ಇದೇ ಅಂತರಂಗ ಸುದ್ದಿ
ಮೊನ್ನೆ ಕಾರ್ಯ ನಿಮಿತ್ತ ಮೈಸೂರಿಗೆ ಹೋದಾಗ, ಅರಮನೆ ನಗರಿಯ ತಂಗಾಳಿಯೊಂದಿಗೆ, ದಸರೆಯ ವೈಭವದೊಂದಿಗೆ, ವಾತಾವರಣ ರಂಗುರಂಗಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನ ತಮ್ಮ ಸ್ವಗೃಹದ ಇದ್ದಾರೆಂಬ ವಿಷಯ ತಿಳಿಯಿತು. ಅವರನ್ನು ಸಂಪರ್ಕಿಸಿದಾಗ, ‘ಹೊಸ ಮನೆ ಕಟ್ಟಿಸಿದ್ದೀನಿ ಭಟ್ರೇ, ಬಂದು ಹೋಗಿ’ ಎಂದು ಎಂದಿನ ತಮ್ಮ ಸಹಜ ಪ್ರೀತಿಯಿಂದ ಆಹ್ವಾನಿಸಿದರು.
ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಅವರ ನೂತನ ನಿವಾಸಕ್ಕೆ ಹೋದೆ. ಅವರು ಗೃಹಪ್ರವೇಶ ಮಾಡಿ ಇನ್ನೂ ಒಂದು ತಿಂಗಳು ಸಹ ಕಳೆದಿಲ್ಲ. ಮನಸ್ಸು ಮಾಡಿದ್ದರೆ ಅವರು ಎಂದೋ ಅಂಥದ್ದೊಂದು ಮನೆ ಕಟ್ಟಿಸಬಹುದಿತ್ತು. ಆದರೆ ಅವರು ಮೈಸೂರಿಗೆ ಬಂದಾಗಲೆಲ್ಲ, ಇಲ್ಲಿಯ ತನಕವೂ ಉಳಿಯುತ್ತಿದ್ದುದು ತಮ್ಮ ಆಪ್ತ ಸ್ನೇಹಿತರೊಬ್ಬರ ಮನೆಯಲ್ಲೇ. ಅದು ಅಷ್ಟೇನೂ ದೊಡ್ಡದಲ್ಲದ ಸಾಮಾನ್ಯ ಮನೆ.
ಉಭಯಕುಶಲೋಪರಿ ನಂತರ ಮಾಜಿ ಮುಖ್ಯಮಂತ್ರಿಗಳು, ‘ಭಟ್ರೇ, ನನ್ನ ಹುಟ್ಟೂರಾದ ಸಿದ್ದರಾಮನಹುಂಡಿಗೆ ಹೋಗುತ್ತಿದ್ದೇನೆ. ಅಲ್ಲಿ ಒಂದು ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮವಿದೆ. ಬನ್ನಿ ನನ್ನ ಜತೆ’ ಎಂದು ಆತ್ಮೀಯತೆಯಿಂದ ಆಹ್ವಾನಿಸಿದರು. ಮುಖ್ಯಮಂತ್ರಿಯಾಗಿ ಅತಿ ದೀರ್ಘಕಾಲ ರಾಜ್ಯವನ್ನು ಆಳಿ, ಆಮೇಲೆ ಅಧಿಕಾರದಿಂದ ಬಿಡುಗಡೆಗೊಂಡಾಗ ಹುಟ್ಟೂರಿನ ಜನ ಅವರನ್ನು ಹೇಗೆ ಬರಮಾಡಿಕೊಳ್ಳುತ್ತಾರೆ? ಆ ನಾಯಕನ ಬಗ್ಗೆ ಜನರ ವಿಶ್ವಾಸ ಎಂಥದ್ದು? ಮಾಜಿ ಆದ ನಂತರ ನಾಯಕನ ಮುಖ, ಹುಟ್ಟೂರಿನ ಕನ್ನಡಿಯೊಳಗೆ ಹೇಗೆ ಕಾಣಬಹುದು? ಎಂಬ ಕುತೂಹಲದೊಂದಿಗೆ ‘ಆಯಿತು, ಬರುತ್ತೇನೆ ಸರ್’ ಎಂದು ಅವರ ಜತೆ ಹೊರಟೆ.
ಕರ್ನಾಟಕದ ರಾಜಕಾರಣದಲ್ಲಿ ಅತಿ ದೀರ್ಘಕಾಲ ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ದಾಖಲೆಯ ಬಜೆಟ್ ಗಳನ್ನು ಮಂಡಿಸಿ, ಅಧಿಕಾರದ ಶಿಖರವೇರಿದ ಸಿದ್ದರಾಮಯ್ಯನವರ ಹುಟ್ಟೂರು ಹೇಗಿರಬಹುದು ಎಂಬ ಕುತೂಹಲ ನನಗೂ ಬಹಳ ಕಾಲದಿಂದ ಇತ್ತು. ಅದಕ್ಕಿಂತ ಮಿಗಿಲಾಗಿ, ಅಧಿಕಾರ ಕಳಚಿದ ಮೇಲೂ ಹುಟ್ಟೂರಿನ ಜನರ ಅಭಿಮಾನದ ತೀವ್ರತೆ ಎಷ್ಟಿರುತ್ತದೆ ಎಂಬುದನ್ನು ಕಣ್ಣಾರೆ ನೋಡುವುದು ಒಬ್ಬ ಪತ್ರಕರ್ತನ ಪಾಲಿಗೆ ಕುತೂಹಲವೇ.
