ಬಸವ ಮಂಟಪ (ಭಾಗ-2)
ರವಿ ಹಂಜ್
ಹಾಗೇನಾದರೂ ಮಸಿ ಬಳಿದುಕೊಳ್ಳುವವರಿದ್ದರೆ ಅವರು ಕಾಪಾಲಿಕರು. ಅವರೆಂದೂ ಮಠ ಗಳನ್ನು ಬಿಡಿ, ಮನೆಗಳನ್ನೂ ಮಾಡಿಕೊಳ್ಳದೆ ಸ್ಮಶಾನವಾಸಿಗಳಾಗಿದ್ದರು. ಕಾಳಾಮುಖರ ಬಗ್ಗೆ ಅಪಾರ ಸಂಶೋಧನೆ ಮಾಡಿರುವ ಡೇವಿಡ್ ಲೊರೆಂಜನ್ ಇದನ್ನೇ ಅನುಮೋದಿಸಿ, “ರಾಮಾನುಜಾಚಾರ್ಯರು ಕಾಪಾಲಿಕರನ್ನು ಕಾಳಾಮುಖರೆಂದು ಬಗೆದು, ’ಕಾಳಾಮುಖರು ತಲೆ ಬುರುಡೆಯ ಭಿಕ್ಷಾಪಾತ್ರೆಯಲ್ಲಿ ಮದ್ಯಮಾಂಸಾದಿ ಸೇವನೆ ಮಾಡುವರು.
ಮೈತುಂಬಾ ಶವಗಳ ಚಿತಾಭಸ್ಮವನ್ನು ಬಳಿದುಕೊಳ್ಳುವರು’ ಎಂದಿದ್ದಾರೆ. ಈ ಕ್ಷಣಗಳೆ ಲ್ಲವೂ ಕಾಪಾಲಿಕರ ಲಕ್ಷಣಗಳು ಎಂಬುದು ಗ್ರಂಥೈತಿಹಾಸಿಕ ಆಕರಗಳಿಂದ ತಿಳಿದು ಬರು ತ್ತದೆ. ಅಲ್ಲದೇ, ಕರ್ನಾಟಕ, ತಮಿಳುನಾಡು, ಆಂಧ್ರದ ಇರುವ ಶಿಲಾಶಾಸನ, ದತ್ತಿ ಶಾಸನ ಗಳಲ್ಲಿ ಇಂಥ ಯಾವ ಉಲ್ಲೇಖವೂ ಇಲ್ಲ.
ಮೇಲಾಗಿ ಈ ಎಲ್ಲಾ ಶಾಸನಗಳಲ್ಲಿ ಕಾಳಾಮುಖರ ಸಮಾಜಮುಖಿ ಧಾರ್ಮಿಕ ಶಕ್ತಿಕೇಂದ್ರ, ಜ್ಞಾನಕೇಂದ್ರ, ಆಧ್ಯಾತ್ಮಿಕ ಶಾಲೆ, ಮಠಮಾನ್ಯಗಳು ಮತ್ತು ರಾಜಗುರುತ್ವದ ವಿವರಣೆಗಳಿವೆ" ಎಂದು ಹಲವಾರು ಶಿಲಾಶಾಸನಗಳನ್ನು ಉಲ್ಲೇಖಿಸಿ ಸ್ಪಷ್ಟವಾಗಿ ದಾಖಲಿಸಿದ್ದಾರೆ.
ಹಾಗೆಯೇ ಮುಂದುವರಿಯುತ್ತಾ, “ಪಂಥ ಶ್ರೇಷ್ಠತೆ ಮತ್ತು ಅಂದಿನ ಪಂಥ ಸ್ಪರ್ಧಾತ್ಮಕ ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ರಾಮಾನುಜಾಚಾರ್ಯರು, ಕಾಳಾಮುಖರನ್ನು ಹೀಗೆ ಬೇಕೆಂದೇ ಕಾಪಾಲಿಕರನ್ನಾಗಿಸಿ ಅವಹೇಳನ ಮಾಡಿರುವ ಸಾಧ್ಯತೆಯೂ ಇದೆ" ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಸಕ್ತರು ಡೇವಿಡ್ ಲೊರೆಂಜನ್ ಅವರ The Kaapaalikaas and Kaalaamukhaas: two lost Saivite sects ಸಂಶೋಧನಾ ಕೃತಿಯನ್ನು ಪರಾಂಬರಿಸಬಹುದು. ಅಲ್ಲಿಗೆ ಕಾಳಾ ಮುಖರು ಮುಖಕ್ಕೆ ಮಸಿ ಬಳಿದುಕೊಳ್ಳುತ್ತಿದ್ದರು ಎಂಬ ಜಾಮ್ದಾರರ ವಾದ ಮತ್ತು ಅವರ ಬೆಂಬಲಿಗರ- ‘ಕಾಳಾಮುಖರು ಮದ್ಯಮಾಂಸಾದಿ ಸೇವಿಸಿ ಸ್ಮಶಾನವಾಸಿ ಗಳಾಗಿದ್ದರು’ ಎಂಬ ವಾದಗಳು ಗ್ರಂಥೈತಿಹಾಸಿಕವಾಗಿ, ಶಿಲಾಶಾಸನ ಮಾನ್ಯವಾಗಿ ನಿಶ್ಶೂನ್ಯವಾಗುತ್ತದೆ.
ಇದನ್ನೂ ಓದಿ: Ravi Hunj Column: ಜಮೇದಾರರು ಕಿಂದರಿ ಊದುವ ಜಾಮ್ದಾರರಾದದ್ದು!
ಇನ್ನು ಶ್ರೀಯುತ ಜಾಮ್ದಾರರು ಮಾಜಿ ಸಂಸದರೊಬ್ಬರ ಅಭಿಪ್ರಾಯವನ್ನು ಅವಹೇಳಿ ಸುತ್ತಾ, “ಶಿವನು ವೇದ ಮೂಲದವನಲ್ಲ. ಲಿಂಗಾಯತರ ‘ಶಿವ’ನು ‘ವೈದಿಕ’ರ ಶಿವನಲ್ಲ. ಋಗ್ವೇದದಲ್ಲಿ ಬರುವ ರುದ್ರನನ್ನು ಶಿವ ಎಂದು ಹಲುಬುತ್ತಾರೆ. ಆಗಮ ಮೂಲದ ಶಿವನೂ ಅನರ್ಥ ಅರ್ಥೈಸುವಿಕೆಯಿಂದ ಭಗ್ನನಾಗಿದ್ದಾನೆ" ಎಂದು ಶಿವನನ್ನೇ ಸನಾತನ ಶಿವ, ಲಿಂಗಾಯತ ಶಿವ ಎಂದು ಎರಡು ಹೋಳಾಗಿಸಿದ್ದಾರೆ.
