ಪದಸಾಗರ
ಟೆಕ್ಸಾಸ್‌ನ ನಾಲ್ಕು ಕಾಲಿನ ಹುಡುಗಿ ಎಂಬ ಜಾಹೀರಾತಿನ ಅಡಿಯಲ್ಲಿ ಮರ್ಟಲ್ ಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯಿತು. ನಗುನಗುತ್ತಾ ಜನರೆದುರು ಕೂತು ತನ್ನ ನಾಲ್ಕು ಕಾಲುಗಳ ದೇಹವನ್ನು ಪ್ರದರ್ಶಿಸುತ್ತಿದ್ದ ಮರ್ಟಲ್ ಕೆಲವೇ ದಿನಗಳಲ್ಲಿ ಸೆನ್ಸೇಶನ್ ಆದಳು. ನಾಲ್ಕು ಕಾಲುಗಳ ಹುಡುಗಿ ಎಂಬುದು ಆಕೆಯನ್ನು ನೋಡಲು ಬರುವತನಕ ವಿಶೇಷವಾಗಿರುತ್ತಿತ್ತು.
ಇತ್ತೀಚೆಗೆ ಹೀಗೇ ಫೇಸ್‌ಬುಕ್ ಸ್ಕ್ರೋಲ್ ಮಾಡ್ತಾ ಇದ್ದಾಗ, ‘ಇದೇನಿದು ಪ್ರಕೃತಿಯ ವೈಚಿತ್ರ್ಯ... ಈ ಹುಡುಗಿಗೆ ನಾಲ್ಕು ಕಾಲುಗಳು.. ಪೂರ್ತಿ ಕಥೆ ಓದಿದ್ರೆ ಶಾಕ್!’ ಹೀಗೇನೋ ಕ್ಯಾಪ್ಶನ್ ಕಂಡಿತು. ಜಗತ್ತಿನ ಎಷ್ಟೆಲ್ಲ ಗಿಮಿಕ್‌ಗಳನ್ನು ಕಂಡ ನಂತರವೂ, ಸೋಷಿಯಲ್ ಮೀಡಿಯಾದ ಅಗ್ಗದ ಥಂಬ್ ನೇಲ್‌ಗಳ ಅಸಲೀಯತ್ತು ಗೊತ್ತಾದ ಮೇಲೂ ಮನಸು ಇಂಥ ಕಥೆಗಳಿಗೆ ತಂತಾನೇ ಬಲಿಯಾಗಿಬಿಡುತ್ತದಲ್ಲ. ನಾನು ಯಾವುದೇ ಶಾಕ್‌ನ ನಿರೀಕ್ಷೆ ಇಲ್ಲದೆಯೂ ಅದನ್ನು ಓಪನ್ ಮಾಡಿದೆ.
ಮನಸು ಮಾತ್ರ ಬಾಲ್ಯದಲ್ಲಿ ಕಂಡಿದ್ದ ಊರಿನ ಜಾತ್ರೆಗಳತ್ತ ನಾಲ್ಕು ಕಾಲುಗಳಲ್ಲಿ ಅಂಬೆಗಾಲಿಟ್ಟು ಹಿಮ್ಮುಖ ಚಲಿಸತೊಡಗಿತ್ತು. ಜಾತ್ರೆಗಳಲ್ಲಿ ಹತ್ತು ಹಲವು ಆಟಗಳ ನಡುವೆ ಒಂದಷ್ಟು ಸ್ಟಾಲ್ ಗಳಿರುತ್ತಿದ್ದವು. ಎರಡು ತಲೆಯ ಬಾಲಕಿ, ಕೈಕಾಲೇ ಇಲ್ಲದ ವ್ಯಕ್ತಿ ತಾನೇ ಕಾಫಿ ಮಾಡುತ್ತಾನೆ, ಮಾತನಾಡುವ ಕೋತಿ, ಹಣೆಯ ಮೇಲೆ ಮೂರನೇ ಕಣ್ಣಿರುವ ಮಗು, ಹೀಗೆ ವಿಚಿತ್ರ ದೇಹ ಹೊಂದಿರುವ ಮನುಷ್ಯರು, ಪ್ರಾಣಿಗಳು ಜಾತ್ರೆಗಳಲ್ಲಿ ಪ್ರದರ್ಶನದ ಸರಕಾಗಿರುತ್ತಿದ್ದವು. ಅವರನ್ನು ನೋಡಲು ನೂಕುನುಗ್ಗಲು.
