Shashidhara Halady Column: ಬೇಟೆಗಾರನೊಬ್ಬನ ಪರಿಸರ ಕಾಳಜಿ
ದೇಶಕ್ಕೆ ದೊರಕುವ ಸ್ವಾತಂತ್ರ್ಯವು ಹೇಗೆ ಒಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕೊಡ ಬಲ್ಲದು ಮತ್ತು ಆ ಮೂಲಕ ಸ್ಥಳೀಯ ನಾಗರಿಕರ ಅಭಿವೃದ್ಧಿಗೆ

ಶಶಾಂಕಣ
ಶಶಿಧರ ಹಾಲಾಡಿ
ಹಿಮಾಲಯದ ಸೆರಗಿನಲ್ಲಿರುವ ಬದರಿನಾಥ ಮತ್ತು ಕೇದಾರನಾಥಕ್ಕೆ ಹಿಂದೆ ಪ್ರತಿವರ್ಷ ಸಾವಿರಾರು ಜನರು ನಡೆದು ಕೊಂಡೇ ಹೋಗುತ್ತಿದ್ದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವ ತನಕ ಆ ಪರ್ವತ ಪ್ರದೇಶಗಳಲ್ಲಿ ಉತ್ತಮ ರಸ್ತೆ ಗಳಿರಲಿಲ್ಲ; ಈಗ ಅಲ್ಲೆಲ್ಲಾ ರಸ್ತೆಯಾಗಿದ್ದು, ಭಕ್ತರ ಜತೆ ಸಾವಿರಾರು ಪ್ರವಾಸಿಗರು ಸಹ ಬದರಿನಾಥ ನೋಡಲು ಹೋಗುತ್ತಿದ್ದಾರೆ ಮತ್ತು ಆ ಜಾಗಕ್ಕೆ ಹೋಗುವುದು ಸುಲಭ ಎನಿಸಿದೆ.
ದೇಶಕ್ಕೆ ದೊರಕುವ ಸ್ವಾತಂತ್ರ್ಯವು ಹೇಗೆ ಒಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕೊಡ ಬಲ್ಲದು ಮತ್ತು ಆ ಮೂಲಕ ಸ್ಥಳೀಯ ನಾಗರಿಕರ ಅಭಿವೃದ್ಧಿಗೆ ಕಾರಣವಾಗಬಲ್ಲದು ಎಂಬುದನ್ನು ಕೇದಾರನಾಥ, ಬದರಿನಾಥ ಮೊದಲಾದ ಕಡೆ ನಿರ್ಮಾಣವಾಗಿರುವ ರಸ್ತೆ ಮತ್ತು ಸೇತುವೆಗಳೇ ಹೇಳುತ್ತವೆ. ಇರಲಿ, ಅದು ಬೇರೆ ವಿಚಾರ. ಹಿಮಾಲಯದ ತಪ್ಪಲಿನ ಕಾಡಿನಲ್ಲಿದ್ದ ನರಭಕ್ಷಕರ ವಿಚಾರಕ್ಕೆ ಬರೋಣ.
ನಡೆದುಕೊಂಡೇ ಹೋಗುತ್ತಿದ್ದ ಸಾವಿರಾರು ಪ್ರಯಾಣಿಕರನ್ನು ಗಮನಿಸಿದ್ದ ಒಂದು ಚಿರತೆಯು, ರುದ್ರಪ್ರಯಾಗದ ಹತ್ತಿರ ಸಾಗುವ ಕಾಡುದಾರಿಯಲ್ಲಿ ಅಮಾಯಕ ಯಾತ್ರಿಕರ ಮೇಲೆ ಎರಗುತ್ತಿತ್ತು. ಯಾವುದೋ ಕಾರಣದಿಂದ ನರಭಕ್ಷಕನ ರೂಪ ಪಡೆದಿದ್ದ ಆ ಚಿರತೆಯು ರುದ್ರಪ್ರಯಾಗದ ಸರಹದ್ದಿನ ಜನರಿಗೆ, ಯಾತ್ರಿಕರಿಗೆ ಕಂಟಕ ಎನಿಸಿತ್ತು. ಬಹುಶಃ ಆಹಾರ ಸಿಗದೇ ಅಥವಾ ಸ್ಥಳೀಯರು ಬೇಟೆಯಾಡಲು ಪ್ರಯತ್ನಿಸಿದ್ದಾಗ ಅದು ಗಾಯಗೊಂಡಿರ ಬಹುದು. ಬ್ರಿಟಿಷ್ ಸರಕಾರದ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಯು, ಈ ಚಿರತೆಯ ಚಲನವಲನಗಳನ್ನು ದಾಖಲಿಸಿಟ್ಟಿದ್ದಾರೆ.