ಒಂದು ಮತವನ್ನು ಎರಡಾಗಿಸಿದ ಜಾಮ್ದಾರರ ಇಂಥ ಭಂಜನೆ ಹೊಸದೇನಲ್ಲ. ಆದರೂ ಜಾಮ್ದಾರರ ಶಿವ ಪುರಾಣವನ್ನು ಸ್ವಲ್ಪ ತರ್ಕಕ್ಕೆ ಒಡ್ಡೋಣ- ವೇದಗಳಲ್ಲಿ ಪ್ರಾಥಮಿಕವಾಗಿ ಶಿವನನ್ನು ರುದ್ರ ಎಂದಿರುವುದು ಸತ್ಯ. ಹಾಗೆಯೇ ರುದ್ರನ ಗುಣ ವಿಶೇಷಣವಾಗಿ ಶಿವ ಎಂಬ ಪದವೂ ವೇದದಲ್ಲಿ ಬಳಕೆಯಾಗಿದೆ.
ಅಸಾಧಾರಣ ರುದ್ರನ ಪ್ರತಾಪಗಳನ್ನು ಹಲವಾರು ನಾಮಗಳಿಂದ ವರ್ಣಿಸುವ ರೀತಿಯಲ್ಲಿ ಶಿವ ಎಂಬುದೂ ಆತನ ಒಂದು ಉಪನಾಮ ಎನ್ನಲಾಗಿದೆ. ರುದ್ರ ಉಗ್ರ ಸ್ವರೂಪವಾದರೆ, ಶಿವ ಶಾಂತ ಸ್ವರೂಪ. ಒಬ್ಬನೇ ವ್ಯಕ್ತಿಯ ಹಲವಾರು ಭಾವನೆಗಳಿಗೆ ತಕ್ಕಂತೆ ಆತನ ಆಂಗಿಕ ಭಾಷೆ ಬದಲಾಗುವ ಕಾರಣಕ್ಕೆ ಅವನನ್ನು ಬೇರೆಬೇರೆಯದೇ ವ್ಯಕ್ತಿ ಎನ್ನಲಾಗುವುದೇ? ಹಾಗಾಗಿ ರುದ್ರ ಮತ್ತು ಶಿವ ಬೇರೆಯೆಂದಲ್ಲ. ಶಿವನನ್ನು ಮೃತ್ಯುಂಜಯ, ಈಶ್ವರ, ಶಂಕರ, ಪಾರ್ವತೀಶ ಮುಂತಾಗಿ ಹಲವಾರು ಹೆಸರುಗಳಿಂದ ಸ್ತುತಿಸುವ ಕಾರಣ ಅವೆಲ್ಲವೂ ಬೇರೆ ಬೇರೆ ವ್ಯಕ್ತಿಗಳು ಎನ್ನಲಾಗದು!
ಶಿವ ರುದ್ರರೀರ್ವರೂ ಒಂದೇ ಎಂದು ಷಟ್ಸ್ಥಲ ಚಕ್ರವರ್ತಿ ಚೆನ್ನಬಸವಣ್ಣನು ತನ್ನ ವಚನ ವೊಂದರಲ್ಲಿ ಹೇಳಿದ್ದಾನೆ. ಚೆನ್ನಬಸವಣ್ಣನ ವಚನ ಹೀಗಿದೆ: “ಮಸ್ತಕದಲ್ಲಿ ಮಹಾದೇವ ನೆಂಬ ರುದ್ರನಿಪ್ಪನಯ್ಯಾ, ನೊಸಲಲ್ಲಿ ಲಕುಲೀಶ್ವರನೆಂಬ ರುದ್ರನಿಪ್ಪನಯ್ಯಾ. ನಾಭಿ ಯಲ್ಲಿ ಶಂಕರನೆಂಬ ರುದ್ರನಿಪ್ಪನಯ್ಯಾ, ಎದೆಯಲ್ಲಿ ಮಹೇಶ್ವರನೆಂಬ ರುದ್ರನಿಪ್ಪನಯ್ಯಾ. ಕೊರಳಲ್ಲಿ ಲೋಕೇಶ್ವರನೆಂಬ ರುದ್ರನಿಪ್ಪನಯ್ಯಾ.
ಬಲದ ಭುಜದಲ್ಲಿ ಶ್ರೀಕಂಠನೆಂಬ ರುದ್ರನಿಪ್ಪನಯ್ಯಾ, ಎಡದ ಭುಜದಲ್ಲಿ ದೇವೇಶನೆಂಬ ರುದ್ರನಿಪ್ಪನಯ್ಯಾ. ಬಲದ ಬಾಹುವಿನಲ್ಲಿ ಈಶ್ವರನೆಂಬ ರುದ್ರನಿಪ್ಪನಯ್ಯಾ. ಎಡದ ಬಾಹುವಿನಲ್ಲಿ ಶೂಲಪಾಣಿಯೆಂಬ ರುದ್ರನಿಪ್ಪನಯ್ಯಾ. ಬಲದ ಮುಂಗೈಯಲ್ಲಿ ಕೋದಂಡ ನೆಂಬ ರುದ್ರನಿಪ್ಪನಯ್ಯಾ, ಎಡದ ಮುಂಗೈಯಲ್ಲಿ ಲಿಂಗಕಾಮಿಯೆಂಬ ರುದ್ರನಿಪ್ಪನಯ್ಯಾ.
ಬಾಯಲ್ಲಿ ಭವನಾಶನೆಂಬ ರುದ್ರನಿಪ್ಪನಯ್ಯಾ, ನಾಸಿಕದಲ್ಲಿ ನಾಗಭೂಷಣನೆಂಬ ರುದ್ರ ನಿಪ್ಪನಯ್ಯಾ. ಬಲದ ಕಣ್ಣಲ್ಲಿ ಕಾಮಸಂಹರನೆಂಬ ರುದ್ರನಿಪ್ಪನಯ್ಯಾ, ಎಡದ ಕಣ್ಣಲ್ಲಿ ತ್ರಿಪುರಸಂಹರನೆಂಬ ರುದ್ರನಿಪ್ಪನಯ್ಯಾ. ಬಲದ ಕರ್ಣದಲ್ಲಿ ಪಾರ್ವತೀಪ್ರಿಯ ನೆಂಬ ರುದ್ರನಿಪ್ಪನಯ್ಯಾ, ಎಡದ ಕರ್ಣದಲ್ಲಿ ಏಕಾದಶನೆಂಬ ರುದ್ರನಿಪ್ಪನಯ್ಯಾ. ಹಿಂದಲೆ ಯಲ್ಲಿ ಪಂಚಮುಖನೆಂಬ ರುದ್ರನಿಪ್ಪನಯ್ಯಾ.
