Shishir Hegde Column: ಗಡ್ಡಕಿಂತ ವಾಸಿ ಕಣೋ ಬ್ಲೇಡಿನ ದಾಸ್ಯ !
ಜಗತ್ತಿನ ಗಂಡಸರನ್ನು ಎರಡು ವಿಭಾಗವಾಗಿ ವಿಂಗಡಿಸಬಹುದು- ಗಡ್ಡ ಬಿಡುವವರು ಮತ್ತು ಗಡ್ಡ ಬೋಳಿಸುವವರು. ಅಂತೆಯೇ ಹೆಂಗಸರನ್ನು ಕೂಡ ಎರಡು ವಿಭಾಗವಾಗಿಸಬಹುದು- ಗಡ್ಡವನ್ನು ಒಪ್ಪು ವವರು ಮತ್ತು ಗಡ್ಡವನ್ನು ಸಹಿಸದವರು. ಇಬ್ಬರಲ್ಲೂ ಎರಡನೇ ಗುಂಪಿನವರದ್ದೇ ಬಹುಮತ !

ಅಂಕಣಕಾರ ಶಿಶಿರ್ ಹೆಗಡೆ

Beards: Because a lion without a mane is just a big cat. “ಗಂಡಸಾದವನು ಗಡ್ಡ ಬೇಡಬೇಕು- ಏಕೆಂದರೆ ಕೇಸರವಿಲ್ಲದ ಕೇಸರಿ- ಗಡ್ಡವಿಲ್ಲದ ಸಿಂಹ ದೊಡ್ಡ ಬೆಕ್ಕಿಗೆ ಸಮಾನ"- ಹೀಗೊಂದು ಮಾತು ಅಮೆರಿಕದ ಗಂಡು ಸಂತತಿಯಲ್ಲಿ ಅತ್ಯಂತ ಪ್ರಚಲಿತವಿದೆ. ಹಾಗೆ ನೋಡಿದರೆ, ಅಮೆರಿಕ ದಲ್ಲಿ ಗಡ್ಡ ಮತ್ತು ಮೀಸೆ ಬಿಡುವವರ ಪ್ರಮಾಣ ಕಡಿಮೆ. ಹೆಚ್ಚಿನವರದು ಕ್ಲೀನ್ ಶೇವ್. ಅದರಲ್ಲೂ ಗಡ್ಡ ತೆಗೆದು ಮೀಸೆಯಷ್ಟೇ ಬಿಡುವವರಂತೂ ಇಲ್ಲವೇ ಇಲ್ಲ ಎಂದರೂ ಸರಿ. ಸಾವಿರಕ್ಕೆ ಒಬ್ಬರು ಇಬ್ಬರು. ಒಂದಿಡೀ ದಿನ ಇಲ್ಲಿನ ನಗರದ ಬೀದಿಗಳಲ್ಲಿ ಸುತ್ತಿದರೆ ಅಪರೂಪಕ್ಕೆ ಎಲ್ಲಾ ಒಂದಿಬ್ಬರು ಮೀಸೆ ಮಾತ್ರ ಬಿಟ್ಟವರು ಕಾಣಸಿಗಬಹುದು. ಅಂಥವರು ಗುಂಪಿನಲ್ಲಿ ವಿಚಿತ್ರವಾಗಿ ಕಂಡು ಗಮನ ಸೆಳೆಯುತ್ತಾರೆ. ಓದುಗರಾದ ರಾಜು ಹಗ್ಗದ ಅವರು ಈಗೊಂದು ತಿಂಗಳ ಹಿಂದೆ ಹೀಗೊಂದು ಇ-ಮೇಲ್ ಕಳುಹಿಸಿದ್ದರು. “ಸರ್, ನಿಮ್ಮ ಲೇಖನಗಳನ್ನು ತಪ್ಪದೆ ಪ್ರತಿ ವಾರ ಓದುವ ಓದುಗ ನಾನು. ನನ್ನದೊಂದು ವಿನಂತಿಯಿದೆ. ನಾನು ಇತ್ತೀಚೆಗೆ ಮೊಟ್ಟ ಮೊದಲ ಬಾರಿ ಗಡ್ಡ ಬಿಟ್ಟಿದ್ದೇನೆ. ಆದರೆ ನನ್ನ ಹೆಂಡತಿ ದಿನ ಬೆಳಗಾದರೆ ‘ಗಡ್ಡ ನಿಮಗೆ ಸರಿ ಕಾಣುವುದಿಲ್ಲ, ತೆಗೆಯಿರಿ’ ಎನ್ನುತ್ತಾಳೆ.
ಇದನ್ನೂ ಓದಿ: Shishir Hegde Column: ಪ್ರೀತಿಯ ಹೆಂಡತಿಗೊಂದು ಬಹಿರಂಗ ಪತ್ರ
ಮನೆಯಲ್ಲಿ, ಕುಟುಂಬದಲ್ಲಿ ಎಲ್ಲಿಲ್ಲದ ವಿರೋಧ. ದಯವಿಟ್ಟು ಗಡ್ಡದ ಬಗ್ಗೆ ಲೇಖನವೊಂದನ್ನು ಬರೆಯಿರಿ ಸರ್. ಆ ಲೇಖನವನ್ನು ಅವಳ ಮುಂದಿಟ್ಟಾದರೂ ನನ್ನ ಗಡ್ಡವನ್ನು ಉಳಿಸಿಕೊಳ್ಳುತ್ತೇನೆ. ಉಳಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ". ಆಗೀಗ ಓದುಗರಿಂದ ಇಂಥದ್ದೊಂದು ವಿಷಯದ ಮೇಲೆ ಬರೆಯಿರಿ ಎಂಬ ತಾಕೀತು ಬರುವುದು ಸಾಮಾನ್ಯ. ಆದರೆ ಇದು ಕೇವಲ ಅಂಥ ಕೋರಿಕೆ ಅಲ್ಲ.