ಹಿಂದೆ ಹಲವರನ್ನು ಸಾಯಿಸಿದ್ದ ಆ ಚಿರತೆ, 14.4.1926ರಂದು ಒಬ್ಬ ವ್ಯಕ್ತಿಯನ್ನು ಸಾಯಿಸಿದ ಸುದ್ದಿ ಸರಕಾರಕ್ಕೆ ತಲುಪಿತು. ಅದೇ ಆ ಚಿರತೆಯ ಕೊನೆಯ ಬಲಿ. ಏಕೆಂದರೆ, 2.5.1926ರಂದು ಖ್ಯಾತ ಬೇಟೆಗಾರ ಜಿಮ್ ಕಾರ್ಬೆಟ್ ಅದನ್ನು ಗುಂಡಿಟ್ಟು ಕೊಂದರು.
15.5.1926ರಂದು ಈ ನರಭಕ್ಷಕನ ಬೇಟೆಯ ಕಥೆಯನ್ನು ‘ದಿ ಪಯೊನಿರ್’ ಪತ್ರಿಕೆ ವರದಿ ಮಾಡಿತ್ತು. ಈ ಘಟನೆ ನಡೆದು ಸುಮಾರು 20 ವರ್ಷಗಳ ನಂತರ, ಜಿಮ್ ಕಾರ್ಬೆಟ್ ಬರೆದ ಪುಸ್ತಕ ‘ರುದ್ರಪ್ರಯಾಗದ ನರಭಕ್ಷಕ ಚಿರತೆ’ (ದಿ ಮ್ಯಾನ್ ಈಟಿಂಗ್ ಲೆಪಾರ್ಡ್ ಆಫ್ ರುದ್ರಪ್ರಯಾಗ) (1947) ಪುಸ್ತಕ ಪ್ರಕಟಗೊಂಡಿತು. ಆ ಚಿರತೆಯ ಬೇಟೆಯ ಅನುಭವವು ಜಿಮ್ ಕಾರ್ಬೆಟ್ ಅವರ ನೆನಪಿನಲ್ಲಿ ಅಡಗಿ ಕುಳಿತಿದ್ದು ಕಾವು ಪಡೆದು, 2 ದಶಕಗಳ ನಂತರ ಕಾದಂಬರಿ ಸ್ವರೂಪದಲ್ಲಿ ಪ್ರಕಟಗೊಂಡು ಜನಮೆಚ್ಚುಗೆ ಗಳಿಸಿತು ಎಂಬುದು ಒಂದು ಸಾಹಿತ್ಯಕ ಅನುಭವ ವಾಗಿಯೂ ವಿಶಿಷ್ಟ. ಜತೆಗೆ ಈ ಪುಸ್ತಕ ಮತ್ತು ಜಿಮ್ ಕಾರ್ಬೆಟ್ ರಚಿಸಿದ ಇತರ ಬೇಟೆಯ ನೆನಪಿನ ಪುಸ್ತಕಗಳಿಗೆ ವಿಶ್ವದಾದ್ಯಂತ ಓದುಗರ ಮೆಚ್ಚುಗೆ ದಕ್ಕಿದ್ದು, ಅದನ್ನು ಇಂಗ್ಲಿಷ್ ಬಲ್ಲ ಓದುಗರು ಬಹುವಾಗಿ ಮೆಚ್ಚಿಕೊಂಡದ್ದು, ಇವೆಲ್ಲವೂ ಸಾಹಿತ್ಯ ಲೋಕದ ದಾಖಲೆಗಳಾಗಿ ಉಳಿದುಹೋಗಿವೆ.
‘ರುದ್ರಪ್ರಯಾಗದ ನರಭಕ್ಷಕ’ ಎಂಬ ಹೆಸರಿನಲ್ಲಿ ತೇಜಸ್ವಿಯವರು ಇದನ್ನು ಕನ್ನಡದಲ್ಲೂ ಹೊರತಂದಿದ್ದಾರೆ. ಜಿಮ್ ಕಾರ್ಬೆಟ್ ಅವರ ಬೇಟೆಯ ಇತರ ಪುಸ್ತಕಗಳೂ ಕನ್ನಡದಲ್ಲಿ ಅನುವಾದಗೊಂಡಿವೆ, ಈಗಲೂ ಅನುವಾದ ಗೊಳ್ಳುತ್ತಿವೆ. ಬೇಟೆಯ ಅನುಭವದ ಆ ಪುಸ್ತಕಗಳು ಜನಮೆಚ್ಚುಗೆ ಗಳಿಸಿರುವುದು ವಿಶೇಷ.
