ವೀಕೆಂಡ್ ವಿತ್ ಮೋಹನ್
ಭಾರತದ ಇತಿಹಾಸದಲ್ಲಿ ವಿದೇಶಿ ಮೂಲದವರಾದರೂ, ತಮ್ಮ ಜೀವನವನ್ನೇ ಈ ದೇಶದ ಪುನರು ತ್ಥಾನಕ್ಕೆ ಅರ್ಪಿಸಿದ ಮಹನೀಯರು ಬಹಳ ವಿರಳ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದವರು ‘ಸಿಸ್ಟರ್ ನಿವೇದಿತಾ’. ಐರ್ಲ್ಯಾಂಡ್‌ನಲ್ಲಿ ಮಾರ್ಗರೇಟ್ ಎಲಿಜಬೆತ್ ನೋಬಲ್ ಎಂದು ಜನಿಸಿದ ಮಹಿಳೆ, ಸನಾತನ ಸಿಂಹ ‘ಸ್ವಾಮಿ ವಿವೇಕಾನಂದ’ರ ಸಾನ್ನಿಧ್ಯದಲ್ಲಿ ತನ್ನ ಬದುಕಿನ ಅರ್ಥವನ್ನೇ ಹೊಸದಾಗಿ ಕಂಡುಕೊಂಡರು.
1867ರಲ್ಲಿ ಜನಿಸಿದ ಮಾರ್ಗರೇಟ್, ಬಾಲ್ಯದಿಂದಲೇ ಧಾರ್ಮಿಕ ಮೌಲ್ಯಗಳು ಮತ್ತು ಮಾನವೀಯತೆ ಯ ಮೇಲೆ ಆಳವಾದ ಆಸಕ್ತಿ ಹೊಂದಿದ್ದರು. ಶಿಕ್ಷಕಿಯಾಗಿ ತನ್ನ ವೃತ್ತಿಜೀವನ ಆರಂಭಿಸಿದ ಅವರು, ಸಮಾಜ ಸುಧಾರಣೆಗಾಗಿ ಶಿಕ್ಷಣವೇ ಮುಖ್ಯ ಸಾಧನವೆಂದು ನಂಬಿದ್ದರು. ಆದರೆ, 1895ರಲ್ಲಿ ಲಂಡನ್ ನಲ್ಲಿ ಸ್ವಾಮಿ ವಿವೇಕಾನಂದರನ್ನು ಭೇಟಿಯಾದ ಕ್ಷಣ ಅವರ ಜೀವನದಲ್ಲಿ ಮಹತ್ವದ ತಿರುವು ಪಡೆದುಕೊಂಡಿತು.
‘ಪಾರ್ಲಿಮೆಂಟ್ ಆಫ್ ವರ್ಲ್ಡ್ ರಿಲಿಜನ್ಸ್’ನಲ್ಲಿ ವಿಶ್ವದ ಗಮನ ಸೆಳೆದಿದ್ದ ಸ್ವಾಮಿ ವಿವೇಕಾನಂದರ ಆಲೋಚನೆಗಳು, ವೇದಾಂತ, ಮಾನವ ಸೇವೆ, ಮತ್ತು ಭಾರತೀಯ ಸಂಸ್ಕೃತಿಯ ಮಹತ್ವಗಳು ಮಾರ್ಗರೇಟ್ ಮನಸ್ಸನ್ನು ಸಂಪೂರ್ಣವಾಗಿ ಗೆದ್ದವು. ವಿವೇಕಾನಂದರ ಆ ಒಂದು ಸಂದೇಶ ಅವರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಿತು.