ಇದನ್ನೂ ಓದಿ: Vishweshwar Bhat Column: ನಿಧನ ಸುದ್ದಿಗೆ ಜೀವ ತುಂಬುವ ಪುಟ
ರಾಜಕಾರಣಿಗಳು ಅಧಿಕಾರದಲ್ಲಿದ್ದಾಗ ಹುಟ್ಟೂರಿಗೆ ಹೋಗುವುದಕ್ಕೂ, ಅಧಿಕಾರವಿಲ್ಲದಾಗ ಹಳ್ಳಿಯ ಧೂಳಿನ ಹಾದಿಯಲ್ಲಿ ನಡೆಯುವುದಕ್ಕೂ ಆಕಾಶ-ಭೂಮಿಯಷ್ಟು ವ್ಯತ್ಯಾಸವಿರುತ್ತದೆ. ಇಂಥ ಒಂದು ಜೀವಂತ ಕ್ಷಣವನ್ನು ಸ್ವತಃ ಸಿದ್ದರಾಮಯ್ಯನವರ ಪಕ್ಕದ ಕುಳಿತು, ಅವರ ಹುಟ್ಟೂರಿನ ಪ್ರವಾಸದ ಮೂಲಕ ಸಾಕ್ಷೀಕರಿಸುವ ಅವಕಾಶವನ್ನು ನಾನ್ಯಾಕೆ ಬಿಟ್ಟುಕೊಡಲಿ? ಸಿದ್ದರಾಮಯ್ಯನವರ ವಾಹನ ಹತ್ತಿ ಕುಳಿತ ಕ್ಷಣದಿಂದಲೇ ಅವರು ತಮ್ಮ ನೆನಪಿನ ಲೋಕಕ್ಕೆ ಜಾರಿದ್ದರು.
ಕಿಟಕಿಯಾಚಿನ ಹಸಿರು ಹೊಲಗಳನ್ನು ನೋಡುತ್ತಾ ಅವರು ತಮ್ಮ ಬಾಲ್ಯ, ಶಾಲೆಗೆ ಚಕ್ಕರ್ ಹೊಡೆದ ದಿನಗಳು, ಎಮ್ಮೆ- ದನ ಕಾಯುತ್ತಿದ್ದ ನೆನಪುಗಳು, ಹಳ್ಳಿ ಬದುಕಿನ ಹಳೆಯ ಆಚರಣೆಗಳು ಮತ್ತು ಗ್ರಾಮೀಣ ಪರಿಸರದ ಬಗ್ಗೆ ರನ್ನಿಂಗ್ ಕಾಮೆಂಟರಿ ಕೊಡುತ್ತಾ ಸಾಗಿದರು. ಅದು ಕಳೆದುಹೋದ ಕಾಲಗರ್ಭದಲ್ಲಿ ನುಸುಳುವ ನೆನಪುಗಳ ಮೆರವಣಿಗೆ ಎಂದೆನಿಸುತ್ತಿತ್ತು.
‘ನೋಡಿ ಭಟ್ರೇ, ಈ ಭಾಗದ ಭೂಮಿ ಮೊದಲಿಗೆ ಕೇವಲ ಒಣ ಬೇಸಾಯಕ್ಕೆ ಸೀಮಿತವಾಗಿತ್ತು. ಬಡ ರೈತರು ಮಳೆ ಬಂದರೆ ಮಾತ್ರ ಬಿತ್ತನೆ ಮಾಡುತ್ತಿದ್ದರು. ಈ ವರುಣಾ ನಾಲೆ ಬಂದ ಮೇಲೆ ಈ ಇಡೀ ಪ್ರದೇಶದ ಬದುಕು ಬದಲಾಯಿತು. ಇದು ಬರೀ ನೀರಲ್ಲ, ಇಲ್ಲಿನ ರೈತರ ಕಣ್ಣೀರು ಒರೆಸಿದ ಪವಾಡ’ ಎಂದು ವರುಣಾ ನಾಲೆ ಮತ್ತು ಕೃಷಿಯ ಬಗೆಗಿನ ವಿವರಗಳನ್ನು ವಿವರಿಸ ಲಾರಂಭಿಸಿದರು.
ಎಲ್ಲವೂ ಅವರ ಧ್ವನಿಯಲ್ಲಿ ಜೀವ ತಳೆಯುತ್ತಿದ್ದವು. ಮೈಸೂರಿನಿಂದ ಸುಮಾರು 23 ಕಿಲೋ ಮೀಟರ್ ದೂರದಲ್ಲಿರುವ, ವರುಣಾ ಹೋಬಳಿಯ ಸಿದ್ದರಾಮನಹುಂಡಿ ಸುಮಾರು 600 ರಿಂದ 700 ಮನೆಗಳಿರುವ ಒಂದು ಲವಲವಿಕೆಯ ಗ್ರಾಮ. ಆ ಊರಿಗೆ ಸಿದ್ದರಾಮಯ್ಯನವರ ಹೆಸರೇ ಜೀವಸೆಲೆ. ಸುತ್ತಲೂ ತೆಂಗು, ಕಬ್ಬು ಮತ್ತು ಭತ್ತದ ಗದ್ದೆಗಳಿಂದ ಆವೃತವಾದ ಅಪ್ಪಟ ಹಸಿರಿನ ಗ್ರಾಮೀಣ ಪರಿಸರ. ಒಬ್ಬ ಸಾಮಾನ್ಯ ರೈತ ಕುಟುಂಬದ ಬಾಲಕ ತನ್ನ ನೇರ, ದಿಟ್ಟ ಮತ್ತು ನಾಯಕತ್ವ ಗುಣಗಳಿಂದ ಮುಂದೆ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣದಲ್ಲಿ ತನ್ನ ಸುದೀರ್ಘ ನೆನಪಿನ ಹೆಜ್ಜೆಗಳನ್ನು ಮೂಡಿಸಿದ ಪಯಣಕ್ಕೆ ಈ ಸಿದ್ದರಾಮಯ್ಯನಹುಂಡಿಯ ಮಣ್ಣೇ ಸಾಕ್ಷಿ.