ಬ್ರಹ್ಮರಂಧ್ರದಲ್ಲಿ ಬ್ರಹ್ಮಾಂಡ ಖಂಡಿತನೆಂಬ ರುದ್ರನಿಪ್ಪನಯ್ಯಾ; ಇಂತೀ ರುದ್ರರುಗಳು ತಮ್ಮ ತಮ್ಮ ಸ್ಥಾನಂಗಳೊಳಗಿಪ್ಪರಾಗಿ; ಇದನರಿಯದೆ ವಿಭೂತಿಯ ಧರಿಸಿದಡೆ ಕತ್ತೆ ಬೂದಿಯಲ್ಲಿ ಹೊರಳಿದಂತೆ ಕಾಣಾ ಕೂಡಲಚೆನ್ನಸಂಗಮದೇವಾ".
ಶೂನ್ಯಪೀಠದ ಜಗದ್ಗುರು ಚೆನ್ನಬಸವಣ್ಣನೇ ಶಿವ ಮತ್ತು ರುದ್ರರಿಬ್ಬರೂ ಒಂದೇ ಎಂದ ಮೇಲೆ ಜಾಮ್ದಾರರು ಯಾವ ‘ಲಿಂಗಾಯತ’ದ ವಕ್ತಾರರು? ಹಾಗಾಗಿಯೇ ಅವರನ್ನು ಲಿಂಗಾ ಹತದ ವಕ್ತಾರರು ಎನ್ನುವುದು ಅತ್ಯಂತ ಸಮಂಜಸ. ಇರಲಿ, ಶ್ರೀಯುತ ಜಾಮ್ದಾರರು ತಮ್ಮ ಹೇಳಿಕೆಯನ್ನು ಮುಂದುವರಿಸುತ್ತಾ, “ಲಿಂಗಾಯತರ ಶಿವ ಬೂದಿಬಡುಕನಲ್ಲ. ಸ್ಮಶಾನ ದಲ್ಲಿ ಪಿಶಾಚಿಯಂತೆ ತಿರುಗುವವನಲ್ಲ. ಇವೆಲ್ಲ ಒಬ್ಬ ಶಿವನಿಗೆ ಕೊಟ್ಟ ವಿವಿಧ ಹೆಸರುಗಳು, ಹೆಸರಿಗೊಂದರಂತೆ ಬರೆದ ಕತೆಗಳು ಮತ್ತು ಶೈವ ಪುರಾಣಗಳ ಸೃಷ್ಟಿಗಳು. ಲಿಂಗಾಯತ ಶರಣರು ಈ ಪುರಾಣಗಳನ್ನು, ‘ಪುಂಡರ ಗೋಷ್ಠಿಗಳು’ ಎಂದು ಹೇಳಿ ಅವುಗಳನ್ನು ತಿರಸ್ಕರಿಸಿದ್ದಾರೆ" ಎಂದಿದ್ದಾರೆ.
“ಇವೆಲ್ಲ ಒಬ್ಬ ಶಿವನಿಗೆ ಕೊಟ್ಟ ಹೆಸರುಗಳು" ಎಂದು ಒಪ್ಪುತ್ತ ದ್ವಂದ್ವದ ಮಾತನಾಡುವ ಜಾಮ್ದಾರರು ಏನನ್ನು ಹೇಳಲು ಬಯಸಿದ್ದಾರೆ ಎನ್ನುವುದು ಅವರ ಮನದ ಗೊಂದಲ ವನ್ನು ತೋರುತ್ತದೆ ಅಥವಾ ಕಾಯಕವಾಹಿ ಅನುವಂಶೀಯತೆಯ ಜಮೇದಾರಿಕೆಯ ಕಿವಿಯೂದುವಿಕೆ ಎನಿಸುತ್ತದೆ. ಇರಲಿ, ಹಾಗಿದ್ದರೆ ಜಾಮ್ದಾರರು ಹೇಳುವ ಲಿಂಗಾಯತರ ಶಿವ ಯಾರು? ಮೇಲಿನ ಚೆನ್ನಬಸವಣ್ಣನ ವಚನದಲ್ಲಿರುವಂತೆಯೇ ಅನೇಕ ಶರಣರ ವಚನಗಳಲ್ಲಿಯೇ ಶಿವನ ವರ್ಣನೆ ಇದೆ.
ಜಾಮ್ದಾರರ ಹಕ್ಕೊತ್ತಾಯದ ಶರಣರ ವಚನದ ಶಿವನಿಗೂ, ಸನಾತನ ಶಿವನಿಗೂ ಯಾವುದೇ ವ್ಯತ್ಯಾಸವಿಲ್ಲ. ಅಸಲಿಗೆ ಶರಣರನ್ನು ‘ಶಿವ’ಶರಣರು ಎಂದೇ ಸಂಬೋಧಿಸಲಾಗುತ್ತದೆ. ಸನಾತನ ಶಿವ ಮತ್ತು ಜಾಮ್ದಾರರ ಲಿಂಗಾಯತ ಶಿವ ಒಬ್ಬನೇ ಎಂದು ಬಸವಣ್ಣನೇ ತನ್ನ ಈ ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ: “ಕಾಮದಹನವ ಮಾಡಿದನು, ದಕ್ಷನ ಯಜ್ಞವ ಕೆಡಿಸಿದನು, ಒಳ್ಳೆಯ ತ್ರಿಪುರವನುರುಹಿದನು, ಹಾಳಾಹಳವನೊಮ್ಮೆ ಧರಿಸಿದನು, ನಮ್ಮ ಕೂಡಲಸಂಗಮದೇವನು". ಕಾಮದಹನ ಮಾಡಿದ, ದಕ್ಷನ ಯಜ್ಞ ಕೆಡಿಸಿದ, ಹಾಲಾಹಲ ವನ್ನು ಕುಡಿದ ಶಿವನೇ ನಮ್ಮ ಕೂಡಲಸಂಗಮದೇವ ಎಂದ ಮೇಲೆ, ಲಿಂಗಾಯತ ಶಿವ ಹೇಗೆ ಬೇರೆ ಶಿವನಾಗುತ್ತಾನೆ? ಜಾಮ್ದಾರರೇ ಖುದ್ದು ಮತಸ್ಥಾಪಕ ಎನ್ನುವ ಬಸವಣ್ಣ ಮತ್ತವನ ಮತದ ಶೂನ್ಯಪೀಠಾಧ್ಯಕ್ಷ ಚೆನ್ನಬಸವಣ್ಣ ಇಬ್ಬರೂ ಸನಾತನ ಶಿವನನ್ನೇ ವರ್ಣಿಸುತ್ತಿರು ವಾಗ, ‘ಶಿವಾ’ನಂದದಲ್ಲಿ ತೇಲುತ್ತಿರುವ ಜಾಮ್ದಾರರು ಏಕೆ ಮತ್ತು ಹೇಗೆ ಬೇರೆ ಎನ್ನುತ್ತಾರೆ? ಬೇರೆ ಎನ್ನಲು ಇವರು ಬಸವಣ್ಣ ಮತ್ತು ಚೆನ್ನಬಸವಣ್ಣರಿಬ್ಬರನ್ನೂ ತಮ್ಮ ಕಚೇರಿಯ ಸೇವಕರು, ಅವರೇನು ಹೇಳುವುದು? ನಾನು ಹೇಳಿದ್ದೇ ಖಚಿತ ಎಂದುಕೊಂಡಿ ದ್ದಾರೆಯೇ? ಎಂಬ ಪ್ರಶ್ನೆಯೊಂದಿಗೆ ಜಾಮ್ದಾರರ ಶಿವಭಂಜನೆಯ ವಾದ ನಿಶ್ಶೂನ್ಯವಾಗುತ್ತದೆ.
