Shashidhara Halady Column: ಇರುವೆಗಳನ್ನು ತಿನ್ನುವ ಹಾರುವ ಓತಿ !
ತೀರಾ ಅಪೂರ್ವವಲ್ಲದ ಈ ಹಾರುವ ಓತಿಯೊಂದಿಗೆ ನನ್ನ ಮುಖಾಮುಖಿ ಹಲವು ಮಜಲುಗಳದ್ದು. ವಿದ್ಯಾರ್ಥಿಯ ದಿನಗಳಲ್ಲಿ, ಮನೆಯಿಂದ ಮೂರು ಕಿ.ಮೀ. ದೂರವಿರುವ ಶಾಲೆಗೆ ನಡೆದು ಹೋಗುವಾಗ, ಪುಟ್ಟ ಅಡಿಕೆ ತೋಟದ ಅಂಚಿನಲ್ಲಿ ಸಾಗುತ್ತಿತ್ತು ನಮ್ಮ ದಾರಿ. ಅಲ್ಲಿದ್ದ ಪುರಾತನ ಅಡಿಕೆ ಮರಗಳ ಮೇಲೆ ಕೂತು, ತನ್ನ ಗಂಟಲಿನ ಹೊರಭಾಗದಲ್ಲಿರುವ ಹಳದಿ ನಾಲಿಗೆಯನ್ನು ಅಲ್ಲಾಡಿಸುತ್ತಾ ಕುಳಿತಿ ರುತ್ತಿತ್ತು ಹಾರುವ ಓತಿ.

ಮುಖ್ಯ ಉಪಸಂಪಾದಕ, ಅಂಕಣಕಾರ ಶಶಿಧರ ಹಾಲಾಡಿ

ಶಶಾಂಕಣ
ಶಶಿಧರ ಹಾಲಾಡಿ
ಹಾರುವ ಓತಿಗಳು ನಮ್ಮ ರಾಜ್ಯದ ಮಲೆನಾಡು, ಕರಾವಳಿಯ ಕಾಡುಗಳಲ್ಲಿ ಅಲ್ಲಲ್ಲಿ ಕಾಣಸಿಗುವ ವಿಶಿಷ್ಟ ಜೀವಿಗಳು. ಅವು ವಾಸಿಸುವ ತಾಣವು ನಿರಂತರವಾಗಿ ನಲುಗುತ್ತಿದ್ದರೂ, ಇಂದಿಗೂ ಅವು ಗಳನ್ನು ಅಡಕೆ ತೋಟಗಳಲ್ಲಿ, ಹಕ್ಕಲುಗಳಲ್ಲಿ, ಕಾಡುಗಳಲ್ಲಿ ಕಾಣಬಹುದು.
ತೀರಾ ಅಪೂರ್ವ ಜೀವಿಗಳಲ್ಲ; ಅಧಿಕೃತ ಪಟ್ಟಿಯ ಪ್ರಕಾರ ಅವು ಅಳಿವಿನಂಚಿನ ಜೀವಿಗಳಲ್ಲ. (ಲೀಸ್ಟ್ ಕನ್ಸರ್ನ್). ವಿಶೇಷವೆಂದರೆ, ಅವುಗಳ ಜೀವನ ಕ್ರಮವನ್ನು ಸಂಪೂರ್ಣ ಮತ್ತು ವಿವರವಾದ ಅಧ್ಯಯನಕ್ಕೆ ಒಳಪಡಿಸಿದಂತೆ ಕಾಣುತ್ತಿಲ್ಲ. ಈಗಲೂ ನಮ್ಮೂರಿಗೆ ಹೋದಾಗ, ನಮ್ಮ ಮನೆಯ ಸುತ್ತಲಿನ ಹಕ್ಕಲಿನಲ್ಲಿ, ಅಡಕೆ ತೋಟದಲ್ಲಿ, ಮನೆ ಎದುರಿನ ತೆಂಗಿನ ಮರಗಳ ನಡುವೆ ಅವು ಗಳನ್ನು ಕಣ್ಣು ಹುಡುಕುತ್ತದೆ, ಆಗಾಗ ಅವು ಕಾಣಸಿಗುತ್ತವೆ.
