Naveen Sagar Column: ಕೋವಿಡ್ʼನಿಂದ ಬದಲಾಗದ ನಾವು ಯುದ್ಧದಿಂದ ಬದಲಾದೇವೆ ?
ದೇಶದ ಆರ್ಥಿಕತೆ ಎಂಬುದು ನಾವು ದುಡಿಯುವ ಹಣದ ಮೇಲೆ ಮಾತ್ರವೇ ಅಲ್ಲ, ನಾವು ಮಾಡುವ ಖರ್ಚಿನ ಮೇಲೆಯೂ ಅವಲಂಬಿಸಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಬೆಲೆ ಏರಿಕೆಯನ್ನು ಖಂಡಿಸುತ್ತಲೇ ನಮ್ಮ ದುಂದುವೆಚ್ಚವನ್ನೂ ಹೆಚ್ಚಿಸುತ್ತಿದ್ದೇವೆ. ನಾವು ಬದಲಾಗುವುದಿಲ್ಲ. ಆದರೆ ದೇಶ ಬದಲಾಗಬೇಕು.
-
ಪದಸಾಗರ
ಪೆಟ್ರೋಲ್ ರೇಟ್ ಎಷ್ಟಾದರೇನಂತೆ, ನಾವಂತೂ ಹಂಡ್ರೆಡ್ಡೇ ಹಾಕಿಸೋವ್ರು ಅಂತ ಮೊದಲೆಲ್ಲ ಬಹಳ ಹಗುರವಾಗಿ ತೆಗೆದುಕೊಳ್ಳುತ್ತಿದ್ದೆವು. ಪೆಟ್ರೋಲ್ ಡೀಸೆಲ್ ಬೆಲೆ ಮಧ್ಯರಾತ್ರಿಯಿಂದಲೇ ಒಂದು ರುಪಾಯಿ ಏರಿಕೆ ಎಂಬ ಸುದ್ದಿ ಬಂದ ಕೂಡಲೇ ಪೆಟ್ರೋಲ್ ಬಂಕ್ ಮುಂದೆ ಕ್ಯೂ ನಿಲ್ಲುತ್ತಿದ್ದ ಗಾಡಿಗಳನ್ನು ನೋಡಿ ವಿಚಿತ್ರ ಅನಿಸುತ್ತಿತ್ತು. ಇವರೆಲ್ಲರೂ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿ ದರೂ ಉಳಿಸೋದು ಅಬ್ಬಬ್ಬಾ ಅಂದರೆ ಮೂವತ್ತೋ ನಲವತ್ತೋ ರುಪಾಯಿ.
ಕಾರುಗಳಾದರೆ ನೂರು ನೂರೈವತ್ತು ರುಪಾಯಿ. ಇದು ನಿಜಕ್ಕೂ ಸನ್ನಿಯಲ್ಲವಾ ಅಥವಾ ಮೂರ್ಖತನವಲ್ಲವಾ ಅಂದುಕೊಳ್ಳುತ್ತಿದ್ದೆ. ಕೆಲವರಂತೂ ಅದೇ ನೂರು ರುಪಾಯಿ ಪೆಟ್ರೋಲ್ ಹಾಕಿಸೋದಕ್ಕೂ ಕ್ಯೂ ನಿಂತು ಬಿಡುತ್ತಿದ್ದರು. ಒಂದು ಎರಡು ರುಪಾಯಿ ಉಳಿಸಿಯಿಸೋದಾದ್ರೂ ಏನು ಅಂತೆಲ್ಲ ಅನಿಸುತ್ತಿತ್ತು. ಆದರೆ ಒಂದೊಂದು ರುಪಾಯಿ ಉಳಿತಾಯವೂ ಎಷ್ಟು ಮುಖ್ಯ ಎಂಬುದನ್ನು ಕಾಲ ಅರ್ಥ ಮಾಡಿಸುತ್ತದೆ.
