Dr Sadhanashree Column: ಸಂಸ್ಕಾರದಿಂದಲೇ ಸಾಧ್ಯ ಸ್ವಯಂ ಸಾಕ್ಷಾತ್ಕಾರ
ಆಯುರ್ವೇದದಲ್ಲಿ ‘ಸಂಸ್ಕಾರೋ ಹಿ ಗುಣಾಂತರಾಧಾನಮುಚ್ಯತೆ’ ಎಂದು ವಿವರಿಸುತ್ತಾರೆ. ಅಂದರೆ ಮಾನವನಲ್ಲಿ ಹುಟ್ಟಿನಿಂದಲೇ ಇರಬಹುದಾದ ದೋಷಗಳನ್ನು ತೆಗೆದು ಹಾಕಿ, ಕೊರತೆ ಇದ್ದರೆ ಅದನ್ನು ಪೂರ್ತಿ ಮಾಡಿ, ಇನ್ನಿತರ ಅವಶ್ಯಕತೆ ಇರುವ ಗುಣಗಳನ್ನು ತುಂಬಿ, ಒಳ್ಳೆಯ ಗುಣಗಳನ್ನು ಅತಿಶಯ ವಾಗಿ ಬೆಳೆಸುವುದೇ ‘ಸಂಸ್ಕಾರ’. ಇದನ್ನೇ ದೋಷಾಪನಯನ, ಗುಣಾಧಾನ ಮತ್ತು ಹೀನಾಂಗ ಪೂರಣ ಎಂದು ಕರೆಯುತ್ತಾರೆ. ಈ ಉದ್ದೇಶಗಳಿಗಾಗಿಯೇ ಆಚರಿಸಲ್ಪಡುವ ವಿಧಿ ಪೂರ್ವಕ ಪ್ರಕ್ರಿಯೆಗಳನ್ನು ಸಂಸ್ಕಾರವೆಂದು ಕರೆಯುತ್ತಾರೆ


ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಸಂಸ್ಕಾರದ ಪರಿಣಾಮದಿಂದ ಮಾನವನು ತನ್ನ ದುರ್ಗುಣಗಳನ್ನು ಕಳೆದುಕೊಂಡು, ಉತ್ತಮ ಗುಣಗಳನ್ನು ಪಡೆದು, ಪರಿಪೂರ್ಣ ಮಾನವೀಯತೆಯನ್ನು ಮೈಗೂಡಿಸಿಕೊಂಡು, ಇನ್ನೂ ಮುಂದೆ ಸಾಗಿ ದೈವತ್ವಕ್ಕೆ ಏರುತ್ತಾನೆ. ಷೋಡಶ ಸಂಸ್ಕಾರಗಳು ಮಾನವನ ಜೀವನದಲ್ಲಿ ಬರಬಹುದಾದ ಏರುಪೇರುಗಳನ್ನು ನಿವಾರಿಸಿ, ಮಾನವೀಯ ಮೌಲ್ಯಗಳನ್ನು ಕಾಪಾಡಿ, ಮನುಷ್ಯತ್ವದಿಂದ ದೈವತ್ವದ ಕಡೆಗೆ ಕರೆದೊಯ್ಯುವ ಸಾಧನಗಳಾಗಿವೆ.
ಆಯುರ್ವೇದ ಶಾಸ್ತ್ರದಲ್ಲಿ ‘ಷೋಡಶ ಸಂಸ್ಕಾರ’ಗಳ ಬಗ್ಗೆ ವಿಸ್ತಾರವಾದ ವಿವರಣೆಯನ್ನು ಕಾಣಬಹುದು. ಆಯುರ್ವೇದವು ಕೇವಲ ಒಂದು ವೈದ್ಯಕೀಯ ಪದ್ಧತಿಯಷ್ಟೇ ಅಲ್ಲದೆ ಒಂದು ಜೀವನ ವಿeನವೂ ಆಗಿರುವುದರಿಂದ, ಒಬ್ಬ ವ್ಯಕ್ತಿಯ ಆರೋಗ್ಯ ಸುಧಾರಣೆಯಿಂದ ಹಿಡಿದು ಅವನ ಜೀವನದ ಪರಮೋದ್ದೇಶವನ್ನು ತಲುಪುವ ತನಕವೂ ಆಯುರ್ವೇದದ ಜ್ಞಾನ ಅತ್ಯಗತ್ಯ.
ಹಾಗಾಗಿ ಒಬ್ಬ ವ್ಯಕ್ತಿಯ ಪರಿಪೂರ್ಣ ವಿಕಸನಕ್ಕೆ ಅಗತ್ಯವಿರುವ ಈ ಸಂಸ್ಕಾರಗಳ ಉಲ್ಲೇಖವನ್ನು ನಾವು ಆಯುರ್ವೇದದಲ್ಲಿ ಕಾಣಬಹುದು. ಹಾಗಾದರೆ ಏನಿದು ಸಂಸ್ಕಾರ? ಷೋಡಶ ಸಂಸ್ಕಾರ ಗಳಾವುವು? ಇದರ ಬಗ್ಗೆ ಇಂದಿನ ಲೇಖನದಲ್ಲಿ ನೋಡೋಣ... ‘ಸಂಸ್ಕಾರ’ವೆಂದರೆ ಶುದ್ಧ ಮಾಡು ವಿಕೆ, ಪರಿಷ್ಕರಿಸುವಿಕೆ, ಸುಧಾರಿಸುವಿಕೆ, ಯೋಗ್ಯತೆಯನ್ನು ಉಂಟುಮಾಡುವಿಕೆ ಇತ್ಯಾದಿ ಅನೇಕ ಅರ್ಥಗಳಿವೆ.