ಸೃಷ್ಟಿಯ ವೈಚಿತ್ರ್ಯದಿಂದ ಅಥವಾ ಯಾವುದೋ ವೈಜ್ಞಾನಿಕ ಎಡವಟ್ಟಿನಿಂದ ಆಗುವ ದೇಹದ ವೈಕಲ್ಯ ಪ್ರದರ್ಶನಕ್ಕೆ ಮಾರಾಟಕ್ಕೆ ವಸ್ತುವಾಗಿಬಿಡುತ್ತದಲ್ಲ ಅಂತ ಇಂದು ಅನಿಸುತ್ತಿದೆ. ಆದರೆ ನಮ್ಮ ಬಾಲ್ಯಕಾಲದ ಆ ಅಚ್ಚರಿ ನೋಡುವ ಸರತಿಯಲ್ಲಿ ನಾವೂ ಟಿಕೆಟ್ ಹೊಂದಿದವರೇ. ಆ ರೀತಿ ವಿಚಿತ್ರವಾಗಿ ಹುಟ್ಟಿದರೆ ಇದ್ದದ್ದು ಅದೊಂದೇ ಆಯ್ಕೆ. ಭಿಕ್ಷೆ ಬೇಡುವುದು ಅಥವಾ ಪ್ರದರ್ಶನಗಳಲ್ಲಿ ತಮ್ಮನ್ನು ತಾವು ವ್ಯಾಪಾರಕ್ಕಿಟ್ಟು ಕೊಳ್ಳುವುದು.
ಬಹುತೇಕ ಕೇಸ್‌ಗಳಲ್ಲಿ ಯಾವನೋ ಇಂಥ ಸೃಷ್ಟಿಗಳನ್ನು ಇಟ್ಟುಕೊಂಡು ತನ್ನ ಜೇಬಿಗೆ ಹಣ ಇಳಿಸಿಕೊಳ್ಳುತ್ತಿರುತ್ತಾನೆ. ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಬಳಸಿಕೊಳ್ಳುತ್ತಿರು ತ್ತಾನೆ. ಇಂಥ ವೈಕಲ್ಯಗಳೊಂದಿಗೆ ಹುಟ್ಟಿದ ಆ ಜೀವ ಯಾರನ್ನೋ ಉದ್ಧರಿಸಿ ಅಕಾಲ ಮೃತ್ಯುವಿಗೆ ಒಳಗಾಗಿ ಇಹಲೋಕದ ನಂಟು ಕಳೆದುಕೊಂಡು ಮುಕ್ತಿ ಹೊಂದುತ್ತದೆ.
ಇದನ್ನೂ ಓದಿ: Naveen Sagar Column: ಕೋವಿಡ್ʼನಿಂದ ಬದಲಾಗದ ನಾವು ಯುದ್ಧದಿಂದ ಬದಲಾದೇವೆ ?
ಬಾಲ್ಯದಿಂದ ಈತನಕ ಕಂಡ ಇಂಥ ವಿಚಿತ್ರ ಸೃಷ್ಟಿಗಳೆಲ್ಲವನ್ನು ನೆನಪಿಸಿಕೊಳುತ್ತಾ, ಇವರ ಬದುಕೆಲ್ಲ ಇಷ್ಟೇನಾ ಅಂತ ಯೋಚಿಸುತ್ತಾ, ಫೇಸ್ ಬುಕ್‌ನ ಈ ಪೋಸ್ಟ್ ಓಪನ್ ಮಾಡಿ ದಾಗ ಕಂಡದ್ದು ಒಂದು ಸೂರ್ತಿದಾಯಕ ಕಥೆ.
