Shishir Hegde Column: ಪ್ರೀತಿಯ ಹೆಂಡತಿಗೊಂದು ಬಹಿರಂಗ ಪತ್ರ
ಬದುಕಿನ ಸಾಧ್ಯತೆಯಲ್ಲಿ ನಾನು ನೀನು ಸಮಾನರು ಎನ್ನುವ ವಿಷಯ ಹೌದು, ಒಪ್ಪುತ್ತೇನೆ. ಆದರೆ ನಮ್ಮಿಬ್ಬರ ಸಾಮರ್ಥ್ಯದಲ್ಲಿ ಭಿನ್ನತೆಯಂತೂ ಇದೆ ಎನ್ನುವುದು ಸತ್ಯ. ಇದನ್ನು ಇಡೀ ಜಗತ್ತು ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ನಿನ್ನ ಜತೆ ಬದುಕುತ್ತ ಅದರ ಅರಿವು ದಿನಗಳೆದಂತೆ ಇನ್ನಷ್ಟು ಸ್ಪಷ್ಟವೇ ಆಗಿದೆ.

ಅಂಕಣಕಾರ ಶಿಶಿರ್ ಹೆಗಡೆ

ಪ್ರೀತಿಯ ಹೆಂಡತಿ,
ನಾನೆಂದೂ ಹೀಗೊಂದು ಗಂಭೀರ ಪತ್ರವನ್ನು ಬಹಿರಂಗವಾಗಿ ಬರೆಯುತ್ತೇನೆ ಅಂದು ಕೊಂಡಿರಲಿಲ್ಲ. ಆದರೆ ಈಗ ಬರೆಯಲೇ ಬೇಕಾಗಿದೆ. ಏಕೆಂದರೆ ಇಷ್ಟು ಉದ್ದದ ವಿಷಯ ವನ್ನು ನಿನಗೆ ಮಾತಿನಲ್ಲಿ ಭಾಷಣದಂತೆ ಹೇಳಿದರೆ ನೀನು ಕೇಳಿಸಿಕೊಳ್ಳುವುದಿಲ್ಲ. ಹಾಗಾಗಿ ಈ ಪತ್ರ ಅನಿವಾರ್ಯ. ನೋಡು, ಗಂಡಸರು ಮತ್ತು ಹೆಂಗಸರು ಎಲ್ಲರೂ ಒಂದೇ ಎನ್ನುವ ಭಾಷಣ, ಲೇಖನ ಇವನ್ನೆಲ್ಲ ಚಿಕ್ಕಂದಿನಿಂದ ಕೇಳಿ ಕೇಳಿ ಆ ಗುಂಗಿನಲ್ಲಿಯೇ ದೊಡ್ಡವನಾದ ವನು ನಾನು. ಮದುವೆಯಾದ ಹೊಸತರ ಹುರುಪಿನಲ್ಲಿ ‘ನಾನು ನೀನು ಇಬ್ಬರೂ ಸಮಾ ನರು’ ಎಂದು ಹೇಳುವಾಗಲೂ ಆ ಬಗ್ಗೆ ಯಾವುದೇ ಅನುಮಾನ ನನ್ನಲ್ಲಿರಲಿಲ್ಲ. ಅಸಲಿಗೆ ಅದನ್ನೇ ಸತ್ಯ ವೆಂದು ನಂಬಿಕೊಂಡಿದ್ದೆ.
ಬದುಕಿನ ಸಾಧ್ಯತೆಯಲ್ಲಿ ನಾನು ನೀನು ಸಮಾನರು ಎನ್ನುವ ವಿಷಯ ಹೌದು, ಒಪ್ಪುತ್ತೇನೆ. ಆದರೆ ನಮ್ಮಿಬ್ಬರ ಸಾಮರ್ಥ್ಯದಲ್ಲಿ ಭಿನ್ನತೆಯಂತೂ ಇದೆ ಎನ್ನುವುದು ಸತ್ಯ. ಇದನ್ನು ಇಡೀ ಜಗತ್ತು ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ನಿನ್ನ ಜತೆ ಬದುಕುತ್ತ ಅದರ ಅರಿವು ದಿನಗಳೆದಂತೆ ಇನ್ನಷ್ಟು ಸ್ಪಷ್ಟವೇ ಆಗಿದೆ.
ಇದನ್ನೂ ಓದಿ: Shishir Hegde Column: ನಮ್ಮ ತಲೆ ಹಿಂದಿಗಿಂತ ದೊಡ್ಡದಾಗುತ್ತಿದೆಯೇ ?
ಪ್ರಿಯ ಮಡದಿ, ನೀನು ಅಡುಗೆ ಮಾಡುವಾಗ, ಮನೆ ಕೆಲಸಗಳಲ್ಲಿ ನಿನಗೆ ಸಾಥ್ ಕೊಡು ವುದು ನನಗೆ ಬಹಳ ಇಷ್ಟ. ಆದರೆ ಹಾಗೆ ಕೆಲಸದಲ್ಲಿ ಜತೆಯಾದಾಗಲೆಲ್ಲ ನನಗೆ ನಿನ್ನಿಂದ ಅವಮಾನ ನಿರಂತರವಾಗಿ ಆಗುತ್ತಲೇ ಇದೆ. ಮೊನ್ನೆ ಅದೇನೋ ಅಡುಗೆ ಮಾಡುವಾಗ ‘ಫ್ರಿಜ್ಜಿನ ತರಕಾರಿ ಕಂಪಾರ್ಟ್‌ಮೆಂಟಿನಲ್ಲಿ ಉಳಿದಿದ್ದ ಒಂದೇ ಒಂದು ಲಿಂಬುವನ್ನು ತಂದುಕೊಡು’ ಎಂದೆ.