ಸ್ವಾಮಿ ವಿವೇಕಾನಂದರ ಆ ಒಂದು ಭೇಟಿ ಅವರ ಜೀವನವನ್ನು ಬದಲಿಸಿದ ಆಧ್ಯಾತ್ಮಿಕ ಸ್ಪರ್ಶ ವಾಯಿತು. 1898ರಲ್ಲಿ ಭಾರತಕ್ಕೆ ಬಂದ ನಂತರ, ಮಾರ್ಗರೇಟ್‌ಗೆ ನಿವೇದಿತಾ ಎಂಬ ಹೆಸರು ಬಂತು, ಇದು ಕೇವಲ ಒಂದು ಹೆಸರಲ್ಲ, ಒಂದು ಸಂಕಲ್ಪ, ಒಂದು ವ್ರತವಾಗಿತ್ತು. ಸಿಸ್ಟರ್ ನಿವೇದಿತಾ ತಮ್ಮ ಪಾಶ್ಚಾತ್ಯ ಬದುಕನ್ನು ಸಂಪೂರ್ಣವಾಗಿ ಬದಿಗಿಟ್ಟು, ಭಾರತೀಯ ಸಂಸ್ಕೃತಿಯನ್ನು ಅಳವಡಿಸಿ ಕೊಂಡರು.
ಇದನ್ನೂ ಓದಿ: Mohan Vishwa Column: ಕಾಂಗ್ರೆಸ್ಸಿನ ಮುಸ್ಲಿಂ ವೋಟ್ ಬ್ಯಾಂಕ್ ಆಟಕ್ಕೆ ತೆರೆ !
ಅವರು ಸರಳ ಜೀವನವನ್ನು ಅನುಸರಿಸಿ, ಸಾಮಾನ್ಯ ಜನರ ಜತೆಗೆ ಬೆರೆತು ಬದುಕಲು ಆರಂಭಿಸಿ ದರು. ಅವರಿಗೆ ಭಾರತ ದೇಶದ ಪರಂಪರೆ ಮತ್ತು ಇತಿಹಾಸ ಕೇವಲ ಒಂದು ಅಧ್ಯಯನದ ವಿಷಯ ವಾಗಿರಲಿಲ್ಲ, ಬದಲಾಗಿ ಜೀವನದ ಧ್ಯೇಯವಾಗಿತ್ತು. ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿ ‘ಜೀವನದ ಪರಮಾರ್ಥ ಮಾನವ ಸೇವೆಯಲ್ಲಿ ಇದೆ’ ಎಂಬ ಗಟ್ಟಿಯಾದ ತತ್ವವನ್ನು ನಂಬಿದ್ದವರು ಸಿಸ್ಟರ್ ನಿವೇದಿತಾ. ರಾಷ್ಟ್ರದ ಪುನರುತ್ಥಾನದ ಬುನಾದಿಗೆ ಸ್ವಾಮಿ ವಿವೇಕಾನಂದರು ಸದಾ ಹೇಳು ತ್ತಿದ್ದ ಮಾತು ‘ಮಹಿಳೆಯರ ಸಬಲೀಕರಣವಿಲ್ಲದೆ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿಲ್ಲ’.
ಈ ಮಾತನ್ನು ನಿಜ ಜೀವನದಲ್ಲಿ ಅನುಷ್ಠಾನಗೊಳಿಸಿದವರು ಸಿಸ್ಟರ್ ನಿವೇದಿತಾ. ಕೊಲ್ಕತ್ತಾದಲ್ಲಿ ಆರಂಭಿಸಿದ ಅವರ ಬಾಲಕಿಯರ ಶಾಲೆ ಕೇವಲ ವಿದ್ಯಾಭ್ಯಾಸದ ಕೇಂದ್ರವಾಗಿರಲಿಲ್ಲ, ಅದು ಒಂದು ಆಳವಾದ ಚಿಂತನೆಯ ಕೇಂದ್ರವಾಗಿತ್ತು. ಅವರು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ದೇಶಭಕ್ತಿ, ಸಂಸ್ಕೃತಿಯ ಅರಿವುಗಳನ್ನು ಬೆಳೆಸಲು ಶ್ರಮಿಸಿದರು.