ಇದೇ ರೀತಿ ಶ್ರೀಮಾನ್ ಧರ್ಮಭಂಜಕ ಜಾಮ್ದಾರರು ತಮ್ಮ ಲೇಖನಗಳಲ್ಲಿ, “ಪಂಚಾ ಚಾರ್ಯರು ಶಿಲಾಲಿಂಗೋದ್ಭವರೆ?"- ತಾವು ಐವರೂ ಬೇರೆ ಬೇರೆ ಸ್ಥಳಗಳಲ್ಲಿ ಶಿಲಾಶಿವ ಲಿಂಗಗಳಲ್ಲಿ ಉದ್ಭವಿಸಿದವರೆಂದು ಪಂಚಾಚಾರ್ಯರು ಹೇಳಿಕೊಳ್ಳುತ್ತಾರೆ. ಅವರ ಪವಿತ್ರ ಗ್ರಂಥ ‘ಸಿದ್ಧಾಂತ ಶಿಖಾಮಣಿ’ಯು, ರೇಣುಕನು ಮಾತ್ರ ತಾನು ಹೆಣ್ಣಿನ ಯೋನಿಯಲ್ಲಿ ಹುಟ್ಟಲು ಇಚ್ಚಿಸದೆ, ಕೊಲ್ಲಿಪಾಕಿಯ ಕಲ್ಲು ಲಿಂಗದಲ್ಲಿ ಹುಟ್ಟಿದನೆಂದು ತಿಳಿಸುತ್ತದೆ.
ಸ್ವಯಂಭು ಆಗಮವು ರೇಣುಕರಂತೆಯೇ ಉಳಿದ ನಾಲ್ವರು ಆಚಾರ್ಯರೂ ದೂರ ದೂರದ ನಾಲ್ಕು ಸ್ಥಳಗಳಲ್ಲಿ (ದ್ರಾಕ್ಷಾರಾಮ, ಕಾಶಿ, ಉಜ್ಜಿನಿ ಮತ್ತು ಶ್ರೀಶೈಲ) ಬೇರೆ ಬೇರೆ ಶಿಲಾಲಿಂಗಗಳಲ್ಲಿ ಉದ್ಭವಿಸಿದರೆಂದು ಹೇಳುತ್ತದೆ. ಬಸವಣ್ಣನನ್ನು ಕೈಲಾಸದ ಶಿವನ ಒಬ್ಬ ಪ್ರಮಥನಾದ ನಂದಿಯ ಅವತಾರವೆಂದು ಪುರಾಣಗಳು ಹೇಳುತ್ತವೆ. ಅವನೂ ಶಿವನಿಂದ ಭೂಲೋಕಕ್ಕೆ ಕಳುಹಿಸಲ್ಪಟ್ಟವನೇ. ಆದರೆ ಅವನು ಮಾದಲಾಂಬಿಕೆಯ ಗರ್ಭದಿಂದ ಮಾನವ ಜೀವಿಯಾಗಿ ಹುಟ್ಟುತ್ತಾನೆ.
ಅವನೇಕೆ ‘ಅಯೋನಿಜ’ನಾಗಿ ಹುಟ್ಟಬಾರದಿತ್ತು? ‘ಯೋನಿಜ’ ಎನ್ನುವುದು ಕೆಟ್ಟದು ಎಂದಾದರೆ ಶಿವಲಿಂಗವನ್ನು ಪೂಜಿಸುವುದೇಕೆ? ಪಂಚಾಚಾರ್ಯರು ಹೇಗೆ ಅಯೋ ನಿಜರಾಗಲು ಸಾಧ್ಯ? ಎಂದು ಹಿಂದೂ ಲಿಂಗವಂತ ವೀರಶೈವರನ್ನು ಅವಹೇಳಿಸಿದ್ದಾರೆ.
ಈ ವಾದದಿಂದ ಶ್ರೀ ಜಾಮ್ದಾರರಿಗೆ ಅವರ ಹಕ್ಕೊತ್ತಾಯದ ಲಿಂಗಾಯತವೇ ಸರಿಯಾಗಿ ತಿಳಿದಿಲ್ಲ ಎಂದು ಮೇಲ್ನೋಟಕ್ಕೇ ತಿಳಿದು ಬರುತ್ತದೆ. ಏಕೆಂದರೆ ‘ಅಯೋನಿಜ’ ಎಂಬುದು ಒಂದು ವೀರಶೈವ ಲಿಂಗವಂತ ಧಾರ್ಮಿಕ ಪ್ರಕ್ರಿಯೆ. ಸಮಗ್ರ ವೀರಶೈವದ ದೀಕ್ಷಾ ವಿಧಿ ಗಳನ್ನು ಅನುಸರಿಸಿ ಗುರುವಾದ ಎಲ್ಲರೂ ಆಯೋನಿಜರೇ ಆಗುತ್ತಾರೆ.
ಇದರ ಅಂಗವಾಗಿ ದೀಕ್ಷಾ ಸಂಸ್ಕಾರದಲ್ಲಿ ಜರುಗುವ ಒಂದು ಮುಖ್ಯ ಪ್ರಕ್ರಿಯೆಯೇ ಮಲತ್ರಯ ನಿವಾರಣೆ. ದೀಕ್ಷಾ ಬೋಧೆಯ ಪ್ರಥಮಸ್ಥಲದಲ್ಲಿ ಗುರುವು ಶಿಷ್ಯನಿಗೆ ದೀಕ್ಷೆ ಯೀಯುವ ಪೂರ್ವದಲ್ಲಿ, “ಮಲತ್ರಯಗಳು ಭಕ್ತಿಗೆ ವಿಘ್ನಗಳು. ಹಾಗಾಗಿ ಅವುಗಳನ್ನು ಕಳೆದಲ್ಲದೆ ದೀಕ್ಷೆ ಘಟಿಸದು" ಎಂದು ಹೇಳಿ ಮಲತ್ರಯ ಸ್ವರೂಪವನ್ನೂ ಅವುಗಳ ನಿವಾರ ಣೋಪಾಯಗಳನ್ನು ಚೆನ್ನಬಸವಣ್ಣನೂ ಸೇರಿದಂತೆ ಕೆರೆಯ ಪದ್ಮರಸ ಮುಂತಾದ ಪಂಡಿತರ ಗ್ರಂಥಗಳಲ್ಲಿ ವಿವರಿಸಲಾಗಿದೆ.