ನನಗೆ ಫ್ರಿಜ್‌ನ ತರಕಾರಿಗಳ ಮಧ್ಯೆ ಹತ್ತು ನಿಮಿಷ ಹುಡುಕಿದರೂ ಲಿಂಬು ಸಿಗಲೇ ಇಲ್ಲ. ಆಗ ‘ಇಲ್ಲಿ ಲಿಂಬು ಇಲ್ಲ’ ಎನ್ನುವಾಗ ನನ್ನ ಪುರುಷ ಸಹಜ ಅಹಂ ಕುಗ್ಗಿಹೋಗಿತ್ತು. ಏಕೆ ಗೊತ್ತೇ, ನನಗೆ ಆ ಲಿಂಬು ಅಲ್ಲಿಯೇ ಎ ಅಡಗಿ ಕೂತಿದೆ ಎಂದು ಗೊತ್ತು. ಆ ದರಿದ್ರ ಲಿಂಬು ನಿನಗೆ ಮಾತ್ರ ಎರಡೇ ಸೆಕೆಂಡಿನಲ್ಲಿ ಸಿಕ್ಕಿಬಿಟ್ಟಿತಲ್ಲ!

ನನಗೆ ಆ ದಿನವಂತೂ ಇಡೀ ಲಿಂಬು ಕುಲದ ಮೇಲೆಯೇ ಸಿಟ್ಟು ಬಂದದ್ದು ಸುಳ್ಳಲ್ಲ. ಇಂಥ ಘಟನೆ ಒಂದೆರಡಲ್ಲ. ಹರಡಿದ ಡ್ರಾವರ್‌ನಲ್ಲಿಟ್ಟ ಗಮ್ ಟೇಪ್, ಪಿನ್ನು, ಸ್ಟೇಪ್ಲರ್ ಇವೆಲ್ಲ ವಸ್ತುಗಳು ಕೂಡ ಹಾಗೆಯೇ. ಅವು ನಾನು ಹುಡುಕಿದರೆ ಸಿಗುವುದಿಲ್ಲ, ನಿನಗಾದರೆ ಎರಡೇ ಕ್ಷಣಕ್ಕೆ ಸಿಕ್ಕಿಬಿಡುತ್ತವೆ.
ನನಗಂತೂ ಈಗೀಗ ಮನೆಯ ಇಂಥ ವಸ್ತುಗಳಿಗೆ ಜೀವ ಇದೆ ಎಂದೆನಿಸತೊಡಗಿದೆ. ನಾನು ಅವನ್ನು ಹುಡುಕಲು ಹೋದಾಗ ಅವು ಅಡಗಿಕೊಳ್ಳುತ್ತವೆ ಮತ್ತು ನೀನು ಕೈ ಹಾಕಿದಾಗ ಅವು ತಾವಾಗಿಯೇ ಉದ್ಭವವಾಗಿ, ಅವಾಗಿಯೇ ಬಂದು ಶರಣಾಗುತ್ತವೆ. ಏಕೆಂದರೆ ನನಗೆ ಕಣ್ಣಂತೂ ಚೆನ್ನಾಗಿಯೇ ಕಾಣಿಸುತ್ತದೆ. ನಿನ್ನ ವ್ಯಾನಿಟಿ ಬ್ಯಾಗ್, ಕಪಾಟಿನಲ್ಲಿಟ್ಟ ಬಟ್ಟೆ, ಕಾಗದಪತ್ರ, ಪಾತ್ರೆ ಸಾಮಾನುಗಳು, ಬೇಳೆ ಕಾಳು ಅಷ್ಟೇಕೆ ಇಡೀ ಮನೆಯ ವಸ್ತುಗಳು ಎಲ್ಲಿವೆ ಎಂದು ಗೂಗಲ್ ಸರ್ಚ್ ಮಾಡುವಂತೇನಾದರೂ ಟೆಕ್ನಾಲಜಿ ಬಂದರೆ ಅದನ್ನು ನಾನೇ ಮೊದಲು ಖರೀದಿಸುವುದು.
ಅಪರೂಪಕ್ಕೆ ನೀನಿಲ್ಲದೆ ನಾನೇ ಅಡುಗೆ ಮಾಡುವ ಸ್ಥಿತಿ ಎದುರಾದಾಗ ನಿಮಿಷಕ್ಕೊಮ್ಮೆ ನಿನಗೆ ಫೋನ್ ಮಾಡಿ ‘ಅದೆಲ್ಲಿದೆ, ಇದೆಲ್ಲಿದೆ’ ಎಂದು ಕೇಳುವಾಗ ನಾನೆಷ್ಟು ಅವಮಾನದ ನೋವನ್ನು ಅನುಭವಿಸುತ್ತೇನೆ ಗೊತ್ತೇ? ನೀನು ಅಂಥ ಸಂದರ್ಭ ಸಿಕ್ಕಾಗಲೆಲ್ಲ ‘ನಿಮ್ಮ ಗಂಡು ಕುಲಕ್ಕೆ ಕಣ್ಣೆದುರಿಗೆ ಇರುವ ವಸ್ತುವೇ ಕಾಣಿಸುವುದಿಲ್ಲ’ ಎಂದು ಮಾತಿನಲ್ಲಿಯೇ ಚುಚ್ಚುತ್ತೀ. ಇದು ಇಡೀ ಗಂಡುಕುಲಕ್ಕೇ ಮಾಡುವ ಅವಮಾನ.
