ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಅಧಿಕಾರಿಗಳ ದರ್ಪ ಕಂಡಾಗ ನೆನಪಾದದ್ದು ಜಡ್ಜ್‌ ಕ್ಯಾಪಿಯೊ

ಕಪ್ಪು ನಿಲುವಂಗಿ ಆ ಹುದ್ದೆಯ ಘನತೆಯನ್ನು ಸೂಚಿಸುತ್ತದೆ. ನ್ಯಾಯಾಧೀಶರಿಗೆ ಕಾನೂನು ಗೊತ್ತಿರ ಬೇಕು, ಭಯ-ಪಕ್ಷಪಾತವಿಲ್ಲದೆ ಅದನ್ನು ಅನ್ವಯಿಸಬೇಕು, ತಪ್ಪು ಮಾಡಿದವರಿಗೆ ಅಗತ್ಯವಿದ್ದರೆ ಶಿಕ್ಷೆ ವಿಧಿಸಬೇಕು. ಸಮಾಜ ಇದನ್ನು ನಿರೀಕ್ಷಿಸುತ್ತದೆ. ನ್ಯಾಯಾಧೀಶರು ಎಂದರಲ್ಲಿ ಓಡಾಡಿಕೊಂಡು, ಯಾರನ್ನು ಬೇಕಾದರೂ ಭೇಟಿಯಾಗುವಂತೆ ಇಲ್ಲ. ವ್ಯವಸ್ಥೆಯೇ ಅವರನ್ನು ಪ್ರತ್ಯೇಕವಾಗಿಡುತ್ತದೆ. ಹೀಗಿರುವ ಕಾರ್ಯವಿಧಾನ (Procedure) - ಪ್ರತ್ಯೇಕತೆ ಮತ್ತು ರೀತಿ ರಿವಾಜಿನ ಕೆಲಸ, ಬದುಕು ಕೂಡ

ಶಿಶಿರಕಾಲ

ನ್ಯಾಯಾಧೀಶರು ಒಳಬರುತ್ತಿದ್ದಂತೆ ಇಡೀ ಕೋರ್ಟ್ ರೂಮ್, ವ್ಯವಸ್ಥೆ ಒಪ್ಪಿಸಿಕೊಂಡು‌ ಬಿಡುತ್ತದೆ. ಜಡ್ಜ್ ಬರುತಿದ್ದಂತೆ ಅಲ್ಲಿದ್ದವರ ಮಾತು, ಮೇಜು-ಕಡತಗಳ ಸದ್ದು, ವಕೀಲರ ಗುಸುಗುಸು ಎಲ್ಲವೂ ಕ್ಷಣಮಾತ್ರ ದಲ್ಲಿ ನಿಂತುಬಿಡುತ್ತದೆ. ಜಡ್ಜ್ ತಮ್ಮ ಪೀಠ-ಕುರ್ಚಿ ಮುಟ್ಟುವ ಕೊನೆಯ ಕೆಲವು ಹೆಜ್ಜೆಗಳ ಗೀರು ಶಬ್ದ ಎಲ್ಲರಿಗೂ ಕೇಳಿಸುತ್ತದೆ. ಯಾವ ದೇಶದ ನ್ಯಾಯಾಲಯವೇ ಆಗಿರಬಹುದೇಕೆ, ಎಡೆಯೂ ನ್ಯಾಯಾಧೀಶರಿಗೆ ಅದೇ ಗೌರವ. ನ್ಯಾಯಾಧೀಶರಾದವರು ಯಾವತ್ತೂ ಜಾಸ್ತಿ ಮಾತನಾಡುವುದಿಲ್ಲ ನೋಡಿ.

ಅವರದ್ದೇನಿದ್ದರೂ ಚಿಕ್ಕಚಿಕ್ಕ ಪ್ರಶ್ನೆ. ’ಯಾಕೆ ಮಾಡಿದ್ದು?, ಆಮೇಲೆ ಏನಾಯ್ತು?, ಹೇಗೆ?’ ಇತ್ಯಾದಿ. ಅವರು ಪೊಲೀಸರಂತೆ ಉದ್ದುದ್ದ ಪ್ರಶ್ನಿಸುವುದಿಲ್ಲ, ವಕೀಲರಂತೆ ಅಡ್ಡ ಪ್ರಶ್ನಿಸುವುದಿಲ್ಲ. ಇನ್ನು ಕೋರ್ಟ್‌ನಲ್ಲಿ ಜಡ್ಜ್ ಜೊತೆ ನಡೆಯುವ ಮಾತುಕತೆಗಳೂ ಬಹಳ ಕ್ಲಿಷ್ಟ - ವಿಚಿತ್ರ. ಅದು ನಾವು ನೀವಾಡುವ ಜನಸಾಮಾನ್ಯರ ಭಾಷೆಯಲ್ಲ. ‘ನನಗೆ ತಡವಾಗುತ್ತಿತ್ತು, ಹಾಗಾಗಿ ಕಾರನ್ನು ಜೋರಾಗಿ ಓಡಿಸಿಕೊಂಡು ಹೋಗುತ್ತಿz’ ಎಂದು ಕೋರ್ಟ್‌ನಲ್ಲಿ ನ್ಯಾಯಾಧೀಶರಿಗೆ ಹೇಳಬೇಕಾದರೆ ಅದಕ್ಕೆ ಬೇರೆಯದೇ ಭಾಷೆ. ‘ನಿಗದಿತ ವೇಗವನ್ನು ಮೀರಿ ವಾಹನವನ್ನು ಚಲಾಯಿಸಿದ್ದಾಗಿ ಪ್ರತಿವಾದಿಯು ಇಲ್ಲಿ ಒಪ್ಪಿಕೊಳ್ಳುತ್ತಿದ್ದಾರೆ, ಮೈ ಲಾರ್ಡ್’ ಎನ್ನಬೇಕು. ನ್ಯಾಯಾಧೀಶರ ಕೆಲಸ ತಾಳ್ಮೆ ಇದ್ದವರಿಗಷ್ಟೇ ಸಾಧ್ಯ. ಆದರೆ ಕಡತಗಳ ರಾಶಿ, ಕೇಸುಗಳ ಒತ್ತಡ, ಪುನರಾವರ್ತನೆಯಾಗುವ ವಾದ ಇವೆಲ್ಲ ಕಾರಣಕ್ಕೆ ಬಹುತೇಕರು ತಾಳ್ಮೆ ಕಳೆದುಕೊಂಡವರಂತೆ ಹೊರಗಣ್ಣಿಗೆ ಕಾಣಿಸುತ್ತಾರೆ.

