ನೂರೆಂಟು ವಿಶ್ವ
ಪ್ರಧಾನಿ ನರೇಂದ್ರ ಮೋದಿ ನಾರ್ವೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪತ್ರಕರ್ತೆಯೊಬ್ಬಳು ಕೇಳಿದ ಪ್ರಶ್ನೆಗೆ, ಪ್ರಧಾನಿಯವರು ಉತ್ತರಿಸದೇ ಅವಳನ್ನು ನಿರ್ಲಕ್ಷಿಸಿದ ಘಟನೆ ಬಹಳ ಸುದ್ದಿ ಮಾಡುತ್ತಿದೆ. ಈ ನೆಪದಲ್ಲಿ, ಪ್ರಧಾನಿಯಾದಂದಿನಿಂದ ಅಂದರೆ ಕಳೆದ ಹದಿಮೂರು ವರ್ಷಗಳ ಅವಧಿಯಲ್ಲಿ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡದೇ ಇರುವುದು ಸಹ ಮುನ್ನಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾರ್ವೆಯ ಅತಿ ಹೆಚ್ಚು ಪ್ರಸರಣದ ಪತ್ರಿಕೆಯೊಂದು ಮೋದಿಯವರನ್ನು ‘ಅತಿ ಹಿಂದುಳಿದ ವ್ಯಕ್ತಿ’ ಎನ್ನುವ ರೀತಿಯಲ್ಲಿ ಪುಂಗಿ ಊದುವ ‘ಹಾವಾಡಿಗ’ ಎಂಬ ರೀತಿಯಲ್ಲಿ ವ್ಯಂಗ್ಯಚಿತ್ರ ಬಿಡಿಸಿರುವುದು ಭಾರತದಲ್ಲಿ ತೀವ್ರ ಆಕ್ರೋಶ ಮತ್ತು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಪ್ರಧಾನಿಯಾದವರ ವಿರೋಧಿಗಳು ಮತ್ತು ಕಡು ಟೀಕಾಕಾರರು, ಇದನ್ನೇ ದೊಡ್ಡ ರಂಪ ಮಾಡು ತ್ತಿದ್ದಾರೆ. ‘ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದ ಹೇಡಿ ಪ್ರಧಾನಿ’, ‘ಭಾರತದ ಮಾನ ಹರಾಜು ಹಾಕಿದ ಪ್ರಧಾನಿ’ ಎಂಬ ಟೀಕೆಗಳೆಲ್ಲ ಕೇಳಿ ಬರುತ್ತಿವೆ. ಮೋದಿಯವರು ಪತ್ರಕರ್ತರ ಜತೆ ಅಂತರ ಕಾಪಾಡಿಕೊಂಡಿರುವುದು ಹೊಸ ವಿಷಯವೇನೂ ಅಲ್ಲ.
ಹಾಗೆ ನೋಡಿದರೆ, ಅವರು ಪ್ರಧಾನಿಯಾಗುವ ಮುನ್ನ ಅಂದರೆ ಗುಜರಾತ್ ಮುಖ್ಯ ಮಂತ್ರಿ ಯಾಗಿರುವಾಗಲೇ ಆ ಅಂತರವನ್ನು ಕಾಪಾಡಿಕೊಂಡಿದ್ದರು. ಪ್ರಧಾನಿಯಾದ ಬಳಿಕ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ನರಸಿಂಹರಾವ್, ಡಾ.ಮನಮೋಹನ ಸಿಂಗ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಪತ್ರಕರ್ತರ ಜತೆ ಬೆರೆಯುತ್ತಿದ್ದರು. ಆದರೆ ಈ ವಿಷಯದಲ್ಲಿ ಮೋದಿಯವರು ಸಂಪೂರ್ಣ ಭಿನ್ನ. ಅವರು ಪತ್ರಕರ್ತರಿಂದ ಗಾವುದ ದೂರ.
ಪತ್ರಿಕಾಗೋಷ್ಠಿಯನ್ನಂತೂ ಅವರು ಕರೆದಿದ್ದೇ ಇಲ್ಲ. ಹಾಗಂತ ಅವರು ಮಾಧ್ಯಮಗಳಿಂದ ದೂರ ವಾಗಿದ್ದಾರೆ ಎಂದು ಭಾವಿಸಬೇಕಿಲ್ಲ. ಇಲ್ಲಿಯವರೆಗಿನ ಎಲ್ಲ ಪ್ರಧಾನಿಗಗಳಿಗಿಂತ ಭಿನ್ನವಾದ ಮಾದರಿಯನ್ನು ಅವರು ಅನುಸರಿಸುತ್ತಿದ್ದಾರೆ. ಹೀಗಾಗಿ ಮೋದಿಯವರ ನಡೆ ವಿವಾದಾತ್ಮಕವಾಗಿ ಕಾಣುತ್ತಿದೆ. ಅಷ್ಟಕ್ಕೂ ಪ್ರಧಾನಿಯಾದವರು ಪತ್ರಿಕಾಗೋಷ್ಠಿಯನ್ನು ಕರೆಯಲೇಬೇಕಾ? ಕರೆಯ ದಿದ್ದರೆ ಅದು ಅಪರಾಧವಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಗೋಷ್ಠಿ ಎಂಬುದು ಒಂದು ‘ಸಾಂಪ್ರದಾಯಿಕ ಶಿಷ್ಟಾಚಾರ’ವೇ (Convention) ಹೊರತು ಅದು ಸಂವಿಧಾನಬದ್ಧವಾದ ‘ಕಾನೂನುಬದ್ಧ ನಿಯಮ’ವಲ್ಲ.