ಓದುಗರೊಬ್ಬರ ಗಡ್ಡದ ಅಳಿವು ಉಳಿವಿನ ಪ್ರಶ್ನೆ. ಸುಮ್ಮನೆ ಏನೋ ಒಂದು ಸಬೂಬು ಕೊಟ್ಟು ಬಿಡುವಂತೆಯೂ ಇಲ್ಲ. ಆದರೆ ಈ ವಿಷಯದ ಮೇಲೆ ಅಧಿಕೃತವಾಗಿ ಬರೆಯುವುದು ಹೇಗೆ? ಯಾವುದೇ ವಿಷಯವಿರಲಿ, ಸಾಧ್ಯವಾದಲ್ಲಿ ಅದನ್ನು ಅನುಭವಿಸಿಯೇ ಬರೆಯಬೇಕು. ಆದರೆ ಖುದ್ದು ನನಗೇ ಗಡ್ಡ ಬಿಟ್ಟು ಗೊತ್ತಿಲ್ಲ. ಅಂತೂ ರಾಜು ಅವರ ಬಳಿ ‘ಸ್ವಲ್ಪ ಸಮಯ ಕೊಡಿ’ ಎಂದು ನನ್ನ ಗಡ್ಡ ಬೆಳೆಸುವ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ತಯಾರಾದೆ. ಜಗತ್ತಿನ ಗಂಡಸರನ್ನು ಎರಡು ವಿಭಾಗವಾಗಿ ವಿಂಗಡಿಸಬಹುದು.
ಗಡ್ಡ ಬಿಡುವವರು ಮತ್ತು ಗಡ್ಡ ಬೋಳಿಸುವವರು. ಅಂತೆಯೇ ಹೆಂಗಸರನ್ನು ಕೂಡ ಎರಡು ವಿಭಾಗವಾಗಿಸಬಹುದು. ಗಡ್ಡವನ್ನು ಒಪ್ಪುವವರು ಮತ್ತು ಗಡ್ಡವನ್ನು ಸಹಿಸದವರು. ಗಂಡಸರಲ್ಲಿ ಮತ್ತು ಹೆಂಗಸರಲ್ಲಿ ಇಬ್ಬರಲ್ಲೂ ಎರಡನೇ ಗುಂಪಿನವರದ್ದೇ ಬಹುಮತ. ಗಡ್ಡ ಬಿಡುವ ಗಂಡ, ಅದನ್ನು ಸಹಿಸುವ ಹೆಂಡತಿ ಬಹಳ ಅಪರೂಪದ ಜಾತಕದ ಹೊಂದಾಣಿಕೆ ಅದು. ಸದಾ ಗಡ್ಡ ತೆಗೆಯುವವರಿಗೆ ಅಪರೂಪಕ್ಕೆ ಗಡ್ಡ ಬೆಳೆಸುವುದು ಸುಲಭದ ಕೆಲಸವೇ ಅಲ್ಲ.
ನೂರೆಂಟು ಸವಾಲುಗಳು. ಕ್ಲೀನ್ ಶೇವ್ ಮಾಡುವವರು ಗಡ್ಡ ಬಿಡಬೇಕು ಎಂದು ನಿರ್ಧರಿಸಿದಲ್ಲಿ, ಈ ಒಂದಿಷ್ಟು ಹಂತವನ್ನು ದಾಟಬೇಕಾಗುತ್ತದೆ. ಗಡ್ಡ ಸ್ವಲ್ಪ ಬೆಳೆಯಿತೆಂದುಕೊಳ್ಳಿ- ಕಾಲು ಇಂಚಿ ನಷ್ಟಾಗುವಾಗ ನಮ್ಮ ಇಷ್ಟೇತರರಿಗೆ ಈ ಹಂತದಲ್ಲಿ ಮುಖ ತೋರಿಸುವಂತಿಲ್ಲ. ಅಲ್ಪ ಸ್ವಲ್ಪ ಗಡ್ಡ ಬಿಟ್ಟು ಯಾವುದಾದರೂ ಕಾರ್ಯಕ್ರಮಕ್ಕೆ ಹೋದರೆ ‘ಆರೋಗ್ಯ ಸರಿ ಇಲ್ಲವೇ?’ ಎಂದು ಕಂಡವ ರೆಲ್ಲ ಪ್ರಶ್ನಿಸುತ್ತಾರೆ.
