ರಾಷ್ಟ್ರವಾದಿ
ಮಂಜುನಾಥ ಅಜ್ಜಂಪುರ
ಇಂದು (ಅ.16) ರಾಷ್ಟ್ರೀಯವಾದಿ ಚಿಂತಕ, ಇತಿಹಾಸಕಾರ ಸೀತಾರಾಮ ಗೋಯಲ್ ಅವರ 105 ನೆಯ ಜನ್ಮದಿನ. ಕಮ್ಯುನಿಸ್ಟರು ವಿಕೃತಗೊಳಿಸಿದ ಭಾರತೀಯ ಇತಿಹಾಸವನ್ನು ಸರಿದಾರಿಗೆ ತರಲು ಬಹಳ ದೊಡ್ಡ ಕೊಡುಗೆ ನೀಡಿದ ಇತಿಹಾಸರಚನಾಶಾಸ್ತ್ರಜ್ಞ. ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ಚಿಂತಕರಬ್ಬರು. ಆಧುನಿಕ ಭಾರತದ ಮಹಾನ್ ಬೌದ್ಧಿಕ ನವಕ್ಷತ್ರಿಯ. ಅಪರೂಪ ಎನ್ನುವ ಬೌದ್ಧಿಕ ನಿಷ್ಠುರತೆ ಗೋಯಲ್ರದು. ಗೋಯಲ್ ಅವರ ನೆನಪಿನ ಲೇಖನ ಇಲ್ಲಿದೆ
ಸಹಸ್ರ ಸಹಸ್ರ ವರ್ಷಗಳ ಅದ್ಭುತ ಇತಿಹಾಸ ಪರಂಪರೆಗಳ ಭಾರತವರ್ಷವಿಂದು ಸಂಕ್ರಮಣ ಸ್ಥಿತಿಯಲ್ಲಿದೆ. ಸುಷುಪ್ತಾವಸ್ಥೆಯಲ್ಲಿದ್ದ ನಮ್ಮ ದೇಶವನ್ನು ಎಚ್ಚರಿಸಿದ ಸ್ವಾಮಿ ವಿವೇಕಾನಂದರು ಹೊಸ ಪರ್ವದ ಅಧ್ವರ್ಯುವಾದರು. ಆರ್ಯ ಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿಗಳು, ಮಹರ್ಷಿ ಅರವಿಂದರು ಬೆಳಕು ತೋರಿದರು. 19 ಮತ್ತು 20ನೆಯ ಶತಮಾನಗಳಲ್ಲಿ, ಬ್ರಿಟಿಷರು- ಕಮ್ಯುನಿಸ್ಟರು- ಕಾಂಗ್ರೆಸ್ಸಿಗರು ವಿಕೃತಗೊಳಿಸಿದ ಭಾರತೀಯ ಇತಿಹಾಸವನ್ನು ಅಪಾರವಾದ ಪರಿಶ್ರಮದಿಂದ ಸರಿದಾರಿಗೆ ತರಲು ಬಹಳ ದೊಡ್ಡ ಕೊಡುಗೆ ನೀಡಿದವರು ಇತಿಹಾಸ ರಚನಾಶಾಸ್ತ್ರಜ್ಞ ಸೀತಾರಾಮ ಗೋಯಲ್ ಮತ್ತು ಪತ್ರಕರ್ತ ಅರುಣ್ ಶೌರಿ.
ಸೀತಾರಾಮ ಗೋಯಲ್ ಜನಿಸಿದ್ದು 1921ರ ಅಕ್ಟೋಬರ್ 16ರಂದು. ಗೋಯಲ್ ಅವರ ವಾಯ್ಸ್ ಆಫ್ ಇಂಡಿಯಾ ಸರಣಿಯ ಗ್ರಂಥಗಳು ಮತ್ತೆ ಭಾರತವನ್ನು ಪರಮ ವೈಭವದ ದಿನಗಳಿಗೆ ಕೊಂಡೊಯ್ಯುವ ಪ್ರೇರಣೆಯನ್ನು ಭಾರತೀಯರಲ್ಲಿ ತುಂಬಿದವು. ಭಾರತೀಯ ಇತಿಹಾಸ ಪ್ರಾರಂಭವಾಗುವುದೇ ವಿದೇಶೀ ಆಕ್ರಮಣಗಳಿಂದ!
ಇದನ್ನೂ ಓದಿ: Manjunath Ajjampura Column: ಮನಸ್ಸು ಮಾಡಿದ್ದರೆ, ತುರ್ತುಪರಿಸ್ಥಿತಿಯಲ್ಲಿ ಗರೀಬಿ ಹಟಾವೋ ಆಗಿಬಿಡುತ್ತಿತ್ತು !