1868, ಮೇ 12. ಅಮೆರಿಕದ ಟೆನ್ನೆಸ್ಸೀ ರಾಜ್ಯದ ಲಿಂಕನ್ ಕೌಂಟಿಯಲ್ಲಿ ವಿಲಿಯಂ ಮತ್ತು ನ್ಯಾನ್ಸಿ ಎಂಬ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತು. ಸಹಜ ಹೆರಿಗೆಯಲ್ಲಿ ಹೊರ ಬಂದ ಹೆಣ್ಮಗುವನ್ನು ಕಂಡು ವೈದ್ಯರಿಗೆ ನರ್ಸ್‌ಗಳಿಗೆ ಆಘಾತ. ಆ ಮಗು ನಾಲ್ಕು ಕಾಲುಗಳೊಂದಿಗೆ ಹುಟ್ಟಿತ್ತು. ಆ ಮಗುವಿನ ಹೆಸರು ಜೋಸೆಫಿನ್ ಮರ್ಟಲ್ ಕಾರ್ಬಿನ್.
ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಡೈಪೈಗಸ್ ಅಂತಾರಂತೆ. ಭ್ರೂಣದ ಬೆಳವಣಿಗೆ ಹಂತದಲ್ಲಿ, ಸೊಂಟದ ಕೆಳಗಿನ ಭಾಗ ಎರಡಾಗಿ ಹೋಗಿ, ಬೆಳೆಯುವ ಅತ್ಯಂತ ಪರೂಪದ ಕೇಸ್ ಇದು. ಮರ್ಟಲ್‌ಗೆ ಸೊಂಟದ ಮೇಲ್ಭಾಗ ಸಂಪೂರ್ಣ ಸಹಜವಾಗಿತ್ತು. ಸೊಂಟದ ಕೆಳಗೆ ಎರಡು ಸೊಂಟ, ಅದರಿಂದ ನಾಲ್ಕು ಕಾಲುಗಳು! ಹೊರಗಿನ ಎರಡು ಕಾಲುಗಳು ಸಂಪೂರ್ಣ ಬೆಳೆದಿದ್ದವು. ಆದರೆ ಒಳಗಿನ ಎರಡು ಕಾಲುಗಳು ಚಿಕ್ಕದಾಗಿದ್ದವು.
ಪ್ರತಿ ಕಾಲಿಗೆ ಮೂರೇ ಬೆರಳುಗಳಿದ್ದವು. ಒಳಗಿನ ಕಾಲುಗಳನ್ನು ಸ್ವಲ್ಪ ಮಟ್ಟಿಗೆ ಅಲುಗಾಡಿಸಬಹುದಿತ್ತು. ಆದರೆ ಅವು ಪೋಲಿಯೋ ಪೀಡಿತವೋ ಎಂಬಂತಿದ್ದವು. ಮಗುವನ್ನು ನೋಡಿದ ವೈದ್ಯರು, ಈ ಮಗು ಬದುಕುವುದು ಕಷ್ಟ. ಇದರ ಬಗ್ಗೆ ಹೋಪ್ ಇಟ್ಕೋಬೇಡಿ ಅಂದುಬಿಟ್ಟರು. ಆದರೆ ಡಾಕ್ಟರ್‌ಗೆ ಅಚ್ಚರಿಯಾಗುವ ಹಾಗೆ ಮಗು, ಮೂರು ವಾರಗಳ ವೇಳೆಗೆ ಹತ್ತು ಪೌಂಡ್ ತೂಕ ತಲುಪಿಬಿಟ್ಟಿತು.
ಕಾಲಿನ ವೈಚಿತ್ರ್ಯವೊಂದನ್ನು ಬಿಟ್ಟರೆ ಅದೊಂದು ಆರೋಗ್ಯಕರ ಮಗು. ಕೆಲವು ವಿಚಾರಗಳಲ್ಲಿ ಪಾಶ್ಚಾತ್ಯ ಜಗತ್ತು ಕೂಡ ನಮ್ಮ ದೇಶಕ್ಕಿಂತ ಭಿನ್ನವಾಗಿರಲಿಲ್ಲ. ಇನ್ ಫ್ಯಾಕ್ಟ್ ನಮಗಿಂತ ಹೆಚ್ಚು ಮೂಢನಂಬಿಕೆಗಳನ್ನು ಹೊತ್ತು ಆಡಿಸುತ್ತಿತ್ತು. ಆ ಮಗುವನ್ನು ಕೆಲವರು ದೇವರ ಶಾಪದ ಫಲ ಅಂತಲೂ, ಕೆಲವರು ಅಪಶಕುನ ಅಂತಲೂ, ಸಮಾಜಕ್ಕೆ ಮಾರಕ ಅಂತಲೂ ದೂರವಿಡಿಸುವ ಪ್ರಯತ್ನ ಮಾಡಿದರು. ಸಾಯಿಸಿಬಿಡಿ ಎಂಬ ಸಲಹೆ ಗಳೂ ಬಂದವು.