ಸಾಮಾನ್ಯವಾಗಿ ಹೀಗೆ ಕೇಳುವವರಲ್ಲಿ ಗಂಡಸರೇ ಜಾಸ್ತಿ. ಅವರೂ ಪ್ರಶ್ನೆಯನ್ನು- ಗಡ್ಡವನ್ನು ಒಪ್ಪದ ಅವರವರ ಹೆಂಡತಿಯ ಮುಂದೆಯೇ ಕೇಳುವುದು. ಆಗೆಲ್ಲ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವ ದಾರಿಯ ಗಡ್ಡ ತೆಗೆಯಬೇಕಾದ ಸ್ಥಿತಿ ನಿರ್ಮಾಣವಾಗಿರುತ್ತದೆ. ಇಷ್ಟಾಗಿಯೂ, ಸಮಾಜದ ಎಲ್ಲ ಸಂಕೋಲೆಗಳನ್ನು ಮೀರಿ ಗಡ್ಡವನ್ನು ಇನ್ನಷ್ಟು ಬೆಳೆಸಲು ಮುಂದಾದರೆ ಮುಖದಲ್ಲಿ ಎಲ್ಲಿಲ್ಲದ ತುರಿಕೆ ಇತ್ಯಾದಿ.
ರಾತ್ರಿ ಮಲಗಿ ಬೆಳಗೆದ್ದರೆ ಕರೆಂಟ್ ಶಾಕ್ ಹೊಡೆದ ಬೆಕ್ಕಿನ ಮುಖದಂತಾಗಿರುತ್ತದೆ. ಗಡ್ಡ ಸ್ವಲ್ಪ ಉದ್ದ ಬೆಳೆದಿದ್ದರೆ ಬೆಳಗ್ಗೆ ಎದ್ದು ಕನ್ನಡಿ ನೋಡಿಕೊಳ್ಳುವಾಗ ‘ಹುಚ್ಚ ವೆಂಕಟ್’ ಎದುರಿಗೆ ನಿಂತಿರು ವಂತೆ ಕಾಣಿಸುತ್ತದೆ. ಸ್ನಾನ ಮಾಡದೆ ತಲೆ ಬಾಚಿ ಎಲ್ಲಿಗೆ ಬೇಕಾದರೂ ಹೊರಡಬಹುದು, ಆದರೆ ಗಡ್ಡ ಬಿಟ್ಟಿರೆಂದರೆ ಅದರ ರೋಮಾಂಚನವನ್ನು ಸರಿಮಾಡಿಕೊಳ್ಳಲಿಕ್ಕೆ ಸ್ನಾನವೇ ಮಾಡಬೇಕು.
ಹೊಸತಾಗಿ ಗಡ್ಡ ಬಿಡಲು ಮುಂದಾದವರಿಗೆ ಮನೆಯಲ್ಲಿ, ಸಮಾಜದಲ್ಲಿ ಹೀಗೆ ಎಲ್ಲರಿಂದಲೂ ಒತ್ತಡ. ಹಾಗಾಗಿ ಗಡ್ಡ ಬೆಳೆಸುವ, ಗಡ್ಡದ ಬಗ್ಗೆ ಬರೆಯುವ ಮುನ್ನದ ಸ್ವಾನುಭವದ ಯೋಜನೆ ಯನ್ನು ನಾನಂತೂ ಕೌಟುಂಬಿಕ ಒತ್ತಡಗಳಿಂದಾಗಿ ಅರ್ಧಕ್ಕೇ ಕೈಬಿಡಬೇಕಾಯಿತು. ಆದರೆ ರಾಜು ಹಗ್ಗದ ಅವರು ಗಡ್ಡದ ಜವಾಬ್ದಾರಿ ನನಗೆ ವಹಿಸಿದ್ದರಿಂದ ಒಂದು ನಿರಂತರ ಮಾನಸಿಕ ಒತ್ತಡ ವಂತೂ ಇತ್ತು.
ಈಗೊಂದು ವಾರದ ಹಿಂದೆ ರಾಜು ಕಾದು, ಸುಸ್ತಾಗಿ ಹತಾಶೆಯಿಂದ ಇನ್ನೊಂದು ಇಮೇಲ್ ಕಳುಹಿಸಿ ದರು. “ಸರ್, ಕೊನೆಗೂ ನೀವು ಗಡ್ಡದ ಬಗ್ಗೆ ಬರೆಯಲೇ ಇಲ್ಲ. ಇವತ್ತು ನನ್ನ ಗಡ್ಡಕ್ಕೆ ಬೆಂಕಿ ಬಿತ್ತು" ಎಂದರು. ಪ್ರತ್ಯುತ್ತರವಾಗಿ “ರಾಜು ನಿಮ್ಮ ಗಡ್ಡ ಉಳಿಸಲು ಮುಂದಾಗಿದ್ದರೆ ನನ್ನ ತಲೆಯೇ ಹೋಗುತ್ತಿತ್ತು. ಗಡ್ಡ ಹೋದರೆ ಹೊಗಲಿ, ಬಿಟ್ಟರೆ ಮತ್ತೆ ಬರುತ್ತದೆ. ತಲೆ ಹಾಗಲ್ಲವಲ್ಲ!" ಎಂದು ಸುಮ್ಮನಾದೆ.