ಅಲೆಕ್ಸಾಂಡರ್ನಿಂದ ಆರಂಭವಾಗಿ ಬ್ರಿಟಿಷರವರೆಗೆ ನಮ್ಮ ಇತಿಹಾಸವು ಬರಿಯ ಸೋಲಿನ ಕಥೆಯಾಗಿ ಹೋಗಿದೆ. ಭಾರತದ ಕಲೆ ಸಾಹಿತ್ಯ ಸಂಸ್ಕೃತಿ ವಿಜ್ಞಾನ ಆಡಳಿತ ಎಲ್ಲವೂ ಮೊಘಲರ ಇಲ್ಲವೇ ಬ್ರಿಟಿಷರ ಕೊಡುಗೆಗಳು ಮಾತ್ರ ಎನ್ನುವಂತಾಗಿದೆ. ದೇಶವೆಲ್ಲ ಹೆಮ್ಮೆಪಡುವ ಪರಂಪರೆ ಯನ್ನು ಅಲ್ಲಗಳೆದು ಹಿಂಸಾಪ್ರಧಾನ ಆಳ್ವಿಕೆಗಳನ್ನು ವೈಭವೀಕರಿಸುವುದು ಮಾರ್ಕ್ಸ್ವಾದಿ ಇತಿಹಾಸಕಾರರ ಷಡ್ಯಂತ್ರವಾಗಿತ್ತು.
ಭಾರತೀಯರ ಅಸ್ಮಿತೆ- ಆತ್ಮಾಭಿಮಾನಗಳನ್ನು ನಾಶ ಮಾಡುವ ಬ್ರಿಟಿಷರ ವಾರಸಿಕೆ ಯನ್ನು ಈ ಕಾಂಗ್ರೆಸ್- ಕಮ್ಯುನಿಸ್ಟ್ ಜೋಡಿ ಮುಂದುವರಿಸಿತು. ಸೀತಾರಾಮ ಗೋಯಲ್ ಮತ್ತು ಅರುಣ್ ಶೌರಿ ಅವರು ಅಕ್ಷರಶಃ ಸಾವಿರಾರು ಸಾಕ್ಷ್ಯಾಧಾರ, ದಾಖಲೆಗಳನ್ನು ನೀಡಿ, ಈ ಕಮ್ಯೂನಿಸ್ಟ್ ಇಸ್ಲಾಂ- ಕ್ರೈಸ್ತರ ಕುತಂತ್ರಗಳನ್ನು ಬಯಲಿಗೆಳೆದಿದ್ದಾರೆ.
ಮೂರು ದಶಕಗಳ ಹಿಂದೆಯೇ, ಗೋಯಲ್ ಅವರು ಅಕ್ರಮ ನುಸುಳುಕೋರರ ಬಗೆಗೆ, ಫಿಫ್ತ್ ಕಾಲಂ (FIFTH COLUMN)- ಸ್ಲೀಪರ್ ಸೆಲ್ಗಳ ಬಗೆಗೆ ಎಚ್ಚರಿಕೆ ನೀಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಹಾಗೆ ಬೆಳೆದು ನಿಂತ ಅಪಾಯಗಳ ವಿಷಫಲಗಳನ್ನು ನಾವಿಂದು ನಿತ್ಯ ಉಣ್ಣುತ್ತಿದ್ದೇವೆ. ಶಿವಾಜಿ ಮಹಾರಾಜರು ಸೇನೆ ಕಟ್ಟಿ, ರಾಜ್ಯ ಕಟ್ಟಿ ಮೊಘಲ್ ಶಾಹಿಗೆ ಸವಾಲು ಹಾಕಿದರು. ಆದರೆ ಮುಸ್ಲಿಮರ ಬಗೆಗೆ ದ್ವೇಷ ಸಾಧಿಸಲಿಲ್ಲ, ಸೇಡು ತೀರಿಸಿಕೊಳ್ಳಲಿಲ್ಲ.
ಮಹಾರಾಷ್ಟ್ರದಲ್ಲಿ ಇಂದು ನಾವು ನೋಡುವ ಮುಸ್ಲಿಮರು ಉಳಿದಿದ್ದೇ ಶಿವಾಜಿಯ ಪರಮತ ಸಹಿಷ್ಣುತೆ ಯಿಂದ. ಅವರು ಶಿವಾಜಿಯ ಬಗ್ಗೆ ಕೃತಜ್ಞತೆಯಿಟ್ಟುಕೊಳ್ಳಬೇಕಿತ್ತು. ಅಂತರಜಾಲದಲ್ಲಿ, ಕೆಲ ವರ್ಷಗಳ ಹಿಂದೆ ಮೀರಜ್ನಲ್ಲಿ ಮುಸ್ಲಿಮರು ಮಾಡಿದ ಗಲಭೆಗಳ ವಿಡಿಯೋ ನೋಡಿದೆ. ಶಿವಾಜಿಯು ಅಫಜಲ ಖಾನ್ನನ್ನು ವಧಿಸಿದ ಚಿತ್ರಗಳನ್ನು ಅಲ್ಲಿನ ಗಣೇಶೋತ್ಸವದಲ್ಲಿ ಪ್ರದರ್ಶಿಸ ಲಾಗಿತ್ತು. ಆ ಚಿತ್ರಗಳನ್ನು ಕಿತ್ತು ಧ್ವಂಸಮಾಡಿ, ಪೊಲೀಸ್ ಜೀಪು ಹತ್ತಿ ಹಸಿರು ಬಾವುಟ ಹಾರಿಸಿದ ಮುಸ್ಲಿಮರನ್ನು ನೋಡಿ ವಿಚಿತ್ರವೆನಿಸಿತು.