ಜಿಮ್ ಕಾರ್ಬೆಟ್ (1875-1955) ಒಬ್ಬ ಬ್ರಿಟಿಷ್ ಬೇಟೆಗಾರ. ಅದರಲ್ಲೂ ಹುಲಿ, ಚಿರತೆಯಂಥ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ, ಸುದ್ದಿ ಮಾಡಿ ಪ್ರಸಿದ್ಧನಾದ ವ್ಯಕ್ತಿ. ಸಾಮಾನ್ಯವಾಗಿ ಜನರಿಗೆ ತೊಂದರೆ ಕೊಡುವ, ನರಭಕ್ಷಕ ಸ್ವರೂಪ ಪಡೆದ ಹುಲಿಗಳನ್ನು ಬೇಟೆಯಾಡುವುದರಲ್ಲಿ ಇವರು ಎತ್ತಿದ ಕೈ. ಉದ್ದೇಶ ಏನೇ ಇರಲಿ, ಬಂದೂಕು ಚಲಾಯಿಸಿ ಪ್ರಾಣಿಗಳನ್ನು ಹತ್ಯೆ ಮಾಡುವುದು ಇವರ ಖಯಾಲಿಯೂ ಹೌದು, ಹಳ್ಳಿಯ ಜನರಿಗೆ ಸಹಾಯ ಮಾಡುವ ವಿಧಾನವೂ ಹೌದು. ಮೂಲತಃ ಮನುಷ್ಯರನ್ನು ಕಂಡರೆ ಹೆದರಿ ದೂರ ಸರಿಯುವ ಹುಲಿ ಮತ್ತು ಚಿರತೆಗಳು, ಅದಾವುದೋ ಕಾರಣದಿಂದ ಮನುಷ್ಯನ ಮೇಲೆ ಆಕ್ರಮಣ ಮಾಡುವ ಗುಣವನ್ನು ರೂಢಿಸಿಕೊಂಡಾಗ, ಅಂಥ ನರಭಕ್ಷಕನನ್ನು ಗುಂಡಿಟ್ಟು ಸಾಯಿಸುವ ಮೂಲಕ ನಾನು ಬಹಳಷ್ಟು ಜನರ ಜೀವ ಉಳಿಸಿದೆ ಮತ್ತು ಆ ಮೂಲಕ ನಮ್ಮ ದೇಶದ ಗ್ರಾಮೀಣ ಪ್ರದೇಶದ ಜನರಿಗೆ ಸಹಾಯ ಮಾಡಿದೆ ಎಂದೇ ಜಿಮ್ ಕಾರ್ಬೆಟ್ ತಮ್ಮ ಬರಹಗಳಲ್ಲಿ ಸೂಚಿಸಿದ್ದಾರೆ.
ನರಭಕ್ಷಕ ಚಿರತೆ, ಹುಲಿಗಳನ್ನು ಸಾಯಿಸಿದ್ದ ಇಂಥ ಒಬ್ಬ ಬೇಟೆಗಾರನು ಸಾಹಿತಿಯಾಗಿಯೂ ಯಶಸ್ಸು ಪಡೆದಿರು ವುದು ಒಂದು ಅಚ್ಚರಿ. ಇನ್ನೂ ವಿಸ್ಮಯದ ವಿಚಾರವೆಂದರೆ, ನಮ್ಮ ದೇಶದ ಪ್ರಖ್ಯಾತ ರಾಷ್ಟ್ರೀಯ ಅಭಯಾರಣ್ಯಕ್ಕೆ ಇವರ ಹೆಸರನ್ನು ಇಟ್ಟಿರುವುದು! ಜಿಮ್ ಕಾರ್ಬೆಟ್ ಕೇವಲ ಗುಂಡು ಹಾರಿಸಿ ಮೃಗಗಳನ್ನು ಸಾಯಿಸುವ ಬೇಟೆಗಾರ ನಾಗಿರಲಿಲ್ಲ, ಅವರಲ್ಲಿ ಒಬ್ಬ ಸಾಹಿತಿ ಇದ್ದ, ಜತೆಗೆ ಅವರಲ್ಲಿ ಒಬ್ಬ ಪರಿಸರಪ್ರೇಮಿ ಇದ್ದ, ಪ್ರಾಣಿ ಪ್ರೇಮಿಯೂ ಇದ್ದ, ಜನರ ಮೇಲೆ ಕಳಕಳಿಯಿದ್ದ ಅಧಿಕಾರಿಯೂ ಇದ್ದ.
