ಮೂರ್ತಿಪೂಜೆ
ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಮುಂದೆ ಫೈನಲ್ ಸೆಟ್ಲ್‌ಮೆಂಟಿಗೆ ಸಜ್ಜಾಗಿ ಕುಳಿತ ನಂತರ ನಂತರ ಕಾಂಗ್ರೆಸ್ ಪಾಳಯದಲ್ಲಿ ಒಂದು ವಿಷಯ ನಿಕ್ಕಿಯಾಗಿದೆ. ಅದೆಂದರೆ ನಾಯಕತ್ವ ಬದಲಾವಣೆಯ ಆಟ ನಿರ್ಣಾಯಕ ತಿರುವು ಪಡೆದರೆ ಒಂದೋ ಸರ್ಕಾರ ಅಲುಗಾಡುವುದು ಗ್ಯಾರಂಟಿ. ಇಲ್ಲವೇ ಸಿದ್ದರಾಮಯ್ಯ ಅವರ ಸಂಪುಟ ಪುನರ್ರಚನೆ ಯಾಗುವುದು ಗ್ಯಾರಂಟಿ ಎಂಬುದು.
ಸಿಎಂ ಸಿದ್ದರಾಮಯ್ಯ ಈ ಬಾರಿ ಫೈನಲ್ ಸೆಟ್ಲ್‌ಮೆಂಟ್ʼಗೆ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ‘ನಿಮ್ಮ ಜತೆ ಮಾತನಾಡಬೇಕು ಟೈಮು ಕೊಡಿ’ ಅಂತ ರಾಹುಲ್ ಗಾಂಧಿಯವರನ್ನು ಕೇಳಿಕೊಂಡಿದ್ದಾರೆ. ಅಂದ ಹಾಗೆ ಸಿದ್ದರಾಮಯ್ಯ ಅವರು ಸೆಟ್ಲ್ ಮಾಡಿಕೊಳ್ಳಲು ನಿರ್ಧರಿಸಿರುವ ವಿಷಯ ಯಾವುದು ಎಂಬುದು ರಹಸ್ಯವೇನಲ್ಲ.
ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ವೆಂಕಟೇಶ್ವರ ಸ್ತೋತ್ರದಂತಾಗಿರುವ ಅಧಿಕಾರ ಹಂಚಿಕೆಯ ಮಾತನ್ನು ಸೆಟ್ಲ್ ಮಾಡಿಕೊಳ್ಳುವುದು ಸಿದ್ದರಾಮಯ್ಯ ಅವರ ನಿರ್ಧಾರ. ಅಂದ ಹಾಗೆ ಸಿದ್ದರಾಮಯ್ಯ ಅವರು ತಕ್ಷಣದ ಸೆಟ್ಲ್‌ಮೆಂಟ್ʼಗೆ ರೆಡಿಯಾಗಲು ಹಲವು ಕಾರಣಗಳಿವೆ. ಈ ಪೈಕಿ ಮುಖ್ಯವಾದುದು ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಿಂದ ಕೇಳಿ ಬರುತ್ತಿರುವ ಮಾತು.
ಅದರ ಪ್ರಕಾರ: ‘ಸರ್ಕಾರಕ್ಕೆ ಮೂರು ವರ್ಷ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಮಾಡಲು ವರಿಷ್ಟರು ನಿರ್ಧರಿಸಿದ್ದಾರೆ. ಈ ನಿರ್ಧಾರವನ್ನು ಹೇಳುವ ಸಲುವಾಗಿಯೇ ದಿಲ್ಲಿಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಬುಲಾವ್ ನೀಡಲಿದ್ದಾರೆ. ಅರ್ಥಾತ್, ಸಿದ್ಧರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದು ಈ ತಿಂಗಳ ಅಂತ್ಯದ ಹೊತ್ತಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ’ ಎಂಬುದು ಆ ಕ್ಯಾಂಪಿನ ಮಾತು.
ಇದೇ ಕ್ಯಾಂಪಿನ ಪ್ರಕಾರ, ‘ಸಿಎಂ ಹುದ್ದೆಯಿಂದ ಕೆಳಗಿಳಿಯಲಿರುವ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವುದು ವರಿಷ್ಟರ ಲೆಕ್ಜಾಚಾರ. ಹೀಗೆ ಎಲ್ಲವೂ ಸೆಟ್ಲ್ ಆಗಿರುವು ದರಿಂದ ಕರ್ನಾಟಕದ ರಾಜಕಾರಣದಲ್ಲಿ ಯಾವ ಗೊಂದಲವೂ ಆಗುವುದಿಲ್ಲ’ ಎಂಬುದು ಅದರ ಮಾತು.