ಪ್ರಿಯ ಅರ್ಧಾಂಗಿ, ಎದುರಿಗಿರುವ ವಸ್ತು ಕಾಣಿಸದೇ ಇರುವ ಸಮಸ್ಯೆ ನನ್ನದೊಂದೇ ಅಲ್ಲ. ಅದು ನೀನು ಹೇಳುವಂತೆ ಸಮಸ್ತ ಮನುಕುಲದ ಗಂಡಸರ ಸಮಸ್ಯೆ. ಸಮಸ್ಯೆ ಸಾರ್ವತ್ರಿಕ ವಾದದ್ದರಿಂದ ಮನಶ್ಶಾಸ್ತ್ರಜ್ಞರು ಇದಕ್ಕೆ ಚಂದದ್ದೊಂದು ಹೆಸರೂ ಕೊಟ್ಟಿದ್ದಾರೆ. ಗಂಡಸರ ಈ ಕಣ್ಣೆದುರಿನ ಕುರುಡುತನವನ್ನು Male Refrigerator Blindness ಎಂದು ಕರೆಯು ವುದು.
ಇಂಥದ್ದನ್ನೂ ಗ್ರಹಿಸಿ ಅದಕ್ಕೆ ಹೀಗೊಂದು ಹೆಸರು ಕೊಟ್ಟದ್ದು ಯಾರೋ ಹೆಣ್ಣು ಮನ ಶ್ಶಾಸ್ತ್ರಜ್ಞರೇ ಇರಬೇಕು, ಇರಲಿ. ವಿಷಯ ಏನು ಗೊತ್ತಾ? ನಾವಿಬ್ಬರೂ, ಅರ್ಥಾತ್ ಗಂಡಸರು ಮತ್ತು ಹೆಂಗಸರು ಅದೆಷ್ಟೋ ಸಹಸ್ರ ಸಹಸ್ರ ವರ್ಷ ಕಾಲ ಜತೆಯಲ್ಲಿಯೇ ಇದ್ದು ವಿಕಸನ ಗೊಂಡವರು. ಯಾವತ್ತೂ ನಮ್ಮಿಬ್ಬರ ಸಾಮಾಜಿಕ ಕರ್ತವ್ಯ ಪ್ರತ್ಯೇಕವಾಗಿಯೇ ಇದೆ.
ಅದನ್ನು ಇಂದಿನ ತಾರತಮ್ಯ ಮತ್ತು ಫೆಮಿನಿಸ್ಟ್ ಗಳು ಹುಟ್ಟಿಕೊಳ್ಳುವುದಕ್ಕಿಂತ ಮೊದಲೇ ನಾವಿಬ್ಬರು ಒಪ್ಪಿಕೊಂಡು ಪ್ರತ್ಯೇಕಿಸಿಕೊಂಡದ್ದು. ಲಕ್ಷಾಂತರ ವರ್ಷದ ವಿಕಸನದಲ್ಲಿ ನಾವು ಹಾಗೆ ಮಾಡಿಕೊಳ್ಳದಿದ್ದಲ್ಲಿ ನಮ್ಮ ಸಂತತಿಯೇ ಕೊನೆಯಾಗಿಬಿಡುತ್ತಿತ್ತು. ನಾನು ಗಂಡಸು ಬೇಟೆಗೆ ಅಥವಾ ಕಾಡಿಗೆ, ಗಾವುದ ದೂರ ಹೋಗಿ ಆಹಾರವನ್ನು ಹುಡುಕಿ ಕೊಂಡು ಬರುತ್ತಿದ್ದೆ.
ನೀನು ಮಕ್ಕಳನ್ನು ನೋಡಿಕೊಳ್ಳುವುದರಿಂದ ಅಲ್ಲಿಯೇ ಗುಹೆಯ ಹತ್ತಿರವೇ, ಮಕ್ಕಳ ಜತೆಯಲ್ಲಿಯೇ ಇರುತ್ತಿದ್ದೆ. ಅದಕ್ಕೆ ನೀನು ಬೇಟೆಗೆ ಹೋಗಲು ಸಬಲಳಲ್ಲ ಎಂಬ ಕಾರಣ ವೇನಿರಲಿಲ್ಲ. ದೈಹಿಕವಾಗಿ ಗಟ್ಟಿ ಇದ್ದ ನಾನೇ ಬೇಟೆಗೆ ಹೋಗುವುದು ಸಮಂಜಸವೇ ಆಗಿತ್ತು. ಅಲ್ಲದೆ ನನಗಿಂತ ಸೂಕ್ಷ್ಮಗ್ರಾಹಿಯಾಗಿರುವ ನೀನೇ ಮಕ್ಕಳನ್ನು ನೋಡಿಕೊಳ್ಳು ವುದು ಉತ್ತಮವಾಗಿತ್ತು. ಹಾವು, ವಿಷ ಜಂತುಗಳು ನಿನಗೆ ಕಂಡಷ್ಟು ನನಗೆ ಕಾಣಿಸುವು ದಿಲ್ಲವಲ್ಲ.
ನಿಜ ಹೇಳಬೇಕೆಂದರೆ ಬೇಟೆಗೆ, ಆಹಾರಕ್ಕೆ ಹೊರಗೆ ಹೋದಾಗ ಒಂದಿಷ್ಟು ಸೂಕ್ಷ್ಮತ್ವವನ್ನು ಕಳೆದುಕೊಳ್ಳುವುದೇ ಉತ್ತಮ. ತೀರಾ ಜಾಗ್ರತೆಯಾದರೆ ಬೇಟೆ ಸಾಧ್ಯವೇ ಇಲ್ಲ. ಈಗ 21ನೇ ಶತಮಾನವೇ ಇರಬಹುದು. ನಾವೆ ಬದುಕುವ ರೀತಿಯೇ ಬದಲಾಗಿರಬಹುದು. ಆದರೆ ಅದ್ಯಾವತ್ತೋ ಬದಲಾಗಿ ಹೋದ, ಜೀನಲ್ಲಿಯೇ ಒಂದಾಗಿಹೋದ ಗುಣಗಳಿಗೆ ಏನು ಮಾಡು ವುದು? ಪ್ರಿಯ ಸತಿ, ವಿಕಸನದಲ್ಲಿ ಯಾವುದೋ ಕಾರಣಕ್ಕೆ ಹೆಂಗಸರಿಗೆ ಸಮೀಪ ದೃಷ್ಟಿ ಗ್ರಾಹ್ಯಶಕ್ತಿ ಹೆಚ್ಚಾಗಿದೆ.