ಹಣದ ಬೆಲೆ ಏನು ಎಂಬುದನ್ನು ಜೀವನದ ಏರುಪೇರುಗಳು ತಿಳಿಸಿ ಕೊಡುತ್ತವೆ. ಇಪ್ಪತ್ತೊಂದನೆಯ ಶತಮಾನದ ಆದಿಯಲ್ಲಿ ಮೊದಲ ಬೈಕ್ ಖರೀದಿಸಿದ್ದೆ. ನೂರು ರುಪಾಯಿಯಲ್ಲಿ ಮೂರೂ ಮುಕ್ಕಾಲು ಲೀಟರ್ ಪೆಟ್ರೋಲ್ ಹಾಕಿಸಬಹುದಿತ್ತು. ಅಷ್ಟು ಪೆಟ್ರೋಲಿನಲ್ಲಿ ಸುಮಾರು ಇನ್ನೂರು ಕಿಲೋಮೀಟರ್ ಓಡಾಡಬಹುದಿತ್ತು. ಆದರೆ ಅಂದಿಗೆ ನೂರು ರುಪಾಯಿಯೇ ಅತಿ ದೊಡ್ಡ ದುಡ್ಡು. ರಿಸರ್ವ್‌ಗಿಂತ ಕೊಂಚ ಮೇಲಿದ್ದರೆ ಸಾಕು ಎಂಬಂತೆ ಐವತ್ತು ರುಪಾಯಿಗೆ ಪೆಟ್ರೋಲ್ ಹಾಕಿಸಿ ಹಣ ಉಳಿಸುತ್ತಿದ್ದೆವು. ಪೆಟ್ರೋಲ್ ಉಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೆವು.
ಆದರೆ ಜೀವನ ಶೈಲಿ ಬದಲಾಗುತ್ತಾ ಹೋದಂತೆ ಮಿತವ್ಯಯ ಎಂಬುದು ಅರ್ಥ ಕಳೆದುಕೊಂಡಿತು. ದುಡಿಯೋದೇ ಖರ್ಚು ಮಾಡೋಕೆ ಎಂಬ ಮನಸ್ಥಿತಿ ರೂಪುಗೊಂಡಿತು. ನಮ್ಮ ದುಡ್ಡು ನಮ್ಮಿಷ್ಟ ಎಂಬ ಉಡಾಫೆ ಮೈಗೂಡಿತು. ಇಂದು ಪ್ರಧಾನಿ ಮೋದಿಯೇ ಹೇಳಿದರೂ ನಾವು ಕಡಿಮೆ ಖರ್ಚು ಮಾಡಲು ಸಿದ್ಧರಿಲ್ಲ. ನಮಗೆ ಹೇಳಲು ನೀವ್ಯಾರು ಎಂದು ಪ್ರಶ್ನಿಸುತ್ತಿದ್ದೇವೆ.
ಇದನ್ನೂ ಓದಿ: Naveen Sagar Column: ಕುತ್ತೇ...ವಿಜಯ್ ನಹೀ...ಜೋಸೆಫ್ ವಿಜಯ್ ಬೋಲೋ !
ದೇಶದ ಆರ್ಥಿಕತೆ ಎಂಬುದು ನಾವು ದುಡಿಯುವ ಹಣದ ಮೇಲೆ ಮಾತ್ರವೇ ಅಲ್ಲ, ನಾವು ಮಾಡುವ ಖರ್ಚಿನ ಮೇಲೆಯೂ ಅವಲಂಬಿಸಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಬೆಲೆ ಏರಿಕೆಯನ್ನು ಖಂಡಿಸುತ್ತಲೇ ನಮ್ಮ ದುಂದುವೆಚ್ಚವನ್ನೂ ಹೆಚ್ಚಿಸುತ್ತಿದ್ದೇವೆ. ನಾವು ಬದಲಾಗುವುದಿಲ್ಲ. ಆದರೆ ದೇಶ ಬದಲಾಗಬೇಕು.