ಬೇಟೆಗಾರನೊಬ್ಬನು ಪರಿಸರ ರಕ್ಷಣೆಯ ಮೊದಲ ಪಾಠಗಳನ್ನು ಬೋಧಿಸಿದ ಅಪರೂಪದ ಉದಾಹರಣೆಯನ್ನು ಜಿಮ್ ಕಾರ್ಬೆಟ್ ಅವರಲ್ಲಿ ನೋಡಬಹುದು.
25.7.1875ರಂದು ಜಿಮ್ ಕಾರ್ಬೆಟ್ ಜನಿಸಿದ ಸಮಯದಲ್ಲಿ, ಅವರಿದ್ದ ನೈನಿತಾಲ್ ಪಕ್ಕಾ ಕಾಡು ಪ್ರದೇಶ. ಹಿಮಾಲಯದ ತಪ್ಪಲಿನ ಕಾಡುಗಳ, ಬೆಟ್ಟಗಳ ಮಧ್ಯೆ ಇದ್ದ ನೈನಿತಾಲ್ ಅಂದು ಬ್ರಿಟಿಷರ ಕಾಲೊನಿ. ತಂಪಾದ ಹವೆ ಇದ್ದುದರಿಂದ, ತಾವು ವಾಸಿಸಲು, ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಬ್ರಿಟಷರು ನೈನಿತಾಲನ್ನು ಆಯ್ದುಕೊಳ್ಳುತ್ತಿದ್ದರು. ಜಿಮ್ ಕಾರ್ಬೆಟ್ ಅವರ ತಂದೆಯು, ಬ್ರಿಟಿಷ್ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ನೈನಿತಾಲ್ ನಲ್ಲಿ ಪೋಸ್ಟ್ ಮಾಸ್ಟರ್ ವೃತ್ತಿ ನಿರ್ವಹಿಸುತ್ತಿದ್ದರು. ಅವರ ತಾಯಿಯು ನೈನಿತಾಲ್‌ನಲ್ಲಿ ರಿಯಲ್ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು! ಇವರಿಬ್ಬರಿಗೆ 12 ಜನ ಮಕ್ಕಳು. ಅವರಲ್ಲಿ ಎಂಟನೆಯವರೇಜಿಮ್ ಕಾರ್ಬೆಟ್. ಆರಂಭಿಕ ಶಿಕ್ಷಣವನ್ನು ನೈನಿತಾಲ್‌ನಲ್ಲಿ ಪಡೆದ ಜಿಮ್ ಕಾರ್ಬೆಟ್, 19ನೆಯ ವಯಸ್ಸಿನಲ್ಲಿ ಬೆಂಗಾಲ್ ಮತ್ತು ನಾರ್ತ್ ಈಸ್ಟರ್ನ್ ರೈಲ್ವೆಯಲ್ಲಿ ಕೆಲಸಕ್ಕೆ ಸೇರಿದರು. ನಂತರದ ದಿನಗಳಲ್ಲಿ ಪದೋನ್ನತಿ ಹೊಂದಿ, ಬ್ರಿಟಿಷ್ ಸೇನೆಯೊಂದಿಗೂ ವೃತ್ತಿ ನಿರ್ವಹಿಸಿ, ಬೇರೆ ದೇಶಗಳಲ್ಲಿ ಮುಖ್ಯವಾಗಿ ಆಫ್ರಿಕಾದಲ್ಲಿ ಸುತ್ತಾಡಿ ಬಂದರು. ಬ್ರಿಟಿಷ್ ಸೇನೆಯಲ್ಲಿ ಅವರಿಗೆ ಕರ್ನಲ್ ಸಮಾನ ಸ್ಥಾನಮಾನವಿತ್ತು.