ಆಯುರ್ವೇದದಲ್ಲಿ ‘ಸಂಸ್ಕಾರೋ ಹಿ ಗುಣಾಂತರಾಧಾನಮುಚ್ಯತೆ’ ಎಂದು ವಿವರಿಸುತ್ತಾರೆ. ಅಂದರೆ ಮಾನವನಲ್ಲಿ ಹುಟ್ಟಿನಿಂದಲೇ ಇರಬಹುದಾದ ದೋಷಗಳನ್ನು ತೆಗೆದು ಹಾಕಿ, ಕೊರತೆ ಇದ್ದರೆ ಅದನ್ನು ಪೂರ್ತಿ ಮಾಡಿ, ಇನ್ನಿತರ ಅವಶ್ಯಕತೆ ಇರುವ ಗುಣಗಳನ್ನು ತುಂಬಿ, ಒಳ್ಳೆಯ ಗುಣಗಳನ್ನು ಅತಿಶಯವಾಗಿ ಬೆಳೆಸುವುದೇ ‘ಸಂಸ್ಕಾರ’. ಇದನ್ನೇ ದೋಷಾಪನಯನ, ಗುಣಾಧಾನ ಮತ್ತು ಹೀನಾಂಗ ಪೂರಣ ಎಂದು ಕರೆಯುತ್ತಾರೆ. ಈ ಉದ್ದೇಶಗಳಿಗಾಗಿಯೇ ಆಚರಿಸಲ್ಪಡುವ ವಿಧಿ ಪೂರ್ವಕ ಪ್ರಕ್ರಿಯೆಗಳನ್ನು ಸಂಸ್ಕಾರವೆಂದು ಕರೆಯುತ್ತಾರೆ.
ಇದನ್ನೂ ಓದಿ: Dr Sadhanashree Column: ಬೇಸಗೆಯ ಬೇಗೆಗೆ ಬೇಯದೆ ಬದುಕುವ ಬಗೆ
ಸಂಸ್ಕಾರದ ಪರಿಣಾಮದಿಂದ ಮಾನವನು ತನ್ನ ದುರ್ಗುಣಗಳನ್ನು ಕಳೆದುಕೊಂಡು, ಉತ್ತಮ ಗುಣ ಗಳನ್ನು ಪಡೆದು, ಪರಿಪೂರ್ಣ ಮಾನವೀಯತೆಯನ್ನು ಮೈಗೂಡಿಸಿಕೊಂಡು, ಇನ್ನೂ ಮುಂದೆ ಸಾಗಿ ದೈವತ್ವಕ್ಕೆ ಏರುತ್ತಾನೆ. ಅದುವೇ ಈ ಸಂಸ್ಕಾರಗಳ ಉದ್ದೇಶ. ಆಯುರ್ವೇದದಲ್ಲಿ ಷೋಡಶ ಸಂಸ್ಕಾರ ಗಳು ಅಂದರೆ 16 ಸಂಸ್ಕಾರಗಳನ್ನು ವಿವರಿಸಿದ್ದಾರೆ.
ಗರ್ಭಾವಸ್ಥೆಯ ಸಂಸ್ಕಾರಗಳು: 1. ಗರ್ಭಾಧಾನ 2. ಪುಂಸವನ 3. ಸೀಮಂತ.
ಶೈಶವಾವಸ್ಥೆಯ ಸಂಸ್ಕಾರಗಳು: 4. ಜಾತಕರ್ಮ 5. ನಾಮಕರಣ 6.
ನಿಷ್ಕ್ರಮಣ ಬಾಲ್ಯಾವಸ್ಥೆಯ ಸಂಸ್ಕಾರಗಳು: 7. ಅನ್ನಪ್ರಾಶನ 8. ಚೂಡಾಕರ್ಮ 9.
ಕರ್ಣವೇಧ ಕೌಮಾರಾವಸ್ಥೆಯ ಸಂಸ್ಕಾರಗಳು: 10. ಅಕ್ಷರಾ ಭ್ಯಾಸ 11. ಉಪನಯನ 12. ವೇದಾರಂಭ ಯೌವನಾವಸ್ಥೆಯ ಸಂಸ್ಕಾರಗಳು: 13. ಸಮಾವರ್ತನ 14.
ವಿವಾಹ ವೃದ್ಧಾವಸ್ಥೆಯ ಸಂಸ್ಕಾರಗಳು: 15. ವಾನಪ್ರಸ್ಥ 16. ಸಂನ್ಯಾಸ
1. ಗರ್ಭಾಧಾನ ಗರ್ಭಾಧಾನ ಎಂದರೆ ಗರ್ಭಧಾರಣೆ.