ಅದೇ ರೀತಿ ಗಂಡಸರಿಗೆ ದೂರದೃಷ್ಟಿ ಗ್ರಹಿಕೆ. ಬೇಟೆಯಾಡುವಾಗ ಗಂಡಸರ ದೂರದೃಷ್ಟಿ ಮುಖ್ಯ. ದೂರದಿಂದಲೇ ಬೇಟೆಯನ್ನು ಗ್ರಹಿಸಬೇಕು, ದೂರದಲ್ಲಿದ್ದೇ ಅಪಾಯವನ್ನು ಅಳೆಯಬೇಕು, ಬೇಟೆ ಓಡುತ್ತಿದ್ದರೆ ಅದನ್ನು ಕಣ್ಣಲ್ಲೂ ಹಿಂಬಾಲಿಸಬೇಕು ಇತ್ಯಾದಿ ಕಾರಣ ವಿರಬಹುದು. ಆದರೆ ಹೆಂಗಸರಿಗೆ ಸಂತತಿಯ ಜಾಗ್ರತೆಯ ಅನಿವಾರ್ಯತೆ.
ಮಕ್ಕಳನ್ನು ನೋಡಿಕೊಳ್ಳುವುದರ ಜತೆಗೆ ಹಣ್ಣು ಹಂಪಲಗಳನ್ನು ಆರಿಸುವುದು ಇತ್ಯಾದಿ ಕಾರಣಕ್ಕೋ ಏನೋ, ಹೆಂಗಸರಿಗೆ ಸಮೀಪ ದೃಷ್ಟಿ ಗ್ರಾಹ್ಯದ ಜತೆಜತೆಗೆ ಬಣ್ಣದ ಗ್ರಹಿಕೆ ಯೂ ಹೆಚ್ಚು ಸ್ಪಷ್ಟ ಗೋಚರವಾಗುತ್ತದೆ. ಬಹುಶಃ ಹಣ್ಣು ಅಥವಾ ಯಾವುದೇ ಆಹಾರ ವನ್ನು ಆಯ್ಕೆಮಾಡುವಾಗ ವಿಷಕಾರಿ ಆಹಾರವಸ್ತುವಿನಿಂದ ಪ್ರತ್ಯೇಕಿಸುವ ಸೂಕ್ಷ್ಮತೆ ಅವಶ್ಯಕತೆಯಾಗಿತ್ತು.
ಒಟ್ಟಾರೆ ಗಂಡಸರದ್ದು Tunnel Vision (ಏಕದೃಷ್ಟಿ), ಹೆಂಗಸರದ್ದು Peripheral Vision (ಸಮೀಪ ವಿಸ್ತಾರದೃಷ್ಟಿ) ಹೆಚ್ಚು ಸೂಕ್ಷ್ಮವಾರುತ್ತದೆ. ಇದರರ್ಥ ಅಡ್ಡ ಕಣ್ಣಿನಲ್ಲಿ ಎದುರಿನ ದನ್ನು ಹೆಂಗಸರು ಗ್ರಹಿಸುವಷ್ಟು ಸೂಕ್ಷ್ಮದಲ್ಲಿ ಗಂಡಸರು ಗ್ರಹಿಸುವುದಿಲ್ಲ. ಅದೇ ಕಾರಣಕ್ಕೆ ನನಗೆ ಆ ದಿನ ಫ್ರಿಜ್‌ನಲ್ಲಿದ್ದ ಯಃಕಶ್ಚಿತ್ ಲಿಂಬು ಸಿಗದೇ ಹೋದದ್ದು ಮತ್ತು ನಿನಗೆ ತಕ್ಷಣ ಸಿಕ್ಕಿದ್ದು.
ಪ್ರಿಯ ಸಹಧರ್ಮಿಣಿ, ಇನ್ನೊಂದು ವಿಷಯ. ಹೆಂಗರಲ್ಲಿ ‘ಮುಲ್ಟಿಟಾ’- ಹತ್ತಾರು ಕೆಲಸ ವನ್ನು ಏಕಕಾಲಕ್ಕೆ ಮಾಡುವ ಶಕ್ತಿ ಗಂಡಸರಿಗಿಂತ ಜಾಸ್ತಿ. ಅಡುಗೆ ಮಾಡುತ್ತ, ಮಧ್ಯೆ ಮೊಬೈಲ್‌ನಲ್ಲಿ ಮಾತನಾಡುತ್ತ, ಜತೆಯಲ್ಲಿ ಮಕ್ಕಳ ಮೇಲೊಂದು ಕಣ್ಣಿಡುತ್ತ ಹೀಗೆ ಹತ್ತಾರು ಕೆಲಸವನ್ನು ಏಕಕಾಲದಲ್ಲಿ ನಿಭಾಯಿಸುವುದು ಗಂಡಸರಿಗಿಂತ ಹೆಂಗಸರಿಗೆ ಸುಲಭ.