ಒಂದು ಗಂಭೀರ ಪ್ರಶ್ನೆ. ಏಕೆ ಗಂಡಸರಿಗೆ ಗಡ್ಡ ಬರುತ್ತದೆ? ವೈಜ್ಞಾನಿಕವಾಗಿ ಎಕ್ಸ್-ವೈ ಕ್ರೋಮೋ ಸೋಮ್ ಇತ್ಯಾದಿ ಕಾರಣ ಕೊಟ್ಟು ವಿವರಿಸಬಹುದು. ಅಸಲಿ ಪ್ರಶ್ನೆ ಅದಲ್ಲ. ಪ್ರಶ್ನೆ- ಗಂಡಸಿರಿಗಷ್ಟೇ ಗಡ್ಡ ಏಕೆ ಬರುತ್ತದೆ? ಅದಕ್ಕೊಂದು ಅಡ್ಡನಾಡಿ ವಾದವಿದೆ. “ಮನುಷ್ಯ ‘ಮಂಗನಿಂದ ಮಾನವ’ ಆದದ್ದಲ್ಲವೇ. ಹೆಣ್ಣು ಗಂಡಿಗಿಂತ ಹೆಚ್ಚಿನ ವಿಕಸನ ಹೊಂದಿರುವುದರಿಂದ ಹೆಣ್ಣಿಗೆ ಗಡ್ಡವಿಲ್ಲ,
ಪರೋಕ್ಷವಾಗಿ ಗಂಡು ಇನ್ನೂ ಮಂಗನಿಗೆ ಸಮೀಪ" ಎಂದು! ಈ ಕಥೆಯನ್ನು ಶೇ.50ರಷ್ಟು ಮಂದಿ (ಹೆಂಗಸರು) ಒಪ್ಪಲೂಬಹುದು. ಸಾಮಾನ್ಯವಾಗಿ ಯಾವುದೇ ದೇಹ ರಚನೆಯ ವಿಷಯ ಬಂದಾಗ ವಿಕಾಸವಾದದಲ್ಲಿ ಅದಕ್ಕೊಂದಿಷ್ಟು ಸಮಜಾಯಿಷಿ ಸಿಗುತ್ತದೆ. ಗಡ್ಡ ಗಂಡಸರಿಗೆ ಬರುತ್ತದೆ ಎಂದರೆ ಅದಕ್ಕೆ ಏನೋ ಒಂದು ಕಾರಣವಂತೂ ಇರಬೇಕಾಯ್ತು. ಚಳಿಗೋ, ಚರ್ಮದ ರಕ್ಷಣೆಗೂ ಏನೋ ಒಂದು ಕಾರಣಕ್ಕೆ ಎನ್ನಬಹುದು.
ಆದರೆ ಹೆಣ್ಣು ಕೂಡ ಅದೇ ವಿಕಸನದ ಭಾಗವಾಗಿ ಜತೆಯಲ್ಲಿ ಬೆಳೆದವಳು. ವಾತಾವರಣ, ರಕ್ಷಣೆ ಹೀಗೆ ಯಾವುದೇ ಕಾರಣವಿರಬಹುದು. ಆದರೆ ಗಂಡಸರಲ್ಲಿ ಗಡ್ಡ ಇನ್ನೂ ಉಳಿದುಕೊಂಡಿದೆ ಎಂದರೆ ಅದರಿಂದ ಏನೋ ಒಂದು ಉಪಯೋಗ ಇದೆಯೆಂದಾಯಿತಲ್ಲ! ಉಪಯುಕ್ತ ಎಂದಾದರೆ ಹೆಂಗಸರಿಗೂ ಇರಬೇಕಿತ್ತಲ್ಲ? ಹೆಣ್ಣಿಗೇಕೆ ಈ ಅನ್ಯಾಯ? ಗಂಡು ನವಿಲಿಗೆ ಬಣ್ಣದ ಗರಿ, ಸಿಂಹಕ್ಕೆ ಕೇಸರ, ಹುಂಜಕ್ಕೆ ರೆಕ್ಕೆ ತುರಾಯಿ- ಯಾವುದೇ ಪ್ರಾಣಿಯನ್ನು, ಹಕ್ಕಿಗಳನ್ನು ತೆಗೆದುಕೊಳ್ಳಿ.
ಅಲ್ಲಿ ಗಂಡೇ ಚಂದ. ಬಹುತೇಕ ಪ್ರಾಣಿಗಳ ಗಂಡಿನ ರೂಪ ರಚನೆ ಆಕರ್ಷಣೆಗೆಂದೇ ಒಂದಿಷ್ಟು ಮಾರ್ಪಡಾಗಿರುತ್ತದೆ. ಅವೆಲ್ಲವುದಕ್ಕೂ ಬೇರಿನ್ನೇನೂ ಕಾರಣವಿಲ್ಲ. ಗಂಡಿನ ಗಡ್ಡದ ಕೂದಲಿಗೂ ಅದೇ ಕಾರಣ ಆರೋಪಿಸಲಾಗುತ್ತದೆ. ಅದು ಗಂಡಸ್ತನದ ಸಂಕೇತ ಎಂದು!
ಇತಿಹಾಸದುದ್ದಕ್ಕೂ ಗಡ್ಡಕ್ಕೊಂದು ವಿಶೇಷ ಮಾನ-ಮರ್ಯಾದೆ ಇದ್ದಂತಿದೆ. ಮೆಸಪಟೋಮಿ ಯಾದ ಕಲ್ಲಿನ ಚಿತ್ರಗಳನ್ನು ನೋಡಿದರೆ ಅಲ್ಲಿ ವಿಶೇಷ ವ್ಯಕ್ತಿಗಳನ್ನು ಚಿತ್ರಿಸಿದಲ್ಲ ಅವರಿಗೆ ಗಡ್ಡ ಇರುವುದು ಕಾಣಿಸುತ್ತದೆ. ಅದರಲ್ಲೂ ಮೆಸಪಟೋಮಿಯಾದ ರಾಜನ ಚಿತ್ರವೆಂದರೆ ಅವನ ಗಡ್ಡಕ್ಕೆ ನೂರೆಂಟು ಮಣಿಗಳ ಶೃಂಗಾರ, ಬೇರೆಯದೇ ಆಕಾರ. ಮೆಸಪಟೋಮಿಯಾದ ಕಾಮಧೇನುವಿನಂಥ ಆಕೃತಿಗೂ ಗಡ್ಡವಿದೆ.
