ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಸರಳೀಕೃತ ತೆರಿಗೆ: ವಿಕಸಿತ ಭಾರತಕ್ಕೆ ದಿಟ್ಟಹೆಜ್ಜೆ !

ತೆರಿಗೆ ಇಳಿಕೆಯಿಂದಾಗಿ ಸರಕಾರಗಳ ಬೊಕ್ಕಸಕ್ಕೆ 84000 ಕೋಟಿ ರುಪಾಯಿಗಳಷ್ಟು ನಷ್ಟ ಆಗಬಹು ದೆಂದು ಅಂದಾಜಿಸಲಾಗಿದ್ದರೂ ಸರಕಾರದ ವಿಶ್ಲೇಷಣೆಗಳ ಪ್ರಕಾರ, ಅದು ಸುಮಾರು 48000 ಕೋಟಿ ಯಾಗಿದೆ. ತಿಂಗಳಿಗೆ ಸರಾಸರಿ 1.55 ಲಕ್ಷ ಕೋಟಿ ರುಪಾಯಿಗಳ ಆದಾಯವಿರುವುದರಿಂದ ಮತ್ತು ‘ಜನರ ಹಿತ ಕಾಪಾಡುವ ಧ್ಯೇಯ’ದ ಮುಂದೆ ಇದು ಸಣ್ಣ ಮೊತ್ತ!

ಸರಳೀಕೃತ ತೆರಿಗೆ: ವಿಕಸಿತ ಭಾರತಕ್ಕೆ ದಿಟ್ಟಹೆಜ್ಜೆ !

-

Ashok Nayak Ashok Nayak Sep 6, 2025 11:00 AM

ನವಪರ್ವ

ರವೀ ಸಜಂಗದ್ದೆ

ಜನಸಾಮಾನ್ಯರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಸರಳೀಕೃತ ಮತ್ತು ಅಗ್ಗದ ತೆರಿಗೆ ವ್ಯವಸ್ಥೆಯನ್ನು ಘೋಷಿಸಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಜನಸಾಮಾನ್ಯ ರು, ಮಧ್ಯಮ ಆದಾಯದ ಕುಟುಂಬಗಳು, ರೈತ ಸಮುದಾಯ, ಸಣ್ಣ ಉದ್ದಿಮೆದಾರರು ಪ್ರಯೋಜನ ಪಡೆಯಲಿದ್ದಾರೆ.

2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವ ಸಂಕಲ್ಪದೊಂದಿಗೆ ನಮ್ಮ ಕೇಂದ್ರ ಸರಕಾರವು ಕಾಲಕಾಲಕ್ಕೆ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಇದರ ಜತೆಗೆ, 2038ರ ವೇಳೆಗೆ ಅಮೆರಿಕವೂ ಸೇರಿದಂತೆ ಇತರ ದೇಶಗಳನ್ನು ಹಿಂದಿಕ್ಕಿ ಜಗತ್ತಿನ ಎರಡನೆಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿನ ತಯಾರಿ ಮತ್ತು ಕಾರ್ಯತಂತ್ರ ಈಗಾಗಲೇ ಜಾರಿ ಯಲ್ಲಿದೆ.

ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಬಹುತೇಕ ದಿನಬಳಕೆಯ ವಸ್ತುಗಳ ಮೇಲಿನ ತೆರಿಗೆ ಯನ್ನು ಕಡಿತಗೊಳಿಸುನ ಮೂಲಕ ನವರಾತ್ರಿಯ ಸಂಭ್ರಮವನ್ನು ಜಿಎಸ್‌ಟಿ ಮಂಡಳಿ ಹೆಚ್ಚಿಸಿದೆ. ಈ ಸರಕು ಮತ್ತು ಸೇವಾ ತೆರಿಗೆಯ ಕಡಿತವನ್ನು ‘ಸ್ವಾತಂತ್ರ್ಯೋತ್ತರ ಭಾರತದ ಅತಿ ದೊಡ್ಡ ಸುಧಾರಣೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ತೆರಿಗೆ ಇಳಿಕೆಯಿಂದಾಗಿ ಸರಕಾರಗಳ ಬೊಕ್ಕಸಕ್ಕೆ 84000 ಕೋಟಿ ರುಪಾಯಿಗಳಷ್ಟು ನಷ್ಟ ಆಗಬಹು ದೆಂದು ಅಂದಾಜಿಸಲಾಗಿದ್ದರೂ ಸರಕಾರದ ವಿಶ್ಲೇಷಣೆಗಳ ಪ್ರಕಾರ ಅದು ಸುಮಾರು 48000 ಕೋಟಿ ಯಾಗಿದೆ. ತಿಂಗಳಿಗೆ ಸರಾಸರಿ 1.55 ಲಕ್ಷ ಕೋಟಿ ರುಪಾಯಿಗಳ ಆದಾಯ ವಿರುವು ದರಿಂದ ಮತ್ತು ‘ಜನರ ಹಿತ ಕಾಪಾಡುವ ಧ್ಯೇಯ’ದ ಮುಂದೆ ಇದು ಸಣ್ಣ ಮೊತ್ತ!

ಇದನ್ನೂ ಓದಿ: Ravi Sajangadde Column: ಮತಚೌರ್ಯ ತಿದ್ದುವ ಮಹತ್ಕಾರ್ಯವೀಗ ಅನಿವಾರ್ಯ !

ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಖರೀದಿ, ವಹಿವಾಟು ವೃದ್ಧಿಯು ಈ ಮೊತ್ತವನ್ನು ಸರಿದೂಗಿಸಬಹುದು ಎನ್ನುವುದು ಸದ್ಯದ ನಿರೀಕ್ಷೆ. ಒಟ್ಟಿನಲ್ಲಿ ನಿರಂತರ ಬೆಲೆ ಏರಿಕೆ ಮತ್ತು ದಿನಬಳಕೆಯ ವಸ್ತುಗಳ ದುಬಾರಿ ದರಗಳಿಂದ ಹೈರಾಣಾಗಿದ್ದ ದೇಶದ ನಾಗರಿಕರು ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಈ ನವೀಕೃತ ಮತ್ತು ಕಡಿತಗೊಂಡ/ಶೂನ್ಯಗೊಂಡ ತೆರಿಗೆ ದರಗಳು ನವರಾತ್ರಿಯ ಸಂಭ್ರಮದ ಮೊದಲ ದಿನವಾದ ಇದೇ ಸೆಪ್ಟೆಂಬರ್ 22ರಿಂದ ಜಾರಿಯಾಗಲಿವೆ. ಸ್ವಾತಂತ್ರ್ಯೋತ್ಸವದ ಭಾಷಣ ದಲ್ಲಿ ಕೆಂಪುಕೋಟೆಯಿಂದ ಮಾತನಾಡುವಾಗ ನರೇಂದ್ರ ಮೋದಿಯವರು, ದೀಪಾವಳಿ ಸಂದರ್ಭ ದಲ್ಲಿ ಹಲವು ವಸ್ತು ಮತ್ತು ಸೇವೆಗಳ ತೆರಿಗೆ ಇಳಿಸುವ ಸೂಚನೆ ನೀಡಿದ್ದರು.

ಕೇಂದ್ರದ ಹುತೇಕ ಯೋಜನೆಗಳನ್ನು ಉದ್ದೇಶಿತ ದಿನಕ್ಕಿಂತ ಮೊದಲೇ ಪೂರ್ಣಗೊಳಿಸಿ ಜನರ ಅನುಕೂಲಕ್ಕೆ ಅನುವುಮಾಡುವ ಪರಿಪಾಠ ಬೆಳೆಸಿಕೊಂಡಿರುವಂತೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೀಪಾವಳಿಗಿಂತ ಒಂದು ತಿಂಗಳು ಮೊದಲೇ ತೆರಿಗೆ ಕಡಿತವನ್ನು ಕಾರ್ಯ ಗತಗೊಳಿಸಿದ್ದಾರೆ!