ಗರ್ಭಾಧಾನವು ಗರ್ಭ ಮತ್ತು ಆಧಾನಗಳ ಸಮಸ್ತ ಪದ. ಸರಳವಾಗಿ ಹೇಳಬೇಕಾದರೆ, ಗರ್ಭವನ್ನು ತುಂಬಿಸುವಿಕೆ/ ಗರ್ಭವನ್ನು ಧರಿಸುವುದು ಎಂಬ ಅರ್ಥವನ್ನು ಈ ಪದವು ನೀಡುತ್ತದೆ. ಸೂಕ್ತವಾದ ಕಾಲದಲ್ಲಿ, ವಿವಾಹಿತ ದಂಪತಿಯು, ಶರೀರ ಮನಸ್ಸುಗಳನ್ನು ಶುದ್ಧಗೊಳಿಸಿ ಜೊತೆಗೂಡಿ ವಂಶೋ ದ್ಧಾರಕ್ಕಾಗಿ ಬೇಕಾದ ಸಂತಾನೋತ್ಪತ್ತಿಯನ್ನು ಮಾಡುವುದು, ತನ್ಮೂಲಕ ಪಿತೃ ಋಣವನ್ನು ತೀರಿಸಲು ಸಂಕಲ್ಪ ಮಾಡುವ ಸಂಸ್ಕಾರವೇ ಗರ್ಭಾಧಾನ. ಈ ಒಂದು ಸಂಸ್ಕಾರಕ್ಕೆ ದಂಪತಿಗಳ ಶಾರೀರಿಕ ಮತ್ತು ಮಾನಸಿಕ ದೃಢತೆ ಗಣನೆಗೆ ಬರುತ್ತದೆ. ಆಯುರ್ವೇದದ ಪ್ರಕಾರ ಗರ್ಭಾಧಾನದ ಕನಿಷ್ಠ ವಯಸ್ಸು, ಸ್ತ್ರೀಗೆ 16 ವರ್ಷ ಮತ್ತು ಪುರುಷನಿಗೆ 25 ವರ್ಷ ಆಗಿರಬೇಕು. ಇದು ನಿಯಮ.
2. ಪುಂಸವನ
ಗರ್ಭದ ಸ್ಪಷ್ಟ ಜ್ಞಾನವಾದ ನಂತರ ಎರಡು ಅಥವಾ ಮೂರನೇ ತಿಂಗಳಲ್ಲಿ ಮಾಡುವ ಒಂದು ಸಂಸ್ಕಾರ ಪುಂಸವನ. ‘ಪುಮಾನ್ ಸೂಯತೇ ಯಸ್ಮಾತ್ ಇತಿ ಪುಂಸವನಮ್’ ಅಂದರೆ ವೀರ್ಯ ವಂತನಾದ, ಬಲವಂತ ನಾದ ಸಂತತಿಯು ಯಾವ ಸಂಸ್ಕಾರದಿಂದ ಉಂಟಾಗುತ್ತದೆಯೋ ಅದೇ ಪುಂಸವನ ಸಂಸ್ಕಾರ. ಸಾಮಾನ್ಯವಾಗಿ, ಗಂಡು ಮಗುವನ್ನು ಪಡೆಯುವುದಕ್ಕೆ ಈ ಸಂಸ್ಕಾರವನ್ನು ಮಾಡಬೇಕು ಎಂಬ ಭಾವನೆ ಬಹಳ ಜನರಿಗೆ ಇದೆ. ಆದರೆ ಈ ಸಂಸ್ಕಾರವು ಗರ್ಭದ ಲಿಂಗ ನಿರ್ಣಯ ವನ್ನು ಮಾಡುವು ದಕ್ಕಿಂತಲೂ ಮಿಗಿಲಾಗಿ ಉತ್ತಮವಾದ ಪ್ರಜೆಯನ್ನು, ಬಲಿಷ್ಠವಾದ ಪ್ರಜೆಯನ್ನು ಯಾವುದೇ ವಿಘ್ನಗಳಿಲ್ಲದೆ ಪಡೆಯುವುದಕ್ಕೆ ಮಾಡುವುದು. ಅದು ಗಂಡಾಗಿರಲಿ ಅಥವಾ ಹೆಣ್ಣಾಗಿ ರಲಿ.
3. ಸೀಮಂತೋನ್ನಯನ
ತಲೆಯ ಮೇಲಿರುವ ಪಂಚ ಸಂಧಿಗೆ ’ಸೀಮಂತ’ ಎಂದು ಹೆಸರು. ಅದರ ಉನ್ನಯನ ಅಂದರೆ ವೃದ್ಧೀಕಣೆ/ರಕ್ಷಣೆಯು ಈ ಸಂಸ್ಕಾರದ ಪ್ರಧಾನ ಉದ್ದೇಶ. ಸಾಮಾನ್ಯವಾಗಿ ಗರ್ಭಾಧಾನದ ನಾಲ್ಕು, ಆರು ಮತ್ತು ಎಂಟನೇ ಮಾಸಗಳಲ್ಲಿ, ಶುಭ ನಕ್ಷತ್ರ, ಶುಭಯೋಗ, ಶುಭ ದಿನದಂದು ಸೀಮಂತೋ ನ್ನಯನ ಸಂಸ್ಕಾರವನ್ನು ಮಾಡಬಹುದು. ಈ ಸಂಸ್ಕಾರದಲ್ಲಿ ಹಂದಿಯ ಮುಳ್ಳು/ದರ್ಭೆ/ಅತ್ತಿಮರದ ಕೊನೆ- ಇವುಗಳನ್ನು ಗರ್ಭಿಣಿಯ ಮುಂದಲೆಗೆ ಮುಟ್ಟಿಸಿ ಹಿಂದಲೆಯವರೆಗೆ ಎಳೆಯುವ ವಿಧಿಯು ಗರ್ಭದಲ್ಲಿನ ಶಿಶುವಿಗೆ ಸುಖಕರ ಮತ್ತು ಪ್ರಸವಕ್ಕೂ ಸಹಾಯಕರ.