ಆ ಕಾರಣಕ್ಕೇ ನಮ್ಮ ಬಹುತೇಕ ಹೆಣ್ಣು ದೇವರುಗಳಿಗೆ ಹತ್ತು ಕೈ ಇದೆಯೇನೋ. ಗಂಡಸರ ದ್ದೇನಿದ್ದರೂ ಒಂದೇ ಕೆಲಸದತ್ತ ಏಕಾಗ್ರತೆ. ಆ ಕಾರಣಕ್ಕೇ ಟಿವಿ ವಾರ್ತೆ ನೋಡವಾಗ ಟ್ಯಾಂಕಿನ ನೀರು ಉಕ್ಕಿ ಹರಿದಾಗ, ಪಕ್ಕದ ಮನೆ ಬಿದ್ದು ಹೋದರೂ ಗಂಡಸರಿಗೆ ಗೊತ್ತಾ ಗುವುದಿಲ್ಲ. ನಾನು ಪೇಪರ್ ಓದುವಾಗ ನೀನು ‘ಕುಕ್ಕರ್ ಮೂರು ಸೀಟಿ ಬಾರಿಸಿದಾಗ ಸ್ಟೋ ವ್ ಆರಿಸಿ’ ಎಂದು ಹೇಳಿ ಸ್ನಾನಕ್ಕೆ ಹೋದಾಗ ನನ್ನ ಕೈಕಾಲು ನಡುಗುವುದು ಆ ಕಾರಣಕ್ಕೆ.
ಒಂದೆರಡು ವಿಸಿಲ್ ಆಗುವಾಗ ಒಂದಾಯಿತೋ, ನಾಲ್ಕಾಯಿತೋ ಎಂದು ಕಕ್ಕಾಬಿಕ್ಕಿ ಯಾಗುವುದು ಈ ಕಾರಣಕ್ಕೆ. ಗಂಡಸರಿಗೆ ಸರಿಯಾದ ಸಮಯಕ್ಕೆ ಕುಕ್ಕರ್ ಬಂದ್ ಮಾಡ ಬೇಕೆಂದರೆ ಬೇರಿನ್ನೆಲ್ಲ ಕೆಲಸ ಬಿಟ್ಟು ಕುಕ್ಕರಿನತ್ತಲೇ ಗ್ರಹಿಸುತ್ತಿದ್ದರಷ್ಟೇ ಸಾಧ್ಯ. ವಿಷಯ ಇಷ್ಟೆ - ಗಂಡಸರಿಗೆ ‘ಮುಲ್ಟಿಟಾ’ ತೀರಾ ಕಷ್ಟ. ಅದಕ್ಕೂ ನಾವು ವಿಕಾಸವಾದ ರೀತಿಯೇ ಕಾರಣ.
ಪ್ರಿಯ ಪತ್ನಿ, ಗಂಡಸರು ಮತ್ತು ಹೆಂಗಸರಲ್ಲಿ ಇನ್ನೊದಿಷ್ಟು ವ್ಯತ್ಯಾಸಗಳಿವೆ. ಸಿಕ್ಕಿದ್ದೇ ಅವಕಾಶವೆಂದು ಹೇಳಿಬಿಡುತ್ತೇನೆ. ಹೆಂಗಸರಲ್ಲಿ ನೋವನ್ನು ಸಹಿಸುವ ಶಕ್ತಿ ಸಹಜವಾಗಿ ಜಾಸ್ತಿ. ಪ್ರಸವ ವೇದನೆ ಇತ್ಯಾದಿ ದೇಹ ಸಹಜ ನೋವಿನ ಕಾರಣಕ್ಕೆ ಈಸ್ಟ್ರೋಜೆನ್ (ಮದಜ ನಕ) ಹಾರ್ಮೋನ್ ಹೆಂಗಸರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ.
ಇದರಿಂದಾಗಿ ಹೆಚ್ಚಿನ ಮತ್ತು ಹಠಾತ್ (ಕೈ ಸುಟ್ಟು ಹೋಗುವುದು ಇತ್ಯಾದಿ) ನೋವನ್ನು ಸಹಿಸಲು ಸಾಧ್ಯ. ಚಿಕ್ಕಪುಟ್ಟ ನೋವುಗಳು ಗಂಡಸರನ್ನು ಬಾಧಿಸಿದಷ್ಟು ಹೆಂಗಸರನ್ನು ಈ ಕಾರಣಕ್ಕೆ ಬಾಧಿಸುವುದಿಲ್ಲ.
ಆದರೆ ಗಂಡಸರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆ ಜಾಸ್ತಿ. ಆ ಕಾರಣಕ್ಕೆ ಯಾವುದೇ ದೊಡ್ಡ ಗಾಯ, ನೋವು ಆದಲ್ಲಿ ಗಂಡಸರು ಗುಣಮುಖವಾಗುವುದು ಬೇಗ. ದೈಹಿಕ ನೋವಷ್ಟೇ ಅಲ್ಲ, ಮಾನಸಿಕ ನೋವನ್ನೂ ಹೆಂಗಸರು ಮತ್ತು ಗಂಡಸರು ಸಂಸ್ಕರಿ ಸುವ ರೀತಿ ಬೇರೆ ಬೇರೆ. ಹೆಣ್ಣು ತನ್ನ ಭಾವನೆಗಳನ್ನು ಮೌಖಿಕವಾಗಿ ವ್ಯಕ್ತಪಡಿಸು ವುದು ಹೆಚ್ಚು.