ಇನ್ನು ಈಜಿನ ಇತಿಹಾಸದತ್ತ ನೋಡಿದರೆ ಅವರದ್ದು ವಿಚಿತ್ರ. ಆ ರಾಜರುಗಳಿಗೆ ಗಡ್ಡವಿಲ್ಲ. ಆದರೆ ಈಜಿ ರಾಜರು ಗಡ್ಡದಾಕೃತಿಯನ್ನು ಹೋಲುವ ಆಭರಣವನ್ನು ಧರಿಸುತ್ತಿದ್ದರು. ಅಷ್ಟೇ ಅಲ್ಲ, ಈಜಿನ ರಾಣಿಯರೂ ಈ ಗಡ್ಡದ ಆಭರಣವನ್ನು ಮುಖಕ್ಕೆ ಧರಿಸುತ್ತಿದ್ದರು. ಮೆಸಪಟೋಮಿಯಾ ಇಲ್ಲ ಗಡ್ಡವು ಹುದ್ದೆ, ಸ್ಥಾನಮಾನ ಇವುಗಳ ಗುರುತಾದರೆ ಈಜಿನಲ್ಲಿ ಗಡ್ಡ ಬೋಳಿಸಿಕೊಳ್ಳುವ ರೂಢಿ ಬಂದರೂ ಗಡ್ಡಕ್ಕೊಂದು ವಿಶೇಷ ಸ್ಥಾನಮಾನ ಉಳಿದುಕೊಂಡದ್ದನ್ನು ಗ್ರಹಿಸಬಹುದು.
ಮೊದಲಿಂದಲೂ ಗಡ್ಡ ಎಂದರೆ ಒಂದೋ ಅದು ಶಕ್ತಿ, ಸಾಮರ್ಥ್ಯದ ಲಕ್ಷಣವಾಗಿತ್ತು. ಇಲ್ಲವೇ ಬುದ್ಧಿ ಸಾಮರ್ಥ್ಯದ ಲಕ್ಷಣವಾಗಿತ್ತು. ಅರಿಸ್ಟಾಟಲ್, ಪ್ಲೇಟೋ, ಸಾಕ್ರೆಟಿಸ್, ಭೀಷ್ಮ, ವಿದುರ ಹೀಗೆ ಬಹುತೇಕರಿಗೆ ಗಡ್ಡವಿರುವುದನ್ನು ಕಾಣಬಹುದು. ದೂರ್ವಾಸ, ರಾವಣ, ಪರಶುರಾಮ, ಹನುಮಂತ, ಅಷ್ಟೇ ಏಕೆ, ಸೃಷ್ಟಿಕರ್ತ ಬ್ರಹ್ಮನಿಗೂ ಗಡ್ಡವಿದೆಯಲ್ಲ!! ಹಾಗಾದರೆ ಅವರಿಗ್ಯಾರಿಗೂ ಕ್ಷೌರಿಕರೇ ಇರಲಿಲ್ಲವೇ? ಹಾಗಂತ ವಿಷ್ಣುವಿಗೆ, ಇಂದ್ರನಿಗೆ ಗಡ್ಡವಿಲ್ಲ. ಇವರೆಲ್ಲರಲ್ಲಿ ಯಾರಿಗೆ ಅಸಲಿಗೂ ಗಡ್ಡವಿತ್ತೋ, ಇಲ್ಲವೋ ಗೊತ್ತಿಲ್ಲ.
ಆದರೆ ಲೆಕ್ಕಕ್ಕೆ ಸಿಗುವ ಇತಿಹಾಸದುದ್ದಕ್ಕೂ ಗಂಡಿನ ಗಡ್ಡವೆಂದರೆ ಅದು ಬುದ್ಧಿವಂತಿಕೆ, ಜ್ಞಾನ, ಶಕ್ತಿ, ಸಾಮರ್ಥ್ಯ ಇತ್ಯಾದಿಗಳ ದ್ಯೋತಕವಾಗಿ ಪ್ರದರ್ಶನಗೊಳ್ಳುವುದನ್ನು ಕಾಣಬಹುದು. ಗುರು ಗೋವಿಂದ ಸಿಂಗ್, ಮಹಾರಾಣ ಪ್ರತಾಪ್, ಚಂದ್ರಗುಪ್ತ ಮೌರ್ಯ, ಅಶೋಕ, ಪ್ರಥ್ವಿರಾಜ್ ಚೌಹಾಣ, ಹಕ್ಕ-ಬುಕ್ಕ, ಬಾಜಿರಾವ್ ಇವರಲ್ಲ ಗಡ್ಡವೆಂದರೆ ಕ್ಷಾತ್ರಗುಣ ರೂಪಕಗಳು. ಗಡ್ಡವಿಲ್ಲದ ಶಿವಾಜಿಯನ್ನು, ಗಡ್ಡ ತೆಗೆದ ಮೋದಿಯನ್ನು, ಸದ್ಗುರು ಜಗ್ಗಿ ವಾಸುದೇವರನ್ನು ಕಲ್ಪಿಸಿಕೊ ಳ್ಳಲಿಕ್ಕಾಗುವುದಿಲ್ಲ.