ನಾವು ಯಾವ ರೀತಿಯಲ್ಲೂ ದೇಶದ ಉದ್ಧಾರಕ್ಕಾಗಿ ಕೈಜೋಡಿಸುವುದಿಲ್ಲ. ಆದರೆ ದೇಶ ಉದ್ಧಾರ ವಾಗಬೇಕು. ಇದು ನಮ್ಮ ಧೋರಣೆಯಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಶ್ರೀಲಂಕಾಗೆ ಹೋಗಿದ್ದೆ. ಜಗತ್ತು ಆ ಸಮಯಕ್ಕಾಗಲೇ ಮಧ್ಯಪ್ರಾಚ್ಯ ಯುದ್ಧದ ಪರಿಣಾಮವನ್ನು ಕಾಣಲಾರಂಭಿಸಿತ್ತು. ನಾವು ಶ್ರೀಲಂಕಾವನ್ನು ಸುತ್ತಲು ಬಾಡಿಗೆ ಕಾರ್ ಬಳಸಲು ನಿರ್ಧರಿಸಿದ್ದೆವು. ಆಗ ಅಲ್ಲಿನ ಪೆಟ್ರೋಲ್ ದರ ಮತ್ತು ನಿರ್ಬಂಧಗಳ ಬಗ್ಗೆ ತಿಳಿದು ಅಚ್ಚರಿಯಾಯಿತು.
ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಶುರುವಾಗಿ ತೈಲಬಿಕ್ಕಟ್ಟು ಶುರುವಾಗುತ್ತಿದ್ದಂತೆಯೇ ಶ್ರೀಲಂಕಾ ಪೆಟ್ರೋಲ್ ಮಿತವ್ಯಯಕ್ಕೆ ಮುಂದಾಗಿಬಿಟ್ಟಿತು. ಸರಿ-ಬೆಸ (ಈವನ್-ಆಡ್) ನಿಯಮ ಜಾರಿಗೆ ತರಲಾಗಿತ್ತು. ಅಂದರೆ ವಾಹನಗಳ ನೋಂದಣಿ ಸಂಖ್ಯೆ ಈವನ್ ಇದ್ದವರು ಮಾತ್ರ ಪೆಟ್ರೋಲ್ ಕೊಳ್ಳಲು ಒಂದು ದಿನ, ಆಡ್ ಇದ್ದವರು ಕೊಳ್ಳಲು ಒಂದು ದಿನ ಎಂದು ನಿಗದಿಪಡಿಸಲಾಗಿತ್ತು. ಅದರ ಜತೆಗೆ ಕ್ಯೂ ಆರ್ ಕೋಡ್ ಸಿಸ್ಟಮ್ ಜಾರಿಗೆ ತರಲಾಗಿ, ಪ್ರತಿ ಕ್ಯೂ ಆರ್ ಕೋಡ್‌ಗೆ ವಾರಕ್ಕೆ ಇಪ್ಪತ್ತು ಲೀಟರ್ ಪೆಟ್ರೋಲ್ ಮಾತ್ರ ಎಂಬ ನಿರ್ಬಂಧ ಹಾಕಲಾಯಿತು.
ಶ್ರೀಲಂಕಾದ ಯಾವ ನಾಗರಿಕರಿಗೂ ಅದಕ್ಕಿಂತ ಹೆಚ್ಚಿನ ಪೆಟ್ರೋಲ್ ಕೊಡುವುದಿಲ್ಲ. ಕಾಳಸಂತೆ ಯಲ್ಲಿ ಮಾರಲು ಸ್ಟೋರೇಜ್ ಕೂಡ ಮಾಡುವಂತಿಲ್ಲ. ಅದಕ್ಕೆ ಅವಕಾಶವೇ ಇಲ್ಲ. ಎಮರ್ಜೆನ್ಸಿ ಸರ್ವಿಸ್‌ಗಳ ಹೊರತಾಗಿ ಬೇರೆ ಯಾರಿಗೂ ಈ ರಿಯಾಯಿತಿ ಇಲ್ಲವೇ ಇಲ್ಲ. ಪ್ರವಾಸೋದ್ಯಮ ಶ್ರೀಲಂಕಾದ ಪ್ರಮುಖ ಆರ್ಥಿಕತೆಯ ಮಾರ್ಗವಾಗಿರುವುದರಿಂದ ಪ್ರವಾಸಿಗರಿಗೆ ಈ ನಿಯಮಾವಳಿ ಅನ್ವಯವಾಗುವುದಿಲ್ಲ. ಇದರಿಂದಾಗಿ ಪೆಟ್ರೋಲ್ ಬಳಕೆಗೆ ಕಡಿವಾಣ ಬಿದ್ದಂತಾಯಿತು. ಇದರ ಹೊರತಾಗಿ ಶ್ರೀಲಂಕಾ ಸರಕಾರ ಯಾವುದೇ ಹಿಂಜರಿಕೆ ಇಲ್ಲದೆ ಪೆಟ್ರೋಲ್ ಬೆಲೆಯನ್ನು ಏರಿಸಿ ಬಿಟ್ಟಿತು.