ಮೂಲತಃ ಅವರು ಈ ದೇಶದ ಹಿಂದೂಗಳೇ, ಮೂಲನಿವಾಸಿಗಳೇ. ಸೌದಿ ಅರೇಬಿಯಾದಿಂದ ಬಂದವರೇ ನಲ್ಲ. ಆಕ್ರಮಣಕಾರಿಗಳ ಅತ್ಯಾಚಾರಕ್ಕೆ ಮತ್ತು ಬಲವಂತದ ಮತಾಂತರಕ್ಕೆ ತುತ್ತಾದವರು, ಇಂದು ತಮ್ಮ ತಾಯಿಯನ್ನೂ ಒಡಹುಟ್ಟಿದವರನ್ನೂ ಮರೆತು ತಮ್ಮ ಸಮುದಾ ಯದ ಉಳಿವಿಗೆ ಕಾರಣರಾದ ಶಿವಾಜಿ ಮಹಾರಾಜರ ಚಿತ್ರಗಳನ್ನು ನಾಶಪಡಿಸಿದುದು ಎಷ್ಟು ಭಯಾನಕ!
ನಮ್ಮಲ್ಲಿ ಮಹಾಪುರುಷರು ಅನೇಕರು. ಕಲಾವಿದರು, ವೇದ ಶಾಸ್ತ್ರ ಪಾರಂಗತರು, ಋಷಿಗಳು, ಆಡಳಿತಗಾರರು, ನರ್ತಕರು, ವೀರರು, ಯಾವ ಕ್ಷೇತ್ರವನ್ನೇ ನೋಡಿ, ಮಹಾನ್ ಸಾಧಕರು ಸಿಕ್ಕುತ್ತಾರೆ. ಅಷ್ಟೇ ಅಲ್ಲ; ಜ್ಞಾನಿಗಳು, ವಿರಾಗಿಗಳು, ಯೋಗಿಗಳು, ಅವಧೂತರು, ನಮ್ಮಲ್ಲಿರುವಷ್ಟು ಬೇರೆಲ್ಲೂ ಇಲ್ಲ. ನಮ್ಮ ಹಿಂದೂ ಸಂಸ್ಕೃತಿಯ ಬಗೆಗೆ ಅನೇಕ ವಿದೇಶೀಯರೂ ಅಭಿಮಾ ವಿಟ್ಟುಕೊಂಡಿದ್ದಾರೆ. ಆದರೆ ಹಿಂದೂ ಸಮಾಜ ಉಳಿಯದೇ ಹೋದರೆ, ಈ ನಮ್ಮ ಕಲೆ, ಶಿಲ್ಪಗಳು, ನೃತ್ಯ, ಚಿತ್ರಕಲೆ, ಭಾಷೆಗಳು, ಸಾಹಿತ್ಯ ಉಳಿಯವು.
ಹಿಂದೂ ಸಮಾಜವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಇಡೀ ಜಗತ್ತಿನಲ್ಲಿ ಆರ್ಭಟಿಸುತ್ತಿರುವ ಅಬ್ರಹಾಮಿಕ್ ಮತಗಳ ಆಕ್ರಮಣಕಾರೀ ಸ್ವರೂಪದ ಬಹು ಆಯಾಮಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ, ಗೋಯಲ್ ಅವರ ಮಾತುಗಳಿಂದ ನಮ್ಮಲ್ಲಿ ಜಾಗೃತಿ ಮೂಡುತ್ತದೆ. ಮಹತ್ತ್ವದ ಇಂತಹ ಅನೇಕ ವಿಚಾರಗಳನ್ನು ತಮ್ಮ ಅಸಾಧಾರಣ ವಾಯ್ಸ ಆ- ಇಂಡಿಯಾ ಸರಣಿಯ ಮೂಲಕ ನೀಡಿದವರು ಸೀತಾರಾಮ ಗೋಯಲ್. ಅವರ ಹಿರಿಯರು ಹರ್ಯಾಣ ಮೂಲದವರು.
ಹದಿನೆಂಟನೇ ಶತಮಾನದ ಪೂರ್ವಾರ್ಧದಲ್ಲಿ ಗೋಯಲ್ ಅವರ ಪೂರ್ವಿಕರು ಸಂತ ಗರೀಬದಾಸ್ ಅವರ ಭಕ್ತರಾದರು. ಗರೀಬದಾಸ್ ಅವರು ಹದಿನೆಂಟು ಸಾವಿರ ಪದ್ಯಗಳ ಕಾವ್ಯ ರಚಿಸಿದ್ದರು ಮತ್ತು ಹಾಡುತ್ತಿದ್ದರು. 20ನೆಯ ಶತಮಾನದ ಆರಂಭದಲ್ಲಿ ಗೋಯಲ್ ಅವರ ತಂದೆ ಆಗಾಗ ಗ್ರಂಥ್ ಸಾಹೇಬ್ ಓದುತ್ತಿದ್ದರು.