ಅಲ್ಲಿಗೆ ‘ಸೆಪ್ಟೆಂಬರ್ ಕ್ರಾಂತಿ’ ನಿಜವಾಗಿದೆ! ಪ್ರಗತಿ ಸ್ನೇಹಿ, ವ್ಯವಹಾರ ಸ್ನೇಹಿ, ಜನಸ್ನೇಹಿ ಮತ್ತು ಪ್ರಕ್ರಿಯೆ ಸ್ನೇಹಿ ಎಂದು ಸದ್ಯದ ‘ಜಿಎಸ್‌ಟಿ-2’ ಸುಧಾರಣಾ ಕ್ರಮಗಳು ಕರೆಸಿಕೊಳ್ಳುತ್ತಿವೆ, ಮತ್ತದು ದಿಟವೂ ಹೌದು!

Ravi S

ಮುಂದಿನ ದಿನಗಳಲ್ಲಿ, ದೇಶದ ಆರ್ಥಿಕತೆಯ ವೇಗ ಹೆಚ್ಚಿಸುವಲ್ಲಿ ಇಂಥಾ ಸುಧಾರಣಾ ಕ್ರಮಗಳು ಹೆಚ್ಚಿನ ಪುಷ್ಟಿ ನೀಡಲಿವೆ. ಹಬ್ಬದ ದಿನಗಳಿಂದಲೇ ಈ ಪ್ರಯೋಜನವನ್ನು ಜನರು ಬಳಸುವು ದರಿಂದ ಹಬ್ಬದ ಮೆರುಗು ಮತ್ತಷ್ಟು ಹೆಚ್ಚಾಗಲಿದೆ. ತೆರಿಗೆ ಕಡಿತದಿಂದಾಗಿ ಕೃಷಿ, ವೈದ್ಯಕೀಯ ಸೇವೆ, ಇನ್ಷೂರೆ, ಆಟೊಮೊಬೈಲ, ಎಫ್‌ ಎಂಸಿಜಿ ಉದ್ಯಮಕ್ಕೆ ಹೆಚ್ಚಿನ ಶಕ್ತಿ ಮತ್ತು ವ್ಯವಹಾರ ಬರಲಿದೆ. ಹೀಗೆ ಒದಗಲಿರುವ ತೆರಿಗೆ ಕಡಿತವು ಜನರಿಗೆ ಒಂದಷ್ಟು ಹೆಚ್ಚಿನ ಹಣವನ್ನು ವಿನಿಯೋಗಿಸುವ ಸಾಮರ್ಥ್ಯವನ್ನು ಪರೋಕ್ಷವಾಗಿ ತುಂಬಲಿದೆ- ಅಂದರೆ, ಅದು ಖರೀದಿ ಸಾಮರ್ಥ್ಯವನ್ನು ಹೆಚ್ಚಿಸು ತ್ತದೆ. ಈ ಎಲ್ಲಾ ಸಕಾರಣಗಳಿಂದಾಗಿ ಮುಂದಿನ ಎರಡು-ಮೂರು ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.1ರಿಂದ 1.2 ರಷ್ಟು ಹೆಚ್ಚಾಗಬಹುದೆಂಬುದು ಆರ್ಥಿಕ ವಿಶ್ಲೇಷಕರ ಸದ್ಯದ ಲೆಕ್ಕಾಚಾರ.