4. ಜಾತಕರ್ಮ
ಶಿಶುವಿನ ಜನನವಾದ ಕೂಡಲೇ ಮಾಡುವ ಸಂಸ್ಕಾರವನ್ನು ಜಾತಕರ್ಮವೆಂದು ಹೇಳುತ್ತಾರೆ. ಸಾಂಪ್ರದಾಯಿಕ ಜಾತಕರ್ಮದ ಆಚರಣೆಯ ಸಮಯದಲ್ಲಿ, ತಂದೆಯು ಮಗುವಿನ ತುಟಿಗಳನ್ನು ಜೇನುತುಪ್ಪ ಮತ್ತು ತುಪ್ಪದಿಂದ ಸಂಸ್ಕರಿಸಿದ ಮೇಧ್ಯ ದ್ರವ್ಯಗಳಿಂದ ಸ್ಪರ್ಶಿಸುವ ಮೂಲಕ ಮಗು ವನ್ನು ಸ್ವಾಗತಿಸುತ್ತಾರೆ. ಜತೆಗೆ, ವೈದಿಕ ಮಂತ್ರಗಳನ್ನು ಪಠಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಮೇಧಾಜನನ. ತಾಯಿಯ ಗರ್ಭದಲ್ಲಿ ಮಗುವಿನ ದೇಹ ರಚನೆ ಪೂರ್ಣಗೊಂಡ ನಂತರ, ಮಗುವಿನ ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಉತ್ತೇಜಿಸುವುದರ ಜತೆಗೆ ಈ ಸಂಸ್ಕಾರವು ಮಗುವಿಗೆ ದೀರ್ಘಾ ಯುಷ್ಯವನ್ನು ಬಯಸುತ್ತದೆ.
5. ನಾಮಕರಣ
ನಾಮಕರಣವು ಮಗುವಿಗೆ ಹೆಸರಿಡುವ ಸಂಸ್ಕಾರ ಎಂದರ್ಥ. ಈ ಸಂಸ್ಕಾರವನ್ನು ಸಾಮಾನ್ಯವಾಗಿ ಜನನದ ನಂತರದ 11ನೇ ಅಥವಾ 12ನೇ ದಿನದಂದು ಮಾಡಲಾಗುತ್ತದೆ, ಮತ್ತು ಕೆಲವೊಮ್ಮೆ ಜನನದ 10ನೇ ದಿನದ ನಂತರದ ಮೊದಲ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ಮಾಡಲಾಗುತ್ತದೆ. ಈ ಸಂಸ್ಕಾರದ ದಿನದಂದು, ಶಿಶುವಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ಉಡಿಸಲಾಗುತ್ತದೆ. ಪೋಷಕರು ಆಯ್ಕೆ ಮಾಡಿದ ಔಪಚಾರಿಕ ಹೆಸರನ್ನು ಘೋಷಿಸಲಾಗುತ್ತದೆ. ನಾಮಕರಣ ಆಚರಣೆಯು ಮಗುವನ್ನು ಪವಿತ್ರಗೊಳಿಸಿ ಅದರ ಸಾಮಾಜಿಕ ಸಂಬಂಧವನ್ನು ಗುರುತಿಸುತ್ತದೆ.
6. ನಿಷ್ಕ್ರಮಣ
ನಿಷ್ಕ್ರಮಣ ಎಂದರೆ ‘ಹೊರಗೆ ಹೋಗುವುದು, ಹೊರಬರುವುದು’ ಎಂದರ್ಥ. ಇದು ಪೋಷಕರು ಮಗುವನ್ನು ಮನೆಯಿಂದ ಹೊರಗೆ ಕರೆದೊಯ್ಯುವ ಮತ್ತು ಮಗುವು ಔಪಚಾರಿಕವಾಗಿ ಮೊದಲ ಬಾರಿಗೆ ಹೊರಜಗತ್ತನ್ನು ಪ್ರವೇಶಿಸುವ ವಿಧಿ. ಇದನ್ನು ಸಾಮಾನ್ಯವಾಗಿ ಜನನದ ನಂತರದ ನಾಲ್ಕನೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಶಿಶುವಿಗೆ ಸೂರ್ಯ ಅಥವಾ ಚಂದ್ರನ ದರ್ಶನ ಮಾಡಿಸಲಾಗುತ್ತದೆ.. ಪರ್ಯಾಯವಾಗಿ, ಕೆಲವು ಕುಟುಂಬಿಕರು ಮಗುವನ್ನು ಮೊದಲ ಬಾರಿಗೆ ದೇವಸ್ಥಾನಕ್ಕೆ ಕರೆದೊ ಯ್ಯುತ್ತಾರೆ.