ಕಾರು ಮುಂದೆ ಸಾಗುತ್ತಿದ್ದಂತೆ ರಸ್ತೆಯ ದೃಶ್ಯಗಳು ಬದಲಾಗತೊಡಗಿದವು. ಪ್ರತಿ ನಾಲ್ಕೈದು ನಿಮಿಷ ಕ್ರಮಿಸುವುದರೊಳಗೆ ಒಂದೊಂದು ಪುಟ್ಟ ಹಳ್ಳಿ ಎದುರಾಗುತ್ತಿತ್ತು. ಸಿದ್ದರಾಮಯ್ಯನವರು ತಮ್ಮ ಗ್ರಾಮಕ್ಕೆ ಈ ರಸ್ತೆಯ ಬರುತ್ತಿದ್ದಾರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಹಳ್ಳಿಗಾಡಿನ ಮುಗ್ಧ ಜನ, ಯುವಕರು, ಮಹಿಳೆಯರು ಹಾಗೂ ಸ್ಥಳೀಯ ಮುಖಂಡರು ಧಾವಿಸಿ ಬಂದು ದಾರಿಗೆ ಅಡ್ಡಲಾಗಿ ನಿಂತು ವಾಹನವನ್ನು ತಡೆಯುತ್ತಿದ್ದರು.
ಕಾರು ನಿಲ್ಲುತ್ತಿದ್ದಂತೆ ಎಡೆ ಘೋಷಣೆಗಳು ಮುಗಿಲು ಮುಟ್ಟಿದವು. ಜನ ಮುಗಿಬಿದ್ದು ಅವರಿಗೆ ಏಲಕ್ಕಿ ಹಾರ, ರೇಷ್ಮೆ ಗೂಡಿನ ಹಾರಗಳನ್ನು ಹಾಕಿ, ತಲೆಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಕೃತಜ್ಞತೆ ಸಲ್ಲಿಸುತ್ತಿದ್ದರು. ಜತೆಗೆ ಕೆಲವರು ಪಾದಕ್ಕೆ ನಮಿಸಿ ತಮ್ಮ ಪ್ರೀತಿ ತೋರುತ್ತಿದ್ದರು. ಇನ್ನು ‘ಹೌದೋ ಹುಲಿಯಾ’ ಅಂತೂ ಸಹಜವಾಗಿ ಕೇಳಿ ಬರುತ್ತಿತ್ತು.
ಜನರ ಅಭಿಮಾನದ ಹಾರ ಸಮರ್ಪಣೆಯ ಭಾರಕ್ಕೆ ಸಿದ್ದರಾಮಯ್ಯನವರ ಕುತ್ತಿಗೆ ಜಗ್ಗಿದರೂ, ಅವರ ಮುಖದಲ್ಲಿನ ಮಂದಹಾಸ ನಳನಳಿಸುತ್ತಿತ್ತು. ಅಧಿಕಾರ ಕಳೆದುಕೊಂಡ ಮನುಷ್ಯನನ್ನು ಲೋಕ ಸಾಮಾನ್ಯವಾಗಿ ಮರೆತು ಬಿಡುತ್ತದೆ. ಆದರೆ ಇಲ್ಲಿ ಜನ ತಂಡೋಪತಂಡವಾಗಿ ನುಗ್ಗಿ ಬಂದು ಸಿದ್ದರಾಮಯ್ಯನವರ ಹಸ್ತ ಮುಟ್ಟಿ ಹೋಗುತ್ತಿದ್ದರು. ವೃದ್ಧೆಯೊಬ್ಬಳು ಓಡಿ ಬಂದು ಅವರ ಕೈ ಹಿಡಿದು ಕಣ್ಣೀರಾದಳು. ಆ ಜನಸ್ತೋಮದಲ್ಲಿ ರಾಜಕೀಯದ ಕೃತಕತೆ ಇರಲಿಲ್ಲ. ಅರ್ಜಿಗಳ ಹಾವಳಿಯಿರಲಿಲ್ಲ. ಪ್ರಭಾವ-ವಶೀಲಿಗೆ ಒತ್ತಾಯವಿರಲಿಲ್ಲ. ಬದಲಿಗೆ ಸಹಜ ಪ್ರೀತಿಯಿತ್ತು.
ಜನ ಕಾರಿನ ಕಿಟಕಿಯ ಬಳಿ ನುಗ್ಗಿ ಸಿದ್ದರಾಮಯ್ಯನವರ ಕೈಗಳನ್ನು ಹಿಡಿದು ತಮ್ಮ ಕಣ್ಣಿಗೆ ಒತ್ತಿಕೊಳ್ಳುತ್ತಿದ್ದರು. ಕೆಲವರು ಅವರ ಭುಜ ಮುಟ್ಟಿ, ‘ನೀವು ಯಾವತ್ತೂ ನಮಗೆ ಹುಲಿ ಅಣ್ಣ, ಯಾವುದೇ ಕಾರಣಕ್ಕೂ ನೀವು ಅಧಿಕಾರ ಹೋಯಿತೆಂದು ಬೇಸರ ಮಾಡಿಕೊಳ್ಳಬಾರದು, ಸೋಲು-ಗೆಲುವು ನಮಗೆ ಮುಖ್ಯವಲ್ಲ, ನಿಮ್ಮ ಬೆನ್ನ ಹಿಂದೆ ನಾವೆಲ್ಲ ಗಟ್ಟಿಯಾಗಿ ನಿಂತಿದ್ದೇವೆ.
ನೀವು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಲೇಬೇಕು. ನೀವಿಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಜೀವವಿಲ್ಲ. ನೀವು ಸದಾ ಲವಲವಿಕೆಯಿಂದ ಇರಬೇಕು’ ಎಂದು ಗಂಟಲು ಬಿಗಿದು ಒತ್ತಾಸೆ ವ್ಯಕ್ತಪಡಿಸುತ್ತಿದ್ದರು. ಅದೊಂದು ರಾಜಕೀಯದ ಜೈಕಾರವಾಗಿರಲಿಲ್ಲ, ಒಳಗಿನಿಂದ ಉಕ್ಕಿಬಂದ ಗಾಢ ಪ್ರೇಮದ ಬಿಕ್ಕಳಿಕೆಯಂತಿತ್ತು.