ಹಿಮಾಲಯದ ತಪ್ಪಲಿನಲ್ಲಿದ್ದ, ನೈನಿತಾಲ್ ಸುತ್ತಮುತ್ತಲಿನ ಕಾಡು ಎಂದರೆ ಜಿಮ್ ಕಾರ್ಬೆಟ್‌ಗೆ ಬಹು ಇಷ್ಟ. ಬಾಲ್ಯದಿಂದಲೂ ಕಾಡಿನಲ್ಲಿ ಓಡಾಡಿದ್ದರಿಂದ, ಆ ಕಾಡಿನ ಮಿಡಿತವನ್ನು ಅವರು ಬಲ್ಲರು. ಕ್ರಮೇಣ ಚತುರ ಬೇಟೆಗಾರನಾಗಿ ರೂಪುಗೊಂಡ ಅವರ ಗುರಿ ಅಸಾಧಾರಣ. ಕೊನೆಯ ತನಕವೂ ಬ್ರಹ್ಮಚಾರಿಯಾಗಿಯೇ ಉಳಿದ ಜಿಮ್ ಕಾರ್ಬೆಟ್ ಕಾಡಿನೊಂದಿಗೇ ತಮ್ಮ ಜೀವನ ಕಳೆದರು. ನಮ್ಮನ್ನು ಆಳುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದ ಉತ್ತರ ಭಾಗದಲ್ಲಿ, ಹಿಮಾಲಯದ ತಪ್ಪಲಿನಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ, ಎಲ್ಲೇ ನರಭಕ್ಷಕ ಹುಲಿ, ಚಿರತೆಗಳ ಕಾಟ ಕಂಡುಬಂದರೂ, ಕರೆ ಹೋಗುತ್ತಿದ್ದುದು ಜಿಮ್ ಕಾರ್ಬೆಟ್ ಅವರಿಗೆ.
ನರಭಕ್ಷಕ ಹುಲಿಗಳನ್ನು ಸ್ಥಳೀಯ ಬೇಟೆಗಾರರು ಗುಂಡಿಟ್ಟು ಸಾಯಿಸುತ್ತಿದ್ದುದುಂಟು. ಬ್ರಿಟಿಷ್ ಸರಕಾರವು ಆ ದಿನಗಳಲ್ಲಿ ಬೇಟೆಗೆ ಅವಕಾಶ ಕೊಟ್ಟಿತ್ತು. ಅದು ಅಂದು ಕ್ರೀಡಾ ಸ್ವರೂಪವನ್ನೂ (ಸ್ಪೋರ್ಟ್) ಪಡೆದಿತ್ತು. ಯುರೋಪಿಯನ್ನರು ಮತ್ತು ನಮ್ಮ ದೇಶದ ಸಿರಿವಂತರು ಸಾವಿರಾರು ಕಾಡುಪ್ರಾಣಿಗಳನ್ನು ಮೋಜಿಗಾಗಿ ಸಾಯಿಸುತ್ತಿದ್ದ ಕಾಲ ಅದು. ಆದರೆ ಹಿಮಾಲಯದ ದಟ್ಟ ಕಾಡುಗಳ ನಡುವೆ ಹಲವು ಗ್ರಾಮಗಳಿದ್ದು, ಅಲ್ಲಿಅಕಸ್ಮಾತ್ ನರಭಕ್ಷಕ ಹುಲಿಗಳ ಉಪಟಳ ಆರಂಭವಾದರೆ, ಆ ದುರ್ಗಮ ಪ್ರದೇಶಕ್ಕೆ ಬೇಟೆಗಾರರು ಬರುವುದು ತುಸು ಕಷ್ಟವಿತ್ತು. ಜನರಿಗೆ, ಗ್ರಾಮೀಣರಿಗೆ ಉಪಟಳ ನೀಡುತ್ತಿದ್ದ ಪ್ರಾಣಿಗಳನ್ನು ಸ್ಥಳೀಯ ಬೇಟೆಗಾರರು ಕೊಲ್ಲಲು ವಿಫಲರಾದಾಗ, ಜಿಮ್ ಕಾರ್ಬೆಟ್ ರಂಗಪ್ರವೇಶಿಸುತ್ತಿದ್ದರು. ಜನರಿಗೆ ತೊಂದರೆ ಕೊಡುವ, ಜನರ ಮೇಲೆ ಕ್ರಮಣ ಮಾಡುವ ಹುಲಿಗಳನ್ನು ಸಾಯಿಸುವುದು ಎಂದರೆ ಅಂದಿನ ದಿನಗಳಲ್ಲಿ ಪರೋಪಕಾರ ಮಾಡಿದಂತೆ.