ಆಣವ ಮಲವು ರೇತರಕ್ತದ ಜಠರ ಜಾತ ಅಥವಾ ಗರ್ಭಸಂಬಂಧಿಯಾಗಿ ಅಣುರೂಪ ವಾದುದು, ‘ಮಾಯಾಮಲ’ವು ಜಾತಿ ಧರ್ಮಗಳ ಸುಪ್ರೀತಿರೂಪವಾದುದು ಮತ್ತು ‘ಕಾರ್ಮಿಕಮಲ’ವು ಧನದ ಮೇಲಿನ ಕಾಂಕ್ಷಾರೂಪವಾದುದು. ಈ ಮಲಗಳನ್ನು ಗುರುವು ಅನುಕ್ರಮವಾಗಿ ವೇಧಾ, ಮಂತ್ರ ಹಾಗೂ ಕ್ರಿಯಾದೀಕ್ಷೆಗಳ ಪ್ರಕ್ರಿಯೆಯಿಂದ ಕಳೆಯುವ ನೆಂದು ಎಲ್ಲಾ ವೀರಶೈವ ಲಿಂಗವಂತ ಶಾಸಗ್ರಂಥಗಳಲ್ಲಿ ನಿರೂಪಿಸಲಾಗಿದೆ.
ಗುರುವು ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳಿಗೆ ಪ್ರಾಪ್ತವಾಗಿದ್ದ ಕಾರ್ಮಿಕ, ಮಾಯಾ ಹಾಗೂ ಆಣವವೆಂಬ ಮಲಗಳನ್ನು ಕ್ರಿಯಾ, ಮಂತ್ರ ಹಾಗೂ ವೇಧಾದೀಕ್ಷೆಗಳಿಂದ ಪರಿಹರಿಸಿ ಸ್ಥೂಲ ಶರೀರ (ತ್ಯಾಗಾಂಗ)ದಲ್ಲಿ ಇಷ್ಟಲಿಂಗವನ್ನೂ ಸೂಕ್ಷ್ಮ ಶರೀರ (ಭೋಗಾಂಗ) ದಲ್ಲಿ ಪ್ರಾಣಲಿಂಗವನ್ನೂ (ಯೋಗಾಂಗ)ದಲ್ಲಿ ಭಾವಲಿಂಗವನ್ನೂ ಸಂಬಂಧ ಮಾಡುವನು. ಕಾರಣಶರೀರ ಈ ಮಲ-ತ್ರಯಗಳ ನಿವಾರಣೆಯೆಂದರೆ ಜೀವನನ್ನು ಸುತ್ತಿಕೊಂಡಿದ್ದ ಮೂರು ವಿಧವಾದ ಬಂಧನಗಳಿಂದ ಬಿಡುಗಡೆ ಮಾಡುವುದಾಗಿದೆ.
ಶರಣರ ವಚನಗಳಲ್ಲಿ ಸಹ ಅಯೋನಿಜ ಎನ್ನುವ ಪದದ ಉಲ್ಲೇಖವಿದೆ. ಶೂನ್ಯ ಪೀಠದ ಜಗದ್ಗುರು ಚೆನ್ನಬಸವಣ್ಣನು ಖುದ್ದಾಗಿ ತಾನು ಆಯೋನಿಜನಾದೆ ಎಂದಿದ್ದಾನೆ. ಅವನ ವಚನ ಹೀಗಿದೆ: “ಆತ್ಮನಲ್ಲಿ ಪ್ರಣವಪಂಚಾಕ್ಷರಿಯ ನಿರವಿಸಿ, ಸದ್ಗುರುವೆ ಎನ್ನ ಶಿವಾತ್ಮನ ಮಾಡಿದಿರಾಗಿ, ಆತ್ಮಶುದ್ಧಿಯಾಯಿತ್ತೆನಗೆ. ಪಂಚಭೂತಂಗಳಲಿ ಪಂಚಬ್ರಹ್ಮನ ನಿರಿಸಿದಿ ರಾಗಿ, ಭೂತಶುದ್ಧಿಯಾಯಿತ್ತೆನಗೆ.
ಅಂಡಜ ಜರಾಯುಜಾದಿ ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ಬಹ ಜೀವನ ‘ಅಯೋ ನಿಜ’ನ ಮಾಡಿದಿರಾಗಿ ಜೀವಶುದ್ಧಿಯಾಯಿತ್ತೆನಗೆ. ಅಂಗಾಶ್ರಯವ ಕಳೆದು ಲಿಂಗಾಶ್ರಯವ ಮಾಡಿದಿರಾಗಿ ಮನಶ್ಶುದ್ಧಿಯಾಯಿತ್ತೆನಗೆ. ಪಶುವೆಂಬ ಅಜ್ಞಾನ ದ್ರವ್ಯವ ಕಳೆದು ಪರಮ ಸುಜ್ಞಾನದ್ರವ್ಯವ ಮಾಡಿದಿರಾಗಿ ದ್ರವ್ಯಶುದ್ಧಿಯಾಯಿತ್ತೆನಗೆ. ಇಂತು ಸರ್ವಶುದ್ಧನಂ ಮಾಡಿ ಪೂರ್ವಾಶ್ರಯವ ಕಳೆದಿರಾಗಿ ಕೂಡಲಚೆನ್ನಸಂಗಾ, ನಿಮ್ಮುವ ‘ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ’ ಎನುತಿರ್ದೆನು".
ಇನ್ನು ಬಸವಣ್ಣನು ಸಹ ಅಯೋನಿಜ ಶೂನ್ಯನಿರಾಳ ನಮ್ಮ ಕೂಡಲಸಂಗಮದೇವ ಎಂದಿದ್ದಾನೆ. ಅವನ ವಚನ ಹೀಗಿದೆ: ಅಷ್ಟತನುಮೂರ್ತಿ ಲಿಂಗವೆಂದೆಂಬರು ಕೇಳಿರಯ್ಯಾ: ಆದಿಯ ಮಗ ಅತೀತ, ಅತೀತನ ಮಗ ಆಕಾಶ, ಆಕಾಶನ ಮಗ ವಾಯು, ವಾಯುವಿನ ಮಗ ಅಗ್ನಿ, ಅಗ್ನಿಯ ಮಗ ಅಪ್ಪು, ಅಪ್ಪುವಿನ ಮಗ ಪೃಥ್ವಿ, ಪೃಥ್ವಿಯಿಂದ ಸಕಲ ಜನನವು. ಮನಸಿನ ಮಗ ಚಂದ್ರ, ನಯನದ ಮಗ ಸೂರ್ಯ, ದೇಹದ ಮಗನಾತ್ಮ, ಇಂತೀ ಅಷ್ಟತನು ವೆಲ್ಲಕ್ಕೆಯು ಉತ್ಪತ್ಯವುಂಟು. ಉತ್ಪತ್ಯರಹಿತ ‘ಅಯೋನಿಜ’ ಶೂನ್ಯನಿರಾಳ ನಮ್ಮ ಕೂಡಲ ಸಂಗಮದೇವಂಗೆ ಮಾತಾಪಿತರಿಲ್ಲ".