ಕಬೀರ, ಗುರು ನಾನಕ್, ರವಿದಾಸ್, ದಾದು, ನಾಮದೇವ, ಚಿಪ್ಪ, ಪಿಪ, ಧನ್ನ ಮುಂತಾದ ಸಂತರ ಕತೆಗಳು ಬಾಲಕ ಸೀತಾರಾಮ ಗೋಯಲ್ ಮೇಲೆ ಪ್ರಭಾವ ಬೀರಿದವು. ಅಂತೆಯೇ ಮುಸ್ಲಿಂ ಸೂಫಿ ಸಂತರಾದ ರಬಿಯಾ, ಮನರ್ಸೂ, ಆದಂ ಸುಲ್ತಾನ್, ಜುನಾಯಿದ್, ಬಯಾಜಿದ್, ಷಮ್ಸ ತಬ್ರೀಜ್ ಅವರ ಕತೆಗಳೂ ಪ್ರಭಾವಿಸಿದವು. ಕೋಲ್ಕತ್ತಾದಲ್ಲಿನ ಅವರ ಬಾಲ್ಯದ ಅನುಭವಗಳಲ್ಲಿ, ಭಾರತ ಸ್ವಾತಂತ್ರ್ಯ ಹೋರಾಟದ ಚಿತ್ರಗಳೂ ಇವೆ. ಉಪ್ಪಿನ ಸತ್ಯಾಗ್ರಹ, ಕ್ರಾಂತಿಕಾರಿ ಜತೀಂದ್ರನಾಥ ದಾಸರ ಪಾರ್ಥಿವ ಶರೀರದ ಮೆರವಣಿಗೆ, ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್ ಬಲಿದಾನ ಇತ್ಯಾದಿಗಳು ಬಾಲಕ ಗೋಯಲ್ಗೆ ನಮ್ಮ ದೇಶದ ಪಾರತಂತ್ರ್ಯದ ದುಃಸ್ಥಿತಿಯನ್ನು ಪರಿಚಯಿಸಿದವು.
ಗೋಯಲ್ ಅವರ ತಂದೆ ತಾಯಿ ಇದ್ದ ಹಳ್ಳಿಯಲ್ಲಿ ಆರ್ಯ ಸಮಾಜವು ಕಾಂಗ್ರೆಸ್ಸಿಗಿಂತಲೂ ಹೆಚ್ಚಿನ ಪ್ರಭಾವ ಉಂಟು ಮಾಡಿತ್ತು. ಗೋಯಲ್ರ ನೆರೆಹೊರೆಯಲ್ಲಿದ್ದವರೆ ಮುಸ್ಲಿಮರು. ಅವರೆ ಎಣ್ಣೆ ಮಾರುವವರು. ಕಠಿಣ ಪರಿಶ್ರಮಿಗಳೂ, ಶಾಂತ ಸ್ವಭಾವದವರೂ ಆದ ಈ ಮುಸ್ಲಿಮರು ಹಿಂದುಗಳೊಂದಿಗೆ ಒಳ್ಳೆಯ ಬಾಂಧವ್ಯವನ್ನಿಟ್ಟುಕೊಂಡಿದ್ದರು.
ಸಂತ ಕಬೀರ್ ಮತ್ತು ಗುರು ನಾನಕರ ನಿರ್ಗುಣ ಪರಂಪರೆಯ ಪ್ರಭಾವವಿದ್ದ ಗರೀಬದಾಸರ ಶಿಷ್ಯರಾದ ಈ ಗೋಯಲ್ ಮನೆತನದ ಗಂಡಸರು ಮೂರ್ತಿಪೂಜೆ ಮುಂತಾದವುಗಳಲ್ಲಿ ಭಾಗವಹಿಸುತ್ತಿದ್ದುದು ಕಡಿಮೆ. ಆದರೆ ಹೆಂಗಸರು ಮಾತ್ರ ಉಪವಾಸ, ವ್ರತ, ದೇವಸ್ಥಾನಗಳಿಗೆ ಹೋಗುವುದು, ಮುಂತಾದವುಗಳನ್ನು ಪಾಲಿಸುತ್ತಿದ್ದರು. ಅವರ ಸಮುದಾಯದ ಓರ್ವ ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿತ್ವ, ಅವರು ಜೈಲಿನಲ್ಲಿ ತುಂಬ ವರ್ಷ ಇದ್ದದ್ದು, ಹರಿಜನರ ಪ್ರಗತಿಗೆ ಅವರ ಅಪಾರ ಪರಿಶ್ರಮ ಮುಂತಾದವು ಬಾಲಕನ ಮೇಲೆ ಗಾಢ ಪರಿಣಾಮ ಬೀರಿದವು.
ಗೋಯಲ್ಗೆ ಸ್ವಾಮಿ ದಯಾನಂದ ಸರಸ್ವತಿ ಅವರ ಸತ್ಯಾರ್ಥ ಪ್ರಕಾಶ ಮಹಾಗ್ರಂಥದ ಪರಿಚಯ ವಾದುದು ಈ ಕಾಲಘಟ್ಟದಲ್ಲಿಯೇ. ಸತ್ಯಾರ್ಥ ಪ್ರಕಾಶದ ತೀಕ್ಷ್ಣ ಸತ್ಯದ ಪ್ರಖರತೆಯಿಂದ ಗೋಯಲ್ರ ಎಳೆಯ ಮನಸ್ಸು ವಿಚಲಿತವಾಯಿತು. ಆ ಗ್ರಂಥದಲ್ಲಿರುವ ಇಸ್ಲಾಂ ಕ್ರೈಸ್ತ ಮತಗಳ ಬಗೆಗಿನ ಮತ್ತು ಹದೀಸ್, ಖುರಾನ್, ಬೈಬಲ್ಗಳ ಬಗೆಗಿನ ಕಟುಸತ್ಯಗಳು ಯಾರಿಗೇ ಆಗಲೀ ಆಘಾತವನ್ನುಂಟು ಮಾಡುತ್ತವೆ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಗೋಯಲ್ಗೆ ಜೈನಧರ್ಮದ ಪರಿಚಯವೂ ಆಯಿತು.
