Viral Video: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸಿನಿಮೀಯ ಶೈಲಿಯಲ್ಲಿ ಕೈದಿಗಳು ಎಸ್ಕೇಪ್- ಈ ವಿಡಿಯೊ ನೋಡಿ
Prisoners Attack Jail Staff: ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಇಬ್ಬರು ಕೈದಿಗಳು ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಆಗಿರುವ ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಚೋಡವರಂ ಉಪ ಕಾರಾಗೃಹದಲ್ಲಿ ನಡೆದಿದೆ.

-

ಹೈದರಾಬಾದ್: ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಇಬ್ಬರು ಕೈದಿಗಳು ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಆಗಿರುವ ಘಟನೆ ಆಂಧ್ರಪ್ರದೇಶ (Andhra Pradesh) ದ ಅನಕಾಪಲ್ಲಿ ಜಿಲ್ಲೆಯ ಚೋಡವರಂ ಉಪ ಕಾರಾಗೃಹದಲ್ಲಿ ನಡೆದಿದೆ. ನಕ್ಕ ರವಿಕುಮಾರ್ ಮತ್ತು ಬೆಜವಾಡ ರಾಮು ಎಂಬ ಇಬ್ಬರು ಕೈದಿಗಳು (Prisoners) ಪರಾರಿಯಾಗಿದ್ದಾರೆ. ಕೈದಿಗಳು ಜೈಲಿನಿಂದ ಪರಾರಿಯಾಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.
ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಅಡುಗೆ ಮನೆಯಲ್ಲಿ ಕರ್ತವ್ಯ ನಿರತರಾಗಿದ್ದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೈದಿಗಳು ಪರಾರಿಯಾಗಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಜೈಲಿನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ ನಕ್ಕಾ ರವಿಕುಮಾರ್ ಇದ್ದಕ್ಕಿದ್ದಂತೆ ಹೆಡ್ ವಾರ್ಡನ್ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ವಾರ್ಡನ್‍ನ ಕೀಲಿಗಳನ್ನು ಕಸಿದುಕೊಂಡು ಆವರಣದಿಂದ ಪರಾರಿಯಾಗಿದ್ದಾನೆ.
ವಿಡಿಯೊ ವೀಕ್ಷಿಸಿ:
Daring Jail Break In Andhra Pradesh, Prisoner Targets Warden https://t.co/mraJhUB2kY@umasudhir reports pic.twitter.com/aFk2gyiDW4
— NDTV (@ndtv) September 5, 2025
ಈ ಲಾಭ ಪಡೆದುಕೊಂಡ ಅಡುಗೆಮನೆಯಲ್ಲಿ ಸಹಾಯ ಮಾಡುತ್ತಿದ್ದ ಮತ್ತೊಬ್ಬ ಕೈದಿ ಬೆಜವಾಡ ರಾಮು ಪರಾರಿಯಾಗಿದ್ದಾನೆ. ಪಿಂಚಣಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಕ ರವಿಕುಮಾರ್ ಜೈಲಿನಲ್ಲಿದ್ದರೆ, ಬೆಜವಾಡ ರಾಮು ಅವರ ವಿರುದ್ಧ ಕಳ್ಳತನದ ಆರೋಪವಿದೆ. ಘಟನೆ ಬಳಿಕ ಜೈಲು ಅಧಿಕಾರಿಗಳು ತಕ್ಷಣವೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ತಪ್ಪಿಸಿಕೊಂಡ ಇಬ್ಬರು ಕೈದಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಅವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ತುಹಿನ್ ಸಿನ್ಹಾ ದೃಢಪಡಿಸಿದ್ದಾರೆ. ನಮ್ಮ ತಂಡಗಳು ಅವರನ್ನು ಹುಡುಕುತ್ತಿವೆ. ಅವರು ಕಾಲ್ನಡಿಗೆಯಲ್ಲಿ ಹೋಗಿರಬಹುದು. ವಾಹನಗಳಲ್ಲಿ ಪರಾರಿಯಾಗಿಲ್ಲ. ಹೀಗಾಗಿ ಅವರು ಬಹಳ ಸುಲಭವಾಗಿ ಸಿಗುವ ಸಾಧ್ಯತೆಯಿದೆ. ಇಬ್ಬರೂ ರಿಮಾಂಡ್ ಕೈದಿಗಳು. ಬೆಜವಾಡ ರಾಮು ನಾಲ್ಕನೇ ತಿಂಗಳಲ್ಲಿ ಮತ್ತು ರವಿಕುಮಾರ್ ಏಳನೇ ತಿಂಗಳಲ್ಲಿ ರಿಮಾಂಡ್ ಆಗಿದ್ದಾರೆ. ಅವರಿಗೆ ಸುತ್ತಿಗೆ ಹೇಗೆ ಮತ್ತು ಎಲ್ಲಿ ಸಿಕ್ಕಿತು ಎಂಬುದು ಇನ್ನೂ ತನಿಖೆ ಮಾಡಬೇಕಿದೆ ಎಂದು ಸಿನ್ಹಾ ಹೇಳಿದರು.
ಪರಾರಿಯಾಗಿರುವ ಆರೋಪಿಗಳು ಎಲ್ಲಿಯಾದರೂ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ವಂದೇ ಭಾರತ್ ರೈಲಿನ ಟಿಸಿ ಮೇಲೆ ಬಿತ್ತು ನೆಟ್ಟಿಗರ ಕಣ್ಣು; ಈತನನ್ನು ಕಂಡಿರಾ ಎಂದು ಪೋಸ್ಟ್, ಕಾರಣವೇನು?