ಆ ಕಾಲದಲ್ಲಿ ಸಮಾಜದಲ್ಲಿ ಇದ್ದ ಅನೇಕ ನಿರ್ಬಂಧಗಳ ನಡುವೆಯೂ, ಅವರ ಈ ಪ್ರಯತ್ನಗಳು ನಿಜಕ್ಕೂ ಕ್ರಾಂತಿಕಾರಿಯಾಗಿದ್ದವು. ಇತಿಹಾಸದ ಪುಟಗಳಲ್ಲಿ ಸಿಸ್ಟರ್ ನಿವೇದಿತಾ ಪಟ್ಟ ಶ್ರಮದ ಬಗ್ಗೆ ಶಾಲಾ ಪಠ್ಯಗಳಲ್ಲಿ ಹೆಚ್ಚಾಗಿ ಉಖವಾಗದಿರುವುದು ದುರದೃಷ್ಟಕರ ಸಂಗತಿ.
ಸಿಸ್ಟರ್ ನಿವೇದಿತಾ ಕೇವಲ ತತ್ವಗಳನ್ನು ನಂಬಿದವರಲ್ಲ; ಅವರು ಅವನ್ನು ಜೀವನದಲ್ಲಿ ಅನುಸರಿಸಿದವರು. ಕೊಲ್ಕತ್ತಾದಲ್ಲಿ ಪ್ಲೇಗ್ ರೋಗ ಹರಡಿದಾಗ, ಅವರು ನಿರ್ಭಯವಾಗಿ ಜನರ ನಡುವೆ ಹೋಗಿ ಸೇವೆ ಸಲ್ಲಿಸಿದರು. ಸ್ವಾಮಿ ವಿವೇಕಾನಂದರು ಬೋಧಿಸಿದ ‘ದರಿದ್ರ ನಾರಾಯಣ ಸೇವೆ’ ಎಂಬ ತತ್ವವನ್ನು ಅವರು ತನ್ನ ಬದುಕಿನ ಧ್ಯೇಯವನ್ನಾಗಿಸಿಕೊಂಡವರು.
ಇದು ಅವರಿಗೆ ಆಧ್ಯಾತ್ಮಿಕತೆಯ ನಿಜವಾದ ಅರ್ಥವನ್ನು ತಿಳಿಸಿತ್ತು. ಕಷ್ಟದಲ್ಲಿರುವ ಮನುಷ್ಯರಿಗೆ ಸೇವೆ ಸಲ್ಲಿಸುವುದು ಜೀವನದ ಪರಮೋಚ್ಚ ಧರ್ಮವೆಂದು ನಂಬಿದ್ದವರು ಸಿಸ್ಟರ್ ನಿವೇದಿತಾ. ತಮ್ಮ ಜನಸೇವೆಯ ಮೂಲಕ ಆಧ್ಯಾತ್ಮಿಕತೆಯನ್ನು ಕಾಣುತ್ತಿದ್ದ ಮಹಿಳೆಯಾಗಿದ್ದರು.
ರೋಗಿಗಳ ಸೇವೆ ಮಾಡಿದ್ದಾರೆಂದು ‘ಮದರ್ ತೆರೇಸಾ’ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು, ಸಿಸ್ಟರ್ ನಿವೇದಿತಾರಂತಹ ಜನಸೇವಕಿಯ ಇತಿಹಾಸ ಪಠ್ಯಗಳಲ್ಲೂ ಅಳವಡಿಕೆಯಾಗಲಿಲ್ಲ. 1902 ರಲ್ಲಿ ಸ್ವಾಮಿ ವಿವೇಕಾನಂದರು ಅಗಲಿದ ನಂತರ, ಸಿಸ್ಟರ್ ನಿವೇದಿತಾರ ಮುಂದೆ ದೊಡ್ಡ ಸವಾ ಲಿತ್ತು. ಗುರುವಿನ ಕನಸನ್ನು ಮುಂದುವರಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು.