ಆದರೆ ವಿಲಿಯಂ ಮತ್ತು ನ್ಯಾನ್ಸಿ ಯಾರ ಮಾತಿಗೂ ಕಿವಿಗೊಡುವುದಿಲ್ಲ. ವಿಲಿಯಂ-ನ್ಯಾನ್ಸಿಗೆ ಈ ಮಗು ಹುಟ್ಟುವ ಮುನ್ನ ಒಂದು ಮಗುವಿತ್ತು. ನ್ಯಾನ್ಸಿಯ ಮೊದಲ ಪತಿ ಯಿಂದ ಬಂದಿದ್ದ ಇನ್ನೊಂದು ಮಗುವೂ ಇತ್ತು. ಆದರೂ ಈ ಮಗುವನ್ನು ನಿರ್ಲಕ್ಷಿಸ ಲಿಲ್ಲ. ಅವರಿಬ್ಬರಿಗೆ ಕೊಟ್ಟ ಪ್ರೀತಿಗಿಂತ ಹೆಚ್ಚೇ ಪ್ರೀತಿ ಕೊಟ್ಟರು. ಜೋಸೆಫಿನ್ ಮರ್ಟಲ್ ಎಂಬ ಹೆಸರಿಟ್ಟು ತುಂಬ ಅಕ್ಕರೆಯಿಂದ ಸಾಕತೊಡಗಿದನು ವಿಲಿಯಂ.
ತಂದೆ ವಿಲಿಯಂ ಒಬ್ಬ ಸೈನಿಕ. ಅಮೆರಿಕದ ಅಂತರ್ಯುದ್ಧದಲ್ಲಿ ಗಾಯಗೊಂಡಿದ್ದ ಯೋಧ. ಅವನ ಕುಟುಂಬ ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿತ್ತು. ಆದರೂ ಮಗಳನ್ನು ಬೀದಿಗೆ ಬಿಡಲಿಲ್ಲ. ಆಕೆಯ ದೇಹದ ವಿಚಿತ್ರ ರಚನೆಯ ಕಾರಣಕ್ಕೆ, ಪದೇಪದೆ ಆರೋಗ್ಯ ಕೈಕೊಡುತ್ತಿತ್ತು. ಆದರೆ ದೇವರು ಆಕೆಯೊಳಗೊಂದು ಭಯಂಕರ ಆತ್ಮವಿಶ್ವಾಸ ಮತ್ತು ಚೈತನ್ಯ ತುಂಬಿ ಕಳಿಸಿದ್ದ. ತಂದೆಗೇ ಧೈರ್ಯ ತುಂಬುವ ಮಾತುಗಳನ್ನಾಡಿ ನಾನು ನಿನಗೆ ಹೊರೆಯಾಗುವುದಿಲ್ಲ ಡೋಂಟ್ ವರಿ ಅನ್ನುತ್ತಿದ್ದಳು.
ಮರ್ಟಲ್‌ಗೆ ಹದಿಮೂರು ವರ್ಷವಿದ್ದಾಗ, ವಿಲಿಯಂ ಬಹಳ ಅನಿವಾರ್ಯವೆನಿಸಿ, ಮಗಳನ್ನು ಪ್ರದರ್ಶನಕ್ಕಿಡುವ ನಿರ್ಧಾರಕ್ಕೆ ಬಂದು ಬಿಡುತ್ತಾನೆ. ಜೋಸೆಫಿನ್ ಮರ್ಟಲ್ ಅದನ್ನು ವಿರೋಧಿಸುವುದಿಲ್ಲ. ಒಪ್ಪವಾಗಿ ತಯಾರಾಗಿ ಬಿಡುತ್ತಾಳೆ. ಅಂದಿನ ಅಮೆರಿಕ ದಲ್ಲಿ ಫ್ರೀಕ್ ಶೋ ಎಂಬುದು ಬಹಳ ಪ್ರಖ್ಯಾತ ಎಕ್ಸಿಬಿಷನ್.