ಪ್ರತಿನಿತ್ಯ ವಾದ ವಿವಾದ ಕೇಳಿಸಿಕೊಳ್ಳುವುದು - ಒಂದರ ಹಿಂದೆ ಇನ್ನೊಂದು, ಕೆಲವು ಕ್ಷುಲ್ಲಕ, ಕೆಲವು ಅಹಂ, ಇನ್ನು ಕೆಲವು ಬಗೆಹರಿಯದ ಸಮಸ್ಯೆಗಳು. ಕ್ರಿಮಿನಲ್ ಕೋರ್ಟ್‌ನ ನ್ಯಾಯಾಧೀಶರಾದರಂತೂ ಮುಗಿದೇ ಹೋಯಿತು. ಸಮಾಜದ ಅಪಸವ್ಯಗಳ ನಿತ್ಯ ಚಿತ್ರಣ. ತಮ್ಮ ಭಾವನೆಗಳನ್ನು ಮುಖ ಮಾತುಗಳಿಂದ ಬಚ್ಚಿಟ್ಟು ಕೂತು ಕೇಳುವುದು ಸುಲಭದ ಕೆಲಸವಾಗಲಿಕ್ಕೆ ಸಾಧ್ಯವೇ? ಅದಕ್ಕೇ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕುಳಿತುಕೊಳ್ಳುವ ಪೀಠವನ್ನು ಉಳಿದ ವರಿಗಿಂತ ಸ್ವಲ್ಪ ಎತ್ತರದಲ್ಲಿ ಕಟ್ಟಿರಲಾಗುತ್ತದೆ. ಅಲ್ಲಿ ಎತ್ತರದ ಪೀಠ ನ್ಯಾಯದ ಅಧಿಕಾರವನ್ನು ಪ್ರತಿನಿಧಿಸುತ್ತದೆ.

ಇದನ್ನೂ ಓದಿ: Shishir Hegde Column: ಮಾತಿನ ಟ್ರಾಫಿಕ್ ಜ್ಯಾಮ್: ಕೇಳುವವರು ಬೇಕಾಗಿದ್ದಾರೆ!

ಕಪ್ಪು ನಿಲುವಂಗಿ ಆ ಹುದ್ದೆಯ ಘನತೆಯನ್ನು ಸೂಚಿಸುತ್ತದೆ. ನ್ಯಾಯಾಧೀಶರಿಗೆ ಕಾನೂನು ಗೊತ್ತಿರಬೇಕು, ಭಯ-ಪಕ್ಷಪಾತವಿಲ್ಲದೆ ಅದನ್ನು ಅನ್ವಯಿಸಬೇಕು, ತಪ್ಪು ಮಾಡಿದವರಿಗೆ ಅಗತ್ಯವಿದ್ದರೆ ಶಿಕ್ಷೆ ವಿಧಿಸಬೇಕು. ಸಮಾಜ ಇದನ್ನು ನಿರೀಕ್ಷಿಸುತ್ತದೆ. ನ್ಯಾಯಾಧೀಶರು ಎಂದರಲ್ಲಿ ಓಡಾಡಿಕೊಂಡು, ಯಾರನ್ನು ಬೇಕಾದರೂ ಭೇಟಿಯಾಗುವಂತೆ ಇಲ್ಲ. ವ್ಯವಸ್ಥೆಯೇ ಅವರನ್ನು ಪ್ರತ್ಯೇಕವಾಗಿಡುತ್ತದೆ. ಹೀಗಿರುವ ಕಾರ್ಯವಿಧಾನ (Procedure) - ಪ್ರತ್ಯೇಕತೆ ಮತ್ತು ರೀತಿ ರಿವಾಜಿನ ಕೆಲಸ, ಕೂಡ. ನ್ಯಾಯ ಮತ್ತು ಕರುಣೆ, ಕಾನೂನು-ಸಂದರ್ಭ, ಅಧಿಕಾರ ಮತ್ತು ಸಹಾನುಭೂತಿ, ಶಿಕ್ಷೆ ಮತ್ತು ಬದುಕಿನ ಪುನರ್ನಿರ್ಮಾಣ, ನಿದರ್ಶನ ಮತ್ತು ವಿವೇಕಗಳ ನಡುವಿನ ತೊಳಲಾಟ ಬಹುಶಃ ನ್ಯಾಯಾಧೀಶರು ನಿತ್ಯ ಎದುರಿಸುವ ದೊಡ್ಡ ಸವಾಲೇ ಇರಬಹುದು.