ಇದನ್ನೂ ಓದಿ: Vishweshwar Bhat Column: ಎಲ್ಲ ದೇಶಗಳಲ್ಲೂ ಅಲ್ಪಸಂಖ್ಯಾತರೇಕೆ ಉಳಿದವರ ಮೇಲೆ ಸವಾರಿ ಮಾಡುತ್ತಾರೆ ?
ಪ್ರಧಾನಿಯಾದವರು ಇಂತಿಷ್ಟು ಬಾರಿ ಪತ್ರಿಕಾಗೋಷ್ಠಿ ನಡೆಸಬೇಕು ಅಥವಾ ಇಂಥದ್ದೇ ಮಾಧ್ಯಮದ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ಪ್ರಧಾನಿಯಾದವರು ಜನರಿಗೆ ಉತ್ತರದಾಯಿಯಾಗಿರಬೇಕು (Accountable) ಎನ್ನುವುದು ಸಂವಿಧಾನದ ಆಶಯ. ಆದರೆ ಆ ಉತ್ತರದಾಯಿತ್ವವನ್ನು ಕೇವಲ ಪತ್ರಿಕಾಗೋಷ್ಠಿಯ ಮೂಲಕವೇ ಸಾಬೀತುಪಡಿಸಬೇಕಿಲ್ಲ.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯವರು ಮೊದಲು ಉತ್ತರಿಸಬೇಕಾದುದು ಸಂಸತ್ತಿಗೆ. ಸಂಸತ್ತಿನ ಅಧಿವೇಶನದಲ್ಲಿ ಪಾಲ್ಗೊಳ್ಳುವುದು, ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಸರಕಾರದ ನೀತಿಗಳನ್ನು ಸದನದ ಮುಂದೆ ಮಂಡಿಸುವುದು ಕಾನೂನುಬದ್ಧ ಜವಾಬ್ದಾರಿ. ಪತ್ರಿಕಾಗೋಷ್ಠಿ ಎಂಬುದು ಸಂಸತ್ತಿನ ಹೊರಗಿನ ಒಂದು ವೇದಿಕೆಯಷ್ಟೆ.
ಸಂಸತ್ತಿನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ನಾಯಕನು ಪತ್ರಿಕಾಗೋಷ್ಠಿ ನಡೆಸದಿದ್ದರೂ ತಾಂತ್ರಿಕ ವಾಗಿ ತನ್ನ ಜವಾಬ್ದಾರಿಯನ್ನು ಪೂರೈಸಿದಂತೆಯೇ ಸರಿ. ಹಿಂದೆ ಪತ್ರಿಕೆಗಳು ಮತ್ತು ರೇಡಿಯೋ ಬಿಟ್ಟರೆ ಬೇರೆ ಸಂವಹನ ಮಾಧ್ಯಮಗಳಿರಲಿಲ್ಲ. ಆಗ ಪ್ರಧಾನಿಯಾದವರು ಪತ್ರಕರ್ತ ರನ್ನು ಕರೆದು (ಪತ್ರಿಕಾಗೋಷ್ಠಿ) ಮಾತನಾಡಿಸುವುದು ಅನಿವಾಯವಾಗಿತ್ತು.
ಆದರೆ ಇಂದು ಪ್ರಧಾನಿಯವರ ಪ್ರತಿಯೊಂದು ಭಾಷಣವೂ ನೇರ ಪ್ರಸಾರವಾಗುತ್ತದೆ. ಪ್ರತಿ ನಿರ್ಧಾರವೂ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ, ಮೊಬೈಲ್ ಮೂಲಕ ಜನರಿಗೆ ತಲುಪುತ್ತದೆ.