ತನ್ನನ್ನು ತಾನೇ ಗ್ರೇಟ್ ಎಂದು ಕರೆದುಕೊಂಡ ‘ಅಲೆಕ್ಸಾಂಡರ್ ದ ಗ್ರೇಟ್’ ಯುದ್ಧಕ್ಕೆಂದು ಹೊರಟಾಗ ತನ್ನ ಇಡೀ ಸೈನ್ಯಕ್ಕೆ ಗಡ್ಡ ತೆಗೆಯುವಂತೆ ಆದೇಶಿ ಸಿದ್ದನಂತೆ. ಗಡ್ಡವಿದ್ದರೆ ಯುದ್ಧದಲ್ಲಿ ಹೊಡೆದಾಡುವಾಗ ಎದುರಾಳಿಗಳು ಗಡ್ಡ ಹಿಡಿದು ಥಳಿಸಬಹುದು ಎಂಬ ಕಾರಣ. ಅದೇನೇ ಇರಲಿ, ಅಲೆಕ್ಸಾಂಡರ್‌ನಿಂದ ಹೊಸತೊಂದು ಟ್ರೆಂಡ್, ಪ್ರವೃತ್ತಿ ಎಡೆ ಹರಡಿತು ಎನ್ನಲಾಗುತ್ತದೆ.
ಇಂದಿಗೂ ಪ್ರಪಂಚದ ಬಹುತೇಕ ಸೇನೆಗಳಲ್ಲಿ ಗಡ್ಡ ಬೆಳೆಸುವಂತಿಲ್ಲ. ಗಡ್ಡವೆಂದರೆ ಸೈನ್ಯದಲ್ಲಿ ಬೇಶಿಸ್ತು. ಭಾರತೀಯ ಸೇನೆಯಲ್ಲಿ ಕೂಡ ಬೇಕಾಬಿಟ್ಟಿ ಗಡ್ಡ ಬೆಳೆಸುವಂತಿಲ್ಲ. ಸಿಖ್ಖರಿಗೆ ಮಾತ್ರ ಈ ವಿಷಯದಲ್ಲಿ ಪೂರ್ಣ ವಿನಾಯತಿ. ಅದು ಬಿಟ್ಟು ಇನ್ಯಾವುದೇ ಧರ್ಮದವರು ಗಡ್ಡ ಬೆಳೆಸ ಬೇಕೆಂದರೆ ಅದಕ್ಕೆ ಮೇಲಧಿಕಾರಿಗಳ ಮುಂಚಿತ ಅನುಮತಿ ಪಡೆದಿರಬೇಕು.
ಶಬರಿಮಲೆಗೆ ಹೋಗಲು ಇತ್ಯಾದಿ ಸರಿಯಾದ ಧಾರ್ಮಿಕ ಕಾರಣ ಇರಬೇಕು. ಆ ಅನುಮತಿ ಕೂಡ ನಿಗದಿತ ಅವಧಿಗೆ ಮಾತ್ರ. ಅದಾದ ಮೇಲೆ ಗಡ್ಡ ತೆಗೆಯಲೇಬೇಕು. ಧೈರ್ಯ, ಸಾಮರ್ಥ್ಯ, ಶೌರ್ಯ ಇತ್ಯಾದಿಗಳ ದ್ಯೋತಕ ಗಡ್ಡವೆಂದಾದರೆ ಅವುಗಳನ್ನೇ ಮೈಮನಗಳಲ್ಲಿ ತುಂಬಿಕೊಂಡ ಸೈನಿಕರಿಗೆ ಗಡ್ಡ ಬೆಳೆಸುವ ಅನುಮತಿಯಿಲ್ಲ.
ಈ ಗಡ್ಡ ಬೆಳೆಸುವ ಟ್ರೆಂಡ್- ಬೆಲ್ ಬಾಟಂ ಪ್ಯಾಂಟಿನಂತೆ, ಉಳಿದೆ ಫ್ಯಾಷನ್‌ಗಳಂತೆ ಆಗಾಗ ಮರು ಜೀವ ಪಡೆಯುತ್ತಲೇ ಬಂದಿದೆ. ‘ಕೆಜಿಎಫ್’ ಚಿತ್ರದ ಯಶ್, ‘ಕಾಂತಾರ’ದ ರಿಷಭ್ ಶೆಟ್ಟಿ ಹೀಗೆ ಇತ್ತೀಚಿನ ಚಲನಚಿತ್ರದ ಹೀರೋಗಳು ಗಡ್ಡದ ಪ್ರವೃತ್ತಿಗೆ ಮರುಜೀವ ಕೊಟ್ಟಿದ್ದು ಸುಳ್ಳಲ್ಲ. ಇವರಿಗೆ ಜತೆಯಾಗುವಂತಿದೆ ಭಾರತೀಯ ಕ್ರಿಕೆಟ್ ತಂಡ.