ಇದನ್ನೂ ಓದಿ: Shashidhara Halady Column: ಬೇಟೆಗಾರನೊಬ್ಬನ ಪರಿಸರ ಕಾಳಜಿ
ಅದು ಒಂದು ಪುಟ್ಟ, ಆರೆಂಟು ಇಂಚು ಉದ್ದದ ಜೀವಿ. ದೇಹದಷ್ಟೇ ಉದ್ದದ ಬಾಲ. ತನ್ನ ಬೆನ್ನಿನ ಚರ್ಮವನ್ನು ಅಗಲಿಸಿ, ಮರದಿಂದ ಮರಕ್ಕೆ ತೇಲಿಕೊಂಡು ಹಾರಬಲ್ಲ ಹಾರುವ ಜೀವಿ. ಅದು ಹಕ್ಕಿ ಯಂತ ಹಾರಲಾಗದು; ಗ್ಲೈಡ್ ಮಾಡುತ್ತಾ ಹಾರುತ್ತದೆ. ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ನಿಗೂಢ ಪರಿಸರದ ಪ್ರತೀಕವಾಗಿ ಕಾಣಿಸಿಕೊಂಡ ನಂತರ, ಹಾರುವ ಓತಿಯು ಕನ್ನಡ ಅಕ್ಷರ ಲೋಕದಲ್ಲಿ ಗಳಿಸಿರುವ ಸ್ಥಾನ ಅನನ್ಯ.
ತೇಜಸ್ವಿಯವರ ಆ ಅದ್ಭುತ ಕಾದಂಬರಿಯ ಕೊನೆಯಲ್ಲಿ, ಪರ್ವತ ಕಲ್ಲಿನ ಅಂಚಿನಿಂದ ದಿಗಂತ ದೆಡೆಗೆ ಆ ಹಾರುವ ಓತಿ, ನಿಶ್ಶಬ್ದವಾಗಿ ತೇಲಿಕೊಂಡು ಹೋಗುವ ಚಿತ್ರಣವಂತೂ, ಪರಿಸರ ರಕ್ಷಣೆಯ ಪ್ರತೀಕವಾಗಿ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.
ತೀರಾ ಅಪೂರ್ವವಲ್ಲದ ಈ ಹಾರುವ ಓತಿಯೊಂದಿಗೆ ನನ್ನ ಮುಖಾಮುಖಿ ಹಲವು ಮಜಲು ಗಳದ್ದು. ವಿದ್ಯಾರ್ಥಿಯ ದಿನಗಳಲ್ಲಿ, ಮನೆಯಿಂದ ಮೂರು ಕಿ.ಮೀ. ದೂರವಿರುವ ಶಾಲೆಗೆ ನಡೆದು ಹೋಗುವಾಗ, ಪುಟ್ಟ ಅಡಿಕೆ ತೋಟದ ಅಂಚಿನಲ್ಲಿ ಸಾಗುತ್ತಿತ್ತು ನಮ್ಮ ದಾರಿ. ಅಲ್ಲಿದ್ದ ಪುರಾತನ ಅಡಿಕೆ ಮರಗಳ ಮೇಲೆ ಕೂತು, ತನ್ನ ಗಂಟಲಿನ ಹೊರಭಾಗದಲ್ಲಿರುವ ಹಳದಿ ನಾಲಿಗೆಯನ್ನು ಅಲ್ಲಾಡಿಸುತ್ತಾ ಕುಳಿತಿರುತ್ತಿತ್ತು ಹಾರುವ ಓತಿ.