ಗೆಳೆಯನೊಬ್ಬ ತಂದುಕೊಟ್ಟ ರೋಮಾ ರೋಲಾ ಬರೆದ ಶ್ರೀರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳು ಅಧ್ಯಾತ್ಮದತ್ತ ಬಾಲಕನನ್ನು ಸೆಳೆದವು. ಒಮ್ಮೆ ಬಾಲಕ ತನ್ನಲ್ಲಿದ್ದ ಐದು ಕಾಸು ನಾಣ್ಯ ಕೊಟ್ಟು ನ್ಯೂ ಟೆಸ್ಟಮೆಂಟ್ ಪ್ರತಿಯನ್ನು ಹಳೆಯ ಪುಸ್ತಕ ಮಾರುವವನಿಂದ ಕೊಂಡುಕೊಂಡ. ಆ ಕಾಲಕ್ಕೆ ಅದು ಸಣ್ಣ ಮೊತ್ತವೇನಾಗಿರಲಿಲ್ಲ. ಬಾಲಕನ ಪುಸ್ತಕ ಪ್ರೀತಿ ಅಂತಹುದು. ಆ ಪುಸ್ತಕದಲ್ಲಿನ ಕ್ರಿಸ್ತನ ಉಪದೇಶದ ಭಾಗ, ಅದೆಷ್ಟು ಇಷ್ಟವಾಯಿ ತೆಂದರೆ, ಕ್ರಿಸ್ತನ ಚಿತ್ರವೊಂದನ್ನು ಕೊಂಡುತಂದು, ಮನೆಯಲ್ಲಿ ತನ್ನ ಕೊಠಡಿಯಲ್ಲಿದ್ದ ಮಹಾತ್ಮಾ ಗಾಂಧಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥರ ಚಿತ್ರಗಳೊಂದಿಗೆ ತೂಗು ಹಾಕಿದ.
ನ್ಯೂ ಟೆಸ್ಟಮೆಂಟ್, ಕ್ರಿಸ್ತನ ಚಿತ್ರ, ಬೈಬಲ್ ಮುಂತಾದವು ಬಿಟ್ಟಿಯಾಗಿಯೇ ಚರ್ಚ್ಗಳಲ್ಲಿ ಸಿಕ್ಕುತ್ತಿದ್ದವು ಎಂಬುದು ಹುಡುಗನಿಗೆ ಗೊತ್ತಿರಲಿಲ್ಲ. ಪುಸ್ತಕಗಳ ಹುಚ್ಚಿನ ಬಾಲಕ ಸೀತಾರಾಮನಿಗೆ ಗಾಂಧೀವಾದ ಪ್ರಿಯವಾಗುತ್ತ ಹೋಯಿತು. ಸಹಪಾಠಿಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಚಯವೂ ಆಯಿತು. ಹೆಚ್.ಜಿ.ವೆಲ್ಸ್ ರಚಿಸಿದ ಔಟ್ಲೈನ್ ಆಫ್ ಹಿಸ್ಟರಿ, ಗಾಂಧಿಯಿಸಂ ವರ್ಸಸ್ ಸೋಷಲಿಸಂ, ಹೆರಾಲ್ಡ್ ಲಸ್ಕಿ ಬರೆದ ಕಮ್ಯೂನಿಸಂ, ಜಾನ್ ಸ್ಟ್ರಾಚೆ ಬರೆದ ಥಿಯರಿ ಆಂಡ್ ಪ್ರಾಕ್ಟೀಸ್ ಆಫ್ ಸೋಷಲಿಸಂ, ಎಡ್ಗರ್ ಸ್ನೋ ರಚಿಸಿದ ರೆಡ್ ಸ್ಟಾರ್ ಓವರ್ ಚೈನಾ ಮುಂತಾದ ಪುಸ್ತಕಗಳಿಂದ ಕಮ್ಯುನಿಸಂ ಪ್ರಿಯವಾಗುತ್ತ ಹೋಯಿತು.
ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಓದಿದ ಮೇಲಂತೂ ಉಸಿರು ಬಿಗಿ ಹಿಡಿಯುವಂತಾಯಿತು. ಬೌದ್ಧಿಕ ಬೆಳವಣಿಗೆಯ ಈ ಹಂತದಲ್ಲಿ ಇಪ್ಪತ್ತೆರಡರ ವಯಸ್ಸಿನ ಗೋಯಲ್ ಕಮ್ಯುನಿಸ್ಟ್ ಮತ್ತು ಕಟ್ಟಾ ನಾಸ್ತಿಕರಾಗಿದ್ದರು. ಜೀವನದ ಈ ಘಟ್ಟದಲ್ಲಿ ಗೋಯಲ್ ಅವರ ಹಳೆಯ ಸ್ನೇಹಿತ ರಾಮ ಸ್ವರೂಪರು, ಅವರ ವೈಚಾರಿಕ ವಿಕಾಸಕ್ಕೆ ಕಾರಣರಾದರು. ಗೋಯಲ್ ಯಾವುದನ್ನೂ ಸುಮ್ಮನೇ ಒಪ್ಪುವವರಲ್ಲ.