ತೆರಿಗೆ ಸುಧಾರಣಾ ಕ್ರಮದ ಭಾಗವಾಗಿ 2017ರ ಜುಲೈ 1ರಿಂದ ದೇಶಾದ್ಯಂತ ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಯಿತು. ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಈ ವ್ಯವಸ್ಥೆಯನ್ನು ಪ್ರತಿಪಕ್ಷಗಳು ಟೀಕಿಸಿದವು. ಹೊಸತರಲ್ಲಿ ಶೇ.5,‌ ಶೇ.12, ಶೇ.18, ಶೇ. 28, ಹೀಗೆ ನಾಲ್ಕು ಸ್ತರಗಳು ಇದ್ದವು. ದಿನಬಳಕೆಯ ವಸ್ತು ಮತ್ತು ಸೇವೆಗಳಲ್ಲಿ ಹೆಚ್ಚಿನವು ಶೇ.12 ಮತ್ತು ಶೇ.28ರ ಸ್ತರದ ತೆರಿಗೆ ಯಡಿ ಆರಂಭದ ದಿನಗಳಲ್ಲಿ ಕಾಣಿಸಿಕೊಂಡವು.

ಹೋಟೆಲ್ ತಿಂಡಿಗಳ ಮೇಲೆ ಆರಂಭದ ದಿನಗಳಲ್ಲಿ ಶೇ.18 ತೆರಿಗೆ ಇದ್ದಂತೆ ನೆನಪು ಮತ್ತು ಜನರು ಇಂಥಾ ಅಪಸವ್ಯಗಳಿಂದಾಗಿ ಹೆಚ್ಚು ಮೊತ್ತವನ್ನು ಖರ್ಚು ಮಾಡಬೇಕಾಯಿತು. ಆಗ ನನ್ನನ್ನೂ ಸೇರಿದಂತೆ ಹೆಚ್ಚಿನವರು ಈ ವ್ಯವಸ್ಥೆಯ ಕುರಿತು ಹಿಡಿಶಾಪ ಹಾಕಿದ್ದರು. ತಿಂಗಳುಗಳು ಕಳೆದಂತೆ, ವರ್ಷಗಳು ಕಳೆದಂತೆ ದಿನಬಳಕೆಯ ವಸ್ತು ಮತ್ತು ಸೇವೆಗಳು ಕಡಿಮೆ ತೆರಿಗೆಯ ವ್ಯಾಪ್ತಿಗೆ ಬಂದವು. ಜನರು ಸರಕಾರದ ಈ ನಡೆಯನ್ನು ಸ್ವಾಗತಿಸಲು ಆರಂಭಿಸಿದರು.

ಇನ್ನೂ ಹೆಚ್ಚಿನ ತೆರಿಗೆ ಕಡಿತದ ಕೂಗು ಆಗೀಗ ಬರುತ್ತಿತ್ತು. ಆದರೆ ಹೆಚ್ಚಿನ ರಾಜ್ಯ ಸರಕಾರಗಳು ತಮ್ಮ ಪಾಲಿನ ತೆರಿಗೆ ಆದಾಯಕ್ಕೆ ಕತ್ತರಿ ಬೀಳುವ ಭೀತಿಯಿಂದ ತೆರಿಗೆ ಕಡಿತವನ್ನು ವಿರೋಧಿಸು ತ್ತಲೇ ಬಂದವು. ಮೊನ್ನೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದು ಕೊಂಡು ಜನರಿಗೆ ಮತ್ತಷ್ಟು ನಿರುಮ್ಮಳ ಭಾವವನ್ನು ಕೊಡಲಾಯಿತು. ಈ ಕ್ರಾಂತಿಕಾರಿ ತೆರಿಗೆ ಇಳಿಕೆಯಿಂದ ಆಗುವ ನಷ್ಟದಲ್ಲಿ ಶೇ.50ರಷ್ಟು ಪಾಲು ರಾಜ್ಯ ಸರಕಾರದ್ದು. ಈ ನಷ್ಟವನ್ನು ಭರಿಸುವ, ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸದ್ಯಕ್ಕೆ ಯಾವುದೇ ಸ್ಪಷ್ಟ ನಿರ್ಧಾರ ಮತ್ತು ನಿರ್ಣಯವನ್ನು ತೆಗೆದುಕೊಂಡಂತೆ ಕಾಣುತ್ತಿಲ್ಲ.

