ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಸ್ನೋಮ್ಯಾನ್:‌ ಯಾರೂ ಬೇಡವೆಂದ ಕುದುರೆಯ ವಿಜಯಗಾಥೆ

1956ರ ಫೆಬ್ರವರಿಯ ಒಂದು ಚಳಿಯ ಬೆಳಗ್ಗೆ, ಹ್ಯಾರಿ ಡಿಲೇಯರ್ ಎನ್ನುವ ವ್ಯಾಪಾರಿ ಪೆನ್ಸಿಲ್ವೇನಿಯಾದ ಕುದುರೆ ಹರಾಜಿಗೆ ತಡವಾಗಿ ತಲುಪಿದರು. ರಸ್ತೆಯಲ್ಲಿ ಕಾರಿನ ಟೈರ್ ಪಂಕ್ಚರ್ ಆಗಿದ್ದರಿಂದ ಅವರು ಬರುವಷ್ಟರಲ್ಲಿ ಹರಾಜು ಮುಗಿದು ಹೋಗಿತ್ತು. ಒಳ್ಳೆಯ ತಳಿಯ ಕುದುರೆಗಳೆಲ್ಲಾ ಅದಾಗಲೇ ಮಾರಾಟವಾಗಿ ಲಾರಿಗಳಲ್ಲಿ ಹೊರಟಿದ್ದವು.

ಒಂದೊಳ್ಳೆ ಮಾತು

1956ರ ಫೆಬ್ರವರಿಯ ಒಂದು ಚಳಿಯ ಬೆಳಗ್ಗೆ, ಹ್ಯಾರಿ ಡಿಲೇಯರ್ ಎನ್ನುವ ವ್ಯಾಪಾರಿ ಪೆನ್ಸಿಲ್ವೇನಿಯಾದ ಕುದುರೆ ಹರಾಜಿಗೆ ತಡವಾಗಿ ತಲುಪಿದರು. ರಸ್ತೆಯಲ್ಲಿ ಕಾರಿನ ಟೈರ್ ಪಂಕ್ಚರ್ ಆಗಿದ್ದರಿಂದ ಅವರು ಬರುವಷ್ಟರಲ್ಲಿ ಹರಾಜು ಮುಗಿದು ಹೋಗಿತ್ತು. ಒಳ್ಳೆಯ ತಳಿಯ ಕುದುರೆಗಳೆಲ್ಲಾ ಅದಾಗಲೇ ಮಾರಾಟವಾಗಿ ಲಾರಿಗಳಲ್ಲಿ ಹೊರಟಿದ್ದವು.

ಅಲ್ಲಿ ಉಳಿದಿದ್ದದ್ದು ತಿರಸ್ಕೃತಗೊಂಡಂಥವು ಮಾತ್ರ. ಕಸಾಯಿಖಾನೆಗೆ ಸಾಗಿಸಲು ಸಿದ್ಧ ವಾಗಿದ್ದ ಒಂದು ಲಾರಿಯಲ್ಲಿ ಕೆಲವು ದಣಿದ ಕುದುರೆಗಳಿದ್ದವು. ಹ್ಯಾರಿ ಅಲ್ಲಿಂದ ಹೊರಡಲು ಅನುವಾದಾಗ ಒಂದು ಬೂದು ಬಣ್ಣದ ಕುದುರೆ ಅವರ ಗಮನ ಸೆಳೆಯಿತು.

ನಿಶ್ಶಕ್ತವಾಗಿದ್ದ ಅದರ ಬೆನ್ನ ಮೇಲೆ ಕೆಲಸದ ಹೊರೆ ಹೊತ್ತು ಆದ ಗಾಯದ ಗುರುತು ಗಳಿದ್ದವು. ಅದು ಪಂದ್ಯದ ಕುದುರೆಯಾಗಿರಲಿಲ್ಲ, ಕೃಷಿ ಕೆಲಸಕ್ಕೆ ಬಳಸಿ ಬಿಟ್ಟಿದ್ದ ಸಾಮಾನ್ಯ ಕುದುರೆಯಾಗಿತ್ತು. ಆದರೆ ಆ ಕುದುರೆಯ ಕಣ್ಣುಗಳಲ್ಲಿ ಒಂದು ವಿಶೇಷತೆ ಇತ್ತು.