ಪದವಿ ಕಳೆದುಕೊಂಡ ನಂತರ ಸಾಮಾನ್ಯವಾಗಿ ರಾಜಕಾರಣಿಗಳ ಸುತ್ತ ಅಧಿಕಾರದ ಆಸೆ ಹೊತ್ತ ಹಿಂಬಾಲಕರ ದಂಡು ಕಡಿಮೆಯಾಗುವುದು ಸಹಜ. ಆದರೆ ಇಲ್ಲಿ ಕಂಡ ದೃಶ್ಯವೇ ಬೇರೆಯಾಗಿತ್ತು. ಅಧಿಕಾರವಿರಲಿ, ಇಲ್ಲದಿರಲಿ-ಸಿದ್ದರಾಮಯ್ಯ ಈ ಮಣ್ಣಿನ ಹೆಮ್ಮೆಯ ಕಣ್ಮಣಿ ಎಂಬುದು ಆ ಜನರ ಕಣ್ಣುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಳ್ಳಿಯ ಸಾಮಾನ್ಯ ರೈತನೊಬ್ಬ ತನ್ನ ಬರಿಗಾಲಿನಲ್ಲಿ ಓಡಿಬಂದು ಸಿದ್ದರಾಮಯ್ಯನವರ ಕೈಹಿಡಿದು ಬಿಕ್ಕಿಬಿಕ್ಕಿ ಅತ್ತ ಕ್ಷಣ, ರಾಜಕೀಯವೆಂಬುದು ಕೇವಲ ಮತಗಳ ಲೆಕ್ಕಾಚಾರವಲ್ಲ, ಅದು ಜನಸಾಮಾನ್ಯರ ಹೃದಯವನ್ನು ಗೆಲ್ಲುವ ಅಂತರಂಗದ ಕಲೆ ಎಂಬುದನ್ನು ಸಾರುತ್ತಿತ್ತು.
ಸಿದ್ದರಾಮಯ್ಯನವರೂ ಅಷ್ಟೇ, ಪ್ರತಿಯೊಬ್ಬರ ಕೈಕುಲುಕಿ, ‘ನಾನೇನು ಬೇಸರ ಮಾಡಿಕೊಂಡಿಲ್ಲ ಕಣ್ರಯ್ಯ, ನಿಮ್ಮ ಪ್ರೀತಿ ಇರುವಾಗ ನನಗೇನು ಕೊರತೆ?’ ಎಂದು ಧೈರ್ಯ ತುಂಬುತ್ತಾ ಮುಂದೆ ಸಾಗುತ್ತಿದ್ದರು. ಒಮ್ಮೆ ಅವರ ಕಡೆ ನೋಡಿದಾಗ ಅವರ ಕಣ್ಣಾಲಿಗಳು ತುಂಬಿದ್ದವು. ಸಿದ್ದರಾಮಯ್ಯ ನವರು ಆಪ್ತವಾಗಿ ತಮ್ಮ ಹಳ್ಳಿಯ ಪರಿಚಯ ಮಾಡಿಕೊಡತೊಡಗಿದರು.
‘ಇದು ನಮ್ಮ ಅಣ್ಣನ ಮನೆ, ಇಲ್ಲಿ ನನ್ನ ತಮ್ಮ ವಾಸಿಸುತ್ತಾನೆ. ಇದು ನಮ್ಮ ಪೂರ್ವಜರ ಜಮೀನು. ಆದರೆ ರಾಜಕೀಯಕ್ಕೆ ಬಂದ ಮೇಲೆ ಊರಲ್ಲಿದ್ದ ನನ್ನ ಪಾಲಿನ ಜಮೀನನ್ನೆಲ್ಲ ಅಣ್ಣ-ತಮ್ಮಂದಿರಿಗೇ ಬಿಟ್ಟು ಕೊಟ್ಟುಬಿಟ್ಟೆ. ಊರಲ್ಲಿ ನನ್ನದು ಅಂತ ಒಂದು ಸಣ್ಣ ಮನೆ ಇದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಸಿದ್ದರಾಮೇಶ್ವರ ಜಾತ್ರೆಗೆ ಬಂದಾಗಲೆಲ್ಲ ನಾನು ಉಳಿಯುವುದು ಆ ಹಳೆಯ ಮನೆಯಲ್ಲೇ. ಇದು ನನ್ನ ರಾಜಕೀಯ ಕ್ಷೇತ್ರವೂ ಹೌದು, ನನ್ನ ರಾಜಕೀಯ ಅಸ್ತಿತ್ವದ ಬೇರೂ ಹೌದು.
ಇಲ್ಲಿನ ಜನ ನನ್ನ ಮೇಲೆ ಇಟ್ಟಿರುವ ಪ್ರೀತಿ, ತೋರಿದ ವಿಶ್ವಾಸವನ್ನು ತೀರಿಸಲು ನನಗೆ ಇನ್ನು ಹತ್ತು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ’ ಎಂದಾಗ ಅವರ ಧ್ವನಿಯಲ್ಲಿ ಕೃತಜ್ಞತೆಯ ಮಹಾಪೂರವೇ ಹರಿದಂತಿತ್ತು. ಕೊನೆಗೂ ವಾಹನ ಸಿದ್ದರಾಮನಹುಂಡಿಯ ಪ್ರಮುಖ ಪ್ರವೇಶದ್ವಾರವನ್ನು ತಲುಪಿತು. ಅಲ್ಲಿ ಅವರಿಗೆ ನೀಡಿದ ಸ್ವಾಗತ ಕಲ್ಪನೆಗೂ ಮೀರಿದ್ದು.