ಆಳವಾದ ಅಧ್ಯಯನ, ಪರಾಮರ್ಶೆಗಳಿಂದಲೇ ತಮ್ಮ ಬೌದ್ಧಿಕತೆಯ ಸೌಧವನ್ನು ನಿರ್ಮಿಸಿ ಕೊಂಡವರು. ಫೆಬ್ರವರಿ 1948ರ ವೇಳೆಗೆ ಕಮ್ಯುನಿಸ್ಟ್ ಪಕ್ಷವನ್ನೇ ಸೇರಲು ಹೊರಟಿದ್ದ ಗೋಯಲ್ಗೆ, ಅವರ ಸಂಸ್ಕೃತದ ಓರ್ವ ಪ್ರೊಫೆಸರ್ ಹೊಸಹೊಸ ವಿಚಾರಗಳ ಬೆಳಕು ಚೆಲ್ಲಿದರು. ಆರ್ಯರು ಭಾರತವನ್ನು ಆಕ್ರಮಿಸಿದರು, ದ್ರಾವಿಡರನ್ನು ದಕ್ಷಿಣ ದಿಕ್ಕಿಗೆ ಓಡಿಸಿದರು ಎಂಬ ಯೂರೋಪಿ ಯನ್ ಪ್ರಣೀತ ವಾದಸರಣಿ ಮೋಸದ್ದು ಎಂದು ತಿಳಿದಾಗ ಗೋಯಲ್ ಆಘಾತಕ್ಕೆ ಒಳಗಾಗಿಬಿಟ್ಟರು.
ಬ್ರಿಟಿಷರು ಬರೆಸಿ ಶಾಲೆಗಳಲ್ಲಿ ಕಲಿಸುತ್ತಿದ್ದ ಸುಳ್ಳು ಇತಿಹಾಸ ಉಂಟುಮಾಡಿದ್ದ ಭ್ರಮೆಗಳನ್ನು ಕಳಚಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಮೊಹಮ್ಮದ್ ಅಲಿ ಜಿನ್ನಾ ಬೀದಿ ಕಾಳಗಕ್ಕಾಗಿ ನೀಡಿದ ಕರೆ ಕೋಲ್ಕತ್ತದಲ್ಲಿ ಭೀಷಣ ಪರಿಣಾಮವನ್ನುಂಟು ಮಾಡಿತು. 1946ರ ಆಗ 16-17ರ ಹಿಂಸೆ, ಅತ್ಯಾಚಾರ, ಕೊಲೆ, ದೊಂಬಿ, ಆಸ್ತಿ ಪಾಸ್ತಿ ನಾಶ, ಲೂಟಿ, ಬೆಂಕಿ ಹಚ್ಚುವ ಮತೀಯ ಗಲಭೆಗಳನ್ನು ಗೋಯಲ್ ಕಣ್ಣಾರೆ ಕಂಡರು.
ರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿತು. ಹೂಗ್ಲಿ ನದಿಯಲ್ಲಿ ಹೆಣಗಳು ತೇಲಿ ಹೋದವು, ನದಿ ರಕ್ತದಿಂದ ಕೆಂಪಾಯಿತು. ಗುಂಪು ಗಲಭೆ, ದೊಂಬಿಗಳ ರಕ್ಕಸನೃತ್ಯಕ್ಕೆ ಗೋಯಲ್ ಸಾಕ್ಷಿಯಾದರು. ಸ್ವತಃ ಅವರು ಜೀವಸಹಿತ ಉಳಿದದ್ದೂ ವಿಸ್ಮಯವೇ. ಅನಂತರದ ಕಾಲಘಟ್ಟದಲ್ಲಿ ಫ್ರೆಂಚ್ ಸಮಾಜವಾದಿ ಲೇಖಕಿ ಸುಸೇನ್ ಲ್ಯಾಬಿನ್ ಬರೆದ ಸ್ಟ್ಯಾಲಿನ್ನನ ರಷ್ಯಾ ಓದಿದಾಗ, ಸೋವಿಯತ್ ಒಕ್ಕೂಟದ ವಿಭಿನ್ನ ಮುಖಗಳು ಪರಿಚಯವಾದವು.
ಇಂದು ಅಮೆರಿಕಾ ಏನಾಗಿದೆಯೋ, ಅದು ಸೋವಿಯತ್ ಒಕ್ಕೂಟದ ನಾಳೆಯ ಗುರಿಯಾಗಿತ್ತು. ಪ್ರಭುತ್ವ ನಿರ್ದೇಶಿತ ಬಂಡವಾಳಶಾಹಿ ಮತ್ತು ವ್ಯವಸ್ಥಿತ ಭಯೋತ್ಪಾದನೆಗಳು ರಷ್ಯಾ ಅನುಸರಿಸಿದ ಮಾರ್ಗ ಗಳಾಗಿದ್ದರೆ, ಅಮೆರಿಕಾ ದೇಶವು ಮಾರುಕಟ್ಟೆ ಶಕ್ತಿಗಳಿಗೆ, ಲಾಭಪ್ರದತೆಗೆ ಆದ್ಯತೆ ನೀಡಿತ್ತು. ಮನುಷ್ಯ ಜೀವನದ ಔನ್ನತ್ಯಗಳನ್ನು ಎಲ್ಲರೂ ಮರೆತಿದ್ದರು. ಬೌದ್ಧಿಕ ಗೊಂದಲದ ಈ ಸಂಕ್ರಮಣ ಸ್ಥಿತಿಯಲ್ಲಿ, ಮತ್ತೆ ಗೆಳೆಯ ರಾಮಸ್ವರೂಪರ ವಿಚಾರಗಳು, ಸಲಹೆ, ಮಾರ್ಗದರ್ಶನ ಗೋಯಲ್ಗೆ ದಿಕ್ಕು ತೋರಿದವು.