ದೈಹಿಕ ವೈಚಿತ್ರ್ಯಗಳಿರುವ ವ್ಯಕ್ತಿಗಳನ್ನು ಪ್ರದರ್ಶಿಸಲೆಂದೇ ಆ ಎಕ್ಸಿಬಿಷನ್ ನಡೆಯುತ್ತಿತ್ತು. ಟೆಕ್ಸಾಸ್‌ನ ನಾಲ್ಕು ಕಾಲಿನ ಹುಡುಗಿ ಎಂಬ ಜಾಹೀರಾತಿನ ಅಡಿಯಲ್ಲಿ ಮರ್ಟಲ್‌ಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯಿತು. ನಗುನಗುತ್ತಾ ಜನರೆದುರು ಕೂತು ತನ್ನ ನಾಲ್ಕು ಕಾಲುಗಳ ದೇಹವನ್ನು ಪ್ರದರ್ಶಿಸುತ್ತಿದ್ದ ಮರ್ಟಲ್ ಕೆಲವೇ ದಿನಗಳಲ್ಲಿ ಸೆನ್ಸೇಶನ್ ಆದಳು. ನಾಲ್ಕು ಕಾಲುಗಳ ಹುಡುಗಿ ಎಂಬುದು ಆಕೆಯನ್ನು ನೋಡಲು ಬರುವತನಕ ವಿಶೇಷ ವಾಗಿರುತ್ತಿತ್ತು. ಆದರೆ ಜನರು ಆಕೆಯನ್ನು ನೋಡಿದ ಕ್ಷಣದಿಂದ ಆಕೆಯ ವ್ಯಕ್ತಿತ್ವದ ಬಗ್ಗೆ ಮಾತನಾಡಲಾರಂಭಿಸಿದರು.
ಅವಳ ಖ್ಯಾತಿ ದಿನೇದಿನೆ ಹೆಚ್ಚಲಾರಂಭಿಸಿತು. ಪಿ.ಟಿ.ಬಾರ್ನಮ್ ಎಂಬ ಅಮೆರಿಕದ ಪ್ರಖ್ಯಾತ ಸರ್ಕಸ್ ಉದ್ಯಮಿ ಈಕೆಯನ್ನು ತನ್ನ ಸರ್ಕಸ್ ಪ್ರದರ್ಶನಗಳಲ್ಲಿ ತೋರಿಸಿ ಹಣ ಮಾಡತೊಡಗಿದ. ನ್ಯೂಯಾರ್ಕ್‌ನ ಹ್ಯೂಬರ್ ಮ್ಯೂಸಿಯಂ, ರಿಂಗ್ಲಿಂಗ್ ಬ್ರದರ್ಸ್ ಸರ್ಕಸ್, ಕೋನಿ ಐಲ್ಯಾಂಡ್ ಸೇರಿದಂತೆ ಹಲವೆಡೆ ಮರ್ಟಲ್ ವಿಶೇಷ ಆಕರ್ಷಣೆಯಾಗಿ ಕಾಣಿಸಿಕೊಳ್ಳತೊಡಗಿದಳು.
ಇಂದಿನ ಮೌಲ್ಯದಲ್ಲಿ ವಾರಕ್ಕೆ ಸುಮಾರು 14000 ಡಾಲರ್ ದುಡಿಯತೊಡಗಿದಳು ಮರ್ಟಲ್. ಆಕೆಯನ್ನು ವಿಚಿತ್ರ ದೇಹವೆಂದು ನೋಡುವ ಬದಲು ಅಪರೂಪದ ಕಲಾವಿದೆ ಎಂಬಂತೆ ಅಮೆರಿಕ ನೋಡತೊಡಗಿತು. ಮರ್ಟಲ್ ಯಾವ ಪರಿ ಜನಪ್ರಿಯಳಾದಳು ಅಂದ್ರೆ, ಒಂದಷ್ಟು ಸರ್ಕಸ್ ಉದ್ಯಮಿಗಳು ಮರ್ಟಲ್‌ನ ನಕಲುಗಳನ್ನು ಸೃಷ್ಟಿಸತೊಡಗಿದರು.