ಹೀಗಿರುವಾಗ, ಪತ್ರಕರ್ತರ ಪ್ರಶ್ನೆಗಳ ‘ಫಿಲ್ಟರ್’ ಮೂಲಕವೇ ಸಂವಹನ ನಡೆಸಬೇಕು ಎಂಬುದು ಹಳೆಯ ಕಾಲದ ಸಂಪ್ರದಾಯವಾಗಿದೆಯೇ ಹೊರತು ಅನಿವಾರ್ಯತೆಯಲ್ಲ. ಪ್ರತಿಯೊಬ್ಬ ನಾಯಕ ನಿಗೂ ತನ್ನದೇ ಆದ ಕಾರ್ಯ ಶೈಲಿ ಇರುತ್ತದೆ. ಕೆಲವರು ಮಾಧ್ಯಮಗಳ ಮುಂದೆ ಹರಟಲು ಇಷ್ಟಪಡುತ್ತಾರೆ, ಇನ್ನು ಕೆಲವರು ತಮ್ಮದೇ ರೀತಿಯಲ್ಲಿ ಮಾತನಾಡಲು ಬಯಸುತ್ತಾರೆ. ಮೋದಿ ಯವರ ಶೈಲಿಯು ‘ನೇರ ಸಂವಾದ’ (Direct Engagement) ಮಾದರಿಯದ್ದು. ಅವರು ಪತ್ರಕರ್ತರ ಸಂಕೀರ್ಣ ಪ್ರಶ್ನೆಗಳಿಗಿಂತ ಜನರ ನೇರ ಅಭಿಪ್ರಾಯಗಳಿಗೆ (ಉದಾಹರಣೆಗೆ, ಟ್ವಿಟರ್, ಫೇಸ್ಬುಕ್, ಇನ್ಸ್ಟಾ, ಮನ್ ಕಿ ಬಾತ್ ಮೂಲಕ) ಹೆಚ್ಚು ಆದ್ಯತೆ ನೀಡುತ್ತಾರೆ. ಇದನ್ನು ಅವರ ವೈಯಕ್ತಿಕ ಶೈಲಿ ಎಂದು ಪರಿಗಣಿಸಬೇಕೇ ಹೊರತು ನಿಯಮದ ಉಲ್ಲಂಘನೆ ಎನ್ನಲಾಗದು.
ಈ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಫಾಲೋವರ್ಗಳ ಪಟ್ಟಿಯಲ್ಲಿ ಮೋದಿಯವರು ಜಾಗತಿಕ ನಾಯಕರ ಪೈಕಿ ಅಗ್ರಗಣ್ಯರಾಗಿದ್ದಾರೆ. ಪ್ರಧಾನಿ ಅಥವಾ ಸರಕಾರ, ಮಾಹಿತಿ ಹಕ್ಕು ಕಾಯ್ದೆ, ಸಂಸತ್ತಿನ ಚರ್ಚೆಗಳು ಮತ್ತು ಡಿಜಿಟಲ್ ಪ್ಲಾಟ್ʼಫಾರ್ಮ್ಗಳ ಮೂಲಕ ಮಾಹಿತಿ ನೀಡುತ್ತಿರುವಾಗ, ಪತ್ರಿಕಾಗೋಷ್ಠಿ ನಡೆಸದಿರುವುದು ಕೇವಲ ಒಂದು ಸಂಪ್ರದಾಯದ ಬದಲಾವಣೆ ಅಷ್ಟೆ.
ಒಬ್ಬ ನಾಯಕ ತನ್ನ ಆಡಳಿತದ ಬಗ್ಗೆ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದ್ದರೆ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರೆ, ಅವರು ಯಾವ ಮಾಧ್ಯಮದ ಮೂಲಕ ಮಾತನಾಡುತ್ತಾರೆ ಎಂಬುದು ಗೌಣವಾಗುತ್ತದೆ. ಸಂವಹನ ತಂತ್ರeನ ಮತ್ತು ಸಾಮಾಜಿಕ ಮಾಧ್ಯಮಗಳ ಕ್ರಾಂತಿಯ ನಂತರ, ಒಬ್ಬ ನಾಯಕನ ಯಶಸ್ಸನ್ನು ಅಳೆಯುವ ಮಾನದಂಡಗಳು ಸಂಪೂರ್ಣವಾಗಿ ಬದಲಾಗಿವೆ.
ಹೀಗಿರುವಾಗ ಪ್ರಧಾನಿಯವರು ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ ಎಂಬ ವಾದವು ಈ ಆಧುನಿಕ ಕಾಲ ಘಟ್ಟದಲ್ಲಿ ಅಪ್ರಸ್ತುತ. ನಾಯಕನೊಬ್ಬ ಪತ್ರಿಕಾಗೋಷ್ಠಿಯಲ್ಲಿ ಕುಳಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದು ಸಂವಹನದ ಒಂದು ಸಾಂಪ್ರದಾಯಿಕ ವಿಧಾನ. ಆದರೆ, ಆತ ಆ ಗೋಷ್ಠಿಯ ಮೂಲಕ ಎಷ್ಟು ಜನರನ್ನು ತಲುಪುತ್ತಾನೆ ಎಂಬುದು ಪ್ರಶ್ನೆ. ಮೋದಿಯವರಂಥ ನಾಯಕರು ಪತ್ರಿಕಾಗೋಷ್ಠಿಗಿಂತ ಹೆಚ್ಚಾಗಿ ‘ಮನ್ ಕಿ ಬಾತ್’, ಸಾಮಾಜಿಕ ಜಾಲತಾಣಗಳು ಮತ್ತು ನೇರ ಸಾರ್ವಜನಿಕ ಸಭೆಗಳ ಮೂಲಕ ಜನರನ್ನು ತಲುಪುತ್ತಾರೆ.
ಇಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಿಗಿಂತ, ನಾಯಕನು ಜನರಿಗೆ ನೀಡುವ ಸಂದೇಶ ಮತ್ತು ಅದು ಅವರ ಮೇಲೆ ಬೀರುವ ಪ್ರಭಾವ ಮುಖ್ಯವಾಗುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ತಮ್ಮದೇ ಆದ ರಾಜಕೀಯ ಸಿದ್ಧಾಂತ ಅಥವಾ ಆಲೋಚನೆಗೆ ತಕ್ಕಂತೆ ಸುದ್ದಿಯನ್ನು ತಿರುಚುವ ಸಾಧ್ಯತೆ ಇರುತ್ತದೆ. ಆದರೆ ನೇರ ಸಂವಹನದಲ್ಲಿ ನಾಯಕನ ಮಾತುಗಳು ನೇರವಾಗಿ ಜನರಿಗೆ ತಲುಪುವು ದರಿಂದ ಗೊಂದಲಗಳಿಗೆ ಅವಕಾಶವಿರುವುದಿಲ್ಲ.
ಹೀಗಾಗಿ ಮೋದಿಯವರು ಪತ್ರಿಕಾಗೋಷ್ಠಿಯನ್ನು ಅನುಸರಿಸುತ್ತಿಲ್ಲ. ಪತ್ರಿಕಾಗೋಷ್ಠಿಗಳು ವಿಷಯಾ ಧಾರಿತ ಚರ್ಚೆಗಳಿಗಿಂತ ಹೆಚ್ಚಾಗಿ ‘ಗದ್ದಲ’ ಅಥವಾ ‘ವಿವಾದ’ಗಳ ಕೇಂದ್ರವಾಗುತ್ತಿವೆ, ಅನೇಕ ಬಾರಿ ಪತ್ರಕರ್ತರು ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಬದಲು ವೈಯಕ್ತಿಕ ಟೀಕೆ ಅಥವಾ ಹೆಡ್‌ಲೈನ್ ಮಾಡುವ ಉದ್ದೇಶದ ಪ್ರಶ್ನೆಗಳನ್ನೇ ಕೇಳುತ್ತಾರೆ, ಇಂಥ ವಾತಾವರಣದಲ್ಲಿ ರಚನಾತ್ಮಕ ಸಂವಹನ ಸಾಧ್ಯವಾಗುವುದಿಲ್ಲ ಎಂಬುದು ಮೋದಿಯವರ ನಿಲುವಾಗಿರಬಹುದು.
ಪತ್ರಿಕಾಗೋಷ್ಠಿಯು ಪ್ರಜಾಪ್ರಭುತ್ವದ ಉತ್ತರದಾಯಿತ್ವದ (Accountability) ಒಂದು ಭಾಗವಾಗಿರ ಬಹುದು. ಆದರೆ, ಅದುವೇ ಏಕೈಕ ಮಾನದಂಡವಲ್ಲ ಎಂಬುದನ್ನು ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿಯಾಗಿರುವ ಈ ದಿನಗಳಲ್ಲಿ ಒಪ್ಪಲೇಬೇಕಾದ ಮಾತು. ಈ ಅಂಶಗಳ ಮೇಲೆ ಆತನ ಸಂವಹನ ಶಕ್ತಿಯನ್ನು ಅಳೆಯಬೇಕೇ ಹೊರತು, ಕೇವಲ ಪತ್ರಕರ್ತರ ಮುಂದೆ ಕುಳಿತು ಮಾತನಾಡುವುದರಿಂದಲ್ಲ.
ಅಂದು ಮಾಧ್ಯಮಗಳು ಜನರ ಮತ್ತು ಸರಕಾರದ ನಡುವೆ ‘ಗೇಟ್ ಕೀಪರ್’ಗಳಂತೆ ಇದ್ದವು. ಪ್ರಧಾನಿ ಹೇಳಿದ್ದನ್ನು ಪತ್ರಕರ್ತರು ತಮ್ಮದೇ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸಿ ಜನರಿಗೆ ತಲುಪಿಸುತ್ತಿದ್ದರು. ಮೋದಿಯವರು ಈ ಮಧ್ಯವರ್ತಿಗಳ ವ್ಯವಸ್ಥೆಯನ್ನು ಪಕ್ಕಕ್ಕಿಟ್ಟು ‘Direct- to- Consumer’ ಮಾದರಿ ಯನ್ನು ಅಳವಡಿಸಿಕೊಂಡರು.