ಗೋಯಲ್ರ ಹೌ ಐ ಬಿಕೇಮ್ ಎಲ್ಲಾ ಹಿಂದು ಕೃತಿಯು ಅವರ ಬೌದ್ಧಿಕ ಆತ್ಮವೃತ್ತಾಂತ. ಆರ್ಯ ಸಮಾಜದಿಂದ ಗಾಂಧಿವಾದದೆಡೆಗೆ, ಗಾಂಧಿವಾದದಿಂದ ಕಮ್ಯೂನಿಸಂ ಕಡೆಗೆ, ಕಮ್ಯೂನಿಸಂನಿಂದ ಭಾರತೀಯ ತತ್ತ್ವಜ್ಞಾನ- ಅಧ್ಯಾತ್ಮಗಳಿಗೆ ಗೋಯಲ್ರು ಹಿಂತಿರುಗಿದ ಹಾದಿಯ ಅಪೂರ್ವ ಚಿತ್ರಣವನ್ನು ಈ ಕೃತಿಯಲ್ಲಿ ಕಾಣಬಹುದು. ಹಿಂದೀ, ಉರ್ದು, ಬಂಗಾಳಿ, ಸಂಸ್ಕೃತ, ಪರ್ಷಿಯನ್ ಹಾಗೂ ಇಂಗ್ಲಿಷ್ ಭಾಷೆಗಳನ್ನು ಕಲಿತ ಸೀತಾರಾಮ ಗೋಯಲ್ ಸಾಹಿತ್ಯ, ಅಧ್ಯಾತ್ಮ, ತತ್ತಜ್ಞಾನ, ಧರ್ಮ, ಮತ, ಇತಿಹಾಸ, ಸಮಾಜಶಾಸ್ತ್ರ ಮತ್ತು ಪ್ರಾಚೀನ- ಮಧ್ಯಕಾಲೀನ- ಆಧುನಿಕ ಸಂಸ್ಕೃತಿ- ನಾಗರಿಕತೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು.
ಮಹಾಭಾರತ, ಸುತ್ತಪಿಟಕ, ಪ್ಲೇಟೋ ಮತ್ತು ಮಹರ್ಷಿ ಅರವಿಂದರಿಂದ ಗೋಯಲ್ ಸ್ಪೂರ್ತಿ ಪ್ರೇರಣೆ ಗಳನ್ನು ಪಡೆದುಕೊಂಡರು. ಇಸ್ಲಾಂ, ಕ್ರೈಸ್ತಮತ ಮತ್ತು ಕಮ್ಯುನಿಸ್ಟ್ ವಿಚಾರಧಾರೆಗಳ ಬಗೆಗೆ ಅಧ್ಯಯನ ಮಾಡಿದ ಗೋಯಲ್ ದಾಖಲೆ- ಸಾಕ್ಷ್ಯಾಧಾರಗಳಿಗೆ ತುಂಬ ಮಹತ್ತ್ವ ನೀಡಿದವರು. ನಿಸ್ಸಂದಿಗ್ಧವಾದ ಅಧ್ಯಯನ- ಪರಿಶ್ರಮಗಳಿಂದ 30ಕ್ಕೂ ಹೆಚ್ಚು ಗ್ರಂಥಗಳನ್ನು ಇಂಗ್ಲಿಷ್- ಹಿಂದಿಗಳಲ್ಲಿ ಪ್ರಕಟಿಸಿದ್ದಾರೆ.
ಹಿಂದೀ ಭಾಷೆಗೆ ಕೆಲವು ಮಹತ್ತ್ವದ ಕೃತಿಗಳನ್ನು ಅನುವಾದಿಸಿಯೂ ಇದ್ದಾರೆ. ಹಿಂದೂಯಿಸಂ ಟುಡೆ, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಆರ್ಗನೈಸರ್ ಪತ್ರಿಕೆಗಳಲ್ಲಿ, ಗೋಯಲ್ ಅವರ ವಿಚಾರ ಸರಣಿ ಪ್ರಕಟವಾಗಿದೆ. ಈ ಲೇಖನಗಳು ಗ್ರಂಥರೂಪದಲ್ಲಿಯೂ ಹೊರಬಂದಿವೆ. ಮೂಲತಃ ಕ್ರೈಸ್ತಮತದ ವಿರುದ್ಧವಾಗಿ ಯೂರೋಪಿನಲ್ಲಿ ಆಧುನಿಕ ಕಾಲದಲ್ಲಿ ಹುಟ್ಟಿದ ಸೆಕ್ಯುಲರಿಸಂ, ಭಾರತದಲ್ಲಿ ವಿಕೃತ ರೂಪವನ್ನು ತಳೆದಿರುವುದನ್ನು ಗೋಯಲ್ ಟೀಕಿಸಿದ್ದಾರೆ.