ಇದಕ್ಕೆ oxytocin ಎಂಬ ಹಾರ್ಮೋನ್ ಕಾರಣ. ಈ ಹಾರ್ಮೋನ್ ಇದೆಯಲ್ಲ, ಅದು ಪ್ರಸವ ಸಮಯದಲ್ಲಿ, ಮಗುವಿಗೆ ಹಾಲುಣಿಸುವಾಗ, ತಾಯಿ ಮಗುವಿನ ಬಾಂಧವ್ಯಕ್ಕೆ ಇತ್ಯಾದಿ ಬಹಳ ಮುಖ್ಯ. ಇದೇ ಹಾರ್ಮೋನ್ ಕಾರಣಕ್ಕೆ ಹೆಣ್ಣು ಹೆಚ್ಚು ಭಾವಜೀವಿ. ಈ ಹಾರ್ಮೋನ್ ಉತ್ಪಾದನಾ ಪ್ರಮಾಣ ಗಂಡಸರಲ್ಲಿ ಕಡಿಮೆ.
ಹಾಗಾಗಿ ಸಮಸ್ಯೆ ಮತ್ತು ಅತಿಯಾದ ಸಂತೋಷ ಎದುರಾದಾಗ ಗಂಡಸು ಇನ್ನಷ್ಟು ಅಂತ ರ್ಮುಖಿಯಾಗುತ್ತಾನೆ. ಪ್ರಿಯ ಸಖಿ, ಹೆಂಗಸರಲ್ಲಿ ಮತ್ತು ಗಂಡಸರಲ್ಲಿ ನಿದ್ರೆಯ ಸೂಕ್ಷ್ಮತೆ ಯಲ್ಲೂ ವ್ಯತ್ಯಾಸವಿದೆ. ಗಂಡು ಒಮ್ಮೆ ಮಲಗಿದರೆ ಮುಗಿಯಿತು, ಹೆಬ್ಬಾವು ಬಿದ್ದಂತೆ. ಮುಗಿಲು ಮುರಿದರೂ ಎಚ್ಚರವಾಗುವುದಿಲ್ಲ. ಆದರೆ ಹೆಣ್ಣು ಹಾಗಲ್ಲ, ಹೆಣ್ಣಿನ ನಿದ್ರೆ ಅತಿ ಸೂಕ್ಷ್ಮ. ಚಿಕ್ಕದೊಂದು ಸಪ್ಪಳವಾದರೂ ಮೊದಲು ಎಚ್ಚರವಾಗುವುದು ಹೆಣ್ಣಿಗೆ. ಮಗು ವಿನ ಅಳು, ಯಾವುದೋ ಅಜ್ಞಾತ ಶಬ್ದ ಇತ್ಯಾದಿ ಹೆಣ್ಣಿಗೆ ಕೇಳಿಸಿದಷ್ಟು ಗಂಡಿಗೆ ಕೇಳಿಸು ವುದಿಲ್ಲ, ಎಚ್ಚರವಾಗುವುದಿಲ್ಲ.
ಇದಕ್ಕೂ ವಿಕಸನವಾದ ರೀತಿಯೇ ಕಾರಣ. ಇನ್ನೊಂದು ವಿಷಯ ಮರೆತಿದ್ದೆ. ಗಂಡಸರಲ್ಲಿ ಟೆಸ್ಟೋಸ್ಟೆರೋನ್ ಹಾರ್ಮೋನ್ ಹೆಚ್ಚಿಗೆ ಎಂದೆನಲ್ಲ, ಇದರಿಂದಾಗಿ ಗಂಡು ಹಠಾತ್ ಮತ್ತು ದೊಡ್ಡ ನಿರ್ಧಾರಗಳನ್ನು ಸುಲಭದಲ್ಲಿ, ಬೇಗ ತೆಗೆದುಕೊಂಡುಬಿಡುತ್ತಾನೆ. ಆದರೆ ಹೆಣ್ಣು ಹಾಗಲ್ಲ. ಎಲ್ಲವನ್ನೂ ತೂಗಿ, ಅಳೆದು, ಯೋಚಿಸಿ ಅವಳ ನಿರ್ಧಾರ. ವಿಕಸನದಲ್ಲಿ ಹೆಣ್ಣಿನ ನಿರ್ಧಾರ ವಂಶಾಭಿವೃದ್ಧಿ, ವಂಶನಿರ್ವಹಣೆ ಕಾರಣಕ್ಕೆ ಮುಖ್ಯವಾಗಿದ್ದರಿಂದ ಆಕೆಗೆ ಇದು ಸಹಜ ಗುಣ. ಮನೆಗೆ ಏನೋ ಒಂದು ಖರೀದಿಸಬೇಕೆಂದರೆ ಹೆಣ್ಣು ಯೋಚಿಸಿ ದಷ್ಟು ಗಂಡು ಯೋಚಿಸುವುದಿಲ್ಲ.
ಆರ್ಥಿಕ ನಿರ್ಧಾರಗಳ ವಿಷಯದಲ್ಲಿಯೂ ಹಾಗೆಯೇ. ಯಾವುದನ್ನೇ ನಿರ್ಧರಿಸುವಾಗ ಹೆಣ್ಣಿನಷ್ಟು ಗಂಡು ವಿವೇಚಿಸುವುದಿಲ್ಲ. ಪ್ರಿಯ ಕಾಂತೆ, ಅದೆಷ್ಟೋ ಕಾಲ ಗಂಡು ಮತ್ತು ಹೆಣ್ಣಿನ ಮಿದುಳು ಒಂದೇ ಎನ್ನುತ್ತಿದ್ದರು. ಆದರೆ ಅವೆರಡರಲ್ಲೂ ವ್ಯತ್ಯಾಸವಿದೆ ಎನ್ನುವ ವಿಷಯ ವಿಜ್ಞಾನಕ್ಕೆ ಇಷ್ಟು ಕಾಲ ತಡವಾಗಿಯಾದರೂ ತಿಳಿದುಬಂದಿದೆ.