ಮಾರ್ಚ್ ಹೊತ್ತಿಗೆ ಲೀಟರ್‌ಗೆ 293 ರುಪಾಯಿ ಇದ್ದ ಪೆಟ್ರೋಲ್ ದರ, ಮಾರ್ಚ್ 10ಕ್ಕೆ 317ಕ್ಕೇರಿತು. ಮತ್ತೆ ಹದಿನೈದು ದಿನದಲ್ಲಿ 398ಕ್ಕೆ ಏರಿತು. ಪ್ರಸ್ತುತ ಶ್ರೀಲಂಕಾದಲ್ಲಿ ಪೆಟ್ರೋಲ್ ದರ 417 ಶ್ರೀಲಂಕನ್ ರುಪೀ ಆಗಿದೆ. ಎರಡು ತಿಂಗಳಲ್ಲಿ ಏರಿದ್ದು ಸುಮಾರು 117 ಶ್ರೀಲಂಕನ್ ರುಪೀ. ಭಾರತದ ರುಪಾಯಿ ಲೆಕ್ಕದಲ್ಲಿ ನೋಡಿದರೆ ಸುಮಾರು 35 ರುಪಾಯಿಗಳಷ್ಟು ಏರಿಕೆ.
ಆದರೆ ಶ್ರೀಲಂಕಾದ ಪ್ರಜೆಗಳು ಇದಕ್ಕೆ ಪ್ರತಿಕ್ರಿಯಿಸುತ್ತಿರುವ ರೀತಿ ನಿಜಕ್ಕೂ ಅನುಕರಣೀಯ. ಪೆಟ್ರೋಲ್ ಬಳಕೆಯ ಕಡಿವಾಣಕ್ಕೆ ವಿರೋಧವಿಲ್ಲ. ಬೆಲೆ ಏರಿಕೆಯ ವಿರುದ್ಧ ಧರಣಿ ಪ್ರತಿಭಟನೆ ಗಳಿಲ್ಲ. ಯುದ್ಧದಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಈ ಸಮಯದಲ್ಲಿ ಸರಕಾರದ ನಿರ್ಧಾರಗಳನ್ನು ಗೌರವಿಸಬೇಕು.
ಒಪ್ಪಿಕೊಳ್ಳಬೇಕು ಎಂದು ಅಲ್ಲಿನ ನಾಗರಿಕರು ಹೇಳುತ್ತಿದ್ದರೆ, ನಮ್ಮ ದೇಶದ ನಾಗರಿಕರೊಂದಿಗೆ ಹೋಲಿಸಿ ನೋಡಿಕೊಂಡು ನಾಚಿಕೆಯಾಗುತ್ತದೆ. ಶ್ರೀಲಂಕಾ ಆರ್ಥಿಕ ದಿವಾಳಿ ಕಂಡಂಥ ರಾಷ್ಟ್ರ, ಯಾವ ರೀತಿಯಲ್ಲೂ ಭಾರತದೊಂದಿಗೆ ಸ್ಪರ್ಧೆಗಿಳಿಯುವ ಅರ್ಹತೆ ಇಲ್ಲದಂಥ ದೇಶ. ಆದರೆ ಅವರ ನಾಗರಿಕ ಪ್ರe ನಿಜಕ್ಕೂ ಮಾದರಿ ಅನಿಸಿಬಿಟ್ಟಿತು. ಅಲ್ಲಿನ ವಿರೋಧಪಕ್ಷವೂ ಸೇರಿದಂತೆ, ಸೈದ್ಧಾಂತಿಕ-ರಾಜಕೀಯ ವಿರೋಧಿಗಳೂ ಸರಕಾರದ ನಿರ್ಧಾರಗಳನ್ನು ಗೌರವಿಸಿ ಪಾಲಿಸುತ್ತಿದ್ದುದು ನಿಜಕ್ಕೂ ಅನುಕರಣೀಯ.
