ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರು

ಶಂಕರ ಬದುಕಿದ. ಅವನಿಗೆ ಎಂಟನೇ ವರ್ಷದಲ್ಲಿದ್ದ ಮೃತ್ಯುಯೋಗ ಭಗವಂತನ ಕೃಪೆಯಿಂದ ನಿವಾರಣೆಯಾಗಿತ್ತು. ನಂತರ ವೇದವ್ಯಾಸರನ್ನು ಕೇದಾರದಲ್ಲಿ ಭೇಟಿಯಾಗಿ ಬ್ರಹ್ಮಸೂತ್ರಗಳಿಗೆ ಅವರು ಬರೆದ ಭಾಷ್ಯವನ್ನು ತೋರಿಸಿ ಅವರೊಂದಿಗೆ ಚರ್ಚೆಯನ್ನು ನಡೆಸಿದಾಗ ಅವರು ೧೬ ವರುಷಗಳ ಆಯಸ್ಸನ್ನು ಕರುಣಿಸಿ ಜಗತ್ತಿನಲ್ಲಿ ಮಿಥ್ಯಾವಾದವನ್ನು ಖಂಡಿಸಿ ಅದ್ವೈತ ಸಿದ್ಧಾಂತವನ್ನು ಆಚಂದ್ರಾರ್ಕವಾಗಿಸುವಂತೆ ಆದೇಶಿಸಿದರು.

ಒಂದೊಳ್ಳೆ ಮಾತು

ಶಂಕರರ ತಂದೆ ಶಿವಗುರು, ತಾಯಿ ಆರ್ಯಾಂಬೆ, ಪರಮ ಶಿವಭಕ್ತರು. ಮದುವೆಯಾದ ಬಹಳ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಒಮ್ಮೆ ಶಿವಗುರುವಿನ ಕನಸಿನಲ್ಲಿ ಭಗವಂತ ಶಿವ ಕೇಳಿದ- “ನಿನಗೆ ಸನ್ನಡತೆಯುಳ್ಳ ಹಾಗೂ ಸರ್ವಜ್ಞನೆನಿಸುವ ಮಗ ಬೇಕು ಎನ್ನುವುದಾದರೆ ಅಲ್ಪಾಯುಷಿ ಮಗ ಜನಿಸುತ್ತಾನೆ.

ದೀರ್ಘಾಯುಷಿ ಮಗ ಬೇಕು ಎನ್ನುವುದಾದರೆ ಅಜ್ಞಾನಿ-ಅವಿವೇಕಿಯಾದ ಮಗ ಜನಿಸುತ್ತಾನೆ. ಇಬ್ಬರಲ್ಲಿ ಯಾರು ಬೇಕು?" ಎಂದು. “ಅಲ್ಪಾಯುವಾದರೂ ಪರವಾಗಿಲ್ಲ ಒಳ್ಳೆಯ ನಡತೆಯುಳ್ಳ ಪುತ್ರನನ್ನೇ ಕೊಡು" ಎಂದು ಶಿವಗುರು ಪ್ರಾರ್ಥಿಸಿದಾಗ, “ತಥಾಸ್ತು" ಎಂದ ಪರಮೇಶ್ವರ.

ಕನಸಿನಿಂದ ಎಚ್ಚರವಾಯಿತು. ಅಲ್ಪಾಯುಷಿ ಮಗು ಜನಿಸುತ್ತದೆ ಎಂದು ತಿಳಿದ ತಾಯಿಗೆ ಸ್ವಲ್ಪ ಬೇಸರವಾದರೂ ಬಂಜೆ ಎಂಬ ಲೋಕಾಪವಾದದಿಂದ ದೂರವಾದೆನಲ್ಲ ಎಂದು ಸಮಾಧಾನ ವಾಯಿತು. ಕೆಲವೇ ತಿಂಗಳಲ್ಲಿ ಆರ್ಯಾಂಬೆ ಗರ್ಭಿಣಿಯಾಗಿ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಲ್ಲಿ ಶಂಕರರು ಜನಿಸಿದರು.