7. ಅನ್ನಪ್ರಾಶನ
ಅನ್ನಪ್ರಾಶನ ಎಂದರೆ ಆಹಾರ ಉಣಿಸುವುದು ಎಂದರ್ಥ. ಮಗುವಿಗೆ ಮೊದಲ ಬಾರಿಗೆ ಘನ ಆಹಾರವನ್ನು ತಿನ್ನಿಸುವುದು ಈ ಸಂಸ್ಕಾರದ ಉದ್ದೇಶ. ಆಯುರ್ವೇದದಲ್ಲಿ, ಅನ್ನಪ್ರಾಶನ ಅಥವಾ ಘನ ಆಹಾರಗಳ ಪರಿಚಯವು ಒಂದು ಮಹತ್ವದ ಸಂಸ್ಕಾರ. ಇದು ಒಂದು ಆಚರಣೆ ಅಥವಾ ಸಮಾರಂಭವಾಗಿದ್ದು, ಇದನ್ನು ಸಾಮಾನ್ಯವಾಗಿ ಆರು ತಿಂಗಳ ವಯಸ್ಸಿನಲ್ಲಿ ಮಾಡಲಾಗುತ್ತದೆ. ಮಗುವಿಗೆ ಎದೆ ಹಾಲಿನಿಂದ ನಿಧಾನವಾಗಿ ಪೂರಕ ಆಹಾರದ ಸೇವನೆಯ ಯೋಗ್ಯತೆ ದಕ್ಕಿರುವು ದನ್ನು ಗುರುತಿಸಲಾಗುತ್ತದೆ. ಇದು ಮಗುವಿನ ಪೋಷಣೆ ಮತ್ತು ಬೆಳವಣಿಗೆಯಲ್ಲಿ ಒಂದು ಮಹತ್ತರ ವಾದ ಹೆಜ್ಜೆ. ಹಿರಿಯರ ಆಶೀರ್ವಾದದೊಂದಿಗೆ ಮಗುವಿಗೆ ಅನ್ನದ ಪಾಯಸ/ಮಣ್ಣಿಯನ್ನು ಉಣಿಸಲಾಗುತ್ತದೆ.
8. ಚೂಡಾಕರ್ಮ
ಚೂಡಾಕರ್ಮವು ಹುಟ್ಟಿನಿಂದಲೇ ಇದ್ದ ಕೂದಲನ್ನು ತೆಗೆಯುವ ಸಾಂಕೇತಿಕ ಕ್ರಿಯೆಯಾಗಿದ್ದು, ಇದು ಹಿಂದಿನಜನ್ಮದ ಕರ್ಮ ಅಥವಾ ನಕಾರಾತ್ಮಕ ಗುಣಲಕ್ಷಣಗಳೊಂದಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಕೂದಲನ್ನು ಕ್ಷೌರ ಮಾಡುವುದು ಪೂರ್ವಕರ್ಮಗಳನ್ನು ಶುದ್ಧೀಕರಿಸಿ ಮಗುವಿಗೆ ಹೊಸ ಹಾದಿಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಈ ಸಮಾರಂಭವನ್ನು ಸಾಮಾನ್ಯವಾಗಿ ಮಗುವಿನ ಜೀವನದ ಮೊದಲ ಅಥವಾ ಮೂರನೇ ವರ್ಷದಲ್ಲಿ ನಡೆಸಲಾಗುತ್ತದೆ.
9. ಕರ್ಣವ್ಯಧನ
ಮಗುವಿಗೆ ಶಾಸೋಕ್ತವಾಗಿ ಕಿವಿಗಳನ್ನು ಚುಚ್ಚಿ ಆಭರಣವನ್ನು ತೊಡಿಸುವ ಸಂಸ್ಕಾರಕ್ಕೆ ಕರ್ಣ ವ್ಯಧನ ಎಂದು ಕರೆಯುತ್ತಾರೆ. ಕರ್ಣವ್ಯಧನವನ್ನು ಎರಡು ಮುಖ್ಯ ಉದ್ದೇಶಗಳಿಗಾಗಿ ನಿರ್ವಹಿಸ ಲಾಗುತ್ತದೆ. ಅವುಗಳೆಂದರೆ- ರಕ್ಷಣಾನಿಮಿತ್ತ- ರೋಗಗಳಿಂದ ಸಂರಕ್ಷಣೆಗಾಗಿ ಮತ್ತು ಭೂಷಣಾ ನಿಮಿತ್ತ- ಆಭರಣಗಳ ಅಲಂಕಾರಕ್ಕಾಗಿ. ಈ ಸಂಸ್ಕಾರವನ್ನು ಕುಶಲರಾದ ವೈದ್ಯರು ಮತ್ತು ಶಸ ವೈದ್ಯರು ಮಾತ್ರ ನಿರ್ವಹಿಸತಕ್ಕದ್ದು. ಅನುಭವಿ ಹಾಗೂ ಗುರು ವೈದ್ಯರು ಧರ್ಮಾರ್ಥ ಕಾಮ ಗಳನ್ನು ಗಳಿಸಲು ಮಗುವಿಗೆ ಕರ್ಣವ್ಯಧನವನ್ನು ಮಾಡಲು ತಿಳಿಸಿರುತ್ತಾರೆ. ಜನನದ ನಂತರದ ಮೊದಲ ನಾಲ್ಕು ವಾರಗಳಲ್ಲಿ ಆಚರಣೆ ಮಾಡಲು ಕೆಲವರು ತಿಳಿಸಿದರೆ, ಇತರರು ಮೊದಲ ವರ್ಷದೊಳಗೆ ಮಾಡಲು ಸೂಚಿಸುತ್ತಾರೆ.