ಅದು ಯಾವುದೇ ಭಯವಿಲ್ಲದೆ, ಅತ್ಯಂತ ಶಾಂತವಾಗಿ ಮತ್ತು ತಾಳ್ಮೆಯಿಂದ ಹ್ಯಾರಿ ಯವರನ್ನು ನೋಡುತ್ತಿತ್ತು. ಹ್ಯಾರಿಗೆ ಏನೋ ಅನ್ನಿಸಿ, ಆ ಕುದುರೆಯನ್ನು ಕೆಳಗಿಳಿಸಲು ಹೇಳಿದರು. ಎಂಬತ್ತು ಡಾಲರ್‌ಗಳನ್ನು ನೀಡಿ ಅವರು ಅದನ್ನು ಖರೀದಿಸಿದರು. ಅದು ಕೇವಲ ಒಂದು ವ್ಯವಹಾರವಾಗಿರಲಿಲ್ಲ, ಒಂದು ಜೀವವನ್ನು ಸಾವಿನಿಂದ ಪಾರು ಮಾಡಿದ ಕರುಣೆಯಾಗಿತ್ತು.

ಇದನ್ನೂ ಓದಿ: Roopa Gururaj Column: ಕರ್ನಾಟಕದ ಮೊದಲ ಮಹಿಳಾ ಎಂಜಿನಿಯರ್‌ ರಾಜೇಶ್ವರಿ ಚಟರ್ಜಿ

ಹ್ಯಾರಿ ಆ ಕುದುರೆಯನ್ನು ಮನೆಗೆ ತಂದಾಗ, ಅವರ ಮಗಳು ಅದರ ಬಣ್ಣವನ್ನು ನೋಡಿ ‘ಸ್ನೋಮ್ಯಾನ್’ ಎಂದು ಕರೆದಳು. ಆರಂಭದಲ್ಲಿ ಅದು ಸವಾರಿಯನ್ನು ಕಲಿಯುವ ಮಕ್ಕಳಿಗೆ ಶಾಂತವಾಗಿ ಸಹಕರಿಸುವ ಸಾಮಾನ್ಯ ಕುದುರೆಯಾಗಿತ್ತು. ನಂತರ ಹ್ಯಾರಿ ಅದನ್ನು ಪಕ್ಕದ ಮನೆಯವರಿಗೆ 160 ಡಾಲರ್‌ಗೆ ಮಾರಾಟ ಮಾಡಿದರು. ಆದರೆ ಇಲ್ಲಿಂದ ಕಥೆ ಹೊಸ ತಿರುವು ಪಡೆಯಿತು. ಕೆಲವು ದಿನಗಳ ನಂತರ, ಸ್ನೋಮ್ಯಾನ್ ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಹ್ಯಾರಿಯ ಮನೆಗೆ ಬಂದಿತು!

ಹ್ಯಾರಿ ಅದನ್ನು ವಾಪಸ್ ಕಳುಹಿಸಿದರೂ, ಅದು ಮತ್ತೆ ಮತ್ತೆ ಬೇಲಿ ಹಾರಿ ಹ್ಯಾರಿಯ ಬಳಿಯೇ ಬರುತ್ತಿತ್ತು. ಅಷ್ಟೊಂದು ಎತ್ತರದ ಬೇಲಿಗಳನ್ನು ಹಾರುವುದು ಸಾಮಾನ್ಯ ಕುದುರೆಗೆ ಅಸಾಧ್ಯವಾಗಿತ್ತು.

ಆಗಲೇ ಹ್ಯಾರಿಗೆ ಆ ಕುದುರೆಯಲ್ಲಿದ್ದ ಅಸಾಧಾರಣ ಜಿಗಿತದ ಸಾಮರ್ಥ್ಯ ಅರಿವಾದದ್ದು. ಆ ಕುದುರೆ ತಾನು ಎಲ್ಲಿರಬೇಕೆಂದು ತಾನೇ ನಿರ್ಧರಿಸಿತ್ತು. ಹ್ಯಾರಿ ಸ್ನೋಮ್ಯಾನ್ ಅನ್ನು ವಾಪಸ್ ಖರೀದಿಸಿ ತರಬೇತಿ ನೀಡಲು ಆರಂಭಿಸಿದರು. ಕೇವಲ ಎರಡು ವರ್ಷಗಳಲ್ಲಿ, ಯಾವ ಕುದುರೆಯನ್ನು ಕಸಾಯಿಖಾನೆಗೆ ಕಳುಹಿಸಲಾಗುತ್ತಿತ್ತೋ, ಅದೇ ಕುದುರೆ ನ್ಯೂಯಾರ್ಕ್‌ನ ಪ್ರತಿಷ್ಠಿತ ‘ಮ್ಯಾಡಿ ಸನ್ ಸ್ಕ್ವೇರ್ ಗಾರ್ಡನ್’ನಲ್ಲಿ ದೊಡ್ಡ ದೊಡ್ಡ ತಳಿಯ ಕುದುರೆಗಳ ವಿರುದ್ಧ ಸ್ಪರ್ಧಿಸಿತು.