ಸೋಶಿಯಲ್ ಮೀಡಿಯಾ, ನಮೋ ಆಪ್ ಮತ್ತು ‘ಮನ್ ಕಿ ಬಾತ್’ ಮೂಲಕ ಅವರು ನೇರವಾಗಿ ಜನರನ್ನು ತಲುಪುತ್ತಿದ್ದಾರೆ. ಇಲ್ಲಿ ಪತ್ರಕರ್ತರ ‘ಫಿಲ್ಟರ್’ ಇರುವುದಿಲ್ಲ. ನಾಯಕ ತಾನು ಹೇಳ ಬೇಕೆಂದಿರುವುದನ್ನು ನೇರವಾಗಿ ಜನರಿಗೆ ತಲುಪಿಸಿದಾಗ ಅದರಲ್ಲಿ ತಪ್ಪು ಅರ್ಥಗಳಿಗೆ ಅವಕಾಶ ಕಡಿಮೆ ಇರುತ್ತದೆ. ಹೀಗಾಗಿ ಅವರು ಐವತ್ತು-ನೂರು ಪತ್ರಕರ್ತರಿರುವ ಪತ್ರಿಕಾಗೋಷ್ಠಿಗಿಂತ ’ಜನಕೇಂದ್ರಿತ ಸಂವಹನ’ಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಕರೆಯದ ನಾಯಕರ ಪೈಕಿ ಮೋದಿಯವರೇ ಮೊದಲಿಗರಾ? ಹಾಗೇನೂ ಇಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ದಿನದಲ್ಲಿ ಮೂರು-ನಾಲ್ಕು ಸಲ ಪತ್ರಕರ್ತರ ಜತೆ ಮಾತಾಡುತ್ತಿದ್ದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಐದು ವರ್ಷಗಳ ಅವಧಿಯಲ್ಲಿ ಒಮ್ಮೆ ಕೂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡುತ್ತಿರಲಿಲ್ಲ.
ತಾವು ಹೇಳಬೇಕಿರುವುದನ್ನು ‘ಪತ್ರಿಕಾ ಪ್ರಕಟಣೆ’ಗಳ ಮೂಲಕ ತಿಳಿಸುತ್ತಿದ್ದರು. ಡಾ.ಮನಮೋಹನ ಸಿಂಗ್ ಅವರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳುವ ಪತ್ರಕರ್ತರು, ಮೊದಲೇ ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಕೊಡಬೇಕಿತ್ತು. ಅದೇ ರೀತಿ ಜಾಗತಿಕ ನಾಯಕರಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರದಲ್ಲಿ ಎರಡು ಸಲ ಪತ್ರಿಕಾಗೋಷ್ಠಿ ಕರೆದು ಮಾತಾಡಿದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪ್ರೆಸ್ ಮೀಟ್ ನಿಂದ ದೂರದೂರ. ಅವರನ್ನು ವಿಶ್ವದ ‘ಸ್ಕ್ರಿಪ್ಟೆಡ್ ನಾಯಕ’ ಎಂದೂ ಕರೆಯುವುದುಂಟು.
ಚೀನಾದಲ್ಲಿ ನಡೆಯುವ ವಾರ್ಷಿಕ ರಾಜಕೀಯ ಸಭೆಗಳ ಸಂದರ್ಭದಲ್ಲಿ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸುವ ಸಂಪ್ರದಾಯವಿತ್ತು. ಇಲ್ಲಿ ಕೇಳುವ ಪ್ರಶ್ನೆಗಳು ಮೊದಲೇ ನಿರ್ಧಾರವಾಗಿರುತ್ತಿತ್ತು. ಯಾವು ದೇ ಅನಿರೀಕ್ಷಿತ ಅಥವಾ ಕಠಿಣ ಪ್ರಶ್ನೆಗಳಿಗೆ ಅಲ್ಲಿ ಆಸ್ಪದವೇ ಇರುತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಸಂಪ್ರದಾಯಕ್ಕೂ ಕ್ಸಿ ಜಿನ್‌ಪಿಂಗ್ ಬ್ರೇಕ್ ಹಾಕಿದ್ದಾರೆ.
ಕ್ಸಿ ಜಿನ್‌ಪಿಂಗ್ ವಿದೇಶಿ ಪ್ರವಾಸ ಕೈಗೊಂಡಾಗಲೂ ಸಹ ತಮ್ಮ ಸಂವಹನ ಶೈಲಿಯನ್ನು ಬದಲಿ ಸುವುದಿಲ್ಲ. ಸಾಮಾನ್ಯವಾಗಿ ಎರಡು ದೇಶಗಳ ನಾಯಕರು ಭೇಟಿಯಾದಾಗ ಜಂಟಿ ಪತ್ರಿಕಾಗೋಷ್ಠಿ ನಡೆಸುವುದು ಶಿಷ್ಟಾಚಾರ. ಆದರೆ ಕ್ಸಿ ಜಿನ್‌ಪಿಂಗ್ ಅವರು ಕೇವಲ ಜಂಟಿ ಹೇಳಿಕೆಗಳನ್ನು (Joint Statements) ಓದಿ ನಿರ್ಗಮಿಸುತ್ತಾರೆ.