ಸರಕಾರವೂ ಅದನ್ನು ಪ್ರೋತ್ಸಾಹಿಸುತ್ತಿತ್ತು. ಆದ್ದರಿಂದಲೇ, ಅಂಥ ಕರೆ ಬಂದಾಗ ಜಿಮ್ ಕಾರ್ಬೆಟ್ ರೈಫಲ್ ಹಿಡಿದು ಹೊರಡುತ್ತಿದ್ದರು. ಅವರ ಬಂದೂಕಿಗೆ ಬಲಿಯಾಗಿದ್ದು ಸಾಮಾನ್ಯವಾಗಿ ನರಭಕ್ಷಕ ಹುಲಿ ಮತ್ತು ಚಿರತೆಗಳು. ಒಮ್ಮೊಮ್ಮೆ ನರಭಕ್ಷಕ ಅಲ್ಲದ ಹುಲಿಯನ್ನೂ ಅವರು ಬೇಟೆಯಾಡಿದ್ದುಂಟು. ‘ಬ್ಯಾಚಲರ್ ಆಫ್ ಪಾವಲ್ಗರ್’ ಎಂದು ಹೆಸರಾಗಿದ್ದ, 10 ಅಡಿ 7 ಇಂಚು ಉದ್ದದ ಭಾರಿ ಹುಲಿ ಅಂಥ ಬೇಟೆಗಳಲ್ಲಿ ಒಂದು. ಜಿಮ್ ಕಾರ್ಬೆಟ್ ಭಾರತದಲ್ಲಿ ಒಟ್ಟು 19 ಹುಲಿ, 16 ಚಿರತೆಗಳನ್ನು ಸಾಯಿಸಿದ್ದಾರೆ.
1926ರಲ್ಲಿ ಅವರು ರುದ್ರಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಂದಿದ್ದು ಬಹಳ ಸುದ್ದಿಯಾಯಿತು.
ಅದಕ್ಕೂ ಹಿಂದಿನ ಕೆಲವು ವರ್ಷಗಳ ಅವಧಿಯಲ್ಲಿ ಆ ಚಿರತೆಯು ರುದ್ರಪ್ರಯಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ 120ಕ್ಕೂ ಹೆಚ್ಚಿನ ಯಾತ್ರಿಕರನ್ನು ಸಾಯಿಸಿತ್ತು ಎಂದು ಬ್ರಿಟಿಷ್ ದಾಖಲೆಗಳು ಹೇಳುತ್ತವೆ. ರುದ್ರಪ್ರಯಾಗದ ನರಭಕ್ಷಕನನ್ನು ಸಾಯಿಸಿದ ಜಿಮ್ ಕಾರ್ಬೆಟ್ ಅವರ ಈ ಕೆಲಸವು ಅವರಿಗೆ ಭಾರಿ ಪ್ರಸಿದ್ಧಿಯನ್ನು ತಂದುಕೊಟ್ಟಿತು ಮತ್ತು ಜನರಿಗೆ ಉಪಕಾರ ಮಾಡಿದರು ಎಂಬ ಭಾವವನ್ನು ಮೂಡಿಸಿತು. ಅದಕ್ಕೂ ಮುಂಚೆ, 1910ರ ಸಮಯದಲ್ಲಿ, ಪೆನಾಂಗ್ ಚಿರತೆ ಯನ್ನು ಅವರು ಗುಂಡಿಟ್ಟು ಸಾಯಿಸಿದ್ದರು; ಆ ಚಿರತೆಯು ಸುಮಾರು 400 ಜನರನ್ನು ಕೊಂದಿತ್ತು ಎಂದು ಹೇಳಲಾಗಿತ್ತು. ಈ ರೀತಿಯ ನರಭಕ್ಷಕಗಳ ದೇಹವನ್ನು ಪರಿಶೀಲಿಸಿ, ಅವುಗಳ ದೇಹದಲ್ಲಿದ್ದ ಹಳೆಯ ಗುಂಡೇಟಿನ ಗುರುತುಗಳನ್ನು ಕಾರ್ಬೆಟ್ ಪತ್ತೆ ಮಾಡಿ, ಆ ರೀತಿ ಅರ್ಧಂಬರ್ಧ ಏಟು ತಿಂದ ಹುಲಿಗಳು ಮುಂದೆ ನರಭಕ್ಷಕಗಳಾಗುತ್ತವೆ ಎಂದು ಹೇಳಿದ್ದರು.