ಇನ್ನು ಅಕ್ಕಮಹಾದೇವಿ ಸಹ ಅಯೋನಿಸಂಭವ ಚೆನ್ನಮಲ್ಲಿಕಾರ್ಜುನಯ್ಯಾ ಎಂದಿದ್ದಾಳೆ. ಅವಳ ವಚನ ಹೀಗಿದೆ: “ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ, ಛಲಮದ ವೆಂಬುದಿಲ್ಲ ಪ್ರತಿದೋರನಾಗಿ, ಧನಮದವೆಂಬುದಿಲ್ಲ ತ್ರಿಕರಣ ಶುದ್ಭನಾಗಿ, ವಿದ್ಯಾಮದ ವೆಂಬುದಿಲ್ಲ ಅಸಾಧ್ಯವ ಸಾಧಿಸಿದನಾಗಿ.
ಮತ್ತಾವ ಮದವೆಂಬುದಿಲ್ಲ ನೀನವಗ್ರಹಿಸಿದ ಕಾರಣ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣನು ಅಕಾಯ ಚರಿತ್ರನಾಗಿ". ಈ ವಚನಗಳಲ್ಲಿ ಹೇಳುವ ಅಯೋನಿಜದ ಅರ್ಥ, ಮಲತ್ರಯಗಳನ್ನು ಕಳೆದುಕೊಂಡದ್ದು ಎಂಬುದೇ ಆಗಿದೆ. ಇಂಥ ದೀಕ್ಷಾ ವಿಧಾನದ ಪರಂಪರೆಯ ಆದಿ ಪ್ರವರ್ತಕರು, ಪಂಚಾಚಾರ್ಯರು. ಹಾಗಾಗಿ ಮಲತ್ರಯಗಳನ್ನು ಕಳೆದುಕೊಂಡು ಆಯೋನಿಜರಾದ ರೇಣುಕರನ್ನು ಸಾಂಕೇತಿಕ ರೂಪಕವಾಗಿ ಲಿಂಗದಿಂದ ಉದ್ಭವರಾದರು ಎನ್ನಲಾಗಿದೆ.
ಇಂಥ ರೂಪಕಗಳ ಲಿಂಗೋದ್ಭವ ಪುರುಷರ ಅನೇಕ ಶಿಲಾಮೂರ್ತಿಗಳು ಒಂದನೇ ಶತಮಾನದಿಂದಲೂ ಇವೆ. ಅದೇ ರೀತಿ ರೇಣುಕರ ಉದ್ಭವದ ಕುರಿತು ತೋಂಟದ ಸಿದ್ದ ಲಿಂಗೇಶ್ವರರ ವಚನವೊಂದು ಹೀಗಿದೆ: “ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ (ವಾ) ಗದಿರ್ದಡೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ? ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು, ಅನಾದಿಮುಕ್ತನಲ್ಲ, ಅವಾಂತರ ಮುಕ್ತ ರೆಂಬ ಅಜ್ಞಾನಿಗಳಿಗೆ ನಾಯಕನರಕ ತಪ್ಪದು.
ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು ಸಮಸ್ತ ಲೋಕಂಗಳ ಪವಿತ್ರ ಕಾರಣ ವಾಗಿಯು ಪರಮೇಶ್ವರನ ನಿಜಚಿನ್ಮಯಮಪ್ಪ ಊಧ್ರ್ವಮುಖದಲ್ಲಿ ಚಿತ್ಕಲಾ ಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡ. ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ ಮತ್ರ್ಯದಲ್ಲಿ ಅವತರಿಸಿದಡೆ, ಅದೇನು ಕಾರಣ ಉದಯವಾದರು ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ ಅವಲಕ್ಷಣ ನಾಯ ನಾಲಗೆಯ, ಯಮ ದೂತರು ಕೀಳದೆ ಮಾಣ್ಬರೆ? ಇವರಿಂಗೆ ನಾಯಕನರಕ ತಪ್ಪದು ಕಾಣಾ, ಎಲೆ ಶಿವನೆ ನೀ ಸಾಕ್ಷಿಯಾಗಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ".
ಹೀಗೆ ಜಾಮ್ದಾರರು ತಮ್ಮ ಸ್ವತಂತ್ರ ಧರ್ಮ ಹೋರಾಟದುದ್ದಕ್ಕೂ ಹಿಂದೂ ಕಾಳಾಮುಖ ವೀರಶೈವ ಲಿಂಗವಂತ ಮತಧರ್ಮದ ಅವಹೇಳನವನ್ನು ಮಾಡಿಯೂ ತಾವು ಹಿಂದೂ ಧರ್ಮವನ್ನು ಎಂದೆಂದೂ ಅವಹೇಳನ ಮಾಡಿಲ್ಲವೆನ್ನುವ ಇವರ Audacity is priceless !
ಕೇವಲ ಐಎಎಸ್ ಪರೀಕ್ಷೆಯನ್ನು ಪಾಸಾಗಲೆಂದು ಇತಿಹಾಸ ಓದಿ, ಮಲಾಯಿ ಅಧಿಕಾರ ಶಾಹಿಯನ್ನು ಅನುಭವಿಸಿ ನಿವೃತ್ತರಾದ ನಂತರ, ಒಂದು ಧಾರ್ಮಿಕ ಸಮಾಜದ ಮುಖಂಡ ನಾಗಬೇಕೆಂಬ ಹುಕಿಯಲ್ಲಿ, ಸದ್ಯದ ಕರ್ನಾಟಕದ ಜಮೀನ್ದಾರನ ಹುಕುಮತ್ತಿ ನಲ್ಲಿ, “ಜೀ ಹುಜೂರ್, your Highness, ಧಣಿ, ದೊರೆ" ಎನ್ನುತ್ತ ಜಯಕಾರ ಹಾಕುವ ಗುಲಾಮರನ್ನು ಜಮಾವಣೆಗೊಳಿಸುತ್ತ ಧರ್ಮ ವಿಶ್ಲೇಷಣೆಯಲ್ಲಿ ತೊಡಗಿ ರುವವರು, “ಸಮಾಜವೆಂದರೆ ತಮ್ಮ ಕಚೇರಿಯಲ್ಲಿ ಬೆನ್ನು ಬಗ್ಗಿಸಿ ಡೊಗ್ಗು ಸಲಾಮು ಹೊಡೆಯುತ್ತಾ ಗುಲಾಮಿ ಭಾವವೇ ಮೈವೆತ್ತಂಥ ಗುಗ್ಗು ಚಪರಾಸಿಯಲ್ಲ" ಎಂಬ ಅರಿವಳಿಕೆಯಿಂದ ಎಚ್ಚೆತ್ತು ಅರಿತುಕೊಳ್ಳ ಬೇಕು.