ಪತ್ರಕರ್ತರಿಗೆ ಪ್ರಶ್ನೆ ಕೇಳಲು ಅವಕಾಶ ನೀಡದಂತೆ ಮೊದಲೇ ಷರತ್ತು ವಿಧಿಸುತ್ತಾರೆ. ತಮ್ಮ ಇಮೇಜ್‌ಗೆ ಧಕ್ಕೆ ತರುವ ಮಾನವ ಹಕ್ಕುಗಳ ಅಥವಾ ಆರ್ಥಿಕ ನೀತಿಗಳ ಕುರಿತಾದ ಪ್ರಶ್ನೆಗಳಿಂದ ದೂರವಿರುತ್ತಾರೆ. ಚೀನಾದ ಒಳಗೆ ಯಾವುದೇ ಸ್ವತಂತ್ರ ಪತ್ರಿಕೋದ್ಯಮಕ್ಕೆ ಅವಕಾಶವಿಲ್ಲ. ಪತ್ರಕರ್ತರು ಸರಕಾರದ ಆಶಯಕ್ಕೆ ವಿರುದ್ಧವಾಗಿ ಬರೆದರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದರಿಂದಾಗಿ ಕ್ಸಿ ಅವರ ಬಗ್ಗೆ ಬರುವ ಪ್ರತಿಯೊಂದು ಸುದ್ದಿಯೂ ಸರಕಾರದ ‘ಸೆನ್ಸಾರ್’ ಪ್ರಕ್ರಿಯೆಗೆ ಒಳಪಟ್ಟು, ಅತ್ಯಂತ ನಾಜೂಕಾಗಿ ಸಿದ್ಧಪಡಿಸಿದ ಸ್ಕ್ರಿಪ್ಟ್ ನಂತೆ ಹೊರಬರುತ್ತದೆ.
ಚೀನಾದಲ್ಲಿ ಮಾಧ್ಯಮಗಳು ಸರಕಾರದ ಕಣ್ಣು ಮತ್ತು ಕಿವಿಗಳಂತೆ ಕೆಲಸ ಮಾಡುತ್ತವೆ. ‘ಕ್ಸಿನ್ಹುವಾ’ದಂಥ ಸರಕಾರಿ ಸುದ್ದಿ ಸಂಸ್ಥೆಗಳು ಅಧ್ಯಕ್ಷರ ಪ್ರತಿಯೊಂದು ನಡೆಯನ್ನು ವೈಭವೀ ಕರಿಸುತ್ತವೆ. ಕ್ಸಿ ಜಿನ್‌ಪಿಂಗ್ ಅವರ ವಿಚಾರಧಾರೆಗಳನ್ನು ಪ್ರಚಾರ ಮಾಡಲು ಚೀನಾ ಸರಕಾರವು ‘ಸ್ವಂತ ಆಪ್’ಗಳನ್ನು ಮತ್ತು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುತ್ತದೆ.
‘ಗ್ರೇಟ್ ಫೇರ್‌ವಾಲ್’ ಮೂಲಕ ಜಾಗತಿಕ ಇಂಟರ್ನೆಟ್‌ನಿಂದ ಚೀನಾವನ್ನು ಬೇರ್ಪಡಿಸಿರುವು ದರಿಂದ, ಅಲ್ಲಿನ ಜನರಿಗೆ ಅಧ್ಯಕ್ಷರ ಬಗ್ಗೆ ಕೇವಲ ಸ್ಕ್ರಿಪ್ಟೆಡ್ ಮಾಹಿತಿ ಮಾತ್ರ ಸಿಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಸಿ ಅವರ ಬಗ್ಗೆ ಬರುವ ಸಣ್ಣ ಟೀಕೆಯನ್ನೂ ತಕ್ಷಣವೇ ಅಳಿಸಿ ಹಾಕುವ ಅತ್ಯಾಧುನಿಕ ವ್ಯವಸ್ಥೆ ಅಲ್ಲಿ ಜಾರಿಯಲ್ಲಿದೆ. ಕ್ಸಿ ಜಿನ್‌ಪಿಂಗ್ ಮಾದರಿ ಸಂವಹನವು ಸಂಪೂರ್ಣ ವಾಗಿ ನಿಯಂತ್ರಿತವಾದದ್ದು.
ಪತ್ರಿಕಾಗೋಷ್ಠಿಗಳಿಲ್ಲದ, ಪ್ರಶ್ನೆಗಳಿಲ್ಲದ ಈ ಮಾದರಿಯು ಚೀನಾದ ಕಮ್ಯುನಿಸ್ಟ್ ಪಕ್ಷದ ಅಧಿಕಾರ ವನ್ನು ಉಳಿಸಿಕೊಳ್ಳುವ ತಂತ್ರವಾಗಿದೆ. ಒಬ್ಬ ನಾಯಕ ತನ್ನ ಮಾತುಗಳನ್ನು ಎಷ್ಟು ಕಟ್ಟುನಿಟ್ಟಾಗಿ ಸ್ಕ್ರಿಪ್ಟ್ ಮಾಡುತ್ತಾನೋ, ಅಷ್ಟು ಆತ ಮುಕ್ತ ಸಂವಾದದಿಂದ ದೂರವಿರುತ್ತಾನೆ ಎಂಬುದಕ್ಕೆ ಕ್ಸಿ ಜಿನ್‌ಪಿಂಗ್ ಅವರೇ ಸಾಕ್ಷಿ.