ಇವತ್ತಿನ ಭಾರತೀಯ ತಂಡವನ್ನು ನೋಡಿದರೆ ಅಲ್ಲಿ ಬಹುತೇಕ ಎಲ್ಲರೂ ಗಡ್ಡ ಬಿಟ್ಟ ಆಟಗಾ ರರೇ- ಬಿಸಿಸಿಐನಲ್ಲಿ ಗಡ್ಡಬಿಟ್ಟರಷ್ಟೇ ಆಯ್ಕೆ ಎಂಬ ಅಲಿಖಿತ ನಿಯಮವಿದ್ದಂತೆ. ಫಜೀತಿಯೆಂದರೆ ಎಲ್ಲರೂ ಗಡ್ಡ ಬಿಟ್ಟವರೇ ಆಗಿರುವುದರಿಂದ ಬ್ಯಾಟಿಂಗ್ ಮಾಡುವಾಗ ಶಿರಸ್ತ್ರಾಣದೊಳಗೆ ಎಲ್ಲರೂ ಒಂದೇ ರೀತಿ ಕಾಣಿಸುತ್ತಾರೆ. ಕೆಲವೊಮ್ಮೆ, ಇಂಥ ಇಬ್ಬರು ಬ್ಯಾಟಿಂಗ್ ಮಾಡುವಾಗ ಔಟಾದವರು ಯಾರು ಎಂಬುದು ಆ ಕ್ಷಣಕ್ಕೆ ಗೊಂದಲವಾಗುತ್ತದೆ.
ಅಮೆರಿಕ, ಯುರೋಪ್, ಪಾಶ್ಚಿಮಾತ್ಯ ದೇಶಗಳಲ್ಲಿ ತೀರಾ ಇತ್ತೀಚಿನವರೆಗೂ ಕ್ಲೀನ್ ಶೇವ್ ಎಂದರೆ ಅದು ಶಿಸ್ತು ಎಂಬ ಭಾವನೆ ಇತ್ತು. ಆ ಭಾವನೆಯನ್ನೇ ಬ್ರಿಟಿಷರು, ಮತ್ತಿತರ ಲೂಟಿಕೋರರು ತಮ್ಮ ಆಳ್ವಿಕೆಯಲ್ಲ ಜಾರಿಯಾಗುವಂತೆ ನೋಡಿಕೊಂಡಿದ್ದರು. ಅದು ಹಾಗೆಯೇ ಮುಂದುವರಿದುಕೊಂಡು ಬಂತು. ಇದನ್ನು ತಿರಸ್ಕರಿಸಿದ್ದು ಹಿಪ್ಪಿ ಸಂಸ್ಕೃತಿ.
ತೀರಾ ಈಗೊಂದು ಐದಾರು ವರ್ಷದವರೆಗೂ ಯಾವುದೇ ದೊಡ್ಡ ಮೀಟಿಂಗ್‌ಗೆ ಹೋಗುವಾಗ ಕ್ಲೀನ್ ಶೇವ್ ಮಾಡಿಯೇ ಹೋಗಬೇಕೆಂಬ ಅಲಿಖಿತ ಕಾನೂನು ಕಾರ್ಪೊರೇಟ್ ಜಗತ್ತಿನಲ್ಲಿ ಇತ್ತು. ಆದರೆ ಕರೋನಾ ತರುವಾಯ ಇದೆಲ್ಲ ಬದಲಾಗಿದೆ. ಕರೋನಾ ಮತ್ತು ಗಡ್ಡದ ಟ್ರೆಂಡ್ ವಾಪಸ್ ಬರಲು ಒಂದಕ್ಕೊಂದು ಸಂಬಂಧವಿದೆಯೋ ಗೊತ್ತಿಲ್ಲ. ಆದರೆ ಸಾಂಕ್ರಾಮಿಕ ಸಮಯದಲ್ಲಿ ಜಿಲೆಟ್ ಕಂಪನಿಯ ಬ್ಲೇಡ್ ಮಾರಾಟ ಕೂಡ ಗಣನೀಯವಾಗಿ ಇಳಿದದ್ದನ್ನು ನೆನಪಿಸಿಕೊಳ್ಳಬಹುದು.
ಗಡ್ಡ ಬೆಳೆಸುವುದು ಸುಲಭ- ತೆಗೆಯದಿದ್ದರೆ ಅದರಷ್ಟಕ್ಕೆ ಅದೇ ಬೆಳೆದುಕೊಳ್ಳುತ್ತದೆ. ಒಂದು ವೇಳೆ ತುರಿಕೆ, ಸ್ವಚ್ಛತೆ, ಹೆಂಡತಿಯ ಒತ್ತಡ ಇತ್ಯಾದಿಯನ್ನು ಮೀರಿಯೂ ಗಡ್ಡವನ್ನು ಬೆಳೆಸಲು ಮುಂದಾ ದರೆ ಅದರ ನಿರ್ವಹಣೆ ಸುಲಭವಲ್ಲ. ಆದರೆ ಇಂದು ಗಡ್ಡದ ಕೂದಲು ಹೊಳೆಯುವಂತೆ ಮಾಡುವ ಜೆಲ್‌ಗಳು ಬಂದಿವೆ. ಅಷ್ಟೇ ಅಲ್ಲ, ಗಡ್ಡಕ್ಕೆಂದೇ ವಿಶೇಷ ಶ್ಯಾಂಪೂ, ಕಂಡೀಶನರ್, ಬಾಚಣಿಕೆ, ಕತ್ತರಿ, ಬಣ್ಣ ಇತ್ಯಾದಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಮೆರಿಕದಲ್ಲಂತೂ ತಲೆಕೂದಲು ಕತ್ತರಿಸುವು ದಕ್ಕಿಂತ ಗಡ್ಡ ಟ್ರಿಮ್ ಮಾಡುವುದು ತುಟ್ಟಿ.