ಊರಿನ ಯುವಕರು ಸಿದ್ದರಾಮಯ್ಯನವರನ್ನು ತಮ್ಮ ಸ್ವಂತ ವಾಹನದಿಂದ ಇಳಿಸಿ, ಮುಂಚಿತ ವಾಗಿಯೇ ಹೂವುಗಳಿಂದ ಶೃಂಗರಿಸಲಾಗಿದ್ದ ತೆರೆದ ಜೀಪಿನಲ್ಲಿ ಹತ್ತಿಸಿದರು. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಆರಂಭವಾಯಿತು. ನಾಸಿಕ್ ಡೋಲು, ತಮಟೆ ಸದ್ದು, ಕಹಳೆಯ ನಾದ, ಪಟಾಕಿ ಸದ್ದಿಗೆ ಇಡೀ ಗ್ರಾಮವೇ ಹುಚ್ಚೆದ್ದು ಕುಣಿಯುತ್ತಿತ್ತು. ನೂರಾರು ಯುವಕರು ವಾಹನದ ಮುಂದೆ ಬೈಕುಗಳಲ್ಲಿ ಧ್ವಜಗಳನ್ನು ಹಿಡಿದು ಜೈಕಾರ ಹಾಕುತ್ತಾ ಸಾಗುತ್ತಿದ್ದರು.
ಇಡೀ ಸಿದ್ದರಾಮನಹುಂಡಿ ಹಬ್ಬದ ವಾತಾವರಣದಲ್ಲಿ ಮಿಂದೆದ್ದಿತ್ತು. ಮೆರವಣಿಗೆ ಮುಖ್ಯವೃತ್ತಕ್ಕೆ ಬರುತ್ತಿದ್ದಂತೆ ಕ್ರೇನ್ಗೆ ಸೇಬು ಹಣ್ಣಿನ ಬೃಹತ್ ಹಾರಗಳ ಸ್ವಾಗತ. ಪ್ರತಿ ಮನೆಯ ಮುಂದೆ ಮಹಿಳೆಯರು ತಮ್ಮ ಊರಿನ ಮಗನನ್ನು ಕಣ್ತುಂಬಿಸಿಕೊಳ್ಳಲು ನಿಂತಿದ್ದರು. ಸಿದ್ದರಾಮಯ್ಯನವರು ಪ್ರತಿ ಮನೆ ಎದುರು ಕೈಮುಗಿಯುತ್ತಾ, ತಮ್ಮ ಬಾಲ್ಯದ ಗೆಳೆಯರನ್ನು ಹೆಸರು ಹಿಡಿದು ಕೂಗಿ ಕುಶಲ ಕ್ಷೇಮ ವಿಚಾರಿಸುತ್ತಿದ್ದರು.
‘ಲೇ ಮಾದ, ಚೆನ್ನಾಗಿದ್ದೀಯೇನೋ?, ಏನಮ್ಮ ಗೌರಮ್ಮ, ಕಾಲಿನ ನೋವು ವಾಸಿಯಾಯ್ತಾ?’ ಎಂದು ಅವರು ಸ್ಥಳೀಯರನ್ನು ವಿಚಾರಿಸುತ್ತಿದ್ದ ಆಪ್ತತೆ, ಅವರು ಆ ಊರಿನ ಜತೆ ಹೊಂದಿದ್ದ ಕರುಳಬಳ್ಳಿ ಸಂಬಂಧಕ್ಕೆ ಕನ್ನಡಿ ಹಿಡಿದಂತಿತ್ತು. ಜೀರ್ಣೋದ್ಧಾರಗೊಂಡ ದೇವಸ್ಥಾನದ ಆವರಣದಲ್ಲಿ ಪುನರ್ ಪ್ರತಿಷ್ಠಾಪನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ನಾದಸ್ವರ, ವೇದಮಂತ್ರಗಳ ಘೋಷದ ನಡುವೆ ಸಿದ್ದರಾಮಯ್ಯನವರು ಅತ್ಯಂತ ಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡರು. ದೇವಸ್ಥಾನದ ಪಕ್ಕದ ನಿರ್ಮಿಸಲಾಗಿದ್ದ ವಿಶಾಲವಾದ ಸಭಾ ಮಂಟಪದ ಕಡೆಗೆ ಹೆಜ್ಜೆ ಹಾಕಿದರು. ಸಾವಿರಾರು ಜನ ಆ ಬಿಸಿಲನ್ನು ಲೆಕ್ಕಿಸದೆ ತಮ್ಮ ನೆಚ್ಚಿನ ನಾಯಕನನ್ನು ನೋಡಲು, ಅವರ ಮಾತುಗಳನ್ನು ಕೇಳಲು ಕಿಕ್ಕಿರಿದು ನೆರೆದಿದ್ದರು. ವೇದಿಕೆಯ ಮೇಲೆ ಸಿದ್ದರಾಮಯ್ಯನವರ ಜತೆ ಅವರ ಪುತ್ರ ಹಾಗೂ ನಗರಾಭಿವೃದ್ಧಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಸಹ ಉಪಸ್ಥಿತರಿದ್ದರು.
ಡಾ.ಯತೀಂದ್ರ ಅವರು ಸೌಮ್ಯ ಸ್ವಭಾವದ ವ್ಯಕ್ತಿಯಾದರೂ, ತಂದೆಯಂತೆ ವರುಣಾ ಕ್ಷೇತ್ರದ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತವರು. ಈ ಹಿಂದೆ ಇದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಡಾ.ಯತೀಂದ್ರ ಅವರು, ನಂತರ ತಂದೆಗಾಗಿ ಕ್ಷೇತ್ರವನ್ನು ತ್ಯಾಗ ಮಾಡಿದ ಮಗ. ಅವರು ಜನರ ಕಷ್ಟಸುಖಗಳಿಗೆ ಸ್ಪಂದಿಸಿ ತಮ್ಮದೇ ಆದ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.
