ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಸಂವಹನದ ರೀತಿ ಬದಲಿಸಿದ ಸೋಶಿಯಲ್‌ ಮೀಡಿಯಾಗಳು !

ಇಷ್ಟೊಂದು ಅಭಿವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ ನೋಡಿ! ಹೀಗಾಗಿ ಪ್ರಕಾಶಣ್ಣ ಬಹಳ ಇಷ್ಟ ಆಗಿದ್ದರು. ಯಾವಾಗ ಪ್ರಕಾಶಣ್ಣ ಸುಮ್ಮ-ಸುಮ್ಮನೆ ಕಾರಣವಿಲ್ಲದೆ, ಕೇವಲ ವಿರೋಧಿಸಬೇಕು ಎನ್ನುವ ಕಾರಾಣಕ್ಕೆ ವಿರೋಧಿಸುವುದು ಮಾಡಲು ಶುರು ಮಾಡಿದರು ಆಗ ಅಣ್ಣನ ಬಗ್ಗೆ ತಣ್ಣನೆಯ ಭಾವ ಉಂಟಾಗೋಯ್ತು. ನಾವು ಎಂದಿಗೂ ನಮ್ಮತನ ಬಿಡಬಾರದು.

ವಿಶ್ವರಂಗ

ವ್ಯಕ್ತಿ ಅದೆಷ್ಟೇ ಪ್ರಸಿದ್ಧನಿರಲಿ, ಯಶಸ್ವಿಯಾಗಿರಲಿ ಸೋಶಿಯಲ್ ಮೀಡಿಯಾದಲ್ಲಿ ಅವರ ಜನ್ಮವನ್ನು ಜಾಲಾಡಿ ಬಿಡುತ್ತಾರೆ. ಸೋಶಿಯಲ್ ಮೀಡಿಯಾ ಕೆಟ್ಟದ್ದು ಎನ್ನುವ ರೀತಿಯಲ್ಲಿ ಇದನ್ನು ಹೇಳುತ್ತಿಲ್ಲ. ಟ್ಯಾಲೆಂಟ್ ಇದ್ದು ಕೂಡ ಬೇರೆಯವರ ಅನುಮತಿಗೆ, ಒಪ್ಪಿಗೆಗೆ ಕಾಯಬೇಕಾಗಿತ್ತು. ಇಂದು ನಿಜವಾದ ಟ್ಯಾಲೆಂಟ್ ಇದ್ದರೆ ಸಾಕು!

ನನಗೆ ಪ್ರಕಾಶ್ ರೈ ಇಷ್ಟವಾದದ್ದು ಗುಡ್ಡದ ಭೂತ ಎನ್ನುವ ಸೀರಿಯಲ್ ನೋಡಿದ ಮೇಲೆ. ಆಗಿನ್ನೂ ಇಷ್ಟೊಂದು ಚಾನಲ್, ಓಟಿಟಿ ಯಾವುದೂ ಇರದ ಕಾಲ. ನಟರು, ಆಟಗಾರರು, ಪ್ರಸಿದ್ಧರು ಯಾವ ಪಂಥಕ್ಕೆ ಸೇರಿದವರು ಎನ್ನುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಇಷ್ಟೊಂದು ಅಭಿವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ ನೋಡಿ! ಹೀಗಾಗಿ ಪ್ರಕಾಶಣ್ಣ ಬಹಳ ಇಷ್ಟ ಆಗಿದ್ದರು. ಯಾವಾಗ ಪ್ರಕಾಶಣ್ಣ ಸುಮ್ಮ-ಸುಮ್ಮನೆ ಕಾರಣವಿಲ್ಲದೆ, ಕೇವಲ ವಿರೋಧಿಸ ಬೇಕು ಎನ್ನುವ ಕಾರಣಕ್ಕೆ ವಿರೋಧಿಸುವುದು ಮಾಡಲು ಶುರು ಮಾಡಿದರು. ಆಗ ಅಣ್ಣನ ಬಗ್ಗೆ ತಣ್ಣನೆಯ ಭಾವ ಉಂಟಾಗೋಯ್ತು. ನಾವು ಎಂದಿಗೂ ನಮ್ಮತನ ಬಿಡಬಾರದು. ಒಬ್ಬ ವ್ಯಕ್ತಿ ಇಷ್ಟವಾಗಲಿಲ್ಲ ಎನ್ನುವ ಕಾರಣಕ್ಕೆ ದ್ವೇಷ ಕಾರುವುದನ್ನೇ ಪೂರ್ಣಾವಧಿ ಕಾಯಕ ಮಾಡಿಕೊಂಡರೆ ಹೇಗೆ? ಈ ಕಾರಣದಿಂದ ಪ್ರಕಾಶಣ್ಣ ಲಕ್ಷಾಂತರ ಅಭಿಮಾನಿ ಗಳನ್ನು ಕಳೆದು ಕೊಂಡದ್ದು ಮಾತ್ರ ಸತ್ಯ. ಈತನ ಮಾತುಕತೆಗಳು ಇಂದಿಗೂ ನಿಂತಿಲ್ಲ. ಸುಖಾಸುಮ್ಮನೆ ಒಂದು ಪಂಥದಲ್ಲಿ ನಂಬಿಕೆ ಇಟ್ಟವರನ್ನು ಕೆಣಕುವುದು, ಅವರು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ಕೊಟ್ಟರೆ ‘ಇದ್ಯಾವ ಸೀಮೆ ನಾಗರೀಕ ಸಮಾಜ’ ಎಂದು ಊಳಿಡುವುದು ಈತನ ಕೆಲಸವಾಗಿ ಹೋಗಿದೆ.