ಎರಡು ಕಾಲಿನ ಹುಡುಗಿಯರಿಗೆ ಕೃತಕವಾಗಿ ಇನ್ನೆರಡು ಕಾಲು ಅಂಟಿಸಿ, ಜನರನ್ನು ಯಾಮಾರಿಸಿ ಸೆಳೆಯಲು ಪ್ರಯತ್ನಿಸಿದರು. ಆರುಕಾಲಿನ ಹುಡುಗಿ, ನಾಲ್ಕು ಕೈ ನಾಲ್ಕು ಕಾಲುಗಳ ಹುಡುಗಿ ಅಂತೆಲ್ಲ ಕೃತಕವಾಗಿ ರೆಡಿ ಮಾಡಿ ಮರ್ಟಲ್ ಜತೆಗೆ ಸ್ಪರ್ಧೆಗೂ ಬಿದ್ದರು. ಆದರೆ ಜನರು ಮರ್ಟಲ್‌ಳ ಸಹಜ ವೈಚಿತ್ರ್ಯ ಮತ್ತು ವ್ಯಕ್ತಿತ್ವದ ಮುಂದೆ ಮಿಕ್ಕೆಲ್ಲ ನಕಲುಗಳನ್ನು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟರು.
ತಂದೆಯ ಕಷ್ಟಕ್ಕೆ ನೆರವಾಗಲು, ಕುಟುಂಬಕ್ಕೆ ಭಾರವಾಗದಿರಲು ತನ್ನನ್ನು ತಾನು ಪ್ರದರ್ಶನಕ್ಕಿಟ್ಟುಕೊಂಡಿದ್ದ ಮರ್ಟಲ್ ಆಂತರ್ಯದಲ್ಲಿ ಇದನ್ನು ಎಂಜಾಯ್ ಮಾಡು ತ್ತಿರಲಿಲ್ಲ. ಭಾವುಕ ಹುಡುಗಿಯಾಗಿದ್ದ ಆಕೆಗೆ ವಯೋಸಹಜವಾಗಿ ಪ್ರೀತಿ ಪ್ರೇಮ ಸಾಂಗತ್ಯ ಇವೆಲ್ಲವೂ ಬೇಕನಿಸುತ್ತಿತ್ತು.
ಸ್ವತಂತ್ರವಾಗಿ ಬದುಕುವ ಕನಸುಗಳು ಹುಟ್ಟಿಕೊಂಡಿದ್ದವು. 1886, ಜೂನ್ 12ರಂದು ಮರ್ಟಲ್ ತನ್ನ 18ನೇ ವಯಸ್ಸಿನಲ್ಲಿ ಜೇಮ್ಸ್ ಕ್ಲಿಂಟನ್ ಬಿಕ್ನೆಲ್ ಎಂಬ ಯುವಕನನ್ನು ಪ್ರೀತಿಸಿ ವಿವಾಹವಾದಳು. ಕ್ಲಿಂಟನ್ ವೃತ್ತಿಯಿಂದ ವೈದ್ಯ. ಮರ್ಟಲ್‌ಳ ದೇಹ ಆತನಲ್ಲಿ ಯಾವುದೇ ಅಸಹ್ಯ ಹುಟ್ಟಿಸಲಿಲ್ಲ.
ಆಕೆಯ ಮನಸಿಗೆ, ವ್ಯಕ್ತಿತ್ವಕ್ಕೆ ಸೋತಿದ್ದ ಕ್ಲಿಂಟನ್‌ಗೆ, ನಾಲ್ಕು ಕಾಲುಗಳ ದೇಹವೊಂದು ವಿಶೇಷ ಸಂಗತಿಯೇ ಅನಿಸಲಿಲ್ಲ. ಮರ್ಟಲ್‌ಳನ್ನು ಈ ಪಬ್ಲಿಕ್ ಎಕ್ಸಿ ಬಿಷನ್, ಸರ್ಕಸ್ ಎಲ್ಲದರಿಂದ ಹೊರತರುತ್ತಾನೆ ಪತಿ ಜೇಮ್ಸ್ ಕ್ಲಿಂಟನ್. ಟೆಕ್ಸಾಸ್‌ನ ಜಾನ್ಸನ್ ಕೌಂಟಿಗೆ ತೆರಳಿ ಇಬ್ಬರೂ ಕೃಷಿ ಜಗತ್ತಿಗೆ ತೆರೆದುಕೊಳ್ಳುತ್ತಾರೆ.