ಇನ್ನು ಕಿಮ್ ಜೊಂಗ್ ಉನ್ ನೇತೃತ್ವದ ಉತ್ತರ ಕೊರಿಯಾದಲ್ಲಿ ಸ್ವತಂತ್ರ ಪತ್ರಿಕೋದ್ಯಮಕ್ಕೆ ಅವಕಾಶವೇ ಇಲ್ಲ. ಕಿಮ್ ಅವರು ಪತ್ರಕರ್ತರನ್ನು ಎದುರಿಸುವುದು ಅಥವಾ ಸಾರ್ವಜನಿಕವಾಗಿ ಪ್ರಶ್ನೆಗಳಿಗೆ ಉತ್ತರಿಸುವುದು ಅಸಾಧ್ಯದ ಮಾತು. 2019ರಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ಮೊದಲ ಬಾರಿಗೆ ವಿದೇಶಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿ ಸಿದ್ದು ದೊಡ್ಡ ಸುದ್ದಿಯಾಗಿತ್ತು. ಕಾರಣ ಕಿಮ್ ವಿದೇಶಿ ಮಾಧ್ಯಮಗಳೊಂದಿಗೆ ಮಾತನಾಡುವುದೇ ಇಲ್ಲ. ಅವರ ಭದ್ರತಾ ಪಡೆಯವರು ಪತ್ರಕರ್ತರನ್ನು ಹತ್ತಿರಕ್ಕೆ ಸುಳಿಯಲೂ ಬಿಡುವುದಿಲ್ಲ. ಅವರನ್ನು ಪ್ರಶ್ನಿಸುವ ಪತ್ರಕರ್ತ ಅಲ್ಲಿ ಬದುಕುಳಿಯಲು ಸಾಧ್ಯವಿಲ್ಲ.
ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮುಕ್ತ ಪತ್ರಿಕಾಗೋಷ್ಠಿಗಳನ್ನು ಇಷ್ಟಪಡುವುದಿಲ್ಲ. ಅವರು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ (ಉದಾಹರಣೆಗೆ ಫಾಕ್ಸ್ ನ್ಯೂಸ್ ಅಥವಾ ಅಟ್ಲಾಂಟಿಕ್) ಅತ್ಯಂತ ಅಪರೂಪವಾಗಿ ಮತ್ತು ಮುಂಚಿತವಾಗಿ ನಿರ್ಧರಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಯಾವ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ಸಲ್ಮಾನ್ ನಿರ್ಧರಿಸುತ್ತಾರೆ. ಅದಕ್ಕೆ ಪತ್ರಕರ್ತ ಒಪ್ಪಿದರೆ ಮಾತ್ರ ಸಂದರ್ಶನ. ಇನ್ನು ಸೌದಿ ಅರೇಬಿಯಾದಲ್ಲಿ ಪತ್ರಿಕಾಗೋಷ್ಠಿ ಎಂಬ ಸಂಪ್ರದಾ ಯವೇ ಇಲ್ಲ. ಆ ದೇಶದಲ್ಲಿ ಸರಕಾರವನ್ನು ಟೀಕಿಸಿ ಪತ್ರಕರ್ತರು ಬಚಾವ್ ಆಗಲು ಸಾಧ್ಯವೇ ಇಲ್ಲ. ರಷ್ಯಾದ ಅಧ್ಯಕ್ಷ ಪುಟಿನ್ ಅವರು ವರ್ಷಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸುತ್ತಾರಾದರೂ, ಅಲ್ಲಿ ಕೇಳಲಾಗುವ ಪ್ರಶ್ನೆಗಳು ಮೊದಲೇ ನಿರ್ಧರಿತವಾಗಿರುತ್ತವೆ (Fixed). ಪತ್ರಕರ್ತರು ತಾವು ಕೇಳ ಬಯಸುವ ಪ್ರಶ್ನೆಗಳನ್ನು ಒಂದು ವಾರದ ಮೊದಲೇ ಸಲ್ಲಿಸಬೇಕು ಮತ್ತು ಆ ಪ್ರಶ್ನೆಯನ್ನು ಮಾತ್ರ ಕೇಳಬೇಕು.
ನಿಗದಿತ ಪ್ರಶ್ನೆ ಹೊರತಾಗಿ ಬೇರೆ ಪ್ರಶ್ನೆಗಳನ್ನು ಕೇಳುವಂತಿಲ್ಲ. ಒಂದು ವೇಳೆ ಆಶುಪ್ರಶ್ನೆ ಕೇಳಿದರೆ, ಪತ್ರಿಕಾಗೋಷ್ಠಿಯಿಂದ ಆ ಪತ್ರಕರ್ತನನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕಲಾಗುತ್ತದೆ ಮತ್ತು ಅವನನ್ನು ಬ್ಲ್ಯಾಕ್ ಲಿಸ್ಟ್ʼಗೆ ಸೇರಿಸಲಾಗುತ್ತದೆ. ವಿಶೇಷವಾಗಿ ಉಕ್ರೇನ್ ಯುದ್ಧದ ನಂತರ, ಅವರು ಸ್ವತಂತ್ರ ಅಥವಾ ಪಾಶ್ಚಿಮಾತ್ಯ ಪತ್ರಕರ್ತರನ್ನು ಎದುರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದಾರೆ.