ದೇಶದ ಜನರು ಆಯ್ಕೆ ಮಾಡಿ ಕಳಿಸಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿಯವರ ತಾಯಿ ಸತ್ತಾಗ, ಆಕೆಯ ಬಗ್ಗೆಯೂ, ಸಾವಿನ ಸಮಯದಲ್ಲೂ ಕುಹಕದ ಮಾತನ್ನು ಸೋಶಿ ಯಲ್ ಮೀಡಿಯಾದಲ್ಲಿ ಹಾಕಿದ್ದರು. ಪ್ರಕಾಶ್ ರೈ ತಾಯಿಯವರು ಸತ್ತಾಗ ಬಹಳಷ್ಟು ಮಂದಿ ಅದೇ ರೀತಿಯಲ್ಲಿ ಅವರನ್ನು ಟ್ರೋಲ್ ಮಾಡಿದರು. ‘ಮಾಡಿದ್ದುಣ್ಣೋ ಮಹರಾಯ.’

ಇದನ್ನೂ ಓದಿ Rangaswamy Mookanahalli Column: ಅಕ್ಷಯವಾಗಲಿ ಅಕ್ಷರ, ನಿಲ್ಲದಿರಲಿ ಅಕ್ಷರ ಸಾಧನೆ !

ಮೊನ್ನೆ ಅಂದರೆ ಏಪ್ರಿಲ್ 24ರಂದು ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ ವಿತ್ತು. ಜಗತ್ತಿನಾದ್ಯಂತ ಹರಡಿಕೊಂಡಿರುವ ಸಕಲ ಕನ್ನಡಿಗರೂ ಆ ದಿನವನ್ನು ಹಬ್ಬದಂತೆ ಆಚರಿಸಿದ್ದಾರೆ.

ತಮ್ಮ ಇಷ್ಟದ ನಟನ ಹುಟ್ಟುಹಬ್ಬ ನಿಜಕ್ಕೂ ಕಲಾಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಕನ್ನಡ ನಾಡಿಗೆ ನಾಡೇ ಅಣ್ಣಾವರ ಹುಟ್ಟು ಹಬ್ಬದ ನೆನಪಿನಲ್ಲಿ, ಖುಷಿಯಲ್ಲಿ ಅವರ ನೆನಪಿಗಾಗಿ ಅನ್ನದಾನ, ರಕ್ತದಾನ ಇತ್ಯಾದಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮಗೆ ತೋಚಿದ ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಇರಬೇಕಾದಾಗ ತನ್ನ ಹೆಸರಿನಲ್ಲಿ ಅಹಿಂಸಾ ಸೇರಿಸಿಕೊಂಡಿರುವ ಚೇತನ್ ಎನ್ನುವ ವಿದೇಶಿ ಪ್ರಜೆಯೊಬ್ಬ ರಾಜಕುಮಾರ್ ಅವರ ಸ್ಮಾರಕಕ್ಕೆ ಎರಡೂವರೆ ಎಕರೆ ಜಮೀನು, ಅದೂ ನಗರ ಪ್ರದೇಶದಲ್ಲಿ ಕೊಡುವುದರ ಔಚಿತ್ಯವೇನು? ಎಂದು ಪ್ರಶ್ನಿಸಿದ್ದಾರೆ.