ಗಂಡಸರ ಮಿದುಳು ಹೆಂಗಸರಿಗಿಂತ ಸರಾಸರಿ ಶೇ.10ರಷ್ಟು ದೊಡ್ಡದು. ಹಾಗಂತ ಗಂಡಸರೇ ಬುದ್ಧಿವಂತರೆಂದೇನಲ್ಲ. ಹಾಗಾಗಿದ್ದರೆ SSLC, PUC ಪರೀಕ್ಷೆಗಳಲ್ಲಿ ಗಂಡುಮಕ್ಕಳೇ ಹೆಚ್ಚಿಗೆ ಮಾರ್ಕ್ಸ್ ತೆಗೆಯಬೇಕಿತ್ತು. ಗಂಡಿನ ಮಿದುಳು ದೇಹದ ಗಾತ್ರಕ್ಕನುಗುಣವಾಗಿ ದೊಡ್ಡದು, ಅಷ್ಟೇ.
ಹೆಣ್ಣಿನ ಮಿದುಳಿನ ಹಿಪೋಕ್ಯಾಂಪಸ್ ಭಾಗ ಹೋಲಿಕೆಯಲ್ಲಿ ಗಂಡಸಿಗಿಂತ ದೊಡ್ಡದು. ನೆನಪಿನ ಶಕ್ತಿಗೆ ಸಂಬಂಧಿಸಿದ ಕ್ರಿಯೆ ನಡೆಯುವುದು ಈ ಭಾಗದಲ್ಲಿ. ಗಂಡಸರಲ್ಲಿ ಎಡ ಮತ್ತು ಬಲ ಮಿದುಳಿನ ನಡುವಿನ ಸಂಪರ್ಕ ಹೆಚ್ಚು ಸಮರ್ಥ. ಇದರಿಂದಾಗಿ ಗಂಡಸರ ದೇಹದ ಚಲನಶೀಲತೆ ಹೆಚ್ಚು. ಈ ಕಾರಣಕ್ಕೆ ಕ್ರಿಕೆಟ್, ಫುಟ್ಬಾಲ್ ಮೊದಲಾದ ಕ್ರೀಡೆಗಳಲ್ಲಿ ಗಂಡಸರ ಕೌಶಲ ಹೆಚ್ಚು.
ಕೊನೆಯದಾಗಿ ಇನ್ನೊಂದು ವಿಷಯ ಹೇಳಿಬಿಡುತ್ತೇನೆ. ಶಾಪಿಂಗ್ ಮಾಡುವಾಗಿನ ನಮ್ಮಿ ಬ್ಬರ ವ್ಯತ್ಯಾಸದ ಬಗ್ಗೆ. ಹೆಂಗಸರು ಶಾಪಿಂಗ್ ಮಾಡುವಾಗ ಹಲವಾರು ಆಯ್ಕೆಯನ್ನು ಬಯಸುತ್ತಾರೆ, ಅದರಲ್ಲಿ ಒಂದನ್ನು ಅಳೆದು ತೂಗಿ ಆಯ್ದುಕೊಳ್ಳುವುದು ಅವರಿಗೆ ಖುಷಿ. ಆದರೆ ಗಂಡಸರದ್ದು ಹಾಗಲ್ಲ. ನಮಗೆ ಪ್ಯಾಂಟ್ ಶರ್ಟ್ ಆರಿಸಲು ಎರಡೇ ನಿಮಿಷ ಸಾಕು. ಇದಕ್ಕೂ ವಿಕಸನದ ಕಾರಣವಿದೆ. ಇದಷ್ಟೇ ಅಲ್ಲ, ಶೃಂಗಾರದತ್ತದ ಹೆಂಗಸರ ಒಲವು ಮತ್ತು ಗ್ರಹಿಕೆ, ಗಂಡಸರಿಗೆ ಬಟ್ಟೆಗಳ ಮ್ಯಾಚಿಂಗ್ ತಿಳಿಯದಿರುವುದು ಇವೆಲ್ಲವಕ್ಕೂ.
ಪ್ರಿಯ ಪಿಂಚಣಿ, ಪಿಂಚಣಿ ಎನ್ನುವುದಕ್ಕೆ ಪೆನ್ಶನ್ ಎಂಬರ್ಥವಷ್ಟೇ ಅಲ್ಲ, ಅದು ‘ಹೆಂಡತಿ’ ಎಂಬ ಶಬ್ದಕ್ಕೂ ಸಮಾನಾರ್ಥಕವಂತೆ. ಈಗ ಇದೆಲ್ಲ ವಿಷಯವನ್ನು ಕೇಳಿ ‘ಹೆಂಗಸರೇ ಮೇಲು, ಗಂಡಸರೇ ಕೀಳು’ ಎಂದು ತೂಕಕ್ಕೆ ಹಾಕಿ ನೋಡಬಾರದು. ಕೆಲವೊಂದು ವಿಷಯ ದಲ್ಲಿ ಗಂಡಸರೇ ಸ್ಟ್ರಾಂಗು ಗುರು. ಉದಾಹರಣೆಗೆ ಉತ್ತರ ದಕ್ಷಿಣ- ದಿಕ್ಕು, ದಾರಿ ಇವೆಲ್ಲದರ ಗ್ರಹಿಕೆ ಗಂಡಸರಿಗೆ ಸುಲಭ. ಗಂಡಸರು ಇಂತಿಷ್ಟನೇ ಕ್ರಾಸಿನಲ್ಲಿ ಮನೆ ಎಂದು ನೆನಪಿಟ್ಟು ಕೊಂಡರೆ ಹೆಂಗಸರು ಇಂಥ ಬಿಲ್ಡಿಂಗ್‌ನ ಪಕ್ಕ, ಇಂತಲ್ಲಿ ಎಂದು ಯಾವುದೊ ಲ್ಯಾಂಡ್ ಮಾರ್ಕ್ ಬಳಸಿ ನೆನಪಿಟ್ಟುಕೊಳ್ಳುತ್ತಾರೆ.