ಇದನ್ನೂ ಓದಿ: Roopa Gururaj Column: ಬಲಿಪಾಡ್ಯಮಿಯ ವೈಶಿಷ್ಟ್ಯ

ಈಶ್ವರನ ವರಪ್ರಸಾದದಿಂದ ಹುಟ್ಟಿದ ಮಗುವಿಗೆ ತಂದೆ ‘ಶಂಕರ’ನೆಂದು ನಾಮಕರಣ ಮಾಡಿದರು ವಯಸ್ಸಿಗೆ ಮೀರಿದ ಪ್ರೌಢಿಮೆ ಮಗನಲ್ಲಿ ಇದ್ದುದನ್ನು ಗಮನಿಸಿದ ತಂದೆ, ಬೇಗನೆ ಉಪನಯನ ಮಾಡಿ ಗುರುಕುಲಕ್ಕೆ ಕಳಿಸಬೇಕೆಂದು ತಯಾರಿ ಮಾಡುವುದರೊಳಗೆ ಕಾಲವಶವಾದರು. ಪತಿಯ ಇಚ್ಛೆಯನ್ನು ಪೂರೈಸಬೇಕೆಂದು ತೀರ್ಮಾನಿಸಿದ ಆರ್ಯಾಂಬೆ ಬಂಧುಗಳ ನೆರವಿನಿಂದ, ಐದನೇ ವಯಸ್ಸಿನಲ್ಲಿಯೇ ಶಂಕರನಿಗೆ ಉಪನಯನ ಮಾಡಿಸಿದರು.

ಪುಟ್ಟ ಬ್ರಹ್ಮಚಾರಿ ಶಂಕರ ವೇದ-ಶಾಸ್ತ್ರಗಳ ಅಧ್ಯಯನಕ್ಕೆ ಗುರುಕುಲದತ್ತ ಹೊರಟನು. ಶಂಕರರಿಗೆ ಎಂಟನೆಯ ವಯಸ್ಸಿನಲ್ಲಿ ಅಪಾರವಾದ ಜ್ಞಾನ ಲಭಿಸಿತ್ತು. ತಾಯಿಗೆ ಮಗನ ಪ್ರೌಢಿಮೆ ಕಂಡು ಹಿಗ್ಗು. ಆದರೆ ಅವನ ಅಲ್ಪಾಯುಷ್ಯದ ಕುರಿತು ಕೊರಗು ಕಾಡತೊಡಗಿತು. ವಿದ್ವಾಂಸರ ಬಳಿ ಮಗನ ಜಾತಕ ತೋರಿಸಿದಾಗ, ಅವರ ಮುಖದಲ್ಲಿ ಚಿಂತೆಯ ಗೆರೆ ಮೂಡಿದ್ದನ್ನು ಗಮನಿಸಿ ಆರ್ಯಾಂಬೆ ಆತಂಕಗೊಂಡಳು.

ವಿದ್ವಾಂಸರು ಇರುವ ವಿಚಾರವನ್ನು ತಿಳಿಸಿದರು, “ಹೌದು ತಾಯಿ, ನಿನ್ನ ಮಗನಿಗೆ ಅವನ ಎಂಟನೆಯ ಹಾಗೂ ಹದಿನಾರನೆಯ ವಯಸ್ಸುಗಳಲ್ಲಿ ಮೃತ್ಯುಯೋಗವಿದೆ". ಇದನ್ನು ಕೇಳಿದ ತಾಯಿ ದಿಕ್ಕೇ ತೋಚದಂತಾದಳು. ಈ ವಿಚಾರಗಳೆಲ್ಲ ಅ ಹತ್ತಿರದಲ್ಲಿ ಕುಳಿತಿದ್ದ ಶಂಕರನ ಕಿವಿಗೂ ಬಿದ್ಧಿತು. ಒಂದಿಷ್ಟೂ ವಿಚಲಿತನಾಗದ ಪುಟ್ಟ ಶಂಕರ ಯೋಚಿಸಿದ- ‘ನಾನು ಅಲ್ಪಾಯು. ಈ ಕಡಿಮೆ ಅವಧಿಯಲ್ಲಿಯೇ ನನ್ನ ಕರ್ತವ್ಯಗಳನ್ನು ಮಾಡಿ ಮುಗಿಸಬೇಕು’.