ಅದರಿಂದ ಅವರು ಹಿಂದೆ ಸರಿಯಲಿಲ್ಲ. ಬದಲಾಗಿ, ಇನ್ನಷ್ಟು ಉತ್ಸಾಹದಿಂದ ಸಮಾಜ ಮತ್ತು ರಾಷ್ಟ್ರ ಸೇವೆಯಲ್ಲಿ ತೊಡಗಿಕೊಂಡರು. ಅವರು ತನ್ನ ಗುರು ಸ್ವಾಮಿ ವಿವೇಕಾನಂದರು ಹೇಳಿದ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದು, ಒಂದು ಜೀವಂತ ಚಳುವಳಿಯಾಗಿ ರೂಪಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿನ ತೀವ್ರ ನಿಲುವು ಮತ್ತು ರಾಷ್ಟ್ರಭಕ್ತಿ,ನಿವೇದಿತಾರ ಜೀವನದ ಮತ್ತೊಂದು ಪ್ರಮುಖ ಅಂಶ.
ಅವರು ಬಾಲ ಗಂಗಾಧರ ತಿಲಕ್ ಮತ್ತು ಅರವಿಂದ ಘೋಷ್ ಮುಂತಾದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು ಬ್ರಿಟಿಷ್ ಆಡಳಿತದ ಅನ್ಯಾಯಗಳನ್ನು ಬಹಿರಂಗವಾಗಿ ಟೀಕಿಸು ತ್ತಿದ್ದರು, ಸದಾ ಭಾರತದ ಸ್ವಾತಂತ್ರ್ಯದ ಪರವಾಗಿ ಧ್ವನಿ ಎತ್ತಿದ್ದರು. ಅವರ ಮನೆಯಲ್ಲಿ ಸ್ವಾತಂತ್ರ ಹೋರಾಟಗಾರರ ನಡುವೆ ನಡೆದ ಅನೇಕ ಚರ್ಚೆಗಳು, ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
1905ರ ಬಂಗಾಳ ವಿಭಜನೆಯ ನಂತರ ಪ್ರಾರಂಭವಾದ ಸ್ವದೇಶಿ ಚಳುವಳಿಗೆ ಸಿಸ್ಟರ್ ನಿವೇದಿತಾ ಸಂಪೂರ್ಣ ಬೆಂಬಲ ನೀಡಿದರು. ಭಾರತೀಯ ಉತ್ಪನ್ನಗಳನ್ನು ಬಳಸಲು ಪ್ರೋತ್ಸಾಹಿಸಿದರು ಮತ್ತು ಬ್ರಿಟಿಷರ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದರು. ಅವರ ದೃಷ್ಟಿಯಲ್ಲಿ ಸ್ವದೇಶಿ ಕೇವಲ ಆರ್ಥಿಕ ನೀತಿ ಅಲ್ಲ ’It was a symbol of resistance and Self&respect’ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಿಸ್ಟರ್ ನಿವೇದಿತಾ ಯುವಕರಿಗೆ ತಮ್ಮ ಆತ್ಮಗೌರವವನ್ನು ಮರಳಿ ಪಡೆಯಲು ಕರೆ ನೀಡಿದರು.
ಭಾರತದ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವು ದುರ್ಬಲತೆ ಅಲ್ಲ, ಬಲವೆಂದು ಅವರು ಪ್ರತಿಪಾದಿಸಿದರು. ತಮ್ಮ ಮೂಲಗಳನ್ನು ಅರ್ಥಮಾಡಿಕೊಳ್ಳಬೇಕು, ತಮ್ಮ ನಾಗರಿಕತೆಯ ಮೇಲೆ ಹೆಮ್ಮೆ ಪಡಬೇಕು ಮತ್ತು ಪರರ ಪ್ರಭಾವದಿಂದ ತಪ್ಪಿಸಿಕೊಳ್ಳಬೇಕು ಎಂದು ಅವರು ಯುವಕರಿಗೆ ಪ್ರೇರಣೆ ನೀಡಿದರು. ಅವರ ದೃಷ್ಟಿಯಲ್ಲಿ ರಾಷ್ಟ್ರೀಯ ಗೌರವ ಸ್ವಾತಂತ್ರ್ಯ ಮತ್ತು ಪ್ರಗತಿಯ ಮೂಲ ಭೂತ ಅಡಿಪಾಯವಾಗಿತ್ತು.