ಈತನ ಹುಚ್ಚಾಟಗಳು ಕೂಡ ಒಂದಲ್ಲ, ಎರಡಲ್ಲ. ಅದನ್ನು ಇಲ್ಲಿ ಮತ್ತೆ ಬರೆಯುವ ಕೆಲಸಕ್ಕೆ ನಾನು ಹೋಗುವುದಿಲ್ಲ. ಎಲ್ಲವೂ ಅಸಂಬದ್ಧ. ವಿರೋಧಿಸಬೇಕು ಎಂದು ವಿರೋಧಿಸುವುದು. ನಾನೇನೂ ಸಮಾಜಕ್ಕಿಂತ ವಿಭಿನ್ನ ಎಂದು ತೋರಿಸಿಕೊಳ್ಳುವ ಹೇಳಿಕೆಗಳನ್ನು ನೀಡುವುದು ಈತನ ಪ್ರಮುಖ ಕೆಲಸ.

ಪ್ರಕಾಶ್ ರೈ ನಷ್ಟು ಉಡಾಫೆ ಇಲ್ಲದಿದ್ದರೂ, ಆತನಿಗೆ ಅತ್ಯಂತ ಸಮೀಪದಲ್ಲಿ ಸ್ಪರ್ಧೆ ನೀಡುವ ಇನ್ನೊಬ್ಬ ವ್ಯಕ್ತಿ ಕರ್ನಾಟಕದಲ್ಲಿದ್ದರೆ ಅದು ಚೇತನ್ ಎಂದು ಧಾರಾಳವಾಗಿ ಹೇಳಬಹುದು. ಪ್ರಕಾಶ್ ರೈ ಅವರ ವಿಚಾರದಲ್ಲಿ ಸಾವಿರಾರು ಜನ ಅವರ ನಿಲುವಿಗೆ ವಿರುದ್ಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದನ್ನು ನೀವೆಲ್ಲರೂ ಗಮನಿಸಿರುತ್ತೀರಿ. ಇನ್ನೂ ಚೇತನ್ ವಿಚಾರದಲ್ಲಿ ಏನಾಯ್ತು ಎನ್ನುವುದನ್ನು ಕೂಡ ನೀವೆಲ್ಲಾ ನೋಡಿದ್ದೀರಿ.

Screenshot_9 R

ಆತನಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಸಾ.ರಾ.ಗೋವಿಂದ್ ಅವರಂತೂ ಏಕವಚನ ಪ್ರಯೋಗಕ್ಕೂ ಇಳಿದು ಬಿಟ್ಟಿದ್ದರು. ರಾಜ್ ಕುಮಾರ್ ಎಂದರೆ ಇವತ್ತಿಗೂ ಪ್ರಾಣ ಕೊಡಲು ತಯಾರಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಿಲ್ಲ.

ಹೀಗಾಗಿ ಅವರ ಬಗ್ಗೆ ಮಾತನಾಡಿದ ಚೇತನ್ ಈ ಬಾರಿ ಮಾಡಿದುಣ್ಣೋ ಮಹರಾಯ ಎನ್ನುವ ಪದದ ಅರ್ಥವನ್ನು ತಿಳಿದುಕೊಳ್ಳುವಂತಾಯ್ತು. ಈ ಎರಡು ವಿಚಾರಗಳನ್ನು ಕೇವಲ ರೆಫರೆನ್ಸ್ ಪಾಯಿಂಟ್ ಲೆಕ್ಕಾಚಾರದಲ್ಲಿ ನೀಡಿದ್ದೇನೆ. ‌

ಉಳಿದಂತೆ ಪ್ರಕಾಶ್ ರೈ ಇರಬಹುದು ಅಥವಾ ಅಹಿಂಸಾ ಚೇತನ್, ಒಂದು ಹಂತ ಮೀರಿ ದಾಗ ಸಮಾಜವೇ ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತದೆ. ಈಗ ಮೇಲಿನ ಎರಡು ವಿಚಾರ ಗಳನ್ನು ಹೇಳಲು ಕಾರಣ ಮತ್ತು ಲೇಖನದಲ್ಲಿ ಪ್ರಮುಖವಾಗಿ ಯಾವ ವಿಚಾರ ವನ್ನು ಹೇಳಬೇಕು ಎಂದು ಬಯಸಿದ್ದೇನೆ ಆ ವಿಚಾರಕ್ಕೆ ಬರುತ್ತೇನೆ.