ಭಾರತದಲ್ಲಿ ಸೆಕ್ಯುಲರಿಸಂ ಎನ್ನುವುದು ಬರಿಯ ಹಿಂದೂದ್ವೇಷದ ವಾದವಾಗಿದೆ, ಅದು ಇಸ್ಲಾಮಿನ ಬಗೆಗೆ ಮಾತೇ ಆಡುವುದಿಲ್ಲ, ಎನ್ನುತ್ತಾರೆ ಗೋಯಲ್. ಅಲಿಗಢ ವಿಶ್ವವಿದ್ಯಾನಿಲಯ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಗಳಿಗೆ ಲಗ್ಗೆಯಿಟ್ಟ ಮಾರ್ಕ್ಸ್ವಾದಿ ಇತಿಹಾಸಕಾರರು, ಮಧ್ಯಕಾಲೀನ ಭಾರತದ ಇತಿಹಾಸ ಮತ್ತು ಮುಸ್ಲಿಂ ಆಕ್ರಮಣಗಳನ್ನು ವಿಕೃತವಾಗಿ ತಿರುಚಿದುದನ್ನು, ಪಠ್ಯಪುಸ್ತಕಗಳಲ್ಲಿ ಅಸತ್ಯಗಳನ್ನು ತುಂಬಿದುದನ್ನು, ಎನ್ಸಿಇ ಆರ್ಟಿ, ಐಸಿಎಚ್ಆರ್ ಸಂಸ್ಥೆಗಳ ಮೂಲ ಉದ್ದೇಶ- ಕೆಲಸಕಾರ್ಯಗಳನ್ನು ವಿರೂಪಗೊಳಿಸಿದು ದನ್ನು ಗೋಯಲ್ ಬಯಲಿಗೆಳೆದಿದ್ದಾರೆ.
ಜವಾಹರಲಾಲ್ ನೆಹರೂ ಅವರ ಕಾರ್ಯನೀತಿ ಕುರಿತ ಟೀಕೆ ಮತ್ತು ಇಸ್ಲಾಮಿನ ವಿಮರ್ಶೆಗಳನ್ನು ಕುರಿತಂತೆ, ಭಾರತೀಯ ಮಾಧ್ಯಮದ ಪಕ್ಷಪಾತವನ್ನು ಗೋಯಲ್ ಐವತ್ತರ ದಶಕದಲ್ಲಿಯೇ ಖಂಡಿಸಿದ್ದರು. 1982ರಲ್ಲಿ ರಾಮಸ್ವರೂಪರೊಂದಿಗೆ, ದೆಹಲಿಯಲ್ಲಿ ವಾಯ್ಸ್ ಆಫ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಿದರು. ನಿಜ ಇತಿಹಾಸವನ್ನು ದಾಖಲಿಸಿರುವ ಈ ಸಂಸ್ಥೆಯು ಲಾಭ ಮಾಡುವ ಉದ್ದೇಶವಿಟ್ಟುಕೊಂಡಿಲ್ಲ.
ಕೆ.ಎಸ್. ಲಾಲ್, ಕೊನ್ರಾಡ್ ಎಲ್ಸ್ಟ್, ಹರ್ಷ ನಾರಾಯಣ್, ಸುಹಾಸ್ ಮಜುಂದಾರ್, ರಾಜೇಂದ್ರ ಸಿಂಗ್, ಡೇವಿಡ್ ಫ್ರಾಲಿ (ವಾಮದೇವ ಶಾಸ್ತ್ರೀ), ಸಂತ ಆರ್. ಎಸ್. ನಿರಾಲಾ, ಶ್ರೀಕಾಂತ ತಲಗೇರಿ, ನವರತ್ನ ಎಸ್. ರಾಜಾರಾಮ, ಎ.ಕೆ. ಚಟರ್ಜಿ ಮುಂತಾದ ವಿದ್ವಾಂಸರ ಮಹತ್ತ್ವದ ಗ್ರಂಥಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಗೋಯಲ್ ಅವರು ಸತ್ಯಸಂಗತಿಗಳ ಬಗೆಗೆ ರಾಜಿ ಮಾಡಿಕೊಳ್ಳುವವರಲ್ಲ. ಹಿಂದೂ ಬೌದ್ಧಿಕ ವಲಯಗಳಲ್ಲಿ ತುಂಬ ಅಪರೂಪ ಎನ್ನುವ ಬೌದ್ಧಿಕ ನಿಷ್ಠುರತೆ ಗೋಯಲ್ ರದ್ದು ಎಂದಿದ್ದಾರೆ ಡೇವಿಡ್ ಫ್ರಾಲಿ.
ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ಚಿಂತಕರಬ್ಬರು ಗೋಯಲ್, ಆಧುನಿಕ ಭಾರತದ ಮಹಾನ್ ಬೌದ್ಧಿಕ ನವಕ್ಷತ್ರಿಯ ಈ ಸೀತಾರಾಮ ಗೋಯಲ್, ಎನ್ನುತ್ತಾರೆ ಫ್ರಾಲಿ. ಸೀತಾರಾಮ ಗೋಯಲ್ 2003ರಲ್ಲಿ ನಿಧನರಾದರು. ಅವರು ಬರೆದಿಟ್ಟು ಹೋಗಿರುವ ವಿದ್ವತ್ಪೂರ್ಣವಾದ ಸಾಹಿತ್ಯವನ್ನು- ವೈಚಾರಿಕ ಬರಹಗಳನ್ನು ಮೂಲದಲ್ಲಿಯೇ ಓದುವುದು ಅತ್ಯುತ್ತಮವೆನಿಸಿದರೂ, ಕನ್ನಡದ ಓದುಗರಿಗೆ ಅಂತಹ ಬೆಳಕಿಂಡಿಯನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವೂ ನಡೆಯುತ್ತಿದೆ.