ಮುಳ್ಳು ಹಂದಿಗಳ ಮುಳ್ಳಿನಿಂದ ಗಾಯಗೊಂಡ ಹುಲಿಗಳು ಸಹ ಮುಂದೆ, ಮನುಷ್ಯನ ಮೇಲೆ ಸುಲಭ ಬೇಟೆಗಾಗಿ ದಾಳಿ ಮಾಡುತ್ತವೆ ಎಂದು ಗುರುತಿಸಿದ್ದರು. ನರಭಕ್ಷಕ ಪ್ರಾಣಿಗಳನ್ನು ಸಾಯಿಸಿ, ಜನರಿಗೆ ಉಪಕಾರ ಮಾಡಿದ ಹಿನ್ನೆಲೆಯಲ್ಲಿ, ಬ್ರಿಟಿಷ್ ಸರಕಾರವು ಇವರಿಗೆ 1928ರಲ್ಲಿ ‘ಕೈಸರ್ ಎ ಹಿಂದ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತು! ಆ ದಿನಗಳಲ್ಲಿ ಈ ಪ್ರಶಸ್ತಿ ಪಡೆಯುವುದು ಎಂದರೆ ಬಹುದೊಡ್ಡ ಗೌರವ. ಅದು ಇಂದಿನ ‘ಭಾರತರತ್ನ’ಕ್ಕೆ ಸಮಾನಎನ್ನಬಹುದು. ಬ್ರಿಟಿಷ್ ಸರಕಾರವು ಅವರಿಗೆ ‘ಚಾಂಪಿಯನ್ ಆಫ್ ಇಂಡಿಯಾ’ ಗೌರವವನ್ನು ಸಹ ದಯಪಾಲಿಸಿದೆ.
ಜಿಮ್ ಕಾರ್ಬೆಟ್ ಕೇವಲ ಬೇಟೆಗಾರನಾಗಿದ್ದರೆ ಇಷ್ಟು ಪ್ರಸಿದ್ಧಿ ಪಡೆಯುತ್ತಿರಲಿಲ್ಲ. ನರಭಕ್ಷಕ ಹುಲಿ ಮತ್ತು ಚಿರತೆ ಗಳನ್ನು ಸಾಯಿಸಿದ ಅವರು, ಕಾಡಿನ ವಿದ್ಯಮಾನಗಳನ್ನು ಗಮನಿಸುತ್ತಿದ್ದರು; ವಿಶೇಷ ವಾಗಿ ಕಾಡಿನ ಅಂಚಿನಲ್ಲಿದ್ದ ಹಳ್ಳಿಗಳ ಜನಜೀವನ, ಅವರ ಕಷ್ಟಗಳು, ಅಂದಿನ ಹಳ್ಳಿಗಳಲ್ಲಿದ್ದ ಅಜ್ಞಾನ, ಮೂಢನಂಬಿಕೆ, ಕಾಡುಪ್ರಾಣಿ ಗಳೊಂದಿಗಿನ ಗ್ರಾಮೀಣ ಜನರ ಮುಖಾಮುಖಿ ಎಲ್ಲವನ್ನೂ ಗಮನಿಸುತ್ತಿದ್ದರು, ಹುಲಿ ಅಥವಾ ಚಿರತೆಯೊಂದು ನರಭಕ್ಷಕನಾಗಲು ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದರು. ಬೇಟೆಯಾಡುವಾಗ ಗಾಯಗೊಂಡ ಹುಲಿ ನರಭಕ್ಷಕನಾಗುವುದುಂಟು ಎಂದು ಅವರು ಅಧ್ಯಯನ ಮಾಡಿದ್ದರು. ಹಿಮಾಲಯ ತಪ್ಪಲಿನಲ್ಲಿದ್ದ ಕಾಡನ್ನು ರಕ್ಷಿಸಬೇಕು ಎಂಬುದನ್ನು ಅವರು ಆಗಲೇ ಗುರುತಿಸಿದ್ದರು.