ನಾವೀಗ ಸೋಶಿಯಲ್ ಮೀಡಿಯಾ ಜನನಕ್ಕೂ ಹಿಂದಿನ ಸಮಯಕ್ಕೆ ಸ್ವಲ್ಪ ಹೋಗೋಣ. ಅವತ್ತಿನ ದಿನಗಳನ್ನು ನೆನಪು ಮಾಡಿಕೊಳ್ಳಿ. ನಮಗೆ ಒಬ್ಬ ಚಲನಚಿತ್ರ ನಟನಿರಬಹುದು, ಹಾಡುಗಾರನಿರಬಹುದು, ಆಟಗಾರನಿರಬಹುದು ಅಥವಾ ಇನ್ನ್ಯಾವುದೇ ಕ್ಷೇತ್ರದಲ್ಲಿ ಪ್ರಸಿದ್ಧ ವ್ಯಕ್ತಿಯಿರಬಹುದು. ಅವರನ್ನು ನಾವು ಅವರು ಮಾಡುವ ಕೆಲಸದ ಮೂಲಕ ಮಾತ್ರ ಬಲ್ಲೆವಾಗಿದ್ದೆವು. ಅವರ ಖಾಸಗಿ ಜೀವನ ಸಮಾಜದ ಎಲ್ಲ ಜನರಿಗೂ ತಿಳಿಯು ತ್ತಿರಲಿಲ್ಲ. ಅವರ ಖಾಸಗಿ ಅಭಿಪ್ರಾಯಗಳು ಕೂಡ ನಮಗೆ ಗೊತ್ತಾಗುತ್ತಿರಲಿಲ್ಲ.

ತೀರಾ ಸಾಮಾಜಿಕ ಬದುಕಿನಲ್ಲಿ ಗದ್ದಲ ಉಂಟು ಮಾಡಿಕೊಂಡರೆ, ಅಂದರೆ ಡೈವೋರ್ಸ್, ಹಣಕಾಸಿನ ಹಗರಣ ಇತ್ಯಾದಿಗಳು ಆದಾಗ ಒಂದಷ್ಟು ಪತ್ರಿಕೆಗಳಲ್ಲಿ ಅದು ಸುದ್ದಿ ಯಾಗುತ್ತಿತ್ತು. ಆ ಸುದ್ದಿಯನ್ನು ಓದಿದ ಜನ ತಮಗೆ ಬೇಕಾದ ರೀತಿಯಲ್ಲಿ ಆತನ ಅಥವಾ ಆಕೆಯ ಬಗ್ಗೆ ಒಂದು ಭಾವನೆಯನ್ನು ಕಟ್ಟಿಕೊಳ್ಳುತ್ತಿದ್ದರು. ಅವತ್ತಿನ ದಿನದಲ್ಲಿ ಒಬ್ಬ ವ್ಯಕ್ತಿಯ, ಸಂಸ್ಥೆಯ ವ್ಯಕ್ತಿತ್ವನ್ನು ಸಮಾಜಕ್ಕೆ ಹೇಗೆ, ಅಂದರೆ ಸಮಾಜದಲ್ಲಿ, ಜನರ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಬರುವಂತೆ ನೋಡಿಕೊಳ್ಳಲು ಪಬ್ಲಿಕ್ ರಿಲೇಶನ್(ಪಿಆರ್) ಸಂಸ್ಥೆಗಳಿದ್ದವು.