ಆದರೆ ಭಾರತ ಪೆಟ್ರೋಲ್ ಬೆಲೆ ಏರಿಕೆಯನ್ನು ನೋಡುತ್ತಿರುವುದು ಹೇಗೆ? ಪಂಚರಾಜ್ಯ ಚುನಾವಣೆ ಆಗೋದನ್ನೇ ಮೋದಿ ಕಾಯುತ್ತಿದ್ದರು. ಚುನಾವಣೆ ಗೆಲ್ತಾ ಇದ್ದ ಹಾಗೇ ಪೆಟ್ರೋಲ್ ಬೆಲೆ ಏರಿಸಿ ಬಿಟ್ಟರು ಅಂತ. ಈ ಸಮಯದಲ್ಲಿ ನಾವು ಒಮ್ಮೆ ಜಗತ್ತಿನಾದ್ಯಂತ ಹೇಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ ಎಂಬುದನ್ನು ಗಮನಿಸಬೇಕು.
ನೆನಪಿರಲಿ...ಭಾರತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ನಮ್ಮ ಕೈಗಾರಿಕೆಗಳು, ಸಾರಿಗೆ ಮತ್ತು ಇಡೀ ಆರ್ಥಿಕ ಚಕ್ರ ತಿರುಗೋದಕ್ಕೆ ಇಂಧನ ಅತಿ ಮುಖ್ಯ. ನಮ್ಮಲ್ಲಿ ಎಲ್ಲವೂ ಇದೆ. ಆದರೆ ಕಚ್ಚಾ ತೈಲಕ್ಕೆ ಮಾತ್ರ ನಾವು ಜಾಗತಿಕ ಮಾರುಕಟ್ಟೆಯನ್ನೇ ಅವಲಂಬಿಸಿದ್ದೇವೆ. ಅದರಲ್ಲೂ ದೊಡ್ಡ ಪಾಲು ಮಧ್ಯಪ್ರಾಚ್ಯದಿಂದಲೇ ಬರುತ್ತದೆ.
ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಹೆಚ್ಚು ಆಮದು ಮಾಡಿಕೊಳ್ತಾ ಇದ್ದರೂ, ಮಧ್ಯಪ್ರಾಚ್ಯದ ಜಿಯೋ-ಪೊಲಿಟಿಕ್ಸ್ ಜಾಗತಿಕ ತೈಲ ದರವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸೋದು ವಾಸ್ತವ. ಯುದ್ಧಕ್ಕೆ ಮುನ್ನ ಪ್ರತಿ ಬ್ಯಾರೆಲ್‌ಗೆ 75 ಡಾಲರ್ ಇದ್ದ ಕಚ್ಚಾತೈಲದ ಬೆಲೆ ದಿಢೀರನೆ 95 ಡಾಲರ್ ದಾಟಿ ಹೋದಾಗ ಭಾರತೀಯ ತೈಲ ಮಾರ್ಕೆಟಿಂಗ್ ಕಂಪನಿಗಳು ಅದೇ ಬೆಲೆಗೆ ಖರೀದಿಸ ಬೇಕಾಗುತ್ತದೆ.