ತಾಯಿಯ ದುಃಖ ಅವನಿಗೆ ತಿಳಿದಿತ್ತು. ಏನಾದರೂ ಮಾಡಿ ತಾಯಿಯನ್ನು ಒಪ್ಪಿಸಬೇಕೆಂದು ಯೋಚಿಸುತ್ತಿದ್ದ. ಒಂದು ದಿನ ಶಂಕರ ತಾಯಿಯ ಮುಂದೆ ತನ್ನ ಬೇಡಿಕೆಯನ್ನು ಇಟ್ಟ. “ಅಮ್ಮಾ ನಾನು ಅಲ್ಪಾಯು ಎಂದು ನಿನಗೆ ತಿಳಿದಿದೆ. ಹಾಗೆ ಸಾಯುವ ಬದಲು ‘ಸನ್ಯಾಸಿ’ಯಾಗಿ ಸತ್ತರೆ ಮೋಕ್ಷ ದೊರೆಯುತ್ತದೆ. ಅದಕ್ಕೆ ಸನ್ಯಾಸಿಯಾಗಲು ಅನುಮತಿ ಕೊಡಮ್ಮ" ಎಂದು ಕೇಳಿದ. ಈ ಮಾತನ್ನು ಕೇಳಿ ತಾಯಿ ಹೃದಯವೇ ಬಾಯಿಗೆ ಬಂದಿತು, ಅಳುತ್ತಾ ಅವನ ಮಾತಿಗೆ ಅವಳು ಸಮ್ಮತಿಸಲಿಲ್ಲ.

ಒಂದು ದಿನ ಆರ್ಯಾಂಬೆ ಸ್ನಾನ ಮಾಡಲು ಮಗನೊಡನೆ ಪೂರ್ಣಾ ನದಿಗೆ ಹೋದಳು. ಇನ್ನೂ ಶಂಕರನ ಸ್ನಾನ ಮುಗಿದಿರಲಿಲ್ಲ, ನೀರಿನ ಮುಳುಗು ಹಾಕುತ್ತಿದ್ದ. ಇದ್ದಕ್ಕಿದ್ದಂತೆ ಒಂದು ಮೊಸಳೆ ಶಂಕರನ ಸಮೀಪವೆ ಬಂದು ಅವನ ಕಾಲನ್ನು ಹಿಡಿದು ನದಿಯೊಳಗೆ ಎಳೆಯತೊಡಗಿತು. ಶಂಕರ ಜೀವ ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಪಡುತ್ತಿದ್ದ, ಆದರೆ ಮೊಸಳೆಯನ್ನು ಎದುರಿಸಲು ಚಿಕ್ಕ ಬಾಲಕನಿಂದ ಆಗಲಿಲ್ಲ. ತನಗೆ ಇನ್ನು ದುರ್ಮರಣ ಒದಗಿತು ಎಂದು ಶಂಕರನಿಗೆ ತಿಳಿಯಿತು.

ದಡದಲ್ಲಿದ್ದ ತಾಯಿ ಕಡೆ ತಿರುಗಿ- “ಅಮ್ಮಾ, ನನಗೀಗ ದುರ್ಮರಣ ಒದಗಿದೆ, ಮೊಸಳೆ ನನ್ನನ್ನು ಬಿಡುವುದಿಲ್ಲ, ಈಗಲಾದರೂ ಸನ್ಯಾಸಿ ಆಗಲು ಅನುಮತಿ ಕೊಡಮ್ಮ. ಸಂಕಲ್ಪ ಮಾತ್ರದಿಂದಲೇ ಸನ್ಯಾಸ ಸ್ವೀಕರಿಸಿ ಸತ್ತು ಮೋಕ್ಷ ಪಡೆಯುತ್ತೇನೆ" ಎಂದು ಅಂಗಲಾಚಿದನು. ಮಗ ಇನ್ನು ಬದುಕುವುದಿಲ್ಲವೆಂದು ಆರ್ಯಾಂಬೆಗೆ ದೃಢವಾಯಿತು.