ನೀವು ಇಂಟರ್ನೆಟ್ ಬಳಸುವವರಾದರೆ ಫ್ರಾಂಕ್ ಕ್ಯಾಪ್ರಿಯೊಯನ್ನು ಒಮ್ಮೆಯಾದರೂ ನೋಡಿ ಯೇ ಇರುತ್ತೀರಿ. Caught in Providenceಎಂಬ ಟಿವಿ ಕಾರ್ಯಕ್ರಮದ ಮೂಲಕ ಜಗತ್ಪ್ರಸಿದ್ಧರಾದ ಅಮೆರಿಕಾದ ನ್ಯಾಯಾಧೀಶರಿವರು. ಹಾಗಂತ ಇವರೇನು ಅಲ್ಲಿನ ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಯಾಗಿರಲಿಲ್ಲ. ಅಮೆರಿಕದ ಚಿಕ್ಕ ರಾಜ್ಯ- ರೋಡ್ ಐಲೆಂಡ್‌ನ ಪ್ರಾವಿಡೆನ್ಸ್ ನಗರದ ಮುನ್ಸಿಪಲ್ ನ್ಯಾಯಾಧೀಶರಾಗಿದ್ದರು. ಅವರ ಮುಂದೆ ಹೆಚ್ಚಾಗಿ ಬರುತ್ತಿದ್ದವು ಪಾರ್ಕಿಂಗ್ ಟಿಕೆಟ್, ಸಂಚಾರ ನಿಯಮ ಉಲ್ಲಂಘನೆ ಮತ್ತು ಇತರ ಸಣ್ಣಪುಟ್ಟ ಮುನ್ಸಿಪಲ್ ಪ್ರಕರಣಗಳು. ಈ ಪ್ರಕರಣ ಗಳನ್ನು ಕೋರ್ಟ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗುತ್ತಿತ್ತು ಮತ್ತು ಅದು ಸ್ಥಳೀಯ ಚಾನೆಲ್‌ ನಲ್ಲಿ ಪ್ರಸಾರವಾಗುತ್ತಿತ್ತು. ‌

ಆ ಪ್ರಕರಣಗಳನ್ನು ಲಕ್ಷಾಂತರ ಜನರು ನೋಡುತ್ತಿದ್ದರು. ಯಾವಾಗ ಈ ನ್ಯಾಯಾಲಯದ ವಿಡಿಯೋಗಳು ಯೂಟ್ಯೂಬ್‌ಗೆ ಲಗ್ಗೆಯಿಟ್ಟವೋ, ಈ ಜಡ್ಜ್ ವೈರಲ್ ಆಗಿಬಿಟ್ಟರು. ಕೆಲವೇ ದಿನಗಳಲ್ಲಿ ಮೂರು ಮಿಲಿಯನ್ ಸಬ್‌ಸ್ಕ್ರೈಬರ್‌ಗಳಾದರು. ಬಿಲಿಯನ್‌ಗಟ್ಟಲೆ ವೀಕ್ಷಿಸಲ್ಪಟ್ಟವು. ಕ್ಯಾಪ್ರಿಯೊ ನ್ಯಾಯಾಲಯವನ್ನು ನಡೆಸುವುದನ್ನು ನೋಡುವುದೇ ಒಂದು ಸುಂದರ ಅನುಭವ.

Frank

ಒಮ್ಮೆ ಪ್ರಕರಣವೊಂದರಲ್ಲಿ ಕಟಕಟೆಯಲ್ಲಿ ಮಹಿಳೆಯೊಬ್ಬಳು ನಿಂತಿದ್ದಳು. ಟ್ರಾಫಿಕ್ ನಿಯಮ ಪಾಲಿಸ ದಿಲ್ಲದ್ದಕ್ಕೆ ಅವಳ ಮೇಲೆ ನೂರಾರು ಡಾಲರ್‌ಗಳ ದಂಡವಿತ್ತು, ಅವಳು ಅದನ್ನು ಪಾವತಿಸಿ ರಲಿಲ್ಲ. ಹಾಗಾಗಿ ಸಮನ್ಸ್, ಖುದ್ದು ಹಾಜರಾಗಿದ್ದಳು. ಜಡ್ಜ್ ಕ್ಯಾಪ್ರಿಯೋ ಯಾವ ಕಾರಣಕ್ಕೆ ದಂಡ ಕಟ್ಟಲಾಗಲಿಲ್ಲ?’ ಎಂದು ಅವಳ ಹಿಂದಿನ ಕಥೆಯನ್ನು ಕೆದಕಿ ಕೇಳಿದರು. ಆಗ ಗೊತ್ತಾಗಿದ್ದೇನೆಂದರೆ, ಆಕೆ ನಾಲ್ಕು ತಿಂಗಳ ಹಿಂದಷ್ಟೇ ಗಂಡನನ್ನು ಕಳೆದುಕೊಂಡಿದ್ದಳು. ಅದಾದ ತಿಂಗಳಿಗೆ ಮಗನನ್ನು ಆಕ್ಸಿಡೆಂಟ್ ಒಂದರಲ್ಲಿ ಕಳೆದುಕೊಂಡಿದ್ದಳು.