ನಮ್ಮೂರಿನ ಭಾಷೆಯಲ್ಲಿ ಅದನ್ನು ‘ಓಂತಿ’ ಎಂದು ಕರೆಯುತ್ತಿದ್ದರು. ‘ಕಾಯಿಕಳ್ಳ’ ಎಂದು ಸ್ಥಳೀ ಯರು ಕರೆಯುತ್ತಿದ್ದ ಓತಿಕ್ಯಾತವನ್ನು ಇದರಿಂದ ಪ್ರತ್ಯೇಕಿಸುವ ಸಲುವಾಗಿ ಓಂತಿ ಎಂಬ ಆ ಹೆಸರು ಚಂದ. ಆದರೆ, ಪ್ರತಿದಿನ ಶಾಲೆಗೆ ಹೋಗುವಾಗ, ಅದು ಕಾಣಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅದು ಅಪರೂಪದ ಜೀವಿ. ವಿದ್ಯಾಭ್ಯಾಸ ಮುಗಿಸಿ, ಹಾಲಾಡಿಯನ್ನು ತೊರೆದು, ಬಯಲು ಸೀಮೆಯ ಪುಟ್ಟ ಹಳ್ಳಿಯಲ್ಲಿ ಉದ್ಯೋಗಸ್ಥನಾದ ನಂತರ ಎರಡನೆಯ ಹಂತದಲ್ಲಿ ಹಾರುವ ಓತಿಯನ್ನು ಸ್ಪಷ್ಟವಾಗಿ ಕಂಡಿದ್ದು ನಮ್ಮ ಮನೆಯ ಪಕ್ಕದಲ್ಲಿ!
ನಮ್ಮ ಮನೆ ಎದುರಿನಲ್ಲಿದ್ದ ಅಡಿಗೆ ತೋಟದಲ್ಲಿ ಹೀಗೇ ಒಂದು ದಿನ ಸುತ್ತಾಡುತ್ತಿದ್ದೆ. ಎತ್ತರವಾದ ಒಂದು ಅಡಿಕೆ ಮರದಿಂದ ಹಾರಿದ ಹಾರುವ ಓತಿಯನ್ನು ಕಂಡಾಗ, ಮೊದಲಿಗೆ ಒಂದು ಮರದಿಂದ ಮತ್ತೊಂದಕ್ಕೆ ಚಿಟ್ಟೆಯೊಂದು ಹಾರುತ್ತಿದೆ ಎನಿಸಿತು. ಆದರೆ, ತುಸು ಗಮನವಿಟ್ಟು ನೋಡಿದಾಗ, ಸ್ಪಷ್ಟವಾಯಿತು, ಅದು ಹಾರುವ ಓತಿ! ತನ್ನ ಬಗಲಿನಲ್ಲಿದ್ದ ಚರ್ಮವನ್ನು ಬಿಚ್ಚಿ, ಸುಮಾರು 30 ಅಡಿ ಎತ್ತರದ ಮರದಿಂದ ನೆಗೆದ ಆ ಹಾರುವ ಓತಿಯು, ನಿಧಾನವಾಗಿ ತೇಲುತ್ತಾ ಕೆಳಗಿನ ಮತ್ತೊಂದು ಅಡಿಕೆ ಮರದ ಮೇಲೆ ಹೋಗಿ ಕುಳಿತುಕೊಂಡಿತು! ಪಕ್ಕೆಲುಬುಗಳಿಗೆ ಅಂಟಿಕೊಂಡ ಚರ್ಮವನ್ನೇ ಅಗಲವಾಗಿ ಬಿಡಿಸಿ ಹಾರಬಲ್ಲ ಆ ಓಂತಿಗಳಿಗೆ, ಹಾರುವ ಕಲೆಯು ಒಂದು ರಕ್ಷಣಾ ತಂತ್ರ. ಜೊತೆಗೆ, ತನ್ನ ಗಾತ್ರವನ್ನು ಹಿಗ್ಗಿಸಿಕೊಂಡು ಹೆಣ್ಣು ಓಂತಿಯನ್ನು ಆಕರ್ಷಿಸುವ ತಂತ್ರವೂ ಇದ್ದೀತು.
