ಒಂದೊಳ್ಳೆ ಮಾತು
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಏಕಾದಶಿ ದಿನದಂದು ಉಪವಾಸ ಮಾಡಿ ವಿಷ್ಣುವನ್ನು ಆರಾಧಿಸಿದರೆ ಏಳೇಳು ಜನ್ಮಗಳ ಪಾಪ ಕಳೆದು, ಪಿತೃದೋಷ ನಿವಾರಣೆ ಆಗಿ ಮೋಕ್ಷ ಸಂಪಾದನೆ ಆಗುತ್ತದೆ. ಇಂಥ ಪುಣ್ಯದಿನವೇ ವೈಕುಂಠ ಏಕಾದಶಿ. ಸೂರ್ಯನು ದಕ್ಷಿಣಾಯನದಿಂದ ಉತ್ತರಾ ಯಣಕ್ಕೆ ಪ್ರವೇಶಿಸುವ ಮೊದಲು ಪ್ರತಿ ವರ್ಷ ಬರುವ ಈ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ.
ಮಹಾವಿಷ್ಣುವು ನಿದ್ರೆಯಿಂದ ಎಚ್ಚರಾಗಿ ಮುಕ್ಕೋಟಿ ದೇವತೆಗಳೊಂದಿಗೆ ಗರುಡ ವಾಹನನಾಗಿ ಭೂಲೋಕಕ್ಕೆ ಬಂದು ಭಕ್ತರಿಗೆ ದರ್ಶನ ಕೊಡುವ ಪುಣ್ಯದಿನ ಇಂದು. ಆದ್ದರಿಂದ ಈ ಏಕಾದಶಿ ಯನ್ನು ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ. ಈ ಶುಭದಿನ ಸ್ವರ್ಗದ ಬಾಗಿಲು ತೆಗೆದಿರು ತ್ತದೆ ಎಂಬ ನಂಬಿಕೆ ಇದೆ.
ವಿಶೇಷವಾಗಿ ಈ ‘ಏಕಾದಶಿ’ಯಂದು ವಿಷ್ಣುವಿನ ದೇವಾಲಯಗಳಲ್ಲಿ ಉತ್ತರ ದ್ವಾರಕ್ಕೆ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡುತ್ತಾರೆ. ಈ ಮೂಲಕ ಭಕ್ತರಿಗೆ ಉತ್ತರ ದ್ವಾರದ ಮೂಲಕ ಭಗವಂತನ ದರ್ಶನ ಕಲ್ಪಿಸಿರುತ್ತಾರೆ.
ಈ ವರ್ಷ ವೈಕುಂಠ ಏಕಾದಶಿಯನ್ನು ಡಿ.30 ರಂದು, ಇನ್ನು ಕೆಲವರು ಡಿ.31ರಂದು ಆಚರಿಸುತ್ತಾರೆ. ವೈಕುಂಠ ಏಕಾದಶಿಯಂದು ಸೂರ್ಯೋದಯಕ್ಕೂ ಮೊದಲು ಎದ್ದು ಸ್ನಾನಾದಿ ನಿತ್ಯಕರ್ಮ ಗಳನ್ನು ಮುಗಿಸಿ, ವಿಷ್ಣು-ರಾಮ-ಕೃಷ್ಣ-ವೆಂಕಟೇಶ್ವರರ ಫೋಟೋ ಅಥವಾ ವಿಗ್ರಹಕ್ಕೆ ತುಳಸಿ ಪತ್ರೆ ಹಾಗೂ ಹೂವಿನಿಂದ ಪೂಜೆ ಸಲ್ಲಿಸಿ, ತುಪ್ಪ-ಸಕ್ಕರೆ ಅಥವಾ ಬೆಲ್ಲ ಹಾಕಿದ ಅವಲಕ್ಕಿ, ಸಜ್ಜಿಗೆ, ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
ಇದನ್ನೂ ಓದಿ: Roopa Gururaj Column: ಸನ್ಯಾಸಿಯ ಮಾತಿನಿಂದ ಪಾಠ ಕಲಿತ ರಾಜ
‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ತಾರಕಮಂತ್ರ ಜಪ, ವಿಷ್ಣು ಸಹಸ್ರನಾಮ ಪಠಣ ಗಳು ಈ ದಿನದಂದು ವಿಶೇಷ ಫಲ ನೀಡುತ್ತವೆ. ವರ್ಷಪೂರ್ತಿ ಏಕಾದಶಿ ವ್ರತ ಮಾಡದವರೂ ಈ ಒಂದು ದಿನ ವ್ರತ ಮಾಡಿದರೆ ಅಪಾರ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಪೌರಾಣಿಕ ಕಥೆಯೊಂದು ವೈಕುಂಠ ಏಕಾದಶಿಯ ಮಹಿಮೆಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ದ್ವಾಪರ ಯುಗದಲ್ಲಿ ಗೋಕುಲದ ನಂದಗೋಪನು ಏಕಾದಶಿ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸು ತ್ತಿದ್ದನು. ಒಮ್ಮೆ ದ್ವಾದಶಿ ಪಾರಣೆಗಾಗಿ ಯಮುನೆಯಲ್ಲಿ ಸ್ನಾನಕ್ಕೆ ಹೋದಾಗ, ವರುಣನ ಸೇವಕ ನೊಬ್ಬ ಅeನದಿಂದ ನಂದಗೋಪನನ್ನು ವರುಣಲೋಕಕ್ಕೆ ಕರೆದೊಯ್ದನು.