ಆ ದಿನ ಫ್ರಾಂಕ್ ಕ್ಯಾಪ್ರಿಯೋ ಅವಳ ತಪ್ಪನ್ನಷ್ಟೇ ನೋಡಲಿಲ್ಲ. ಆಕೆಯನ್ನು ಆಲಿಸಿದರು. ಸಮಾಧಾನ ಮಾಡಿ ದಂಡವನ್ನು ಮನ್ನಾ ಮಾಡಿದರು. ಇಂತಹ ಅದೆಷ್ಟೋ ಪ್ರಕರಣಗಳಲ್ಲಿ ಕ್ಯಾಪ್ರಿಯೊ ಕಾನೂನಿನ ಜೊತೆಜೊತೆಯಲ್ಲಿ ಮಾನವೀಯತೆಯನ್ನು ಹೊರಗಿಡದೆ ಪ್ರಕರಣವನ್ನು ನಿಭಾಯಿಸುವುದು ಕಾಣಿಸುತ್ತದೆ.

ಒಬ್ಬ ವ್ಯಕ್ತಿ ಅಧಿಕಾರದ ಸ್ಥಾನದಲ್ಲಿ ಕುಳಿತಾಗ, ಅವನು ಜನರನ್ನು ನೋಡುವ ರೀತಿಯೇ ಬದಲಾಗಿ ಬಿಡುತ್ತದೆ. ಎದುರಿನ ಮನುಷ್ಯನ ಬದಲು ಪ್ರಕರಣ, ಕುಟುಂಬದ ಬದಲು ಕಡತ; ಪರಿಸ್ಥಿತಿಯ ಬದಲು ನಿಯಮ - ಉಲ್ಲಂಘನೆ ಇವಷ್ಟೇ ಕಾಣಿಸುತ್ತಿರುತ್ತವೆ. ನ್ಯಾಯಾಧೀಶರು ಪ್ರತಿದಿನ ಹಲವಾರು ಪ್ರಕರಣಗಳನ್ನು ನೋಡುತ್ತಾರೆ.

ಪೊಲೀಸ್ ಅಧಿಕಾರಿಗಳು ನೂರಾರು ದೂರುಗಳನ್ನು ಕೇಳುತ್ತಾರೆ. ಸರ್ಕಾರಿ ಅಧಿಕಾರಿಗಳು ಸಾವಿರಾರು ಅರ್ಜಿಗಳನ್ನು ಪರಿಶೀಲಿಸುತ್ತಾರೆ. ಪುನರಾವರ್ತನೆಯ ಈ ಪ್ರಕ್ರಿಯೆಯಲ್ಲಿ ಮಾನವೀ ಯತೆ - ನೋವು ಕಷ್ಟಗಳು ಕಾಗದದ ಮೇಲಿನ ವಿಚಿತ್ರ ಭಾಷೆಯ ಅಕ್ಷರಗಳಾಗಿಬಿಡುತ್ತವೆ. ಆದರೆ ಫ್ರಾಂಕ್ ಕ್ಯಾಪ್ರಿಯೋ ಈ ಅಧಿಕಾರಿ ಬದಲಾವಣೆಗೆ ತಮ್ಮನ್ನು ಒಪ್ಪಿಸಿಕೊಳ್ಳಲಿಲ್ಲ. ಅವರು ಮನುಷ್ಯರಾಗಿಯೇ ವ್ಯವಹರಿಸಿದರು.

ಒಮ್ಮೆ ಒಂದು ಪ್ರಕರಣದಲ್ಲಿ ಆರು ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯೊಂದಿಗೆ ನ್ಯಾಯಾ ಲಯಕ್ಕೆ ಬಂದಿದ್ದಳು. ಜಡ್ಜ್ ಕ್ಯಾಪ್ರಿಯೊ ಆ ಮಗುವನ್ನು ಹತ್ತಿರ ಕರೆಸಿಕೊಂಡರು. ಮಾತನಾಡಿ, ತಾಯಿಗೆ ಯಾವ ಶಿಕ್ಷೆ ನೀಡಬೇಕು ಎಂದು ಆಕೆಯ ಅಭಿಪ್ರಾಯವನ್ನೇ ಕೇಳಿದರು. ಮಗು ಅದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿತು. ನ್ಯಾಯಾಧೀಶರು ಮತ್ತು ಮಗು ಸೇರಿ ಶಿಕ್ಷೆಯ ಬಗ್ಗೆ ಚರ್ಚಿಸಿದರು. ನಂತರ ಹಾಸ್ಯಮಯ ಒಪ್ಪಂದವೊಂದರೊಂದಿಗೆ ಪ್ರಕರಣ ಅಂತ್ಯಗೊಂಡಿತು. ಇದೆಲ್ಲ ನೋಡಲು ತಮಾಷೆಯಾಗಿತ್ತು.