ಅದಾಗಲೇ ನಾನು ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಓದಿದ್ದರಿಂದ, ನಮ್ಮದೇ ತೋಟದಲ್ಲಿ ಕಂಡ ಹಾರುವ ಓತಿಯನ್ನು ಸಾಕಷ್ಟು ಚೆನ್ನಾಗಿಯೇ ಗಮನಿಸಿದೆ, ಮುದಗೊಂಡೆ, ಬೆರಗುಗೊಂಡೆ. ಕಾದಂಬರಿಯಲ್ಲಿ ವರ್ಣಿತಗೊಂಡ ಈ ಅಪರೂಪದ ಜೀವಿಯನ್ನು ನಮ್ಮ ಹಿತ್ತಲಿ ನಲ್ಲೇ ಕಂಡಾಗ ತುಸು ಸಂಭ್ರಮವೂ ಆಯಿತು. ನಂತರ, ಅದು ಅಡಿಕೆ ಮರಗಳ ಸಂದಿಯಲ್ಲಿ ಹಾರಿ ಕಣ್ಮರೆಯಾಯಿತು. ನಂತರ ಹಲವು ಬಾರಿ ಸನಿಹದ ಹಕ್ಕಲಿನಲ್ಲಿಲ, ಅಡಕೆ ತೋಟದಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಅದು ಹಾರುತ್ತಿರುವುದನ್ನು ಕಂಡಿದ್ದುಂಟು.
ಮೂರು ದಶಕಗಳ ನಂತರ ಮೂರನೆಯ ಬಾರಿ ಹಾರುವ ಓತಿಯೊಡನೆ ನನ್ನ ಮುಖಾಮುಖಿ ಯಾದದ್ದು, ಹಾಲಾಡಿ ಪೇಟೆಯಲ್ಲಿದ್ದ ನಮ್ಮ ಮನೆ ಎದುರು. ಹತ್ತಾರು ತೆಂಗಿನ ಮರ, ನಾಲ್ಕಾರು ಅಡಕೆ ಮರ, ಒಂದು ಮಾವಿನ ಮರ, ತೇಗದ ಮರ, ಕುರುಚಲು ಗಿಡಗಳು, ಪಕ್ಕದಲ್ಲೇ ನಾಗರ ಬನದ ದಟ್ಟ ಬಳ್ಳಿ ಎಲ್ಲಾ ಸೇರಿ, ಅಲ್ಲಿ ಪುಟ್ಟ ಹಕ್ಕಲಿನ ಪರಿಸರ ರೂಪುಗೊಂಡಿತ್ತು.
ಅಕ್ಕ ಪಕ್ಕದ ಮನೆಗಳ ಸುತ್ತ ಮುತ್ತ ಸಹಾ ಸಾಕಷ್ಟು ಗಿಡಮರಗಳಿದ್ದವು. ನಮ್ಮ ತಂದೆ, ತಮ್ಮ ಅನಾರೋಗ್ಯದಿಂದಾಗಿ ಸಾಮಾನ್ಯವಾಗಿ ಒಂದೆಡೆ ಕುಳಿತಿರುತ್ತಿದ್ದರು ಅಥವಾ ಮಲಗಿರುತ್ತಿದ್ದರು. ಅಂದು ಆ ಓತಿಯು ಅವರ ದೃಷ್ಟಿಗೆ ಬಿದ್ದ ಕೂಡಲೇ, ನಿಶ್ಶಕ್ತಿ ಇದ್ದರೂ, ತಾವು ಕುಳಿತ ಜಾಗದಿಂದ ಎದ್ದು ಬಂದು, ಅದರತ್ತ ಕೈತೋರಿ ‘ನೋಡಲ್ಲಿ, ಅದನ್ನು ಓಡಿಸು’ ಎಂದು ನನ್ನತ್ತ ನೋಡುತ್ತಾ ಸನ್ನೆ ಮಾಡಿದರು.