10. ವಿದ್ಯಾರಂಭ
ಮಗು ಹುಟ್ಟಿದ ಐದನೇ ವರ್ಷದಲ್ಲಿ ವಿದ್ಯಾರಂಭ/ ಅಕ್ಷರಾಭ್ಯಾಸ ಮಾಡಿಸಬೇಕು. ಶುಭಮುಹೂರ್ತ ದಲ್ಲಿ ಅಕ್ಷರಾಭ್ಯಾಸ ಮಾಡಿಸಬೇಕು. ವಿದ್ಯೆಯು ಜೀವನದ ಬೆಳಕು. ವಿದ್ಯೆ ಎಂದರೆ ತಿಳಿಯುವುದು ಎಂದರ್ಥ. ಅಂದರೆ ಜೀವನದ ಎಲ್ಲಾ ಮಜಲುಗಳನ್ನು ತಿಳಿದು ಸಮಾಜಮುಖಿಯಾದ ಉನ್ನತ ಬದುಕನ್ನು ರೂಢಿಸಿಕೊಳ್ಳಲು ಈ ವಿದ್ಯೆಯೇ ಆಧಾರ. ಆದ್ದರಿಂದ ಈ ಸಂಸ್ಕಾರವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸತಕ್ಕದ್ದು. ಇದನ್ನು ಸಾಮಾನ್ಯವಾಗಿ ಐದು ವರ್ಷದ ನಂತರವೇ ಮಾಡಬೇಕು. ಕಾರಣ, ಮಗುವಿನ ಭೌತಿಕ ಶಕ್ತಿ ಬೆಳೆಯಲು ಕನಿಷ್ಠ ಐದು ವರ್ಷ ಪೂರ್ಣವಾಗಬೇಕಾಗುತ್ತದೆ.
11. ಉಪನಯನ
ಈ ಸಂಸ್ಕಾರವು ಅತ್ಯಂತ ಮಹತ್ವಪೂರ್ಣವಾದುದು. ‘ಉಪ’ ಎಂದರೆ ಗುರುವಿನ ಸಮೀಪ, ‘ನಯನ’ ಎಂದರೆ ಕೊಂಡೊಯ್ಯುವುದು. ಗುರುವಿನಿಂದ ಉಪದೇಶವನ್ನು ಪಡೆಯುವುದಕ್ಕಾಗಿ ಗುರುವಿನ ಬಳಿ ಸೇರುವುದೇ ಉಪನಯನದ ಉದ್ದೇಶ. ಒಬ್ಬ ವ್ಯಕ್ತಿಯನ್ನು ಅರಿವು ಅಥವಾ ಜ್ಞಾನದ ಹತ್ತಿರ ಕರೆದುಕೊಂಡು ಹೋಗುವ ಒಂದು ವಿಧಾನ ಈ ಉಪನಯನ. ಒಬ್ಬ ವ್ಯಕ್ತಿಯು ವೇದ ಜ್ಞಾನ ವುಳ್ಳವನಾಗಬೇಕಾದರೆ ಅದಕ್ಕೆ ಪೂರ್ವ ಸಿದ್ಧತೆಗಳು ಅತ್ಯವಶ್ಯಕ. ಆದ್ದರಿಂದ ಜ್ಞಾನಾರ್ಜನೆಯನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಗೂ ಉಪನಯನದ ಅವಶ್ಯ ಕತೆ ಇದೆ. ಉಪನಯನದ ಸಂಸ್ಕಾರ ದಿಂದ ಪುನರ್ಜನ್ಮವೇ ದೊರೆತಂತಾಗುತ್ತದೆ. ಸಾಮಾನ್ಯವಾಗಿ, ಜನನದಿಂದ ಅಥವಾ ಯಾವ ದಿನ ಗರ್ಭ ನಿಂತಿದೆಯೋ ಅಲ್ಲಿಂದ ಎಂಟನೇ ವರ್ಷದಲ್ಲಿ ಉಪನಯನ ಮಾಡತಕ್ಕದ್ದು.
12. ವೇದಾರಂಭ
ಈ ಸಂಸ್ಕಾರದಲ್ಲಿ ಉಪನಯನ ಹೊಂದಿದ ವ್ಯಕ್ತಿಯು ಮುಂದೆ ವಿದ್ಯಾರ್ಥಿ ಜೀವನಕ್ಕೆ ಪದಾರ್ಪಣೆ ಮಾಡುತ್ತಾನೆ. ವೇದಾರಂಭ ಎಂದರೆ ವಿದ್ಯೆಯನ್ನು ಕಲಿಯಲು ಪ್ರಾರಂಭಿಸುವ ಸಂಸ್ಕಾರ. ಬ್ರಾಹ್ಮಣ ತ್ವವನ್ನು ಮನುಷ್ಯನ ಸ್ವಭಾವ ಮತ್ತು ಮಾಡುವ ಕೆಲಸಗಳಿಂದ ವಿಭಾಗಿಸಲಾಗುತ್ತದೆ. ಹುಟ್ಟಿನಿಂದ ಶೂದ್ರನಾದರೆ ಸಂಸ್ಕಾರದಿಂದ ಬ್ರಾಹ್ಮಣನಾಗುತ್ತಾನೆ. ಹೀಗಿರುವಾಗ ಸಂಸ್ಕಾರಭರಿತರಾದಲ್ಲರಿಗೂ ವೇದ ಅಂದರೆ ಜ್ಞಾನವನ್ನು ಪಡೆಯುವ ಹಕ್ಕಿರುವುದರಿಂದ, ವೇದ ಆರಂಭವೆಂಬ ಸಂಸ್ಕಾರವು ಸರ್ವರಿಗೂ ಮಾನ್ಯವೆನಿಸುತ್ತದೆ.