ಬಹುತೇಕ ಅಧಿಕಾರಿಗಳಂದು ಸಾಮಾನ್ಯ ತಪ್ಪು ನಂಬಿಕೆ ಇದೆ. ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂದರೆ ತಮ್ಮ ಸುತ್ತಮುತ್ತ ಭಯ ಹುಟ್ಟಿಸಬೇಕು. ಜಡ್ಜ್ ಕ್ಯಾಪ್ರಿಯೊ ಅದಕ್ಕೆ ವಿರುದ್ಧವಾಗಿ ವ್ಯವಹರಿಸಿದವರು. ಅವರೆಂದೂ ನ್ಯಾಯಾಲಯದ ಗಂಭೀರತೆಯನ್ನು ಕೆಳಗಿಳಿಸಲಿಲ್ಲ ಬದಲಿಗೆ ನ್ಯಾಯಾಲಯಕ್ಕೆ ಬಂದ ಜನರ ಭಯವನ್ನು ಕಡಿಮೆ ಮಾಡುತ್ತಿದ್ದರು. ನಮ್ಮ ನ್ಯಾಯಾಲಯಗಳು ತಮ್ಮ ಘನತೆಯನ್ನು ಕಾಪಾಡಿಕೊಳ್ಳಲೇಬೇಕು. ನ್ಯಾಯಾಧೀಶರು ಟಿವಿ ನಿರೂಪಕರಂತೆ ವರ್ತಿಸ ಬೇಕೆಂದಿಲ್ಲ. ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಪಾರ್ಕಿಂಗ್ ದಂಡದ ಪ್ರಕರಣಗಳಂತೆ ನೋಡಲು ಸಾಧ್ಯವಿಲ್ಲ. ಆದರೆ ಘನತೆ ಎಂದರೆ ದೂರವಿರುವುದು ಎಂದಲ್ಲ; ಗಂಭೀರತೆ ಎಂದರೆ ಕಠಿಣವಾಗಿರುವುದು ಎಂದಲ್ಲ.

ಒಬ್ಬ ಸಾಮಾನ್ಯ ನಾಗರಿಕ ನ್ಯಾಯಾಲಯಕ್ಕೆ ಬಂದಾಗ ತನ್ನ ಧ್ವನಿಯನ್ನು ಕಳೆದುಕೊಂಡಂತೆ ಭಾಸವಾಗಬಾರದು. ಕಾನೂನಿನ ಭಾಷೆ ಸಂಕೀರ್ಣವಾಗಿರಬಹುದು. ಪ್ರಕ್ರಿಯೆ ಭಯ ಹುಟ್ಟಿಸ ಬಹುದು. ಪ್ರಕರಣದ ಪರಿಣಾಮಗಳು ಆತಂಕ ಮೂಡಿಸಬಹುದು. ಆದರೆ ಕನಿಷ್ಠ ತನ್ನ ಮಾತನ್ನು ಯಾರಾದರೂ ಆಲಿಸಿzರೆ ಎಂಬ ಭಾವನೆ ಆ ವ್ಯಕ್ತಿಗೆ ಬರಬೇಕು. ಒಂದು ಸರಳ ವಿವರಣೆ, ತಾಳ್ಮೆಯ ಪ್ರಶ್ನೆ ಅಥವಾ ಗೌರವಯುತ ಮಾತು-ಇವು ಕೆಲವೊಮ್ಮೆ ಕಾನೂನಿನ ಘನತೆಯ ದೀರ್ಘ ಭಾಷಣ ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.

ಕ್ಯಾಪ್ರಿಯೊಯವರ ಜೀವನ ತತ್ವವನ್ನು ಹೇಳುವ ಅವರದೇ ಪ್ರಸಿದ್ಧ ಮಾತೊಂದಿದೆ ನನ್ನ ನಿಲುವಂಗಿಯ ಕೆಳಗೆ ಬ್ಯಾಡ್ಜ್ ಇಲ್ಲ; ಹೃದಯವಿದೆ. ಆದರೆ ನ್ಯಾಯಾಧೀಶರು ಹೃದಯ ಇಟ್ಟು ಕೊಂಡು ವ್ಯವಹರಿಸಬಹುದೇ? ಇಲ್ಲ. ಸಾಕ್ಷ್ಯಕ್ಕೆ ಬದಲಾಗಿ ಭಾವನೆಯನ್ನು ಬಳಸಲು ಸಾಧ್ಯವಿಲ್ಲ. ಕರುಣೆ ಕಾನೂನಿಗೆ ಪರ್ಯಾಯವಲ್ಲ. ಸಹಾನುಭೂತಿ ಪಕ್ಷಪಾತವಾಗಬಾರದು. ಕ್ಯಾಪ್ರಿಯೊಯವರ ಉದಾಹರಣೆ ಭಿನ್ನವೆನಿಸುವುದೇ ಅಲ್ಲಿ. ಜಡ್ಜ್ ಕ್ಯಾಪ್ರಿಯೊ ತೀರ್ಮಾನಿಸುವ ಮೊದಲು ಮನುಷ್ಯ ರಾಗಿರುತ್ತಿದ್ದರು; ತೀರ್ಮಾನ ಕೊಡುವಾಗ ಮಾತ್ರ ನ್ಯಾಯಾಧೀಶರಾಗುತ್ತಿದ್ದರು. ಕೆಲವು ಸಂದರ್ಭ ಗಳಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಲೇಬೇಕು. ಕೆಲವೊಮ್ಮೆ ಯಾವುದೇ ರಿಯಾಯಿತಿಗೂ ವ್ಯಕ್ತಿ ಅರ್ಹನಾಗಿರುವುದಿಲ್ಲ.