ಗೋಪಾಲಕರು ಆತಂಕಗೊಂಡಾಗ, ಶ್ರೀಕೃಷ್ಣನು ಸ್ವತಃ ವರುಣ ಲೋಕಕ್ಕೆ ತೆರಳಿ ತನ್ನ ದಿವ್ಯರೂಪ ವನ್ನು ತೋರಿಸಿ, ವರುಣನಿಂದ ತಂದೆಯನ್ನು ಮರಳಿ ಕರೆತಂದನು.ನಂದಗೋಪನು ವರುಣ ಲೋಕದ ವೈಕುಂಠ ಸದೃಶ ದರ್ಶನವನ್ನು ವಿವರಿಸಿದಾಗ, ಗೋಪಾಲಕರು ತಮಗೂ ಆ ದರ್ಶನ ಬೇಕೆಂದು ಕೋರಿದರು. ಆಗ ಶ್ರೀಕೃಷ್ಣನು ಯಮುನೆಯ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ, ತನ್ನ ವೈಕುಂಠ ಸ್ವರೂಪವನ್ನು ಎಲ್ಲರಿಗೂ ತೋರಿಸಿದನು. ಈ ದಿವ್ಯದರ್ಶನವು ನಡೆದ ದಿನವೇ ವೈಕುಂಠ ಏಕಾದಶಿ ಎಂದು ಪ್ರಸಿದ್ಧಿಯಾಯಿತು. ಇದೇ ಕಾರಣದಿಂದ ತಿರುಪತಿಯನ್ನು ‘ಭೂ ವೈಕುಂಠ’ ಎಂದು ಕರೆಯಲಾಗುತ್ತದೆ.
ಇನ್ನೊಂದು ಪೌರಾಣಿಕ ಕಥೆಯಂತೆ, ಈ ಏಕಾದಶಿಯನ್ನು ‘ಪುತ್ರದಾ ಏಕಾದಶಿ’ ಎಂದೂ ಕರೆಯು ತ್ತಾರೆ. ಭದ್ರಾಪುರದ ರಾಜ ಸುಕೇತು ಮತ್ತು ರಾಣಿ ಚಂಪಕರಿಗೆ ಸಂತಾನವಿರಲಿಲ್ಲ. ದುಃಖದಿಂದ ಕಾಡಿಗೆ ತೆರಳಿದ ರಾಜನು, ಅಲ್ಲಿ ವಿಶ್ವದೇವತೆಗಳ ರೂಪದಲ್ಲಿ ಬಂದ ಋಷಿಗಳನ್ನು ಭೇಟಿಯಾದನು. ಅವರ ಸಲಹೆಯಂತೆ ಪುತ್ರದ ಏಕಾದಶಿ ವ್ರತವನ್ನು ನಿಷ್ಠೆಯಿಂದ ಆಚರಿಸಿದ ಫಲವಾಗಿ, ರಾಜ ದಂಪತಿಗೆ ಪುತ್ರ ಸಂತಾನ ಲಭಿಸಿತು.
ಈ ಕಾರಣದಿಂದಲೇ ಈ ವ್ರತವು ಸಂತಾನ ಪ್ರದ, ಮೋಕ್ಷದಾಯಕ ಎಂದು ಪ್ರಸಿದ್ಧಿಯಾಗಿದೆ. ವೈಕುಂಠ ಏಕಾದಶಿ ದಿನ ವ್ರತ ಮಾಡದವರೂ ವ್ರತಕಥೆಯನ್ನು ಭಕ್ತಿಯಿಂದ ಕೇಳಿದರೆ, ಅಶ್ವಮೇಧ ಯಾಗದ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಒಂದು ತುಳಸಿ ಪತ್ರೆಯೊಂದಿಗೆ ಮಾಡಿದ ಪೂಜೆಯೂ ಸಾವಿರ ಯಾಗಗಳ ಫಲ ನೀಡುತ್ತದೆ ಎಂದು ಶಾಸಗಳು ಹೇಳುತ್ತವೆ. ಈ ದಿವ್ಯದಿನವು ನಿಮ್ಮೆಲ್ಲರ ಜೀವನದಲ್ಲಿ ಶಾಂತಿ, ಆರೋಗ್ಯ, ಸೌಭಾಗ್ಯ ಮತ್ತು ವಿಷ್ಣುಕೃಪೆಯನ್ನು ಸದಾ ತರಲಿ.