13. ಸಮಾವರ್ತನ
ಸಮಾವರ್ತನವೆಂದರೆ ಒಬ್ಬ ವಿದ್ಯಾರ್ಥಿಯ ವಿದ್ಯಾಭ್ಯಾಸವು ಮುಗಿದು ಗುರುಕುಲದಿಂದ ಮನೆಗೆ ತೆರಳುವ ಸಂದರ್ಭ. ಇದು ಜೀವನದ ನಾಲ್ಕು ಆಶ್ರಮಗಳಲ್ಲಿ ಒಂದಾದ ಬ್ರಹ್ಮಚರ್ಯೆಯನ್ನು ಮುಗಿಸಿ ಮುಂದಿನ ಗ್ರಹಸ್ಥಾಶ್ರಮಕ್ಕೆ ಕಾಲಿಡುವ ಸಂದರ್ಭದಲ್ಲಿ ಮಾಡುವ ಸಂಸ್ಕಾರ. ಈ ಒಂದು ಸಂಸ್ಕಾರದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ವಿದ್ಯಾರ್ಥಿಯು ತನ್ನ ಗುರುವಿಗೆ ಗುರುದಕ್ಷಿಣೆಯನ್ನು ಸಮರ್ಪಿಸಿ ಸಂಪೂರ್ಣವಾಗಿ ಗುರುವಿನ ಆಶೀರ್ವಾದವನ್ನು ಪಡೆಯುವ ಮುಖ್ಯ ಉದ್ದೇಶವನ್ನು ಕಾಣಬಹುದು.
14. ವಿವಾಹ
ವಿವಾಹ ಕರ್ಮವು ಗ್ರಹಸ್ಥಾಶ್ರಮದ ಪ್ರಾರಂಭವನ್ನು ಸೂಚಿಸುವ ಒಂದು ಮಹತ್ತರವಾದ ಸಂಸ್ಕಾರ. ಸಾಮಾನ್ಯವಾಗಿ ಗೋತ್ರಗುಣಗಳನ್ನು ಪರಿಶೀಲಿಸಿ, ದಾಂಪತ್ಯ ಜೀವನವನ್ನು ಶಾಸೋಕ್ತವಾಗಿ ಸ್ವೀಕರಿಸಿ, ಒಳ್ಳೆಯ ಪ್ರಜೆಯನ್ನು ಪಡೆದು, ಪಿತೃಋಣವನ್ನು ತೀರಿಸಲು ಅವಶ್ಯಕತೆ ಇರುವ ಸಂಸ್ಕಾರವಿದು. ಆದರೆ ಇಂದು ಈ ಸಂಸ್ಕಾರವು ಕೇವಲ ಸಾಂಪ್ರದಾಯಿಕವಾಗಿ ಉಳಿದಿದೆಯೇ ಹೊರತು ಇದನ್ನು ನಿಜವಾಗಿ ಅರಿತು ಮೈಗೂಡಿಸಿಕೊಳ್ಳುವವರ ಸಂಖ್ಯೆ ಬಹಳ ವಿರಳವಾಗಿರು ವುದು
15.ವಾನಪ್ರಸ್ಥ
ವಾನಪ್ರಸ್ಥ ಅಂದರೆ ಕಾಡಿಗೆ ತೆರಳುವುದು ಎಂದರ್ಥ. ಬದುಕಿನ ಚತುರ್ವಿಧ ಆಶ್ರಮಗಳಲ್ಲಿ ಇದು ಮೂರನೆಯದು. ಸಾಮಾನ್ಯವಾಗಿ 25 ವರ್ಷಗಳವರೆಗೆ ಬ್ರಹ್ಮಚರ್ಯವೂ, ತದನಂತರ ಗ್ರಹಸ್ಥವು ಐವತ್ತು ವರ್ಷಗಳವರೆಗೆ. ವಾನಪ್ರಸ್ಥಾಶ್ರಮವನ್ನು ಯಾವಾಗ ಆಚರಿಸಬೇಕೆಂದು ಈ ರೀತಿ ತಿಳಿಸ ಲಾಗಿದೆ- ಗೃಹಸ್ಥನು ಮೈಕೈ ಸುಕ್ಕುಬಿದ್ದು, ಕೂದಲು ನೆರೆತು, ಮಗನಿಗೆ ಮಗು ಜನಿಸಿದಾಗ, ಅರಣ್ಯ ವನ್ನು ಗಮಿಸಬಹುದು. ಸಾಂಸಾರಿಕ ಭೋಗಾಸಕ್ತನಾಗಿದ್ದ ವ್ಯಕ್ತಿಯು ವನವಾದಲ್ಲಿ ಭೋಗವನ್ನು ತೊರೆದು, ಯೋಗ ಮಾರ್ಗದಲ್ಲಿ ಮುನ್ನಡೆಯಲು ಸಹಕಾರ ಮಾಡುವ ಸಂಸ್ಕಾರವೇ ಈ ವಾನಪ್ರಸ್ಥ. ಈ ಸಂಸ್ಕಾರವು ಬದುಕಿನಲ್ಲಿ ಮೋಕ್ಷ ಸಾಧನೆಯತ್ತ ತನ್ನನ್ನು ಕೊಂಡೊಯ್ಯುವ ಹಾದಿಯನ್ನು ತೋರಿಸುತ್ತದೆ.