ಎಲ್ ಸಾಲ್ವಡಾರ್ ಅಧ್ಯಕ್ಷ ನಯಿಬ್ ಬುಕೇಲೆ ಇತ್ತೀಚಿನ ದಿನಗಳಲ್ಲಿ ‘ಸೋಶಿಯಲ್ ಮೀಡಿಯಾ ಅಧ್ಯಕ್ಷ’ ಎಂದೇ ಖ್ಯಾತರಾಗಿದ್ದಾರೆ. ಪತ್ರಕರ್ತರನ್ನು ಅವರು ಭೇಟಿ ಮಾಡುವುದಿಲ್ಲ. ಪತ್ರಿಕಾಗೋಷ್ಠಿ ಗಳ ಬದಲಿಗೆ ‘ಎಕ್ಸ್’ (ಟ್ವಿಟರ್) ಮೂಲಕ ನೇರವಾಗಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಮೋದಿ ಆಡಳಿತದ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಧಾರಾಳವಾಗಿದೆ.
ಪ್ರಧಾನಿಯವರನ್ನು ಯಾರು ಬೇಕಾದರೂ ಹಿಗ್ಗಾಮುಗ್ಗಾ ಟೀಕಿಸಬಹುದು ಮತ್ತು ಏನು ಬೇಕಾದರೂ ಟೀಕಿಸಿ ಜೀರ್ಣಿಸಿಕೊಳ್ಳಬಹುದು. ಮೋದಿಯವರನ್ನು ದೇಶದ್ರೋಹಿ, ಭಯೋತ್ಪಾದಕ ಎಂದು ಕರೆಯುವಷ್ಟು ಅತಿಯಾದ ಸ್ವಾತಂತ್ರ್ಯ ನಮ್ಮ ದೇಶದಲ್ಲಿದೆ. ಯಾವುದಾದರೂ ಒಂದು ಮುಸ್ಲಿಂ ರಾಷ್ಟ್ರದಲ್ಲಿ, ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅಲ್ಲಿನ ಮುಖ್ಯಸ್ಥರನ್ನು ಟೀಕಿಸುವ ಒಂದು ಮಾಧ್ಯಮ ಸಂಸ್ಥೆ ಇದೆಯಾ? ಈ ದಿನಗಳಲ್ಲಿ ಜಾಗತಿಕ ನಾಯಕರು ಮಾಧ್ಯಮಗಳ ಜತೆ ವ್ಯವಹರಿ ಸುವ ರೀತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಜಿಲ್ಲಾ ಮಟ್ಟದ ನಾಯಕರು ಸಹ ಈ ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆಯುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ತಾವು ಹೇಳಬೇಕಿರುವುದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾ ರಂಭಿಸಿದ್ದಾರೆ. ಅದನ್ನೇ ಮಾಧ್ಯಮಗಳು ವರದಿ ಮಾಡಲಾರಂಭಿಸಿವೆ. ಇದು ಬದಲಾದ ಕಾಲ ಮಾನದ ಕಟು ವಾಸ್ತವ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಎದುರಿಗೆ ಸಿಕ್ಕ ಪತ್ರಕರ್ತ ಹಠಾತ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಶಿಷ್ಟಾಚಾರ. ಉತ್ತರಿಸದಿರುವುದು ಬುದ್ಧಿವಂತಿಕೆ. ಕಾರಣ ಯಾವ ನಾಯಕನೂ ವೃಥಾ ಸಮಸ್ಯೆಯನ್ನು ಆಹ್ವಾನಿಸಲು ಇಷ್ಟಪಡುವುದಿಲ್ಲ.
ಹೀಗಾಗಿ ಬದಲಾದ ಕಾಲಘಟ್ಟದಲ್ಲಿ, ಮೋದಿಯವರು ಪತ್ರಿಕಾಗೋಷ್ಠಿ ಕರೆಯದ ನಿರ್ಧಾರವನ್ನು ದೊಡ್ಡ ‘ಲೋಪ’ ಅಥವಾ ‘ಅಪರಾಧ’ವಾಗಿ ನೋಡಬೇಕಿಲ್ಲ. ಹಾಗೆಂದು ಪತ್ರಿಕಾಗೋಷ್ಠಿಗೆ ಸಂಪೂರ್ಣ ನಿಷೇಧ ಹೇರುವುದು ಕೂಡ ಸರಿ ಅಲ್ಲ. ಅಷ್ಟಕ್ಕೂ ಮೋದಿಯವರು ಮಾಧ್ಯಮಗಳನ್ನು ಎದುರಿಸಲಾರದಷ್ಟು ಅಸಮರ್ಥರೇನೂ ಅಲ್ಲ.