ಅಳತೆ, ಒಂದು ವಸ್ತುವನ್ನು 3D ಕಲ್ಪನೆಯಿಂದ ನೋಡುವುದು ಇವೆಲ್ಲ ಗಂಡಸರಿಗೆ ಸುಲಭ ದಲ್ಲಿ ಸಿದ್ಧಿಸಿರುತ್ತದೆ. ಪ್ರಿಯೆ, ಇದ್ಯಾವುದೂ ಸಾರ್ವತ್ರಿಕ ಸತ್ಯವೆಂದು ನಾನು ಹೇಳುತ್ತಿಲ್ಲ. ಆದರೆ ಗಂಡು ಮತ್ತು ಹೆಣ್ಣಿನ ವ್ಯತ್ಯಾಸ ಕೇವಲ ದೈಹಿಕವಷ್ಟೇ ಅಲ್ಲ. ನಮ್ಮಿಬ್ಬರ ನಡುವೆ ಅಂತರಿಕವಾಗಿಯೂ ಸಾಕಷ್ಟು ವ್ಯತ್ಯಾಸಗಳಿವೆ. ಮನುಷ್ಯ ಗುಣಗಳನ್ನು ನಿರ್ಧರಿ ಸುವುದೇ ಮಿದುಳು, ಅದರ ಲೆಕ್ಕಾಚಾರ ಮತ್ತು ಹಾರ್ಮೋನ್ ಗಳು ಎನ್ನುವುದೇ ವಿಜ್ಞಾನ ವಾದರೆ ಅದರಲ್ಲಿಯೇ ಎಷ್ಟೊಂದು ವ್ಯತ್ಯಾಸವಿದೆ. ಹಾಗಾಗಿ ಅದೆಷ್ಟೋ ಸಾಮೂಹಿಕ ಗುಣಗಳೇ ನಿವೆ, ಅವೆಲ್ಲ ಇಂದಿನ ಸಮಾಜಕ್ಕನುಗುಣವಾಗಿ ರೂಪಗೊಂಡವಲ್ಲ ಅಥವಾ ಮದುವೆ ಯಾದ ಮೇಲೆ ನಾನು ಬದಲಾದದ್ದೂ ಅಲ್ಲ.
ಡಿಯರ್ ವೈಫ್, ಜಗತ್ತಿನ ಮಾತು ಬಿಡು. ಲಿಂಗ ಭೇದಭಾವ ಸರಿಯಲ್ಲ, ಆದರೆ ಲಿಂಗಬೇಧ ಸಹಜವಾಗಿಯೇ ಇದೆ. ಉತ್ತಮ ಡಾಕ್ಟರ್ ಅಥವಾ ವಿeನಿಯ ಎದುರು ಗಂಡು ಹೆಣ್ಣಿನ ಮಿದುಳು ಇಟ್ಟರೆ ಶೇ.80ರಷ್ಟು ಸಮಯ ಇದು ಗಂಡಸರದ್ದು, ಇದು ಹೆಂಗಸರದ್ದು ಎಂದು ಗುರುತಿಸುತ್ತಾರಂತೆ. ಇಲ್ಲಿ ಉಳಿದ ಶೇ.20 ವ್ಯತ್ಯಾಸವಿಲ್ಲವೆಂದಾಯಿತು. ಅವರು ಅಪವಾದ. ನಿನ್ನನ್ನು ಪಿಂಚಣಿ ಎಂದು ಕರೆದೆನಲ್ಲ. ಹಾಗಂತ ಗಂಡುಕುಲ ಸಹಜ ಗುಣಾವಶೇಷಗಳಿಗೆ ನನ್ನನ್ನು ಪದೇ ಪದೆ ‘ಪಿಂಚ್’ (ಚಿವುಟು) ಮಾಡುತ್ತಿರಬೇಕೆಂದಿಲ್ಲ.
ಇಲ್ಲಿ ಹೇಳಿದ ಎಲ್ಲವೂ ವೈಜ್ಞಾನಿಕವಾಗಿ ಸಿದ್ಧವಾದವುಗಳು. ಇವು ಯಾವುದೂ ನಿನ್ನೆ ಮೊನ್ನೆ ನನ್ನ ಬೆನ್ನೇರಿದ ಗುಣಗಳಲ್ಲ. ಅಥವಾ ಮದುವೆಯಾದ ಮೇಲೆ ಕಲಿತದ್ದೂ ಅಲ್ಲ. ಚಿಕ್ಕ ಮಗು ಹೆಣ್ಣಾಗಿದ್ದಲ್ಲಿ ಹೆಚ್ಚಿನ ಸಮಯ ತಾಯಿಯ ಮುಖವನ್ನೇ ನೋಡುತ್ತದೆ. ಅದೇ ಮಗು ಗಂಡಾಗಿದ್ದರೆ ಅದರ ಲಕ್ಷ್ಯ ಸುತ್ತಲಿನ ವಸ್ತು, ಆಟಿಕೆಯ ಮೇಲೆಯೇ ಜಾಸ್ತಿ. ಏನಿಲ್ಲ, ಇವೆಲ್ಲ ಆಜನ್ಮ ವ್ಯತ್ಯಾಸಗಳು ಎಂದಷ್ಟೇ ಹೇಳಬೇಕಿತ್ತು. ಇಂತಿ ನಿನ್ನ ಪತಿ...