ಕೆಲವೊಮ್ಮೆ ಕಾನೂನು ಒಬ್ಬರ ಹೃದಯ, ಮನೆ ಒಡೆಯುತ್ತದೆ. ಮಾನವೀಯತೆ ಎಂದರೆ ಇಂತಹ ತೀರ್ಪುಗಳನ್ನು ತಪ್ಪಿಸುವುದಲ್ಲ. ನ್ಯಾಯವನ್ನು ದ್ವೇಷ, ಅವಮಾನ ಅಥವಾ ಅಹಂಕಾರವಿಲ್ಲದೆ ನೀಡುವುದು. ಕ್ಯಾಪ್ರಿಯೊಯವರ ನ್ಯಾಯಾಲಯ ಪ್ರಕರಣಗಳ ವಿಶೇಷವೇ ಇದು. ಅಲ್ಲಿ ಎಲ್ಲರಿಗೂ, ಆರೋಪಿಗೂ ಗೌರವ ಇತ್ತು. ಜಗತ್ತಿನೆಡೆಯೂ ಹಾಗೆಯೇ ಇದೆ - ಜನಸಾಮಾನ್ಯನಿಗೆ ಬಡವನಿಗೆ ನ್ಯಾಯಪ್ರಕ್ರಿಯೆಯೇ ಒಂದು ಶಿಕ್ಷೆ. ಕೋರ್ಟು ಕಚೇರಿಯ ಚಕ್ಕರ್‌ಗೆ ಸಿಕ್ಕವರು ಹೊರ ಬಂದರೆ ಸಾಕು ಎಂದು ಸುಸ್ತಾಗಿರುತ್ತಾರೆ, ಉಳಿದವರು ಬದುಕಿನಲ್ಲಿ ಅದರ ಸುಳಿಯಂದು ಸಿಗಬಾರದಪ್ಪ ಎಂದು ಹರಕೆಯಂತೆ ನೆನಪು ಮಾಡಿಕೊಳ್ಳುತ್ತಿರುತ್ತಾರೆ.

ನ್ಯಾಯಪ್ರಕ್ರಿಯೆ ಅನುಭವಿಸಿದವರಿಗೆ ಗೊತ್ತು. ಅದಿರುವುದೇ ಹಾಗೆ. ಆದರೆ ನ್ಯಾಯಾಧೀಶರಾದವರ ವ್ಯಾಪ್ತಿಯಲ್ಲಿ ನ್ಯಾಯಪ್ರಕ್ರಿಯೆಯನ್ನು ಹಗುರಾಗಿಸುವ ಒಂದಿಷ್ಟು ಸಾಧ್ಯತೆಗಳಿವೆ. ಇದನ್ನು ಸಾಬೀತು ಮಾಡಿದ್ದು ಜಡ್ಜ್ ಕ್ಯಾಪ್ರಿಯೊ. ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಮೂರ್ನಾಲ್ಕು ಸರಕಾರಿ ಕೆಲಸಗಳು ಬಹಳ ಕಾಲದಿಂದ ಬಾಕಿ ಉಳಿದಿದ್ದವು.

ಅದಕ್ಕಾಗಿ ನಾಲ್ಕಾರು ಸರಕಾರಿ ಕಚೇರಿಗಳಿಗೆ ಹೋಗಬೇಕಾಗಿ ಬಂತು. ಅಲ್ಲಿನ ಅನುಭವ ನಿಮಗೆ ಹೊಸತಲ್ಲದಿದ್ದರೂ ಹೇಳಬೇಕು. ಅಲ್ಲ ಒಳ ಹೋಗಿ ನಿಂತರೆ ಅಧಿಕಾರಿಗಳು ಕಣ್ಣೆತ್ತಿ ನೋಡದೆ ‘ಏನು ವಿಷಯ?’ ಎಂದು ಕೇಳುವುದು ಸಾಮಾನ್ಯ ವಾಗಿತ್ತು. ನೀವು ಯಾರು ಎಂದು ತಿಳಿದ ಮೇಲೆಯೇ ಮುಖ ಮೇಲೇಳುವುದು. ಲೆಕ್ಕ ಹಾಕಿ, ಬಟ್ಟೆ ಭೂಷಣ ಅಕ್ಷರಶಃ ಮೇಲಿಂದ ಕೆಳಗೆ ನೋಡಿ ಬೇಕಷ್ಟೆ ಗೌರವ. ಅಧಿಕಾರಿಗಳ ವಾಕ್ಯಗಳು ಕೂಡ ಹಾಗೆಯೇ. ಯಾವುದನ್ನೂ ಪೂರ್ತಿ ಅರ್ಥವಾಗುವಂತೆ ಹೇಳುವುದಿಲ್ಲ.