ಇದನ್ನೂ ಓದಿ: R T Vittalmurthy Column: ಸಿದ್ದು ಸಂದೇಶ ರಾಹುಲ್ ಕಿವಿಗೆ ತಲುಪಿತು
ಯಾವಾಗ ಈ ಮಾತು ಗಟ್ಟಿಯಾಗಿ ಕೇಳತೊಡಗಿತೋ? ಆಗ ಸಿಎಂ ಸಿದ್ದರಾಮಯ್ಯ ಫೈನಲ್ ಸೆಟ್ಲಮೆಂಟ್‌ಗೆ ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಇದೇ ಕಾರಣಕ್ಕಾಗಿ ಕಳೆದ ವಾರ ರಾಹುಲ್ ಗಾಂಧಿಯವರನ್ನು ಸಂಪರ್ಕಿಸಿದ ಸಿದ್ದರಾಮಯ್ಯ, ‘ನಿಮ್ಮ ಜತೆ ಮಾತನಾಡಬೇಕು. ಹೀಗಾಗಿ ದಿಲ್ಲಿಗೆ ಬರುತ್ತೇನೆ ಟೈಮು ಕೊಡಿ’ ಎಂದಿದ್ದಾರೆ.
ಆದರೆ ಸಿದ್ದರಾಮಯ್ಯ ನೇರವಾಗಿ ಕೇಳಿದರೂ ರಾಹುಲ್ ಗಾಂಧಿ ಇದುವರೆಗೆ ಟೈಮು ಕೊಟ್ಟಿಲ್ಲ. ಆದರೆ ಅವರು ಟೈಮು ಕೊಟ್ಟಿಲ್ಲ ಅಂತ ಸುಮ್ಮನಿರಲು ಸಾಧ್ಯವೇ? ಹಾಗಂತಲೇ ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಹೋದಾಗ ಅಲ್ಲಿ ಸಿಗುವ ರಾಹುಲ್ ಗಾಂಧಿಯವರ ಬಳಿ ಟೈಮು ಕೊಡಿ ಅಂತ ಪುನಃ ಕೇಳಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಹೀಗೆ ತಾವು ಹೇಳಿದ ಮೇಲೆ ರಾಹುಲ್ ಗಾಂಧಿ ಟೈಮು ಕೊಟ್ಟರೆ ದಿಲ್ಲಿಗೆ ಹೋಗಲಿರುವ ಸಿದ್ದರಾಮಯ್ಯ ಮೂರು ವಿಷಯಗಳನ್ನು ರಾಹುಲ್ ಗಾಂಧಿ ಮುಂದೆ ಪ್ರಸ್ತಾಪಿಸಲಿದ್ದಾರೆ. ಈ ಪೈಕಿ ಮುಖ್ಯವಾದುದು, ‘ನಾನು ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕೋ ಬೇಡವೋ’ ಎಂಬುದು.
ಒಂದು ವೇಳೆ ರಾಹುಲ್ ಗಾಂಧಿ ‘ಅಧಿಕಾರ ತ್ಯಾಗ ಮಾಡಿ ಸಿದ್ರಾಮಯ್ಯಾಜೀ’ ಎಂದರೆ ‘ಆಗಲಿ ಸಾರ್. ನಾನು ರೆಡಿ ಇದ್ದೇನೆ. ಆದರೆ ನಾನು ತೆರವು ಮಾಡುವ ಜಾಗಕ್ಕೆ ದಲಿತ ನಾಯಕ ಡಾ.ಜಿ. ಪರಮೇಶ್ವರ್ ಬರಬೇಕು. ಇಲ್ಲದಿದ್ದರೆ ಮುಂದಿನ ಬೆಳವಣಿಗೆಗಳ ಬಗ್ಗೆ ನಾನು ಜವಾಬ್ದಾರನಲ್ಲ’ ಅಂತ ಖಡಕ್ಕಾಗಿ ಹೇಳಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
ಆದರೆ ರಾಹುಲ್ ಗಾಂಧಿ ಅಧಿಕಾರ ತ್ಯಾಗದ ಮಾತನಾಡದೆ ‘ನಿಮ್ಮ ಪಾಡಿಗೆ ನೀವು ನೆಮ್ಮದಿಯಾಗಿರಿ’ ಎಂದರೆ ‘ಸಂಪುಟ ಪುನರ್ರಚನೆಗೆ ಗ್ರೀನ್ ಸಿಗ್ನಲ್ ಕೊಡಿ. ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆಗಾರಿಕೆಯಿಂದ ಸುರ್ಜೇವಾಲಾ ಅವರನ್ನು ಬಿಡುಗಡೆ ಮಾಡಿ’ ಅಂತ ಸಿದ್ಧರಾಮಯ್ಯ ಸ್ಪಷ್ಟವಾಗಿ ಒತ್ತಾಯಿಸಲಿದ್ದಾರೆ.