ಬೇಟೆಯಾಡುವ ಜತೆಯಲ್ಲೇ, 1920ರಲ್ಲಿ ಅವರೊಂದು ಕ್ಯಾಮೆರಾ ಖರೀದಿಸಿ, ವನ್ಯಜೀವಿಗಳ ಚಿತ್ರಗಳನ್ನು ತೆಗೆಯ ತೊಡಗಿದರು. ಅವರ ಗೆಳೆಯ, ಛಾಯಾಗ್ರಾಹಕ ಫ್ರೆಡರಿಕ್ ವಾಲ್ಟರ್ ಚಾಂಪಿಯನ್ ಇದಕ್ಕೆ ಸ್ಪೂರ್ತಿ. ಬಂದೂಕಿ ನಿಂದ ಶೂಟ್ ಮಾಡುವ ಬದಲು ಕ್ಯಾಮೆರಾದಿಂದ ಶೂಟ್ ಮಾಡುವ ಹವ್ಯಾಸವು ಉತ್ತಮ ಎಂಬುದನ್ನು ಅಂದಿನ ದಿನಗಳಲ್ಲೇ ಜಿಮ್ ಕಾರ್ಬೆಟ್ ಪ್ರತಿಪಾದಿಸಿದ್ದುಂಟು. ಮೂವಿ ಕ್ಯಾಮೆರಾಗಳನ್ನು ಅರಣ್ಯದ ಕಿಬ್ಬದಿಯಲ್ಲಿ, ಮೂಲೆಗಳಲ್ಲಿ, ತೊರೆಗಳ ದಡದಲ್ಲಿ ಅಳವಡಿಸಿ, ವನ್ಯಜೀವಿಗಳ ಚಿತ್ರವನ್ನು ಚಿತ್ರಿಸಲು ಅವರು ಸಾಕಷ್ಟು ಪಡಿಪಾಟಲು ಪಟ್ಟಿದ್ದರು. ಅವರು ಆಫ್ರಿಕಾದ ಕೀನ್ಯಾ ಮೊದಲಾದ ಪ್ರದೇಶದಲ್ಲಿ ವ್ಯಾಪಕವಾಗಿ ಓಡಾಡಿದ್ದರು. ಆಗಾಗ ಅಲ್ಲಿ ಹೋಗಿ ತಂಗುತ್ತಿದ್ದರು, ಅಲ್ಲಿನ ವನ್ಯಜೀವಿಗಳನ್ನು ಗಮನಿಸುತ್ತಿದ್ದರು. ಆಫ್ರಿಕಾದಲ್ಲಿ ಸಾವಿರಾರು ಸಂಖ್ಯೆ ಯಲ್ಲಿದ್ದ ಪ್ರಾಣಿಗಳ ಹಿಂಡನ್ನು ಹೋಲಿಸಿದರೆ, ನಮ್ಮ ದೇಶದಲ್ಲಿರುವ ವನ್ಯಜೀವಿಗಳ ಸಂಖ್ಯೆ ತುಂಬಾ ಕಡಿಮೆ ಎಂಬುದನ್ನು ಗುರುತಿಸಿದ್ದರು.
1920ರ ದಶಕದಲ್ಲಿ ಅವರ ಸಹ ಸಂಪಾದಕತ್ವದಲ್ಲಿ ‘ಇಂಡಿಯನ್ ವೈಲ್ಡ್ ಲೈಫ್’ ಎಂಬ ಪತ್ರಿಕೆ ಹೊರಬರು ತ್ತಿದ್ದು, ಆಗಲೇ ಇಲ್ಲಿನ ಪರಿಸರ ಮತ್ತು ವನ್ಯಜೀವಿ ನಾಶದ ಕುರಿತು ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಅರಣ್ಯ ನಾಶವು ಅವ್ಯಾಹತವಾಗಿ ಮುಂದುವರಿದರೆ, ಕಾಡುಪ್ರಾಣಿಗಳ ಬೇಟೆಯನ್ನು ನಿಯಂತ್ರಿಸದಿದ್ದರೆ, ಇಲ್ಲಿನ ವನ್ಯಸಂಪತ್ತು ಕ್ರಮೇಣ ಕಣ್ಮರೆಯಾಗುತ್ತದೆ ಎಂಬುದನ್ನು ಅವರು ಗುರುತಿಸಿ, ಆ ಕುರಿತು ಬರೆಯುತ್ತಿದ್ದರು. ಬೇಟೆಗಾರನಾಗಿದ್ದರೂ, ಪರಿಸರ ಪ್ರೇಮಿಯಾಗಿದ್ದ ಮತ್ತು ನಮ್ಮ ದೇಶದ ಕಾಡುಗಳನ್ನು ರಕ್ಷಿಸಬೇಕು ಎಂದು ೨೦ನೇ ಶತಮಾನದಲ್ಲೇ ಹೇಳಿದ್ದ ಜಿಮ್ ಕಾರ್ಬೆಟ್‌ನ ಹೆಸರನ್ನು, ಉತ್ತರಾಖಂಡ ರಾಜ್ಯದಲ್ಲಿರುವ ರಾಷ್ಟ್ರೀಯ ಉದ್ಯಾನ ವನಕ್ಕೆ ಇಟ್ಟು, ಗೌರವಿಸಲಾಗಿದೆ.
ಇದನ್ನೂ ಓದಿ: Shashidhara Halady Column: ಸಮನ್ವಯದ ಕೊರತೆಯೇ ಇದಕ್ಕೆ ಕಾರಣವೇ ?