ಹಾಗಾಗಿ ಇಲ್ಲಿ ಕೇವಲ ಕಾಳಾಮುಖ-ವೀರಶೈವ-ಲಿಂಗವಂತ ಸಮಾಜದ ಇತಿಹಾಸವಷ್ಟೇ ಅಲ್ಲದೆ ಜಮೇದಾರ-ಜಮಾದಾರ-ಜಾಮ್ದಾರ್ ಪದೈತಿಹಾಸವನ್ನೂ ಅವರಿಗಾಗಿ ಕೊಡಲಾಗಿದೆ. ಅಂದ ಹಾಗೆ ಬ್ರಿಟಿಷರ ಆರ್ಡರ್ಲಿ ವಂಶಸ್ಥರು ಬ್ರೆಡ್ಡಿಗೆ ಜಾಮ್ ಹಚ್ಚಿ ತಿನ್ನುವ ಕಾರಣೊಡ್ಡಿ ಜಮೇದಾರ ಉರ್ಫೆ ಜಮಾದಾರ ನಾಮಪದವನ್ನು ‘ಜಾಮ’ದಾರ್ ಎಂದು ಮಾಡಿಕೊಂಡಿರಬಹುದೇ ಎಂಬುದು ಒಂದು ಪದೈತಿಹಾಸಿಕ ಜಿಜ್ಞಾಸೆ!
ಕನ್ನಡದ ಟಿವಿ ಮಾಧ್ಯಮದ ಅದೇ ಸಂವಾದದಲ್ಲಿ ಮುಂದುವರಿದು ಶ್ರೀ ಜಾಮ್ದಾರರು, “ನಮ್ಮದು ‘ಲಿಂಗಾಯತ ಸ್ವತಂತ್ರ ಧರ್ಮ’ ಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ. ಇದು ಮೈನಾರಿಟಿ ಸ್ಟೇಟಸ್ಸಿಗಾಗಿ ನಡೆಸುತ್ತಿರುವ ಹೋರಾಟ ಎಂದರು. ಕಳೆದ ಬಾರಿಯ ಕಾಂಗ್ರೆಸ್ ಸರಕಾರದ ಅವಧಿಯಿಂದಲೂ ‘ಲಿಂಗಾಯತ ಸ್ವತಂತ್ರ ಧರ್ಮ’ ಎಂದೇ ಕಿಂದರಿ ಊದುತ್ತಾ ಹೋರಾಟ ಕಟ್ಟಿಕೊಂಡು ಬಂದ ‘ಕಿವಿಯೂದುವ ಕಾಯಕವಾಹಿ ಅನುವಂಶೀಯತೆ’ಯ ಜಾಮ್ದಾರರು, ಈಗ ಇದ್ದಕ್ಕಿದ್ದಂತೆ ಒಂದು ಟಿವಿ ಸಂವಾದ/ಸಂದರ್ಶನದಲ್ಲಿ ತಮ್ಮ ಹೋರಾಟಗಾರರನ್ನೆ ಕೈಬಿಟ್ಟು, “ನಮ್ಮದು ಸ್ವತಂತ್ರ ಧರ್ಮಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ.
ಏಕೆಂದರೆ ಸ್ವತಂತ್ರ ಧರ್ಮ ಎನ್ನುವದು ಸಾಂವಿಧಾನಿಕವಾಗಿ ಎಂದೆಂದಿಗೂ ಸಾಧ್ಯವಿಲ್ಲ. ಹಾಗಾಗಿ ನಮ್ಮದು ಮೈನಾರಿಟಿ ಸ್ಟೇಟಸ್ಸಿಗಾಗಿ ನಡೆಸುತ್ತಿರುವ ಹೋರಾಟ!" ಎಂದರು. ಈ ವಾಕ್ಯವನ್ನು ಅಖಂಡ ವೀರಶೈವ ಲಿಂಗವಂತ ಸಮಾಜವು ನಾಲ್ಕು ಇಂಚು ಆಳಕ್ಕಿಳಿದು ನೋಡಿದಾಗ ಗೋಚರಿಸುವುದು, ಕೇವಲ ಮತ್ತು ಕೇವಲ, ಜಗದಗಲ ಮುಗಿಲಗಲ ಮಿಗೆ ಯಗಲ ನಿಮ್ಮಗಲ, ಪಾತಾಳದಿಂದವತ್ತತ್ತ, ಬ್ರಹ್ಮಾಂಡದಿಂದವ ತ್ತತ್ತದ, ಅಗಮ್ಯ ಅಗೋಚರ ಅಪ್ರತಿಮ ಧರ್ಮದ್ರೋಹ! ಪ್ರಜಾಪತಿ ಕೊಟ್ಟ ಗುರಿ ತಲುಪಿದನ್ನಕ್ಕ, ಚುಳುಕಾದ ಲಿಂಗಾಯತ ಪ್ರತ್ಯೇಕ ಧರ್ಮ!
ಜಾಮ್ದಾರ್ ಕಾಯಕವಾಹಿ-ಅನುವಂಶೀಯತೆಗೆ ತಕ್ಕಂತೆ ತನ್ನ ಮಾಲೀಕನಾದ ಪ್ರಜಾಪತಿ ಯ ಆಣತಿಯಂತೆ ಸಮಾಜಕ್ಕೆ ಕಿವಿಯೂದಿ ಧರ್ಮವನ್ನು ಛಿದ್ರಗೊಳಿಸಿ, ಸಮಾಜದ ಜನಸಂಖ್ಯೆಯನ್ನು ಮಾಲೀಕ ನಿಗದಿಗೊಳಿಸಿದ ಸಂಖ್ಯೆಗೆ ಇಳಿಸಿ, ಪಡೆಯುವುದನ್ನು ಪಡೆದುಕೊಂಡು, ಗುರಿ ಸೇರಿದ ಕಾರಣವೇ ವಿಜಯೋತ್ಸವವನ್ನು ಅರಮನೆ ಮೈದಾನದಲ್ಲಿ ನಡೆಸಿ ಜಯ ಕಲ್ಯಾಣಕೆ ಜಯ ಕಲ್ಯಾಣಕೆ ಜಯ ಕಲ್ಯಾಣಕೆ ಜಯಹೇ! ಎಂದು ಮಂಗಳ ಹಾಡಿದ್ದಾರೆ.
ಹಾಗಾಗಿಯೇ ಈಗ ಇಳಿದ ಸಮಾಜದ ಜನಸಂಖ್ಯೆಗೆ ತಕ್ಕಂತೆ ಮಾನ್ಯರು, ಮೈನಾರಿಟಿ ಸ್ಟೇಟಸ್ಸಿಗಾಗಿ ನಡೆಸುತ್ತಿರುವ ಹೋರಾಟ ಎಂಬ ಹೊಸ ರಾಗವನ್ನು ಊದುತ್ತಿದ್ದಾರೆ. ಮೀಸಲಾತಿ ಮರು ಳರು, ಕಿಂದರಿ ಜೋಗಿ ಜಾಮ್ದಾರರ ಕಿಂದರಿ ಊದಿಗೆ ಮರುಳಾಗಿ ಅವರ ಹಿಂದೆ ಹೋಗುತ್ತಿರುವವರ ಕಲ್ಯಾಣ ಏನಾಗಲಿದೆ ಎಂದು ಅಖಂಡ ವೀರಶೈವ ಲಿಂಗವಂತ ಸಮಾಜವು ಚಿಂತಿಸಬೇಕು!