ತಮ್ಮ ಪಾಲಿನ ತೆರಿಗೆ ಆದಾಯದ ಮೊತ್ತವನ್ನು ಕೇಂದ್ರ ಸರಕಾರ ಸರಿಯಾಗಿ ನೀಡುತ್ತಿಲ್ಲ ಎನ್ನುವ ಕೂಗನ್ನು ‘ಎನ್‌ಡಿಎ’ಯೇತರ ರಾಜ್ಯ ಸರಕಾರಗಳು ನಿರಂತರ ಮಾಡುತ್ತಿವೆ. ಈ ತೆರಿಗೆ ಕಡಿತವು ಎಲ್ಲಾ ರಾಜ್ಯ ಸರಕಾರಗಳ ತೆರಿಗೆ ಆದಾಯವನ್ನು ಕಡಿಮೆ ಮಾಡಿರುವುದು ಸದ್ಯಕ್ಕೆ ರಾಜ್ಯ ಸರಕಾರ ಗಳ ದೊಡ್ಡ ತಲೆನೋವು!

ಮೊದಲ ವರ್ಷಗಳ ಹಲವಾರು ಅಡೆತಡೆ, ಟೀಕೆಗಳ ಹೊರತಾಗಿ ಮತ್ತು ಕಾಲಕಾಲಕ್ಕೆ ನಿರಂತರ ಮತ್ತು ಜನಪರ ದರ ಪರಿಷ್ಕರಣೆ ಮತ್ತು ವಿವಿಧ ಸರಕು ಮತ್ತು ಸೇವೆಗಳ ದರ ಕಡಿತಗೊಳಿಸುವ ಮೂಲಕ ಜಿಎಸ್‌ಟಿ ಸರಳವಾಗುತ್ತ, ಜನಸ್ನೇಹಿಯಾಗಿ ಮಾರ್ಪಾಡಾಗಿದೆ ಎಂದರೆ ಖಂಡಿತ ಅತಿ ಶಯೋಕ್ತಿಯಲ್ಲ. ಲಭ್ಯ ವಿವರಗಳ ಪ್ರಕಾರ, 2017-18ರಲ್ಲಿ ಸರಾಸರಿ ಜಿಎಸ್‌ಟಿ ದರ ಶೇ.14.4 ರಷ್ಟು ಇತ್ತು. 2019-20ರ ವೇಳೆಗೆ ಅದು ಶೇ.11.6ಕ್ಕೆ ಇಳಿಯಿತು. ‌

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿರುವ ಸಂಶೋಧನಾ ವರದಿಯ ಪ್ರಕಾರ ಜಿಎಸ್‌ಟಿ-2 ಸುಧಾರಣಾ ನೀತಿಯಿಂದಾಗಿ ದೇಶದ ಸರಾಸರಿ ತೆರಿಗೆ ಶೇ.9.5ಕ್ಕೆ ಇಳಿಯಲಿದೆ. ಎಂಟು ವರ್ಷಗಳಲ್ಲಿ ಸರಾಸರಿ ಜಿಎಸ್‌ಟಿ ದರ ಅಂದಾಜು ಶೇ.40ರಷ್ಟು ಕಡಿಮೆಯಾಗಿ ಅಷ್ಟು ಹಣ ಜನರ ಉಳಿತಾಯ ವಾಗಿದೆ, ವ್ಯಯಿಸುವ ಸಾಮರ್ಥ ವೃದ್ಧಿಸಿದೆ! ಈವರೆಗೆ ನಾಲ್ಕು ಇದ್ದ ತೆರಿಗೆ ಸ್ತರಗಳು ಇನ್ನು ಕೇವಲ ಶೇ.5, ಶೇ,12 ಆಗಿ ಎರಡಕ್ಕಿಳಿಯಲಿವೆ. ಇದನ್ನು ಆತ್ಮನಿರ್ಭರ ಭಾರತದತ್ತ ಮಹತ್ವದ ಹೆಜ್ಜೆ, ಮುಂದಿನ ಪೀಳಿಗೆಯ ಜಿಎಸ್‌ಟಿ, ಎರಡು ಸ್ಲ್ಯಾಬ್ ಕ್ರಾಂತಿ, ಸರಳೀಕೃತ ಅನುಸರಣೆಗಳು ಮತ್ತು ವರ್ಧಿತ ಜಾಗತಿಕ ಸ್ಪರ್ಧಾತ್ಮಕತೆ ಎಂದು ಸರಕಾರ ವ್ಯಾಖ್ಯಾನಿಸಿದೆ.