ಇವತ್ತಿಗೂ ಇವೆ. ಆದರೆ ಆ ದಿನಗಳಲ್ಲಿ ಅವು ಹೆಚ್ಚು ಪ್ರಭಾವಶಾಲಿಯಾಗಿದ್ದವು. ಅವತ್ತಿನ ದಿನಗಳಲ್ಲಿ ಸಂವಹನ ಒನ್-ವೇ ಆಗಿತ್ತು. ಅಂದರೆ ಕಮ್ಯುನಿಕೇಷನ್ ಒಮ್ಮುಖವಾಗಿ ಮಾತ್ರ ಆಗುತ್ತಿತ್ತು. ಬಹುತೇಕ ಬಾರಿ ನಾವು ಅಂದರೆ ಸಮಾಜ ಅದನ್ನು ರಿಸೀವ್ ಮಾಡಿಕೊಳ್ಳು ತ್ತಿದ್ದೆವು.

ನಮಗೆ ಅನ್ನಿಸಿದ್ದು, ನಮ್ಮ ಭಾವನೆ ವ್ಯಕ್ತ ಪಡಿಸಲು ಆಗುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಪಿಆರ್ ಸಂಸ್ಥೆಗಳು ಹೇರಳವಾಗಿ ಬೆಳೆದುಕೊಂಡಿವೆ. ವ್ಯಕ್ತಿ ಅಥವಾ ಅದೆಷ್ಟೇ ಭ್ರಷ್ಟ ವಾಗಿರಲಿ, ಕಿಸೆ ತುಂಬಾ ಹಣಕೊಟ್ಟರೆ ಸಾಕು ಹತ್ತು ರುಪಾಯಿ ಕೆಲಸಕ್ಕೆ ನೂರಾರು ರುಪಾಯಿ ಒಗ್ಗರಣೆ ಹಾಕಿ ಅದನ್ನು ಜನರಿಗೆ ತಲುಪಿಸುತ್ತಿತ್ತು.

ವ್ಯಕ್ತಿಯನ್ನು ಅಥವಾ ಸಂಸ್ಥೆಯನ್ನು ಒಳ್ಳೆಯವರೆನ್ನುವ ಇಮೇಜ್ ಜನರಲ್ಲಿ ಬರುವಂತೆ ನೋಡಿಕೊಳ್ಳುತ್ತಿತ್ತು. ಸೋಶಿಯಲ್ ಮೀಡಿಯಾ ಬಂದ ನಂತರ ನಾವು ಕಮ್ಯುನಿಕೇಟ್ ಮಾಡುವ ರೀತಿ ಪೂರ್ಣವಾಗಿ ಬದಲಾಗಿ ಹೋಗಿದೆ. ಇವತ್ತಿಗೂ ಪಿಆರ್ ಸಂಸ್ಥೆಗಳು ನಾಯಿಕೊಡೆಯಂತೆ ಎಲ್ಲಡೆ ಹಬ್ಬಿವೆ. ಕೆಲವು ಬಹು ಪ್ರಸಿದ್ಧ.

ಕೆಲವು ಸಾಮಾನ್ಯ. ಆದರೆ ಅವುಗಳು ಇಂದಿಗೂ ಅದೇ ಹಳಸಲು ಕೆಲಸವನ್ನು ಮಾಡುತ್ತಿವೆ. ತಮ್ಮ ಕ್ಲೈಂಟ್ ಅತ್ಯುತ್ತಮ ಎನ್ನುವುದನ್ನು ಜನರ ಮನಸ್ಸಿನಲ್ಲಿ ನೆಲೆಯೂರುವಂತೆ ಮಾಡುವುದು ಆ ಕೆಲಸ. ಇದು ಕೇವಲ ವ್ಯಕ್ತಿ, ಸಂಸ್ಥೆಗೆ ಮಾತ್ರ ಸೀಮಿತವಾಗಿಲ್ಲ. ಅದು ಪದಾರ್ಥ ಅಂದರೆ ಪ್ರಾಡಕ್ಟ್‌ʼಗೂ ಅನ್ವಯ. ಇವುಗಳಿಗೆ ಒಂದು ಉದಾಹರಣೆಯನ್ನು ನೀಡಬಹುದು.