ಡಾ.ಯತೀಂದ್ರ ಅವರಿಗೂ ಊರಿನ ಪ್ರತಿಯೊಂದು ಕುಟುಂಬ, ಪ್ರತಿ ಹಳ್ಳಿಯ ಮುಖಂಡರು ಪರಿಚಿತ ರಾಗಿದ್ದು, ಜನರೊಂದಿಗಿನ ಅವರ ಬಾಂಧವ್ಯ ಸಹಜ ಮತ್ತು ಅಷ್ಟೇ ಗಾಢವಾಗಿರುವಂತೆ ಕಂಡಿತು. ವೇದಿಕೆಯಲ್ಲಿ ತಮ್ಮ ಪಕ್ಕ ಆಸೀನರಾಗುವಂತೆ ಸಿದ್ದರಾಮಯ್ಯನವರು ಕರೆದಾಗ ಸಂಕೋಚಗೊಂಡೆ. ಆದರೂ ಒಬ್ಬ ಪತ್ರಕರ್ತನಾಗಿ ದೂರದಿಂದ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುವುದು ಒಂದು ಬಗೆಯಾದರೆ, ಇಂಥ ಜೀವಂತ ಜನಪ್ರವಾಹದ ನಡುವೆ, ಜನರ ಅಂತರಂಗದ ಬಡಿತವನ್ನು ಹತ್ತಿರದಿಂದ ಗ್ರಹಿಸುವುದು ವಿಶಿಷ್ಟ ಅನುಭವ ಎಂಬ ಮನಸ್ಸಿನೊಂದಿಗೆ ಹೋಗಿ ಕುಳಿತೆ. ವೇದಿಕೆಯ ಮೇಲಿಂದ ಕಾಣುತ್ತಿದ್ದ ಜನಸಾಗರದ ಕಣ್ಣುಗಳಲ್ಲಿ ನಾಯಕನ ಬಗೆಗಿನ ಅಪಾರ ಪ್ರೀತಿ, ಕೃತಜ್ಞತೆ ಮತ್ತು ಭರವಸೆಯ ಕಿಡಿಗಳು ಎದ್ದು ಕಾಣುತ್ತಿದ್ದವು.
ಸಿದ್ದರಾಮಯ್ಯನವರು ಮಾತಾಡಲು ಎದ್ದು ನಿಂತಾಗ ದೀರ್ಘ ಕರತಾಡನ. ಕೈಯೆತ್ತಿ ಶಾಂತರಾಗಿ ಎಂದು ಸನ್ನೆ ಮಾಡಿದರೂ ಅಭಿಮಾನದ ಅಲೆ ತಣಿಯಲು ಸಮಯ ತೆಗೆದುಕೊಂಡಿತು. ಸಿದ್ದರಾಮಯ್ಯನವರು ತಮ್ಮ ಎಂದಿನ ಖಡಕ್ ಹಾಗೂ ಗಂಭೀರ ಧ್ವನಿಯಲ್ಲಿ ಭಾಷಣ ಆರಂಭಿಸಿ, ‘ನನ್ನ ಹುಟ್ಟೂರಾದ ಸಿದ್ದರಾಮನಹುಂಡಿಯ ಮಣ್ಣಿಗೆ, ನನ್ನನ್ನು ಹೆತ್ತು ಹೊತ್ತು ಬೆಳೆಸಿದ ಈ ಜನರಿಗೆ ನಾನು ಯಾವತ್ತೂ ಚಿರಋಣಿ.
ಈ ಹಳ್ಳಿಯ ಬೀದಿಗಳಲ್ಲಿ ಧೂಳು ಮೆತ್ತಿಕೊಂಡು ಬೆಳೆದ ಈ ಸಿದ್ದರಾಮನಿಗೆ, ರಾಜ್ಯದ ಮುಖ್ಯಮಂತ್ರಿ ಯಾಗಿ ವಿಧಾನಸೌಧದಲ್ಲಿ ಕುಳಿತು ಕೋಟ್ಯಂತರ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನಿಮ್ಮ ಆಶೀರ್ವಾದದಿಂದ’ ಎಂದು ಅವರು ಗದ್ಗದಿತರಾಗಿ ನುಡಿದಾಗ ಸಭೆಯಲ್ಲಿ ಭಾರಿ ಚಪ್ಪಾಳೆ. ತಮ್ಮ ಬಾಲ್ಯದ ಕಷ್ಟಗಳು, ತಂದೆ-ತಾಯಿಯ ತ್ಯಾಗ ಮತ್ತು ಈ ಹಳ್ಳಿಯ ಜನರು ತಮಗೆ ನೀಡಿದ ಬೆಂಬಲವನ್ನು ಅವರು ಒಂದೊಂದಾಗಿ ನೆನಪಿಸಿಕೊಂಡರು.
‘ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ತಾನು ಹುಟ್ಟಿದ ಮಣ್ಣು, ಆಡಿ ಬೆಳೆದ ಹಳ್ಳಿ ಮತ್ತು ಬೆನ್ನಿಗೆ ನಿಂತ ಜನ ಎಂದಿಗೂ ಶಾಶ್ವತ. ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಅನ್ನಭಾಗ್ಯ, ಕ್ಷೀರ ಭಾಗ್ಯದಂಥ ಯೋಜನೆಗಳ ಹಿಂದಿನ ಪ್ರೇರಣೆ ನನ್ನ ಬಾಲ್ಯದಲ್ಲಿ ನಾನು ಕಂಡ ಬಡತನ ಮತ್ತು ಹಸಿವು. ಅಧಿಕಾರ ಇರಲಿ ಇಲ್ಲದಿರಲಿ, ಸಿದ್ದರಾಮಯ್ಯ ಯಾವತ್ತೂ ಬಡವರ, ಶೋಷಿತರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತಾನೆ’ ಎಂದಾಗ ಜನಸ್ತೋಮ ಹರ್ಷೋದ್ಗಾರದಿಂದ ಸ್ಪಂದಿಸಿತು.
ಅಧಿಕಾರದ ಕುರ್ಚಿಗಳು ಮನುಷ್ಯನಿಗೆ ಬಿರುದು-ಬಾವಲಿಗಳನ್ನು ತಂದುಕೊಡಬಹುದು, ಆದರೆ ಹುಟ್ಟೂರಿನ ಜನ ಹೀಗೆ ಕಣ್ಣಲ್ಲಿ ನೀರು ತುಂಬಿಕೊಂಡು, ‘ನೀವು ನಮ್ಮವರು’ ಎಂದು ಎದೆಗವಚಿ ನಿಲ್ಲುವ ಆ ಒಂದು ನೋಟವಿದೆಯಲ್ಲ, ಅದಕ್ಕಿಂತ ದೊಡ್ಡ ಸಿಂಹಾಸನ ಜಗತ್ತಿನಲ್ಲಿ ಯಾವುದೂ ಇರಲಾರದು.