ಅವರು ಕೈತೋರಿದ ದಿಕ್ಕಿನಲ್ಲಿ ನೋಡಿದರೆ, ಒರಟು ದೇಹದ ಪುಟ್ಟ ಓತಿಕ್ಯಾತವೊಂದು ಕುಳಿತಿತ್ತು. ತನ್ನ ವಿಚಿತ್ರ ಶೈಲಿಯಲ್ಲಿ ಕತ್ತನ್ನು ತಿರುಗಿಸುತ್ತಾ ಭಾವಭಂಗಿಗಳನ್ನು ಪ್ರದರ್ಶಿಸುತ್ತಿತ್ತು! ತಲೆ ಯನ್ನು ಅತ್ತಿತ್ತ ಅಲ್ಲಾಡಿಸುತ್ತಾ, ಕಣ್ಣನ್ನು ಹೊಳೆಯಿಸುತ್ತಿತ್ತು. ನಮ್ಮಪ್ಪ ಇನ್ನೊಮ್ಮೆ ದರತ್ತ ಕೈಮಾಡಿ, ‘ಅದನ್ನು ಓಡಿಸು’ ಎಂದು ಸೂಚಿಸಿದರು.
ನಮ್ಮ ಓಡಾಟವನ್ನು ಕಂಡು, ಎರಡಡಿ ದೂರವಿದ್ದ ಬಾವಿಯ ಮೋಟುಗೋಡೆಯತ್ತ ಅದು ಹಾರಿತು. ಹೌದೋ ಅಲ್ಲವೋ ಎಂಬಂತೆ, ಅದರ ಎರಡೂ ಬಗಲಿನಲ್ಲಿದ್ದ ಚರ್ಮದ ಹಾಳೆ ಬಿಡಿಸಿ ಕೊಂಡಿತು. ತಕ್ಷಣ ನನಗೆ ಗೊತ್ತಾಯಿತು, ಅದು ಸಾಮಾನ್ಯ ಓತಿಕ್ಯಾತ ಅಲ್ಲ, ಅದೊಂದು ಹಾರುವ ಓತಿ ಎಂದು! ‘ಅದನ್ನು ನಾನು ನೋಡಿಕೊಳ್ಳುತ್ತೇನೆ, ಅದರ ಫೋಟೋ ತೆಗೆಯಬೇಕು’ ಎಂದು ನಮ್ಮಪ್ಪನ ಬಳಿ ಹೇಳಿದ ನಂತರ, ಅವರು ವಿಶ್ರಾಂತಿ ತೆಗೆದುಕೊಳ್ಳಲು ಕೊಠಡಿಗೆ ಹೋದರು. ನಾನು ಡಿಜಿಟಲ್ ಕ್ಯಾಮೆರಾ ಹಿಡಿದು ಆ ಹಾರುವ ಓತಿಯ ಹಿಂದೆ ಹೊರಟೆ.
ಮುಂದಿನ ಒಂದೆರಡು ಗಂಟೆಗಳ ಕಾಲ ಹಾರುವ ಓತಿಯ ಓಡಾಟವನ್ನು ನೋಡುವುದು, ಅದನ್ನು ಕ್ಲಿಕ್ಕಿಸುವುದು, ನನ್ನ ಪರಿಮಿತಿಯಲ್ಲಿ ಅದರ ಶೈಲಿ, ನೋಟವನ್ನು ಅಧ್ಯಯನ ಮಾಡುವುದೇ ನನ್ನ ಕೆಲಸವಾಯಿತು. ಅದು ಬಾವಿಕಟ್ಟೆಯ ಮೆಲೆ ಅತ್ತಿತ್ತ ಓಡಾಡುತ್ತಾ, ಇರುವೆಗಳನ್ನು ತಿನ್ನುತ್ತಾ, ಸುತ್ತಲಿದ್ದ ನರಮನುಷ್ಯರನ್ನು ಸಂಪೂರ್ಣ ಅಲಕ್ಷ್ಯ ಮಾಡಿ ತನ್ನ ಪಾಡಿಗೆ ಅದರದೇ ಲೋಕ ದಲ್ಲಿತ್ತು!