ಇನ್ನು ಕರ್ನಾಟಕದ ವಿಷಯಕ್ಕೆ ಬರುವುದಾದರೆ, ಜಿಎಸ್‌ಟಿ ಜಾರಿಯ ಬಳಿಕ ರಾಜ್ಯದ ಆದಾಯವು ವಾರ್ಷಿಕ 70000 ಕೋಟಿ ರು.ನಷ್ಟು ಖೋತಾ ಆಗಿದ್ದು ಈ ಹೊಸ ತೆರಿಗೆ ಕಡಿತವು ಹೆಚ್ಚುವರಿಯಾಗಿ 15000 ಕೋಟಿ ರು.ನಷ್ಟು ಆದಾಯ ನಷ್ಟವನ್ನು ಉಂಟು ಮಾಡಲಿದೆ ಎಂಬುದು ರಾಜ್ಯ ಸರಕಾರದ ಕಳವಳ.

ಜಿಎಸ್‌ಟಿಗೂ ಮೊದಲು ಶೇ.13ರಷ್ಟು ಇದ್ದ ರಾಜ್ಯದ ಆದಾಯದ ಪ್ರಗತಿಯು ಜಿಎಸ್‌ಟಿ ಜಾರಿಯಾದ ಬಳಿಕ ಶೇ.11ಕ್ಕೆ ಇಳಿದಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. 2016-17ರಿಂದ 2024-25ಕ್ಕೆ ಹೋಲಿಸಿದಾಗ ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ವಾರ್ಷಿಕವಾಗಿ ಕರ್ನಾಟಕಕ್ಕೆ 21,197 ಕೋಟಿ ರುಪಾಯಿಗಳಷ್ಟು ಕಡಿತವಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಈ ಸಂದರ್ಭದಲ್ಲಿ ಹೀಗೆ ಉಂಟಾದ ತೆರಿಗೆ ನಷ್ಟವು ಗಾಯದ ಮೇಲಿನ ಬರೆಯೇ ಸರಿ. ಈಗ ಘೋಷಿಸಿರುವ ತೆರಿಗೆ ಕಡಿತವು ರಾಜ್ಯದ ಆದಾಯದ ಪಾಲಿಗೆ ಮತ್ತಷ್ಟು ಹೊಡೆದ ನೀಡಲಿದೆ.