ಮತ್ತೆ ಮೈಸೂರಿನ ಕಡೆಗೆ ಹಿಂದಿರುಗಲು ಕಾರು ಹತ್ತಿದಾಗಲೂ ಜನರು ವಾಹನವನ್ನು ಸುತ್ತುವರೆದು ಕೈಬೀಸಿ ಬೀಳ್ಕೊಟ್ಟರು. ಕಾರಿನಲ್ಲಿ ಕುಳಿತ ಸಿದ್ದರಾಮಯ್ಯನವರ ಮುಖದಲ್ಲಿ ಆಯಾಸದ ಬದಲು ಒಂದು ಸಂತೃಪ್ತಿಯ ನಗುವನ್ನು ಅವರ ಪಕ್ಕದಲ್ಲಿಯೇ ಕುಳಿತ ನಾನು ಗಮನಿಸಿದೆ.
ಅಧಿಕಾರದ ಹಮ್ಮು-ಬಿಮ್ಮುಗಳನ್ನೆಲ್ಲ ಕಳಚಿಟ್ಟು, ತನ್ನ ಅಸ್ತಿತ್ವದ ಮೂಲಕ್ಕೆ ಮರಳಿ, ಅಲ್ಲಿನ ಜನರಿಂದ ಪ್ರೀತಿಯ ಶಕ್ತಿ ತುಂಬಿಸಿಕೊಂಡು ಮರಳುತ್ತಿದ್ದ ಆ ಜನನಾಯಕನ ಪಯಣವು, ರಾಜಕಾರಣದ ನಿಜವಾದ ಅರ್ಥ ಜನಾನುರಾಗದಲ್ಲಿದೆ ಎಂಬುದನ್ನು ಮನದಟ್ಟು ಮಾಡಿ ಕೊಟ್ಟಿತ್ತು. ಅಷ್ಟೊತ್ತಿಗೆ ಮಧ್ಯಾಹ್ನ ಒಂದೂಮುಕ್ಕಾಲು.
ಸಿದ್ದರಾಮನಹುಂಡಿಯ ಜನಸಾಗರದ ಪ್ರೀತಿ, ಧೂಳು, ಜೈಕಾರ ಮತ್ತು ಧ್ವನಿವರ್ಧಕಗಳ ಗದ್ದಲದ ಬೆನ್ನಲ್ಲೇ ವಾಹನ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಐತಿಹಾಸಿಕ ಸುತ್ತೂರು ಮಠದ ಕಡೆಗೆ ಮುಖ ಮಾಡಿತು. ಅಲ್ಲಿ ಮಧ್ಯಾಹ್ನದ ಭೋಜನದ ಏರ್ಪಾಟಾಗಿತ್ತು. ಮಠದೊಳಗೆ ಕಾಲಿಡುತ್ತಿದ್ದಂತೆ ಕಣ್ಣಿಗೆ ಬೀಳುವುದು ಸುತ್ತೂರು ಮಠಾಧೀಶರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಪ್ರಶಾಂತ ಮುಖಮುದ್ರೆ. ಆ ಮುಖದಲ್ಲಿ ಯಾವತ್ತೂ ಮಾಸದ, ಎಂಥವರನ್ನೂ ತಣಿಸುವ ಒಂದು ಚಿಗುರು, ನವಿರು ಮಂದಹಾಸ.
ಸಾರ್ವಜನಿಕ ಜೀವನದಲ್ಲಿ ಸುತ್ತೂರು ಶ್ರೀಗಳ ಸ್ಥಾನ ಅಸಾಧಾರಣವಾದದ್ದು. ರಾಜ್ಯದಲ್ಲಿ ಎಡ-ಬಲ, ಆಡಳಿತ-ವಿರೋಧ, ಜಾತಿ-ಮತಗಳ ತೀವ್ರ ಕಂದಕಗಳ ನಡುವೆಯೂ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜತೆ ಏಕಕಾಲಕ್ಕೆ ಸಮಾನ ಅಂತರ ಹಾಗೂ ಆಪ್ತತೆಯನ್ನು ಉಳಿಸಿಕೊಂಡಿ ರುವ ಅಪರೂಪದ ಧಾರ್ಮಿಕ ವ್ಯಕ್ತಿತ್ವ ಅವರದು. ಹಾಗಾಗಿಯೇ ಅವರು ‘ಜಗದ್ಗುರು’ ಎಂಬ ಅಭಿಧಾನಕ್ಕೆ ನ್ಯಾಯ ಒದಗಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಯಾವುದೇ ಪಕ್ಷದ ಅಗ್ರ ನಾಯಕರಾಗಿರಲಿ-ಮುಖ್ಯಮಂತ್ರಿ ಗಳಾಗಲಿ ಅಥವಾ ಸಾಮಾನ್ಯ ಕಾರ್ಯಕರ್ತರಾಗಲಿ-ಸುತ್ತೂರು ಶ್ರೀಗಳ ಸನ್ನಿಧಾನಕ್ಕೆ ಬಂದಾಗ ಎಲ್ಲರೂ ಭಕ್ತರಾಗಿ ತಲೆಬಾಗುತ್ತಾರೆ. ಅವರ ಈ ‘ಸಮಸಂಬಂಧ’ವು ಕೇವಲ ರಾಜತಾಂತ್ರಿಕ ಜಾಣ್ಮೆ ಯಲ್ಲ, ಅದು ವರ್ಷಗಳ ಸಾರ್ವಜನಿಕ ಒಡನಾಟದಿಂದ ಗಳಿಸಿಕೊಂಡ ನೈತಿಕ ಪ್ರಾಮಾಣಿಕತೆ. ಜನರನ್ನು ನಿಭಾಯಿಸುವ ಅಸಲಿ ಕಲೆಯನ್ನು ಶ್ರೀಗಳಿಂದಲೇ ಮತ್ತು ಸುತ್ತೂರು ಮಠದಿಂದಲೇ ಕಲಿಯಬೇಕು.