ಸಲ್ಮಾನ್ ಖಾನ್ ಎನ್ನುವ ನಟ ಹಲವಾರು ಕೇಸುಗಳಲ್ಲಿ ಇಂದಿಗೂ ಕ್ಲಿಯರೆ ಸಿಗದೆ ಇರುವ ವ್ಯಕ್ತಿ. ಆತ ಬಹಳ ಮಾನವತಾವಾದಿ, ಬಹಳಷ್ಟು ಜನರಿಗೆ ಸಹಾಯ ಮಾಡುತ್ತಾರೆ. ಮನೆಯಲ್ಲಿ ಗಣಪತಿ ಪೂಜೆಯನ್ನು ಸಹ ಮಾಡುತ್ತಾರೆ. ಇತ್ಯಾದಿಗಳು ಆತನ ಕೆಟ್ಟ ಇಮೇಜ್ ತಿಳಿ ಮಾಡಲು ತೇಲಿ ಬಿಡುವ ಹುನ್ನಾರಗಳು. ಕೋಟ್ಯಂತರ ರುಪಾಯಿ ಪಡೆದ ಪಿಆರ್ ಸಂಸ್ಥೆಗಳು ಮಾಡುವುದು ಇದೆ ಕೆಲಸ.

ಇವತ್ತಿನ ದಿನವಂತೂ ಸಾವಿರಾರು ಸಂಖ್ಯೆಯಲ್ಲಿ ಯೂಟ್ಯೂಬ್ ಚಾನಲುಗಳು ಹುಟ್ಟಿಕೊಂಡಿವೆ. ಅವುಗಳ ಮೂಲಕ ತಮಗೆ ಬೇಕಾದ ನರೇಟಿವ್ ಸೃಷ್ಟಿಸಿ ಬಿಡುವುದು ಸಾಮಾನ್ಯವಾಗಿ ಹೋಗಿದೆ. ನೂರೈವತ್ತು ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ತೊಂಬತ್ತು ಕೋಟಿಗೂ ಹೆಚ್ಚಿನ ಸ್ಮಾರ್ಟ್ ಫೋನ್‌ಗಳಿವೆ. ಅವುಗಳಲ್ಲಿ ಜಗತ್ತಿನ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಡೇಟಾ ಲಭ್ಯವಿದೆ. ಜನರ ಬಳಿ ಮಾಡಲು ಕೆಲಸವಿಲ್ಲದೆ ಅಪಾರ ವೇಳೆಯಿದೆ.

ಹೀಗಾಗಿ ರೀಲ್ಸ್ ಮೂಲಕ, ಶಾರ್ಟ್ಸ್ ಮೂಲಕ ಅವರನ್ನು ಸುಲಭವಾಗಿ ತಲುಪಬಹುದು. ಇವತ್ತೇನಿದ್ದರೂ ವ್ಯೂಸ್ ಲೆಕ್ಕಾಚಾರ! ಯಾರು ಎಷ್ಟು ಜನರನ್ನು ತಲುಪಬಲ್ಲರು ಎನ್ನುವುದರ ಆಧಾರದ ಮೇಲೆ ಹಣ ಕೂಡ ನಿಗದಿಯಾಗುತ್ತೆ. ಪಿಆರ್ ಸಂಸ್ಥೆಗಳು ಇಂತಹ ನೂರಾರು ಸಣ್ಣ-ಪುಟ್ಟ ವಾಹಿನಿಗಳ, ಇನ್‌ʼಫ್ಲುಯೆನ್ಸರ್‌ಗಳನ್ನು ಹಣ ಕೊಟ್ಟು ಖರೀದಿ ಮಾಡಿ ಬಿಡುತ್ತದೆ.

ಮಿಕ್ಕದ್ದು ಅದದೇ ಕಥೆ. ಆದರೆ, ಇವತ್ತಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಅಷ್ಟು ಸುಲಭವಾಗಿ ಜಯಿಸಿಕೊಳ್ಳಲು ಆಗುವುದಿಲ್ಲ. ಇವತ್ತು ಒಂದು ವಿಡಿಯೋ ಅಥವಾ ಫೋಟೊ ಅಥವಾ ಒಂದು ಸುದ್ದಿಯ ಸತ್ಯಾಸತ್ಯತೆಯನ್ನು ನೆಟ್ಟಿಗರು ಜಾಲಾಡಿ ಬಿಡುತ್ತಾರೆ. ಈ ಕಾರಣದಿಂದ ಏನೇ ಮಾಡಿದ್ದರೂ ಜಯಿಸಿ ಕೊಳ್ಳುತ್ತೇನೆ ಎನ್ನುವ ಕಾಲ ಮುಗಿಯುತ್ತ ಬಂದಿದೆ.