ಮರುಪ್ರಶ್ನೆ, ಸ್ಪಷ್ಟನೆ ಕೇಳಲು ಹೆದರಿಕೆ. ಹೊರದೇಶದಲ್ಲಿದ್ದು, ದೇಶಕ್ಕೆ ಬಂದಾಗ ಇವನ ಪುಕಾರು ಎಂದು ಭಾವಿಸಬೇಡಿ. ಅಧಿಕಾರದ ದರ್ಪ ಫ್ಯಾನಿನ ಗಾಳಿಯಲ್ಲಿ ಅ ಸುತ್ತುತ್ತಿದೆಯೇನೋ ಎಂದೆ ನಿಸಿದ್ದು ಸುಳ್ಳಲ್ಲ. ಲೆಕ್ಕಕ್ಕಿಂತ ಒಂದು ತೂಕ ಹೆಚ್ಚು ತಗ್ಗಿಬಗ್ಗಿ ನಡೆದರಷ್ಟೇ ಮಾತು. ಬಹುಶಃ ನಾನು ನೋಡಿದ ನಾಲ್ಕು ಕಚೇರಿಗಳಲ್ಲಷ್ಟೇ ಹೀಗಿರಬಹುದು ಎಂದುಕೊಂಡೆ.

ನಾನು ದೇಶದಿಂದಾಚೆ ಬದುಕಲು ಶುರುಮಾಡಿ ಒಂದೂವರೆ ದಶಕವೇ ಆಗಿದೆ. ಈ ನಡುವೆ ನಮ್ಮ ದೇಶ ಕಲ್ಪಿಸಿಕೊಳ್ಳಲು ಅಸಾಧ್ಯವಾಗುವ ರೀತಿಯಲ್ಲಿಯೇ ಬೆಳೆದಿದೆ. ಬದುಕು ಪೇಟೆಯಲ್ಲಷ್ಟೇ ಅಲ್ಲ, ಹಳ್ಳಿಯಲ್ಲೂ ಆಧುನೀಕರಣಗೊಂಡಿದೆ. ಆಧುನಿಕತೆ ಬದುಕಿನ ರೀತಿಗಳನ್ನು ಬದಲಿಸಿಬಿಟ್ಟಿದೆ. ನಮ್ಮಂತಹ ಜಟಿಲ ವ್ಯವಸ್ಥೆ ಇಷ್ಟು ಅಲ್ಪ ಕಾಲದಲ್ಲಿ ಇಷ್ಟೊಂದು ಬದಲಾವಣೆ ಕಾಣುವುದು ಹೆಮ್ಮೆ ಪಡಬೇಕಾದದ್ದೇ. ಆದರೆ ವ್ಯವಸ್ಥೆಯೊಳಗಿನ ದರ್ಪ - ದೌಲತ್ತು ಮಾತ್ರ ನಾವು ಬಿಟ್ಟು ಕೊಟ್ಟಂತೆ ಕಾಣಿಸುತ್ತಿಲ್ಲ. ಬದಲಿಗೆ ಇವು ಕಾಲ ಕಳೆದಂತೆ ಇನ್ನಷ್ಟು ವಿರೂಪಗೊಂಡಂತೆ, ಹೆಚ್ಚಿದಂತೆ ಕಾಣಿಸುತ್ತಿದೆ.

ಈ ‘ಅಧಿಕಾರಿ ದರ್ಪ’ ಬ್ರಿಟಿಷರು ಬಿಟ್ಟು ಹೋದ ಬಳುವಳಿಯೋ ಏನೋ ಗೊತ್ತಿಲ್ಲ. ಆದರೆ ನನ್ನ ಇತ್ತೀಚಿನ ಸರಕಾರಿ ಕಚೇರಿಯ ಅನುಭವ ಮಾತ್ರ ಬಹಳ ಕೆಟ್ಟದಾಗಿತ್ತು. ದರ್ಪ ಸಂಸ್ಕೃತಿ ಅಲ್ಲಿ ಬೇರುಬಿಟ್ಟಿದೆ ಎಂದೆನಿಸಿತು. ಅಲ್ಲಿ ಪರಸ್ಪರ ಮಾನವೀಯ ಕನಿಷ್ಠ ಗೌರವದ ಕೊರತೆ ಕಾಣಿಸಿತು. ಮೇಲು ಕೀಳೆಂಬ ಭಾವನೆ ಹಿಂದಿಗಿಂತ ಜಾಸ್ತಿಯಿದ್ದಂತೆನಿಸಿತು.