ಯಾವಾಗ ಅವರು ಹೀಗೆ ಫೈನಲ್ ಸೆಟ್ಲ್‌ಮೆಂಟಿಗೆ ಸಜ್ಜಾಗಿ ಕುಳಿತರೋ? ಇದಾದ ನಂತರ ಕಾಂಗ್ರೆಸ್ ಪಾಳಯದಲ್ಲಿ ಒಂದು ವಿಷಯ ನಿಕ್ಕಿಯಾಗಿದೆ. ಅದೆಂದರೆ ನಾಯಕತ್ವ ಬದಲಾವಣೆಯ ಆಟ ನಿರ್ಣಾಯಕ ತಿರುವು ಪಡೆದರೆ ಒಂದೋ ಸರ್ಕಾರ ಅಲುಗಾಡುವುದು ಗ್ಯಾರಂಟಿ. ಇಲ್ಲವೇ ಸಿದ್ಧರಾಮಯ್ಯ ಅವರ ಸಂಪುಟ ಪುನರ್ರಚನೆಯಾಗುವುದು ಗ್ಯಾರಂಟಿ ಎಂಬುದು. ಹೀಗಾಗಿ ಈ ಹೊಸ ಗ್ಯಾರಂಟಿಗಾಗಿ ಎಲ್ಲರೂ ರಾಹುಲ್ ಗಾಂಧಿಯವರತ್ತ ತಿರುಗಿ ನೋಡುತ್ತಿದ್ದಾರೆ.
ರಾಹುಲ್‌ಗೆ ಕಾಡುತ್ತಿರುವ ಚಿಂತೆ
ಹೀಗೆ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ಅಧಿಕಾರ ಹಂಚಿಕೆ ಸಂಘರ್ಷ ನಿರ್ಣಾಯಕ ಘಟ್ಟಕ್ಕೆ ಬಂದಿದ್ದರೆ, ದಿಲ್ಲಿಯ ಕಾಂಗ್ರೆಸ್ ಪಡಸಾಲೆಯಿಂದ ಬೇರೆಯೇ ಕತೆ ತೇಲಿ ಬರುತ್ತಿದೆ. ಅದರ ಪ್ರಕಾರ, ಅಧಿಕಾರ ಹಂಚಿಕೆಯ ವಿಷಯ ಎಷ್ಟು ಸೂಕ್ಷ್ಮ ಘಟ್ಟಕ್ಕೆ ತಲುಪಿದೆ ಎಂದರೆ ರಾಹುಲ್ ಗಾಂಧಿ ಲಿಟರಲಿ ಚಿಂತೆಗೆ ಬಿದ್ದಿದ್ದಾರೆ.
ಮೂಲಗಳ ಪ್ರಕಾರ, ‘ರಾಹುಲ್ ಗಾಂಧಿ ಚಿಂತೆ ಮಾಡುತ್ತಿರುವ ವಿಷಯ ಎಂದರೆ ಭಿನ್ನಮತದ್ದು. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಕೊಟ್ಟರೆ ಸಿದ್ದರಾಮಯ್ಯ ತಿರುಗಿ ಬೀಳುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಮುಂದು ವರಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟ ತಪ್ಪಿಸಿದರೆ ಡಿ.ಕೆ. ಶಿವಕುಮಾರ್ ರೆಬೆಲ್ ಆಗುತ್ತಾರೆ.