ನಿವೇದಿತಾರ ದೂರದೃಷ್ಟಿ ಶಿಕ್ಷಣ ಮತ್ತು ರಾಜಕೀಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಖ್ಯಾತ ವಿಜ್ಞಾನಿ ಜಗದೀಶ ಚಂದ್ರ ಬೋಸ್ ಅವರ ಸಂಶೋಧನೆಗಳಿಗೆ ಬೆಂಬಲ ನೀಡಿದ್ದರು, ಅವರಿಗೆ ಜಾಗತಿಕ ಮಾನ್ಯತೆ ದೊರಕಲು ನೆರವಾದವರಲ್ಲಿ ಪ್ರಮುಖರಾಗಿದ್ದರು. ಅದೇ ರೀತಿ, ಭಾರತೀಯ ಕಲೆಯನ್ನು ಉತ್ತೇಜಿಸುವ ಸಲುವಾಗಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಂಸ್ಕೃತಿ ಮತ್ತು ಕಲೆಗಳು ರಾಷ್ಟ್ರದ ಆತ್ಮ, ಸಾಹಿತ್ಯದಲ್ಲಿ ಅಮೂಲ್ಯ ಕೊಡುಗೆಯಾಗುತ್ತವೆಯೆಂಬುದು ಅವರ ದೃಢನಂಬಿಕೆಯಾಗಿತ್ತು.
ಸಿಸ್ಟರ್ ನಿವೇದಿತಾ ತಮ್ಮ ಬರಹಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿ ದರು. ’ The Web of Indian Life', 'Kali the Mother’ ಮುಂತಾದ ಕೃತಿಗಳು ಪಾಶ್ಚಾತ್ಯರ ತಪ್ಪು ಕಲ್ಪನೆಗಳನ್ನು ಸರಿಪಡಿಸಿದ್ದವು. ಅವರು ಬರೆದ ’The Master as I Saw Him’ ಕೃತಿ, ಸ್ವಾಮಿ ವಿವೇಕಾ ನಂದರ ವ್ಯಕ್ತಿತ್ವದ ಜೀವಂತ ಚಿತ್ರಣವಾಗಿದೆ.
ಭಾರತದ ಇತಿಹಾಸದಲ್ಲಿ ಎಲೆಮರೆ ಕಾಯಿಯಂತೆ ಸ್ವತಂತ್ರಕ್ಕೆ ಹೋರಾಡಿದ ಸಾವಿರಾರು ಮಹಿಳೆ ಯರಿದ್ದಾರೆ, ಅವರ ಹೋರಾಟವನ್ನು ಹೈ-ಜಾಕ್ ಮಾಡಿ ಸ್ವಾರ್ಥದ ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡ ಕಾಂಗ್ರೆಸ್ ಪಕ್ಷ ಅನೇಕರ ಹೋರಾಟವನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಿತ್ತು.
ಇತಿಹಾಸವನ್ನು ತಿಳಿಸುವ ಪುಸ್ತಕಗಳ ಬರವಣಿಗೆಗಳನ್ನು ಎಡಚರರ ಕೈಗೆ ನೀಡಿದ ಪರಿಣಾಮ, ಸಿಸ್ಟರ್ ನಿವೇದಿತಾರಂತಹ ಮಹಿಳೆಯರ ಇತಿಹಾಸ ಜನರಿಗೆ ತಲುಪುವುದು ತಡವಾಯಿತು. ಜನಸೇವೆ ಯೆಂದು ಹೇಳಿ ಭಾರತಕ್ಕೆ ಬಂದ ಕೆಲ ಕ್ರಿಶ್ಚಿಯನ್ ಮಿಷನರಿಗಳು ಸೇವೆಯ ಹೆಸರಿನಲ್ಲಿ ತಮ್ಮ ಧರ್ಮದ ಸಿದ್ದಾಂತಗಳನ್ನು ರೋಗಿಗಳಿಗೆ ಹೇಳಿದ್ದಾರೆ. ಆದರೆ, ಪಾಶ್ಚಿಮಾತ್ಯ ಮೂಲದ ಸಿಸ್ಟರ್ ನಿವೇದಿತಾ ತನ್ನ ಮೂಲ ಧರ್ಮವನ್ನು ಬಿಟ್ಟು ಸ್ವಾಮಿ ವಿವೇಕಾನಂದರ ಶಿಷ್ಯೆಯಾಗಿ ಸನಾತನ ಧರ್ಮವನ್ನು ಜೀವನಶೈಲಿಯಾಗಿಸಿಕೊಂಡಿದ್ದರು.