ನಾನು ಇಷ್ಟೇ ಸಮಯದಲ್ಲಿ ಕಂಡ ಭಾರತ ಚಿಕ್ಕದಿರಬಹುದು. ಸ್ಯಾಂಪಲ್ ಇಷ್ಟು ಚಿಕ್ಕದಿಟ್ಟು ಕೊಂಡು ಇಡೀ ವ್ಯವಸ್ಥೆಯೇ ಹೀಗೆಂದು ತೀರ್ಮಾನಕ್ಕೆ ಬರುವುದು ತಪ್ಪು ಎಂಬ ಅರಿವಿದೆ. ಆದರೆ ನಾನು ಕೇಳಿದವರz ಇದೇ ಅನುಭವ ಎಂದಾದರೆ? ಒಳ್ಳೆಯ ಸಹೃದಯ ಅಧಿಕಾರಿಗಳಿಲ್ಲವೆಂದಲ್ಲ. ಅಪರೂಪ ಎನ್ನುವುದೇ ಸಮಸ್ಯೆ. ಅಪರೂಪವೇಕೆ ಇಂದು ಯಾರೂ ಪ್ರಶ್ನಿಸುತ್ತಿಲ್ಲ.

ಅಧಿಕಾರ ಎಂದರೆ ಸರಕಾರೀ ಹುದ್ದೆಯ ಅಧಿಕಾರ ದರ್ಪವಷ್ಟೇ ಅಲ್ಲ. ಹೆಡ್ ಮಾಸ್ಟರ್, ಪ್ರಿನ್ಸಿಪಾಲ್, ಚೀಫ್ ಎಂಜಿನಿಯರ್, ಗ್ರಾಮ ಪಂಚಾಯತಿ ಅಧ್ಯಕ್ಷ, ತಹಶೀಲದಾರ್, ಡಾಕ್ಟರ್- ಹೀಗೆ ಎಲ್ಲಾ ಹುದ್ದೆಗಳ ಜೊತೆಯಂದಿಷ್ಟು ದರ್ಪ ಅಸಹನೆ ಸಾಮಾನ್ಯವಾಗಿದೆ. ಯಾವುದೇ ಅಧಿಕಾರದ ಜೊತೆ ಒಂದಿಷ್ಟು ದತ್ತ ಅಸಹನೆಗಳು ಮತ್ತು ದರ್ಪ ಅವಶ್ಯಕತೆ ಎಂದು ನಂಬಿ ಇವರೆಲ್ಲ ವ್ಯವಹರಿಸುವುದು ವಿಚಿತ್ರವಾಗಿ ಕಾಣಿಸುತ್ತದೆ. ಅನವಶ್ಯಕ ಎಂದೆನಿಸುತ್ತದೆ. ಸುಮ್ಮನೆ ಒಳ್ಳೆಯ ರೀತಿ ವ್ಯವಹರಿಸಬಹುದಲ್ಲ? ಎದುರಿನವನನ್ನು ಮನುಷ್ಯನಂತೆ ಕಾಣಬಹುದಲ್ಲ? ಇಬ್ಬರ ಆರೋಗ್ಯ ಕ್ಕೂ ಒಳ್ಳೆಯದು. ಊಹು. ಇಲ್ಲ. ನಾವು ಮೇಲೆ, ನೀವು ಕೆಳಗೆ. ಮೊನ್ನೆ ಈ ಸರಕಾರಿ ಅಧಿಕಾರಿಗಳ ವ್ಯವಹಾರ, ಅಸಹನೆ, ದರ್ಪಗಳನ್ನು ಕಂಡಾಗ ಹೃದಯ ಬಿಗುವಾಗಿ ನೆನಪಾಗಿದ್ದು ಜಡ್ಜ್ –ಫ್ರಾಂಕ್ ಕ್ಯಾಪ್ರಿಯೊ. ಅವರ Compassion in the Court: Life-Changing Stories from America's Nicest Judge ಪುಸ್ತಕ.

ಜಡ್ಜ್ ಫ್ರಾಂಕ್ ಕ್ಯಾಪ್ರಿಯೋ ಈಗ ಇಲ್ಲ. ಇಂದಿಗೆ ಇಹಲೋಕ ತ್ಯಜಿಸಿ ಒಂದು ವರ್ಷವಾಯಿತು. ಆದರೆ ಜಡ್ಜ್ ಕ್ಯಾಪ್ರಿಯೊ ಬಿಟ್ಟು ಹೋದ ನ್ಯಾಯಪರಂಪರೆ, ಮಾನವೀಯತೆ, ಅಧಿಕಾರವನ್ನು ಗೌರವಯುತವಾಗಿ ಬಳಸುವುದು ಹೇಗೆ ಎಂಬ ಪಾಠ ಅಪರೂಪದ್ದು ಮತ್ತು ಅನುಕರಣೀಯ. ಸುಮ್ಮನೆ Judge Frank Caprio ಎಂದು ಯೂಟ್ಯೂಬ್‌ನಲ್ಲಿ ಹುಡುಕಿ. ಸಾವಿರಾರು ವಿಡಿಯೋಗಳು ಸಿಗುತ್ತವೆ. ಆಕಾರಣ ಹೃದಯ ಸ್ವಲ್ಪ ತಂಪೆನಿಸುತ್ತದೆ.

ಶಿಶಿರ್‌ ಹೆಗಡೆ

View all posts by this author