ಅವನ ಕೊನೆಯಾಸೆಯನ್ನು ನೆರವೇರಿಸಲೆಂದು ಯೋಚಿಸಿ ಸನ್ಯಾಸ ಸ್ವೀಕರಿಸಲು ಅಳುತ್ತಲೇ ಒಪ್ಪಿಗೆ ಕೊಟ್ಟಳು. ಆ ಕ್ಷಣವೇ ಶಂಕರನು ಸಂಕಲ್ಪ ಮಾತ್ರದಿಂದ ಸನ್ಯಾಸ ಸ್ವೀಕರಿಸಿದನು. ಸ್ವೀಕರಿಸಿದ ಕ್ಷಣ ಮಾತ್ರದಲ್ಲೇ ಸುತ್ತಮುತ್ತ ಇದ್ದ ಬೆಸ್ತರು ಓಡಿ ಬಂದು ಗಲಾಟೆ ಮಾಡಿದರು.

ಗಾಬರಿಗೊಂಡ ಮೊಸಳೆ ಶಂಕರನ ಕಾಲುಗಳನ್ನು ಬಿಟ್ಟುಹೋಯಿತು. ಶಂಕರ ಬದುಕಿದ. ಅವನಿಗೆ ಎಂಟನೇ ವರ್ಷದಲ್ಲಿದ್ದ ಮೃತ್ಯುಯೋಗ ಭಗವಂತನ ಕೃಪೆಯಿಂದ ನಿವಾರಣೆಯಾಗಿತ್ತು. ನಂತರ ವೇದವ್ಯಾಸರನ್ನು ಕೇದಾರದಲ್ಲಿ ಭೇಟಿಯಾಗಿ ಬ್ರಹ್ಮಸೂತ್ರಗಳಿಗೆ ಅವರು ಬರೆದ ಭಾಷ್ಯವನ್ನು ತೋರಿಸಿ ಅವರೊಂದಿಗೆ ಚರ್ಚೆಯನ್ನು ನಡೆಸಿದಾಗ ಅವರು ೧೬ ವರುಷಗಳ ಆಯಸ್ಸನ್ನು ಕರುಣಿಸಿ ಜಗತ್ತಿನಲ್ಲಿ ಮಿಥ್ಯಾವಾದವನ್ನು ಖಂಡಿಸಿ ಅದ್ವೈತ ಸಿದ್ಧಾಂತವನ್ನು ಆಚಂದ್ರಾರ್ಕವಾಗಿಸುವಂತೆ ಆದೇಶಿಸಿದರು.

ಆ ಕೆಲಸವನ್ನು ಪೂರ್ಣಗೊಳಿಸಿ ಅನೇಕಾನೇಕ ದೇವಾಲಯಗಳನ್ನು ಪುನರುದ್ಧಾರಗೊಳಿಸಿ ಅಲ್ಲೇ ಶ್ರೀಚಕ್ರ ಸ್ಥಾಪಿಸಿ, ಬದರಿ, ಪುರಿ, ದ್ವಾರಕೆ ಹಾಗೂ ಶೃಂಗೇರಿಗಳಲ್ಲಿ ಪೀಠಗಳನ್ನು ಸ್ಥಾಪಿಸಿದ ಶಂಕರರು ತಮ್ಮ ಮೊದಲ ನಾಲ್ವರು ಶಿಷ್ಯರನ್ನು ನಾಲ್ಕೂ ಪೀಠಗಳಿಗೆ ಪ್ರಥಮ ಅಧಿಪತಿಗಳನ್ನಾಗಿ ನೇಮಿಸಿದರು. 32ನೇ ವಯಸ್ಸಿನಲ್ಲಿ ಕಾಶ್ಮೀರದ ಸರ್ವಜ್ಞ ಪೀಠಾರೋಹಣ ಮಾಡಿ ಕೇದಾರದಿಂದ ಮೇಲೆ ಹಿಮಾಲಯದೆಡೆಗೇರಿ ಸಜೀವ ಸಮಾಧಿ ಪಡೆದರು.

ರೂಪಾ ಗುರುರಾಜ್

View all posts by this author