ಹೀಗಾಗಿ ಈ ಇಬ್ಬರ ಪೈಕಿ ಯಾರ ಭಿನ್ನಮತವನ್ನು ಭರಿಸಬಹುದು? ಎಂಬುದು ರಾಹುಲ್ ಗಾಂಧಿ ಯವರ ಯೋಚನೆ. ಈ ಪೈಕಿ ಡಿ.ಕೆ.ಶಿವಕುಮಾರ್ ಭಿನ್ನಮತೀಯರಾದರೆ ಅಪಾಯ ಕಡಿಮೆ. ಆದರೆ ಸಿದ್ದರಾಮಯ್ಯ ಭಿನ್ನಮತೀಯರಾದರೆ ಅಪಾಯ ಜಾಸ್ತಿ ಎಂಬುದು ಅವರಿಗಿರುವ ಮಾಹಿತಿ.
ಈ ಹಿಂದೆ ಕರ್ನಾಟಕದಲ್ಲಿ 2008ರ ವಿಧಾನಸಭೆ ಚುನಾವಣೆಯನ್ನು ಖರ್ಗೆಯವರ ನೇತೃತ್ವದಲ್ಲಿ ಎದುರಿಸಿದಾಗ ಸಿದ್ದರಾಮಯ್ಯ ಪ್ರಚಾರದ ಫೀಲ್ಡಿನಿಂದ ದೂರವೇ ಇದ್ದರು. ಮುಂದೆ 2018ರಲ್ಲಿ ಅತಂತ್ರ ಪಲಿತಾಂಶ ಬಂದು ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಿದರೂ ಅದು ಬಹುಕಾಲ ಬಾಳಲಿಲ್ಲ. ಹೀಗಾಗಿ ಈಗ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೂ ಇಂತಹದ್ದೇ ಇತಿಹಾಸ ರಿಪೀಟ್ ಅಗಬಹುದು ಎಂಬುದು ರಾಹುಲ್ ಗಾಂಧಿಯವರ ಚಿಂತೆ. ಹೀಗಾಗಿ ‘ನಿಮ್ಮ ಭೇಟಿಗೆ ಟೈಮು ಕೊಡಿ’ ಅಂತ ಸಿದ್ದರಾಮಯ್ಯ ಹಲವು ಬಾರಿ ಕೇಳಿದರೂ ರಾಹುಲ್ ಗಾಂಧಿ ಚಕಾರವೆತ್ತುತ್ತಿಲ್ಲ.
ಕೈ ಪಾಳಯದಿಂದ ದಿಲ್ಲಿ ಅಭ್ಯರ್ಥಿ?
ಈ ಮಧ್ಯೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಹೊಸ ಅಸಮಾಧಾನ ಕಾಣಿಸಿಕೊಂಡಿದೆ. ಇಂತಹ ಅಸಮಾಧಾನಕ್ಕೆ ರಾಜ್ಯಸಭೆ ಚುನಾವಣೆಯೇ ಮೂಲ. ಅಂದ ಹಾಗೆ ಜೂನ್ ಮೂವತ್ತರಂದು ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿರುವ ನಾಲ್ಕು ಮಂದಿ ನಿವೃತ್ತಿಯಾಗಲಿದ್ದು, ಅವರು ತೆರವು ಮಾಡಲಿರುವ ಜಾಗಕ್ಕೆ ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಒಬ್ಬರು ಬರಬಹುದು.
ಹೀಗಾಗಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಹೋಗಲು ಕೈ ಪಾಳಯ ಮೂವರು ಅಭ್ಯರ್ಥಿ ಗಳನ್ನು ರೆಡಿ ಮಾಡಿದೆಯಾದರೂ ಅಂತಿಮ ಕ್ಷಣದಲ್ಲಿ ಹೈಕಮಾಂಡ್ ಕ್ಯಾಂಡಿಡೇಟ್ ಒಬ್ಬರು ಎಂಟ್ರಿಯಾಗಬಹುದು ಎಂಬುದು ರಾಜ್ಯ ಕಾಂಗ್ರೆಸ್ಸಿಗರ ಅಸಮಾಧಾನ. ಅವರ ಅಸಮಾ ಧಾನಕ್ಕೆ ಕಾರಣವೆಂದರೆ ದಿಲ್ಲಿಯಿಂದ ತೇಲಿ ಬರುತ್ತಿರುವ ವರ್ತಮಾನ.