ದಿನವೊಂದಕ್ಕೆ ನೂರಾರು ಜನ, ನಾನಾ ಬಗೆಯ ಸಮಸ್ಯೆಗಳು, ರಾಜಕೀಯ ಪಿತೂರಿಗಳು, ಕೌಟುಂಬಿಕ ತಕರಾರುಗಳು, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಗಳು ಅವರ ಮುಂದೆ ಬಂದು ಬೀಳುತ್ತವೆ. ಆದರೆ ಶ್ರೀಗಳ ಎದುರು ಕುಳಿತ ಯಾರೊಬ್ಬರಿಗೂ ಅವರು ಅವಸರದಲ್ಲಿದ್ದಾರೆಂದಾಗಲೀ ಅಥವಾ ಯಾರ ಮಾತನ್ನೂ ಉಪೇಕ್ಷಿಸುತ್ತಿದ್ದಾರೆಂದಾಗಲೀ ಅನ್ನಿಸುವುದೇ ಇಲ್ಲ.
ಎದುರಿಗಿರುವ ವ್ಯಕ್ತಿ ಎಷ್ಟೇ ಆವೇಶದಿಂದ, ಆತಂಕದಿಂದ ಮಾತನಾಡಿದರೂ ಸ್ವಾಮೀಜಿಗಳು ಕಣ್ಣಲ್ಲಿ ಕಣ್ಣಿಟ್ಟು, ಅತ್ಯಂತ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಮಾತನಾಡುವುದಕ್ಕಿಂತ ಆಲಿಸುವುದರ ಮನುಷ್ಯನ ಅರ್ಧ ಭಾರ ಇಳಿಯುತ್ತದೆ ಎಂಬ ಮನೋವೈಜ್ಞಾನಿಕ ಸತ್ಯ ಸ್ವಾಮೀಜಿಯವರಿಗೆ ಕರಗತವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಸುತ್ತೂರು ಶ್ರೀಗಳು ವಿವಾದಗಳು ಮತ್ತು ರಾಜಕೀಯ ಗೊಂದಲಗಳಿಂದ ಸದಾ ದೂರ. ‘ಹಿಡಿತ ತಪ್ಪದ ಮೌನ’ ಮತ್ತು ‘ಸಮಚಿತ್ತದ ಮಾತು’ಗಳಿಂದಲೇ ತೆರೆಮರೆಯಲ್ಲಿ ಎಂಥಾ ಬಿಕ್ಕಟ್ಟನ್ನಾದರೂ ಶಮನ ಮಾಡುವ ಅದ್ಭುತ ಕಲೆ ಅವರಲ್ಲಿದೆ. ಅದಕ್ಕಾಗಿಯೇ ಅಧಿಕಾರ ದಲ್ಲಿರುವ ನಾಯಕರಿರಲಿ, ಅಧಿಕಾರ ಕಳೆದುಕೊಂಡ ಮಾಜಿಗಳಿರಲಿ-ಎಲ್ಲರಿಗೂ ಸ್ವಾಮೀಜಿಗಳ ಮುಂದೆ ಹೋಗಿ ತಮ್ಮ ಅಂತರಂಗವನ್ನು ಹೇಳಿಕೊಂಡರೆ ಸಾಕು, ಮನಸ್ಸಿಗೆ ಏನೋ ಅನಿರ್ವಚನೀಯ ಸಮಾಧಾನ. ಅವರ ಸನ್ನಿಧಿಯಲ್ಲಿ ಯಾವ ರಾಜಕೀಯ ಪೂರ್ವಗ್ರಹಗಳೂ ಬಾಲ ಬಿಚ್ಚುವುದಿಲ್ಲ. ಕೇಳಿಸಿದರೂ ಕೇಳದಂತೆ ಹೇಳುವ ಚಿಕ್ಕ ಕಿವಿಮಾತು, ನಡುನಡುವೆ ಅಪರೂಪವಾಗಿ ವ್ಯಕ್ತಿಗಳ ಕುರಿತು ಹೇಳುವ ಮೆಚ್ಚುಗೆಯ ಮಾತು, ಬೆನ್ನಿನ ಮೇಲೆ ಆಶೀರ್ವದಿಸುವಂತೆ ಇಡುವ ಆ ಕೈ, ಎಲ್ಲ ಗೊಂದಲಗಳ ನಡುವೆಯೂ ಮನುಷ್ಯನಿಗೆ ಹೊಸ ಸಮಾಧಾನ ಮತ್ತು ನೆಮ್ಮದಿಯನ್ನು ತಂದುಕೊಡುತ್ತದೆ.
ಅಂದು ಮಧ್ಯಾಹ್ನವೂ ಅಷ್ಟೇ. ಬಿಸಿಲಿನ ಬಳಲಿಕೆ, ಜನಸಾಗರದ ನೂಕುನುಗ್ಗಲಿನ ನಂತರ ಸುತ್ತೂರು ಮಠದ ಸಭಾಂಗಣದಲ್ಲಿ ಕುಳಿತು, ಶ್ರೀಗಳ ಮೃದು ನುಡಿಗಳ ನಡುವೆ ಸ್ವೀಕರಿಸಿದ ಆ ಪ್ರಸಾದ ಭೋಜನ ಇಡೀ ದಿನದ ಆಯಾಸವನ್ನೆಲ್ಲ ಮರೆಸಿ ಒಂದು ಅಪರೂಪದ ನೆಮ್ಮದಿಯನ್ನು ಹೊದಿಸಿತ್ತು. ಆ ಭಾವದೊಂದಿಗೆ ಬೆಂಗಳೂರಿನ ಕಡೆ ಹೊರಟೆ.