16. ಸನ್ಯಾಸ
ಈ ಸಂಸ್ಕಾರದಲ್ಲಿ ವ್ಯಕ್ತಿಯು ವಾನಪ್ರಸ್ಥವು ಮುಗಿದ ನಂತರ ಆಯುಷ್ಯವು ಅಳಿದುಳಿದು ಮೋಹಾ ದಿಗಳು ಉಳಿದಿದ್ದರೆ ಅವುಗಳನ್ನು ತೊರೆದು, ಸರ್ವಸಂಗ ಪರಿತ್ಯಾಗಿಯಾಗಿ ಸದಾ ಬ್ರಹ್ಮ ಧ್ಯಾನಾ ಸಕ್ತನಾಗುತ್ತಾನೆ. ಇದುವೇ ಸನ್ಯಾಸ. ಸನ್ಯಾಸ ಸಂಸ್ಕಾರವನ್ನು ಹಲವು ಪ್ರಕಾರಗಳಲ್ಲಿ ಮಾಡುವು ದನ್ನು ನಾವು ಕಾಣಬಹುದು. ವಿಧಿ ನಿಯಮಗಳು ಏನೇ ಆದರೂ, ಯಾವ ವಯಸ್ಸಿನಲ್ಲಿ, ಜೀವನದ ಯಾವ ಘಟ್ಟದಲ್ಲಿ ಸನ್ಯಾಸವನ್ನು ಸ್ವೀಕರಿಸಿದರೂ ಅದರ ಉದ್ದೇಶ ಒಂದೇ- ಸಂಪೂರ್ಣ ವಾಗಿ ಆಶಾರಹಿತನಾಗಿ, ಮೋಹಗಳನ್ನು ತ್ಯಜಿಸಿ, ಕೇವಲ ಬ್ರಹ್ಮಜ್ಞಾನದಲ್ಲಿ ತಲ್ಲೀನನಾಗಿ ತನ್ಮೂಲಕ ತನ್ನನ್ನು ಕಳೆದುಕೊಳ್ಳುವುದು- ಅದುವೇ ನಿಜವಾದ ಸನ್ಯಾಸ.
ಸ್ನೇಹಿತರೆ, ಒಟ್ಟಾರೆ ಮೇಲೆ ತಿಳಿಸಿದ ಷೋಡಶ ಸಂಸ್ಕಾರಗಳೆಲ್ಲವೂ ಮಾನವನ ಜೀವನದಲ್ಲಿ ಬರಬಹುದಾದ ಏರುಪೇರುಗಳನ್ನು ನಿವಾರಿಸಿ, ಮಾನವೀಯ ಮೌಲ್ಯಗಳನ್ನು ಕಾಪಾಡಿ, ಮನುಷ್ಯ ತ್ವದಿಂದ ದೈವತ್ವದ ಕಡೆಗೆ ಕರೆದೊಯ್ಯುವ ಸಾಧನಗಳಾಗಿವೆ. ಸಂಸ್ಕಾರಗಳನ್ನು ಆಚರಿಸುವ ವ್ಯಕ್ತಿಯು ಆರೋಗ್ಯ, ಆಯುಷ್ಯ ಮತ್ತು ಐಶ್ವರ್ಯವನ್ನು ಗಳಿಸುವುದರ ಜತೆಗೆ, ಮಾನಸಿಕ ನೆಮ್ಮದಿಯನ್ನು ಪಡೆಯುತ್ತಾನೆ.
ವೈಯಕ್ತಿಕವಾಗಿ ಇದು ಮಾನವನ ಪರಿವರ್ತನೆಯನ್ನು ಮಾಡುವುದರ ಜತೆಗೆ ಪ್ರಕೃತಿಯ ಮೇಲೂ ಉತ್ತಮ ಪರಿಣಾಮವನ್ನು ಬೀರುತ್ತದೆ. ಸಮಾಜದಲ್ಲಿ ಭಾವೈಕ್ಯತೆಯನ್ನು ಇದು ಉಂಟುಮಾಡಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ವೈಯಕ್ತಿಕ ವಿಕಸನ, ಸಾಮಾಜಿಕ ವಿಕಸನ ತನ್ಮೂಲಕ ರಾಷ್ಟ್ರದ ವಿಕಸನವನ್ನು ಮಾಡುವ ಈ ಸಂಸ್ಕಾರಗಳಿಂದಲೇ ಸ್ವಯಂ ಸಾಕ್ಷಾತ್ಕಾರ ಸಾಧ್ಯ!