ಇದರ ಜತೆಗೆ ಸಾಗಣೆ ವೆಚ್ಚ, ಇನ್ಶೂರೆ ಕೂಡ ಹೆಚ್ಚಾಗಿರೋದನ್ನು ಗಮನಿಸಬೇಕು. ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಸರಕುಗಳು ಸುತ್ತಿಕೊಂಡು ಬರುವ ಅನಿವಾರ್ಯತೆ. ಹದಿನೈದು ದಿನಗಳಲ್ಲಿ ತಲುಪುತ್ತಿದ್ದ ತೈಲ ಈಗ ದುಪ್ಪಟ್ಟು ಸಮಯ ತೆಗೆದುಕೊಳ್ಳುವಂತಾಗಿದೆ. ರಿಸ್ಕ್ ಫ್ಯಾಕ್ಟರ್ ಹೆಚ್ಚಾಗಿರುವುದರಿಂದ ಇನ್ಶೂರೆ ಪ್ರೀಮಿಯಂ ಕೂಡ ದುಬಾರಿಯಾಗಿದೆ.
ಇತ್ತ ಡಾಲರ್ ಎದುರು ರುಪಾಯಿಯ ಬೆಲೆ ಕೂಡ ಕುಸಿತ ಕಂಡಿದೆ. ಜಾಗತಿಕ ಅಸ್ಥಿರತೆ ಯುಂಟಾದಾಗ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಅಮೆರಿಕನ್ ಡಾಲರ್ ಕಡೆಗೆ ಮುಖ ಮಾಡುವುದರಿಂದ ರುಪಾಯಿ ಮೌಲ್ಯ ಕುಸಿಯುವುದು ಸಹಜವೇ. ಭಾರತವು ತೈಲ ಖರೀದಿಯನ್ನು ಡಾಲರ್‌ನ ಮಾಡಬೇಕಿರುವುದರಿಂದ, ರುಪಾಯಿ ದುರ್ಬಲಗೊಂಡಾಗ ನಾವು ಅದೇ ಪ್ರಮಾಣದ ತೈಲಕ್ಕೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
ಬ್ಯಾರೆಲ್‌ಗೆ ಎಪ್ಪತ್ತೈದು ಡಾಲರ್ ಇದ್ದದ್ದು 130 ಡಾಲರ್‌ಗೆ ಏರಿದರೂ ನಾವು ಅದೇ ಬೆಲೆಗೆ ಪೆಟ್ರೋಲ್ ಕೊಡಬೇಕು ಅಂದರೆ ಹೇಗೆ ಸಾಧ್ಯ? ಜಾಗತಿಕವಾಗಿ ಬೆಲೆ ಏರಿದರೆ ಸರ್ಕಾರವೇ ಸಬ್ಸಿಡಿ ನೀಡಿ ಬೆಲೆ ಕಡಿಮೆ ಇಡಬಹುದಲ್ಲವೇ? ಎಂಬುದು ಸಾಮಾನ್ಯರ ತರ್ಕ. ಆದರೆ, ಆರ್ಥಿಕ ತಜ್ಞರ ದೃಷ್ಟಿಕೋನದಲ್ಲಿ ಇದು ದೇಶದ ಆರ್ಥಿಕತೆಯ ಆತ್ಮಹತ್ಯೆಗೆ ಸಮಾನ.
ಸರ್ಕಾರ ತೈಲದ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಿ, ತೆರಿಗೆ ಕಡಿಮೆ ಮಾಡಿ ಎರಡೂವರೆ ತಿಂಗಳು ಭಾರ ಹೊತ್ತುಕೊಂಡಿತು. ಆದರೆ, ಅದನ್ನು ದೀರ್ಘ ಕಾಲ ಮುಂದುವರಿಸುವುದು ಸಾಧ್ಯವಾ? ಹಾಗೆ ಮಾಡಿದರೆ ಅದು ಬಜೆಟ್ ಮೇಲೆ ಏಟು ಕೊಡುತ್ತದೆ. ಇಂಧನಕ್ಕೆ ಕೊಟ್ಟ ಕೋಟ್ಯಂತರ ರುಪಾಯಿ ಸಬ್ಸಿಡಿ ಸರಿದೂಗಿಸೋಕೆ ದೇಶದ ಮೂಲಸೌಕರ್ಯ ಅಭಿವೃದ್ಧಿ (ರಸ್ತೆಗಳು, ರೈಲ್ವೆ, ಹೆzರಿಗಳು), ಶಿಕ್ಷಣ, ಆರೋಗ್ಯ ಮತ್ತು ರಕ್ಷಣಾ ವಲಯ ಇವೆಲ್ಲವನ್ನು ಬಲಿಕೊಡಬೇಕಾಗುತ್ತೆ.