ಅದರ ಪ್ರಕಾರ, ಪವನ್ ಖೇರಾ, ಸುಪ್ರಿತಾ ಶ್ರೀನಿವಾಸ್ ಸೇರಿದಂತೆ ಬೇರೆ ರಾಜ್ಯಗಳ ಹಲ ನಾಯಕರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಹಾತೊರೆಯುತ್ತಿದ್ದಾರೆ. ಒಂದು ವೇಳೆ ಅವರ ಒತ್ತಡಕ್ಕೆ ಹೈಕಮಾಂಡ್ ಮಣಿದರೆ ಕರ್ನಾಟಕದಿಂದ ಪರರಾಜ್ಯದವರು ಕ್ಯಾಂಡಿಡೇಟ್ ಆಗಬಹುದು. ಅದರೆ ಕರ್ನಾಟಕದಲ್ಲಿ ಪಕ್ಷದ ಏಳಿಗೆಗೆ ನಾಲ್ಕಾಣೆ ದುಡಿಮೆಯಿಲ್ಲದ ಇಂತವರು ಬಂದರೆ, ಪಕ್ಷಕ್ಕಾಗಿ ದುಡಿದ ನಮಗೆ ಅವಮಾನ ಎಂಬುದು ರಾಜ್ಯ ಕಾಂಗ್ರೆಸ್ಸಿಗರ ಅಸಮಾಧಾನ.
ಹೀಗೆ ಅವರ ಅಸಮಾಧಾನದ ಬಿಸಿ ದಿಲ್ಲಿಯ ಕಾಂಗ್ರೆಸ್ ವರಿಷ್ಟರನ್ನು ತಲುಪಿದೆಯಾದರೂ ರಾಜಕಾರಣದಲ್ಲಿ ಏನೂ ಆಗಬಹುದು ಎಂಬುದು ಈ ನಾಯಕರ ಯೋಚನೆ. ಹೀಗೆ ಕರ್ನಾಟಕ ದಿಂದ ರಾಜ್ಯಸಭೆಗೆ ಹೋಗಲು ದಿಲ್ಲಿ ಕ್ಯಾಂಡಿಡೇಟುಗಳು ರೆಡಿ ಇದ್ದರೂ ಮತ್ತೊಂದು ಕಡೆ ಪ್ರಾಥಮಿಕವಾಗಿ ಮೂರು ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ.
ಅದರ ಪ್ರಕಾರ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತು ಮೈಸೂರಿನ ವಿಜಯಕುಮಾರ್ ಅವರ ಹೆಸರುಗಳು ಈ ಪಟ್ಟಿಯಲ್ಲಿವೆ. ಈ ಪೈಕಿ ಬಿ.ವಿ.ಶ್ರೀನಿವಾಸ್ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾಲದಿಂದ ರಾಹುಲ್ ಗಾಂಧಿಯವರ ಆಪ್ತರಾಗಿರುವ ಬಿ.ವಿ.ಶ್ರೀನಿವಾಸ್ ಅವರಿಗೆ ‘ಆಕ್ಸಿಜನ್ ಮ್ಯಾನ್’ ಎಂದೇ ಕರೆಯಲಾಗುತ್ತಿತ್ತು. ಕಾರಣ? ದೇಶದಲ್ಲಿ ಕೋವಿಡ್ ಸಮಸ್ಯೆ ತಾರಕಕ್ಕೇರಿದ ಕಾಲದಲ್ಲಿ ಸಾವಿರಾರು ರೋಗಿಗಳಿಗೆ ಅವರು ಆಕ್ಸಿಜನ್ ಒದಗಿಸಿ ದ್ದರು. ಇಂತಹ ಬಿ.ವಿ. ಶ್ರೀನಿವಾಸ್ ಅವರಿಗೆ ಈ ಹಿಂದೆ ಎಮ್ಮೆಲ್ಸಿಗಿರಿಗೆ ರೆಡಿ ಇರಿ ಅಂತ ವರಿಷ್ಟರು ಆಫರ್ ನೀಡಿದ್ದರಾದರೂ ಅವರು ನಿರಾಕರಿಸಿದ್ದರು. ಅಷ್ಟೇ ಅಲ್ಲ, ‘ಕೊಡುವುದಾದರೆ ನನಗೆ ರಾಜ್ಯಸಭೆಯ ಸೀಟು ಕೊಡಿ’ ಅಂತ ಹೇಳಿದ್ದರು. ಅವರ ಅವತ್ತಿನ ಕೋರಿಕೆ ಇವತ್ತು ನೆರವೇರುವ ಘಳಿಗೆ ಹತ್ತಿರವಾಗಿದೆ.