ಚಿಕ್ಕ ಗಿಡವೊಂದನ್ನು ಏರಿ, ಅಲ್ಲಿಂದ ಗಿಡ ಟೊಂಗೆಗೆ ಹಾರುವಾಗ ಅದರ ‘ರೆಕ್ಕೆ’ ಸ್ವಲ್ಪ ಬಿಚ್ಚಿದ್ದು ಕಾಣಿಸಿತು. ಭುಜ ಮತ್ತು ಪಕ್ಕೆಲುಬಿನ ನಡುವೆ ಇರುವ ಚರ್ಮವನ್ನೇ ರೆಕ್ಕೆಯ ರೂಪಕ್ಕೆ ಬದಲಿಸಿ ಕೊಂಡು, ಒಂದು ಮರದಿಂದ ಇನ್ನೊಂದು ಮರಕ್ಕೆ ‘ಗ್ಲೈಡ್’ ಮಾಡುತ್ತಾ (ತೇಲುತ್ತಾ) ಸಾಗುವ ಆ ಹಾರುವ ಓತಿಯ ಹಾರಾಟವನ್ನು ಹತ್ತಿರದಿಂದ ನೋಡುವ ಅನುಭವ ಅನನ್ಯ.
ಗಿಡದಿಂದ ಪುನಃ ಬಾವಿ ಕಟ್ಟೆಯತ್ತ ಬಂದ ಹಾರುವ ಓತಿಯು ನಿಧಾನವಾಗಿ ನಡೆದು, ಪಕ್ಕದ ಕಾಂಪೌಂಡ್ ಗೋಡೆಯ ಮೇಲೆ ಕುಳಿತಿತು. ಅಲ್ಲಿನ ಪಾಚಿ, ಹಾವಸೆಗಳ ನಡುವೆ ಚಲಿಸುತ್ತಾ, ತನ್ನ ಕುತ್ತಿಗೆ ತಳದ ಹಳದಿ ನಾಲಿಗೆಯನ್ನು ನೀಡುತ್ತಾ ಪೋಸು ಕೊಡತೊಡಗಿತು. ಮನುಷ್ಯರು ತೀರಾ ಹತ್ತಿರಬಂದರೆ, ಅವರಿಂದ ಅಪಾಯ ಬಂದರೆ ತೇಲುತ್ತಾ ತಪ್ಪಿಸಿಕೊಳ್ಳಬಲ್ಲೆನೆಂಬ ಯೋಚನೆ ಅದರದ್ದು! ಜೊತೆಗೆ, ತಾನು ಕುಳಿತ ಜಾಗದ ಬಣ್ಣಕ್ಕೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಿಸುವ ಚಾಕಚಕ್ಯತೆ!
ಕಾಂಪೌಂಡ್ ಮೇಲೆ ತುಂಬಾ ಹೊತ್ತು ಮಿಸುಕಾಡದೇ ಕುಳಿತಿದ್ದ ಆ ಓತಿ, ನಾನು ಕ್ಯಾಮೆರಾ ಕ್ಲಿಕ್ಕಿಸು ವಾಗಲೇ, ತನ್ನ ನಾಲಿಗೆಯನ್ನು ಛಕ್ಕೆಂದು ಝಳಪಿಸಿ, ಅಲ್ಲೇ ಸಾಲಾಗಿ ಹರಿದಾಡುತ್ತಿದ್ದ ನಾಲ್ಕೆಂಟು ಕೆಂಪು ಇರುವೆಗಳನ್ನು ಸ್ವಾಹಾ ಮಾಡಿದ್ದೂ ಆಯಿತು! ಈ ರೀತಿಯ ಜೀವಿಗಳು ಇರುವೆ ಗಳನ್ನು ತಿನ್ನುತ್ತವೆ ಎಂದು ಓದಿದ್ದೆ; ಅಂದು ಹಾರುವ ಓತಿಯು ಇರುವೆಗಳನ್ನು ತಿನ್ನುತ್ತವೆ ಎಂಬುದನ್ನು ಕಣ್ಣಾರೆ ಕಂಡೆ. ಸಣ್ಣ ಗಾತ್ರದ ಕೆಂಪಿರುವೆಗಳನ್ನು ಅದು ಇಷ್ಟಪಟ್ಟು ತಿನ್ನುತ್ತಿತ್ತು.
ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಮ್ಮ ಮನೆಯ ಸುತ್ತ ಮುತ್ತ ಸುಳಿದಾಡುತ್ತಿದ್ದ ಹಾರುವ ಓತಿಯು, ನಂತರ ಅಡಿಕೆ ಗಿಡವೊಂದಕ್ಕೆ ನೆಗೆದು, ಇತರ ಕುರುಚಲು ಗಿಡಗಳ ನಡುವೆ ಕಣ್ಮರೆಯಾಯಿತು! ನಾಲ್ಕಾರು ವಾರಗಳ ನಂತರ, ಅದೇ ಜಾಗದಲ್ಲಿ ಹಾರುವ ಓತಿ ದಂಪತಿ ಆಟ ವಾಡುವ ದೃಶ್ಯ ನೋಡುವ ಅವಕಾಶ ಲಭಿಸಿತು. ಮಧ್ಯಾಹ್ನ ಮೂರು ಗಂಟೆಯ ಸಮಯ. ಒಳ್ಳೆಯ ಬಿಸಿಲು. ಮನೆ ಮುಂಭಾಗದ ಸಿಟ್‌ಔಟ್‌ನಲ್ಲಿ, ಬರೆಯುತ್ತಾ ಕುಳಿತಿದ್ದೆ. ಪಕ್ಕದ ಮನೆಯ ಎದುರು ನಾಲ್ಕು ತೆಂಗಿನ ಮರಗಳಿವೆ.
ಕೊನೆಯ ಮರದಿಂದ ಒಂದು ಹಾರುವ ಓತಿ ತೇಲುತ್ತಾ ಬಂದು ಮೂರನೆಯ ಮರದ ಕಾಂಡದ ಮೇಲೆ ಕುಳಿತಿತು. ಅದರ ಹಿಂದೆಯೇ ಇನ್ನೊಂದು ಹಾರುವ ಓತಿ ಹಾರುತ್ತಾ ಬಂದು ಅದೇ ಮರವನ್ನು ಅಪ್ಪಿತು. ನನಗೆ ಮರೆಯಾಗಿದ್ದ ಭಾಗದಲ್ಲಿ ತೆಂಗಿನ ಮರವನ್ನೇ ಸ್ವಲ್ಪ ಮೇಲೇರಿ, ಎರಡನೆಯ ಮರಕ್ಕೆ ಒಂದು ಓತಿ, ಅದರ ಹಿಂದೆಯೇ ಓತಿ ತೇಲುತ್ತಾ ಬಂದವು. ನಾಲ್ಕಾರು ನಿಮಿಷ ಗಳಲ್ಲಿ, ಮೊದಲನೆಯ ಮರಕ್ಕೂ ಒಂದರ ಹಿಂದೆ ಒಂದರಂತೆ, ತೇಲುತ್ತಾ ಹಾರಿ, ಕೊನೆಗೆ ಎರಡೂ ಬಂದ ದಾರಿಯಲ್ಲೇ ಮರದಿಂದ ಮರಕ್ಕೆ ಹಾರುತ್ತಾ, ವಾಪಸಾದವು. ಕೊನೆಯ ಮರದಾಚೆ ಇರುವ ದಟ್ಟವಾದ ಹಲಸಿನ ಮರವನ್ನೇರಿ ಕಣ್ಮರೆಯಾದವು!
ಒಂದರ ಹಿಂದೆ ಒಂದನ್ನು ಅನುಸರಿಸಿದ್ದರಿಂದಾಗಿ, ಅವುಗಳನ್ನು ದಂಪತಿ ಎಂದು ಕರೆದೆ. ಅವೆ ರಡೂ ಹಾರುವ ಓತಿಗಳು ದಂಪತಿಗಳಾಗಿರಲಿ, ಇಲ್ಲದಿರಲಿ, ಒಂದು ಜೋಡಿ ಹಾರುವ ಓತಿ ಈ ರೀತಿ ಮರದಿಂದ ಮರಕ್ಕೆ ಹಾರಾಡುವ ದೃಶ್ಯ ನೋಡಲು ಸಿಕ್ಕಿದ್ದು ನಿಜಕ್ಕೂ ಅಪೂರ್ವ. ಮಕ್ಕಳು ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಜೂಟಾಟ ಆಡುವ ರೀತಿ ಇತ್ತು ಅವುಗಳ ಆ ದಿನದ ಹಾರಾಟ!