ಭಾರತದ ತೈಲ ಮಾರಾಟ ಕಂಪನಿಗಳು ಸಾರ್ವಜನಿಕ ವಲಯದ ಸಂಸ್ಥೆಗಳಾಗಿವೆ. ಜಾಗತಿಕವಾಗಿ ಬೆಲೆ ಏರಿದಾಗಲೂ ದೇಶೀಯವಾಗಿ ಬೆಲೆ ಹೆಚ್ಚಿಸದಿದ್ದರೆ, ಈ ಕಂಪನಿಗಳು ಬಿಲಿಯನ್‌ಗಟ್ಟಲೆ ನಷ್ಟ ಅನುಭವಿಸುತ್ತವೆ. ಈ ಕಂಪನಿಗಳು ನಷ್ಟದಲ್ಲಿದ್ದರೆ, ಹೊಸ ತೈಲ ಪರಿಶೋಧನೆ, ಸಂಸ್ಕರಣಾಗಾರಗಳ ಆಧುನೀಕರಣ ಮತ್ತು ಭವಿಷ್ಯದ ಇಂಧನ ಭದ್ರತೆಗೆ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
2008-2012ರ ಅವಧಿಯಲ್ಲಿ ತೈಲ ಬಾಂಡ್‌ಗಳ ಮೂಲಕ ಸಬ್ಸಿಡಿ ನೀಡಿದ ಪರಿಣಾಮವನ್ನು ದೇಶ ಇಂದಿಗೂ ಅನುಭವಿಸುತ್ತಿದೆ. ಒಂದು ಸಲ ಜಗತ್ತಿನಲ್ಲಿ ಮಾರ್ಚ್‌ನಿಂದ ಈಚೆಗೆ ಆಗಿರುವ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಕಡೆ ಕಣ್ಣಾಯಿಸಿ ನೋಡಿ. ಮಲೇಷಿಯಾದಲ್ಲಿ ಪೆಟ್ರೋಲ್ 50%, ಡೀಸೆಲ್ 70% ಏರಿಕೆಯಾಗಿದೆ.
ಪಾಕಿಸ್ತಾನದಲ್ಲಿ 50%, ಅಮೆರಿಕದಲ್ಲಿ ಪೆಟ್ರೋಲ್ 45%, ಡೀಸೆಲ್ 48%, ದಕ್ಷಿಣ ಆಫ್ರಿಕಾದಲ್ಲಿ 30%, ಕೆನಡಾದಲ್ಲಿ 30%, ಬ್ರಿಟನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಸುಮಾರು 19%, ಜರ್ಮನಿ ಮತ್ತು ಜಪಾನ್ ಗಳಲ್ಲಿ 10ರಿಂದ 15% ಏರಿಕೆ ದಾಖಲಾಗಿದೆ.