ಮುಂದೆ ಆಗಬೇಕಾಗಿರುವುದು ಏನು?: ತೆರಿಗೆಯ ಒಟ್ಟು ಆದಾಯ ಸಂಗ್ರಹದ ಪ್ರಮಾಣದಲ್ಲಿ ರಾಜ್ಯಗಳಿಗೆ ತೆರಿಗೆಯ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡುತ್ತಿಲ್ಲ ಎನ್ನುವುದು ದಕ್ಷಿಣದ ಬಹುತೇಕ ರಾಜ್ಯಗಳ ಅಳಲು. ನಮ್ಮಿಂದ ಜಿಎಸ್‌ಟಿ ರೂಪದಲ್ಲಿ ಹಣ ಸಂಗ್ರಹಿಸಿ ಬಹುಪಾಲು ಉತ್ತರದ ರಾಜ್ಯಗಳಿಗೆ ವಿನಿಯೋಗ ಮಾಡಲಾಗುತ್ತಿದೆ. ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ‘ನಮ್ಮ ತೆರಿಗೆ ನಮ್ಮ ಹಕ್ಕು’ ಮುಂತಾದ ಹೆಸರಿನಲ್ಲಿ ಕರ್ನಾಟಕ ಸರಕಾರ ಪ್ರತಿಭಟಿಸುತ್ತಾ, ವಿವಿಧ ವೇದಿಕೆಗಳಲ್ಲಿ ಧ್ವನಿ ಎತ್ತುತ್ತಾ ಬಂದಿದೆ. ಹೌದು ಈ ವಿಚಾರದಲ್ಲಿ ಕೇಂದ್ರ ಸರಕಾರ ವಿವರವಾದ, ಸ್ಪಷ್ಟ ಮತ್ತು ಎಲ್ಲರಿಗೂ ಸಲ್ಲುವ ತೆರಿಗೆ ಮೊತ್ತ ವಿತರಣೆಯ, ಬಹುತೇಕ ರಾಜ್ಯಗಳು ಒಪ್ಪುವ ಮಾನದಂಡವನ್ನು ಪ್ರಕಟಿಸಿ ಜಾರಿಗೆ ತರಬೇಕಿದೆ.

ಸದ್ಯದ ಜಿಎಸ್‌ಟಿ ಸರಳೀಕರಣದಿಂದ ರಾಜ್ಯ ಸರಕಾರಗಳಿಗೆ ಆಗುವ ಆದಾಯದ ನಷ್ಟವನ್ನು ಯಾವ ರೀತಿಯಲ್ಲಿ ಮತ್ತು ಯಾವ್ಯಾವ ಮೂಲಗಳಿಂದ ಸರಿದೂಗಿಸಬಹುದು ಎಂಬುದರ ಕುರಿತು ಕೇಂದ್ರ ಸರಕಾರ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ನೇರ ತೆರಿಗೆ, ಆದಾಯ ತೆರಿಗೆ, ಡಿವಿಡೆಂಡ್, ಕಸ್ಟಮ್ಸ ಮತ್ತು ನಾನಾ ರೂಪದ ಸೆಸ್ ಗಳು ಕೇಂದ್ರದ ಪ್ರಮುಖ ಆದಾಯದ ಮೂಲ ಗಳು. ರಾಜ್ಯಗಳು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಬೇಕಾದ ಆದಾಯವನ್ನು ಸಂಗ್ರಹಿಸಲು ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ಆದಾಯವನ್ನೇ ನೆಚ್ಚಿಕೊಂಡಿವೆ. ನಿರೀಕ್ಷಿತ ಆದಾಯವನ್ನು ಕೇಂದ್ರ ಕೊಡದಿರುವುದು ಒಂದೆಡೆಯಾದರೆ, ಈಗ ಸರಳೀಕೃತ ತೆರಿಗೆಯು ರಾಜ್ಯಗಳ ತೆರಿಗೆ ಆದಾಯವು ಮತ್ತಷ್ಟು ಕುಸಿಯುವಂತೆ ಮಾಡಲಿದೆ.