ಹಾರುವ ಓತಿಯು ಪ್ರತಿ ಹಾರಾಟದಲ್ಲೂ ತನ್ನ ಎತ್ತರವನ್ನು ಕಳೆದುಕೊಳ್ಳುತ್ತದೆ, ಕಳೆದುಕೊಳ್ಳಲೇ ಬೇಕು. ಅದು ಅನಿವಾರ್ಯ, ಮಿತಿ. ಗ್ಲೈಡಿಂಗ್ ಮಾದರಿಯ ಹಾರಾಟವಾದ್ದರಿಂದ, ಎತ್ತರದಿಂದ ತುಸು ತಗ್ಗಿನ ಜಾಗಕ್ಕೆ ಅದು ಹಾರಬಲ್ಲದೇ ಹೊರತು, ಮೇಲ್ಭ್ಬಾಗಕ್ಕೆ ಹಾರಲು ಅದರಿಂದ ಅಸಾಧ್ಯ. ಆದ್ದರಿಂದಲೇ ಇರಬೇಕು, ಹಾರಿಬಂದು ಕುಳಿತ ತೆಂಗಿನ ಮರದ ಕಾಂಡವನ್ನು ಅಪ್ಪಿ ಹಿಡಿದು, ನಾಲ್ಕೆಂಟು ಅಡಿ ಮೇಲಕ್ಕೆ ಚಲಿಸಿ, ಮತ್ತೆ ಹಾರಲು ಅನುವಾಗುತ್ತಿತ್ತು!
ಹಿಂಬಾಲಿಸಿಕೊಂಡು ಬಂದ ಎರಡನೆಯು ಹಾರುವ ಓತಿ ಸಹ, ಅದೇ ರೀತಿ ಮೇಲಕ್ಕೆ ಏರುತ್ತಿತ್ತು. ಅವು ಒಂದರ ಹಿಂದೆ ಒಂದು ಏಕೆ ಹಾರುತ್ತಿದ್ದವು? ಅವು ಆ ದಿನದ ಮಟ್ಟಿಗೆ ಲವರ್ಸ್ ಇರಬಹುದೆ? ಎಲ್ಲಾ ಓತಿಕ್ಯಾತಗಳು ಮತ್ತು ಅವಕ್ಕೆ ಸಂಬಂಧಿಸಿದ ಇತರ ಜೀವಿಗಳು ನೆಲದ ಮೇಲೆ, ಮರದ ಮೇಲೆ ಓಡಾಡುತ್ತಾ ಜೀವನ ನಡೆಸುತ್ತಿರಬೇಕಾದರೆ, ಹಾರುವ ಓತಿ ಮಾತ್ರ ತನ್ನ ಪಕ್ಕೆಲುಬುಗಳಲ್ಲಿ ಅಗಲಿಸುವಂತಹ ಚರ್ಮವನ್ನು ಬೆಳೆಸಿಕೊಂಡು, ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಲು ಕಲಿತ ವಿಚಾರ ವಿಸ್ಮಯಕಾರಿ. ಬೇರೆ ಓತಿಕ್ಯಾತಗಳು, ಕೆಲವು ಅಡಿ ನೆಗೆಯಬಲ್ಲವು.
ಆದರೆ ತನ್ನ ಬಗಲಿನಲ್ಲಿರುವ ಚರ್ಮದ ಪದರವನ್ನು ಬಳಸಿ ಹತ್ತಾರು ಅಡಿ ದೂರದ ತನಕ ಮರ ದಿಂದ ಮರಕ್ಕೆ ಹಾರಬಲ್ಲ ಹಾರುವ ಓತಿಯು ನಮ್ಮ ರಾಜ್ಯದ ಕುತೂಹಲಕಾರಿ ಜೀವಿಗಳಲ್ಲಿ ಒಂದು. ಅದರ ವಾಸಸ್ಥಳವನ್ನು ರಕ್ಷಿಸುವ ಜವಾಬ್ದಾರಿ ನಮ್ಮದು.