ಮನೆ ಕಟ್ಟುತ್ತಾರೆ. ದಂಪತಿಗೆ ಐದು ಮಕ್ಕಳಾಗುತ್ತಾರೆ. ಯಾವ ಮಗುವೂ ತನ್ನಂತಾಗುವುದು ಬೇಡ ಎಂಬುದೊಂದೇ ಆಕೆಯ ಪ್ರಾರ್ಥನೆಯಾಗಿತ್ತು. ದೇವರು ತಥಾಸ್ತು ಅಂತಲೂ ಅಂದಿದ್ದನು. ದೈಹಿಕವಾಗಿ ಎಲ್ಲವೂ ಸರಿ ಇರುವವರಿಗಿಂತಲೂ ಅದ್ಭುತ ಕೌಟುಂಬಿಕ ಜೀವನ ನಡೆಸಿ ತೋರಿಸುತ್ತಾಳೆ ಮರ್ಟಲ್.
ಮರ್ಟಲ್ ಎಕ್ಸಿಬಿಷನ್ ಮತ್ತು ಸರ್ಕಸ್ ಪ್ರದರ್ಶನಗಳಿಂದ ದೂರ ಉಳಿದು ದಶಕಗಳೇ ಉರುಳಿದರೂ, ಆಕೆಯನ್ನು ಅಮೆರಿಕದ ಜನತೆ ಮರೆಯುವುದೇ ಇಲ್ಲ. ಯಾವುದೇ ಪ್ರದರ್ಶನ ನಡೆದರೂ ಮರ್ಟಲ್‌ಳನ್ನು ನೆನಪಿಸಿಕೊಳ್ಳುವುದು, ಆಕೆಯೊಂದಿಗೆ ಇತರರನ್ನು ಹೋಲಿಸುವುದು, ಮಾಧ್ಯಮಗಳಲ್ಲಿ ಆಕೆಯನ್ನು ನೆನಪಿಸಿಕೊಳ್ಳುವುದು ನಡೆದೇ ಇತ್ತು.
1909ರಲ್ಲಿ, ಅಂದರೆ ಮದುವೆಯಾಗಿ ಎರಡು ದಶಕಗಳ ನಂತರ, ಮರ್ಟಲ್ ಆರ್ಥಿಕ ಮುಗ್ಗಟ್ಟಿಗೆ ಒಳಗಾದಾಗ, ಮತ್ತೆ ತನ್ನನ್ನು ತಾನು ಪ್ರದರ್ಶನಕ್ಕಿಟ್ಟುಕೊಳ್ಳಲು ನಿರ್ಧರಿಸಿ ದಳು. ನ್ಯೂಯಾರ್ಕ್‌ನ ಹ್ಯೂಬರ್ ಮ್ಯೂಸಿಯಂನಲ್ಲಿ ಆಕೆ ಕಾಣಿಸಿಕೊಂಡ ಕ್ಷಣ ಅಮೆರಿಕ ದಲ್ಲಿ ಭಾರಿ ಸಂಚಲನವಾಯಿತು. ಅದೇ ರೀತಿ ರಿಂಗ್ಲಿಂಗ್ ಬ್ರದರ್ಸ್ ಸರ್ಕಸ್ ಮತ್ತು ಕೋನಿ ಐಲ್ಯಾಂಡ್‌ನಲ್ಲಿ ಅವಳ ಪ್ರದರ್ಶನಗಳಿಗೆ ಜನ ಮುಗಿ ಬಿದ್ದರು. ಈ ಬಾರಿ ಆಕೆ ಹಳೆಯ ಮರ್ಟಲ್ ಆಗಿರಲಿಲ್ಲ.