ಬಹಳ ಅಚ್ಚರಿ ಅಂದರೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಡೀಸೆಲ್ ಬೆಲೆ 85% ವರೆಗೆ ಏರಿಕೆಯಾಗಿದೆ. ಹೀಗಿದ್ದೂ ಭಾರತ ಸರಕಾರ ಮೂರು ತಿಂಗಳುಗಳ ಕಾಲ ಬೆಲೆ ಏರಿಸದೆಯೇ, ಎಲ್ಲ ಭಾರವನ್ನು ತನ್ನ ಮೇಲೆ ಹಾಕಿಕೊಂಡು ನಿಭಾಯಿಸಿತು. ಇನ್ನು ಸಾಧ್ಯವೇ ಇಲ್ಲವೆಂದಾಗ ತಾತ್ಕಾಲಿಕ ಏರಿಕೆ ಎಂಬಂತೆ ಕೇವಲ 2.5%ನಷ್ಟು ಏರಿಕೆ ಮಾಡಿತು. ಇತರ ರಾಷ್ಟ್ರಗಳಂತೆ, ಪೆಟ್ರೋಲ್ ಬಳಕೆಯ ಮೇಲೆ ನಿರ್ಬಂಧ ಹೇರಿಲ್ಲ, ಮಿತಿ ಹಾಕಿಲ್ಲ. ಮಿತವ್ಯಯ ಮಾಡಿ,ಸಾರ್ವಜನಿಕ ಸಾರಿಗೆ ಬಳಸಿ, ಇವಿ ವಾಹನಗಳತ್ತ ಒಲವು ತೋರಿ ಎಂಬ ಮನವಿ ಅಥವಾ ಹಿತನುಡಿಗಳನ್ನು ಕೊಡಮಾಡಿತಷ್ಟೆ. ಆದರೆ ನಾವು ಪ್ರತಿಕ್ರಿಯಿಸುತ್ತಿರುವುದು ಮಾತ್ರ ರಾಜಕೀಯದ ಕಣ್ಣಿಂದ.
ಕೋವಿಡ್ ಎಂಬ ಜಾಗತಿಕ ಸಂಕಷ್ಟವೇ ಭಾರತೀಯರ ರಾಜಕೀಯ ಮನಸ್ಥಿತಿಯನ್ನು ಬದಲಿಸ ಲಿಲ್ಲ. ಇನ್ನು ಪರದೇಶದಲ್ಲಿ ನಡೆಯುತ್ತಿರುವ ಯುದ್ಧ ಬದಲಾಯಿಸೀತೇ? ಭ್ರಮೆಯಷ್ಟೆ. ನಾವು ಸರಕಾರ ಹೇಳಿದೆ ಎಂಬ ಕಾರಣಕ್ಕೆ ಮಾತು ಕೇಳಬೇಕಿಲ್ಲ. ಕನಿಷ್ಠ ಸ್ವಂತ ವಿವೇಚನೆ ಇದ್ದರೂ ನಾವು ಮಿತವ್ಯಯಕ್ಕೆ ಮುಂದಾಗಿ, ಹೊಸ ಆವಿಷ್ಕಾರಗಳಿಗೆ ಬೆಲೆ ಕೊಡುವ ಮೂಲಕ ಸರಕಾರದ ಭಾವನೆಗಳಿಗೆ ಸ್ಪಂದಿಸುತ್ತಿದ್ದೆವು.
ಪೆಟ್ರೋಲ್ ಡೀಸೆಲ್ ಏರಿಕೆಯನ್ನು ವಿರೋಧಿಸುತ್ತಾ ನಾವು ಎಂದಿನಂತೆ ದುಂದುವೆಚ್ಚ ಮಾಡುತ್ತೇವೆ ಎಂಬುದು ನಮ್ಮ ಮನಸ್ಥಿತಿಯಾದರೆ, ಮುಂದಿನ ಭೀಕರ ಆರ್ಥಿಕ ಪರಿಣಾಮಗಳಿಗೆ ನಾವು ಹೊಣೆಯಾಗಬೇಕಾಗುತ್ತದೆ. ಪೆಟ್ರೋಲ್ ಡೀಸೆಲ್‌ಗಳ ಬೆಲೆ ಏರಿಕೆ ನೇರವಾಗಿ ದಿನನಿತ್ಯದ ಎಲ್ಲ ವಸ್ತುಗಳು, ಜೀವನಶೈಲಿಗಳು ದುಬಾರಿಯಾಗಲು ಕಾರಣವಾಗುತ್ತದೆ. ಅರ್ಥ ಮಾಡಿಕೊಳ್ಳ ದಿದ್ದರೆ ಅನುಭವಿಸಬೇಕಾಗುತ್ತದೆ.