ಇನ್ನು ಪ್ರಾಥಮಿಕ ಪಟ್ಟಿಯಲ್ಲಿರುವ ವಿಜಯಕುಮಾರ್ ಮೈಸೂರು ಜಿಲ್ಲೆಯವರು. ಪಕ್ಷ ಸಂಘಟನೆಯ ವಿಷಯದಲ್ಲಿ ಅವರು ತೋರಿಸಿದ ಬದ್ಧತೆಯನ್ನು ಮೆಚ್ಚಿದ್ದ ಸಿಎಂ ಸಿದ್ದರಾಮಯ್ಯ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನ ಟಿಕೆಟ್ಟನ್ನು ಅವರಿಗೇ ಕೊಡಲು ಬಯಸಿದ್ದರು. ಆದರೆ ಇದನ್ನೊಪ್ಪದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ‘ಇಲ್ಲ, ಇಲ್ಲ, ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ರೋರಿಂಗ್ ಸ್ಟಾರ್ ಲಕ್ಷ ಣ್ ಅವರಿಗೇ ಟಿಕೆಟ್ ಕೊಡಬೇಕು’ ಎಂದು ಪಟ್ಟು ಹಿಡಿದು ಯಶಸ್ವಿಯಾಗಿದ್ದರು. ಪರಿಣಾಮವಾಗಿ ಅವತ್ತು ಅವಕಾಶ ಕಳೆದುಕೊಂಡ ವಿಜಯಕುಮಾರ್ ಈಗ ರಾಜ್ಯಸಭೆಯ ಟಿಕೆಟ್ ಗಿಟ್ಟಿಸುವ ಹಂತದಲ್ಲಿದ್ದಾರೆ. ಮುಂದೇನು ಆಗುತ್ತದೋ ಕಾದು ನೋಡಬೇಕು.
ಲಾಸ್ಟ್ ಸಿಪ್
ಈ ಬಾರಿ ಕೇರಳದ ಮುಖ್ಯಮಂತ್ರಿಯಾಗುವ ಅವಕಾಶ ವಿ.ಡಿ.ಸತೀಶನ್ ಅವರಿಗೆ ದಕ್ಕಿರುವುದರಿಂದ ಸಿಎಂ ಹುದ್ದೆಯ ಮತ್ತೊಬ್ಬ ಆಕಾಂಕ್ಷಿ ಕೆ.ಸಿ.ವೇಣುಗೋಪಾಲ್ ಮುನಿಸಿಕೊಂಡಿದ್ದಾರೆ. ಅವರ ಮುನಿಸು ಯಾವ ಮಟ್ಟದಲ್ಲಿದೆ ಎಂದರೆ ಸ್ವತಃ ರಾಹುಲ್ ಗಾಂಧಿ ಫೋನು ಮಾಡಿದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ.
ಪರಿಣಾಮ? ಅವರನ್ನು ಸಮಾಧಾನಿಸಲು ಹರಸಾಹಸ ಮಾಡುತ್ತಿರುವ ರಾಹುಲ್ ಗಾಂಧಿಯವರು ಇದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ನಾಯಕರಾದ ಮನ್ಸೂರ್ ಅಲಿ ಖಾನ್ ಅವರ ನೆರವು ಪಡೆಯುತ್ತಿದ್ದಾರೆ. ಹಿರಿಯ ನಾಯಕ ರೆಹಮಾನ್ ಖಾನ್ ಅವರ ಪುತ್ರರಾಗಿರುವ ಮನ್ಸೂರ್ ಅಲಿ ಖಾನ್ ಈ ಹಿಂದೆ ಬೆರಳೆಣಿಕೆಯ ಅಂತರದಲ್ಲಿ ಎಂ.ಪಿ ಎಲೆಕ್ಷನ್ನು ಸೋತಿದ್ದರು. ಕೆ.ಸಿ. ವೇಣು ಗೋಪಾಲ್ ಅವರ ಪರಮಾಪ್ತರಾಗಿರುವ ಮನ್ಸೂರ್ ಅಲಿ ಖಾನ್ ಈಗ ಕೆ.ಸಿ. ವೇಣುಗೋಪಾಲ್ ಅವರನ್ನು ಸಂತೈಸುವ ರಾಹುಲ್ ಯತ್ನಕ್ಕೆ ಆಸರೆಯಾಗಿದ್ದಾರೆ.