ಸೋಶಿಯಲ್ ಮೀಡಿಯಾ ಬರುವುದಕ್ಕೆ ಮುಂಚೆ ನಮಗೆ ನಮ್ಮ ನೆಚ್ಚಿನ ಯಶಸ್ವಿ ವ್ಯಕ್ತಿಯ ಜತೆಗೆ ಸಂವಹನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇವತ್ತು ಕಾಲ ಬದಲಾಗಿದೆ. ವ್ಯಕ್ತಿ ಅದೆಷ್ಟೇ ಪ್ರಸಿದ್ಧನಿರಲಿ, ಯಶಸ್ವಿಯಾಗಿರಲಿ, ಸೋಶಿಯಲ್ ಮೀಡಿಯಾದಲ್ಲಿ ಅವರ ಜನ್ಮವನ್ನು ಜಾಲಾಡಿ ಬಿಡುತ್ತಾರೆ. ಸೋಶಿಯಲ್ ಮೀಡಿಯಾ ಕೆಟ್ಟದ್ದು ಎನ್ನುವ ರೀತಿಯಲ್ಲಿ ಇದನ್ನು ಹೇಳುತ್ತಿಲ್ಲ. ಟ್ಯಾಲೆಂಟ್ ಇದ್ದು ಕೂಡ ಬೇರೆಯವರ ಅನುಮತಿಗೆ, ಒಪ್ಪಿಗೆಗೆ ಕಾಯಬೇಕಾಗಿತ್ತು.

ನಿಜವಾದ ಟ್ಯಾಲೆಂಟ್ ಇದ್ದರೆ ಸಾಕು. ಇಂಟರ್‌ನೆಟ್ ಮೂಲಕ ಲಭ್ಯವಿರುವ ಅನೇಕ ವೇದಿಕೆಗಳನ್ನು ಬಳಸಿಕೊಂಡು ಸಮಾಜದ ಕಣ್ಣಿಗೆ ಬೀಳಬಹುದು. ಒಂದು ಸಣ್ಣ ನೃತ್ಯದ ತುಣುಕು, ಹಾಡಿನ ತುಣುಕು ಇತ್ಯಾದಿಗಳು ಕೋಟ್ಯಂತರ ಜನರನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಲುಪಿಬಿಡುತ್ತದೆ. ರಾತ್ರಿ ಕಳೆದು ಬೆಳಗಾಗುವುದರಲ್ಲಿ ವ್ಯಕ್ತಿ ಪ್ರಸಿದ್ಧಿಯ ಶಿಖರವನ್ನು ತಲುಪಿ ಬಿಡಬಹುದು. ಹಾಗೆಯೇ ಅತ್ಯಂತ ಪ್ರಸಿದ್ಧ ವ್ಯಕ್ತಿ ಅಥವಾ ಸಂಸ್ಥೆ, ಹತ್ತಾರು, ನೂರಾರು ವರ್ಷಗಳು ಕಟ್ಟಿಕೊಂಡು ಬಂದಿದ್ದ ಇಮೇಜ್ ಕೂಡ ಕ್ಷಣದಲ್ಲಿ ಹರಾಜು ಹಾಕುವ ಶಕ್ತಿಯನ್ನು ಸೋಶಿಯಲ್ ಮೀಡಿಯಾ ಹೊಂದಿದೆ.

ಟಿಸಿಎಸ್ ಸಂಸ್ಥೆಯಲ್ಲಿ ಆದ ಘಟನೆ ಭಾರತದ ಉದ್ದಗಲಕ್ಕೂ ಹಬ್ಬಿದ ನಂತರ ಟಾಟಾ ಸಂಸ್ಥೆಯ ಇಮೇಜಿಗೆ ಧಕ್ಕೆಯಾಗಿರುವುದು ಸತ್ಯ. ಅದೇ ರೀತಿ ಲೆಕಾರ್ಟ್ ಎನ್ನುವ ಸಂಸ್ಥೆ ಹಿಂದೂ ವಿರೋಧಿ ಎನ್ನುವ ಹಣೆಪಟ್ಟಿ ಹೊತ್ತುಕೊಂಡ ನಂತರ, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಹೆಚ್ಚು ವಿಡಿಯೊಗಳು ಬರಲು ಶುರುವಾದ ನಂತರ ಷೇರು ಮಾರುಕಟ್ಟೆಯಲ್ಲಿ ಲೆಕಾರ್ಟ್ ಷೇರಿನ ಮೌಲ್ಯ ಕುಸಿತವಾಗಿರುವುದಕ್ಕೆ ಕೂಡ ನಾವೆಲ್ಲ ಸಾಕ್ಷಿಯಾಗಿದ್ದೇವೆ.