1958 ಮತ್ತು 1956ರಲ್ಲಿ ಸತತವಾಗಿ ಎರಡು ಬಾರಿ ‘ಹಾರ್ಸ್ ಆಫ್ ದಿ ಇಯರ್’ ಪ್ರಶಸ್ತಿ‌ ಯನ್ನು ಮುಡಿಗೇರಿಸಿಕೊಂಡಿತು. ಪತ್ರಿಕೆಗಳು ಅದನ್ನು ‘ಸಿಂಡರೆ ಹಾರ್ಸ್’ ಎಂದು ಕರೆದವು. ಟಿವಿ ಶೋಗಳು ಮತ್ತು ಮ್ಯಾಗಜೀನ್‌ಗಳಲ್ಲಿ ಮಿಂಚುವ ಮೂಲಕ ಸ್ನೋಮ್ಯಾನ್ ಅಮೆರಿಕದ ಜನರ ಪ್ರೀತಿಯ ಸಂಕೇತವಾಯಿತು.

1969ರಲ್ಲಿ ಸ್ನೋಮ್ಯಾನ್ ನಿವೃತ್ತಿಯಾಯಿತು. 1974ರಲ್ಲಿ ಅದು ಮರಣ ಹೊಂದಿದಾಗ ಹ್ಯಾರಿ ಅದರ ಪಕ್ಕದ ಇದ್ದರು. ನಂತರ ಅದನ್ನು ‘ಶೋ ಜಂಪಿಂಗ್ ಹಾಲ್ ಆಫ್ ಫೇಮ್’ಗೆ ಸೇರಿಸಲಾಯಿತು.‌ ಈ ಕಥೆಯನ್ನು ಆಧರಿಸಿ ’ Harry & Snowman’ ಎಂಬ ಹೆಸರಿನ ಜನಪ್ರಿಯ ಸಾಕ್ಷ್ಯಚಿತ್ರ 2015ರಲ್ಲಿ ಬಿಡುಗಡೆಯಾಗಿದೆ.

ಇದಲ್ಲದೆ, ಎಲಿಜಬೆತ್ ಲೆಟ್ಸ್ ಎಂಬುವವರು ‘ The Eighty- Dollar Champion ’ ಎಂಬ ಹೆಸರಿನ ಪುಸ್ತಕವನ್ನೂ ಬರೆದಿದ್ದಾರೆ, ಇದು ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಪುಸ್ತಕ ವಾಗಿ ದಾಖಲಾಗಿದೆ. ಸಾಧ್ಯವಿಲ್ಲದ್ದು ಯಾವುದೂ ಇಲ್ಲ, ಸಾಧಾರಣ ಎನಿಸಿಕೊಂಡಿದ್ದು ಕೂಡ ಅದ್ಭುತಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಜಗತ್ತಿನಾದ್ಯಂತ ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ. ‌

ಕೇವಲ ವಂಶಾವಳಿ ಮತ್ತು ಬಾಹ್ಯರೂಪವನ್ನು ನೋಡಿ ಸಾಮರ್ಥ್ಯವನ್ನು ನಿರ್ಧರಿಸು ವವರು ಇರುವಾಗ, ಹ್ಯಾರಿ ಆ ಕುದುರೆಯ ಒಳಗಿದ್ದ ಹಠ ಮತ್ತು ಪ್ರಾಮಾಣಿಕತೆಯನ್ನು ಕಂಡರು. ಕೆಲವೊಮ್ಮೆ ಶ್ರೇಷ್ಠತೆಯು ಪರಿಸ್ಥಿತಿಗೆ ಮಂಕಾಗಿರುತ್ತದೆ. ಎಲ್ಲರೂ ಕೈಬಿಟ್ಟ ವಸ್ತು, ವ್ಯಕ್ತಿ ಅಥವಾ ಪ್ರಾಣಿಯಲ್ಲಿ ಏನಾದರೂ ವಿಶೇಷತೆಯನ್ನು ಕಾಣುವ ಕಣ್ಣುಗಳಿದ್ದರೆ, ಸಾಮಾನ್ಯವೂ ಅಸಾಮಾನ್ಯವಾಗಬಲ್ಲದು ಎಂಬುದಕ್ಕೆ ಈ ‘ಸ್ನೋಮ್ಯಾನ್’ ಕಥೆಯೇ ಸಾಕ್ಷಿ ಅಲ್ಲವೇ?

ರೂಪಾ ಗುರುರಾಜ್

View all posts by this author