ಹೀಗೆ ಆದಾಯ ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಕಸಿದಂತಾಗ ಲಿದೆ. ಜಿಎಸ್‌ಟಿ ವ್ಯವಸ್ಥೆಯು ಆರ್ಥಿಕ ಚಟುವಟಿಕೆಗಳನ್ನು ಮತ್ತಷ್ಟು ಪ್ರೋತ್ಸಾಹಿಸಿ ಕೇಂದ್ರ ಮತ್ತು ರಾಜ್ಯಗಳ ಆದಾಯವನ್ನು ದ್ವಿಗುಣಗೊಳಿಸುವ ಗುರಿಯಾಗಿತ್ತು. ಕೇಂದ್ರದ ಆದಾಯ ವೇನೋ ಗಣನೀಯವಾಗಿ ಹೆಚ್ಚಿದೆ, ಆದರೆ ಅದರ ನಿರೀಕ್ಷಿತ ಪಾಲು ಕರ್ನಾಟದಂಥ ರಾಜ್ಯಗಳಿಗೆ ಸಿಗುತ್ತಿಲ್ಲ ಎನ್ನುವುದು ಆರೋಪ. ಕೇಂದ್ರವು ಈ ನಿಟ್ಟಿನಲ್ಲಿ ಪಾರದರ್ಶಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಬದಲಾವಣೆ ಜಗದ ನಿಯಮ. ಜನಸಾಮಾನ್ಯರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿ ಇಟ್ಟು ಕೊಂಡು ಈ ಹೊಸ ಸರಳೀಕೃತ ಮತ್ತು ಅಗ್ಗದ ತೆರಿಗೆ ವ್ಯವಸ್ಥೆಯನ್ನು ಘೋಷಿಸಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಜನಸಾಮಾನ್ಯರು, ಮಧ್ಯಮ ಆದಾಯದ ಕುಟುಂಬಗಳು, ರೈತ ಸಮುದಾಯ, ಸಣ್ಣ ಉದ್ದಿಮೆದಾರರು ಪ್ರಯೋಜನ ಪಡೆಯಲಿದ್ದಾರೆ.

ತಿಂಗಳ ಆದಾಯದಲ್ಲಿ ಖರ್ಚು ಮಾಡುವ ಹಣವು ತೆರಿಗೆ ಕಡಿತದಿಂದ ಒಂದಷ್ಟು ಇಳಿದು ಆ ಹಣವು ಉಳಿತಾಯವಾಗಿ ಅಥವಾ ಮತ್ಯಾವುದಕ್ಕೋ ಖರ್ಚಾಗಲಿರುವುದು ಖಂಡಿತ. ಎರಡೂ ಪ್ರಕಾರಗಳು ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ನೀಡಲಿವೆ. ಭಾರತವು ಮುಂದಿನ ದಿನಗಳಲ್ಲಿ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ನಿಸ್ಸಂಶಯ.

ಆದಾಯ ತೆರಿಗೆಯಲ್ಲಿ ಕಡಿತ, ಫಾಸ್ಟ್ಯಾಗ್ ವಾರ್ಷಿಕ ಪಾಸ್ ಮೂಲಕ ಟೋಲ್ ಪಾವತಿಯಲ್ಲಿ ಉಳಿತಾಯ, ಈಗ ತೆರಿಗೆ ಕಡಿತ- ಹೀಗೆ ಹಲವು ಜನಪರ ಯೋಜನೆಗಳು ಕಳೆದ ಕೆಲವು ತಿಂಗಳುಗಳಲ್ಲಿ ಜಾರಿಯಾಗಿವೆ. ‘ಜನಪರ, ಜನೋಪಯೋಗಿ ಮತ್ತು ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ತರಲು ಚುನಾವಣೆಗಳು ಬರಬೇಕಿಲ್ಲ’ ಎನ್ನುವುದನ್ನು ಈಗಿನ ಕೇಂದ್ರ ಸರಕಾರ ಹಲವಾರು ಬಾರಿ ಸಾಬೀತುಪಡಿಸಿದೆ!

ಜಿಎಸ್‌ಟಿ ಕಡಿತದ ಪಾಲು ನೇರವಾಗಿ ಜನಸಾಮಾನ್ಯರಿಗೆ ಸಿಗುವಂತಾದಾಗ ಮಾತ್ರ ಇಂಥ ಸುಧಾರಣಾ ಕ್ರಮಗಳು ಯಶಸ್ವಿಯಾಗಿವೆ. ಹಾಗಾಗಲಿ ಎಂಬುದು ಸರ್ವರ ಆಶಯ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)