ಸಿಸ್ಟರ್ ನಿವೇದಿತಾ ಮತ್ತು ಸ್ವಾಮಿ ವಿವೇಕಾನಂದರ ಸಂಬಂಧ ಕೇವಲ ಜ್ಞಾನದ ಹಂಚಿಕೆಯಾಗಿರ ಲಿಲ್ಲ; ಅದು ಒಂದು ಆತ್ಮೀಯ ಬಾಂಧವ್ಯವಾಗಿತ್ತು. ಸ್ವಾಮಿ ವಿವೇಕಾನಂದರು ನಿವೇದಿತಾರಲ್ಲಿ ಕಂಡ ಶಕ್ತಿ ಮತ್ತು ಸಮರ್ಪಣೆ, ಅವರನ್ನು ಭಾರತ ಮಾತೆಯ ಸೇವೆಗೆ ಸಮರ್ಪಿಸಲು ಪ್ರೇರೇಪಿಸಿತ್ತು.
ನಿವೇದಿತಾ, ತನ್ನ ಗುರುಆದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದರು. ಇಂದಿನ ಸಮಾಜದಲ್ಲಿ ವಿಭಜನೆ, ಸ್ವಾರ್ಥ ಮತ್ತು ಮೌಲ್ಯಗಳ ಕುಸಿತ ಹೆಚ್ಚುತ್ತಿರುವ ಸಂದರ್ಭದಲ್ಲಿ, ನಿವೇದಿತಾರ ಜೀವನ ನಮಗೆ ಒಂದು ದೀಪಸ್ತಂಭವಾಗಿ ಕಾಣುತ್ತದೆ. ಅವರ ಜೀವನ ಶೈಲಿ ನಮಗೆ ಕಲಿಸುವ ಪಾಠವೇನೆಂದರೆ, ರಾಷ್ಟ್ರಭಕ್ತಿ ಎಂದರೆ ಕೇವಲ ಮಾತಲ್ಲ, ಸಮಾಜ ಸೇವೆ, ಆಧ್ಯಾತ್ಮಿಕತೆ ಮತ್ತು ನಮ್ಮ ಸಂಸ್ಕೃತಿಯ ಮೇಲಿನ ಹೆಮ್ಮೆ ನಮ್ಮ ರಾಷ್ಟ್ರವನ್ನು ಬಲಪಡಿಸುತ್ತದೆ.
ಸಿಸ್ಟರ್ ನಿವೇದಿತಾ ಅವರ ಜೀವನ ಒಂದು ಪ್ರೇರಣಾದಾಯಕ ಕಾವ್ಯ, ವಿದೇಶಿ ಮೂಲದವರಾದರೂ ಸಹ, ಭಾರತವನ್ನು ತನ್ನ ತಾಯ್ನಾಡೆಂದು ಸ್ವೀಕರಿಸಿ, ತನ್ನನ್ನೇ ಸಂಪೂರ್ಣವಾಗಿ ಅರ್ಪಿಸಿಕೊಂಡ ದಿಟ್ಟ ಮಹಿಳೆ. ಸ್ವಾಮಿ ವಿವೇಕಾನಂದರ ಮಾರ್ಗದರ್ಶನದಲ್ಲಿ, ಅವರು ಕೇವಲ ಶಿಷ್ಯೆಯಾಗಿರಲಿಲ್ಲ, ಒಂದು ಚಳುವಳಿಯ ಜೀವಂತ ರೂಪವಾಗಿಯೇ ಬಿಟ್ಟಿದ್ದರು.