ಸೋಶಿಯಲ್ ಮೀಡಿಯಾ ಒಂದರ್ಥದಲ್ಲಿ ವರವೂ ಹೌದು, ಶಾಪವೂ ಹೌದು. ವರ ಏಕೆಂದರೆ ಇದನ್ನು ಸರಿಯಾಗಿ ಬಳಸಿಕೊಂಡರೆ, ಅಂದರೆ ಸಮಾಜಕ್ಕೆ, ಜನರಿಗೆ ಉಪಯೋಗ ವಾಗುವಂತಹ ಕೆಲಸವನ್ನು ಮಾಡುತ್ತಾ ಹೋದರೆ ಅಪಾರ ಜನ ಮನ್ನಣೆ ಜತೆಗೆ ಕೈತುಂಬಾ ಹಣವನ್ನು ಗಳಿಸಲು ಕೂಡ ಇದು ಸಹಾಯ ಮಾಡುತ್ತದೆ.

ಶಾಪ ಏಕೆಂದರೆ ಇಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದನ್ನು ಬೇರ್ಪಡಿಸ ಲಾಗದಷ್ಟು ಮಾಹಿತಿ ಬಂದು ಬೀಳುತ್ತದೆ. ಈ ಸೋಶಿಯಲ್ ಮೀಡಿಯಾದಲ್ಲಿ ಬೇರೆಯವರ ಅನುಮತಿ ಬೇಕಿಲ್ಲದ ಕಾರಣ ಮನಸ್ಸಿಗೆ ಬಂದದ್ದು ಬರೆದು, ವಿಡಿಯೋ ಮಾಡಿ ಬದುಕನ್ನೇ ಹಾಳು ಮಾಡಿಕೊಂಡವರನ್ನು ಕೂಡ ಕಾಣಬಹುದು.

ಬದುಕಿನಲ್ಲಿ ಎಲ್ಲವೂ ಹೀಗೆ, ಒಂದು ಅನುಕೂಲದ ಜತೆಗೆ ಅನಾನುಕೂಲ ಜತೆಯಾಗೇ ಬರುತ್ತದೆ. ನಾವು ಅದನ್ನು ಹೇಗೆ ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು ಎನ್ನುವುದನ್ನು ಕಲಿಯಬೇಕಿದೆ. ಯಾವುದನ್ನೂ, ಯಾರನ್ನೂ ವಿರೋಧಿಸಬೇಕು ಎನ್ನುವ ಸರಿತಪ್ಪುಗಳ ಕಾರಣಕ್ಕೆ ವಿರೋಧಿಸದೆ, ವಿವೇಚನೆ ಇಟ್ಟುಕೊಂಡು, ಜತೆಗೆ ಒಂದಷ್ಟು ಲಕ್ಷ್ಮಣ ರೇಖೆ ಗಳನ್ನು ಎಳೆದುಕೊಂಡು ಹೋದರೆ ಸೋಶಿಯಲ್ ಮೀಡಿಯಾ ನಿಜಕ್ಕೂ ಅನ್ನದ ದಾರಿ ಯೂ ಆಗುತ್ತದೆ. ಜನಮನ್ನಣೆಯನ್ನೂ ತಂದು ಕೊಡುತ್ತದೆ. ಹೀಗಾಗಿ ಇನ್ಮುಂದೆ ಸೋಶಿಯಲ್ ಮೀಡಿಯಾ ಎಂದು ಹೀಗೆಳೆಯುವ ಮುನ್ನ ಸ್ವಲ್ಪ ಯೋಚಿಸಿ!

ರಂಗಸ್ವಾಮಿ ಎಂ

View all posts by this author