ನಾಲ್ಕು ಕಾಲಿನ ಹುಡುಗಿ, ಮದುವೆ ಆಗಿರುವುದು, ಐದು ಮಕ್ಕಳ ತಾಯಿಯಾಗಿರುವುದು, ಸ್ವಾವಲಂಬಿಯಾಗಿ ಮನೆ ಕಟ್ಟಿ, ಕೃಷಿ ಜೀವನ ನಡೆಸಿರುವುದು ಎಲ್ಲವೂ ಆಕೆಯನ್ನು ಇನ್ನಷ್ಟು ವಿಶೇಷವಾಗಿಸಿದ್ದವು. ಮತ್ತೆ ಹಣ ಹರಿದುಬರತೊಡಗಿತು. ಮರ್ಟಲ್ ಒಂದು ದಿನವೂ ಯಾರಿಗೂ ಹೊರೆಯಾಗದಂತೆ, ಕೇವಲ ಅನುಕಂಪಕ್ಕೆ ಒಳಗಾಗದಂತೆ ಬದುಕಿ, ಸಾರ್ಥಕ್ಯ ಕಂಡಿದ್ದಳು.
59 ವರ್ಷದ ಹೊಸ್ತಿಲಲ್ಲಿ, ಆಕೆಯ ಕಾಲೊಂದು ಚರ್ಮದ ಸೋಂಕಿಗೆ ಒಳಗಾಯಿತು. ಅಂದಿನ ವೈದ್ಯಲೋಕದಲ್ಲಿ ಅದಕ್ಕೆ ಔಷಧಿಯೇ ಸಿಗಲಿಲ್ಲ. ಸೋಂಕು ಹೆಚ್ಚಾಗಿ, ಇಡೀ ದೇಹದಲ್ಲಿ ಹರಡಿ ಆಕೆ ಕೊನೆಯುಸಿರು ಎಳೆದಳು.
ಜಗತ್ತು ಹೇಗಿದೆ ನೋಡಿ. ಆಕೆ ಸಾಯುತ್ತಿದ್ದ ಹಾಗೇ ವೈದ್ಯರು, ಸಂಶೋಧಕರು ಆಕೆಯ ದೇಹಕ್ಕಾಗಿ ರಣಹದ್ದುಗಳಂತೆ ಎರಗಿದರು. ದೊಡ್ಡ ಮೊತ್ತ ಕೊಡಲು ಸಿದ್ಧ, ಈ ದೇಹ ತಮಗೆ ಬೇಕು ಎಂದು ಡಿಮ್ಯಾಂಡಿಗೆ ನಿಂತರು. ಇವರು ಶವವನ್ನೂ ಬಿಡುವುದಿಲ್ಲ ಎಂದು ಖಾತರಿಯಾಯ್ತು ಕುಟುಂಬಕ್ಕೆ. ಮರ್ಟಲ್‌ಳನ್ನು ಹೂಳಿ ಸಮಾಧಿಯ ಮೇಲೆ ಗಾರೆ ಮಾಡ ಲಾಯ್ತು. ಅದು ಗಟ್ಟಿಯಾಗುವ ತನಕ ಕುಟುಂಬ ಕಾವಲು ನಿಂತಿತು. ಟೆಕ್ಸಾಸ್‌ನ ಕ್ಲೆಬರ್ನ್ ಮೆಮೋರಿಯಲ್ ಸ್ಮಶಾನದಲ್ಲಿ ಅವಳ ಕಾಂಕ್ರೀಟ್ ಸಮಾಧಿ ಇಂದೂ ಇದೆಯಂತೆ.
ಎಲ್ಲ ಸರಿಯಾಗಿರುವ ನಾವು ಬದುಕಲು ನೂರು ದೂರು ಹೇಳುತ್ತೇವೆ. ಆದರೆ ಇಂಥ ವೈಕಲ್ಯದ ನಡುವೆ ಆಕೆ ಜವಾಬ್ದಾರಿಯುತ ಮಗಳಾಗಿ, ಪ್ರೀತಿಸೋ ತಾಯಿಯಾಗಿ, ಒಳ್ಳೆಯ ಪತ್ನಿಯಾಗಿ, ಒಬ್ಬ ಧೈರ್ಯಶಾಲಿ ಮಹಿಳೆಯಾಗಿ ಬರೋಬ್ಬರಿ ಅರವತ್ತು ವರ್ಷ ಜೀವಿಸಿ ಹೋದಳಲ್ಲ. ವಾಹ್ ಅನ್ನದೇ ಇರಲಾದೀತೇ?