ಗಡ್ಡದ ಸ್ಟೈಲ್ ಏನಾದರೂ ಬದಲಿಸಬೇಕೆಂದರೆ ತಲೆಕೂದಲು ಕತ್ತರಿಸಿದ ನಾಲ್ಕರಷ್ಟು ತೆರಬೇಕು. ಈಗೀಗ ಅಲ್ಲಲ್ಲಿ ಗಡ್ಡದ ಕೂದಲಿಗೆ ಜಡೆ ಮಾಡಿಸುವ, ಮಣಿಗಳಿಂದ ಅಲಂಕೃತಗೊಳಿಸುವ ಪ್ರವೃತ್ತಿ ಕೂಡ ಮುನ್ನೆಲೆಗೆ ಬರುತ್ತಿದೆ. ಗಡ್ಡ ಬಿಡುವುದು ಎಂದರೆ ಶೇವಿಂಗ್‌ಗೆ ಬೇಕಾಗುವ ಹಣದ ಉಳಿತಾಯ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಶಿಸ್ತಾಗಿ ಗಡ್ಡ ಬಿಡಬೇಕೆಂದರೆ ಅದರ ಆರೈಕೆಗೂ ಸಾಕಷ್ಟು ಖರ್ಚಿದೆ. ಚಳಿ ಪ್ರದೇಶದಲ್ಲಿ ಗಡ್ಡ ತೆಗೆಯುವುದೆಂದರೆ ಅದೊಂದು ಯಮಯಾತನೆ, ಹಿಂಸೆ.
ಚಳಿ ಇರುವಲ್ಲಿ ಸಹಜವಾಗಿ ಆರ್ದ್ರತೆ ತೀರಾ ಕಡಿಮೆ. ವಿಶೇಷವಾಗಿ ಗಲ್ಲದ ಸುತ್ತ ಗಡ್ಡ ತೆಗೆಯುವಾಗ ಬೆಂಕಿಯಂಥ ಉರಿಯ ಅನುಭವಾಗುತ್ತದೆ. ಹಾಗಾಗಿ ಗಡ್ಡ ತೆಗೆದಾಕ್ಷಣ ಆಫರ್ ಶೇವ್ ಲೋಷನ್, ಒಂದಿಷ್ಟು ತೈಲೌಷಧಿಯನ್ನು ತಕ್ಷಣಕ್ಕೆ ಮುಖಕ್ಕೆ ಮೆತ್ತಿಕೊಳ್ಳಬೇಕಾಗುತ್ತದೆ. ಸ್ನಾನಕ್ಕಿಂತ ಮೊದಲು ಶೇವಿಂಗ್ ಮಾಡಿಕೊಂಡರೆ ಈ ಉರಿ ಇನ್ನಷ್ಟು ಜಾಸ್ತಿ. ಹಾಗಾಗಿ ಸ್ನಾನ ಮಾಡುವಾಗ- ಮುಖದ ಚರ್ಮ ನೀರಿನಿಂದ ನೆನೆದಿರುವುದರಿಂದ ಆನಂತರ ಗಡ್ಡ ಮಾಡಿಕೊಳ್ಳುವುದು ಉತ್ತಮ.
ಗಡ್ಡ ಬಿಡಬೇಕೋ, ಬೇಡವೋ ಎಂಬುದು ವೈಯಕ್ತಿಕ ವಿಷಯ. ಗಡ್ಡದ ವಿಷಯ ಏನೆಂದರೆ, ಇದನ್ನು ತೆಗೆಯುವವರಿಗೆ ಗಡ್ಡ ಇರುವುದೇ ತೆಗೆಯಲಿಕ್ಕೆ. ತೆಗೆಯದವರಿಗೆ ಗಡ್ಡ ಬರುವುದೇ ಬಿಡು ವುದಕ್ಕೆ. ಇಬ್ಬರಿಗೂ ಒಂದೊಂದು ಸಕಾರಣವಿದೆ. ಆದರೆ ಗಡ್ಡ ಬಿಡುವ ನಿರ್ಧಾರ ಮಾಡಿದಲ್ಲಿ ಅದನ್ನು ಶಿಸ್ತಿನಿಂದ ನಿರ್ವಹಿಸುವ ಜವಾಬ್ದಾರಿಯೂ ಗಡ್ಡಧಾರಿಯದೇ ಆಗಿರುತ್ತದೆ. ಗಡ್ಡವನ್ನು ವಿರಾಟ್ ಕೊಹ್ಲಿಯಂತೆಯೂ ಬಿಡಬಹುದು, ಇಲ್ಲವೇ ಹುಚ್ಚ ವೆಂಕಟ್‌ನಂತೆಯೂ ಬಿಟ್ಟುಕೊಳ್ಳ ಬಹುದು.
ಅದೂ ವೈಯಕ್ತಿಕವೇ. ಅದ್ಯಾವ ಉಸಾಬರಿಯೂ ಬೇಡವೆನಿಸಿದರೆ, “ಗಡ್ಡದ ವಿಷ್ಯಾ, ಬ್ಯಾಡವೋ ಶಿಷ್ಯಾ, ಗಡ್ಡಕಿಂತ ವಾಸಿ ಕಣೋ ಬ್ಲೇಡಿನ ದಾಸ್ಯ" ಎಂದು ಗುನುಗುತ್ತ ಶೇವ್ ಮಾಡಿಕೊಳ್ಳುವುದೇ ಉತ್ತಮ.