ಅಂದ ಹಾಗೆ, ಶ್ರೀಯುತರು ಕಂದಾಯ ಇಲಾಖೆಯ ಕಾರ್ಯದರ್ಶಿಗಳಾಗಿದ್ದಾಗ ಕಾರ್ಯ ನಿಮಿತ್ತ ಉತ್ತರ ಕರ್ನಾಟಕದ ಕಡೆ ಹೋದಾಗ ಮಹಿಳಾ ತಹಸೀಲ್ದಾರರಿದ್ದರೆ ಅವರನ್ನು ಕಚೇರಿಯಲ್ಲಿ ಭೇಟಿ ಮಾಡದೆ ಸರಕಾರಿ ನಡವಳಿಕೆ ಸಂಹಿತೆಬಾಹಿರವಾದರೂ ಸರಿಯೇ, ಹೆಣ್ಣುಮಕ್ಕಳನ್ನು ಅವರ ನೆಮ್ಮದಿತಾಣವಾದ ಅವರವರ ಮನೆಗಳಲ್ಲಿ ಭೇಟಿ ಮಾಡಿ ಚರ್ಚಿಸುತ್ತಿದ್ದರೆಂಬ ಸಾಮಾಜಿಕ ಕಳಕಳಿಗೆ ಹೆಸರುವಾಸಿಯಾಗಿದ್ದರು.
ಕಾರ್ಯ ನಿಮಿತ್ತವಾಗಿ ಮನೆಗಳಿಗೆ ಹೋಗುವಷ್ಟು ಸಮಯಾವಕಾಶವಿಲ್ಲದಾಗ ಶ್ರೀಯುತರು ಮಹಿಳಾ ಅಧಿಕಾರಿಗಳನ್ನು ತಾವು ಉಳಿದುಕೊಂಡ ಸರಕಾರಿ ಪ್ರವಾಸಿಮಂದಿರಗಳಿಗೆ ಕರೆಸಿ ಆಪ್ತತೆಯಿಂದ ಪಕ್ಕದ ಕೂರಿಸಿಕೊಂಡು ಕಚೇರಿಯ ಕಾರ್ಯಗಳ ಬಗ್ಗೆ ಸಲಹೆ ಸೂಚನೆ ನೀಡುತ್ತಿದ್ದರು ಎಂಬ ವಿಶಿಷ್ಟ ಮಹಿಳಾ ಕಾಳಜಿಗೆ ಖ್ಯಾತರಾಗಿದ್ದರು.
ಇದಿಷ್ಟು ಅವರ ಎದ್ದುಗಾಣುವ ಮುಕುಟ ಮಣಿ ವ್ಯಕ್ತಿತ್ವವಾದ ಕಾರಣ ಇಲ್ಲಿ ಉಲ್ಲೇಖಿಸ ಲಾಗಿದೆಯಷ್ಟೇ. ಇನ್ನುಳಿದಂತೆ ಸಮಗ್ರವಾಗಿ ಕೈಗೊಂಡ ಧರ್ಮಭಂಜಕ ಕಲ್ಯಾಣಕಾರ್ಯ ಯಶಸ್ವಿಯಾಗಿ ಜನಸಂಖ್ಯೆ ಕುಸಿಯುವಂತೆ ಮಾಡಿ ಮುಗಿಸಿದ ಕಾರಣ, ಲಿಂಗಾಯತ ಸ್ವತಂತ್ರ ಧರ್ಮ ಎಂಬುದಕ್ಕೆ ತಿಲಾಂಜಲಿಯಿತ್ತು ಈಗ ಅಲ್ಪಸಂಖ್ಯಾತ ಮಾನ್ಯತೆಗಾಗಿ ಎಂದು ಹೊಸ ಮುಖವಾಡ ಹೊತ್ತು ಬಂದಿದ್ದಾರೆ.
ಇಂಥ ಕುಟಿಲ ಧರ್ಮಬೀರುಗಳಿಗೆ ವೇದಿಕೆ, ಮಾನ್ಯತೆ, ಆದ್ಯತೆ ಕೊಟ್ಟು ಜನರು ಅನುಸರಿಸು ತ್ತಾರೆಂದರೆ ನಾಡಿನ ಜ್ಞಾನದ ಮಾಪಕ ಎಲ್ಲಿಗಿಳಿದಿರಬಹುದು?! ವಿದ್ವಾನ್ ಟಿ.ಎನ್. ಮಲ್ಲಪ್ಪನವರ ಪುಸ್ತಕವನ್ನು ಪ್ರಕಾಶಿಸಿದ ಅಂದಿನ ಮುರುಘಾಮಠಕ್ಕೆ ಇಂದು ಉಸ್ತುವಾರಿ ಯಾಗಿ ನೇಮಕವಾಗಿರುವ ಹಂಗಾಮಿಯು ಕಾಯಂ ಆಗಲು ನಾಡಿನ ಜಮೀನ್ದಾರನ ನೊಸಲ ಮೇಲಿನ ಮೂರ್ಪಟ್ಟಿಯ ಮೇಕಪ್ಪನ್ನು ಹಾಡಿ ಹೊಗಳುವುದು, ಅಂದಿನ ಇಮ್ಮಡಿ ಶಿವಬಸವ ಶ್ರೀಗಳ ಕುಂದೂರು ಮಠದ ಇಂದಿನ ಗುರುಗಳು ಗಾಂಪಪಡೆಯಲ್ಲಿ ಕಂಗೊಳಿಸು ವುದು, ಟಿ.ಎಸ್. ಮಲ್ಲಪ್ಪನವರ ಮತ್ತು ಇಮ್ಮಡಿ ಶಿವಬಸವ ಸ್ವಾಮಿಗಳ ಅತ್ಯುನ್ನತ ಸಂಶೋಧನಾತ್ಮಕ ಕೃತಿಗಳು ರದ್ದಿ ಅಂಗಡಿಗಳಲ್ಲಿದ್ದು, ಪುಟದಿಂದ ಪುಟಕ್ಕೆ ರದ್ದಾಗುವ ಸಂಶೋಧನೆಗಳ ಕಲಬುರ್ಗಿ ಪುಸ್ತಕಗಳು ವಿಶ್ವವಿದ್ಯಾಲಯಗಳ ಪಠ್ಯಗಳಾ ಗಿರುವುದೇ ಪಾತಾಳಕ್ಕಿಳಿದಿರುವ ನಾಡಿನ ಜ್ಞಾನದ ಮಾಪಕ!
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)