂಗ್ ಟೇಬಲ್ ಮತ್ತು ಖಾಸಗಿ ಕೋಣೆ ಇರಬಹುದು. ಕೆಲವು ವಿಮಾನಯಾನ ಸಂಸ್ಥೆಗಳು ಶವರ್ ಮತ್ತು ವೈಯಕ್ತಿಕ ಸೌಲಭ್ಯಗಳನ್ನು ಸಹ ನೀಡುತ್ತವೆ. ಸಾಮಾನ್ಯವಾಗಿ ಈ ವರ್ಗದಲ್ಲಿ ಆಸನಗಳ ಜೋಡಣೆ 1-1-1 ಅಥವಾ 1-2-1 ಆಗಿರುತ್ತದೆ.
ಇದು ಪ್ರಯಾಣಿಕರಿಗೆ ಸಂಪೂರ್ಣ ಖಾಸಗಿ ಅನುಭವವನ್ನು ನೀಡುತ್ತದೆ. - ಕ್ಲಾಸ್ ಪ್ರಯಾಣಿಕರಿಗೆ ವೈಯಕ್ತಿಕ ಕ್ಯಾಬಿನ್ ಸಿಬ್ಬಂದಿ ಸೇವೆ, ಅತ್ಯುತ್ತಮ ಆಹಾರ ಮತ್ತು ಪಾನೀಯಗಳು, ಮತ್ತು ವಿಮಾನ ನಿಲ್ದಾಣದಲ್ಲಿ ವಿಶೇಷ ಭದ್ರತಾ ಮತ್ತು ಲೌಂಜ್ ಸೌಲಭ್ಯಗಳು ಇರುತ್ತವೆ.